ಇಲ್ಲಿ ಡ್ರೆಸ್ ಹಾಕದಿರೋದೇ ಡ್ರೆಸ್ ಕೋಡ್
ಬೆತ್ತಲೆಯಾಗಿ ತಿರುಗಾಡುವುದು ಮುಜುಗರವೆನಿಸಿದರೆ ಇಲ್ಲಿ ಬಟ್ಟೆ ಧರಿಸುವ ಅವಕಾಶವನ್ನೂ ಇಲ್ಲಿನ ಸರ್ಕಾರ ನೀಡಿದೆ. ಆದರೆ ಹಾಗೇನಾದರೂ ನೀವು ಬಟ್ಟೆ ಧರಿಸಿ ಈ ಸಮುದ್ರ ದಂಡೆಗೆ ಹೋಗಲು ಬಯಸಿದ್ದಲ್ಲಿ ನೇಕೆಡ್ ಟ್ಯಾಕ್ಸ್ ಕಟ್ಟಬೇಕಾಗುತ್ತದೆ.
- ದಿಗಂಬರ್ ಜಾನ್
ಎಲ್ಲಾದ್ರೂ ಟ್ರಿಪ್ ಹೋಗೋದು ಅಂದ್ರೆ ಸಾಕು, ಅದರಲ್ಲೂ ಫಾರಿನ್ ಟ್ರಿಪ್ ಅಂದ್ರೆ ಬೇರೆ ಮಾತೇ ಇಲ್ಲ, ಫಸ್ಟ್ ಹೋಗಿ ಬಟ್ಟೆ ಶಾಪಿಂಗ್ ಮಾಡ್ಕೊಂಡು ಬರ್ತೀವಿ. ಆದರೆ ಈ ಒಂದು ನಗರಕ್ಕೆ ಟ್ರಿಪ್ ಹೋಗೋ ಯೋಚನೆ ನಿಮ್ಮಲ್ಲಿದ್ರೆ, ನೀವು ಬಟ್ಟೆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಹೌದು ರಾಶಿ ರಾಶಿ ಬಟ್ಟೆಗಳನ್ನು ಪ್ಯಾಕ್ ಮಾಡದೆಯೇ ಉಟ್ಟ ಬಟ್ಟೆಯಲ್ಲಿ ನೀವಿಲ್ಲಿಗೆ ಹೋಗಿ ದಿನಗಟ್ಟಲೆ ತಂಗಿ ಬರಬಹುದು. ಯಾಕಂದ್ರೆ ಈ ನಗರದಲ್ಲಿ ಎಲ್ಲೆಂದರಲ್ಲಿ ನಿಮಗೆ ಬೆತ್ತಲೆಯಾಗಿ ತಿರುಗಾಡುವ ಸ್ವಾತಂತ್ರ್ಯವಿದೆ. ಒಂದು ಕ್ಷಣ ನಿಮಗೆ ವಿಚಿತ್ರವೆನಿಸಿದರೂ ಇದು ನಿಜ. ಇಂಥ ವಿಚಿತ್ರ ಸಂಸ್ಕೃತಿಯನ್ನು ಹೊಂದಿರುವ ಸ್ಥಳವೇ ಫ್ರಾನ್ಸ್‌ನ ಕ್ಯಾಪ್ ಡಿ'ಅಗ್ಡೆ (Cap d'Agde) ನಗರ. ಫ್ರಾನ್ಸ್‌ನ ದಕ್ಷಿಣ ಭಾಗದಲ್ಲಿರುವ ಮೆಡಿಟರೇನಿಯನ್ ಕರಾವಳಿಯಲ್ಲಿರುವ ಇದು ಒಂದು ಸುಂದರ ನಗರ. ಈ ನಗರ ವಿಶ್ವದ ಏಕೈಕ ನಗ್ನ ನಗರವಾಗಿದ್ದು, ಬೆತ್ತಲೆಯಾಗಿ ತಮ್ಮ ಪ್ರವಾಸವನ್ನು ಆನಂದಿಸಲೆಂದೇ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ನಗರವು ಹನಿಮೂನ್ ತಾಣವೆಂದೇ ಪ್ರಸಿದ್ಧವಾಗುತ್ತಿದೆ.
ಬೆತ್ತಲೆಯಾಗಿ ತಿರುಗಾಡುವ ಸ್ವಾತಂತ್ರ್ಯ

ಈ ನಗರದಲ್ಲಿ ಜನರಿಗೆ ಬಟ್ಟೆ ಇಲ್ಲದೆ ಸುತ್ತಾಡುವ ಸ್ವಾತಂತ್ರ್ಯವಿದೆ. ಸುಂದರವಾದ ಕಡಲತೀರಗಳಿಗೆ ಹೆಸರುವಾಸಿಯಾದ ಈ ನಗರದ ಸಮುದ್ರ ತೀರದ ದೃಶ್ಯವು ವಿಭಿನ್ನವಾಗಿದೆ. ಕಡಲತೀರದ ಹೊರತಾಗಿ, ಜನರು ರೆಸ್ಟೋರೆಂಟ್‌ಗಳು ಮತ್ತು ಸೂಪರ್‌ಮಾರ್ಕೆಟ್‌ಗಳಲ್ಲಿ ಬಟ್ಟೆ ಇಲ್ಲದೆಯೇ ತಿರುಗಾಡಬಹುದು. ಇದಲ್ಲದೇ ಸಲೂನ್ ನಿಂದ ಹಿಡಿದು ಬೇಕರಿಯಿಂದ ಏನನ್ನಾದರೂ ಖರೀದಿಸಲು ಕೂಡ ಇಲ್ಲಿ ಯಾವುದೇ ರೀತಿಯ ಬಟ್ಟೆಗಳನ್ನು ಧರಿಸಬೇಕಿಲ್ಲ.
ಪ್ರವಾಸಿಗರ ಹಾಟ್ ಸ್ಪಾಟ್
ಪ್ರತಿ ಬೇಸಗೆಯಲ್ಲಿ ಕ್ಯಾಪ್ ಡಿ'ಆಗ್ಡೆ ಪಟ್ಟಣವು ಪ್ರವಾಸಿಗರಿಂದ ತುಂಬಿರುತ್ತದೆ. ಒಂದು ಅಂದಾಜಿನ ಪ್ರಕಾರ, ಪ್ರತಿ ವರ್ಷ 50 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಬೇಸಗೆಯಲ್ಲಿ ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಹೆಚ್ಚಿನವರು ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ಇಟಲಿ, ಅಮೆರಿಕ, ಡೆನ್ಮಾರ್ಕ್ ಮತ್ತು ಕೆನಡಾದವರು ಎಂದು ವರದಿಯಾಗಿದೆ. ತಮ್ಮ ಮಧುಚಂದ್ರವನ್ನು ಆಚರಿಸಲು ವಿಶ್ವದೆಲ್ಲೆಡೆಯಿಂದ ದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ.
ನೇಕೆಡ್ ಟ್ಯಾಕ್ಸ್ !
ಬೆತ್ತಲೆಯಾಗಿ ತಿರುಗಾಡುವುದು ಮುಜುಗರವೆನಿಸಿದರೆ ಇಲ್ಲಿ ಬಟ್ಟೆ ಧರಿಸುವ ಅವಕಾಶವನ್ನೂ ಇಲ್ಲಿನ ಸರ್ಕಾರ ನೀಡಿದೆ. ಆದರೆ ಹಾಗೇನಾದರೂ ನೀವು ಬಟ್ಟೆ ಧರಿಸಿ ಈ ಸಮುದ್ರ ದಂಡೆಗೆ ಹೋಗಲು ಬಯಸಿದ್ದಲ್ಲಿ ನೇಕೆಡ್ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಇಂತಿಷ್ಟು ದುಡ್ಡು ಕಟ್ಟಿ ನೀವು ಇಲ್ಲಿ ಬಟ್ಟೆ ಧರಿಸಿ ಸುತ್ತಾಡಬಹುದು. ಆದರೆ ಬಟ್ಟೆ ಧರಿಸುವವರ ಸಂಖ್ಯೆ ಇಲ್ಲಿ ತೀರಾ ಕಡಿಮೆ. ಯಾಕಂದ್ರೆ ಇಲ್ಲಿರುವ ಜನಗಳ ಪ್ರಕಾರ, ಬಟ್ಟೆಗಳಿಲ್ಲದೆ ಇಲ್ಲಿಗೆ ಪ್ರವೇಶಿಸುವುದರಿಂದ ಜನರಿಗೆ ತಮ್ಮ ದೇಹದ ಬಗ್ಗೆ ಮತ್ತಷ್ಟು ವಿಶ್ವಾಸ ಹೆಚ್ಚುತ್ತದೆ ಎಂದು ಹೇಳುತ್ತಾರೆ.
ಮುತ್ತು ಕೊಟ್ಟರೆ ಫೈನ್!

ಬೆತ್ತಲೆಯಾಗಿ ತಿರುಗಾಡಲು ಇಲ್ಲಿ ಅವಕಾಶ ನೀಡಿದರೂ ಕೂಡ ಮತ್ತೊಂದೆಡೆ ಇಲ್ಲಿನ ಸರ್ಕಾರ ಪ್ರವಾಸಿಗರಿಗೆ ಕೆಲವು ನಿಯಮಗಳನ್ನೂ ವಿಧಿಸಿದೆ. ತಮ್ಮ ಮಧುಚಂದ್ರವನ್ನು ಆಚರಿಸಲು ವಿಶ್ವದೆಲ್ಲೆಡೆಯಿಂದ ದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸಲು ಅವಕಾಶವಿಲ್ಲ. ಸಂಗಾತಿಯೊಂದಿಗೆ ಅಥವಾ ಪ್ರೇಯಸಿಯೊಂದಿಗೆ ಸಾರ್ವಜನಿಕ ಪ್ರದೇಶಗಳಲ್ಲಿ ಚುಂಬಿಸುವುದು ಅಥವಾ ಅಸಭ್ಯವಾಗಿ ವರ್ತಿಸುವುದು ಕಂಡು ಬಂದರೆ ಸುಮಾರು 12,860 ಪೌಂಡ್ ದಂಡ ವಿಧಿಸುತ್ತಾರೆ. ಅಂದರೆ ಭಾರತದ ಕರೆನ್ಸಿ ಪ್ರಕಾರ ಸುಮಾರು 12 ಲಕ್ಷ ರೂಪಾಯಿಗಳ ದಂಡವನ್ನು ಕಟ್ಟಬೇಕಾಗುತ್ತದೆ. ಇದಲ್ಲದೆ, ಈ ನಗರದಲ್ಲಿ ಫೊಟೋಗ್ರಫಿಯನ್ನು ಸಹ ನಿಷೇಧಿಸಲಾಗಿದೆ.