ಚಿಕ್ಕಮಗಳೂರಿನವರಾದ ಶ್ವೇತಾ ಆರಾಧ್ಯ ಈಗ ಜಪಾನ್‌ ಕನ್ನಡತಿ. ಕಳೆದ ಕೆಲವು ವರ್ಷಗಳಿಂದಲೂ ಜಪಾನ್‌ನಲ್ಲಿ ನೆಲೆಸಿರುವ ಇವರು ತಮ್ಮ ವ್ಲಾಗ್‌ಗಳ ಮೂಲಕ ಕನ್ನಡಿಗರಿಗೆ ಜಪಾನ್‌ನ ಕಲೆ, ಸಂಸ್ಕೃತಿ, ಕೃಷಿ, ಆಹಾರ ಪದ್ಧತಿಗಳ ಮಾಹಿತಿ ನೀಡುತ್ತಿದ್ದಾರೆ. ಅಲ್ಲದೆ ಕರ್ನಾಟಕದ ವಿಶೇಷತೆಗಳನ್ನೂ ಜಪಾನಿ ಸ್ನೇಹಿತರಿಗೆ ತಿಳಿಹೇಳುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಜಪಾನ್‌ ಕನ್ನಡತಿಯಾಗಿಯೇ ಹೆಸರು ಮಾಡಿದ್ದೀರಿ. ಜಪಾನಿನ ವಾತಾವರಣದ ಕುರಿತು ತಿಳಿಸಿ.

ನಾನು ವಿವಾಹದ ನಂತರ ಪತಿಯ ಜತೆಗೆ ಜಪಾನ್‌ಗೆ ಹೋದವಳು. ವಿದೇಶ ಅಂತ ಹೇಳಿದ ಕೂಡಲೇ ನಮಗೆ ಒಂದು ಕುತೂಹಲ ಇರುತ್ತದೆ. ಅದೇ ರೀತಿ ನನಗೂ ಆ ಕುತೂಹಲವಿತ್ತು. ಜಪಾನಿನಲ್ಲಿ ಫ್ಲೈಟ್ ನಿಂದ ಇಳಿದು ಅಲ್ಲಿಂದ ಮನೆಗೆ ಹೋಗುವ ಹಾದಿಯ ಪರಿಸರ ಮೊದಲ ನೋಟಕ್ಕೇ ನನಗೆ ಖುಷಿಯೆನಿಸಿತು. ನಾನು ಚಿಕ್ಕಮಗಳೂರಿನವಳಾದ್ದರಿಂದ ಜಪಾನ್‌ ನೋಡಿದ ಕೂಡಲೇ ನನ್ನೂರಿನ ಅನುಭವ ಸಿಕ್ಕಿತ್ತು. ಕಾಲ ಕಳೆಯುತ್ತಲೇ ನಾನು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಾ ಹೋದೆ. ಜಪಾನ್‌ ನಲ್ಲಿ ಎಲ್ಲೇ ಪ್ರಯಾಣ ಮಾಡಬೇಕೆಂದರೂ ಮಾಹಿತಿಗಳು ತುಂಬಾ ಸುಲಭವಾಗಿ ದೊರೆಯುತ್ತದೆ. ಅದರಲ್ಲೂ ಒಬ್ಬರೇ ಧೈರ್ಯದಿಂದ ಪ್ರಯಾಣಿಸಬಹುದಾದ ಸ್ಥಳವದು. ಸಾರಿಗೆ ಸೌಲಭ್ಯವಂತೂ ಅದ್ಭುತವಾಗಿದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಜಪಾನ್ ಒಂದು ಶಿಸ್ತಿನ ದೇಶ.

ಇದನ್ನೂ ಓದಿ: ‘ವರ್ಷ’ ಪೂರ್ತಿ ಸಫಾರಿಗೆ ರೆಡಿ ಎನ್ನುವ ‘ಇಶಿತಾ’!

ಜಪಾನ್‌ ಪ್ರವಾಸಕ್ಕೆ ಹೋಗುವವರಿಗೆ ಅಲ್ಲಿನ ಆಹಾರ ಪದ್ಧತಿಯನ್ನು ಪರಿಚಯಿಸುವಿರಾ ?

ಜಪಾನ್‌ ಗೆ ಬರುವ ಪ್ರವಾಸಿಗರಿಗೆ ಆಹಾರದ ಸಮಸ್ಯೆಯಾಗುವುದು ಕಡಿಮೆ. ಯಾಕೆಂದರೆ ಇಲ್ಲಿ ಸಾಕಷ್ಟು ಇಂಡಿಯನ್ ರೆಸ್ಟೋರೆಂಟ್‌ಗಳಿವೆ. ಹಲವು ಜಪಾನಿ ರೆಸ್ಟೋರೆಂಟ್‌ಗಳು ವೆಜ್‌ ಆಹಾರಗಳನ್ನು ಉಣಬಡಿಸುತ್ತವೆ. ಹಾಗಾಗಿ ಸಸ್ಯಾಹಾರಿಗಳಿಗೆ ಯಾವುದೇ ತೊಂದರೆಗಳು ಆಗುವುದಿಲ್ಲ. ಇನ್ನೊಂದು ವಿಶೇಷವೆಂದರೆ ಅಲ್ಲಿನ ಕನ್ವೀನಿಯೆಂಟ್‌ ಸ್ಟೋರ್‌ಗಳಲ್ಲಿ ರೈಸ್‌ ಬಾಲ್‌, ಲಂಚ್‌ ಬಾಕ್ಸ್‌ ಸಹ ಸಿಗುತ್ತವೆ. ಬೆಳಗ್ಗೆ ಆತುರದಲ್ಲಿ ಕಚೇರಿಗೆ ಹೋಗುವವರಿಗೆ ಇದು ಸಹಕಾರಿಯಾಗಲಿದೆ. ಹಾಗಂತ ಅದು ಅನ್‌ ಹೆಲ್ದೀ ಬಾಕ್ಸ್‌ ಅಲ್ಲ, ಸಾಕಷ್ಟು ಪೋಷಕಾಂಶಯುಕ್ತ ಬಾಕ್ಸ್‌ ಅದಾಗಿರುವುದರಿಂದ ಟೇಸ್ಟ್‌ ಮಾಡಿದ ಮೊದಲ ಬಾರಿಗೆ ನನಗೂ ಇಷ್ವಾಯ್ತು.

Untitled design (43)

ಜಪಾನ್‌ ಕುರಿತು ಕಟೆಂಟ್‌ ಕ್ರಿಯೇಟ್‌ ಮಾಡುವ ಯೋಚನೆ ಬಂದಿದ್ದು ಹೇಗೆ?

ನಾನು ಕಂಟೆಟ್‌ ಕ್ರಿಯೇಷನ್‌ ಮಾಡಲು ಪ್ರಾರಂಭಿಸಿದ್ದು, ಜಪಾನ್‌ಗೆ ಹೋದ ನಂತರ. ಕರೋನ ಸಮಯದಲ್ಲಿ ಜಪಾನ್‌ನ ಪರಿಸ್ಥಿತಿ ಹೇಗಿದೆ ಅಂತ ತಿಳಿಯಲು ಹಲವರು ನನ್ನನ್ನು ಸಂಪರ್ಕಿಸುತ್ತಿದ್ದರು. ಹಾಗಾಗಿ ಎಲ್ಲರಿಗೂ ಪ್ರತ್ಯೇಕವಾಗಿ ಹೇಳುವ ಬದಲು, ಒಂದು ವಿಡಿಯೋ ಮೂಲಕ ಒಟ್ಟಿಗೆ ಮಾಹಿತಿ ಕೊಡೋಣವೆಂದು ವ್ಲಾಗ್‌ ಮಾಡಲು ಆರಂಭಿಸಿದೆ. ಹವ್ಯಾಸವಾಗಿ ಆರಂಭವಾದ ಈ ಪ್ರಯತ್ನ ಕನ್ನಡಿಗರ ಬೆಂಬಲದಿಂದ ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ.

ಜಪಾನ್‌ ನಲ್ಲಿ ಯಾವೆಲ್ಲಾ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದೀರಿ ?

ಜಪಾನ್‌ನ ಜನ ಹೆಚ್ಚಾಗಿ ಪ್ರಕೃತಿ ಮಧ್ಯೆ ಇರಲು ಇಚ್ಛೆಪಡುತ್ತಾರೆ. ಹಾಗಾಗಿ ಅಲ್ಲಿ 70 ಶೇ.ಹಸಿರು, ಕಾನನಗಳ ಸುಂದರವಾದ ಪ್ರಕೃತಿಯಿದೆ. ಅಲ್ಲಿ ನಾಲ್ಕು ಸೀಸನ್‌ಗಳಿದ್ದು, ಅದಕ್ಕೆ ತಕ್ಕಂತೆ ಪ್ರವಾಸಿ ತಾಣಗಳನ್ನು ಭೇಟಿ ನೀಡಬಹುದು. ಟೋಕಿಯೋಗೆ ಬಂದರೆ ಓಯನೋ ಪಾರ್ಕ್‌, ಯೋಗಿ ಪಾರ್ಕ್‌ ನೋಡಬಹುದು. ಅಸಾಕುಸಾ ಟೆಂಪಲ್‌ಗೆ ಪ್ರಮುಖವಾದುದು. ಜಪಾನಿಯರ ಸಂಸ್ಕೃತಿಯನ್ನು ತಿಳಿದುಕೊಳ್ಳಬೇಕು ಎಂದರೆ ಕಾಮಾಕುರಗೆ ಹೋಗಬೇಕು. ವಿಂಟರ್‌ನಲ್ಲಿ ಸುತ್ತಾಡಲು ನಾರ್ಥನ್‌ ಜಪಾನ್‌, ಅಕಿತ, ಅವಮುರಿ, ಯಮಗತ, ಹಿರೋಶೀಮಾ-ನಾಗಸಾಕಿಗೆ ಹೋಗಬಹುದು. ಶರತ್‌ ಕಾಲದಲ್ಲಿ ಬಂದರೆ ನಿಕ್ಕೋ ದಿ ಬೆಸ್ಟ್‌ ಪ್ರವಾಸಿ ತಾಣಗಳು.

ಜಪಾನ್‌ನಲ್ಲಿ ನಮ್ಮ ಹಬ್ಬಗಳನ್ನು ಆಚರಿಸುತ್ತೀರಾ?

ಖಂಡಿತ, ಭಾರತದ ಪ್ರಮುಖ ಹಬ್ಬಗಳನ್ನು ನಾವಲ್ಲಿ ಆಚರಿಸುತ್ತೇವೆ. ಅಲ್ಲಿ ಭಾರತೀಯರೇ ಇರುವ ಒಂದು ಸಮುದಾಯವಿದೆ. ಅಲ್ಲಿ ದೀಪಾವಳಿ, ದಸರಾ, ಯುಗಾದಿ ಸೇರಿದಂತೆ ಹಲವು ಹಬ್ಬಗಳನ್ನೂ ಎಲ್ಲರು ಸೇರಿ ಜತೆಯಾಗಿ ಆಚರಿಸುತ್ತೇವೆ. ಅದರಲ್ಲೂ ಕನ್ನಡಿಗರೆಲ್ಲಾ ಸೇರಿ ನಮ್ಮ ಕನ್ನಡ ರಾಜ್ಯೋತ್ಸವವನ್ನು ಬಹಳ ವಿಶೇಷವಾಗಿ ಆಚರಣೆ ಮಾಡುತ್ತೇವೆ. ಗಮನಿಸಬೇಕಿರುವ ಅಂಶವೆಂದರೆ ಆ ಆಚರಣೆಗಳಲ್ಲಿ ಜಪಾನಿಯರೂ ಭಾಗವಹಿಸುತ್ತಾರೆ. ಅವರಿಗೂ ನಮ್ಮ ಆಚರಣೆಗಳನ್ನು ಕಲಿಯುವುದು, ಅದರಲ್ಲಿ ಭಾಗವಹಿಸುವುದು ಇಷ್ಟವೆನಿಸುತ್ತದೆ.

Untitled design (41)

ಜಪಾನ್‌ನಲ್ಲಿ ಕನ್ನಡಿಗರನ್ನು ಕಂಡರೆ ನಿಮ್ಮ ರಿಯಾಕ್ಷನ್‌ ?

ನಮ್ಮವರಿಂದ, ನಮ್ಮ ದೇಶದಿಂದಲೇ ದೂರ ಉಳಿದಿರುವ ಸಂದರ್ಭದಲ್ಲಿ ವಿದೇಶಿ ನೆಲದಲ್ಲಿ ಕನ್ನಡ ಮಾತನಾಡುವವರನ್ನು ಕಂಡರಂತೂ ಅದರ ಖುಷಿಯೇ ಬೇರೆ. ಅಲ್ಲಿಗೆ ಹೋದ ಒಂದೆರಡು ವರ್ಷಗಳ ಕಾಲ ನನಗೆ ಮಾತಣಾಡುವುದಕ್ಕೆ ಅಲ್ಲಿ ಕನ್ನಡಿಗರು ಸಿಕ್ಕಿರಲಿಲ್ಲ. ನಂತರ ಭಾರತೀಯರ ಕಮ್ಯೂನಿಟಿ ಪರಿಚಯವಾಯಿತು. ಹಾಗಾಗಿ ಒಂದೆಡೆ ಕನ್ನಡಿಗರು ಮತ್ತೊಂದೆಡೆ ಭಾರತೀಯರು ಒಟ್ಟಾಗಲು ಸಹಕಾರಿಯಾಯಿತು.

ಜಪಾನ್‌ನಲ್ಲಿ ಸಾರಿಗೆ ವ್ಯವಸ್ಥೆ ಹೇಗಿದೆ ?

ಜಪಾನೀಯರು ಓಡಾಟಕ್ಕೆ ಹೆಚ್ಚಾಗಿ ಸಾರ್ವಜನಿಕ ಸಂಪರ್ಕ ವ್ಯವಸ್ಥೆಯನ್ನೇ ಬಳಸುತ್ತಾರೆ. ಅಲ್ಲಿ ಎಲ್ಲ ಕಡೆಗೂ ಮೆಟ್ರೋ ರೈಲು ಸಂಪರ್ಕ ಉತ್ತಮವಾಗಿದೆ. ಬಸ್‌ ಸೌಲಭ್ಯವೂ ಉತ್ತಮವಾಗಿದೆ. ಆದರೆ ಕೆಲವು ಹಳ್ಳಿ ಭಾಗಗಳಲ್ಲಿ ಬಸ್‌ ಸೌಲಭ್ಯ ಅಷ್ಟಾಗಿಲ್ಲ. ದೂರದ ಪ್ರಯಾಣಕ್ಕೆ ಬುಲೆಟ್‌ ಟ್ರೇನ್‌ ವ್ಯವಸ್ಥೆ ಇದೆ. ಹಾಗಾಗಿ ಸಂಚಾರಕ್ಕೆ ಯಾವ ತೊಂದರೆಗಳೂ ಆಗುವುದಿಲ್ಲ. ಇನ್ನು ಸೈಕಲ್‌ ಮತ್ತು ವಾಕಿಂಗ್‌ಗೆ ಪ್ರತ್ಯೇಕ ಮಾರ್ಗಗಳಿವೆ. ಅಲ್ಲಿನ ಜನರು ಸಂಚಾರದ ವೇಳೆಯಲ್ಲಿ ಹಾರನ್‌ ಮಾಡುವುದಿಲ್ಲ. ಸದ್ದುಗದ್ದಲಗಳಿಂದ ದೂರವಿರುತ್ತಾರೆ.

ಜಪಾನೀಯರ ಶಿಸ್ತಿನ ಜೀವನ ಹೇಗನಿಸಿತು ?

ಜಪಾನ್‌ನ ರಸ್ತೆಗಳೇ ಅವರ ಶಿಸ್ತುಬದ್ಧ ಜೀವನಕ್ಕೆ ಸಾಕ್ಷಿ. ಶರತ್‌ ಕಾಲದಲ್ಲಿ ಮರ-ಗಿಡಗಳಿಂದ ಉದುರುವ ಎಲೆಗಳನ್ನೂ ಸಹ ಅವರು ಪ್ರತಿದಿನವೂ ತೆರವುಗೊಳಿಸುತ್ತಾರೆ. ಯಾವುದೇ ಕಸವನ್ನು ಬೀದಿಯಲ್ಲಿ ಬಿಸಾಡುವುದಿಲ್ಲ. ಮನೆಗೆ ಮರಳಿದ ನಂತರ ಡಸ್ಟ್‌ಬಿನ್‌ಗಳಲ್ಲೇ ಅವುಗಳನ್ನು ಎಸೆಯುತ್ತಾರೆ. ಅಲ್ಲಿನ ಮಕ್ಕಳಿಗೆ ಆರಂಭದಿಂದಲೇ ಸ್ವಚ್ಛತೆ ಮತ್ತು ಸಂಚಾರದ ನಿಯಮಗಳ ಕುರಿತು ಹೇಳಿಕೊಡುತ್ತಾರೆ. ಇದು ಅಲ್ಲಿನ ಜನರು ಮುಂದಿನ ಪೀಳಿಗೆಯನ್ನು ಶಿಸ್ತಿನಿಂದ ಬೆಳೆಸುತ್ತಿರುವ ರೀತಿಯೆಂದರೂ ತಪ್ಪಾಗದು.

ಸೋಲೋ ಟ್ರಾವೆಲ್‌ ಮಾಡುವವರಿಗೆ ಜಪಾನ್‌ ಸೇಫ್‌ ಇದೆಯಾ?

ಖಂಡಿತವಾಗಿಯೂ ಹೌದು. ಜಪಾನ್‌ನಲ್ಲಿ ಯಾರು ಬೇಕಾದರೂ ಸೋಲೋ ಟ್ರಾವೆಲ್‌ ಮಾಡಬಹುದು. ಮಹಿಳೆಯರೂ ಇದಕ್ಕೆ ಹೊರತಾಗಿಲ್ಲ. ಕ್ರೈಂ ರೇಟ್‌ ತುಂಬಾ ಕಡಿಮೆ ಇರುವುದರಿಂದ ಯಾರೂ ಹೆದರುವ ಅವಶ್ಯಕತೆ ಇಲ್ಲಿಲ್ಲ.

Untitled design (42)

ಜಪಾನೀಯರೆಲ್ಲರೂ ನೋಡಲು ಒಂದೇ ಥರ ಇರುತ್ತಾರೆ. ಅವರನ್ನು ಗುರುತಿಸುವುದು ಕಷ್ಟವೆನಿಸಿಲ್ಲವೇ ?

ನನಗೆ ಅವರನ್ನು ಗುರುತಿಸುವುದು ಕಷ್ಟವೇನಲ್ಲ. ಆದರೆ ಅವರ ವಯಸ್ಸನ್ನು ಅಂದಾಜಿಸುವುದು ಬಹಳ ಕಷ್ಟ. ನೋಡಲು ಕಡಿಮೆ ವಯಸ್ಸಿನವರಂತೆ ಕಾಣಲು ಅವರ ಆಹಾರ ಪದ್ಧತಿಯೇ ಪ್ರಮುಖ ಕಾರಣವಾಗಿದೆ. ಹಿತ-ಮಿತವಾದ ಆಹಾರ ಸೇವನೆ, ನಿತ್ಯವೂ ವ್ಯಾಯಾಮ, ಕಾಲ್ನಡಿಗೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದರಿಂದ ಅವರು ಫಿಟ್‌ ಆಗಿರಲು ಸಾಧ್ಯವಾಗುತ್ತದೆ.

ಜಪಾನ್‌ನ ಕೃಷಿಯ ಕುರಿತು ಹೇಳುವಿರಾ?

ಜಪಾನ್‌ನಲ್ಲಿ ಭತ್ತದ ಗದ್ದೆಗಳು ಹೆಚಚಿಗೆ ಕಾಣಲುಸಿಗುತ್ತವೆ. ಅಲ್ಲಿನ ಯುವ ಜನತೆ ಕೃಷಿಯತ್ತ ಮುಖ ಮಾಡುವುದು ಕಡಿಮೆಯಾದ್ದರಿಂದ ಅವರನ್ನು ಪ್ರೋತ್ಸಾಹಿಸಲು ಸರಕಾರ ಅನೇಕ ಸವಲತ್ತುಗಳನ್ನು ನೀಡುತ್ತದೆ. ಕೃಷಿಯಲ್ಲಿ ಇಂದಿನ ತಂತ್ರಜ್ಷಾನಗಳ ಅಳವಡಿಕೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಪ್ರವಾಸಿಗರನ್ನೂ ಅದರತ್ತ ಸೆಳೆಯಲು ವಿಶೇಷ ರೈಲು ವ್ಯವಸ್ಥೆಯನ್ನೂ ಸರಕಾರವೇ ಕಲ್ಪಿಸಿದೆ. ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಸ್ಥಳಿಯ ಆಹಾರ, ಕಲೆ, ಸಂಸ್ಕೃತಿಯನ್ನು ತಿಳಿಯಲು, ಕೃಷಿ ಉತ್ಪನ್ನಗಳನ್ನು ಕೊಂಡುಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದಾರೆ.