• ಜಯ ನಾಗೇಂದ್ರ

ಸೇಂಟ್ ಪೀಟರ್ ಬೆಸಿಲಿಕಾ, ವ್ಯಾಟಿಕನ್‌ನ ಮೊದಲ ಪೋಪ್ ಸಂತ ಪೀಟರ್ ಅವರ ಸ್ಮರಣಾರ್ಥ ನಿರ್ಮಿಸಲ್ಪಟ್ಟಿದೆ. ವ್ಯಾಟಿಕನ್ ಸಿಟಿ ಒಂದು ಚದರ ಮೈಲಿಗೂ ಕಡಿಮೆ ವಿಸ್ತೀರ್ಣ ಹೊಂದಿದ್ದರೂ, ಇದಕ್ಕೆ ಸ್ವಂತ ರೇಡಿಯೋ ಸ್ಟೇಷನ್, ಪತ್ರಿಕೆ, ಅಂಚೆ ಕಚೇರಿ ಮತ್ತು ಚಿಕ್ಕ ರೈಲು ನಿಲ್ದಾಣವಿದೆ. ಭೂಮಿಯ ಅತ್ಯಂತ ಭವ್ಯ ಚರ್ಚ್ ಆಗಿರುವ ಇದರಲ್ಲಿ ಇದು ಒಂದು ಬೃಹತ್‌ ಸಂಗ್ರಹಾಲಯವೂ ಇದೆ. ವ್ಯಾಟಿಕನ್ ರಾಜಕೀಯ ಮತ್ತು ಧಾರ್ಮಿಕವಾಗಿ ಪೋಪ್ ಅವರ ಆಡಳಿತದಲ್ಲಿದೆ. ಸೇಂಟ್ ಪೀಟರ್ ಬೆಸಿಲಿಕಾ ಪಾಶ್ಚಾತ್ಯ ಜಗತ್ತಿನ ಮೇಲೆ ರೋಮ್‌ನ 2000 ವರ್ಷದ ಪ್ರಭುತ್ವದ ಶಕ್ತಿ ಮತ್ತು ವೈಭವವನ್ನು ಪ್ರತಿನಿಧಿಸುತ್ತದೆ. ಇಲ್ಲಿ ಪ್ರಾಚೀನ ರೋಮ್‌ನ ವೈಭವವು ಕ್ರೈಸ್ತ ಧರ್ಮದ ವೈಭವವಾಗಿ ಬದಲಾಯಿತು. ಇದು ಪ್ರಾಚೀನ ರೋನ್‌ನ ಸುಂದರ ಮರಗಳ ಸ್ತಂಭಗಳು ಮತ್ತು ಕಲಾಕೃತಿಗಳನ್ನು ಉಳಿಸಿಕೊಂಡು ಮರುನಿರ್ಮಾಣವಾಗಿದೆ.

ಇದನ್ನೂ ಓದಿ:ಪಿರಮಿಡ್ ಎಂಬುದು ಸಾವಿನ ನಂತರದ ಬದುಕಿನ ಸಿದ್ಧತೆ!

ಇಲ್ಲಿನ ಪ್ರತಿಯೊಂದು ಕಲಾಕೃತಿಯೂ ಒಂದು ಸಂದೇಶವನ್ನು ಹೊತ್ತಿರುತ್ತದೆ. ವಿಜಯ, ಪರಿವರ್ತನೆ, ಸಾಮ್ರಾಜ್ಯದ ಶಕ್ತಿ, ಯುದ್ಧದ ಚಿತ್ರಗಳು ಇಲ್ಲಿವೆ. ಒಂದು ಚಿತ್ರದಲ್ಲಿ ಮತ್ತೊಂದು ದೇಶದ ಮೇಲೆ ಜಯ ಸಾಧಿಸಿದ ಸಂಭ್ರಮ; ಮತ್ತೊಂದು ಚಿತ್ರದಲ್ಲಿ ಕಾನ್ಸ್ಟಾಂಟೈನ್‌ನ ವಿಜಯ ಮತ್ತು ಕ್ರೈಸ್ತ ಧರ್ಮಕ್ಕೆ ಅವನ ಪರಿವರ್ತನೆ. ಎಲ್ಲೆಡೆ ಯುದ್ಧ ಮತ್ತು ಜಯಗಳ ದೃಶ್ಯಗಳು ಸಾಮ್ರಾಜ್ಯದ ಪ್ರತಿಷ್ಠೆಯನ್ನು ತೋರಿಸುತ್ತವೆ. ಅದರ ಜತೆಗೆ ಸಂಗ್ರಹಾಲಯವು ರೋಮನ್ ಜೀವನದ ಶಾಂತ, ಆತ್ಮೀಯ ಮುಖವನ್ನೂ ಅನಾವರಣಗೊಳಿಸುತ್ತದೆ.

Untitled design (6)

ಶತಮಾನಗಳ ಕಾಲ ಪೋಪ್‌ರನ್ನು ‘ರಾಜ ಪೋಪ್’ ಎಂದು ಕರೆಯಲಾಗುತ್ತಿತ್ತು. ನಿಧಾನವಾಗಿ, ಈ ‘ರಾಜ ಪೋಪ್’ ತಮ್ಮದೇ ಸಾಮ್ರಾಜ್ಯವನ್ನು ನಿರ್ಮಿಸಿ, 1600ರ ದಶಕದಲ್ಲಿ ‘ಪಾಪಲ್ ಸ್ಟೇಟ್ಸ್’ ಎಂದು ಕರೆಯಲ್ಪಟ್ಟ. ಈ ಪ್ರದೇಶಗಳು ಇಟಾಲಿಯನ್ ಉಪಖಂಡದ ಬಹುಭಾಗವನ್ನು ಒಳಗೊಂಡಿದ್ದವು. 1800ರ ದಶಕದ ಕೊನೆಯಲ್ಲಿ ಇಟಲಿ ಏಕೀಕೃತ ರಾಷ್ಟ್ರವಾದಾಗ, ರೋಮ್ ಸೇರಿದಂತೆ ಪಾಪಲ್ ಸ್ಟೇಟ್ಸ್‌ನ ಎಲ್ಲ ಭಾಗಗಳನ್ನೂ ಸೇರಿಸಿಕೊಂಡಿತು. ಆದರೆ ಪೋಪ್ ಒಪ್ಪಲಿಲ್ಲ. ಸುಮಾರು 60 ವರ್ಷಗಳ ಕಾಲ ಅವರು ವ್ಯಾಟಿಕನ್ ಗೋಡೆಗಳ ಒಳಗೆ ಬಂಧಿಯಾಗಿದ್ದರು. ಕೊನೆಗೆ 1929ರಲ್ಲಿ ಪೋಪ್ ಮತ್ತು ಮುಸ್ಸೋಲಿನಿ ಲ್ಯಾಟರನ್ ಒಪ್ಪಂದಕ್ಕೆ ಸಹಿ ಹಾಕಿ, ವ್ಯಾಟಿಕನ್ ಅನ್ನು ಸ್ವತಂತ್ರ ರಾಷ್ಟ್ರವಾಗಿ ಸ್ಥಾಪಿಸಿದರು. ಈಗಲೂ ವ್ಯಾಟಿಕನ್‌ನ ‘ಸೈನ್ಯ’ ಸ್ವಿಸ್ ಗಾರ್ಡ್‌ನಿಂದ ಕೂಡಿದೆ. ಸುಮಾರು 100 ಸ್ವಿಸ್ ಸೈನಿಕರು ತಮ್ಮ ಆಕರ್ಷಕ ನವೋದಯ ಶೈಲಿಯ ಪೋಷಾಕುಗಳಲ್ಲಿ ಪೋಪ್‌ರನ್ನು ರಕ್ಷಿಸುತ್ತಾರೆ. ಪ್ರವಾಸಿಗರ ಗುಂಪನ್ನು ಕ್ರಮಬದ್ಧವಾಗಿ ನಡೆಸುತ್ತಾರೆ. ಸಹನೆಯಿಂದ ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.

ಪಕ್ಕದ ವೇದಿಕೆಗಳನ್ನು ಅಲಂಕರಿಸಿರುವ ಭವ್ಯ ಚಿತ್ರಗಳನ್ನು ನೋಡಿ ಪ್ರವಾಸಿಗರು ಮಂತ್ರಮುಗ್ಧರಾಗುತ್ತಾರೆ. ಆದರೆ ಅವು ಚಿತ್ರಗಳೇ ಅಲ್ಲ. ಸಾಮಾನ್ಯವಾಗಿ ಕ್ಯಾನ್ವಾಸ್ ಮೇಲೆ ಚಿತ್ರಿಸುವ ಆಯಿಲ್ ಪೇಂಟಿಂಗ್ಸ್ ಬೇಗನೆ ದೀಪದ ಹೊಗೆಯಿಂದ ಹಾಳಾಗುತ್ತವೆ. ಆದ್ದರಿಂದ ಸೇಂಟ್ ಪೀಟರ್ ಬೆಸಿಲಿಕಾದಲ್ಲಿ ನಿಜವಾದ ಚಿತ್ರಗಳು ಇಲ್ಲ. ಬದಲಿಗೆ ಸಾವಿರಾರು ಬಣ್ಣದ ಕಲ್ಲುಚಿಪ್‌ಗಳಿಂದ ಮಾಡಿದ ವ್ಯಾಟಿಕನ್ ಮೋಸಾಯಿಕ್ ಶೈಲಿಯ ಅದ್ಭುತ ಕಲಾಕೃತಿಗಳು.

ಮೋಸಾಯಿಕ್ ಕಲಾಕೃತಿಗಳು

ವೇದಿಕೆಯ ಮೇಲ್ಭಾಗದಲ್ಲಿ ಬರ್ನಿನಿಯ ಕಂಚಿನ ಮಂಟಪವಿದೆ. ಅದರ ಮೇಲೆ ಮೈಕೆಲ್ಯಾಂಜೆಲೋ ಅವರ ಗುಮ್ಮಟ ಕಾಣುತ್ತದೆ. ಕ್ರಿಶ 500ರ ವೇಳೆಗೆ, ಅತಿಯಾದ ಭ್ರಷ್ಟಾಚಾರದಿಂದ ದಣಿದ ರೋಮನ್ ಸಾಮ್ರಾಜ್ಯ ಕುಸಿದಾಗ, ಅದರ ವೈಭವ ರೋಮನ್ ಚರ್ಚ್‌ನಲ್ಲಿ ಮುಂದುವರಿಯಿತು. ಕಾಲಕ್ರಮೇಣ ಪುರಾತನ ಟ್ರಾಜನ್‌ನ ಸ್ತಂಭದ ಮೇಲ್ಭಾಗದಲ್ಲಿ ಕ್ರೈಸ್ತನ ಪ್ರತಿಮೆ ಸ್ಥಾಪಿಸಿ, ಪ್ಯಾಂಥಿಯಾನ್ ಚರ್ಚ್ ಆಗಿ ಪರಿವರ್ತಿಸಲಾಯಿತು. ಚಕ್ರವರ್ತಿ ಹ್ಯಾಡ್ರಿಯನ್‌ನ ಸಮಾಧಿ ಪೋಪ್‌ರ ಕೋಟೆಯಾಯಿತು. ರೋಮನ್ನರಿಂದಲೇ ಕೊಲ್ಲಲ್ಪಟ್ಟ ಧರ್ಮ ಪ್ರಚಾರಕ ಪೀಟರ್ ಅವರ ಸಮಾಧಿಯ ಮೇಲೆ ಅತ್ಯಂತ ಭವ್ಯ ಕಟ್ಟಡ ಸೇಂಟ್ ಪೀಟರ್ ಬೆಸಿಲಿಕಾ ಎದ್ದಿತು. ಹೀಗೆ ಇಂದು ರೋಮ್‌ಗೆ ಬರುವವರು ಅನೇಕ ಪದರಗಳ ಇತಿಹಾಸ ಮತ್ತು ಸಂಸ್ಕೃತಿಯನ್ನು ಕಾಣುತ್ತಾರೆ.

ಅನೇಕ ಉಪಸಂಗ್ರಹಾಲಯಗಳನ್ನು ಒಳಗೊಂಡಿರುವ, ವೈಭವಮಯ ಪಾಪಲ್ ಅರಮನೆಯಲ್ಲಿ ಇರುವ ವ್ಯಾಟಿಕನ್ ಮ್ಯೂಸಿಯಂ ಸಮೂಹ ಜಗತ್ತಿನ ಅತ್ಯುತ್ತಮ ಕಲಾಕೃತಿಗಳನ್ನು ಒಳಗೊಂಡಿದೆ. ಆದರೆ ಅವುಗಳ ಬಹು ಉದ್ದನೆಯ ದಾರಿಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತವೆ. ಟಿಕೆಟ್ ಖರೀದಿಸಲು ಎರಡು ಗಂಟೆಗಳವರೆಗೆ ಕಾಯಬೇಕಾಗಬಹುದು. ಆದ್ದರಿಂದ ಟಿಕೆಟ್ ಸಾಲುಗಳನ್ನು ತಪ್ಪಿಸಲು, ವಾರ ಅಥವಾ ತಿಂಗಳ ಮುಂಚೆಯೇ ಆನ್‌ಲೈನ್‌ನಲ್ಲಿ ಬುಕ್ ಮಾಡುವುದು ಉತ್ತಮ.

Untitled design (7)

ಫ್ರೆಸ್ಕೊ

ಫ್ರೆಸ್ಕೊ ಎಂದರೆ ಗೋಡೆ, ಚಾವಣಿಯ ಒದ್ದೆಯಾದ ಪ್ಲಾಸ್ಟರ್ ಮೇಲೆ ಜಲವರ್ಣದಲ್ಲಿ ವೇಗವಾಗಿ ಚಿತ್ರಿಸಲಾದ ಚಿತ್ರಕಲೆ. ಇದರಿಂದ ಬಣ್ಣಗಳು ಪ್ಲಾಸ್ಟರ್ ಅನ್ನು ಭೇದಿಸಿ ಅದು ಒಣಗಿದಂತೆ ಶಾಶ್ವತವಾಗಿ ಉಳಿಯುತ್ತವೆ. ಈ ಫ್ರೆಸ್ಕೊ ಚಿತ್ರಕಲೆ ವಿಧಾನವನ್ನು ರೋಮನ್ ಕಾಲದಲ್ಲಿ ಮತ್ತು ಗಿಯೊಟ್ಟೊ, ಮಸಾಸಿಯೊ ಮತ್ತು ಮೈಕೆಲ್ಯಾಂಜೆಲೊ ಸೇರಿದಂತೆ ಇಟಾಲಿಯನ್ ನವೋದಯದ ಮಹಾನ್ ಚಿತ್ರಕಾರರು ಬಳಸುತ್ತಿದ್ದರು.

ಇವು ಉಳಿದಿರುವ ಅಪರೂಪದ ಚಿತ್ರಕಲೆಗಳಾಗಿದ್ದು, ಅಂದಿನ ದೈನಂದಿನ ಜೀವನ ನಮ್ಮ ಕಲ್ಪನೆಗೆ ಬರುವಂತೆ ಮಾಡುತ್ತವೆ. ಶ್ರೀಮಂತ ರೋಮನ್ ವಿಲ್ಲಾದ ಗೋಡೆಗಳಲ್ಲಿ ಚಿತ್ರಿತ ತೋಟವು ಪ್ರಕೃತಿಯ ಮೇಲಿನ ಅವರ ಪ್ರೀತಿ ಮತ್ತು ಮನಸಿಗೆ ಶಾಂತಿ ನೀಡುವ ವಾತಾವರಣವನ್ನು ಉಂಟುಮಾಡುತ್ತದೆ. ರೋಮ್‌ನ ಶ್ರೀಮಂತರ ಆಭರಣಗಳು, ಈ ನಾಜೂಕಾದ ಬಂಗಾರದ ಕೂದಲಿನ ಜಾಲರಿಗಳನ್ನು ನೋಡಿದಾಗ ‘ಶ್ರೀಮಂತ ಮತ್ತು ರೋಮನ್’ ಜೀವನಶೈಲಿಯ ವೈಭವಕ್ಕೆ ನಾವು ಆಶ್ಚರ್ಯಪಡದೇ ಇರಲಾರೆವು. ರೋಮನ್ ಕಲಾವಿದರು ವಾಸ್ತವದಲ್ಲಿ ನಿಜಕ್ಕೂ ನಿಪುಣರು.

ಸಾಂತಾ ಮಾರಿಯಾ ಡೆಲ್ಲಾ ವಿಟ್ಟೋರಿಯಾ

ಈ ಚರ್ಚ್‌ನಲ್ಲಿ ಬರ್ನಿನಿಯ ಅತ್ಯಂತ ಪ್ರಸಿದ್ಧ ಶಿಲ್ಪ ಎಕ್ಸ್ಟಸಿಯಲ್ಲಿ ಕುಸಿಯುತ್ತಿರುವ ಸಂತ ತೆರೆಸಾ ಇದೆ. ವೇದಿಕೆಯಲ್ಲಿರುವ ನಕ್ಷತ್ರಾಕಾರದ ಕಿರಣಗಳ ಮಧ್ಯದಲ್ಲಿ, ವರ್ಜಿನ್ ಮೇರಿಯ ಐಕಾನ್ ಇದೆ. ಎಲ್ಲವೂ ಪ್ರವಾಸಿ ಆಕರ್ಷಣೆಗಳು. ಅವಕಾಶ ಸಿಕ್ಕಾಗ ನೋಡಿಬನ್ನಿ.