• ಎಸ್. ಶಿವಲಿಂಗಯ್ಯ

ಸಮುದ್ರ ವಧು, ನಾಲೆಗಳ ನಗರ, ತೇಲುವ ನಗರ, ಸೇತುವೆಗಳ ನಗರ, ಮುಖವಾಡಗಳ ನಗರ, ಆಡ್ರಿಯಾಟಿಕ್ ರಾಣಿ ಇತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುತ್ತಿರುವ ವೆನಿಸ್ ಸಹ ಮುಳುಗಬಹುದಾದ ನಗರಗಳ ಆ ಪಟ್ಟಿಯಲ್ಲಿ ಸೇರಿದೆ. ಹಾಗೆಂದು ಅದು ಸಮುದ್ರ ತೀರದಲ್ಲಿಲ್ಲ, ಸಮುದ್ರದಲ್ಲೇ ಇದೆ. ನಗರದ ಮಧ್ಯೆ ನಾಲೆ ಹಾದು ಹೋಗಿರುವ ಅನೇಕ ಸ್ಥಳಗಳಿವೆ. ಆದರೆ ನಾಲೆಯ ಹರಿವಿನೊಂದಿಗೆ ಬೆರೆತು ನಿರ್ಮಾಣಗೊಂಡಿರುವ ನಗರ ಇದೊಂದೇ. ಇಟಲಿ ದೇಶದ ವೆನೆಟೊ ಭಾಗದ ರಾಜಧಾನಿ ವೆನಿಸ್, 118 ಸಣ್ಣ ಸಣ್ಣ ದ್ವೀಪಗಳು, ಸುಮಾರು 438 ಸೇತುವೆಗಳಿಂದ ಸಂಪರ್ಕಿಸಲ್ಪಟ್ಟಿರುವ ಒಂದು ಊರು. ಇಲ್ಲಿ ನೀರಿನಾಳಕ್ಕೆ, ಗಟ್ಟಿಭೂಮಿಯ ಮೇಲೆ ಕಂಬಗಳನ್ನಿಟ್ಟು ಕಟ್ಟಡಗಳನ್ನು ವಿಶಿಷ್ಟ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಸದಾ ನೀರಿನಲ್ಲೇ ಮುಳುಗಿದ್ದರೂ ಚಿಂತೆಯಿಲ್ಲ, ಅಲೆಗಳ ಏರಿಳಿತದ ಅನುಭವ ಅವರಿಗೆ ವಿಶೇಷವೇನಲ್ಲ.

ಇದನ್ನೂ ಓದಿ: ನ್ಯೂಯಾರ್ಕ್ ವೈಯ್ಯಾರದಲ್ಲಿ ಟೈಮ್ಸ್‌ ಸ್ಕ್ವೇರ್‌ ಮಾಯಜಾಲ

ಆದರೆ 1966ರ ಸುನಾಮಿಯಂಥ ಉಬ್ಬರ ಎಲ್ಲರನ್ನೂ ಕಂಗೆಡಿಸಿತ್ತು. ಚಿಕ್ಕಪುಟ್ಟ ದೋಣಿಗಳು ನೆಲವಿರುವ ಜಾಗಕ್ಕೆ ಬಂದು ತಲುಪಿದ್ದವು. ಆದರೆ ಏರಿದ ಸಮುದ್ರಮಟ್ಟ ಮಾನವ ಪ್ರಯತ್ನವನ್ನು ಆಪೋಶನ ತೆಗೆದುಕೊಳ್ಳುವ ಅಪಾಯವಿಲ್ಲ.

Untitled design - 2026-06-08T145917.968

ರಸ್ತೆಯಿಲ್ಲದ ಊರು

ಇಲ್ಲಿ ರಸ್ತೆಗಳಿಲ್ಲ! ಇರುವುದೆಲ್ಲ ಸಮುದ್ರದ ಹಿನ್ನೀರು ತುಂಬಿರುವ ಬರೀ ಕಾಲುವೆಗಳು. ಮುಖ್ಯ ನಾಲೆಗೆ ಗ್ರ್ಯಾಂಡ್ ಕೆನಾಲ್ ಎಂದು ಕರೆಯುತ್ತಾರೆ. ಇದು ಮಲಗಿದ ’S‘ ಆಕಾರದಲ್ಲಿ ನಗರದ ಮಧ್ಯಭಾಗದಲ್ಲಿ ಹಾದುಹೋಗಿದೆ. ಸುಮಾರು 4 ಕಿಮೀ ಉದ್ದ, 5ಮೀ ಆಳ, ಸರಾಸರಿ 50 ಮೀ ಅಗಲವಿದೆ. ಎಲ್ಲ ದೋಣಿಗಳು ಈ ಮೂಲಕವೇ ಸಾಗಬೇಕು. ಉಳಿದ ನಾಲೆಗಳು ನಮ್ಮ ಕ್ರಾಸ್ ರೋಡ್‌ಗಳಂತಿವೆ. ಎಲ್ಲ ನಾಲೆಗಳು ನಮ್ಮ ರಸ್ತೆಗಳಂತೆ ನೇರವಾಗೇನಿಲ್ಲ. ಸಹಜ ಭೂ ಲಭ್ಯತೆಯಂತೆ ಹಾದು ಹೋಗುತ್ತವೆ. ಈ ಎಲ್ಲ ನಾಲೆಗಳ ಹರಿವನ್ನು ಅನುಸರಿಸಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಹಾಗಿದ್ದಾಗ ಇಲ್ಲಿ 2,3 ಅಥವಾ 4 ಚಕ್ರದ ವಾಹನಗಳಿಗೇನು ಕೆಲಸ? ಮನೆಯ ಬಾಗಿಲವರೆಗೆ ದೋಣಿಗಳು ಬರುತ್ತವೆ. ಅವು ಕೂಡ ಸಾರ್ವಜನಿಕ ಅಥವಾ ಸ್ವಂತ ಗಾಡಿಗಳಾಗಿರುತ್ತವೆ. ಆದರೆ ಇಲ್ಲಿಗೆ ತಲುಪಲು ಭೂ, ಜಲ, ವಾಯು ಮಾರ್ಗದ ಎಲ್ಲ ಸೌಲಭ್ಯವೂ ಇವೆ. ಸಮುದ್ರದ ನೀರಿನ ನಡುವೆಯಿದ್ದರೂ ಅಲ್ಲಲ್ಲಿ ಸಣ್ಣಪುಟ್ಟ ಮರಗಿಡಗಳನ್ನೂ ಕಾಣಬಹುದು.

ಕಲಾತ್ಮಕ ನಿರ್ಮಾಣ

ಇಲ್ಲಿರುವ ಸೇತುವೆಗಳ ನಿರ್ಮಾಣದಲ್ಲಿಯೂ ಕಲಾತ್ಮಕತೆಯನ್ನು ಗುರುತಿಸಬಹುದು. ಅವುಗಳಲ್ಲಿ ಹಿರಿಯ ನಾಲೆಯ ಮೇಲಿರುವ ಪುನರುತ್ಥಾನ ಕಾಲದ ಚಾರಿತ್ರಿಕ ʼರಿಯಾಲ್ಟೊ ಸೇತುವೆʼ ಪ್ರಮುಖವಾದದ್ದು. ಒಂದು ಕಾಲದಲ್ಲಿ ಇದು ಮರದ ನಿರ್ಮಾಣವಾಗಿತ್ತು. 16ನೆಯ ಶತಮಾನದಲ್ಲಿ ಕಲ್ಲು-ಗಾರೆಗಳಿಂದ ಮರುನಿರ್ಮಿಸಲಾಗಿದೆ. ಇದು ಛಾಯಾಚಿತ್ರ ಸೆರೆಹಿಡಿಯುವವರಿಗೆ, ಚಿತ್ರ ರಚನಾಕಾರರಿಗೆ, ಪ್ರವಾಸಿಗರಿಗೆ ಒಂದು ದೊಡ್ಡ ಆಕರ್ಷಣೆಯಾಗಿದೆ. ಇದಲ್ಲದೆ, ಆಧುನಿಕವಾದ ಗಾಜು, ಉಕ್ಕು, ಸಿಮೆಂಟ್ ನಿರ್ಮಾಣದ ʼಕಾಲಟ್ರಾವʼ ಸೇತುವೆ ಹಾಗೂ ಮರದಿಂದ ನಿರ್ಮಿಸಿದ ʼಪಾಂಟೆ ಡೆಲ್ಲಾ ಅಕಾಡಮಿಯʼ ಹಿರಿಯ ನಾಲೆಯ ಇಕ್ಕೆಲಗಳ ಕಾಲ್ನಡಿಗೆಯ ಸಂಪರ್ಕಕ್ಕೆ ಪ್ರಮುಖ ಸಾಧನವಾಗಿವೆ. ಇನ್ನು ವೆನಿಸಿನ ಮತ್ತೊಂದು ಆಕರ್ಷಣೆ ಅಲ್ಲಿರುವ ಕಲಾಪೂರ್ಣ ರಚನೆಗಳಾಗಿರುವ ಸಾಂಟ ಮರಿಯ, ಡೆಲ್ಲಾ ಸಲುಟೆ, ಸೆಂಟ್ ಮಾರ್ಕ್ಸ್ ಬೆಸಲಿಕ ಚರ್ಚಗಳು. ಒಳಾಂಗಣದಲ್ಲೂ ವರ್ಣ ಚಿತ್ರಗಳ ಅಲಂಕಾರ ಆಕರ್ಷಕವಾಗಿವೆ. ಆಡಳಿತಗಾರ ಡೋಜ್‌ನ ಅರಮನೆ ಮತ್ತದರ ನೆರೆಯ ಕಟ್ಟಡಗಳ ನಿರ್ಮಾಣ ಕೌಶಲ್ಯ, ಅದಕ್ಕೆ ಸರಿದೂಗುವಂಥ ಒಳವಿನ್ಯಾಸ, ಅಲ್ಲಿಯ ಸೌಂದರ್ಯವನ್ನು ಹೆಚ್ಚಿಸಿರುವ ಖ್ಯಾತ ಕಲಾವಿದರ ವರ್ಣಚಿತ್ರಗಳ ಸೊಬಗನ್ನು ನೋಡಿಯೇ ಆನಂದಿಸಬೇಕು. ಇಲ್ಲಿರುವ ಚರ್ಚ್‌ಗಳಿಗೆ ಹೊಂದಿಕೊಂಡಿರುವ ಗಂಟಾಗೋಪುರಗಳೂ ತಮ್ಮ ವಿನ್ಯಾಸ ಮತ್ತು ಎತ್ತರಗಳಿಂದ ಕಣ್ಸೆಳೆಯುತ್ತವೆ.

Untitled design - 2026-06-08T145926.856

ವ್ಯಾಪಾರಕ್ಕೆ ದಾರಿ

ಇಟಲಿಯ ಸಮುದ್ರ ತೀರ ಚದುರಿದಂತೆ ಇರುವುದರಿಂದ ಆಡ್ರಿಯಾಟಿಕ್ ಕೊಲ್ಲಿಯ ಭಾಗದಲ್ಲಿ ಅನೇಕ ಸಣ್ಣಪುಟ್ಟ ದ್ವೀಪಗಳ ರಾಶಿಯೇ ಇದೆ. ಇಲ್ಲಿಯ ಒಂದು ದ್ವೀಪಗೊಂಚಲು ಈ ವೆನಿಸ್ ನಗರ. ಯುರೋಪ್ ಖಂಡದ ವ್ಯಾಪಾರ ವಹಿವಾಟು, ಕಾನ್ಸ್ಟೆಂಟಿನೋಪಲ್ ಮಾರ್ಗವಾಗಿ ಏಷ್ಯಾ ಖಂಡವನ್ನು ತಲುಪುತ್ತಿದ್ದ ಕಾಲದಲ್ಲಿ ಸರಕುಸಾಗಾಟಕ್ಕೆ ಇದೊಂದು ಆಯಕಟ್ಟಿನ ಸ್ಥಳವಾಗಿತ್ತು. ಆದರೆ, ಪೋರ್ಚುಗೀಸ್ ನಾವಿಕ ವಾಸ್ಕೋ ಡ ಗಾಮ ಗುಡ್ ಹೋಪ್ ಭೂಶಿರವನ್ನು ಸುತ್ತಿ, ಭಾರತ ಮತ್ತು ಪೂರ್ವ ಏಷ್ಯನ್ ರಾಷ್ಟ್ರಗಳಿಗೆ ಹೊಸ ಸಮುದ್ರ ಮಾರ್ಗವನ್ನು ಅನ್ವೇಶಿಸಿದ ನಂತರ, ಇದರ ವಹಿವಾಟು, ಪ್ರಾಮುಖ್ಯ ಇಳಿಮುಖವಾಯಿತು.

ಡೋಜ್‌ ಆಡಳಿತ

ಇಲ್ಲಿ ಪೂರ್ಣಪ್ರಮಾಣದ ಪ್ರಜಾಪ್ರಭುತ್ವವಲ್ಲದ, ಆದರೆ ಸರ್ವಾಧಿಕಾರಿಯೂ ಅಲ್ಲದ, ಡೋಜ್ ಮಾದರಿಯ ಆಡಳಿತವನ್ನು ಅಳವಡಿಸಿಕೊಳ್ಳಲಾಗಿತ್ತು. ಮಾರ್ಕೊ ಪೋಲೊನಂಥ ಶ್ರೀಮಂತನೂ ಇಲ್ಲಿಯ ನಿವಾಸಿಗಳಲ್ಲೊಬ್ಬ. ವ್ಯಾಪಾರದ ವಹಿವಾಟಿನ ಉತ್ತುಂಗದಲ್ಲಿದ್ದಾಗ, ಶ್ರೀಮಂತಿಕೆಯೊಂದಿಗೆ ಸೈನಿಕ ಶಕ್ತಿಯಲ್ಲಿಯೂ ಪ್ರಬಲವಾಗಿತ್ತು, ಗ್ರೀಸ್ ಇತ್ಯಾದಿ ನೆರೆಯ ರಾಜ್ಯಗಳ ಮೇಲೂ ಆಕ್ರಮಣ ಮಾಡಿದ ಇತಿಹಾಸವಿದೆ. ಅದರಂತೆ ಒಟ್ಟೋಮನ್ ಟರ್ಕರ ದಾಳಿಯನ್ನೂ ಸಮರ್ಥವಾಗಿ ಎದುರಿಸಿದೆ. 1797ರ ನೆಪೋಲಿಯನ್ನನ ದಾಳಿಯ ನಂತರ ಇದರ ಸಾರ್ವಭೌಮತೆ ಕೊನೆಗೊಂಡು, 1866ರ ನಂತರ ಇಟಲಿಯನ್ ಸಾಮ್ರಾಜ್ಯದಲ್ಲಿ ಲೀನವಾಯಿತು. ಈ ಪುಟ್ಟನಗರದ ಹಳೆಯ ದ್ವೀಪಸಮೂಹದಲ್ಲಿ 50 ಸಾವಿರ ಮಂದಿ ನೆಲೆಸಿದ್ದಾರೆ. ಸುತ್ತಲ ಕೆಲ ದ್ವೀಪಗಳಲ್ಲಿ ಮೀನುಗಾರಿಕೆ ಅವಲಂಬಿತ ಬೆರಳೆಣಿಕೆಯಷ್ಟು ಜನರಿದ್ದಾರೆ. ಇವರ ಮಖ್ಯ ಆದಾಯದ ಮೂಲ ಪ್ರವಾಸೋದ್ಯಮ ಮತ್ತು ವ್ಯಾಪಾರ. ಪ್ರವಾಸಿ ಆಕರ್ಷಣೆಗಳಲ್ಲಿ ಇಲ್ಲಿ ಜರುಗುವ ಕಾರ್ನಿವಾಲ್‌ಗಳು, ಚಿತ್ರೋತ್ಸವಗಳೂ ಸೇರಿವೆ. ಆ ಕಾರ್ನಿವಾಲ್‌ಗಳಲ್ಲಿ ಭಾಗಿಯಾಗುವವರ ವಸ್ತ್ರ ವೈವಿಧ್ಯ, ವೆನಿಸಿಗೇ ವಿಶಿಷ್ಟವೆವಿಸಿರುವ ಅವರ ಮುಖವಾಡಗಳನ್ನು ನೋಡಲು ಎರಡು ಕಣ್ಣು ಸಾಲದು ಎಂಬ ಭಾವ ಮೂಡಿಸುತ್ತವೆ. ಇಷ್ಟು ಸಾಲದೆಂಬಂತೆ ಇಲ್ಲಿರುವ ವಸ್ತುಸಂಗ್ರಹಾಲಯಗಳು, ಚಿತ್ರ ಶಾಲೆಗಳು, ಮಧ್ಯಯುಗದ ಗ್ರೀಕ್, ರೋಮನ್, ಬೈಜಂಟೈನ್ ವಾಸ್ತುಶೈಲಿಯ ಕಟ್ಟಡಗಳ ಸೊಬಗು ಕಲಾರಸಿಕರನ್ನು ಕೈಹಿಡಿದು ನಿಲ್ಲಿಸುತ್ತವೆ.

Untitled design - 2026-06-08T145903.392

ಯುನೆಸ್ಕೊದ ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ಸೇರಿರುವ ಈ ನಗರಿಯ ನಾಲೆಗಳ ಪಕ್ಕದಲ್ಲಿರುವ ಹೊಟೇಲ್, ರೆಸ್ಟೊರೆಂಟ್‌ಗಳ ಹೊರಾವರಣದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯಿರುತ್ತದೆ. ಇಲ್ಲಿ ಸಂಜೆಯ ಸೂರ್ಯಾಸ್ತಕ್ಕೆ ಮುಖಮಾಡಿ ಕುಳಿತು ಮದ್ಯ ಸೇವನೆಯಲ್ಲಿ ನಿರತರಾಗಿರುವವರನ್ನು ನೋಡಿದರೆ, ಎಂಥ ಸ್ಥಿತಪ್ರಜ್ಞನ ಮನಸಿನಲ್ಲಿಯೂ ಅಸೂಯೆ ಹಾದುಹೋಗುತ್ತದೆ. ಇಲ್ಲಿಯ ಪಿಯಾಜಾ ಸನ್ ಮಾರ್ಕೊದ ವಿಶಾಲ ಬಯಲಿನಲ್ಲಿ ತಿರುಗಾಡಿ, ಬಗೆಬಗೆಯ ತಿಂಡಿಯ ರುಚಿನೋಡಿ, ಸಂಗೀತ ಕೇಳತ್ತಾ ಹೊರಬರುವ ಮುನ್ನ ಏನಾದರೂ ಸ್ಮರಣಿಕೆ ಕೊಳ್ಳಲು ಪಕ್ಕದ ಗೂಡಂಗಡಿಗೆ ಹೋದರೆ, ʼಕ್ಯಾ ಚಾಯಿಯೆʼ ಎಂಬ ದೇಸಿನುಡಿ ಬಂದೆಡಗೆ ತಿರುಗಿನೋಡಿದರೆ, ಅರೇ ʼಬಾಂಗ್ಲಾ ಬಂಧುʼ! ಅಲ್ಲಿದ್ದರು.