ನಯಾಗರ ಜಲಪಾತದ ದೃಶ್ಯ ವೈಭವ
ಪ್ರಕೃತಿಯ ಅಪ್ರತಿಮ ಸೃಷ್ಟಿಗಳಲ್ಲಿ ಜಲಪಾತಗಳದ್ದೇ ಒಂದು ವಿಶಿಷ್ಟ ಆಕರ್ಷಣೆ. ಅದರಲ್ಲೂ ಅಮೆರಿಕ ಮತ್ತು ಕೆನಡಾ ದೇಶಗಳ ಗಡಿಯಲ್ಲಿ ಭೋರ್ಗರೆಯುವ 'ನಯಾಗರ ಜಲಪಾತ' ಜಗತ್ತಿನ ಏಳನೇ ವಿಸ್ಮಯಗಳಲ್ಲೊಂದು. ಬರೀ ಟಿವಿ ವಾಹಿನಿಗಳಲ್ಲಿ ನೋಡಿ ಕಣ್ಣುಂಬಿಕೊಳ್ಳುತ್ತಿದ್ದ ಈ ರೌದ್ರರಮಣೀಯ ಜಲಧಾರೆ, ಕಣ್ಣೆದುರೇ ಧುಮುಕುವಾಗ ಉಂಟಾಗುವ ರೋಮಾಂಚನವೇ ಬೇರೆ.
- ಬಿ.ಪಿ. ಶಿವಮೂರ್ತಿ
ಅಮೆರಿಕದಲ್ಲಿರುವ ಜಾಗತಿಕ ಪ್ರಸಿದ್ಧ ನಯಾಗರ ಜಲಪಾತವನ್ನು ನೋಡುವುದೊಂದು ಅದ್ಭುತ ಅನುಭವ. ಈ ಜಲಪಾತ ವೀಕ್ಷಣೆಗೆ ಅಮೆರಿಕನ್ನರು ಮಾಡಿರುವ ತಾಂತ್ರಿಕ ವ್ಯವಸ್ಥೆಗಳಂತೂ ಅದ್ವಿತೀಯ. ಈ ಜಲಪಾತವು ಪ್ರತಿವರ್ಷ ಸುಮಾರು ಎರಡು ಕೋಟಿ ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ನಯಾಗರ ಜಲಪಾತ! ಪ್ರಕೃತಿ ಸೃಷ್ಟಿಯ ಅದ್ಭುತ ದೃಶ್ಯ ವೈಭವ! ಆ ರುದ್ರ ರಮಣೀಯ ಜಲಪಾತವನ್ನು ನೋಡುತ್ತಿದ್ದಂತೆಯೇ ಮೈ ರೋಮಾಂಚನಗೊಂಡಿತು. ಅಮೆರಿಕ ಮತ್ತು ಕೆನಡಾ ದೇಶಗಳೆರಡರಲ್ಲೂ ಹಂಚಿಹೋಗಿರುವ ಈ ಜಲಪಾತವು 'ಗೋಟ್ ದ್ವೀಪ'ದಿಂದ ಬೇರ್ಪಡಿಸಲ್ಪಟ್ಟು ಎರಡು ಭಾಗಗಳಾಗಿ ಧುಮುಕುತ್ತದೆ. ಒಂದು ಭಾಗ ಅಮೆರಿಕದ ಕಡೆ ಇದ್ದರೆ, ಇನ್ನೊಂದು ಭಾಗ ಕೆನಡಾ ಕಡೆ ಇದೆ. ಕೆನಡಾ ಕಡೆ ಇರುವ ಭಾಗವು ಕುದುರೆ ಲಾಳದ ಆಕಾರದಲ್ಲಿರುವುದರಿಂದ ಇದನ್ನು 'ಹಾರ್ಸ್ ಶೂ' ಜಲಪಾತವೆಂದು ಕರೆಯುತ್ತಾರೆ.
ಇದನ್ನೂ ಓದಿ: ನಯನ ಮನೋಹರ ನೈನಿತಾಲ್
ಆಕಾಶದೆತ್ತರದ ಸೇತುವೆ
ನಯಾಗರ ಜಲಪಾತದಿಂದ ಬಿದ್ದ ನೀರು ಮುಂದೆ ನಯಾಗರ ನದಿಯಾಗಿ ಹರಿದು 'ಆಂಟೇರಿಯೋ' ಸರೋವರವನ್ನು ಸೇರುತ್ತದೆ. ಅಮೆರಿಕ ಕಡೆಯ ಜಲಪಾತವನ್ನು ಅದರ ಬಳಿಯ 'ಈರೀ' ಸರೋವರದ ದಂಡೆಯಲ್ಲಿ ನಿಂತು ನೋಡಬಹುದು. ಆದರೆ, ಜಲಪಾತದ ಮುಂದೆ ಸ್ವಲ್ಪ ದೂರದಲ್ಲಿ, ನಯಾಗರ ನದಿಯ ಮೇಲೆ ಜಲಪಾತದ ಎದುರಿಗೆ 200 ಅಡಿ ಎತ್ತರ ಮತ್ತು 2 ಅಡಿ ಉದ್ದನೆಯ ವೀಕ್ಷಣಾ ಸೇತುವೆಯನ್ನು ನಿರ್ಮಿಸಿದ್ದಾರೆ. ಇದು ನಯಾಗರ ನದಿಯ ಅರ್ಧ ಭಾಗದವರೆಗೆ ಮಾತ್ರ ಇದೆ. ಏಕೆಂದರೆ, ಅಲ್ಲಿಂದ ಮುಂದಿನ ನದಿಯ ಭಾಗವು ಕೆನಡಾ ದೇಶಕ್ಕೆ ಸೇರುತ್ತದೆ. ಈ ವೀಕ್ಷಣಾ ಗೋಪುರದಲ್ಲಿ ನಿಂತು ನೋಡಿದರೆ ಅಮೆರಿಕದ ಕಡೆಯ ಜಲಪಾತ ಹಾಗೂ ಕೆನಡಾದ ಕಡೆಯ ಜಲಪಾತ ಎರಡೂ ತುಂಬಾ ಚೆನ್ನಾಗಿ ಕಣ್ಣಿಗೆ ಕಾಣುತ್ತವೆ.
ರಾತ್ರಿಯ ಹೊನಲು ಬೆಳಕು
ರಾತ್ರಿಯಾಗುತ್ತಿದ್ದಂತೆ ಜಲಪಾತಗಳು ಎದುರುಗಡೆಯಿಂದ ಬೀಳುವ 21 ಬಣ್ಣ ಬಣ್ಣದ 'ಕ್ಸೆನಾನ್' ದೀಪಗಳ ಪ್ರಕಾಶಮಾನವಾದ ಹೊನಲು ಬೆಳಕಿನಲ್ಲಿ ಝಗಮಗಿಸತೊಡಗುತ್ತವೆ. ಜಲಪಾತಕ್ಕೆ ಕಾಮನಬಿಲ್ಲಿನ ಏಳು ಬಣ್ಣಗಳ ಬೆಳಕನ್ನು ಹಾಯಿಸುತ್ತಾರೆ. ಜಲಪಾತದ ಅಗಲಕ್ಕೂ ಒಮ್ಮೆಲೇ ಏಳು ಬಣ್ಣದ ಬೆಳಕುಗಳು ಭಾಗ ಭಾಗವಾಗಿ ಒಂದರ ಪಕ್ಕದಲ್ಲಿ ಬಂದು ಬೀಳುತ್ತವೆ. ಹೀಗೆ ಬೀಳುವ ಒಂದೊಂದು ಬಣ್ಣಗಳೂ ಕ್ಷಣಕ್ಷಣಕ್ಕೂ ಬದಲಾಗುತ್ತಲೇ ಇರುತ್ತವೆ.
ನಾವು ಬಂದದ್ದು ಶನಿವಾರ ಸಂಜೆ. ಆ ರಾತ್ರಿ ಅಲ್ಲಿ ನಿಂತು ಎರಡೂ ಕಡೆಯ ಜಲಪಾತಗಳನ್ನು ಮನದಣಿಯೆ ನೋಡಿ ಆನಂದಪಟ್ಟೆವು. ಭಾನುವಾರ ರಾತ್ರಿ ಕೂಡ ಅಲ್ಲೇ ಇದ್ದು, ಮತ್ತೊಮ್ಮೆ ಆ ದೃಶ್ಯ ವೈಭವವನ್ನು ನೋಡಲು ಹೋದೆವು. ಆ ರಾತ್ರಿ 10 ಗಂಟೆಯಿಂದ ಪಟಾಕಿ ಮತ್ತು ಬಾಣ ಬಿರುಸುಗಳನ್ನು ಹಚ್ಚುವ ಕಾರ್ಯಕ್ರಮವಿತ್ತು. ಆಕಾಶಕ್ಕೆ ಚಿಮ್ಮುವ ಬಾಣ ಬಿರುಸುಗಳ ಬಣ್ಣ ಬಣ್ಣಗಳ ಬೆಳಕಿನಲ್ಲಿ ಜಲಪಾತಗಳನ್ನು ನೋಡುವುದು ಇನ್ನೊಂದು ರೀತಿಯ ಅಪೂರ್ವ ಅನುಭವ. ಅದನ್ನೂ ಕಣ್ಣುಂಬಿಕೊಂಡೆವು. ಪ್ರಪಂಚದ ಎಲ್ಲ ಕಡೆಗಳಿಂದಲೂ ಸಾವಿರಾರು ಪ್ರವಾಸಿಗರು ಬಂದಿದ್ದರು. ಭಾರತೀಯರಂತೂ ಸಾಕಷ್ಟು ಸಂಖ್ಯೆಯಲ್ಲಿದ್ದರು. ಎಲ್ಲರೂ ಫೊಟೋ ಕ್ಲಿಕ್ಕಿಸುವುದರಲ್ಲಿಯೇ ಮಗ್ನರಾಗಿದ್ದರು.

ರೋಮಾಂಚನಕಾರಿ ಬೋಟ್ ಸವಾರಿ
ಭಾನುವಾರ ಬೆಳಗ್ಗೆ 9:30ಕ್ಕೆ ಮತ್ತೆ ಜಲಪಾತ ನೋಡಲು ಹೊರಟೆವು. ಈಗ ನಾವು ಟಿಕೆಟ್ ಪಡೆದು ʼಮೈಡ್ ಆಫ್ ದಿ ಮಿಸ್ಟ್ʼ (Maid of the Mist) ಬೋಟ್ ಸವಾರಿಗೆ ಸಿದ್ಧರಾದೆವು. ಇದು ಒಂದು ಅಂತಸ್ತಿನ, ಸುಮಾರು ಆರುನೂರು ಜನ ನಿಂತು ಪ್ರಯಾಣಿಸಬಹುದಾದ ಯಂತ್ರಚಾಲಿತ ಬೋಟ್. ವೀಕ್ಷಣಾ ಗೋಪುರದಿಂದ ಲಿಫ್ಟ್ ಮೂಲಕ ಜಲಪಾತದಿಂದ ಇಳಿದು ಹರಿಯುವ ನಯಾಗರ ನದಿಯ ದಡಕ್ಕೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಎಲ್ಲರಿಗೂ ಒಂದೊಂದು ನೀಲಿ ಬಣ್ಣದ ಪ್ಲಾಸ್ಟಿಕ್ ರೇನ್ ಕೋಟನ್ನು ಕೊಡುತ್ತಾರೆ. ಅದನ್ನು ಹಾಕಿಕೊಂಡು ಬೋಟ್ ಏರಬೇಕು.
ನಂತರ ಆ ಬೋಟಿನಲ್ಲಿ ಅಮೆರಿಕ ಕಡೆಯ ಮತ್ತು ಕೆನಡಾ ಕಡೆಯ ಜಲಪಾತದಿಂದ ಬೀಳುವ ನೀರಿನ ಅತ್ಯಂತ ಹತ್ತಿರಕ್ಕೆ ಕರೆದುಕೊಂಡು ಹೋಗುತ್ತಾರೆ. ಓಹ್! ಆ ಜಲಪಾತಗಳ ರೌದ್ರತೆ ಹಾಗೂ ಭೋರ್ಗರೆತ ಅವುಗಳ ಬಳಿ ಹೋದಾಗಲೇ ಗೊತ್ತಾಗುವುದು. ಜಲಪಾತಗಳ ತುಂಬಾ ಹತ್ತಿರ ಹೋದಾಗಲಂತೂ ಅವುಗಳಿಂದ ಸಿಡಿಯುವ ನೀರು ನಮ್ಮ ರೈನ್ ಕೋಟುಗಳನ್ನೆಲ್ಲ ಸಿಕ್ಕಾಪಟ್ಟೆ ತೋಯಿಸಿಬಿಡುತ್ತದೆ. ಬೋಟಿನಲ್ಲಿರುವ ಜನರೆಲ್ಲ ಆನಂದಾತಿರೇಕದಿಂದ ಚೀರುತ್ತಾರೆ.
ಈ ಬೋಟಿನಲ್ಲಿ ನಾವು ವೀಸಾ ಇಲ್ಲದೆಯೇ ನಯಾಗರ ನದಿಯ ಮೇಲೆ ಕೆನಡಾ ಕಡೆಯ ಜಲಪಾತದ ಬಳಿಗೂ ಹೋಗಿ ಬರುತ್ತೇವೆ. ಇಲ್ಲದಿದ್ದರೆ, ಕೆನಡಾ ಕಡೆಯ ಜಲಪಾತ ನೋಡಲು 75 ಡಾಲರ್ ತೆತ್ತು ಮುಂಚಿತವಾಗಿಯೇ ಕೆನಡಾ ವೀಸಾ ಪಡೆದಿರಬೇಕಿತ್ತು. ಕೆನಡಾ ಕಡೆಯ 'ಹಾರ್ಸ್ ಶೂ' ಜಲಪಾತದ ಮಧ್ಯೆ ಹೋದಾಗಲಂತೂ ಸುತ್ತಲೂ ಅರ್ಧ ವೃತ್ತಾಕಾರದ ಜಲಪಾತ ನಮ್ಮನ್ನು ಸುತ್ತುವರೆದಿರುತ್ತದೆ. ಮೈ ಝುಮ್ಮೆನಿಸುವ ದೃಶ್ಯವದು! ನಾವು ಹೋದಾಗ ಒಳ್ಳೆಯ ಬಿಸಿಲಿದ್ದರಿಂದ ಜಲಪಾತಗಳ ದೃಶ್ಯ ಇನ್ನೂ ಸುಂದರವಾಗಿ ಕಾಣುತ್ತಿತ್ತು.

ಬ್ರೈಡಲ್ ವೇಲ್ ಜಲಪಾತ
ಅಮೆರಿಕ ಕಡೆಯ ಜಲಪಾತಗಳನ್ನೂ ಕೆನಡಾ ಕಡೆಯ ಜಲಪಾತವನ್ನೂ 'ಗೋಟ್ ಐಲ್ಯಾಂಡ್' ಎಂಬ ಪುಟ್ಟ ದ್ವೀಪವು ಬೇರ್ಪಡಿಸುತ್ತದೆ. ಈ ದ್ವೀಪಕ್ಕೆ ಹೋಗಲು ಒಂದು ಸೇತುವೆ ಕಟ್ಟಿದ್ದಾರೆ, ಅಲ್ಲಿಗೆ ನಡೆದುಕೊಂಡೇ ಹೋಗಬಹುದು. ಈ ದ್ವೀಪದ ಒಂದು ಅಂಚಿನಲ್ಲೇ 'ಬ್ರೈಡಲ್ ವೇಲ್' ಜಲಪಾತದ ಮೇಲ್ಭಾಗ ಇರುವುದು. ಹಾಗಾಗಿ ತುಂಬಾ ಹತ್ತಿರದಿಂದಲೇ ಬ್ರೈಡಲ್ ವೇಲ್ ಜಲಪಾತವನ್ನು ನೋಡಿ ಆನಂದಿಸಬಹುದು.
ಬ್ರೈಡಲ್ ವೇಲ್ ಜಲಪಾತದಿಂದ ಬೀಳುವ ನೀರಿನ ಸಮೀಪಕ್ಕೆ ಹೋಗಿ ನೋಡಲು ಈಗ ಒಂದು ಎಲಿವೇಟರ್ ಮೂಲಕ ಜಲಪಾತದ ಕೆಳಕ್ಕೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿಂದ ಅವರೇ ಕೊಡುವ ಹಳದಿ ಬಣ್ಣದ ರೇನ್ ಕೋಟ್ ಮತ್ತು ಪ್ಲಾಸ್ಟಿಕ್ ಚಪ್ಪಲಿ ಧರಿಸಿ, ಜಲಪಾತದ ಬಳಿಗೆ ಮರದ ಡೆಕ್ ಮೇಲೆ ನಡೆಯಬೇಕು. ಈ ಡೆಕ್ಕುಗಳನ್ನು ಅಲ್ಲಿರುವ ಕಲ್ಲು ಬಂಡೆಗಳ ಮಧ್ಯೆ ಕೆಂಪು ಮರದಿಂದ ನಿರ್ಮಿಸಿದ್ದಾರೆ. ಮರದ ಡೆಕ್ಕುಗಳನ್ನು ನಿರ್ಮಿಸಿರುವ ಅಮೆರಿಕನ್ನರ ತಾಂತ್ರಿಕ ನೈಪುಣ್ಯತೆಯನ್ನು ಮೆಚ್ಚಲೇಬೇಕು. ಈ ಡೆಕ್ಕುಗಳು ಅನೇಕ ಮೆಟ್ಟಲುಗಳನ್ನು, ಎರಡು ಕಡೆಯೂ ಭದ್ರವಾದ ಕಟಕಟೆಗಳನ್ನು ಹಾಗೂ ಅಲ್ಲಲ್ಲಿ ನಿಂತು ಜಲಪಾತದ ದೃಶ್ಯವನ್ನು ಆಸ್ವಾದಿಸಲು ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿವೆ. ಈ ಡೆಕ್ಕುಗಳನ್ನು ಬೇಸಿಗೆ ಕಾಲ ಮುಗಿದ ನಂತರ ಬಿಚ್ಚಿಟ್ಟು, ಮುಂದಿನ ವರ್ಷ ಮತ್ತೆ ಪುನರ್ನಿರ್ಮಿಸುತ್ತಾರಂತೆ!
ಇದನ್ನೂ ಓದಿ: ಪ್ರವಾಸದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಹೋಗದೇ, ನಮ್ಮನ್ನೇ ಪರಿಸ್ಥಿತಿಗೆ ಬಿಟ್ಟುಕೊಡಬೇಕು!
ಬ್ರೈಡಲ್ ವೇಲ್ ಜಲಪಾತದ ನೀರು ಒಟ್ಟಿಗೇ 100 ಅಡಿ ಕೆಳಗಿರುವ ನಯಾಗರ ನದಿಗೆ ಬೀಳುವುದಿಲ್ಲ. ಸುಮಾರು 70 ಅಡಿ ಕೆಳಗಿರುವ ಕಲ್ಲು ಬಂಡೆಗಳ ಮೇಲೆ ಬಿದ್ದು, ನಂತರ ನಯಾಗರ ನದಿಯನ್ನು ಸೇರುತ್ತದೆ. ನಾವು ಮರದ ಡೆಕ್ಕುಗಳ ಮೇಲೆ ಹತ್ತಿ, ಬಂಡೆಗಳ ಮೇಲೆ ಬೀಳುವ ನೀರಿನ ಮೊದಲ ಹಂತದ ಬಳಿ ನೀರು ಕೈಗೆಟಕುವಷ್ಟು ಹತ್ತಿರಕ್ಕೆ ಹೋಗಬಹುದು. ಅಲ್ಲಿ ಓಡಾಡುವಾಗ ಸುಮಾರು ಗಂಟೆಗೆ 68 ಕಿಲೋಮೀಟರ್ ವೇಗದಷ್ಟು ರಭಸದಿಂದ ನೀರಿನ ತುಂತುರುಗಳು ಮೈಮೇಲೆ ಸಿಡಿಯುತ್ತವೆ. ಬಿಸಿಲಿನಲ್ಲಿ ನಮ್ಮ ಸುತ್ತ ರಚನೆಯಾಗುವ ಕಾಮನಬಿಲ್ಲುಗಳಂತೂ ಮೈ ನವಿರೇಳಿಸುತ್ತವೆ.
ಜಲಪಾತದ ತೀರಾ ಸಮೀಪದ ಪ್ಲಾಟ್‌ಫಾರ್ಮ್‌ಗೆ ಹೋದಾಗಲಂತೂ ಒಮ್ಮೆ ಅತಿ ರಭಸ, ಒಮ್ಮೆ ಸ್ವಲ್ಪ ಕಡಿಮೆ ರಭಸ ಹೀಗೆ ವಿವಿಧ ವೇಗಗಳಲ್ಲಿ ಜಲಪಾತದ ನೀರಿನ ದೊಡ್ಡ ದೊಡ್ಡ ತುಂತುರು ಹನಿಗಳು ರಪರಪನೆ ಮೈ ಮೇಲೆ ಸಿಡಿದು ನಮ್ಮನ್ನು ತೋಯಿಸುವಾಗ, ಪ್ರವಾಸಿಗರ ಉತ್ಸಾಹ ಮತ್ತು ಆನಂದ ತಾರಕಕ್ಕೇರುತ್ತವೆ. ಇಲ್ಲಿಗೆ ಬಂದ ದೇಶ-ವಿದೇಶಗಳ ಪ್ರವಾಸಿಗರು ದೇಶ, ಭಾಷೆಗಳ ನೆನಪು, ಹೆಣ್ಣು-ಗಂಡೆಂಬ ಭಾವ, ವಯಸ್ಸು ಎಲ್ಲವನ್ನೂ ಮರೆತು ಹುಚ್ಚೆದ್ದು ಕುಣಿದು ಕುಪ್ಪಳಿಸುತ್ತಾರೆ; ಆನಂದದಿಂದ ಚೀರುತ್ತಾರೆ, ಕೆಲವರು ನರ್ತಿಸುತ್ತಾರೆ. ಅವರ ಸಂಭ್ರಮವೇ ಸಂಭ್ರಮ! ಬದುಕು ಸಾರ್ಥಕವೆನಿಸುವ ಮರೆಯಲಾಗದ ಅನುಭವವದು. ಆ ಜಾಗವನ್ನು ಬಿಟ್ಟು ಹೊರಡಲು ಮನಸ್ಸೇ ಬರುವುದಿಲ್ಲ. ನಿಜಕ್ಕೂ ಈ ಪ್ರಕೃತಿಯ ಸೊಬಗನ್ನು ಸವಿಯಲು ಅಮೆರಿಕನ್ನರು ಮಾಡಿರುವ ವ್ಯವಸ್ಥೆಯಂತೂ ಅದ್ಭುತ, ಅತ್ಯದ್ಭುತ! ಪ್ರವಾಸಿ ತಾಣಗಳನ್ನು ಹೇಗೆ ಆಕರ್ಷಣೀಯವಾಗಿ ಮಾಡಬೇಕೆಂಬುದನ್ನು ಅವರಿಂದಲೇ ಕಲಿಯಬೇಕು.
ಗಡಿಯ ಸಾಹಸ ಪ್ರಚಂಡರು
ಕೆನಡಾ ಕಡೆಯ ಜಲಪಾತದ ಮೇಲಿಂದ ಬೀಳುವ ನೀರಿನೊಡನೆಯೇ ಬ್ಯಾರಲ್‌ಗಳಲ್ಲಿ (Barrels) ಕುಳಿತು ಕೆಳಕ್ಕೆ ಬೀಳುವ ಸಾಹಸ ಮೆರೆದ ಪ್ರಚಂಡರಿಗೇನೂ ಕೊರತೆ ಇಲ್ಲ. ಕಾನೂನಿನ ಪ್ರಕಾರ ಇದಕ್ಕೆ ಅವಕಾಶವಿಲ್ಲದಿದ್ದರೂ, ಭದ್ರತಾ ಪಡೆಯ ಕಣ್ಣು ತಪ್ಪಿಸಿ ಸಾಹಸ ಮೆರೆದು ದಂಡ ಕಟ್ಟಿದ್ದಾರೆ. ಕೆಲವರು ಜಲಪಾತದ ಮುಂದೆ ತಂತಿ ಅಥವಾ ಹಗ್ಗ ಕಟ್ಟಿ ನಡೆದು ಹೋಗಿದ್ದಾರೆ. ಇನ್ನು ಕೆಲವರು ಮರ, ರಬ್ಬರ್ ಅಥವಾ ಕಬ್ಬಿಣದ ಬ್ಯಾರಲ್‌ಗಳೊಳಗೆ ಸೇರಿಕೊಂಡು ಜಲಪಾತದ ಮೇಲಿಂದ ಉರುಳಿದ್ದಾರೆ!
ಬ್ಯಾರಲ್‌ನಲ್ಲಿ ಕುಳಿತು 'ಆನ್ನೀ ಎಡ್ಸನ್ ಟೇಲರ್' ಎಂಬ ಉಪಾಧ್ಯಾಯಿನಿ ಅಕ್ಟೋಬರ್ ೧೯೦೧ರಲ್ಲಿ ಈ ಸಾಹಸ ಮಾಡಿದಳು. ಕೆಲವರು ಈ ಸಾಹಸಗಳಲ್ಲಿ ಕೈಕಾಲುಗಳನ್ನು ಸಹ ಮುರಿದುಕೊಂಡಿದ್ದಾರೆ. ಆದರೆ, ಈ ಸಾಹಸಗಳಲ್ಲಿ ಯಾರೂ ಪ್ರಾಣ ತೆತ್ತ ದಾಖಲೆಗಳು ನನಗೆ ಕಾಣಲಿಲ್ಲ.

ಮಾಹಿತಿ ಪೆಟ್ಟಿಗೆ
ಈ ಜಲಪಾತವನ್ನು ಫ್ರೆಂಚ್ ಮತ್ತು ಇತರ ಯುರೋಪಿಯನ್ನರು 1604-1700 ಅವಧಿಯಲ್ಲಿ ಕಂಡುಹಿಡಿದರು ಎಂಬ ವಾದಗಳಿವೆ. ನಯಾಗರ ಜಲಪಾತಕ್ಕೆ ನೀರು ಗ್ಲೇಸಿಯರ್‌ಗಳಿಂದ ಉಂಟಾದ 'ಈರೀ' ಎಂಬ ದೊಡ್ಡ ಸರೋವರದಿಂದ ಬರುತ್ತದೆ. ಈ ಸರೋವರವು ಕೇವಲ ಮಳೆ ನೀರನ್ನು ಅವಲಂಬಿಸದೆ, ಹಿಮಗುಡ್ಡಗಳು ಕರಗಿ ಉಂಟಾಗಿರುವುದರಿಂದ ಜಲಪಾತ ಎಂದೂ ಬತ್ತುವ ಪ್ರಶ್ನೆಯೇ ಇಲ್ಲ.
ಗಮನಿಸಿ
ಇಲ್ಲಿಗೆ ಬರಲು 8 ರಿಂದ 10 ಪಥಗಳ ವಿಶಾಲ ಹೆದ್ದಾರಿಗಳಿವೆ ಹಾಗೂ ಉಳಿದುಕೊಳ್ಳಲು ಸಾಕಷ್ಟು ಹೊಟೇಲ್‌ಗಳಿವೆ. 80 ರಿಂದ 100 ಡಾಲರ್ ಕೊಟ್ಟರೆ ಹೆಲಿಕಾಪ್ಟರ್ ಮೂಲಕ ಜಲಪಾತವನ್ನು ಆಕಾಶದಿಂದ ವೀಕ್ಷಿಸುವ ವ್ಯವಸ್ಥೆಯೂ ಇದೆ.