ಎಳನೀರಿಗೂ, ತಾಳೆಹಣ್ಣಿಗೂ ಸೋದರ ಸಂಬಂಧಿ
ಬೇಸಗೆ ಕಾಲ ಬಂತೆಂದರೆ ಎಲ್ಲೆಡೆ ಎಳನೀರಿಗೆ ಬಲು ಬೇಡಿಕೆ ಶುರುವಾಗುತ್ತದೆ, ಬೆಲೆಯೂ ಗಗನಕ್ಕೇರುತ್ತದೆ. ಬರಿಯ ನೀರನ್ನಷ್ಟೇ ಅಲ್ಲದೆ ಎಳನೀರಿನ ತಿರುಳನ್ನೂ ಮೆಚ್ಚಿಕೊಂಡು ತಿನ್ನುವ ಜನರಿಗೇನೂ ಕಮ್ಮಿ ಇಲ್ಲ. ಎಳನೀರಷ್ಟೇ ಅಲ್ಲದೆ ಆರೋಗ್ಯದ ದೃಷ್ಟಿಯಿಂದ ತಾಳೆ ಹಣ್ಣಿಗಾಗಿ ಹುಡುಕಾಡುವವರೂ ಅನೇಕ ಮಂದಿಯಿದ್ದಾರೆ. ಆದರೆ ಇವೆರಡರ ಹೋಲಿಕೆಯಿರುವ ʻವಾಟರ್ ಕೊಕೊನಟ್ʼ ಬೇಸಗೆ ಕಾಲದಲ್ಲಿ ವಿಯೆಟ್ನಾಂನಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿದೆ.
ವಿಯೆಟ್ನಾಂ ಅದೆಷ್ಟೋ ಮಂದಿಯ ಕನಸಿನ ನಗರಿ. ದುಬಾರಿಯಲ್ಲದ ಕಾರಣ ಮೊದಲ ವಿದೇಶ ಪ್ರವಾಸ ವಿಯೆಟ್ನಾಂ ಆಗಬೇಕೆಂದುಕೊಳ್ಳುವವರು ಅನೇಕ ಮಂದಿಯಿದ್ದಾರೆ. ಸುಂದರ ಕಡಲ ತೀರಗಳು, ಐತಿಹಾಸಿಕ ಸ್ಥಳಗಳು, ಮತ್ತು ಯುನೆಸ್ಕೋ ಪಾರಂಪರಿಕ ತಾಣಗಳನ್ನು ಹೊಂದಿರುವ ಈ ದೇಶದಲ್ಲಿ ಆಹಾರ-ವಿಹಾರ ಎಲ್ಲವೂ ವಿಶೇಷ- ವಿಭಿನ್ನ..ಅದರಲ್ಲೂ ಇಲ್ಲಿ ಬೆಳೆಯುವ ವಿಶೇಷ ಹಣ್ಣು ʻವಾಟರ್ ಕೊಕೊನಟ್ʼ ಎಳನೀರಿಗೂ-ತಾಳೆಹಣ್ಣಿಗೂ ಸೋದರ ಸಂಬಂಧಿಯಂತಿದೆ.
ಇದನ್ನೂ ಓದಿ: ವಿಯೆಟ್ನಾಂನಲ್ಲೊಂದು ಮಾಂತ್ರಿಕ ತೋಟ !
ಮೂಲತಃ ಚೀನಾದ ದಕ್ಷಿಣದ ಪ್ರಾಂತ್ಯವಾದ ಹೈನಾನ್ ದ್ವೀಪದ ಕಡಲತೀರಗಳಲ್ಲಿ ಯಥೇಚ್ಛವಾಗಿ ಕಾಣಸಿಗುತ್ತಿದ್ದ ಈ ಹಣ್ಣು ನೋಡುವುದಕ್ಕೆ ವಿಚಿತ್ರವೆಂಬಂತಿದೆ. ಈ ಕಾರಣಕ್ಕಾಗಿ ಹೈನಾನ್‌ನ ಜನರು ಇದರ ಬಗ್ಗೆ ಅಷ್ಟಾಗಿ ಗಮನಹರಿಸುತ್ತಿರಲಿಲ್ಲ. ಈ ಗಿಡಗಳು ಬರಿಯ ಪ್ರವಾಹವನ್ನು ನಿಯಂತ್ರಿಸುವ ಸಾಧನವಾಗಿ ಮಾತ್ರ ಪರಿಗಣಿಸಲಾಗುತ್ತಿತ್ತು. ಆದರೆ ಆಕಸ್ಮಿಕವಾಗಿ ಯಾರೋ ಈ ಹಣ್ಣು ಏನಿರಬಹುದೆಂಬ ಕುತೂಹಲದಿಂದ ಇದರ ರುಚಿ ತಿಳಿದ ನಂತರ ಕ್ರಮೇಣ ಹೈನಾನ್ ದ್ವೀಪದಲ್ಲಿ ವಾಟರ್ ಕೊಕೊನಟ್ ಜನಪ್ರಿಯವಾಯಿತು ಎಂಬುದು ಇಲ್ಲಿನವರ ಮಾತು.

ಚೀನಾ ಮೂಲದ ಈ ವಾಟರ್ ಕೊಕೊನಟ್ ಸಮೀಪದ ದಕ್ಷಿಣ ವಿಯೆಟ್ನಾಂನ ಕರಾವಳಿ ಭಾಗದಲ್ಲೂ ಹೆಚ್ಚಾಗಿ ಕಾಣಸಿಗುತ್ತದೆ. ನೈಪಾ ಫ್ರುಟಿಕನ್ಸ್ ಎಂಬ ವೈಜ್ಞಾನಿಕ ಹೆಸರಿರುವ ಈ ಹಣ್ಣನ್ನು ಹೆಚ್ಚಾಗಿ ನದಿ ತೀರದ ಕೆಸರುಮಯ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ನೀರಿನಿಂದ ತೆಂಗಿನ ಮರದಷ್ಟು ಎತ್ತರಕ್ಕೆ ಬೆಳೆಯದ ಈ ಗಿಡಗಳ ಕಾಂಡಗಳು ನೆಲದಡಿಯಲ್ಲಿ ಅಡ್ಡಲಾಗಿ ಬೆಳೆಯುತ್ತವೆ. ಕಾಂಡಗಳು ಮೇಲ್ಭಾಗದಲ್ಲಿ ಅಂದರೆ ನೆಲಕ್ಕೆ ಸಮೀಪದಲ್ಲೇ ಇರುವ ಈ ಗಿಡದ ಗರಿಗಳು, ಹೂವು ಮತ್ತು ಕಾಯಿಗಳು ಸುಲಭದಲ್ಲಿ ಕೀಳಲು ಸಿಗುತ್ತವೆ.
ವಿಯೆಟ್ನಾಂನ ಕ್ಯಾಮ್ ಥಾನ್ ಅಥವಾ ಕಾ ನಿನ್ಹ್ ನಂಥ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ವಾಟರ್ ಕೊಕೊನಟ್ ಗಿಡಗಳು ಕಾಣಸಿಗುತ್ತವೆ. ವಿಯೆಟ್ನಾಂಗೆ ಹೊರತಾಗಿ ಫಿಲಿಪೈನ್ಸ್, ಮಲೇಷಿಯಾ, ಇಂಡೋನೇಷ್ಯಾ ಮುಂತಾದ ಕೆಲವು ಇತರ ಆಗ್ನೇಯ ಏಷ್ಯಾದ ದೇಶಗಳಲ್ಲಿ ವಾಟರ್ ಕೊಕೊನಟ್ ಬೆಳೆಸಲಾಗುತ್ತದೆ.

ಪೋಷಕಾಂಶಗಳ ಆಗರವಾಗಿರುವ ಈ ಹಣ್ಣಿನ ತಿರುಳಿನಿಂದ ಮಿಲ್ಕ್ ಶೇಕ್, ಜ್ಯೂಸ್ ಮಾತ್ರವಲ್ಲದೆ ಐಸ್ ಕ್ರೀಂ ತಯಾರಿಸುತ್ತಾರೆ. ಮಾಂಸಾಹಾರಿ ಖಾದ್ಯಗಳ ತಯಾರಿಕೆಯಲ್ಲೂ ಇದರ ತಿರುಳನ್ನು ಬಳಕೆ ಮಾಡುವುದು ರೂಢಿಯಲ್ಲಿದೆ. ಈ ಗಿಡದ ಗರಿಗಳನ್ನು ತೆಂಗಿನ ಗರಿಗಳಂತೆ ಮನೆಯ ಮೇಲ್ಚಾವಣಿಗೆ ಹೊದಿಕೆಯಾಗಿಯೂ ಬಳಸಲಾಗುತ್ತದೆ. ಅಲ್ಲದೆ ಬುಟ್ಟಿಗಳು ಅಥವಾ ಕರಕುಶಲ ವಸ್ತುಗಳನ್ನು ಹೆಣೆಯಲಾಗುತ್ತದೆ. ಅದೇನೇ ಆದರೂ ನಿಮ್ಮ ವಿದೇಶಿ ಪ್ರವಾಸದ ವೇಳೆ ವಾಟರ್ ಕೊಕೊನಟ್ ಕಂಡುಬಂದರೆ ತಪ್ಪದೇ ಅದರ ರುಚಿಯನ್ನೊಮ್ಮೆ ಸವಿದು ನೋಡಿ. ಎಳನೀರು, ತಾಳೆ ಹಣ್ಣಿನ ರುಚಿಗಿಂತ ಹೇಗೆ ಭಿನ್ನ ಎಂಬುದನ್ನು ನೀವೇ ತಿಳಿದುಕೊಳ್ಳಿ.