'ಪ್ರೇಮದ ಊರಲಿ' ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ನಾಯಕಿ ತಪಸ್ವಿನಿ ಅವರಿಗೆ ಪ್ರವಾಸ ಎಂದರೆ ಅಚ್ಚುಮೆಚ್ಚು. ಭವಿಷ್ಯದಲ್ಲಿ ಇಡೀ ಪ್ರಪಂಚವನ್ನು ಸುತ್ತುವ ಕನಸು ಹೊತ್ತಿರುವ ಅವರು, ತಮ್ಮ ಟ್ರಾವೆಲ್ ಇಷ್ಟಗಳು, ಡಯಟ್ ಹಾಗೂ ಚಿತ್ರೀಕರಣದ ವೇಳೆ ಹಳ್ಳಿಗಳಲ್ಲಿ ಸಿಕ್ಕ ಆತಿಥ್ಯದ ಬಗ್ಗೆ ಇನ್ನಷ್ಟು ರೋಚಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

'ಪ್ರೇಮದ ಊರಲಿ' ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಈ ಮಟ್ಟದ ಯಶಸ್ಸನ್ನು ನಿರೀಕ್ಷೆ ಮಾಡಿದ್ದೀರಾ?

-ಸ್ವಲ್ಪ ಮಟ್ಟಿಗೆ ನಿರೀಕ್ಷೆ ಮಾಡಿದ್ದೆ. ಆದರೆ ಈ ಪರಿ ಜನ ಬೆಂಬಲ ಸಿಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಮೊದಲ ದಿನ ಕೇವಲ 70 ಚಿತ್ರಮಂದಿರಗಳಲ್ಲಿ ಶೋ ಆರಂಭವಾಯಿತು. ಆದರೆ ಜನರ ಪ್ರತಿಕ್ರಿಯೆ ನೋಡಿ ನಂತರದ ದಿನಗಳಿಂದ ದಿನಕ್ಕೆ 3-4 ಶೋಗಳನ್ನು ಹೆಚ್ಚಿಸಿದ್ದಾರೆ. ಮಂಡ್ಯ ಸೇರಿದಂತೆ ಅನೇಕ ಕಡೆಗಳಿಂದ ಚಿತ್ರಮಂದಿರದವರೇ ಕರೆ ಮಾಡಿ ಸಿನಿಮಾ ಕೇಳಿ ಪಡೆಯುತ್ತಿದ್ದಾರೆ. ನವರಂಗ ಹಾಗೂ ಪ್ರಸನ್ನ ಥಿಯೇಟರ್‌ಗಳಲ್ಲಿ ರಾತ್ರಿ ಶೋಗಳು ಹೌಸ್‌ಫುಲ್ ಆಗುತ್ತಿರುವುದು ಬಹಳ ಖುಷಿ ನೀಡಿದೆ. ವೀಕೆಂಡ್ ಮಾತ್ರವಲ್ಲದೆ, ಸೋಮವಾರ ಹಾಗೂ ಮಂಗಳವಾರದಂಥ ವರ್ಕಿಂಗ್ ದಿನಗಳಲ್ಲೂ ಬೆಳಗ್ಗಿನ ಶೋಗಳು ಶೇ. 90ರಷ್ಟು ಭರ್ತಿಯಾಗುತ್ತಿವೆ ಎಂದು ಬೇರೆ ಚಿತ್ರತಂಡದವರು ಹೇಳಿದಾಗ ಬಹಳ ಆನಂದವಾಯಿತು. ಕನ್ನಡಿಗರ ಈ ಪ್ರೀತಿಗೆ ನಾನು ಆಭಾರಿ.

Untitled design - 2026-10-19T154426.398

ಸಿನಿಮಾದ ಚಿತ್ರೀಕರಣ ಎಲ್ಲೆಲ್ಲಿ ನಡೆಯಿತು ಮತ್ತು ಆ ಅನುಭವ ಹೇಗಿತ್ತು?

ನಾವು ಸಿನಿಮಾವನ್ನು ಬೇಲೂರು, ಹಳೇಬೀಡು, ಬೆಂಗಳೂರು, ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಬೆಂಗಳೂರಿಗೂ ಹಾಗೂ ಹಳ್ಳಿಗಳಿಗೂ ಬಹಳ ವ್ಯತ್ಯಾಸವಿದೆ. ಶೂಟಿಂಗ್ ಮಾಡುವಾಗ ಕ್ಯಾರವಾನ್‌ನಲ್ಲಿ ಕೂರುವುದಕ್ಕಿಂತ ಜನರ ಜತೆ ಕಾಲ ಕಳೆಯುವುದೇ ಖುಷಿಯಾಗಿತ್ತು. ಪಕ್ಕದ ಜಮೀನಿನವರು ಬಂದು ಎಳನೀರು, ಊಟ-ತಿಂಡಿ ಬೇಕಾ ಎಂದು ಕೇಳುತ್ತಿದ್ದರು. ಯಾರಿಗಾದರೂ ಹುಷಾರಿಲ್ಲದಿದ್ದರೆ ಅವರೇ ಅಷ್ಟೇ ಚೆನ್ನಾಗಿ ಕಾಳಜಿ ವಹಿಸುತ್ತಿದ್ದರು. ನಮ್ಮ ಊರು, ಕಲ್ಚರ್ ಹಾಗೂ ನಮ್ಮ ಮನಸ್ಥಿತಿಯನ್ನು ಜನರಿಗೆ ಹತ್ತಿರವಾಗುವಂತೆ ತೋರಿಸುವುದು ನಮ್ಮ ಉದ್ದೇಶವಾಗಿತ್ತು.

ನಿಮ್ಮ ದೃಷ್ಟಿಯಲ್ಲಿ ಪ್ರವಾಸ ಅಂದರೆ ಏನು?

-ನಮಗೆ ಇರುವುದು ಒಂದೇ ಜೀವನ. ನಾವು ಬೇರೆ ಬೇರೆ ಜಾಗಗಳಿಗೆ ಹೋದಾಗ ಅಲ್ಲಿನ ಸಂಸ್ಕೃತಿ, ಉಡುಗೆ-ತೊಡುಗೆ ಹಾಗೂ ಜನರ ನಡುವಳಿಕೆಯನ್ನು ಅರಿಯಬಹುದು. ನನಗೆ ಪ್ರಪಂಚ ಸುತ್ತುವುದು ಬಹಳ ಇಷ್ಟ. ನಮ್ಮ ಸಿನಿಮಾದಲ್ಲೂ ಇದೇ ರೀತಿಯ ಸಂದೇಶವಿದೆ, ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡದೆ, ಜೀವನವನ್ನು ಖುಷಿಯಾಗಿ ಕಳೆಯಬೇಕು ಎನ್ನುವುದನ್ನು ಹೇಳಿದ್ದೇವೆ. ನಮ್ಮ ಸಿನಿಮಾವನ್ನು ಬೇರೆ ಊರುಗಳಲ್ಲಿ ಶೂಟ್ ಮಾಡುವ ಬದಲು, ನಮ್ಮ ಜನರಿಗೆ ಮತ್ತು ಸಂಸ್ಕೃತಿಗೆ ಕನೆಕ್ಟ್ ಆಗಲಿ ಎಂದು ಕರ್ನಾಟಕದಲ್ಲೇ ಶೂಟ್ ಮಾಡಿದ್ದೇವೆ.

ಈ ಹಿಂದೆ ಎಲ್ಲೆಲ್ಲಿ ಪ್ರವಾಸ ಮಾಡಿದ್ದೀರಿ? ನಿಮ್ಮ ಕನಸಿನ ತಾಣಗಳು ಯಾವುವು?

-ನನ್ನ ಶಿಕ್ಷಣ ಹಾಗೂ ಇಂಟರ್ನ್‌ಶಿಪ್‌ಗಾಗಿ ಮಲೇಷಿಯಾ, ಬಾಲಿ ಮುಂತಾದ ಕಡೆ ಹೋಗಿದ್ದೆ. ನನಗೆ ಪ್ರಕೃತಿ ಹಾಗೂ ಹಿಲ್ ಸ್ಟೇಷನ್‌ಗಳು ಎಂದರೆ ತುಂಬಾ ಇಷ್ಟ. ಕೋಲ್ಡ್ ಆಗಿರುವ ಜಾಗಗಳಿಗೆ ಹೋಗಲು ಬಯಸುತ್ತೇನೆ. ನನ್ನ ಬಕೆಟ್ ಲಿಸ್ಟ್‌ನಲ್ಲಿ ಸ್ವಿಟ್ಜರ್ಲ್ಯಾಂಡ್, ಆಸ್ಟ್ರೇಲಿಯಾ, ಪ್ಯಾರಿಸ್ ಹಾಗೂ ಐಲ್ಯಾಂಡ್ ಪ್ರದೇಶಗಳಿವೆ. ಮುಂದೊಂದು ದಿನ ಇಡೀ ಪ್ರಪಂಚವನ್ನು ಕವರ್ ಮಾಡುವುದೇ ನನ್ನ ರಿಟೈರ್‌ಮೆಂಟ್ ಪ್ಲಾನ್. ಈಗ ಕರಿಯರ್ ಶುರುವಾಗಿರುವುದರಿಂದ, ಕೆಲಸದ ನಡುವೆ ಸಿಗುವ ರಜೆಗಳಲ್ಲೂ ಟ್ರಾವೆಲ್ ಮಾಡಲು ಇಷ್ಟಪಡುತ್ತೇನೆ.

Untitled design - 2026-10-19T154528.309

ಪ್ರವಾಸಕ್ಕೆ ಯಾರ ಜತೆ ಹೋಗಲು ಹೆಚ್ಚು ಇಷ್ಟಪಡುತ್ತೀರಿ?

-ನನಗೆ ಫ್ಯಾಮಿಲಿ ಅಥವಾ ಪೋಷಕರ ಜತೆ ಟ್ರಾವೆಲ್ ಮಾಡುವುದು ಇಷ್ಟ. ಇಲ್ಲವೇ ಒಂಟಿಯಾಗಿ (Solo travel) ಹೋಗಲು ಬಯಸುತ್ತೇನೆ. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗುವ ಅಭ್ಯಾಸ ನನಗಿಲ್ಲ.

ಪ್ರವಾಸ ಮಾಡುವಾಗ ಫಿಟ್ನೆಸ್ ಮತ್ತು ಡಯಟ್ ಅನ್ನು ಹೇಗೆ ನಿಭಾಯಿಸುತ್ತೀರಿ?

-ಪ್ರಸ್ತುತ ಬ್ಯುಸಿ ಶೆಡ್ಯೂಲ್ ಇರುವುದರಿಂದ ಕಟ್ಟುನಿಟ್ಟಾಗಿ ಪಾಲಿಸಲು ಆಗುತ್ತಿಲ್ಲ. ಆದರೆ ಶೂಟಿಂಗ್ ಅಥವಾ ಟ್ರಾವೆಲಿಂಗ್ ಸಮಯದಲ್ಲಿ ಆದಷ್ಟು ಆರೋಗ್ಯಕರ ಆಹಾರ ಸೇವಿಸುತ್ತೇನೆ. ಸಕ್ಕರೆ ಅಂಶವನ್ನು ಕಡಿಮೆ ಮಾಡಿ, ರಾತ್ರಿ ಬೇಗ ಊಟ ಮಾಡಲು ಪ್ರಯತ್ನಿಸುತ್ತೇನೆ. ಕೆಲವೊಮ್ಮೆ ಕೆಲಸದ ಒತ್ತಡವಿದ್ದಾಗ ಇದನ್ನು ಪಾಲಿಸಲು ಸಾಧ್ಯವಾಗುವುದಿಲ್ಲ.