ಫುಕೆಟ್ ನಗರದ ಆಧ್ಯಾತ್ಮಿಕ ಕೇಂದ್ರ
ವಾಟ್ ಚಾಲೋಂಗ್ ದೇವಾಲಯ, ಇದು ಸಮುದ್ರದ ದ್ವೀಪದ ಮಧ್ಯೆ, ಹಸಿರು ಬೆಟ್ಟಗಳ ಮಡಿಲಲ್ಲಿ ಇರುವ ಆಧ್ಯಾತ್ಮಿಕ ತಾಣ. ಥೈಲ್ಯಾಂಡ್‌ನ ಫುಕೇಟ್‌ಗೆ ಬರುವ ಪ್ರವಾಸಿಗರಿಗೆ ಪ್ರಕೃತಿ ಸೌಂದರ್ಯ ಎಷ್ಟು ಆಕರ್ಷಕವೋ, ಈ ದೇವಾಲಯದ ಶಾಂತಮಯ ಆಧ್ಯಾತ್ಮಿಕ ವಾತಾವರಣವೂ ಅಷ್ಟೇ ಮನಮೋಹಕವಾಗಿದೆ. ಬಂಗಾರದ ಗೋಪುರ, ಅದ್ಭುತ ಶಿಲ್ಪಕಲೆ ಮತ್ತು ಧ್ಯಾನಮಯ ನಿಶ್ಚಲತೆಯ ಮೂಲಕ ಈ ದೇವಾಲಯ ಫುಕೇಟ್‌ನ ಆಧ್ಯಾತ್ಮಿಕ ಹೃದಯವೆಂದು ಖ್ಯಾತಿಯಾಗಿದೆ.
- ವೆಂಕಟೇಶ್ ಮುದಗಲ್
ಜನವರಿಯ ಥೈಲ್ಯಾಂಡ್ ಪ್ರವಾಸದಲ್ಲಿ ನಮ್ಮ ಮೊದಲ ಭೇಟಿ ದಕ್ಷಿಣ ಭಾಗದ ಫುಕೇಟ್ ನಗರವಾಗಿತ್ತು. ಇದು ಥೈಲ್ಯಾಂಡ್ ದೇಶದ ಅತಿದೊಡ್ಡ ದ್ವೀಪ. ಬ್ಯಾಂಕಾಕ್ ನಗರದಿಂದ ಸುಮಾರು 840 ಕಿಮೀ ದೂರದಲ್ಲಿದೆ. ವಿಶ್ವ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ಅಂಡಮಾನ್‌ನ ಕರಾವಳಿಯಲ್ಲಿದೆ. ನೀಲಿ ಸಮುದ್ರ, ಬಿಳಿ ಮರಳು ಕಡಲತೀರಗಳು ಮತ್ತು ಅದ್ಭುತ ರಾತ್ರಿ ಜೀವನಕ್ಕಾಗಿ ಫುಕೇಟ್ ಬಹಳ ಪ್ರಸಿದ್ಧವಾಗಿದೆ. ಥೈಲ್ಯಾಂಡ್‌ನ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿರುವ ಈ ತಾಣಕ್ಕೆ ಪ್ರತಿವರ್ಷ ಲಕ್ಷಾಂತರ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ನಗರದ ಪ್ರಮುಖ ಕಡಲತೀರಗಳಲ್ಲಿ Patong Beach, Karon Beach, ಮತ್ತು Kata Beach ಅತ್ಯಂತ ಜನಪ್ರಿಯವಾಗಿವೆ. ನೀರಿನಲ್ಲಿ ಆಟಗಳು, ಸ್ಕೂಬಾ ಡೈವಿಂಗ್, ಬೋಟ್ ಟ್ರಿಪ್‌ಗಳು ಹಾಗೂ ದ್ವೀಪಗಳ ಸುತ್ತಾಟ ಇಲ್ಲಿ ಪ್ರಮುಖ ಆಕರ್ಷಣೆಗಳಾಗಿವೆ. ಫುಕೇಟ್‌ನಲ್ಲಿ ಪ್ರಕೃತಿ ಸೌಂದರ್ಯ ಮಾತ್ರವಲ್ಲದೆ ಸಂಸ್ಕೃತಿ ಮತ್ತು ಧಾರ್ಮಿಕ ತಾಣಗಳೂ ಸಾಕಷ್ಟಿವೆ. ವಿಶೇಷವಾಗಿ ಬಿಗ್ ಬುದ್ಧ ಫುಕೇಟ್ ಮತ್ತು ವಾಟ್ ಚಾಲೋಂಗ್ ದೇವಾಲಯ ಪ್ರಮುಖ ಪ್ರವಾಸಿ ತಾಣಗಳಾಗಿವೆ.
ಇದನ್ನೂ ಓದಿ: ಹಬೀಬಿ ಹಬೀಬಿ
ಹೈದ್ರಾಬಾದ್‌ನಿಂದ ಬೆಳಗ್ಗೆ 6:15ಕ್ಕೆ ನಮ್ಮನ್ನು ಹೊತ್ತ ಏರ್ ಇಂಡಿಯಾ ಎಕ್ಸಪ್ರೆಸ್ ಸುಮಾರು ಐದು ಗಂಟೆಗಳ ಪ್ರಯಾಣದ ನಂತರ ಫುಕೇಟ್ ವಿಮಾನ ನಿಲ್ದಾಣ ತಲುಪಿತು. ಅಲ್ಲಿಂದ ನಾವು ಉಳಿದುಕೊಳ್ಳಲು ಮೊದಲೇ ಬುಕ್ ಮಾಡಿದ್ದ ಹೊಟೇಲ್ ವಿಮಾನ ನಿಲ್ದಾಣದಿಂದ ಸುಮಾರು 40 ಕಿಮೀ ದೂರದಲ್ಲಿ ಫುಕೇಟ್ ನಗರದ ಪಟೊಂಗದಲ್ಲಿತ್ತು. ಅಲ್ಲಿಗೆ ನಮ್ಮನ್ನು ಕರದೊಯ್ಯಲು ಕ್ಯಾಬ್ ಆಗಲೇ ಬಂದು ನಿಂತಿತ್ತು. ಹಾಗಾಗಿ ಸಂಚಾರ ಸುಲಭವಾಯಿತು. ಹೊಟೇಲ್ ತಲುಪಿ ದಿನಚರಿ ಮುಗಿಸಿದೆವು. ಫುಕೇಟ್‌ನ ಪಂಜಾಬಿ ಹೊಟೆಲ್‌ನಲ್ಲಿ ಊಟ ಮುಗಿಸಿ ನಾವು ತಲುಪಿದ್ದು ವಾಟ್ ಚಾಲೋಂಗ್ ದೇವಾಲಯಕ್ಕೆ.

ವಾಟ್ ಚಾಲೋಂಗ್ ದೇವಾಲಯ
ವಾಟ್ ಚಾಲೋಂಗ್ ದೇವಾಲಯ, ಇದು ಸಮುದ್ರದ ದ್ವೀಪದ ಮಧ್ಯೆ, ಹಸಿರು ಬೆಟ್ಟಗಳ ಮಡಿಲಲ್ಲಿ ಇರುವ ಆಧ್ಯಾತ್ಮಿಕ ತಾಣ. ಥೈಲ್ಯಾಂಡ್‌ನ ಫುಕೇಟ್‌ಗೆ ಬರುವ ಪ್ರವಾಸಿಗರಿಗೆ ಪ್ರಕೃತಿ ಸೌಂದರ್ಯ ಎಷ್ಟು ಆಕರ್ಷಕವೋ, ಈ ದೇವಾಲಯದ ಶಾಂತಮಯ ಆಧ್ಯಾತ್ಮಿಕ ವಾತಾವರಣವೂ ಅಷ್ಟೇ ಮನಮೋಹಕವಾಗಿದೆ. ಬಂಗಾರದ ಗೋಪುರ, ಅದ್ಭುತ ಶಿಲ್ಪಕಲೆ ಮತ್ತು ಧ್ಯಾನಮಯ ನಿಶ್ಚಲತೆಯ ಮೂಲಕ ಈ ದೇವಾಲಯ ಫುಕೇಟ್‌ನ ಆಧ್ಯಾತ್ಮಿಕ ಹೃದಯವೆಂದು ಖ್ಯಾತಿಯಾಗಿದೆ. ಫುಕೇಟ್‌ನ ಅತ್ಯಂತ ಪ್ರಮುಖ ಬೌದ್ಧ ದೇವಾಲಯಗಳಲ್ಲಿ ಇದು ಪ್ರಮುಖವಾಗಿದೆ. ಸ್ಥಳೀಯರು ಮತ್ತು ಪ್ರವಾಸಿಗರು ಇಲ್ಲಿ ಶಾಂತಿ ಮತ್ತು ಆಧ್ಯಾತ್ಮಿಕ ಅನುಭವಕ್ಕಾಗಿ ಭೇಟಿ ನೀಡುತ್ತಾರೆ.
ಇತಿಹಾಸ
ವಾಟ್ ಚಾಲೋಂಗ್ ದೇವಾಲಯದ ಇತಿಹಾಸವು ಸುಮಾರು 19ನೆಯ ಶತಮಾನದ ಜತೆಗೆ ಆರಂಭವಾಗುತ್ತದೆ. ಸುಮಾರು 1837ರ ಅವಧಿಯಲ್ಲಿ ಈ ದೇವಾಲಯ ಸ್ಥಾಪನೆಯಾಯಿತು. ಕಾಲಕ್ರಮೇಣ ಸ್ಥಳೀಯ ಜನರ ಭಕ್ತಿಯ ಕೇಂದ್ರವಾಗಿ ಬೆಳೆಯಿತು. 1876ರಲ್ಲಿ ಚೀನೀ ಟಿನ್ ಗಣಿಗಾರರ ಬಂಡಾಯದ ಸಮಯದಲ್ಲಿ ಈ ದೇವಾಲಯ ಸ್ಥಳೀಯ ಜನರಿಗೆ ಆಶ್ರಯ ತಾಣ ಮತ್ತು ಧೈರ್ಯದ ಸಂಕೇತವಾಗಿ ಪರಿಣಮಿಸಿತ್ತು ಎಂದು ನಮ್ಮ ಗೈಡ್ ತಿಳಿಸಿದರು. ಬಂಡಾಯದ ಸಮಯದಲ್ಲಿ ದೇವಾಲಯದ ಇಬ್ಬರು ಮಹಾನ್ ಭಿಕ್ಕುಗಳು, ಜನರಿಗೆ ಆಧ್ಯಾತ್ಮಿಕ ಮಾರ್ಗದರ್ಶನದ ಜತೆಗೆ ಗಾಯಗೊಂಡವರಿಗೆ ಔಷದೋಪಚಾರವನ್ನೂ ಮಾಡುತ್ತಿದ್ದರು. ಕರುಣೆ ಮತ್ತು ಸೇವಾಭಾವದಿಂದ ಅವರು ಜನಮನಗಳಲ್ಲಿ ಅಚಲ ಗೌರವವನ್ನು ಗಳಿಸಿದರು ಎನ್ನಲಾಗಿದೆ.

ವಾಸ್ತುಶಿಲ್ಪದ ವೈಭವ
ಈ ದೇವಾಲಯದ ಅತ್ಯಂತ ಆಕರ್ಷಣೆಯ ಭಾಗವೇ ಇಲ್ಲಿನ ಭವ್ಯ ಗೋಪುರ. ಸುಮಾರು ಅರವತ್ತು ಮೀಟರ್ ಎತ್ತರದ ಈ ಗೋಪುರವು ಬಂಗಾರದ ಅಲಂಕಾರಗಳು, ಬಣ್ಣ ಬಣ್ಣದ ಮೊಸಾಯಿಕ್ ಕಲಾಕೃತಿಗಳು ಮತ್ತು ಸೂಕ್ಷ್ಮ ಶಿಲ್ಪಗಳಿಂದ ಕಂಗೊಳಿಸುತ್ತಿದೆ. ಗೋಪುರದ ಒಳಭಾಗದಲ್ಲಿ ಭಿಕ್ಕುಗಳ ಜೀವನದ ಪ್ರಮುಖ ಘಟ್ಟಗಳನ್ನು ಚಿತ್ರಿಸುವ ಸುಂದರ ಭಿತ್ತಿಚಿತ್ರಗಳು ಕಂಡುಬರುತ್ತವೆ. ಮೇಲ್ಭಾಗದಲ್ಲಿ ಬುದ್ಧನ ಅಸ್ಥಿಯ ಒಂದು ಪವಿತ್ರ ಅವಶೇಷವನ್ನು ಇರಿಸಲಾಗಿದೆ ಎಂಬ ನಂಬಿಕೆ ಇರುವುದರಿಂದ ಇದು ಬೌದ್ಧರಿಗೆ ಪವಿತ್ರ ಯಾತ್ರಾ ಕ್ಷೇತ್ರವಾಗಿದೆ.
ಪ್ರಕೃತಿ ಮತ್ತು ಶಾಂತಿಯ ಸಂಗಮ
ದೇವಾಲಯದ ಆವರಣ ವಿಶಾಲ ಮತ್ತು ಶಾಂತವಾಗಿದೆ. ಹಸಿರು ತೋಟಗಳು, ಧ್ಯಾನ ಮಂದಿರಗಳು ಮತ್ತು ಪ್ರಾರ್ಥನಾ ಸ್ಥಳಗಳು ಇಲ್ಲಿ ಬರುವವರಿಗೆ ಆತ್ಮಶಾಂತಿಯನ್ನು ನೀಡುತ್ತವೆ. ಧೂಪದ ಪರಿಮಳ, ಘಂಟೆಗಳ ನಾದ ಮತ್ತು ಕೆಲವೊಮ್ಮೆ ಕೇಳಿ ಬರುವ ಪಟಾಕಿಗಳ ಶಬ್ದ, ಭಕ್ತರ ಮೌನ ಪ್ರಾರ್ಥನೆಗಳು ಈ ಸ್ಥಳಕ್ಕೆ ವಿಶಿಷ್ಟವಾದ ಆಧ್ಯಾತ್ಮಿಕ ವಾತಾವರಣವನ್ನು ನೀಡಿವೆ. ನಾವು ಅಲ್ಲಿಗೆ ಹೋದಾಗ ತಮ್ಮ ಇಷ್ಟಾರ್ಥಗಳು ಪೂರ್ಣಗೊಂಡ ಭಕ್ತರೊಬ್ಬರು ಹಚ್ಚಿದ ಪಟಾಕಿ ನಮ್ಮ ದೀಪಾವಳಿಯನ್ನು ನೆನಪಿಸಿತು. ಫುಕೇಟ್‌ನ ಪ್ರವಾಸಿ ಗದ್ದಲದ ಮಧ್ಯೆಯೇ ಈ ದೇವಾಲಯ ಒಂದು ಶಾಂತಿಯ ದ್ವೀಪದಂತಿದೆ.
ವಾಟ್ ಚಾಲೋಂಗ್ ದೇವಾಲಯವು ಪ್ರತಿದಿನ ಭಕ್ತರು ಮತ್ತು ಪ್ರವಾಸಿಗರಿಗೆ ಬೆಳಗ್ಗೆ 7.00 ರಿಂದ ಸಂಜೆ 5.00ರವರೆಗೆ ತೆರೆದಿರುತ್ತದೆ. ಯಾವುದೇ ಪ್ರವೆಶ ಶುಲ್ಕ ಇರುವುದಿಲ್ಲ. ಆಸಕ್ತರು ದೇಣಿಗೆ ನೀಡಲು ಅವಕಾಶವಿದೆ. ಭೇಟಿ ನೀಡುವವರು ಶಿಷ್ಟ ಉಡುಪು ಧರಿಸುವುದು ಕಡ್ಡಾಯವಾಗಿದೆ.