• ಮೇಘಾ ಹೆಗಡೆ, ಯು.ಎ.ಇ

ಥೈಲ್ಯಾಂಡ್ ಎಂದ ತಕ್ಷಣ ಬಹುತೇಕರಿಗೆ ನೆನಪಾಗುವುದು ಸುಂದರವಾದ ವಿಶಾಲವಾದ ಬೀಚ್ ಗಳು ಕ್ರಾಬಿ, ಕೋ ಫೀ ಫೀ ಅಂತ ನೀಲಿ ನೀರಿನ ದ್ವೀಪಗಳು, ಝಗಮಗಿಸುವ ರಾತ್ರಿ ಮಾರುಕಟ್ಟೆ ಹಾಗೂ ಅಲ್ಲಿ ಸಿಗುವ ಥರಥರದ ರಸ್ತೆ ಬದಿಯ ಆಹಾರಗಳು (ಸ್ಟ್ರೀಟ್ ಫುಡ್). ಇನ್ನು ಕೆಲವರು ಥೈಲ್ಯಾಂಡನ್ನು ಸೆಕ್ಸ್ ಟೂರಿಸಂಗೆ ಪರ್ಯಾಯವಾಗಿ ಬಳಸುವುದೂ ಉಂಟು. ಆದರೆ ಇವೆಲ್ಲವನ್ನೂ ಮೀರಿ ಭಕ್ತಿ, ಐತಿಹಾಸಿಕ ಶ್ರೀಮಂತಿಕೆ ಮತ್ತು ಅದ್ಭುತ ಶಿಲ್ಪಕಲೆಯಿಂದ ಕೂಡಿದ ಥೈಲ್ಯಾಂಡನ್ನು ಪ್ರವಾಸಿಗರಿಗೆ ತೆರೆದಿಡುವ ಥೈಲ್ಯಾಂಡ್ ನ ಪ್ರಮುಖ ನಗರ ಎಂದರೆ ಬ್ಯಾಂಕಾಕ್. ಬ್ಯಾಂಕಾಕ್ ಥೈಲ್ಯಾಂಡಿನ ರಾಜಧಾನಿ ಕೂಡ ಹೌದು. ಇಲ್ಲಿನ ವಾಟ್ ಗಳು (ಬೌದ್ಧ ದೇವಾಲಯಗಳು) ಶತಮಾನಗಳಿಂದ ನಡೆದು ಬಂದ ಜನರ ನಂಬಿಕೆ ಆಚರಣೆಗಳನ್ನು ಬಿಂಬಿಸುತ್ತವೆ. ಇಲ್ಲಿ ಬರುವ ಲಕ್ಷಾಂತರ ಪ್ರವಾಸಿಗರಿಗೆ ಕಣ್ಮನ ಸೆಳೆಯುವ ದೃಶ್ಯಗಳು, ಸುಂದರ ಸೆಲ್ಫಿಗಳಷ್ಟೇ ಅಲ್ಲದೆ ನೆಮ್ಮದಿ ಹಾಗೂ ಶಾಂತಿ ಒದಗಿಸುವ ಅತ್ಯಂತ ಪ್ರಮುಖವಾದ ಮೂರು ವಾಟ್ ಗಳೆಂದರೆ ಗ್ರ್ಯಾಂಡ್ ಪ್ಯಾಲೇಸ್ ನ ವಾಟ್ ಪ್ರಾಕೇವ್ (ಎಮರಾಲ್ಡ್ ಬುದ್ಧನ ದೇವಾಲಯ), ವಾಟ್ ಅರುಣ್ (ಟೆಂಪಲ್ ಆಫ್ ಡಾನ್) , ಮತ್ತೂ ವಾಟ್ ಫೋ (ರಿಕ್ಲೈನಿಂಗ್ ಬುದ್ಧ ದೇವಾಲಯ).

Thailand Buddhist temple

ಥೈಲ್ಯಾಂಡ್ ನಲ್ಲಿ ಅತ್ಯಂತ ಪವಿತ್ರವಾದ ಮತ್ತು ಸುಂದರವಾದ ಬೌದ್ಧ ದೇವಾಲಯ ಎಂದು ಹೆಸರುವಾಸಿಯಾದ ವಾಟ್ ಪ್ರಾಕೇವ್ ಇರುವುದು ಬ್ಯಾಂಕಾಕ್ ನ ಗ್ರ್ಯಾಂಡ್ ಪ್ಯಾಲೇಸ್ ನ ಆವರಣದಲ್ಲಿ 23,51,000 ಸ್ಕ್ವೇರ್ ಫೀಟ್ ವಿಸ್ತೀರ್ಣದ ಮಾನವ ನಿರ್ಮಿತ ಕಟ್ಟಡಗಳ ಒಂದು ಸಮುಚ್ಚಯವಾಗಿದ್ದು 18ನೇ ಶತಮಾನದಿಂದಲೂ ಥೈಲ್ಯಾಂಡ್ ರಾಜಮನೆತನದ ಅಧಿಕೃತ ನಿವಾಸವಾಗಿದೆ. ಇದರ ಒಳಗೆ ಅನೇಕ ಕಟ್ಟಡಗಳನ್ನು, ಸಭಾಂಗಣಗಳನ್ನು, ತೋಟಗಳನ್ನು, ದೇವಾಲಯಗಳನ್ನು, ಪ್ರಾಂಗಣಗಳನ್ನೂ ವಿನ್ಯಾಸಗೊಳಿಸಲಾಗಿದೆ. ಈ ಆವರಣದ ಕೇಂದ್ರವಾದ ವಾಟ್ ಪ್ರಾಕೇವ್ (ಎಮರಾಲ್ಡ್ ಬುದ್ಧನ ದೇವಾಲಯ), ದೇಗುಲದಲ್ಲಿರುವ ಪ್ರಮುಖ ಆಕರ್ಷಣೆ ಎಂದರೆ 66 ಸೆಂಟಿಮೀಟರ್ ಎತ್ತರದ ಏಕಶಿಲಾ ಧ್ಯಾನಸ್ಥ ಬುದ್ಧನ ಪ್ರತಿಮೆ. ಚಿಯಾಂಗ್ ರಾಯ್ ನಲ್ಲಿ 15ನೇ ಶತಮಾನದಲ್ಲಿ ದೊರೆತ ಈ ಪ್ರತಿಮೆ ಹಸಿರು ಜೇಡ್ ಕಲ್ಲಿನಿಂದ ಮಾಡಲ್ಪಟ್ಟಿದ್ದು , ಬುದ್ಧನ ವಸ್ತ್ರಗಳು ಸಂಪೂರ್ಣವಾಗಿ ಚಿನ್ನ ಮತ್ತು ವಜ್ರಗಳಿಂದ ಅಲಂಕರಿಸಲ್ಪಟ್ಟಿವೆ. ಬುದ್ಧನ ಈ ಧ್ಯಾನಸ್ಥ ಭಂಗಿ ಥೈಲ್ಯಾಂಡ್ ನ ಪರಂಪರಾಗತ ಶಿಲ್ಪಗಳಿಗಿಂತ ಭಿನ್ನವಾಗಿದ್ದು, ದಕ್ಷಿಣ ಭಾರತ ಮತ್ತು ಶ್ರೀಲಂಕಾ ದಲ್ಲಿನ ಪ್ರತಿಮೆಗಳನ್ನು ಹೆಚ್ಚಾಗಿ ಹೋಲುತ್ತದೆ ಎಂದು ಹೇಳಲಾಗಿದೆ.

ಭಾರತೀಯ ದೇವಾಲಯಗಳಂತೆ ದೇವಾಲಯದ ಒಳ ಆವರಣ ಪ್ರವೇಶಿಸುವ ಮುನ್ನ ಪಾದರಕ್ಷೆ ಗಳನ್ನು ಕಡ್ಡಾಯವಾಗಿ ತೆಗೆಯಬೇಕಾಗುತ್ತದೆ. ಭಕ್ತರು ಪಾದರಕ್ಷೆಗಳನ್ನು ಬಿಚ್ಚಿ ಶಾಂತಿಯುತವಾಗಿ ಒಳನಡೆದು ಶ್ರದ್ಧೆಯಿಂದ ಮೌನವಾಗಿ ಧ್ಯಾನಿಸುತ್ತಾರೆ. ದೇವರಿಗೆ ಅರ್ಪಿಸಲ್ಪಡುವ ಕಮಲದ ಹೂವು, ಅಗರಬತ್ತಿ, ಹಾಗು ಮೇಣದಬತ್ತಿ ಗಳೂ ಅಲ್ಲೇ ಸಿಗುತ್ತವೆ. ದೇವಾಲಯ ಪ್ರವೇಶಿಸಲು ವಸ್ತ್ರ ಸಂಹಿತೆಯನ್ನು ಪಾಲಿಸುವುದು ಸಹ ಕಡ್ಡಾಯ. ಮಹಿಳೆಯರು ತೆರೆದ ತೋಳು ಹಾಗೂ ಮೊಣಕಾಲಿಗಿಂತ ಮೇಲೆ ಬರುವ ಬಟ್ಟೆ ಧರಿಸುವಂತಿಲ್ಲ. ಪ್ರವಾಸಿಗರು ತಕ್ಕ ಉಡುಪಿನಲ್ಲಿ ಬಾರದೆ ಹೋದರೆ ಅಲ್ಲೇ ಇರುವ ಕೌಂಟರ್ ನಲ್ಲಿ ಸೂಕ್ತ ಉಡುಪು ಖರೀದಿಸುವ ವ್ಯವಸ್ಥೆಯೂ ಇದೆ.

ಎಮರಾಲ್ಡ್ ಬುದ್ಧನನ್ನು ವಾಟ್ ಪ್ರಾಕೇವ್ ಗಿಂತ ಮೊದಲು ಕೆಲಕಾಲ ತನ್ನಲ್ಲಿರಿಸಿಕೊಂಡ ಖ್ಯಾತಿ ಹೊಂದಿದ ಮತ್ತೊಂದು ಪ್ರಮುಖ ವಾಟ್ ಎಂದರೆ ವಾಟ್ ಅರುಣ್. ಬೆಳಗಿನ ದೇವಾಲಯ (ಟೆಂಪಲ್ ಆಫ್ ಡಾನ್ ) ಎಂದೇ ಖ್ಯಾತಿಯಾದ ಈ ವಾಟ್ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಸೂರ್ಯನ ಕಿತ್ತಳೆ ಬಣ್ಣದ ಬೆಳಕಿನಲ್ಲಿ ತೋಯ್ದು ಅತ್ಯಂತ ಸುಂದರವಾಗಿ ಕಾಣುತ್ತದೆ. ವಾಟ್ ಅರುಣ್ ತನ್ನ ಮಧ್ಯದಲ್ಲಿರುವ ಎಪ್ಪತ್ತು ಮೀಟರ್ ಗಿಂತ ಎತ್ತರದ ಪ್ರಾಂಗ್ (ಖ್ಮೇರ್ ಶೈಲಿಯ ಗೋಪುರ ) ನಿಂದಾಗಿ ಪ್ರಸಿದ್ಧಿಯಾಗಿದೆ. ಈ ಗೋಪುರ ಚೈನೀಸ್ ಸಿರಾಮಿಕ್ , ನುಣುಪಾದ ಶಂಖಗಳು, ಮತ್ತು ಬಣ್ಣದ ಪೋರ್ಸಲೀನ್ ಟೈಲ್ಸ್ ಗಳಿಂದ ಅಲಂಕರಿಸಲ್ಪಟ್ಟಿದ್ದು, ಇದರ ಮೇಲೆ ಬೀಳುವ ಸೂರ್ಯಕಿರಣ ಪ್ರತಿಫಲಿಸಿದಾಗ ಅತ್ಯಂತ ಮನೋಹರವಾಗಿ ಕಾಣುತ್ತದೆ. ಬ್ಯಾಂಕಾಕ್ ನ ಚಾವ್ ಪ್ರಯಾ ನದಿಯ ಪಶ್ಚಿಮ ದಂಡೆಯ ಈ ದೇವಾಲಯ ದೇಶ ವಿದೇಶಗಳಿಂದ ಬರುವ ಪ್ರವಾಸಿಗರು ಹಾಗೂ ಪೂಜೆ ಮತ್ತು ಧ್ಯಾನಕ್ಕೆಂದು ಬರುವ ಸ್ಥಳೀಯರಿಂದ ಸದಾ ಕಾಲ ತುಂಬಿರುತ್ತದೆ. ವಾಟ್ ನ ಆವರಣದಲ್ಲಿ ವಾಸಿಸುವ ಬೌದ್ಧ ಸನ್ಯಾಸಿಗಳು ಅಲ್ಲಿನ ಹುಲ್ಲುಹಾಸಿನ ಮೇಲೆ ಪ್ರಾರ್ಥನೆ ಮತ್ತು ಧ್ಯಾನದಲ್ಲಿ ತೊಡಗಿರುವುದು ಸಹ ಕೆಲವೊಮ್ಮೆ ಕಂಡುಬರುತ್ತದೆ. ಈ ದೇವಾಲಯವನ್ನು ನೋಡಲು ಚಿಕ್ಕದಾದ ದೋಣಿಯಲ್ಲಿ ಪ್ರಯಾಣಿಸುವದೇ ಒಂದು ಅನುಭವ. ದೋಣಿ ವಾಟನ್ನು ತಲುಪುವ ಮೊದಲೇ ಕಾಣುವ ವಾಟ್ ನ ಹೊರಾಂಗಣ ಸೂರ್ಯನ ಕಿರಣಕ್ಕೆ ಪ್ರತಿಫಲಿಸಿದಾಗಿನ ಅಪೂರ್ವ ದೃಶ್ಯವನ್ನು ನೋಡಿಯೇ ಸವಿಯಬೇಕು.

Thailand Buddhist temple ೧

ಬ್ಯಾಂಕಾಕ್ ನ ಮಧ್ಯ ಭಾಗದಲ್ಲಿ ಗ್ರ್ಯಾಂಡ್ ಪ್ಯಾಲೇಸ್ ಗೆ ಅತ್ಯಂತ ಸಮೀಪವಿರುವ ಇನ್ನೊಂದು ವಿಶಿಷ್ಠ ದೇವಾಲಯ ಎಂದರೆ ವಾಟ್ ಫೋ. ಕೇವಲ ಧಾರ್ಮಿಕ ಸ್ಥಳ ಮಾತ್ರವಲ್ಲದೆ ಥಾಯ್ ಸಂಸ್ಕೃತಿಯ, ಶಾಂತಿಯ ಮತ್ತು ಶಿಲ್ಪಕಲೆಯ ಪ್ರತೀಕವಾದ ವಾಟ್ ಫೋದ ಶಯನ ಬುದ್ಧನ (ರಿಕ್ಲೈನಿಂಗ್ ಬುದ್ಧ) ಪ್ರತಿಮೆ ಅಸಂಖ್ಯ ಪ್ರವಾಸಿಗರನ್ನು ಸೆಳೆಯುತ್ತದೆ. 46 ಮೀಟರ್ ಉದ್ದ ಹಾಗು 15 ಮೀಟರ್ ಎತ್ತರದ ಈ ಪ್ರತಿಮೆಗೆ ಸಂಪೂರ್ಣವಾಗಿ ಚಿನ್ನದ ಲೇಪ ಮಾಡಲಾಗಿದೆ. ಈ ಪ್ರತಿಮೆಯ ಪಾದಗಳೇ ಸುಮಾರು 5 ಮೀಟರ್ ಉದ್ದವಾಗಿದ್ದು ಬುದ್ಧನ 108 ಶುಭ ಚಿಹ್ನೆಗಳನ್ನು ಹೊಂದಿದೆ . ತಲೆಗೆ ಕೈ ಆನಿಸಿ ವಿಶ್ರಾಂತನಾಗಿರುವ ಬುದ್ಧ ಕೆಲವು ಭಾರತೀಯರಿಗೆ ರಂಗನಾಥ ಸ್ವಾಮಿಯನ್ನು ನೆನಪಿಸಲೂಬಹುದು. ಬುದ್ಧನ ಈ ಭಂಗಿ ಆತನ ನಿರ್ವಾಣದ ಆರಂಭವನ್ನೂ ಹಾಗೂ ಪುನರ್ ಅವತಾರದ ಮುಕ್ತಾಯವನ್ನೂ ಸೂಚಿಸುತ್ತದೆ ಎನ್ನಲಾಗಿದೆ. ಇದೊಂದು ದೇವಾಲಯಗಳ ಸಮುಚ್ಚಯವಾಗಿದ್ದು ಇನ್ನೂ ಹಲವಾರು ಪಗೋಡ, ಮಂಟಪ, ಬುದ್ಧನ ಪ್ರತಿಮೆ ಮತ್ತು ಚಿಕ್ಕ ಚಿಕ್ಕ ದೇವಾಲಯಗಳನ್ನೂ ಈ ಆವರಣದ ಒಳಗೆ ಕಾಣಬಹುದಾಗಿದೆ.

ಈ ಎಲ್ಲ ವಾಟ್ ಗಳನ್ನು ತಲುಪಲು ಹಲವಾರು ಮಾರ್ಗಗಳಿದ್ದು ಕ್ಯಾಬ್ ಅಥವಾ ಟ್ಯಾಕ್ಸಿ ಗಳು ಸದಾಕಾಲ ಲಭ್ಯ ಇವೆ . ಆದರೆ ಬ್ಯಾಂಕಾಕ್ ನಗರದ ಜನ ಸಂದಣಿ ಮತ್ತು ಟ್ರಾಫಿಕ್ ನಲ್ಲಿ ಸಮಯಕ್ಕೆ ಸರಿಯಾಗಿ ತಲುಪುವದು ಒಂದು ಸಾಹಸವೇ ಸರಿ. ಇದಕ್ಕಿಂತ ಸುಲಭ ಹಾಗೂ ತ್ವರಿತ ಮಾರ್ಗವೆಂದರೆ ಬಿ ಟಿ ಎಸ್ (ಸ್ಕೈ ಟ್ರೈನ್) ಅಥವಾ ಎಂ ಆರ್ ಟಿ (ಅಂಡರ್ಗ್ರೌಂಡ್ ಟ್ರೈನ್) ಎಂಬ ಬ್ಯಾಂಕಾಕ್ ರೈಲ್ವೆ ವ್ಯವಸ್ಥೆ. ಇವು ಅತ್ಯಂತ ಸಮರ್ಪಕವಾಗಿದ್ದು ಎಲ್ಲಕಡೆ ಸುಲಭವಾಗಿ ಸಂಪರ್ಕ ಕಲ್ಪಿಸುತ್ತವೆ. ಅಲ್ಲದೆ ಪ್ರವಾಸಿಗರೂ ಕೂಡ ಸುಲಭವಾಗಿ ಬಳಸಬಹುದಾಗಿದೆ. ಹತ್ತಿರದ ಟ್ರೈನ್ ಸ್ಟೇಷನ್ನಿಂದ ಟುಕ್ ಟುಕ್ (ಆಟೋ ರಿಕ್ಷಾ ಹೋಲುವ ಸ್ವಲ್ಪ ದೊಡ್ಡದಾದ ವಾಹನ) ಮೂಲಕ ವಾಟ್ ಗಳನ್ನು ಸುಲಭವಾಗಿ ತಲುಪಬಹುದು. ಈ ಮೂರು ವಾಟ್ ಗಳು ಕೆಲವು ಸಾಮ್ಯ ಹೊಂದಿದ್ದರೂ ತಮ್ಮದೇ ಆದ ವಿಶಿಷ್ಠ ವಿನ್ಯಾಸ, ರಚನೆ, ಚರಿತ್ರೆ ಹಾಗೂ ಪ್ರಾಮುಖ್ಯತೆ ಹೊಂದಿವೆ. ಒಟ್ಟಾರೆಯಾಗಿ ಇಲ್ಲಿ ಬಂದ ಭಕ್ತರಾಗಲಿ ಅಥವಾ ಪ್ರವಾಸಿಗರಿಗಾರಲಿ, ನೆಮ್ಮದಿ, ಶಾಂತಿ ಹಾಗೂ ಹೊಸ ಸಂಸ್ಕೃತಿಯ ಅನಾವರಣದೊಂದಿಗೆ ಈ ವಾಟ್ ಗಳಿಂದ ಹೊರ ಹೋಗುವುದರಲ್ಲಿ ಎರಡು ಮಾತಿಲ್ಲ