- ನಾರಾಯಣ ಯಾಜಿ

ಡಚ್ ವ್ಯಾಪಾರಿ ಪೀಟರ್ ಮಿನಿಟ್ ಎಂಬುವವನು 1626ರಲ್ಲಿ ಮೂಲನಿವಾಸಿಗಳಾದ ಲೆನಾಪೆ ಬುಡಕಟ್ಟಿನವರಿಂದ ಕೇವಲ 24 ಡಾಲರ್ ಮೌಲ್ಯದ ಮಣಿಗಳು ಮತ್ತು ಸಣ್ಣಪುಟ್ಟ ವಸ್ತುಗಳನ್ನು ನೀಡಿ ಖರೀದಿಸಿದ ನಗರವೇ ʼನ್ಯೂಯಾರ್ಕʼ. ಇದು ಜಗತ್ತಿನ ಅತ್ಯಂತ ಅಗ್ಗದ ರಿಯಲ್ ಎಸ್ಟೇಟ್ ವ್ಯವಹಾರ ಎಂದು ಖ್ಯಾತವಾಗಿದೆ. ಇಲ್ಲಿನ ಗಗನಚುಂಬಿ ಕಟ್ಟಡ, ಎಡ್ಜ್‌ ಎನ್ನುವ ಕಟ್ಟಡದ ನೂರನೆಯ ಮಹಡಿಯ ಮೇಲೆಹೋಗಿ ಇಡೀ ನ್ಯೂಯಾರ್ಕ್ ನಗರವನ್ನು ವೀಕ್ಷಿಸುವ ಆನಂದ, ನೋಡಿದಷ್ಟೂ ಕೌತುಕ ಹೆಚ್ಚಿಸುವ ಅನೇಕ ಮ್ಯೂಸಿಯಂಗಳು, ನೂರುವರ್ಷದ ಹಿಂದೆಯೇ ಹಡ್ಸನ್ ನದಿಯಾಳದಲ್ಲಿ ಸುರಂಗತೋಡಿದ ಇಂದಿಗೂ ಸುಸ್ಥಿತಿಯಲ್ಲಿರುವ ರೈಲುಮಾರ್ಗ, ಸುರಂಗ, ಜಾಗತಿಕ ಹಣಕಾಸಿನ ಏರಿಳಿತಕ್ಕೆ ಕಾರಣವಾಗುವ ಶೇರುಮಾರುಕಟ್ಟೆ, ಹಣಮಾಡಲು ತನ್ನ ಸಂಪೂರ್ಣ ಕಟ್ಟಡವನ್ನೇ ರಾತ್ರಿಯಲ್ಲಿ ಡಿಜಿಟಲ್ ಬೆಳಕಿನ ಜಾಹಿರಾತಿಗೆ ಕೊಟ್ಟಿರುವ NASDAQ ಕಟ್ಟಡ ಇವೆಲ್ಲವೂ ನ್ಯೂಯಾರ್ಕ ನಗರವನ್ನು ಕ್ರಿಯಾಶೀಲವನ್ನಾಗಿಸಿದೆ. ಇವೆಲ್ಲದಕ್ಕಿಂತಲೂ ಜನರನ್ನು ಸೆಳೆಯುವುದು ’ಟೈಮ್ಸ್ ಸ್ಕೇರ್’ ಎನ್ನುವ ಚೌಕ.

ಇದನ್ನೂ ಓದಿ: ಅಮೆರಿಕ: ಕನಸುಗಳ ಪಾರಿಯಲ್ಲೊಂದು ಮನದ ಯಾನ!

ಟೈಮ್ಸ್‌ ಸ್ಕ್ವೇರ್‌ ವೈಯ್ಯಾರ

ನ್ಯೂಯಾರ್ಕ್ ನಗರದ ಹೃದಯಭಾಗದಲ್ಲಿರುವ ‘ಟೈಮ್ಸ್ ಸ್ಕ್ವೇರ್’ ಎನ್ನುವ ರಾತ್ರಿರಾಣಿಯ ವೈಯ್ಯಾರವೇ ಮುದಕೊಡುವಂಥದ್ದು. ಇದು ಕೇವಲ ಪ್ರವಾಸಿಗರ ಆಕರ್ಷಣೆಯ ಕೇಂದ್ರವಲ್ಲ; ಇಲ್ಲಿ ಕೆಲ ಹೂಡಿಕೆದಾರರ ಸಣ್ಣ ಸೀನೂ ಪ್ರಪಂಚದಲ್ಲಿನ ಹಣಕಾಸು ಲೋಕದಲ್ಲಿ ಭೂಕಂಪವನ್ನು ಉಂಟುಮಾಡಬಹುದು. ಈ ನಗರದಲ್ಲಿ ರಾತ್ರಿಯಾಗುತ್ತದೆ ಆದರೆ ಕತ್ತಲು ಕವಿಯುವುದಿಲ್ಲ. ಶೇರು ಮಾರುಕಟ್ಟೆ ದಿನದ ವ್ಯವಹಾರವನ್ನು ಮುಗಿಸಿದರೂ ಪ್ರಪಂಚದ ಹಣದ ವ್ಯವಹಾರ ಅಡೆತಡೆಯಿಲ್ಲದೇ ನಡೆಯುತ್ತದೆ. ಬೇರೆ ಬೇರೆ ದೇಶದ ಕರೆನ್ಸಿಯ ಮೌಲ್ಯವನ್ನು ಏರಿಳಿಸುವ ಡಾಲರ್ ಸದಾ ನರ್ತಿಸುತ್ತಿರುತ್ತದೆ. ನ್ಯೂಯಾರ್ಕಿನ ಪೆನ್ ರೇಲ್ವೆ ಸ್ಟೇಷನ್ನಿನಿಂದ ಮೇಲೆ ಬಂದು 7ನೆಯ ಅವೆನ್ಯೂ ರಸ್ತೆಯಲ್ಲಿ ಉತ್ತರಕ್ಕೆ ಹತ್ತುನಿಮಿಷ ನಡೆದರೆ 42ನೆಯ ಸ್ಟ್ರೀಟ್ ಸಂಧಿಸುವಲ್ಲಿ ಟೈಮ್ಸ್ ಚೌಕ ಆರಂಭವಾಗುತ್ತದೆ. ರಸ್ತೆಯಷ್ಟೇ ಅಗಲವಿರುವ ಪಾದಚಾರಿ ಮಾರ್ಗದಲ್ಲಿ ಚಿತ್ರವಿಚಿತ್ರವಾದ ಪ್ರಪಂಚ ತೆರೆದುಕೊಳ್ಳುತ್ತದೆ.

Untitled design - 2026-06-08T135538.616

ಎಲ್ಲೆಲ್ಲಿಂದಲೋ ಬರುವ ಪ್ರವಾಸಿಗರು, ಅವರನ್ನು ಆಕರ್ಷಿಸುವ ರಸ್ತೆಬದಿಯ ತಿಂಡಿ ಮರಾಟಗಾರರು, ಐದು ನಿಮಿಷದಲ್ಲಿಯೇ ನಿಮ್ಮ ವ್ಯಕ್ತಿಚಿತ್ರವನ್ನು ಬಿಡಿಸಿಕೊಡುವ ಬೀದಿಬದಿಯ ಚಿತ್ರ ಕಲಾವಿದರು ಇವರ ನಡುವೆ ಜಾಗಮಾಡಿಕೊಂಡು ಮುಂದೆ ಸಾಗುತ್ತಿದ್ದಂತೆ ಫುಟ್ಪಾತಿನ ನಡುವೆ ಇದ್ದಕ್ಕಿದ್ದಂತೆ ಬೀದಿಬದಿಯ ಕಲಾವಿದರ ದೊಂಬರಾಟವೋ, ಇನ್ನೆಂಥದೋ ಪ್ರಾರಂಭವಾಗುತ್ತದೆ. ಬಣ್ಣಬಣ್ಣದಿಂದ ಅಲಂಕರಿಸಿದ ಸೈಕಲ್-ರಿಕ್ಷಾ ಭಾರತದಲ್ಲಿ ಹೊಟ್ಟೆಪಾಡಿಗಾದರೆ ಇಲ್ಲಿ ಮೋಜುಮಸ್ತಿಗೆ ಪ್ರವಾಸಿಗರ ಆಕರ್ಷಣೆ. ಇವೆಲ್ಲದರ ನಡುವೆ ಓರ್ವ ಮುದುಕ ಫಾಸ್ಟರ್ ಪವಿತ್ರ ಗ್ರಂಥದ ಯಾವುದೋ ಒಂದು ಪುಟವನ್ನು ತೋರಿಸುತ್ತಾ ʼಜಗತ್ತಿನ ಪ್ರಳಯಕಾಲ ಹತ್ತಿರವಾಗುತ್ತಿದೆ. ದೇವಪುತ್ರನೊಂದಿಗೆ ಬನ್ನಿ ಎಂದುʼ ಕೂಗುತ್ತಿರುತ್ತಾನೆ. ಜಗತ್ತಿನ ಪ್ರಳಯದ ಸಮಯ ಹತ್ತಿರವಿದೆ ಎಂದು ಆತ ಕೆಲವರ್ಷಗಳ ಹಿಂದಿನಿಂದಲೂ ಕೂಗುತ್ತಿದ್ದಾನಂತೆ. ಇನ್ನೊಂದು ಕಡೆ ಶಾಂತಿದೂತರು ತಮ್ಮ ಧರ್ಮದ ಪವಿತ್ರ ಗ್ರಂಥದಲ್ಲಿ ಪರಿಸರ ರಕ್ಷಣೆಹವಿಧಾನ ಯಾವುದರಲ್ಲಿಯೂ ಇಲ್ಲವೆಂದು ಬಣ್ಣಿಸಿತ್ತಿರುತ್ತಾರೆ. ಪಕ್ಕದಲ್ಲೇ ಮರಿಜುವಾ ಎನ್ನುವುದರ ಅಮಲನ್ನು ಏರಿಸಿಕೊಳ್ಳುವ ಯುವಜನತೆ ಕಳವಳ ಮೂಡಿಸುತ್ತದೆ. ಗಗನಚುಂಬಿಸುವ ಕಟ್ಟಡದ ಎತ್ತರಕ್ಕೂ ಡಿಜಿಟಲ್ ಜಾಹಿರಾತನ್ನು ಪ್ರದರ್ಶಿಸುವ ಮಾಯಾಲೋಕ ಹೊಸಲೋಕವನ್ನೇ ತೆರೆದುಕೊಳ್ಳುತ್ತದೆ. ನಿಮ್ಮ ನಿಮ್ಮ ಚಿತ್ರಗಳನ್ನೂ ಸಹ ಜಾಹಿರಾತಿನ ಬೋರ್ಡಿನಲ್ಲಿ ಪ್ರಕಟಿಸಬಹುದು. ಹದಿನೈದು ಸೆಕೆಂಡಿಗೆ ಕೇವಲ $150.

ಡಫಿ ಸ್ಕ್ವೇರ್‌

ರಸ್ತೆಯ ಮಧ್ಯದಲ್ಲಿ ಎರಡು ವ್ಯಕ್ತಿಗಳ ಪ್ರತಿಮೆ ಕಾಣಿಸುತ್ತದೆ. ಅವರ ಹಿಂದೆ ಕೆಂಪುಬಣ್ಣದ ಮಂದಬೆಳಕು ಹರಡಿರುವ 27 ಮೆಟ್ಟಿಲಮೇಲೆ ಕುಳಿತು ಟೈಮ್ಸ್ ಚೌಕದ ಜನಜಂಗುಳಿಯ ಆನಂದವನ್ನು ಸವಿಯುತ್ತಿರುವವರನ್ನು ಗಮನಿಸಬಹುದು. ಇದನ್ನು ಡಫಿ ಸ್ಕ್ವೇರ್‌ ಎಂದು ಕರೆಯುತ್ತಾರೆ. ಇದು ಟೈಮ್ಸ್ ಚೌಕದ ಕೇಂದ್ರ ಬಿಂದು. ನ್ಯೂಯಾರ್ಕ್ ಎಲ್ಲ ಗದ್ದಲಗಳಿಗೂ ಸಾಕ್ಷಿಯಾಗಿ, ಅನುಮೋದಕರಾಗಿ ನಿಂತ ಎರಡು ಪ್ರತಿಮೆಗಳನ್ನು ಗಮನಿಸಬಹುದು. ಓರ್ವ ಕೆನಡಾ ಮೂಲದ ಅಮೆರಿಕನ್ ಕ್ಯಾಥೋಲಿಕ್ ಪಾದ್ರಿ ಡಫಿ. ಮೊದಲ ಮಹಾಯುದ್ಧದ ಸಮಯದಲ್ಲಿ ಅಮೆರಿಕದ 69ನೆಯ ಇನ್ಫಾಂಟ್ರಿ ರೆಜಿಮೆಂಟ್‌ನಲ್ಲಿ ಮಿಲಿಟರಿ ಚಾಪ್ಲಿನ್ ಆಗಿ ಸೇವೆ ಸಲ್ಲಿಸಿದವ. ಸೈನಿಕರಲ್ಲಿ ಸಾವಿನ ನೋವಿನ ಭಯ ಕಾಡುತ್ತಿದ್ದಾಗ ಅವನು ಅವರೊಳಗೆ ಧೈರ್ಯದ ದೀಪ ಹಚ್ಚಿದ. ಯುದ್ಧದಲ್ಲಿ ಗಾಯಗೊಂಡು ಬದುಕಿನಲ್ಲಿ ಭರವಸೆ ಕಳೆದುಕೊಂಡ ಅಸಂಖ್ಯಾತ ಸೈನಿಕರಿಗೆ ಈತ ಮಾನಸಿಕ ನೆಮ್ಮದಿ ನೀಡಿದ. ರಣಭೂಮಿಯಲ್ಲಿ ನುಗ್ಗಿ ಗಾಯಾಳುಗಳನ್ನು ರಕ್ಷಿಸಿದ ಈತ ಯುದ್ಧದ ನಂತರ ಇದೇ ಟೈಮ್ಸ್ ಸ್ಕ್ವೇರ್ ಬಳಿಯ 'ಹೋಲಿ ಕ್ರಾಸ್ ಚರ್ಚ್'ನಲ್ಲಿ ಪಾದ್ರಿಯಾಗಿ ಸೇವೆ ಸಲ್ಲಿಸಿದ. ಅಲ್ಲಿನ ಜನರ ಮೇಲೆ ಆತ ಬೀರಿದ ಪ್ರಭಾವ ಮತ್ತು ನಿಸ್ವಾರ್ಥ ಸೇವೆಯ ಗೌರವಾರ್ಥವಾಗಿ 1937ರಲ್ಲಿ ಡಫಿಯ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಅದೇ ಗ 'ಡಫಿ ಸ್ಕ್ವೇರ್' ಎಂದು ಕರೆಯಲಾಗುತ್ತದೆ.

ರಂಗಕರ್ಮಿಯ ಪ್ರತಿಮೆ

ಫಾ. ಡಫಿಯ ಪ್ರತಿಮೆಯಿಂದ ಸುಮಾರು ನಲವತ್ತು ಅಡಿಯಲ್ಲಿ ನಿಲ್ಲಿಸಿದ ಇನ್ನೊಂದು ಮೂರ್ತಿ ಜಾರ್ಜ್ ಎಂ. ಕೋಹನ್ ಎನ್ನುವ ಅದ್ಭುತ ರಂಗಕರ್ಮಿಯದ್ದು. ಜಾಗತಿಕವಾಗಿ ರಂಗಕಲಾವಿದರ ಕನಸು ಒಮ್ಮೆಯಾದರೂ ’ಬ್ರಾಡ್‌ವೇ’ ಅಭಿನಯಿಸಬೇಕು ಇಲ್ಲವೇ ನಾಟಕವನ್ನು ನೋಡಬೇಕು ಎನ್ನುವುದು. ಬ್ರಾಡ್‌ವೇ ರಂಗಭೂಮಿಯನ್ನು ಜಪ್ರಿಯಗೊಳಿಸುವಲ್ಲಿ ಇವನ ಕೊಡುಗೆ ಅಪಾರ. ಅಮೆರಿಕದ ಮ್ಯೂಸಿಕಲ್‌ ಥಿಯೇಟರ್‌ಗಳಿಗೆ ಒಂದು ಹೊಸ ರೂಪವನ್ನು ಈತನೇ ಕೊಟ್ಟವ. ಟೈಮ್ಸ್ ಸ್ಕ್ವೇರ್ ಮತ್ತು ಬ್ರಾಡ್‌ವೇ ಎರಡನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಿದ ಕೀರ್ತಿಗಾಗಿ ಈತನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. 1959ರಲ್ಲಿ ಸ್ಥಾಪಿಸಲಾದ ಪ್ರತಿಮೆಯ ಮೇಲೆ ʼGive My Regards to Broadwayʼ ಎಂಬ ಸಾಲುಗಳನ್ನು ಬರೆಯಲಾಗಿದೆ. ಮೊದಲು ನಾಟಕಗಳ ಟಿಕೇಟನ್ನು ರಿಯಾಯತಿ ದರದಲ್ಲಿ ಇಲ್ಲಿಂದಲೇ ಖರೀದಿಸಬಹುದಾಗಿತ್ತು. ಈಗ ಹೆಚ್ಚಿನವು ಆನ್ಲೈನಿನಲ್ಲಿ ಲಭ್ಯ. ಟೈಮ್ಸ್ ಸ್ಕ್ವೇರ್ ಅನ್ನು ʼವಿಶ್ವದ ಅಡ್ಡರಸ್ತೆʼ ಎಂದು ಕರೆಯಲಾಗುತ್ತದೆ.

ಹೆಸರಿನ ಇತಿಹಾಸ

19ನೆಯ ಶತಮಾನದ ಅಂತ್ಯದವರೆಗೆ, ಈ ಪ್ರದೇಶವನ್ನು ಲಾಂಗ್ ಏಕರ್ ಸ್ಕ್ವೇರ್ ಎಂದು ಕರೆಯಲಾಗುತ್ತಿತ್ತು. ಆಗ ಇದು ಕುದುರೆ ಗಾಡಿಗಳ ತಯಾರಿಕೆ ಮತ್ತು ಕುದುರೆಗಳ ವ್ಯಾಪಾರಕ್ಕೆ ಹೆಸರುವಾಸಿಯಾಗಿತ್ತು. ಲಂಡನ್‌ನ ಪ್ರಸಿದ್ಧ ಕುದುರೆ ವ್ಯಾಪಾರ ಕೇಂದ್ರವಾದ 'ಲಾಂಗ್ ಏಕರ್' ಹೆಸರನ್ನೇ ಇದಕ್ಕೆ ಇಡಲಾಗಿತ್ತು. 1904ರಲ್ಲಿ ಪ್ರಸಿದ್ಧ ಪತ್ರಿಕೆಯಾದ 'ದಿ ನ್ಯೂಯಾರ್ಕ್ ಟೈಮ್ಸ್' ತನ್ನ ಪ್ರಧಾನ ಕಚೇರಿಯನ್ನು ಈ ಪ್ರದೇಶದ ಹೊಸದಾಗಿ ನಿರ್ಮಿಸಲಾದ 'ಟೈಮ್ಸ್ ಬಿಲ್ಡಿಂಗ್'ಗೆ ಸ್ಥಳಾಂತರಿಸಿತು. ಪತ್ರಿಕೆಯ ಮಾಲೀಕರಾದ ಅಡಾಲ್ಫ್ ಎಸ್. ಓಕ್ಸ್ ಅವರ ವಿನಂತಿಯ ಮೇರೆಗೆ, ಆಗಿನ ಮೇಯರ್ ಜಾರ್ಜ್ ಬಿ. ಮೆಕ್‌ಕ್ಲೆಲನ್ ಈ ಚೌಕಕ್ಕೆ ʼಟೈಮ್ಸ್ ಸ್ಕ್ವೇರ್ʼ ಎಂದು ಮರುನಾಮಕರಣ ಮಾಡಿದರು. ಟೈಮ್ಸ್ ಪತ್ರಿಕೆ ಮತ್ತು ಬ್ರಾಡ್‌ವೇ ರಂಗಮಂದಿರದಿಂದಾಗಿ ನ್ಯೂಯಾರ್ಕಿನ ಈ ತಾಣಕ್ಕೆ ಒಂದು ಘನತೆ ಬಂತು.

Untitled design - 2026-06-08T135549.579

ನ್ಯೂ ಇಯರ್ ಬಾಲ್ ಡ್ರಾಪ್

ಈ ಜಾಗ ಪ್ರವಾಸಿಗರ ಆಕರ್ಷಣೆಗೆ ಮುಖ್ಯಕಾರಣವಾಗಿರುವುದು, ಹೊಸವರ್ಷದಂದು ಟೈಮ್ಸ್ ಪತ್ರಿಕೆಯವರ ʼನ್ಯೂ ಇಯರ್ ಬಾಲ್ ಡ್ರಾಪ್ʼ ಎನ್ನುವುದರಿಂದ. 1904ರ ಡಿಸೆಂಬರ್ 31ರಂದು ಪತ್ರಿಕೆಯು ತನ್ನ ಹೊಸ ಕಚೇರಿಯ ಉದ್ಘಾಟನೆಯನ್ನು ಸಂಭ್ರಮಿಸಲು ಮೊದಲ ಬಾರಿಗೆ ಹೊಸ ವರ್ಷದ ಆಚರಣೆಯನ್ನು ಹಮ್ಮಿಕೊಂಡಿತು. ಮುಂದೆ 1907ರಿಂದ ಹೊಸವರ್ಷದ ಸ್ವಾಗತಕ್ಕೆ ವಿಶ್ವವಿಖ್ಯಾತವಾಗಿರುವ 'ಬಾಲ್ ಡ್ರಾಪ್' ಸಂಪ್ರದಾಯ ಪ್ರಾರಂಭವಾಯಿತು. ಪ್ರತಿ ವರ್ಷದ ಕೊನೆಯ ಕ್ಷಣಗಳಲ್ಲಿ ಟೈಮ್ಸ್‌ ಸ್ಕ್ವೇರ್‌ನ ಮೇಲಿಂದ ನಿಧಾನವಾಗಿ ಇಳಿಯುವ ಬಾಲನ್ನು ನೋಡುವುದೇ ಸಂಭ್ರಮ. ವಿಶ್ವದ ಮೂಲೆಯಿಂದ ಲಕ್ಷಾಂತರ ಪ್ರವಾಸಿಗರು ಈ ಸಂಭ್ರಮವನ್ನು ಕಣ್ಣ್ತುಂಬಿಕೊಳ್ಳಲು ಇಲ್ಲಿಗೆ ಆಗಮಿಸುತ್ತಾರೆ.

ಇನ್ನೊಂದು ಮುಖ

ಈ ಸ್ಥಳಕ್ಕೆ ಇನ್ನೊಂದು ಮುಖವೂ ಇದೆ. ಟೈಮ್ಸ್ ಸ್ಕ್ವೇರ್ ಮತ್ತು ನ್ಯೂಯಾರ್ಕ್‌ನ ಬೀದಿಗಳಲ್ಲಿ ಕಾನೂನು ಬದ್ಧವಾಗಿ ಮರಿಜುವಾನಾ ಮಾರುವವರನ್ನೂ ಕಾಣಬಹುದು. ಅಲ್ಲಲ್ಲಿ ಬಿಕ್ಷುಕರೂ ಕಂಡುಬರುತ್ತಾರೆ. ಆಯುಧಸಹಿತವಾಗಿ ಪೊಲೀಸರು ರಸ್ತೆಯುದ್ಧಕ್ಕೂ ತುಂಬಿಕೊಂಡಿದ್ದು, ಜನಸ್ನೇಹಿ ಎನ್ನುವುದು ಸಮಾಧಾನ. ಹಡ್ಸನ್ ನದಿಯಂತೆ ಟೈಮ್ಸ್ ಸ್ಕ್ವೇರ್‌ನಲ್ಲಿರುವ ಜನಸಾಗರವೂ ಸದಾ ಹರಿಯುತ್ತಿರುತ್ತದೆ. ಈ ಪ್ರವಾಹದಲ್ಲಿ ಪ್ರತಿಯೊಬ್ಬರೂ ತಮ್ಮದೇ ಕಥೆಯನ್ನು ಹೊತ್ತಿದ್ದಾರೆ. ಪ್ರವಾಸಿಗನ ಕಂಗಳಲ್ಲಿ ಆಶ್ಚರ್ಯ, ವ್ಯಾಪಾರಿಯ ಹೆಜ್ಜೆಯಲ್ಲಿ ಲಾಭ, ಕಲಾವಿದನ ಮನಸಿನಲ್ಲಿ ಕನಸು. ಈ ಎಲ್ಲ ಕಥೆಗಳು ಒಂದೇ ಸ್ಥಳದಲ್ಲಿ ಸೇರಿರುವ ರಾತ್ರಿರಾಣಿ ಟೈಮ್ಸ್ ಸ್ಕ್ವೇರ್.

ಲೇಖಕರು: ಬರಹಗಾರರು