ಸದ್ಯ ಶಿವರಾಜಕುಮಾರ ನಾಯಕರಾಗಿರುವ ʼಬೇಲ್‌ʼ ಸಿನಿಮಾದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಪವನ ಒಡೆಯರ್‌ ಸಿನಿಮಾ ಜರ್ನಿ ಗೊತ್ತಿರುವಂಥದ್ದೆ. ʼಗೂಗ್ಲಿʼ, ʼಗೋವಿಂದಾಯ ನಮʼ, ʼರಣವಿಕ್ರಮʼ ಸೇರಿದಂತೆ ಹಲವು ಹಿಟ್‌ ಸಿನಿಮಾಗಳಿಗೆ ಆಕ್ಷನ್‌ ಕಟ್‌ ಹೇಳಿದ ನಿರ್ದೇಶಕ. ಅದರೆ, ಅವರ ಜರ್ನಿ ಕಥೆ ಅಂದರೆ ಪ್ರವಾಸದ ಕಥೆಗಳ ಬಗ್ಗೆ ಹೆಚ್ಚು ಗೊತ್ತಿರಲು ಸಾಧ್ಯವಿಲ್ಲ. ಪ್ರವಾಸಿ ಪ್ರಪಂಚದ ಜತೆಗೆ ಮಾತನಾಡಿದ ಅವರು ಬರವಣಿಗೆ, ಪ್ರವಾಸ ಹಾಗೂ ಹಲವು ಕುತೂಹಲಕಾರಿ ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಅಕ್ಷತಾ ಪಾಂಡವಪುರ ಟ್ರಾವೆಲ್‌ ಸ್ಟೋರಿ

ಡ್ರೈವಿಂಗ್‌ ಮತ್ತು ಬರವಣಿಗೆ

ನನಗೆ ಪ್ರಯಾಣ ಮತ್ತೆ ಡ್ರೈವಿಂಗ್ ಎರಡು ಇಷ್ಟ. ನಾನು ಯಾವುದೇ ಸ್ಕ್ರಿಪ್ಟ್ ತೆಗೆದುಕೊಂಡು ಅದರ ಸ್ಕೆಲಿಟನ್ ಅನ್ನು ಪರಿಪೂರ್ಣವಾಗಿ ಮುಗಿಸುವುದೇ ಪ್ರಯಾಣದ ಸಮಯದಲ್ಲಿ. ನನ್ನ ಪ್ರಕಾರ ನಮ್ಮ ಚಲನೆಯ ವೇಗದಂತೆ ನಮ್ಮ ಮೆದುಳಿನ ಚಲನೆಯ ವೇಗವು ಇರುತ್ತದೆ. ನಾನು ಚಲಿಸುತ್ತಿದ್ದಂತೆಯೇ ನನ್ನ ಪಾತ್ರಗಳು ಕೂಡ ಹಾಗೆಯೆ ಚಲಿಸುತ್ತಲಿರುತ್ತದೆ. ಎಲ್ಲರ ಜೊತೆಗೆ ಕುಳಿತು ಕಥೆ ಬರೆಯುವುದು ಒಂದು ರೀತಿ. ಆದರೆ ಡ್ರೈವಿಂಗ್ ಮಾಡುತ್ತಾ ಹೋಗುತ್ತಿರುವಾಗ ಹೊಸ ಹೊಸ ಆಯಾಮಗಳಲ್ಲಿ ಯೋಚಿಸುತ್ತಾ ಅದರಲ್ಲೇ ಕಳೆದು ಹೋಗುತ್ತೇವೆ. ಆ ಫೀಲಿಂಗ್ ಪಾತ್ರವನ್ನು ನಮ್ಮಲ್ಲಿ ಜೀವಂತವಾಗಿಡುತ್ತದೆ. ನನಗೆ ಆ ಅಭ್ಯಾಸ ಇದೆ. ಬೇರೆಯವರಿಗೆ ಗೊತ್ತಿಲ್ಲ.

Untitled design - 2026-05-06T125656.042

ಹೋದ ಜಾಗಗಳೆಲ್ಲ ಅದ್ಭುತ

ಬೆಸ್ಟ್‌ ಟ್ರಾವೆಲ್‌ ಮೆಮೊರಿ ಎಂದು ಯಾವುದೋ ಒಂದು ಸ್ಥಳವನ್ನು ಗುರುತಿಸುವುದು ಕಷ್ಟ. ಏಕೆಂದರೆ ಹಾಗೆ ತುಂಬ ಜಾಗಗಳಿವೆ. ನಾನು ವರ್ಷಕ್ಕೆ ಎರಡು ಬಾರಿ ನನ್ನ ಕುಟುಂಬದ ಜತೆಗೆ ದೇವಸ್ಥಾನಗಳಿಗೆ ಹೋಗುತ್ತೇನೆ. ಇದು ಸಿಗಂದೂರಿನಿಂದ ಶುರುವಾಗುತ್ತದೆ. ಎಲ್ಲಾ ಕರಾವಳಿಯ ಭಾಗವನ್ನು ಮುಗಿಸಿಕೊಂಡು ಬರುತ್ತೇವೆ. ಅದು ಚೆನ್ನಾಗಿರುತ್ತದೆ. ಅದಾದಮೇಲೆ ಮಂತ್ರಾಲಯಕ್ಕೆ ಹೋಗುವುದು ಕೂಡ ಇರಬಹುದು. ಊಟಿಗೆ ಹೋಗುವ ಯೋಚನೆ ಇದೆ. ಆದರೆ ಸಮಯ ಸಿಗುತ್ತಿಲ್ಲ. ಸದ್ಯದಲ್ಲೇ ಶ್ರೀಲಂಕಾಕ್ಕೆ ಹೋಗಿ ಬಂದಿದ್ದೇವೆ. ಆದರೆ ನನಗೆ ವಿಮಾನ ಪ್ರಯಾಣ ಇಷ್ಟವಾಗುವುದಿಲ್ಲ. ಒಂದು ರೀತಿ ಕಟ್ಟಿ ಹಾಕಿ ಕೂರಿಸಿದಂತಾಗುತ್ತದೆ. ಹಾಗಾಗಿ ಪ್ರತಿ ಬಾರಿ ವಿಮಾನ ಪ್ರಯಾಣದ ಸಂದರ್ಭದಲ್ಲಿಯೂ ನಾನು ವೆಬ್ ಸೀರೀಸ್, ಡಿಬೇಟ್ ಅಂಥವುಗಳನ್ನೆಲ್ಲ ಡೌನ್ಲೋಡ್ ಮಾಡಿಕೊಂಡೇ ಹೋಗುತ್ತೇನೆ. ಸೌತ್ ಆಫ್ರಿಕಾಕ್ಕೆ ಹೋಗಿದ್ದೆ. ಅಲ್ಲಿ ಹೋದ ಮೇಲೆ ಚೆನ್ನಾಗಿರುತ್ತದೆ. ಆದರ ಅಷ್ಟು ದೂರ, ತುಂಬಾ ಸಮಯದ ವಿಮಾನ ಪ್ರಯಾಣ ಕಿರಿ ಕಿರಿ ಎನ್ನಿಸುತ್ತದೆ. ಅಮೆರಿಕ ಮತ್ತು ಸ್ವಿಟ್ಜರ್‌ಲ್ಯಾಂಡ್‌ಗೆ ಹೋಗಬೇಕು ಎಂಬ ಆಸೆಯಿದೆ. ಅಮೆರಿಕಕ್ಕೆ ವೀಸಾ ಬಂದಿದೆ. ಸ್ವಿಜರ್ಲ್ಯಾಂಡ್ ಗೆ ಹೋಗಬೇಕು.

ಹೆಂಡತಿ ಬೆಸ್ಟ್‌ ಕಂಪನಿ ಆದರೆ ಸೋಲೋಗೂ ಜೈ

ನನಗೆ ಒಬ್ಬನೇ ಟ್ರಾವೆಲ್‌ ಮಾಡುವುದು ಕೂಡ ಬಹಳ ಇಷ್ಟ. ಸೋಲೋ ಡ್ರೈವಿಂಗ್ ಅಂತೂ ತುಂಬ ಇಷ್ಟ. ಬೈಕ್‌ಗಳ ಕ್ರೇಜ್ ಕೂಡ ಇತ್ತು. ಆದರೆ ಈಗ ಕಾರು ಬಂದಮೇಲೆ ಕಾರಿನಲ್ಲಿ ಓಡಾಡಿ ಬೈಕ್ ಅಲ್ಲಿ ನಗರ ಪ್ರದೇಶದಲ್ಲಿ ಓಡಾಡುವುದು ಕಷ್ಟ ಎನಿಸಿದೆ. ಹೈವೇಯಲ್ಲಿ ಪ್ರಯಾಣ ಮಾಡುವ ಅವಕಾಶವಿದ್ದರೆ ಅಲ್ಲಿ ಬೈಕ್‌ ರೈಡ್‌ ಹೋಗಲು ಈಗಲೂ ಸಿದ್ಧನಿದ್ದೇನೆ. ಬೈಕ್‌ ರೈಡ್‌ ಹೋಗದೆ ಬಹಳ ಸಮಯ ಆಗಿದೆ. ಈಗ ಹೋಗಬೇಕು ಅನಿಸುತ್ತಿದೆ. ಕೆಲಸಕ್ಕಾಗಿ ಪ್ರಯಾಣ ಮಾಡುವ ಸಂದರ್ಭ ಬಂದರೆ ನನ್ನ ಬರಹಗಾರರ ತಂಡವೇ ನನಗೆ ಸಾಥ್‌ ನೀಡುತ್ತದೆ. ಅದು ಬಿಟ್ಟರೆ ನನ್ನ ಹೆಂಡತಿ, ನನ್ನ ಫ್ಯಾಮಿಲಿ ನನಗೆ ಪ್ರಯಾಣದಲ್ಲಿ ಬೆಸ್ಟ್‌ ಕಂಪನಿ.

ಪ್ರಪಂಚ ಇರೋದೇ ನೋಡೋಕೆ

ಟ್ರಾವೆಲ್ ಮಾಡಬೇಕು ಎಂದು ಯೋಚಿಸಿದವರಿಗೆ ಬೇಗ ಮಾಡಿ ಎಂದು ಹೇಳುತ್ತೇನೆ. ಟ್ರಾವೆಲ್ ಮಾಡದೇ ಇರುವವರಿಗೆ ಅದು ನಿಮ್ಮ ಋಣಾತ್ಮಕತೆ ಅಂತ ಹೇಳ್ತೀನಿ. ಏಕೆಂದರೆ ನೀವು ನಿಮ್ಮನ್ನ ನಾಲ್ಕು ಗೋಡೆಗಳ ಮಧ್ಯ ಬಂಧಿಸಿಕೊಳ್ಳುತ್ತಿದ್ದೀರ. ಭಗವಂತ ಇಷ್ಟೊಂದು ಸುಂದರವಾದ ಪ್ರಪಂಚವನ್ನು ಸೃಷ್ಟಿಸಿದ್ದಾನೆ. ಇದನ್ನ ನಾವು ನೋಡದೆ ಇದ್ದರೆ ಭಗವಂತನಿಗೆ ಮೋಸ ಮಾಡಿದ ಹಾಗೆ. ಪ್ರಪಂಚ ಇರೋದೆ ನೋಡೋದಿಕ್ಕೆ. ಅದನ್ನು ನೋಡದೆ ಇದ್ದರೆ ಹೇಗೆ. ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂದು ಹೇಳುತ್ತಾರಲ್ಲ ಹಾಗೆ ಎಲ್ಲ ಜಾಗಗಳನ್ನು ನೋಡುವ ಪ್ರಯತ್ನ ಮಾಡಬೇಕು, ನಿತ್ಯ ಹೊಸತನ್ನು ಕಲಿಯಬೇಕು.

Untitled design - 2026-05-06T125648.316

ಸಿನಿಮಾ & ಟೂರಿಸಂ ಅವಿನಾಭಾವ ಸಂಬಂಧ

ಸಿನಿಮಾ ಮತ್ತು ಟೂರಿಸಂ ನೋಡೋದಾದ್ರೆ ಸಾಮಾನ್ಯವಾಗಿ ಕಥೆ ಬರಿಯೋಕೆ ಅಂತ ಒಂದಿಷ್ಟು ಜಾಗಕ್ಕೆ ಹೋಗೋದು ಅಲ್ಲಿ ಏನೋ ಸಿಗೋದು ಉಂಟು. ಇಲ್ಲ ಅಂದ್ರೆ ಶೂಟಿಂಗ್ ಹೋದಾಗ ಅಥವಾ ಲೊಕೇಶನ್‌ ಹಂಟ್‌ ಮಾಡೋಕೆ ಅಂತ ಹೋದಾಗ ಅಲ್ಲಿ ಒಂದಿಷ್ಟು ಹೊಸ ಅನುಭವಗಳು ಸಿಗುತ್ತವೆ. ನನಗೆ ಸಿನಿಮಾ ಮಾಡುವುದರಲ್ಲಿ ತುಂಬಾ ಇಷ್ಟವಾದ ಭಾಗ ಲೊಕೇಶನ್ ಹುಡುಕುವುದು. ಅಲ್ಲಿ ಎಷ್ಟೋ ಹೊಸ ಕಥೆಗಳನ್ನು ಕೇಳಿ ನನ್ನ ಕಥೆಗೆ ಅದನ್ನು ಅಳವಡಿಸಿಕೊಳ್ಳುವುದು ಇರುತ್ತದೆ. ಸದ್ಯದಲ್ಲೇ ಹಿಮಾಚಲ ಪ್ರದೇಶಕ್ಕೆ ಹೋಗಿದ್ದೆ. ಅಲ್ಲಿನ ಬದಲಾಮುಖಿ ದೇವಸ್ಥಾನಕ್ಕೆ ಹೋದಾಗ ಅಲ್ಲಿನ ಸನ್ನಿವೇಶವನ್ನು ನನ್ನ ಮುಂದಿನ ಬೇಲ್ ಸಿನಿಮಾಕ್ಕೆ ಸೇರಿಸಿಕೊಳ್ಳುತ್ತಿದ್ದೇನೆ. ಬೇಲ್ ಸಿನಿಮಾ ಸುಮಾರಾಗಿ ಮುಗಿದಿದೆ. ಇನ್ನೊಂದು ಹತ್ತರಿಂದ ಹದಿನೈದು ದಿನ ಶೂಟಿಂಗ್ ಇದೆ. ಅಷ್ಟಾದರೆ ಶೂಟಿಂಗ್ ಮುಗಿಯುತ್ತದೆ. ಸದ್ಯಕ್ಕೆ ಬಿಳಿಯೂರಲ್ಲೇ ಶೂಟಿಂಗ್ ನಡೀತಾ ಇದೆ. ಮೇ ಮೊದಲನೆಯ ವಾರದಲ್ಲಿ ಹಿಮಾಚಲ ಪ್ರದೇಶದಲ್ಲಿ ಶೂಟಿಂಗ್‌ ಇದೆ.