-ಶಶಿಕರ ಪಾತೂರು

ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ಪಾತ್ರಗಳಿಂದ ಗುರುತಿಸಿಕೊಂಡವರು ಸುಕೃತಾ ವಾಗ್ಲೆ. ಕಿರಗೂರಿನ ಗಯ್ಯಾಳಿಗಳು, ಜಟ್ಟ ಮೊದಲಾದ ಚಿತ್ರಗಳಲ್ಲಿ ಇವರ ನಟನೆ ಪ್ರೇಕ್ಷಕರ, ವಿಮರ್ಶಕರ ಪ್ರಶಂಸೆಗೆ ಪಾತ್ರವಾಗಿತ್ತು. ಸುದೀಪ್ ಅಭಿನಯದ ಹಿಟ್ ಚಿತ್ರ ಮ್ಯಾಕ್ಸ್ ಹಾಗೂ ದಯಾಳ್ ನಿರ್ಮಾಣದ ಕಪಟಿ ಚಿತ್ರದ ಮೂಲಕ ಭರ್ಜರಿಯಾಗಿ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿರುವ ಸುಕೃತಾಗೆ ಪ್ರವಾಸ ಅಂದರೆ ಅಚ್ಚುಮೆಚ್ಚು. ಆದರೆ ಬಯಸಿ‌‌ ಸುತ್ತಾಡುವುದೆಲ್ಲ ಪುಣ್ಯಕ್ಷೇತ್ರಗಳನ್ನೇ. ಹೀಗೆ ದೇವರ ದರ್ಶನ ಪಡೆಯುವ ವೇಳೆ ಪವಾಡಗಳೂ ಸಂಭವಿಸಿವೆ.‌ ಅವುಗಳನ್ನೆಲ್ಲ ಇಲ್ಲಿ ಹಂಚಿಕೊಂಡಿದ್ದಾರೆ.

ಪ್ರವಾಸದ ಆಸಕ್ತಿ ಶುರುವಾಗಿದ್ದು ಯಾವಾಗ?

ನನಗೆ ಪ್ರವಾಸ ಅಂದರೆ ಮೊದಲಿನಿಂದಲೂ ಇಷ್ಟವೇ. ಆದರೆ ಮುಂಬೈನಲ್ಲಿ ನಡೆದ ಘಟನೆಯೊಂದು ನನ್ನನ್ನು ಹೆಚ್ಚು ಹೆಚ್ಚು ಪುಣ್ಯಕ್ಷೇತ್ರ ದರ್ಶನ ಮಾಡುವಂತೆ ಪ್ರೇರೇಪಿಸಿತು. ಈಗ ನಾನು ಯಾವುದೇ ಊರಿಗೆ ಹೋದರೂ ಮೊದಲು ಅಲ್ಲಿನ ದೇವಸ್ಥಾನಗಳಿಗೆ ಭೇಟಿ ನೀಡಲು ಬಯಸುತ್ತೇನೆ.

ಮುಂಬೈ ಪ್ರವಾಸದಲ್ಲಿ ಆ ಘಟನೆ ಏನು ಹೇಳಬಹುದೇ?

ಮುಂಬೈನ ಜನಪ್ರಿಯ ಸಿದ್ದಿವಿನಾಯಕ ಮಂದಿರವನ್ನು ನೋಡಲೆಂದೇ ಸೋಲೋ ಪ್ರವಾಸ ಹೋಗಿದ್ದೆ.‌ ಅಲ್ಲಿಂದಲೇ ನನ್ನ ವೃತ್ತಿ ಬದುಕಿನ‌ ಮೊದಲ ಹೆಜ್ಜೆ ಆರಂಭವಾಯಿತು.‌ ಗಣೇಶನ ಆಶೀರ್ವಾದ ಪಡೆದು ಮುಂಬೈ ತಿರುಗಾಡಿ ಬರುವುದಷ್ಟೇ ನನ್ನ ಉದ್ದೇಶ ಆಗಿತ್ತು. ಆದರೆ ಸುತ್ತಾಟದ ಮಧ್ಯೆ ಅಲ್ಲೊಂದು ಕಡೆ ಡಿಸೈನರ್ ವೇರ್ ಮಾಡೆಲಿಂಗ್‌ಗೆ ಆಹ್ವಾನಿಸಿದ ಜಾಹೀರಾತು ಕಾಣಿಸಿತ್ತು. ಪ್ರಯತ್ನಿಸೋಣ ಎಂದು ಹೋದ ನಾನು ಆ ಮೊದಲ‌ ಪ್ರಯತ್ನದಲ್ಲೇ ಆಯ್ಕೆಯಾಗಿದ್ದೆ. ಗಣೇಶನನ್ನು ನೋಡಿದ ಮೂರೇ ದಿನದಲ್ಲಿ ನಡೆದ ಈ ಮ್ಯಾಜಿಕ್ ಬಳಿಕ ನನ್ನ ದೇಗುಲ ಪ್ರವಾಸದ ಆಸಕ್ತಿಯನ್ನು ಹೆಚ್ಚಿಸಿತು.

Sukruta wagle

ಆನಂತರ ನಿಮ್ಮ ಅಧ್ಯಾತ್ಮ ಪ್ರವಾಸ ಹೇಗೆ ಮುಂದುವರಿಯಿತು?

ನಾನು ದೇಶದ ಶಕ್ತಿಪೀಠಗಳನ್ನು ಸಂದರ್ಶಿಸಲು ಶುರು ಮಾಡಿದೆ. 52 ಶಕ್ತಿ ಪೀಠಗಳಲ್ಲಿ ಇದುವರೆಗೆ ಹದಿನಾಲ್ಕು ಪೀಠಗಳಿಗೆ ಭೇಟಿ ನೀಡಿದ್ದೇನೆ.‌

ಅದರ ನಡುವೆ ಪಂಚಭೂತ ಲಿಂಗೇಶ್ವರ ದೇವಾಲಯಗಳನ್ನು ದರ್ಶನ ಮಾಡಲು ಆರಂಭಿಸಿದೆ. ಈಗ ಎಲ್ಲ ಪಂಚಭೂತ ಲಿಂಗೇಶ್ವರ ದೇಗುಲಗಳ ಭೇಟಿಯನ್ನು ಮಾಡಿ‌ ಮುಗಿಸಿದ್ದೇನೆ. ಇನ್ನು ಶಕ್ತಿಪೀಠಗಳ ಸಂದರ್ಶನಕ್ಕೆ ಬಂದರೆ ಮೊದಲು ನಮ್ಮ ಕೊಲ್ಲೂರು ದೇವಸ್ಥಾನದಿಂದ ಪ್ರಯಾಣ ಶುರು ಮಾಡಿದ್ದೆ.‌ ಇದುವರೆಗೆ 14 ಶಕ್ತಿಪೀಠಗಳನ್ನು ದರ್ಶನ‌ ಮಾಡಿದ್ದೇನೆ.

ಈ ದೇವಾಲಯಗಳ‌ ದರ್ಶನದಿಂದ ನಿಮಗೆ ದೊರೆಯುವ ಅನುಭವಗಳೇನು?

ಜಗತ್ತು ಎನ್ನುವುದೇ ಶಕ್ತಿ ಮತ್ತು ತರಂಗಗಳಿಂದ ನಡೆಯುತ್ತಿದೆ ಎಂದು‌ ನಂಬಿದ್ದೇನೆ‌. ನಮಗೆ ಸ್ವತಃ ನಮ್ಮ ಶಕ್ತಿ ಮತ್ತು ತರಂಗಗಳ ಅರಿವಾಗಬೇಕಾದರೆ ಇಂಥ ಪುರಾಣ ಪ್ರಸಿದ್ಧ ಕ್ಷೇತ್ರಗಳನ್ನು ಭೇಟಿ ಮಾಡಬೇಕು. ಇತ್ತೀಚೆಗೆ ಎಲ್ಲ ದೇವಸ್ಥಾನಗಳು ತುಂಬ ಕಮರ್ಶಿಯಲ್ ರೂಪ‌ ತಾಳಿವೆ. ಆದರೆ ಇತಿಹಾಸ ಇರುವ, ಗದ್ದಲಗಳಿಂದ ದೂರಾಗಿರುವ ದೇವಸ್ಥಾನಗಳ ಸಂದರ್ಶನದಿಂದ ಎನರ್ಜಿ ಫೀಲಾಗುತ್ತದೆ. ಇದು ತೀರ ಖಾಸಗಿಯಾದ ಅನುಭವ.

ಹಾಗಾಗಿಯೇ ನಾನು ಇವುಗಳ ಬಗ್ಗೆ ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಿಲ್ಲ. ಮುಂದೆ ದೇಶದ 12 ಜ್ಯೋತಿರ್ಲಿಂಗಗಳ ದರ್ಶನ ಮಾಡಬೇಕು ಅಂತ ಅಂದುಕೊಂಡಿದ್ದೇನೆ.

Sukruta

ಮುಂಬೈನಲ್ಲಿ ನಡೆದಂಥ ಪವಾಡ ಆಮೇಲೆ ಯಾವ ದೇಗುಲದಲ್ಲೂ ಆಗಿಲ್ಲವೇ?

ಶಕ್ತಿಪೀಠಗಳಲ್ಲಿ ಒಂದಾದ ಕನ್ಯಾಕುಮಾರಿಗೆ ನಾನು ಮತ್ತು ತಂಗಿ ಹೋಗಿದ್ದೆವು.‌ ಅಲ್ಲಿ ನಡೆದಂಥ ಒಂದು ಘಟನೆ ನನ್ನ ಪಾಲಿಗೆ ಪವಾಡ ಎಂದೇ ಹೇಳಬಹುದು. ಮುಂಜಾನೆ ದರ್ಶನಕ್ಕೆ ಎಂದು ಪ್ರವೇಶ ಮಾಡುವಾಗಲೇ ಅರ್ಚಕರೋರ್ವರು ತಡೆದು ಕೇಳಿದರು. ನಾರ್ಮಲ್ ದರ್ಶನಕ್ಕೆ ಹೊರಟ ನಮಗೆ ಸ್ಪೆಷಲ್ ದರ್ಶನಕ್ಕಿಂತಲೂ ಅಧಿಕ ಹಣ ಕೇಳಿದ್ದರು. ನಾನು ಬೇಸರದಿಂದ ತಂಗಿ ಜತೆ ಹೊರಗೆ ಬಂದು ನಿಂತು ಇಲ್ಲಿಯವರೆಗೆ ಬಂದು ಹೀಗಾಯ್ತಲ್ಲ ಎಂದುಕೊಳ್ತಿದ್ದೆ. ಅಷ್ಟು ಹೊತ್ತಿಗೆ ಮಹಿಳೆಯೊಬ್ಬರು ಬಂದು ದೇವರ ದರ್ಶನ ಮಾಡಬೇಕಿತ್ತಾ ಎಂದು ಕೇಳಿದರು. ಹೌದು ಎಂದಿದ್ದಕ್ಕೆ ನಮ್ಮನ್ನು ಎಕ್ಸಿಟ್ ಮೂಲಕ ಕರೆದೊಯ್ದರು. ಅದು ಸ್ಪೆಷಲ್ ದರ್ಶನದಿಂದ ಹೊರಟು ಬರುವ ಜಾಗವಾಗಿತ್ತು. ಹೀಗಾಗಿ ಗರ್ಭಗುಡಿಯ ಸಮೀಪದಲ್ಲೇ ನಿಂತು ನೋಡಲು ಸಾಧ್ಯವಾಯಿತು. ಅಲ್ಲಿನ ಅರ್ಚಕರು ನಮ್ಮ ಉಡುಪಿಯವರೇ ಆಗಿದ್ದ ಕಾರಣ‌ ಆತ್ಮೀಯವಾಗಿ ಮಾತನಾಡಲು ಕೂಡ ಸಾಧ್ಯವಾಯಿತು. ಆಮೇಲೆ ಅಲ್ಲೆಲ್ಲೂ ಕಾಣಿಸದ ಆ ಮಹಿಳೆ ದೇವತೆಯೇ ಸಿಕ್ಕ ಹಾಗಿತ್ತು. ದಾರಿ ಕಡೆ ಕೈ ತೋರಿಸಿದ ಬಳಿಕ ಅವರು ಆಮೇಲೆಲ್ಲೂ ಕಾಣಿಸಲೂ ಇಲ್ಲ!

ಇಷ್ಟೊಂದು ದೇಗುಲಗಳ‌ನ್ನು ಸಂದರ್ಶಿಸಿರುವುದರಲ್ಲಿ ಮರೆಯಲಾಗದ ದರ್ಶನ ಭಾಗ್ಯ ಯಾವುದು?

ಕಾಂಚಿಪುರಂನ ವರದರಾಜ ದೇವಸ್ಥಾನದಲ್ಲಿ ಒಂದು ಘಟನೆ ನಡೆಯಿತು. ಆ ದೇವಸ್ಥಾನಕ್ಕೂ ನಾನು ತಂಗಿ ಜತೆಯೇ ಹೋಗಿದ್ದೆ. ಅಲ್ಲಿನ ವೆಂಕಟೇಶ್ವರನಿಗೆ ಅಭಯ ಹಸ್ತವೂ ಇದೆ. ಆ ಹಸ್ತದಲ್ಲಿ ನಿಜವಾದ ಕಮಲವನ್ನೇ ಇಡಲಾಗಿತ್ತು. ನಾನು ಕೈಮುಗಿದು ಬೇಡುವಾಗ "ಆ ಹೂವು ನನಗೆ ಕೊಡು ದೇವರೇ" ಎಂದು ಮನದಲ್ಲೇ ಬೇಡಿದ್ದೆ. ಬಳಿಕ ಇದನ್ನು ನನ್ನ ತಂಗಿಗೂ ಹೇಳಿದ್ದೆ. ಪವಾಡ ಎನ್ನುವಂತೆ ಆ ಹೂವು ಕೆಳಗೆ ಬಿತ್ತು. ಅರ್ಚಕರು ನೇರವಾಗಿ ಅದನ್ನು ನನಗೆ ತಂದುಕೊಟ್ಟರು. ನಾನು ಅಚ್ಚರಿಯಿಂದ ನನಗೇ ಯಾಕೆ ಕೊಡಬೇಕು ಅನಿಸಿತು ನಿಮಗೆ ಅಂತ ಕೇಳಿದೆ. "ಇದು ಇವತ್ತಿನ ಕೊನೆಯ ಪೂಜೆ ಆದ ಕಾರಣ ಈ ಅಲಂಕಾರವನ್ನೆಲ್ಲ ಹೇಗೂ ಈಗ ತೆಗೆಯಲಿದ್ದೇವೆ. ಹಾಗಾಗಿ ಕೆಳಗೆ ಬಿದ್ದ ಹೂವನ್ನು ಪ್ರಸಾದವಾಗಿ ಕೊಡಬೇಕು ಅಂದುಕೊಂಡೆ. ಅದರಲ್ಲೂ ನೀವು ದೂರದೂರಿನಿಂದ ಬಂದ ಹಾಗೆ ಕಾಣಿಸಿತು.‌ ಹಾಗಾಗಿ ನಿಮಗೇ ಕೊಟ್ಟೆ ಅಂದರು." ಆಗ ನಾನು ಮನಸಲ್ಲೇ ಬೇಡಿಕೊಂಡಿದ್ದಾಗಿ ಹೇಳಿದೆ. ಅದಕ್ಕೆ ಅವರು "ಇದು ಅಭಯಹಸ್ತ ವೆಂಕಟರಮಣ.‌ ಇಲ್ಲಿ ಬೇಡಿಕೊಂಡದ್ದೆಲ್ಲ ಸಿದ್ಧಿಸುವ ವಿಶೇಷತೆ ಇದೆ" ಎಂದಾಗ ಮತ್ತಷ್ಟು ಬೆರಗು ನನ್ನದಾಗಿತ್ತು. ಆ ಹೂವನ್ನು ಮನೆಗೆ ತಂದು ರೆಸಿನ್ ಆರ್ಟ್ ಮಾಡಿ ಮನೆಯಲ್ಲಿ ಫ್ರೇಮ್ ಹಾಕಿಟ್ಟಿದ್ದೀನಿ. ಇದು ನನಗೆ ಮರೆಯಲಾಗದ ಘಟನೆ.

sandalwood actress sukruta wagle

ಉತ್ತರದ ದೇವಸ್ಥಾನಗಳ ಬಗ್ಗೆ ನೀವು ಹೆಚ್ಚು ವಿವರಿಸಿಲ್ಲ ಯಾಕೆ?

ವೈಯಕ್ತಿಕವಾಗಿ ನನಗೆ ದಕ್ಷಿಣ ಭಾರತದಲ್ಲಿ ಸಿಗುವ ವೈಬ್ರೇಶನ್ ಉತ್ತರದಲ್ಲಿ ಸಿಕ್ಕಿಲ್ಲ. ಬಿಹಾರದ ಬನ್ ಕೆ ಬಿಹಾರಿ ಟೆಂಪಲ್‌ಗೆ ಹೋದಾಗಲೂ ಅಷ್ಟೇ. ಅದು ಕೃಷ್ಣ ಹುಟ್ಟಿದ ಜಾಗ. ಅಲ್ಲಿ ತುಂಬಾನೇ ಜನಜಂಗುಳಿ ಇತ್ತು. ಯಾರೂ ನೈರ್ಮಲ್ಯ ಕಾಪಾಡುತ್ತಿರಲಿಲ್ಲ. ಮಾತ್ರವಲ್ಲ, ಗರ್ಭಗುಡಿ ಕಾನ್ಸೆಪ್ಟ್ ಕೂಡ ಇಲ್ಲ. ಹಾಗೂ ತುಂಬಾನೇ ಕಮರ್ಷಿಯಲ್ ಆದ ರೀತಿ ನೀತಿ ಇತ್ತು. ದೇವರ ಮೂರ್ತಿ ಹತ್ತಿರ ಹೋದಾಗ ವೈಬ್ ಸಿಕ್ಕಿದ್ದೇನೋ ನಿಜ. ಆದರೆ ಮಂಗಳಕರವಾದ ಅನುಭವಂತೂ ಆಗಿಲ್ಲ.

ಪ್ರಾಕೃತಿಕ ರಮ್ಯ ತಾಣಗಳಿಗೆ ಪ್ರವಾಸ ಹೋಗಬೇಕು ಅನಿಸಿಲ್ಲವೇ?

ಹೋಗಿದ್ದೇನೆ. ಮಹಾರಾಷ್ಟ್ರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಡ್ರೈವ್ ಮಾಡಿಕೊಂಡು ಹೋಗುವುದೇ ಚಂದ. ಕಝಕಿಸ್ತಾನ್ , ನಾರ್ತ್ ಈಸ್ಟ್ ಸ್ಟೇಟ್ಸ್ ಗಳಿಗೂ ಹೋಗಿ ಸಂಭ್ರಮಿಸಿದ್ದೇನೆ.‌ ಆದರೆ ಪ್ರಕೃತಿ ವೈಭವ ನಮ್ಮೂರಲ್ಲೇ ಇದೆ. ಉಡುಪಿಯಲ್ಲೇ ಪ್ಯಾರಾಸೈಲಿಂಗ್, ಪ್ಯಾರಾಗ್ಲೈಡಿಂಗ್, ಸ್ಕೂಬಾ ಡೈವಿಂಗ್ ಎಲ್ಲವೂ ಮಾಡಿದ್ದೇನೆ. ಸ್ಕೈ ಡೈವಿಂಗ್ ಮಾಡಿಲ್ಲ.‌ ಮಾಡಬೇಕು ಅಂದುಕೊಂಡಿದ್ದೇನೆ.