-ಜ್ಯೋತಿ ಪ್ರಸಾದ್

ಅದು ಡಿಸೆಂಬರ್ ತಿಂಗಳು. ಅಮೆರಿಕದ ವಾಷಿಂಗ್ಟನ್ ಡಿ ಸಿ ಯಲ್ಲಿ ಚಳಿಗಾಲದ ಮುಂಜಾವಿನ ಸಮಯ.

ಎಂದಿನಂತೆ ಬಿಸಿ ಬಿಸಿ ಕಾಫಿ ಕಪ್ಪನ್ನು ಕೈಯಲ್ಲಿ ಹಿಡಿದು ರಸ್ತೆಗೆ ಮುಖಮಾಡಿರುವ ಮನೆಯೊಳಗಿನ ದೊಡ್ಡ ಕಿಟಕಿಯ ಹತ್ತಿರ ಸೋಫಾದ ಮೇಲೆ ಕುಳಿತೆ. ಪ್ರತಿದಿನ ಬೆಳಗ್ಗೆ ಹೀಗೆ ಕುಳಿತು ಬಾನಿನಲ್ಲಿ ಸುಂದರ ಸೂರ್ಯೋದಯವನ್ನು ನೋಡುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದು. ಆದರೆ ಆ ದಿನ ಸೂರ್ಯ ಕಾಣಲಿಲ್ಲ.ಹಾಗೆಂದು ನನಗೇನೂ ಬೇಸರವಾಗಲಿಲ್ಲ.ಏಕೆಂದರೆ ಆ ದಿನ ನಾನು ಕಂಡದ್ದು ಇನ್ನೊಂದು ರಮಣೀಯ ರಸಮಯ ದೃಶ್ಯ. ಎದುರಿಗೆ ತಂಪಾದ ವಾತಾವರಣದಲ್ಲಿ ನಾನು ಕಂಡದ್ದು ʼಹಿಮವರ್ಷʼ ಭಾರತೀಯಳಾದ ನನಗೆ ಇದೊಂದು ಅಪರೂಪದ ಸುಂದರ ಅನುಭವ. ಹಿಮಮಳೆಯು ಇಲ್ಲಿನ ಸ್ಥಳೀಯರಿಗೆ ಸರ್ವೇ ಸಾಮಾನ್ಯ. ನಾನು ಈ ಮೊದಲು ಕೆನಡಾ ಮತ್ತು ಯುರೋಪಿನಲ್ಲಿಯೂ ಇದನ್ನು ಕಂಡಿದ್ದೆನಾದರೂ ಅದೇಕೋ ಅದು ಇಷ್ಟು ಮನಮೋಹಕವೆಂದೆನಿಸಿರಲಿಲ್ಲ. ಕೆಲವೇ ಸಮಯದಲ್ಲಿ ಕಪ್ಪಾಗಿದ್ದ ರಸ್ತೆ ಹಿಮಾವೃತವಾಗಿ ಬಿಟ್ಟಿತ್ತು.

ಇದನ್ನೂ ಓದಿ: ಇದು ವಿಮಾನ ಯಾನದ ಜಮಾನ

ನನಗಂತೂ ನೆಲದ ಮೇಲೆ ಬೆಳ್ದಾವರೆಗಳು ಅರಳಿದಂತೆ ಭಾಸವಾಗುತ್ತಿತ್ತು. ಆಗ ತಾನೇ ಮುಗಿದಿದ್ದ ಶರದೃತುವಿನಲ್ಲಿ ಮರಗಳೆಲ್ಲಾ ತಮ್ಮ ಎಲೆಗಳನ್ನು ಕಳಚಿಕೊಂಡು ಬೋಳಾಗಿದ್ದು,ಈ ಹಿಮಮಳೆಯಿಂದ ಅವು ಬೇರೊಂದು ರೂಪ ಪಡೆದು ಸುಂದರವಾಗಿ ಕಂಗೊಳಿಸುತ್ತಿದ್ದವು.ಪ್ರಕೃತಿ ಪ್ರಿಯಳೂ,ಕವಿಮನಸಿನವಳೂ ಆದ ನನಗೆ ಮರದಲ್ಲೆಲ್ಲಾ ಮುತ್ತು ವಜ್ರಗಳ ಹೂವುಗಳು ಅರಳಿದಂತೆಯೇ ಭಾಸವಾಗುತ್ತಿತ್ತು.

Untitled design - 2026-03-10T132113.271

ಹಿಮದ ಹೊದಿಕೆ ಹೊದ್ದು..
ವಾಷಿಂಗ್ಟನ್ ನಗರದ ವಸಂತಕಾಲದ ಚೆರ್ರಿ ಬ್ಲಾಸಮ್ಸ್ ಮತ್ತು ಶರತ್ಕಾಲದ ವರ್ಣರಂಜಿತ ಫಾಲ್ ಫೋಲಿಯೇಜ್ ಸೌಂದರ್ಯದ ಬಗ್ಗೆ ಎಲ್ಲರಿಗೂ ತಿಳಿದಿರುವುದೇ. ಆದರೆ ಈ ನಗರವು ಚಳಿಗಾಲದಲ್ಲಿ ಹಿಮದಿಂದ ಆವೃತವಾದಾಗ ಸೃಷ್ಟಿಯಾಗುವ ಆ ಮಾಂತ್ರಿಕ ಲೋಕದ ಅನುಭವವೇ ಬೇರೆ. ಅಮೆರಿಕದ ರಾಜಧಾನಿಯ ಐತಿಹಾಸಿಕ ಹೆಗ್ಗುರುತುಗಳಾದ ನ್ಯಾಷನಲ್ ಮಾಲ್, ಲಿಂಕನ್ ಮೆಮೋರಿಯಲ್‌ನ ಬಿಳಿ ಅಮೃತಶಿಲೆಯ ಕೆತ್ತನೆಗಳು ಮತ್ತು ಆಕಾಶವನ್ನೇ ಮುಟ್ಟುವಂತಿರುವ ವಾಷಿಂಗ್ಟನ್ ಸ್ಮಾರಕದ ಎತ್ತರದ ಗೋಪುರವು ಶುಭ್ರವಾದ ಹಿಮದ ಹೊದಿಕೆಯನ್ನು ಹೊದ್ದಾಗ, ಅವುಗಳ ಸುತ್ತಮುತ್ತಲೂ ನಗರವು ಒಂದು ಅದ್ಭುತ ಕಲಾಕೃತಿಯಂತೆ ಗೋಚರಿಸುತ್ತದೆ.

ನಗರದ ಇತರ ಕಟ್ಟಡಗಳು ಮತ್ತು ಹಾದಿ ಬೀದಿಗಳು ಬಿಳಿ ಹೊದಿಕೆಯಿಂದ ಮುಚ್ಚಲ್ಪಟ್ಟು ಇಡೀ ನಗರವು ಒಂದು ಮಾಯಾ ಲೋಕದಂತೆ ಕಂಗೊಳಿಸುತ್ತದೆ.ಛಾಯಾಗ್ರಾಹಕರಿಗಂತೂ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯಲು ಇದೊಂದು ಉತ್ತಮ ಸಂಧರ್ಭ. ಬೇರೆ ಬೇರೆ ದೇಶಗಳ ಹಲವು ನಗರಗಳಲ್ಲಿ ನಿಗದಿತ ಸಮಯದಲ್ಲಿ ಹಿಮಮಳೆ ಸುರಿಯುವುದು ಉಂಟಾದರೂ ಈ ಬಾರಿಯ ನನ್ನ ವಾಷಿಂಗ್ಟನ್ ಡಿಸಿ ಯ ಪ್ರವಾಸದಲ್ಲಿ ನಾನು ಕಂಡ ಹಿಮವರ್ಷದ ಸುಂದರ ಅನುಭವವಗಳು ಅವಿಸ್ಮರಣೀಯ.

ಹಿಮ ಸುರಿಯುವುದನ್ನು ನೋಡುವುದು ಮಾತ್ರವಲ್ಲ,ಅದರಲ್ಲಿ ಭಾಗಿಯಾಗುವುದೇ ಒಂದು ಮೋಜು. ಕ್ಯಾಪಿಟಲ್ ಕಟ್ಟಡದ ಪಕ್ಕದಲ್ಲಿರುವ ದಿಬ್ಬಗಳ ಮೇಲೆ ಮಕ್ಕಳು ಮತ್ತು ದೊಡ್ಡವರು ಸ್ಲೆಡ್ಡಿಂಗ್ ಮಾಡುವುದು ಇಲ್ಲಿನ ಸಾಮಾನ್ಯ ದೃಶ್ಯ. ನಾನು ಕೂಡ ಈ ಬಾರಿ ಹಿಮದೊಂದಿಗೆ ಆಟವಾಡಿ, 'ಹಿಮಮಾನವ'ನನ್ನು ಸೃಷ್ಟಿಸಿ ಬಾಲ್ಯದ ಸಂಭ್ರಮವನ್ನು ಅನುಭವಿಸಿದೆ.

Untitled design - 2026-03-10T132043.419

ಇದಿಷ್ಟೂ ಪ್ರವಾಸಿಗರ ದೃಷ್ಟಿಕೋನದ ಅನುಭವಗಳಾದರೆ,ಇನ್ನು ಅಲ್ಲಿಯೇ ವಾಸಿಸುವ ಜನರಿಗೆ ಮತ್ತು ಅಲ್ಲಿನ ಆಡಳಿತ ವ್ಯವಸ್ಥೆಗೆ ಹಿಮಪಾತವು ಬೇರೆಯದೇ ರೀತಿಯ ಸವಾಲುಗಳನ್ನು ಒಡ್ಡುತ್ತವೆ. ನಗರದ ದೈನಂದಿನ ಜೀವನ ಮತ್ತು ಮೂಲಸೌಕರ್ಯಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ದೊಡ್ಡ ಹಿಮದ ಬಿರುಗಾಳಿಗಳು ನಗರವನ್ನು ತಕ್ಷಣವೇ ನಿಲ್ಲಿಸಿಬಿಡುತ್ತವೆ ಮತ್ತು ಜೀವನವು ಹೊಸ ಸವಾಲುಗಳನ್ನು ಎದುರಿಸುತ್ತದೆ.ದೊಡ್ಡ ಪ್ರಮಾಣದ ಹಿಮಪಾತವು ಸಂಭವಿಸಿದಾಗ, ನಗರವು ಅಸಾಮಾನ್ಯವಾಗಿ ನಿಶ್ಯಬ್ದವಾಗುತ್ತದೆ.ನಿವಾಸಿಗಳು ಹಿಮದ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರುತ್ತಾರೆ, ಮತ್ತು ಹಿಮ ತೆರವು ಕಾರ್ಯಾಚರಣೆಯು ಸಾಮಾನ್ಯ ಜೀವನವನ್ನು ಬೇಗನೆ ಪುನರಾರಂಭಿಸಲು ಸಹಾಯ ಮಾಡುತ್ತದೆ.

ಹಿಮಪಾತ ಹೆಚ್ಚಾಗಿದ್ದರೆ,ಶಾಲೆಗಳು, ಸರ್ಕಾರಿ ಕಛೇರಿಗಳು ಮತ್ತು ಅನೇಕ ಖಾಸಗಿ ವ್ಯವಹಾರಗಳು ಸಾಮಾನ್ಯವಾಗಿ ಮುಚ್ಚಲ್ಪಡುತ್ತವೆ ಅಥವಾ ತಡವಾಗಿ ತೆರೆಯುತ್ತವೆ.ಅಮೆರಿಕದ ಅಧಿಕಾರದ ಕೇಂದ್ರಬಿಂದುವಾದ ಡಿ.ಸಿ.ಯಲ್ಲಿ ,ಹಿಮದ ಕಾರಣದಿಂದ ಸರಕಾರಿ ಕಚೇರಿಗಳು ಮುಚ್ಚಲ್ಪಟ್ಟರೆ, ಇಡೀ ನಗರದ ಚಲನಶೀಲತೆಗೆ ದಿಢೀರನೆ ಬ್ರೇಕ್ ಬಿದ್ದಂತಾಗುತ್ತದೆ. ಶಾಲೆಗಳು ಸಹ ಸುರಕ್ಷತೆಗಾಗಿ ತಮ್ಮ ಕಾರ್ಯಾಚರಣೆಯನ್ನು ರದ್ದುಗೊಳಿಸುತ್ತವೆ. ಈ ನಿರ್ಧಾರಗಳನ್ನು ರಾತ್ರಿಯಿಡೀ ಅಥವಾ ಮುಂಜಾನೆ ಬೇಗನೇ ಪ್ರಕಟಿಸಲಾಗುತ್ತದೆ. ಜನರು ಈ ಮಾಹಿತಿಗಾಗಿ ಸ್ಥಳೀಯ ಸುದ್ದಿ ಮಾಧ್ಯಮಗಳು ಹಾಗೂ ಅಧಿಕೃತ ಜಾಲತಾಣಗಳನ್ನು ಅವಲಂಬಿಸುತ್ತಾರೆ.

ಸಾಮಾನ್ಯವಾಗಿ ಮೆಟ್ರೋ ರೈಲು ಕಾರ್ಯನಿರ್ವಹಿಸುತ್ತಾದರೂ ಅಪರೂಪಕ್ಕೊಮ್ಮೆ ಸಂಚಾರ ವಿಳಂಬವಾಗಬಹುದು. ಹಿಮದಿಂದಾಗಿ ರಸ್ತೆಗಳು ಬೇಗನೆ ಜಾರುವಂತಾಗಿ ಸಂಚಾರ ಕಷ್ಟಸಾಧ್ಯವಾಗುವುದರಿಂದ ಬಸ್ ಸೇವೆಗಳು ಹಿಮದಿಂದ ಹೆಚ್ಚು ತೊಂದರೆಗೊಳಗಾಗುತ್ತವೆ.ಹಾಗೆಯೇ ಅಪಘಾತಗಳ ಸಾಧ್ಯತೆ ಹೆಚ್ಚಾಗುತ್ತದೆ.ವಾಹನ ಚಾಲಕರು ಸಾವಧಾನದಿಂದ ಚಲಿಸಬೇಕಾಗುತ್ತದೆ. ಬಹುತೇಕರು ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಾರೆ.

ಇಂತಹ ಸಮಯದಲ್ಲಿ ಆಡಳಿತ ವ್ಯವಸ್ಥೆಯು ಹಿಮವನ್ನು ತೆರವುಗೊಳಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ.ಇವುಗಳಲ್ಲಿ ಎರಡು ವಿಧಗಳನ್ನು ಪಾಲಿಸಲಾಗುತ್ತದೆ.

ಸಾಲ್ಟಿಂಗ್ : ಹಿಮ ಬೀಳುವ ಮುನ್ನವೇ ರಸ್ತೆಗಳ ಮೇಲೆ ಉಪ್ಪು ಅಥವಾ ಉಪ್ಪಿನ ದ್ರಾವಣವನ್ನು ಹಾಕಲಾಗುತ್ತದೆ. ಇದು ಹಿಮವು ರಸ್ತೆಗೆ ಅಂಟಿಕೊಳ್ಳುವುದನ್ನು ತಡೆಯುತ್ತದೆ ಮತ್ತು ಕಡಿಮೆ ತಾಪಮಾನದಲ್ಲಿ ನೀರು ಹೆಪ್ಪುಗಟ್ಟುವುದನ್ನು ನಿಧಾನಗೊಳಿಸುತ್ತದೆ.

ಪ್ಲೋಯಿಂಗ್ :ಭಾರೀ ಹಿಮಪಾತದ ಸಮಯದಲ್ಲಿ, ದೊಡ್ಡ ಹಿಮಗಾಡಿಗಳು ಪ್ರಮುಖ ರಸ್ತೆಗಳು, ತುರ್ತು ಮಾರ್ಗಗಳು (ಆಸ್ಪತ್ರೆಗಳು, ಪೊಲೀಸ್ ಠಾಣೆಗಳಿಗೆ ಹೋಗುವ ಮಾರ್ಗಗಳು) ಮತ್ತು ಬಸ್ ಮಾರ್ಗಗಳನ್ನು ತೆರವುಗೊಳಿಸಲು ಪ್ರಾರಂಭಿಸುತ್ತವೆ. ಹೆಚ್ಚು ಉಪಯೋಗಿಸದ, ಮನೆಗಳ ಹತ್ತಿರದ ರಸ್ತೆಗಳನ್ನು ನಂತರ ತೆರವುಗೊಳಿಸಲಾಗುತ್ತದೆ.ಕೆಲವು ಪ್ರಮುಖ ರಸ್ತೆಗಳಲ್ಲಿ ಹಿಮ ತೆರವು ಸುಲಭವಾಗಲು ಪಾರ್ಕಿಂಗ್ ನಿರ್ಬಂಧಗಳನ್ನು ಜಾರಿಗೊಳಿಸಲಾಗುತ್ತದೆ.

ಅಲ್ಲದೇ ಡಿ.ಸಿ. ಕಾನೂನಿನ ಪ್ರಕಾರ, ಮನೆ ಮಾಲೀಕರು ಮತ್ತು ವ್ಯಾಪಾರ ಸಂಸ್ಥೆಗಳು ತಮ್ಮ ಆಸ್ತಿಯ ಮುಂದೆ ಇರುವ ಕಾಲುದಾರಿಗಳಿಂದ ಹಿಮವನ್ನು ತಕ್ಷಣವೇ ತೆರವುಗೊಳಿಸಬೇಕು. ಸಾಮಾನ್ಯವಾಗಿ, ಹಿಮಪಾತ ನಿಂತ ನಂತರ ನಿರ್ಧರಿತ ಅವಧಿಯ ಒಳಗೆ ಹಿಮವನ್ನು ತೆಗೆದುಹಾಕಬೇಕು. ಇದರಿಂದ ಪಾದಚಾರಿಗಳು, ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ಅಂಗವಿಕಲರು ಸುರಕ್ಷಿತವಾಗಿ ನಡೆಯಲು ಅನುಕೂಲವಾಗುತ್ತದೆ.

Untitled design - 2026-03-10T132052.367

ಸಾಮಾನ್ಯವಾಗಿ ಹಿಮವನ್ನು ತೆರವುಗೊಳಿಸಲು ಗುದ್ದಲಿಗಳು ಅಥವಾ ಅದಕ್ಕಾಗಿಯೇ ರಚಿಸಲ್ಪಟ್ಟ ಸಣ್ಣ ಯಂತ್ರಗಳನ್ನು ಬಳಸಿ ತೆಗೆದುಹಾಕಲಾಗುತ್ತದೆ. ಅನೇಕ ನಿವಾಸಿಗಳು ಜಾರುವಿಕೆಯನ್ನು ತಡೆಯಲು ಕಾಲುದಾರಿಗಳ ಮೇಲೆ ಹೆಚ್ಚುವರಿ ಉಪ್ಪು ಅಥವಾ ಐಸ್ ಮೆಲ್ಟರ್ ರಾಸಾಯನಿಕಗಳನ್ನು ಬಳಸುತ್ತಾರೆ.ತಮ್ಮ ಕಾಲುದಾರಿಗಳನ್ನು ತೆರವುಗೊಳಿಸಲು ವಿಫಲರಾದ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ.ಇದರಿಂದ ಪಾದಚಾರಿಗಳಿಗೆ ಹಿಮದ ಜಾರುವಿಕೆಯಿಂದ ಅಪಘಾತವಾಗುವುದನ್ನು ತಡೆಯಬಹುದು.

ವಾಷಿಂಗ್ಟನ್ ಡಿ.ಸಿ.ಯ ಚಳಿಗಾಲದ ಪ್ರವಾಸ ಅದ್ಭುತ ನಿಜ, ಆದರೆ ಪೂರ್ವಸಿದ್ಧತೆ ಅಗತ್ಯ. ಈ ಸಮಯದಲ್ಲಿ ಅಲ್ಲಿಗೆ ಭೇಟಿ ನೀಡುವವರು ಬೆಚ್ಚಗಿನ, ನೀರು ನಿರೋಧಕ ಬೂಟುಗಳು, ಉತ್ತಮ ಗುಣಮಟ್ಟದ ಕೋಟ್, ಕೈಗವಸು ಮತ್ತು ಟೋಪಿಗಳನ್ನು ಧರಿಸುವುದನ್ನು ಮರೆಯಬಾರದು. ಸಾರಿಗೆ ವಿಳಂಬವಾಗುವ ಸಾಧ್ಯತೆ ಇರುವುದರಿಂದ ಪ್ರಯಾಣದ ಯೋಜನೆಯನ್ನು ಅದಕ್ಕೆ ತಕ್ಕಂತೆ ಆಯೋಜಿಸಿಕೊಳ್ಳಬೇಕಾಗುತ್ತದೆ.

ಪ್ರತಿಯೊಂದು ಪ್ರವಾಸವೂ ಹೊಸ ಹೊಸ ವಿಷಯಗಳನ್ನು ತಿಳಿಸುತ್ತದೆ. ಬದುಕಿನ ಹಾದಿಯಲ್ಲಿ ಸದಾ ಹಸಿರಾಗಿರುವ ಇಂತಹ ಅಪರೂಪದ ಕ್ಷಣಗಳನ್ನು ಪ್ರತಿಯೊಬ್ಬ ಪ್ರವಾಸಪ್ರೇಮಿಯೂ ಒಮ್ಮೆಯಾದರೂ ಅನುಭವಿಸಲೇಬೇಕು. ಪ್ರಕೃತಿಯ ಈ ಶ್ವೇತ ವೈಭವ ನನ್ನ ಪಾಲಿಗೆ ಒಂದು ಅದ್ಭುತ ಅನುಭವ.