• ಶಶಿಕರ ಪಾತೂರು

ಪರದೆ ಮೇಲೆ ಸಾಹಸ ಮಾಡುವ ನಾಯಕಿ ಮಾಲಾಶ್ರೀ. ಸಾಹಸಮಯ ಚಿತ್ರಗಳ ನಿರ್ಮಾಪಕ ರಾಮು. ಈ ದಂಪತಿಯ ಪುತ್ರಿ ಯುವನಟಿ ಆರಾಧನಾಗೆ ನಿಜ ಜೀವನದಲ್ಲಿ ಸಾಹಸಮಯ ಪ್ರವಾಸ ಅಂದರೆ ವಿಶೇಷ ಆಸಕ್ತಿ.

ನೀವು ಮೊದಲ ಬಾರಿ ಪ್ರವಾಸ ಹೋಗಿದ್ದು ಯಾವ ಊರಿಗೆ?

ನಾನು 2 ತಿಂಗಳ ಕಂದ ಆಗಿದ್ದಾಗಲೇ ಆಸ್ಟ್ರೇಲಿಯಾಗೆ ಹೋಗಿದ್ದೆ. ಅದು ನಮ್ಮ ತಂದೆಯ ನಿರ್ಮಾಣದ 'ಹಾಲಿವುಡ್' ಸಿನಿಮಾ‌ ಚಿತ್ರೀಕರಣದ ಸಂದರ್ಭ. ನನಗೆ ಆ ನೆನಪಿಲ್ಲವಾದರೂ ಅಂದಿನ ಫೊಟೋಗಳು ಈಗಲೂ ಅದು ನನ್ನ ಮೊದಲ ಪ್ರವಾಸ ಅಂತ ನೆನಪಿಸುತ್ತವೆ.

ನಿಮ್ಮ ನೆನಪಲ್ಲಿರುವ ಮೊದಲ ಪ್ರವಾಸ?

ನನಗೆ ನೆನಪಿರುವುದು ಅಂದರೆ 13 ವರ್ಷ ವಯಸ್ಸಿದ್ದಾಗ ಕುಟುಂಬ ಸಮೇತ ದುಬೈಗೆ ಬೆಳೆಸಿದಂಥ ಪ್ರಯಾಣ.‌ ನಮ್ಮ ಕಸಿನ್ಸ್ ಎಲ್ಲರೂ ಇದ್ದರು. ಈಗ ದುಬೈ ಪ್ರಯಾಣ ಅನ್ನೋದು ಸಾಮಾನ್ಯವಾಗಿದೆ. ಆದರೆ ಅಂದು ಅಲ್ಲಿನ ಮಾಲ್ ಸುತ್ತಾಡಿದ್ದು, ಶಾಪಿಂಗ್ ನಡೆಸಿದ್ದು ಎಲ್ಲವೂ ಅವಿಸ್ಮರಣೀಯ. ಶಾಲಾ ವಿದ್ಯಾರ್ಥಿಯಾಗಿದ್ದಾಗ ಊಟಿಗೆ ಪ್ರವಾಸ ಹೋಗಿದ್ದೆವು. ಫ್ರೆಂಡ್ಸ್ ಜತೆ ಹೋಗಿರುವ ಕಾರಣಕ್ಕೆ ಅದನ್ನು ಕೂಡ ಎಂದಿಗೂ ಮರೆಯಲಾರೆ.

aradhana 1

ಮರೆಯಲಾಗದ ಪ್ರವಾಸ ಅಂದರೆ ಯಾವುದು?

ತಂದೆ ನಿಧನವಾದ ಬಳಿಕ ನಾವು ಪ್ಯಾರಿಸ್ ಗೆ ಹೋಗಿದ್ದೆವು. ಕುಟುಂಬ ಸಮೇತ ಯುರೋಪ್, ಪ್ಯಾರಿಸ್ ಭೇಟಿ ಎನ್ನುವುದು ನಮ್ಮ ತಂದೆಯ ಕನಸಾಗಿತ್ತು. ಹಾಗಾಗಿ ಅವರ ಆಸೆಗಳನ್ನು ನಮ್ಮ ಮೂಲಕವಾದರೂ ಈಡೇರಲಿ ಎಂದು ನಾವು ಅವರ ಬರ್ತ್ ಡೇ ಸಂದರ್ಭ ಯುರೋಪ್ ಗೆ ಹೋಗಿದ್ದೆವು. ಅವರ ಹೆಸರಲ್ಲಿ ಕೇಕ್ ಕೂಡ ಕತ್ತರಿಸಿದೆವು. ಹಸಿರುಹಸಿರಾದ ತಂದೆಯ ನೆನಪುಗಳಿಂದಾಗಿ ಅದು ಭಾವನಾತ್ಮಕವಾಗಿ ಎಂದಿಗೂ ಮರೆಯದ ಪ್ರವಾಸವಾಗಿ ದಾಖಲಾಗಿದೆ.

ರಾಮು ಅವರೊಂದಿಗೆ ಮಾಡಿದಂಥ ಪ್ರವಾಸಗಳು?

ತಂದೆಯ ಜತೆ ಆಸ್ಟ್ರೇಲಿಯಾ, ಬ್ಯಾಂಕಾಕ್ ಮತ್ತು ದುಬೈ ಸುತ್ತಾಡಿದ್ದೇನೆ. ಆದರೆ ಮೈಸೂರಿಗೆ ಹೋದಷ್ಟು ಬೇರೆಲ್ಲೂ ಹೋಗಿಲ್ಲ ಅಂದುಕೊಂಡಿದ್ದೇನೆ. ಮೃಗಾಲಯ ವೀಕ್ಷಣೆ, ನಮ್ಮೂರು ಕುಣಿಗಲ್ ಗೆ ಹೋಗುವುದು ನಮಗೆ ಅಭ್ಯಾಸವಾಗಿತ್ತು.

ಇತ್ತೀಚೆಗೆ ಹೋದ ಪ್ರವಾಸದ ಬಗ್ಗೆ ಹೇಳ್ತೀರಾ?

ಇತ್ತೀಚೆಗೆ ರಾಜಸ್ಥಾನಕ್ಕೆ ಹೋಗಿದ್ದೆವು. ವಾಸ್ತವದಲ್ಲಿ ನಾವು ಮದುವೆಗೆ ಅಂತ ಹೋಗಿದ್ದೆವು. ಆದರೆ ಅಲ್ಲಿನ ಭೂಭಾಗ, ಮರುಭೂಮಿ ಮಧ್ಯ ಇರುವ ಸೂರ್ಯಘಡ ಹೊಟೇಲ್, ಅಲ್ಲಿನ ಆಹಾರ, ಸಂಸ್ಕೃತಿ ಎಲ್ಲವೂ ಅದನ್ನೊಂದು ಪ್ರವಾಸವಾಗಿ ಬದಲಾಯಿಸಿತು.

aradhana  2

ಪುಣ್ಯಕ್ಷೇತ್ರಗಳಿಗೆ ಪ್ರವಾಸ ಹೋಗಿರುವ ಅನುಭವಗಳೇನು?

ಬಾಲ್ಯದಲ್ಲಿ ನಾನು ಹೋದ ಮೊದಲ ದೊಡ್ಡ ದೇವಸ್ಥಾನವಾಗಿ ನೆನಪಿರೋದು ಅಂದರೆ ಮೈಸೂರು ಚಾಮುಂಡೇಶ್ವರಿ ಕ್ಷೇತ್ರ. ದೇವಸ್ಥಾನಗಳಲ್ಲಿ ಬಹುಶಃ ತಿರುಪತಿಗೇನೇ ಅತಿ ಹೆಚ್ಚು ಭೇಡಿ ನೀಡಿದ್ದೇವೆ. ನಮ್ಮ ಮನೆ ದೇವರು ವೆಂಕಟೇಶ್ವರ ಸ್ವಾಮಿ. ಹೀಗಾಗಿ ತುಂಬ ಸಲ ಪಾದಯಾತ್ರೆಯಲ್ಲೇ ಬೆಟ್ಟ ಏರಿದ್ದೇವೆ. ಶಿರಡಿಯ ಬಾಬಾ, ಮಂಗಳೂರಿನಲ್ಲಿ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ದೇವಾಲಯಗಳಿಗೂ ಹೋಗುತ್ತಿರುತ್ತೇವೆ. ಉತ್ತರದಲ್ಲಿ ವಾರಾಣಸಿ, ಕಾಶಿ, ಕಾಮಾಕ್ಯಗೆ ಹೋಗಿದ್ದೇವೆ‌. ಎಲ್ಲ ಜ್ಯೋತಿರ್ಲಿಂಗಗಳನ್ನು, ಸಾಧ್ಯವಾದಷ್ಟು ಶಕ್ತಿಪೀಠಗಳನ್ನು ನೋಡುವ ಆಸೆ ಇದೆ.

ಸ್ಟಾರ್ ನಟಿಯ ಪುತ್ರಿಯಾದ ನಿಮಗೆ ಬೆಟ್ಟಕ್ಕೆ ಪಾದಯಾತ್ರೆ ಮಾಡೋದು ಎಷ್ಟು ಚಾಲೆಂಜ್ ಅನಿಸಿತ್ತು?

ಅದು ನಾನೇ ಹಾಕಿಕೊಂಡ ಯೋಜನೆ. ವರ್ಷಗಳ ಹಿಂದೆ ನನ್ನ ಜನ್ಮದಿನಕ್ಕೆ ನಾನೇ ಅಂಥದೊಂದು ಹರಕೆ ಹೇಳಿಕೊಂಡು ಬೆಟ್ಟ ಹತ್ತತೊಡಗಿದೆ. ಕಾರಣ ವೆಂಕಟೇಶ್ವರ ಸ್ವಾಮಿಯೇ ನನ್ನ ನಡೆದುಕೊಂಡು ಬಾ ಎಂದು ಕರೆದ ಹಾಗಿತ್ತು.ಅಷ್ಟೊಂದು ಭಕ್ತಿ ನನ್ನಲ್ಲಿ ತುಂಬಿರುವಾಗ ಚಪ್ಪಲಿ ಇರದೆ ಅಷ್ಟೊಂದು ದೂರ ನಡೆದರೂ ನನಗೆ ಯಾವುದೇ ರೀತಿ ಕಷ್ಟ ಅನಿಸಲಿಲ್ಲ.

ತಾಯಿಯ ಸಿನಿಮಾ ಪಾತ್ರಗಳಂತೆ ನಿಮಗೂ ಅಡ್ವೆಂಚರಸ್ಸಾಗಿ ಮುನ್ನುಗ್ಗೋದು ಇಷ್ಟವೇ?

ಅಮ್ಮ ಸಿನಿಮಾದ ಪಾತ್ರಗಳಲ್ಲಿ ಮಾತ್ರ ಅಡ್ವೆಂಚರಸ್. ಆದರೆ ನನಗೆ ಬಾಲ್ಯದಿಂದಲೇ ರೋಲರ್ ಕೋಸ್ಟರ್ ರೈಡ್ ಮಾಡುವುದು ಇಷ್ಟ. ಜಗತ್ತಿನಲ್ಲೇ ಅತಿವೇಗದ ರೋಲರ್ ಕೋಸ್ಟರ್ ಇರುವ ಅಬುಧಾಬಿಯ ಫೆರಾರಿ ವರ್ಲ್ಡ್ ನಲ್ಲಿ ತುಂಬ ಸಲ ಸವಾರಿ ಮಾಡಿದ್ದೇನೆ. ಹಾಂಗ್ ಕಾಂಗ್ ನ ಡಿಸ್ನಿಲ್ಯಾಂಡ್ ನಲ್ಲಿ ಕೂಡ ರಿಸ್ಕಿ ರೈಡ್ಸ್ ಎಲ್ಲ ಮಾಡಿದ್ದೇನೆ. ನನಗೂ ಆತಂಕ ಆಗುತ್ತೆ. ಆದರೆ ಅದನ್ನು ಎಂಜಾಯ್ ಮಾಡುತ್ತೇನೆ.

aradhana

ಪ್ರವಾಸದಲ್ಲಿ ನಿಮಗೆ ತುಂಬ ಖುಷಿ ನೀಡುವುದೇನು?

ನನ್ನ ಪ್ರವಾಸದ ಖುಷಿ ವಿಮಾನ ಪ್ರಯಾಣದಿಂದಲೇ ಆರಂಭವಾಗುತ್ತದೆ. ಬೇರೆ ಬೇರೆ ಭಾಗದ ಸಂಸ್ಕೃತಿ, ಹೊಸ ಜನಗಳ ಪರಿಚಯ, ಆಹಾರ ಎಲ್ಲವನ್ನೂ ನೇರವಾಗಿ ಅನುಭವಿಸಲು ಪ್ರವಾಸ ಮಾಡಲೇಬೇಕು. ನಾವು ಮನುಷ್ಯರಾಗಿ ಬೆಳೆಯಲು ಪ್ರವಾಸ ಹೆಚ್ಚು ಸಹಾಯ ಮಾಡುತ್ತೆ ಅಂತ ನನ್ನ ನಂಬಿಕೆ.

ಪ್ರವಾಸದ ಸಂದರ್ಭದಲ್ಲಿ ನಡೆದ ತಮಾಷೆಯ ಘಟನೆಗಳೇನಾದರೂ ಇವೆಯೇ?

'ಕಾಟೇರ' ರಿಲೀಸಾದ ಬಳಿಕ ಮತ್ತೊಮ್ಮೆ ಫ್ಯಾಮಿಲಿ ಜತೆ ಪ್ಯಾರಿಸ್ ಗೆ ಹೋಗಿದ್ದೆ. ನಾವಿದ್ದ ಹೊಟೇಲ್ ಹತ್ತಿರದಲ್ಲೇ ಹೊಸ ವರ್ಷದ ಫೈರ್ ವರ್ಕ್ಸ್ ಸೆಟಪ್ ಇತ್ತು. ಮೂರು ನಾಲ್ಕು ಗಂಟೆ ಕ್ಯೂನಲ್ಲಿ ನಿಂತು ಬ್ಯಾರಿಕೇಡ್ ಹತ್ತಿರ ತಲುಪಿ ನೋಡಿದರೆ 9 ಗಂಟೆ ಅಷ್ಟೇ ಆಗಿತ್ತು. 12 ಗಂಟೆಗೆ ಫೈರ್ ವರ್ಕ್ಸ್ ಆಗಿರುವ ಕಾರಣ ಅಲ್ಲಿಂದ ಮತ್ತೆ ಹೊಟೇಲ್ ಗೆ ವಾಪಸಾದೆವು. ಆದರೆ ಆಗ ಗೊತ್ತಾಗಿದ್ದೇನೆಂದರೆ ಹೊಟೇಲ್ ನ ಮತ್ತೊಂದು ಪಕ್ಕದಿಂದ ನೋಡಿದರೆ ಅಲ್ಲಿಂದಲೇ ಹತ್ತಿರದ ದಾರಿ ಇತ್ತು. ಯಾವುದೇ ಕ್ಯೂ ಇಲ್ಲದೆ ಫೈರ್ ಶೋ ನೋಡಲು ಸಾಧ್ಯವಾಗಿತ್ತು. ಅದುವರೆಗೆ ಐದಾರು ಗಂಟೆ ಪಟ್ಟ ಕಷ್ಟ, ಸೆಕ್ಯೂರಿಟಿ ಚೆಕಪ್ ಎಲ್ಲವೂ ಆನಂತರ ತಮಾಷೆ ಅನಿಸಿತ್ತು.