ಗಾಳಿಪಟದ ನೀತೂ ಶೆಟ್ಟಿಗೆ ಕಾಡಲ್ಲಿ ಕಳೆದುಹೋಗುವಾಸೆ
ಮಾನ್ಸೂನ್ ನಲ್ಲಿ ಯಾವ ಪ್ರದೇಶಕ್ಕೆ ಹೋಗಬಯಸುತ್ತೀರಿ ಎಂದು ಎಲ್ಲರೂ ಕೇಳುತ್ತಾರೆ. ನನಗೆ ಮಾನ್ಸೂನ್ ನಲ್ಲಿ ಕೂರ್ಗ್ ಸುತ್ತಾಡುವ ಆಸೆ. ಸಕಲೇಶಪುರ ಓಕೆ. ಆದರೂ ಕೂರ್ಗ್ ನ ಮಳೆ, ಚಳಿ, ಅಲ್ಲಿನ ಮಣ್ಣಿನ ಸುವಾಸನೆ, ಗಿಡ ಮರಗಳ ಪರಿಮಳ..ವಾತಾವರಣಕ್ಕೆ ಒಪ್ಪುವಂತೆ ಆಹಾರ, ಬೆಚ್ಚನೆಯ ಅನುಭವ ನೀಡುವ ಕೂರ್ಗ್ ಕಾಫಿ..ಆಹಾ..ಮಾತಿನಲ್ಲಿ ಅವೆಲ್ಲವನ್ನೂ ವರ್ಣಿಸುವುದು ಕಷ್ಟವೇ ಬಿಡಿ.
ಕನ್ನಡ, ಮಲಯಾಳಂ, ತುಳು ಚಿತ್ರರಂಗಗಳಲ್ಲಿ ಸಕ್ರಿಯವಾಗಿದ್ದು, ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವಾಕೆ ಮಂಗಳೂರಿನ ಬೆಡಗಿ ನೀತು ಶೆಟ್ಟಿ. ಜೋಕ್ ಫಾಲ್ಸ್, ಬೇರು, ಮಲಯಾಳಂನ ಫೊಟೋಗ್ರಫರ್, ಕೋಟಿ ಚೆನ್ನಯ, ಕೃಷ್ಣಾ ನೀ ಲೇಟ್ ಆಗಿ ಬಾರೋ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನೀತು, ಗಾಳಿಪಟ ಸಿನಿಮಾದ ಬಜಾರಿ ರಾಧಾಳ ಪಾತ್ರದ ಮೂಲಕ ಸಿನಿ ಪ್ರಿಯರನ್ನು ಮೋಡಿಮಾಡಿದವರು. ರಮೇಶ್ ಅರವಿಂದ್, ರವಿಚಂದ್ರನ್, ಅನಂತ್ ನಾಗ್, ದಿಗಂತ್, ಮೋಹನ್ ಲಾಲ್ ಸೇರಿದಂತೆ ಅನೇಕ ನಟರ ಜತೆಗೆ ನಟಿಸಿ ನೀತು ಎಲ್ಲರ ಮೆಚ್ಚುಗೆ ಗಳಿಸಿದ್ದರೂ, ಸದ್ಯ ಸಿನಿಮಾರಂಗದಿಂದ ಸಣ್ಣ ವಿರಾಮ ಪಡೆದುಕೊಂಡಿದ್ದಾರೆ. ಆದರೂ ʼಶೆಮಾನಿಸಂʼ ವಿದ್ಯಾರ್ಥಿಯಾಗಿ ತಮ್ಮನ್ನು ತಾವೇ ತೊಡಗಿಸಿಕೊಂಡು, ಬಿಡುವಾದಾಗೆಲ್ಲಾ ಅರಣ್ಯವಾಸ, ಪ್ರವಾಸ ಎಂದು ಲೈಫ್ ಎಂಜಾಯ್ ಮಾಡುತ್ತಿದ್ದಾರೆ..ಇಂದಿನ ಪ್ರವಾಸಿ ಅತಿಥಿ ನೀತು ಶೆಟ್ಟಿ.
ಪ್ರಯಾಣವೆಂಬುದು ಜೀವನದ ಸ್ಪೂರ್ತಿ
ಪ್ರಯಾಣ ಮಾಡುವುದೆಂದರೆ ನನಗೆ ಬಹಳ ಇಷ್ಟ. ನಮ್ಮ ದಿನನಿತ್ಯದ ಬದುಕಿನ ಜಂಜಡಗಳಿಂದ ಮುಕ್ತಿ ಪಡೆಯುವುದಕ್ಕೆ ಟ್ರಾವೆಲಿಂಗ್ ಗಿಂತ ಉತ್ತಮ ಆಯ್ಕೆ ಬೇರೆ ಯಾವುದೂ ಇಲ್ಲ. ಕ್ರಿಯಾಶೀಲರಾಗಿರುವವರಿಗೆ ಪ್ರಯಾಣ, ಪ್ರವಾಸದಿಂದಲೇ ಜೀವನ ಸ್ಫೂರ್ತಿ ಸಿಗುತ್ತದೆ.

ಪ್ರವಾಸ - ಪ್ರಯಾಣ ಒಂದೇ ನಾಣ್ಯದ ಎರಡು ಮುಖಗಳು
ಪ್ರವಾಸಿಗ, ಪ್ರಯಾಣಿಕ ಎರಡರ ನಡುವೆ ವ್ಯತ್ಯಾಸಗಳಿವೆ. ಒಂದೇ ನಾಣ್ಯದ ಎರಡು ಮುಖಗಳೆನ್ನಬಹುದು. ಸ್ಥಳ, ಪ್ರದೇಶ, ಪರಿಸರಕ್ಕೆ ಅನುಗುಣವಾಗಿ ನಾನು ಪ್ರವಾಸಿಗಳೋ ಅಥವಾ ಪ್ರಯಾಣಿಕಳೋ ಎಂಬುದನ್ನು ನಿರ್ಧರಿಸುತ್ತೇನೆ. ಉದಾಹರಣೆಗೆ ಲಂಡನ್ ಗೆ ಹೋದವರು ಬಿಗ್ ಬೆನ್ ಬೆಗ್ ಗೆ ಭೇಟಿಕೊಡದೆ ಇರುವುದಿಲ್ಲ. ಬೆಂಗಳೂರಿಗೆ ಬಂದವರು ವಿಧಾನಸೌಧವನ್ನು ನೋಡದೇ ವಾಪಸಾಗುವುದಿಲ್ಲ. ಇವೆಲ್ಲವನ್ನೂ ಒಬ್ಬ ಟೂರಿಸ್ಟ್ ಆಗಿ ನೋಡಬಹುದು. ಆದರೆ ಟ್ರೆಕ್ಕಿಂಗ್, ಹೈಕಿಂಗ್ ಗೆ ಹೋದಾಗ ಒಬ್ಬ ಪ್ರಯಾಣಿಕನಾಗಿ, ಅಥವಾ ಮಾನವ ಜೀವಿಯಾಗಿ ಸುತ್ತಾಡಬಹುದು.
ಐ ಆಮ್ ಎ ಫಾರೆಸ್ಟ್ ಪರ್ಸನ್!
ಕಾಡು, ವನ, ಕಾನನ, ಅರಣ್ಯ ಹೀಗೆ ಯಾವುದೇ ಹೆಸರಿನಿಂದ ಕರೆದುಕೊಳ್ಳಿ..ನನಗೆ ಆ ಜಾಗ ಬಹಳ ಆಪ್ತವಾದುದು. ನನ್ನ ಬಿಡುವಿನ ವೇಳೆಯಲ್ಲಿ ಅನೇಕ ಅರಣ್ಯ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದೇನೆ. ನನ್ನ ಜೀವನದಲ್ಲಿ ಅರಣ್ಯಗಳು ಬಹಳ ವಿಶೇಷ ಅನುಭವಗಳನ್ನು ನೀಡಿದೆ. ನಗರದಿಂದಾಚೆಗೆ ಅರಣ್ಯದೊಳಗಡೆ ಬೇರೆಯೇ ಲೋಕವಿದೆ. ಇಂಥ ಕಾನನಗಳು ನಾನೊಬ್ಬ ನಟಿ ಎಂಬುದಕ್ಕಿಂತ ಮಾನಸಿಕವಾಗಿ ನಾನು ಹೇಗಿದ್ದೇನೆ, ಎಷ್ಟು ಸದೃಢವಾಗಿದ್ದೇನೆ ಎಂಬುದನ್ನು ನನಗೆ ಪರಿಚಯಿಸುತ್ತವೆ. ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನ, ಭದ್ರಾ ಫಾರೆಸ್ಟ್, ನಾಗರಹೊಳೆ ಹೀಗೆ ಅನೇಕ ಅರಣ್ಯದೊಳಗೆ ನೇಚರ್ ವಾಕ್ ಹೋದ ಅನುಭವಗಳು ನನಗಿವೆ. ಅದರಲ್ಲೂ ನಾನು ಮಸಿನಗುಡಿ ಗಿರಿಧಾಮಕ್ಕೆ ಹೋದಾಗ, ಅಲ್ಲಿನ ರೆಸಾರ್ಟ್‌ನವರು ಅಲ್ಲಿನ ಕಾಡಿನೊಳಗೆ ನಮ್ಮ ತಂಡವನ್ನು ಕರೆದುಕೊಂಡು ಹೋಗಿದ್ದರು. ಅಲ್ಲಿ ಪ್ರಾಣಿಗಳನ್ನು ತೀರಾ ಹತ್ತಿರದಿಂದ ನೋಡುವ ಅವಕಾಶ ನನಗೆ ಸಿಕ್ಕಿತ್ತು. ಆ ಕಾಡಿನಲ್ಲಿ ನಡೆದಾಡುವ ವೇಳೆ ನಾನು ಎಡವಿ ಬಿದ್ದಿದ್ದೆ.ನಾನು ಶೆಮಾನಿಸಂ (Shamanism) ವಿದ್ಯಾರ್ಥಿಯಾಗಿರುವುದರಿಂದ ಆ ಸಂದರ್ಭ ನನಗೆ ಹೊಸ ಅನುಭವ ನೀಡಿತ್ತು.

ಕರುನಾಡು ಅರಣ್ಯಗಳ ಬೀಡು…
ಕರ್ನಾಟಕದಲ್ಲಿ ಅನೇಕ ದಟ್ಟ ಅರಣ್ಯ ಪ್ರದೇಶಗಳಿವೆ. ಅವುಗಳಲ್ಲಿ ಕೆಲವನ್ನಷ್ಟೇ ನಾನು ಸುತ್ತಾಡಿ ಬಂದಿದ್ದೇನೆ. ನಾಗರಹೊಳೆ, ಭದ್ರಾ, ಬಂಡೀಪುರ ನನಗೆ ಬಹಳ ಇಷ್ಟವಾದ ಕಾನನಗಳು. ಆದರೆ ಬಂಡೀಪುರದಲ್ಲಿ ಪ್ರಾಣಿಗಳನ್ನು ಸಮೀಪದಿಂದಲೇ ನೋಡುವ ಅವಕಾಶ ನಮಗೆ ಸಿಗುತ್ತದೆ. ಇನ್ನು ಭದ್ರಾ ಅರಣ್ಯದ ಬಗ್ಗೆ ಹೇಳುವುದಾದರೆ ಅದು ದಟ್ಟ ಮತ್ತು ಮಿಸ್ಟಿಕಲ್ ಎನಿಸುತ್ತದೆ.
ಕಾಂತಾರಕ್ಕೂ ಕೊರಗಜ್ಜನಿಗೂ ಸಂಬಂಧ..
ಕರ್ನಾಟಕ ಧಾರ್ಮಿಕ ಪ್ರವಾಸಕ್ಕೆ ಬಹಳ ಒಳ್ಳೆಯ ತಾಣವಾಗಿದೆ. ಅದರಲ್ಲೂ ಕರಾವಳಿಯ ಭಾಗವಂತೂ ಕಾಂತಾರ ಸಿನಿಮಾ ಹಿಟ್ ಆದ ಮೇಲೆ ಎಲ್ಲರ ನೆಚ್ಚಿನ ಪ್ರವಾಸಿ ಕೇಂದ್ರವಾಗಿದೆ. ಮಂಗಳೂರಿನಲ್ಲಿ ಕೊರಗಜ್ಜ ನೋಡಲು ದೇಶದೆಲ್ಲೆಡೆಯಿಂದ ಪ್ರವಾಸಿಗರು ಬರುತ್ತಾರೆ. ಪಂಜುರ್ಲಿ ದೈವದ ಆಶೀರ್ವಾದ ಪಡೆದುಕೊಳ್ಳಲು ಕಾತುರರಾಗಿ ಕಾಯುತ್ತಾರೆ. ಇನ್ನು ಶಿವಮೊಗ್ಗ ಕಡೆಗೆ ಹೋದರೆ ಚೌಡೇಶ್ವರಿ ದೇವಿಯ ಆರಾಧಕರೇ ಹೆಚ್ಚು. ಲಾಂಚ್ ನಲ್ಲಿ ತೆರಳಿ ಸಿಗಂದೂರು ಚೌಡೇಶ್ವರಿಯ ದರ್ಶನವನ್ನು ಪಡೆಯುವ ಪ್ರವಾಸಿಗರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಉತ್ತರ ಕರ್ನಾಟಕ, ಬೆಂಗಳೂರು ಹೀಗೆ ಕರ್ನಾಟಕದಲ್ಲಿ ಯಾವುದೇ ಭಾಗಕ್ಕೆ ಹೋದರೂ ಧಾರ್ಮಿಕ ಪ್ರದೇಶಗಳೂ ಸಮೃದ್ಧವಾಗಿವೆ.
ಬೃಹದೇಶ್ವರವೆಂಬ ಅಚ್ಚರಿಯ ಲೋಕ
ಸುತ್ತಾಡುವುದು ನನಗಿಷ್ಟ ಕೆಲಸ. ಇತ್ತೀಚೆಗಷ್ಟೇ ನಾನು ತಂಜಾವೂರಿನ ಬೃಹದೇಶ್ವರ ದೇವಾಲಯಕ್ಕೆ ಹೋಗಿದ್ದೆ. ಅಲ್ಲಿನ ಶಿಲ್ಪಕಲೆ, ಕೆತ್ತನೆಗಳು, ವಾಸ್ತುಶಿಲ್ಪಗಳು ಎಲ್ಲವೂ ಅದೆಷ್ಟು ಮೋಡಿ ಮಾಡುತ್ತದೆ ಗೊತ್ತಾ..? ಮತ್ತೆ ಮತ್ತೆ ನೋಡುತ್ತಲೇ ಇರಬೇಕು ಅನಿಸಿರುವುದಂತೂ ಸುಳ್ಳಲ್ಲ. ಭಾರತದ ಇತಿಹಾಸವೇ ಹಾಗೆ.. ಪುಟ ತಿರುವಿದಷ್ಟೂ ಹೊಸತನವನ್ನೇ ಕಟ್ಟಿಕೊಡುತ್ತದೆ..

ನಾಲ್ಕೈದು ವಿದೇಶಗಳಿಗಷ್ಟೇ ನಾನು ಪ್ರವಾಸ ಹೋಗಿದ್ದೆ. ಯುಕೆ, ಥೈಲ್ಯಾಂಡ್, ಇರಾನ್ ಹೀಗೊಂದಿಷ್ಟು. ಅವುಗಳಲ್ಲಿ ಇರಾನ್ ಪ್ರವಾಸವೇ ನನಗೆ ಎಂದಿಗೂ ನೆನಪಿಗೆ ಬರುತ್ತದೆ. ಅದಕ್ಕೆ ಕಾರಣ ಅಲ್ಲಿನ ಸಂಸ್ಕೃತಿ. ನಾನು ಗೆಳತಿಯ ಜತೆಗೆ ಇರಾನ್ ಹೋಗಿ ಈಗ ವರ್ಷಗಳೇ ಕಳೆದಿವೆ. ಆಗ ಪ್ರವಾಸಕ್ಕೆ ತೆರಳಿದ್ದ ಅಷ್ಟೂ ದಿನ ನಾವು ಬುರ್ಖಾ ತೊಟ್ಟುಕೊಂಡೇ ಸುತ್ತಾಡಿದ್ದೆವು. ಅಲ್ಲಿ ಎಲ್ಲದಕ್ಕೂ ಕಟ್ಟುನಿಟ್ಟಿನ ನಿಯಮಗಳು. ಆದರೆ ಇಂದು ಕಾಲ ಬದಲಾಗಿದೆ, ನಿಯಮಗಳೂ ಕೂಡ. ಆದರೆ ಅಂದಿಗೂ ಇಂದಿಗೂ ಇಂದು ವಿಚಾರದಲ್ಲಿ ಬದಲಾವಣೆಯೇ ಆಗಿಲ್ಲ. ಅದು ಸಂಬಂಧಗಳ ಕೊಡುವ ಪ್ರಾಮುಖ್ಯತೆ. ಭಾರತೀಯರಾದ ನಾವು ಮಾನವ ಸಂಬಂಧಗಳನ್ನು ಅತಿಯಾಗಿ ಗೌರವಿಸುತ್ತೇವೆ, ಪ್ರೀತಿಸುತ್ತೇವೆ. ಆದರೆ ನನ್ನ ಅನಿಸಿಕೆಯ ಪ್ರಕಾರ ಇರಾನ್ ನಲ್ಲಿ ಹಾಗಿಲ್ಲ.
ಟ್ರಾವೆಲ್ ಬ್ಯಾಗ್ ನಲ್ಲಿ ಪ್ಯಾಂಟ್ ಗಳೇ ಹೆಚ್ಚು
ಪ್ರಯಾಣ, ಪ್ರವಾಸದ ವೇಳೆ ಬ್ಯಾಗ್ ಪ್ಯಾಕ್ ಮಾಡಿಕೊಳ್ಳುವ ಎಲ್ಲರೂ ಸಾಮಾನ್ಯವಾಗಿ ಅಗತ್ಯ ವಸ್ತುಗಳನ್ನು ತೆಗೆದುಕೊಂಡೇ ಇರುತ್ತಾರೆ. ಮೇಕಪ್ ಕಿಟ್, ಪರ್ಫ್ಯೂಮ್, ಸನ್ ಗ್ಲಾಸ್ ಹೀಗೆ ಹತ್ತು ಹಲವು. ಆದರೆ ಇವೆಲ್ಲದರ ಜತೆಗೆ ನನ್ನ ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಸೇರಿಕೊಂಡಿರುವುದು ಸಾಕಷ್ಟು ಸಂಖ್ಯೆಯಲ್ಲಿ ಪ್ಯಾಂಟ್ಸ್. ಚಳಿ, ಬಿಸಿಲು, ಮಳೆ ಹೀಗೆ ಕಾಲಗಳಿಗೆ ಅನುಗುಣವಾಗಿ ನಾನು ಟ್ರ್ಯಾಕ್ ಪ್ಯಾಂಟ್ಸ್, ನಾರ್ಮಲ್ ಪ್ಯಾಂಟ್ ಗಳನ್ನು ಬ್ಯಾಗ್ ನಲ್ಲಿಟ್ಟುಕೊಂಡಿರುತ್ತೇನೆ. ಎಷ್ಟೆಂದರೆ ಡ್ರೆಸ್ ಗಳಿಗಿಂತ ಹೆಚ್ಚು. ಅದೊಂದು ರೂಢಿಯಷ್ಟೇ.
ಮಾನ್ಸೂನ್ ಮತ್ತು ಕೂರ್ಗ್ ಕಾಂಬಿನೇಷನ್
ಮಾನ್ಸೂನ್ ನಲ್ಲಿ ಯಾವ ಪ್ರದೇಶಕ್ಕೆ ಹೋಗಬಯಸುತ್ತೀರಿ ಎಂದು ಎಲ್ಲರೂ ಕೇಳುತ್ತಾರೆ. ನನಗೆ ಮಾನ್ಸೂನ್ ನಲ್ಲಿ ಕೂರ್ಗ್ ಸುತ್ತಾಡುವ ಆಸೆ. ಸಕಲೇಶಪುರ ಓಕೆ. ಆದರೂ ಕೂರ್ಗ್ ನ ಮಳೆ, ಚಳಿ, ಅಲ್ಲಿನ ಮಣ್ಣಿನ ಸುವಾಸನೆ, ಗಿಡ ಮರಗಳ ಪರಿಮಳ..ವಾತಾವರಣಕ್ಕೆ ಒಪ್ಪುವಂತೆ ಆಹಾರ, ಬೆಚ್ಚನೆಯ ಅನುಭವ ನೀಡುವ ಕೂರ್ಗ್ ಕಾಫಿ..ಆಹಾ..ಮಾತಿನಲ್ಲಿ ಅವೆಲ್ಲವನ್ನೂ ವರ್ಣಿಸುವುದು ಕಷ್ಟವೇ ಬಿಡಿ.

ಹಂಪಿ ಸುತ್ತಾಡಬೇಕು…
ವರ್ಷಗಳ ಹಿಂದೆ ಹಂಪಿ ಉತ್ಸವಕ್ಕೆ ಹೋಗಿ ಬಂದಿದ್ದೆ. ಆಗ ಹಂಪಿ ಸುತ್ತಾಡುವುದಕ್ಕೆ ಸಾಧ್ಯವಾಗಲೇ ಇಲ್ಲ. ಆಗಲೇ ಅಂದುಕೊಂಡಿದ್ದೆ 4-5 ದಿನಗಳ ಕಾಲ ಹಂಪಿ ಸುತ್ತಾಡುವುದಕ್ಕೆ ಬರಬೇಕು ಎಂದು. ಆದರೆ ಇಂದಿಗೂ ಅದು ಸಾಧ್ಯವಾಗಿಲ್ಲ. ಅದು ಯಾವಾಗ ಕಾಲ ಕೂಡಿ ಬರುತ್ತದೆಯೆಂದು ನನಗೂ ಗೊತ್ತಿಲ್ಲ.
ಮಸಯ್ ಮರಾ… ಡ್ರೀಮ್ ಲ್ಯಾಂಡ್
ನನ್ನ ಡ್ರೀಮ್ ಡೆಸ್ಟಿನೇಷನ್ ಒಂದಿದೆ. ಜೀವನದಲ್ಲಿ ಒಮ್ಮೆಯೆಂದು ಹೇಳುವುದಕ್ಕಿಂತ ಆಗಾಗ ಹೋಗಬೇಕು ಎಂದುಕೊಳ್ಳುವ ಜಾಗ. ಕೀನ್ಯಾದ ಮಸಯ್ ಮರಾ. ಸೋಷಿಯಲ್ ಮೀಡಿಯಾದಲ್ಲಿ ಮಸಯ್ ಮರಾ ಬಗೆಗೆ ಸಾಕಷ್ಟು ವಿಡಿಯೋಗಳನ್ನು ನೋಡಿದ್ದೇನೆ. ಸೆಲೆಬ್ರಿಟೀಸ್ ಅಲ್ಲಿಗೆ ತೆರಳಿ, ಫೊಟೋ, ವಿಡಿಯೋಗಳನ್ನು ಮಾಡಿ ಶೇರ್ ಮಾಡಿಕೊಂಡಿದ್ದೂ ಇದೆ. ಆಗೆಲ್ಲ ಅಂದುಕೊಳ್ಳುತ್ತೇನೆ. ಮುಂದೆ ನಾನೂ ಇಲ್ಲಿಗೆ ಹೋಗಬೇಕು, ವಿಭಿನ್ನ ವನ್ಯ ಜೀವಿಗಳನ್ನು ಹತ್ತಿರದಿಂದಲೇ ಕಣ್ತುಂಬಿಕೊಳ್ಳಬೇಕು ಎಂದು. ಅರಣ್ಯ, ವನ್ಯ ಜೀವಿಗಳು, ಹಚ್ಚ ಹಸಿರಿನ ಪರಿಸರ ಇವೆಲ್ಲವೂ ನಮ್ಮಲ್ಲಿ ಇನ್ನಷ್ಟು ಜೀವಂತಿಕೆಯನ್ನು ತುಂಬುತ್ತವೆ.