ಆರೋಗ್ಯ ನಿಮ್ಮೊಳಗೇ ಇರುವಂಥದ್ದು. ಅದನ್ನು ಕಂಡುಕೊಳ್ಳಿ -ಶ್ರದ್ಧಾ ಅಮಿತ್
ಪ್ರಕೃತಿ ಚಿಕಿತ್ಸೆ ಎಂದರೆ ನಿಮ್ಮನ್ನು ನೀವು ದಂಡಿಸಿಕೊಳ್ಳುವುದು! ಇದು ನಿಜವಲ್ಲ. ಆರೋಗ್ಯಕರ ಆಹಾರ ಆಯ್ಕೆಗಳನ್ನು ಮಾಡಿಕೊಳ್ಳುವುದು ಮತ್ತು ಶಾಶ್ವತವಾಗಿ ಒಂದು ಹೆಲ್ದೀ ಆಹಾರ ಪದ್ಧತಿಗೆ ಹೊಂದಿಕೊಳ್ಳುವುದು ವೆಲ್ ನೆಸ್. ಅನಾರೋಗ್ಯದ ಲಕ್ಷಣಗಳಿಗೆ ಚಿಕಿತ್ಸೆ ನೀಡುವ ಬದಲು, ವೆಲ್ ನೆಸ್ ಮೂಲಕ ರೋಗಕ್ಕೆ ಕಾರಣವಾಗುವ ವಿಷಯಗಳನ್ನೇ ಇಲ್ಲದಂತೆ ತೆಗೆದುಹಾಕುವುದು, ವೆಲ್ ನೆಸ್ ನ ಹಿರಿಮೆ. ಇದು ಶಾರ್ಟ್ ಕಟ್ ಅಲ್ಲ. ಅಲ್ಪಾವಧಿಯ ವಿಷಯವೂ ಅಲ್ಲ.
ಕ್ಷೇಮವನದಲ್ಲಿ ಅಷ್ಟೊಂದು ಪಾಸಿಟಿವ್ ವೈಬ್ಸ್ ಕಾಣಿಸುತ್ತಿದ್ದರೆ, ಅದಕ್ಕೆ ಅತ್ಯಂತ ಪ್ರಮುಖ ಕಾರಣ ಶ್ರೀಮತಿ ಶ್ರದ್ಧಾ ಅಮಿತ್. ಇಡೀ ಸಿಬ್ಬಂದಿ ವರ್ಗ, ವೈದ್ಯರ ತಂಡ ಮತ್ತು ಕ್ಷೇಮವನಕ್ಕೆ ಬರುವ ಅತಿಥಿಗಳನ್ನು ಅತ್ಯಂತ ಆಪ್ತತೆಯಿಂದ ಮಾತನಾಡಿಸುವ, ಇದರ ಜೊತೆಗೆ ಇಡೀ ಕ್ಷೇಮವನವನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಶ್ರದ್ಧಾ ಅವರಿಗೆ ಬಹುಶಃ ಅವರ ತಂದೆಯವರಿಂದ ಮತ್ತು ಮಾತೃಶ್ರೀಯವರಿಂದ ಬಂದ ಬಳುವಳಿ.
ಪ್ರವಾಸಿ ಪ್ರಪಂಚ ತಂಡದೊಂದಿಗೆ ಮನಬಿಚ್ಚಿ ಮಾತನಾಡಿದ ಶ್ರದ್ಧಾ ಅಮಿತ್ ತಮ್ಮ ಸರಳತೆಯಿಂದ ಮತ್ತು ಪ್ರಬುದ್ಧ ಆಲೋಚನೆಯಿಂದ ಸಹಸ್ರಾರು ಜನರ ಮನಗೆದ್ದವರು. ಅದೇ ರೀತಿ ಸಮಾಜಸೇವೆ, ಮಹಿಳಾ ಸಬಲೀಕರಣದ ಜತೆ ಕ್ಷೇಮವನವನ್ನು ಕೇವಲ ಮೂರೇ ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ ಮನೆಮಾತಾಗಿಸಿರುವವರು.
ಶ್ರದ್ಧಾ ಅಮಿತ್ ಅವರೊಡನೆ ಪ್ರವಾಸಿ ಪ್ರಪಂಚ ನಡೆಸಿದ ಕಿರುಸಂದರ್ಶನ ಇಲ್ಲಿದೆ.
ವೆಲ್ ನೆಸ್ ರಿಟ್ರೀಟ್ ಅಂದರೆ ಅದು ಶ್ರೀಮಂತರಿಗೆ ಮಾತ್ರ ಎಂಬ ಅಭಿಪ್ರಾಯ ಇದೆ. ಇದು ಎಲ್ಲರಿಗೂ ನಿಲುಕುವಂಥದ್ದು ಹಾಗೂ ಎಲ್ಲರಿಗೂ ಬೇಕಿರುವಂಥದ್ದು ಅಲ್ಲವೇ? ಹೇಗೆ ಇದು ಜನಸಾಮಾನ್ಯರಿಗೆ ತಲುಪುವಂತೆ ಮಾಡುತ್ತೀರಿ?
ಇಂದಿನ ವೇಗದ ಜಗತ್ತಿನಲ್ಲಿ, ವೆಲ್ ನೆಸ್ ಅನ್ನೋದು ಲಕ್ಸುರಿ ಖಂಡಿತ ಅಲ್ಲ. ಇದು ಪ್ರತಿ ಮನುಷ್ಯನ ಅಗತ್ಯ. ನಲವತ್ತು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನ್ಯಾಚುರೋಪಥಿ ಇನ್ ಸ್ಟಿಟ್ಯೂಟ್ ಪ್ರಾರಂಭ ಮಾಡಿದಾಗ ನಮಗಿದ್ದದ್ದು ಅದೇ ಗುರಿ. ವೆಲ್ ನೆಸ್ ಅನ್ನೋದು ಎಲ್ಲರಿಗೂ ನಿಲುಕುವಂತೆ ಆಗಬೇಕು, ನಿಭಾಯಿಸಲು ಆಗುವಷ್ಟು ಕಡಿಮೆ ಬೆಲೆಯಲ್ಲಿ ಸಿಗಬೇಕು ಎಂಬುದು. ಇಷ್ಟಕ್ಕೂ ಇಲ್ಲಿ ಮುಖ್ಯವಾಗಿ ನಾವು ಮಾಡ್ತಾ ಇರೋದೇನು ಹೇಳಿ. ಜೀವನ ಶೈಲಿಯಲ್ಲಿ ಬದಲಾವಣೆ ತರೋದು. ಅದರ ಜತೆಗೆ ನಮ್ಮದೇ ಪುರಾತನ ಪದ್ಧತಿಗಳಾದ ಯೋಗ, ಧ್ಯಾನ, ಪ್ರಾಣಾಯಾಮ, ಸರಳ ಆಹಾರ ಇವುಗಳನ್ನು ಅಭ್ಯಾಸ ಮಾಡಿಸೋದು. ಪ್ರಕೃತಿ ಬಯಸೋ ಹಾಗೆ ಬದುಕೋದನ್ನು ಕಲಿಸೋದು. ಇಲ್ಲಿ ಕೆಲವು ದಿನಗಳಲ್ಲಿ ಕಲಿತಿದ್ದನ್ನು ಅವರು ಜೀವನಪರ್ಯಂತ ಅಭ್ಯಾಸವನ್ನಾಗಿ ಮಾಡಿಕೊಂಡರೆ, ಆರೋಗ್ಯಕರ ಜೀವನಶೈಲಿ ರೂಢಿಸಿಕೊಂಡರೆ ಅವರ ಬದುಕು ಅದ್ಭುತವಾಗುತ್ತದೆ. ಕ್ಷೇಮವನದಲ್ಲಿ ಪ್ರತಿ ಆರ್ಥಿಕ ವರ್ಗಕ್ಕೂ ಹೊಂದುವಂಥ ಚಿಕಿತ್ಸಾ ಪ್ಯಾಕೇಜ್ ಗಳಿವೆ. ಎಲ್ಲರಿಗೂ ಇದು ತಲುಪಬೇಕು ಎಂಬುದೇ ನಮ್ಮ ಉದ್ದೇಶ.

ಕ್ಷೇಮವನದ ಮುಖ್ಯಸ್ಥರಾಗಿ ನೀವು ಇಲ್ಲಿಯ ತನಕ ಎದುರಿಸಿದ ಅತ್ಯಂತ ದೊಡ್ಡ ಸವಾಲು ಯಾವುದು? ಅತ್ಯಂತ ಸಾರ್ಥಕ ಅನಿಸಿದ ಕ್ಷಣ ಯಾವುದು?
ಉತ್ಕೃಷ್ಟ ಗುಣಮಟ್ಟದ ಸೇವೆಯನ್ನೂ ಕೊಡಬೇಕು. ಅದೇ ಹೊತ್ತಿಗೆ ಎಲ್ಲರಿಗೂ ಭರಿಸಲು ಸಾಧ್ಯ ಆಗುವಂಥ ಸೇವೆಯನ್ನೂ ಕೊಡಬೇಕು. ಇದು ನಿಜಕ್ಕೂ ಸವಾಲು. ಆದರೆ ಇಂದಿನ ಜನತೆ ಆರೋಗ್ಯಕ್ಕೆ, ಹೆಲ್ದೀ ಲೈಫ್ ಸ್ಟೈಲ್ ಗೆ ಪ್ರಾಮುಖ್ಯ ಕೊಡ್ತಾ ಇದ್ದಾರೆ. ಹೀಗಾಗಿ ಕ್ಷೇಮವನದ ಧ್ಯೇಯೋದ್ದೇಶ ಗೆಲ್ಲುತ್ತಿದೆ. ಇದರ ಜತೆಗೆ ನಾವು ಹೊಸ ಹೊಸ ಆಲೋಚನೆಗಳನ್ನು ಮತ್ತು ತಂತ್ರಗಳನ್ನು ಸೇರಿಸಿ, ಚಿಕಿತ್ಸೆಯ ಗುಣಮಟ್ಟ ಹೆಚ್ಚಿಸಬೇಕಾಗಿದೆ. ಈಗ ನಾವು ಮೂರನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ನಮ್ಮಲ್ಲಿ ಒಮ್ಮೆ ಬಂದ ಸಾಧಕರು ಮತ್ತೆ ಮತ್ತೆ ಇಲ್ಲಿ ತಂಗುವುದಕ್ಕೆ ಬರುತ್ತಿದ್ದಾರೆ. ಕೆಲವರಂತೂ ಕ್ಷೇಮವನವನ್ನೇ ತಮ್ಮ ಬದುಕಿನ ಭಾಗ ಮಾಡಿಕೊಂಡಿದ್ದಾರೆ. ಇವೆಲ್ಲವೂ ನನಗೆ ಸಾರ್ಥಕ ಕ್ಷಣಗಳು ಎಂದನಿಸುತ್ತದೆ.
ವೆಲ್ ನೆಸ್ ಟೂರಿಸಂ ಈಗ ಬಹಳ ವೇಗವಾಗಿ ಬೆಳೆಯುತ್ತಾ ಇದೆ. ಮುಂದಿನ ಐದರಿಂದ ಹತ್ತು ವರ್ಷಗಳಲ್ಲಿ ಕ್ಷೇಮವನದ ಬೆಳವಣಿಗೆಯನ್ನು ಹೇಗೆ ನೋಡುತ್ತಿದ್ದೀರಿ?
ಜನರಲ್ಲಿ ಆರೋಗ್ಯದ ಬಗ್ಗೆ, ಜೀವನ ಶೈಲಿ ಬಗ್ಗೆ, ಆರೋಗ್ಯಕರ ಅಭ್ಯಾಸಗಳ ಬಗ್ಗೆ ಅರಿವು ಹೆಚ್ಚಾಗ್ತಾ ಇದೆ. ಅದರಲ್ಲೂ ಕೋವಿಡ್ ನಂತರ ಇನ್ನೂ ಜಾಗೃತರಾಗಿದ್ದಾರೆ. ವೆಲ್ ನೆಸ್ ಟೂರಿಸಂ ಒಂದು ಟ್ರೆಂಡ್ ಎಂಬಂತಾಗಿದೆ. ಹೀಗಿರುವಾಗ ನಾವು ಹೊಸ ಹೊಸ ಸವಾಲುಗಳನ್ನು ಎದುರಿಸೋದಕ್ಕೆ ಸಿದ್ಧರಿರಬೇಕಾಗುತ್ತದೆ. ಹೊಸ ಐಡಿಯಾಗಳನ್ನು, ಹೊಸ ವಿಧಾನಗಳಾನ್ನು ಅಳವಡಿಸಿಕೊಂಡು ಸಾಧಕರಿಗೆ ಅತ್ಯುತ್ತಮ ರಿಸಲ್ಟ್ ನೀಡಬೇಕಾಗುತ್ತದೆ. ಆ ನಿಟ್ಟಿನಲ್ಲಿ ನಾವು ದುಡಿದಲ್ಲಿ ಕ್ಷೇಮವನ ಇನ್ನಷ್ಟು ಎತ್ತರಕ್ಕೆ ಏರುವುದು ಖಚಿತ.
ನೀವು ವೆಲ್ ನೆಸ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದೀರಿ. ನಿಮ್ಮ ವೈಯಕ್ತಿಕ ಬದುಕಿನಲ್ಲಿ ಈ ವಿಧಾನವನ್ನು ಹೇಗೆ ಅಳವಡಿಸಿಕೊಂಡಿದ್ದೀರಿ?
ನ್ಯಾಚುರೋಪಥಿ ವಿಧಾನ ನಾನು ಕ್ಷೇಮವನ ಪ್ರಾರಂಭವಾದ ನಂತರ ನೋಡಿರುವುದಲ್ಲ. ನಾನು ಹಲವಾರು ವರ್ಷಗಳಿಂದ ನ್ಯಾಚುರೋಪಥಿ ಸಮೂಹದಲ್ಲೇ ಬೆಳೆದುಬಂದವಳು. ಹೀಗಾಗಿ ನನ್ನ ಜೀವನಶೈಲಿಯಲ್ಲಿ ಕೆಲವು ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡು ಆರೋಗ್ಯ ಮತ್ತು ಸಂತೋಷ ನನ್ನದಾಗಿಸಿಕೊಂಡಿದ್ದೇನೆ. ಇಲ್ಲಿನ ಹಲವಾರು ಪರಿಕಲ್ಪನೆಗಳನ್ನು ನಾನು ನನ್ನ ಜೀವನದಲ್ಲೂ ಅಳವಡಿಸಿಕೊಂಡಿದ್ದೇನೆ. ಫಾಸ್ಟ್ ಫುಡ್ ದೂರವಿಟ್ಟು ಸಾತ್ವಿಕ ಊಟ ಸೇವಿಸ್ತಿದ್ದೇನೆ. ಒಂದಷ್ಟು ವ್ಯಾಯಾಮ, ಸರಿಯಾದ ನಿದ್ದೆ ಇವೆಲ್ಲದರ ಒಂದು ಸರಳ ಟೈಮ್ ಟೇಬಲ್ ಇದ್ದರಾಯ್ತು. ನನ್ನ ದೇಹ ಮತ್ತು ಮನಸು ಆರೋಗ್ಯವಾಗಿರೋದಕ್ಕೆ ಏನು ಮಾಡಬೇಕು ಎಂಬ ಸ್ಪಷ್ಟತೆ ಇದ್ದರೆ ಸಾಕು. ಅದು ನನಗಿದೆ.
ಕ್ಷೇಮವನದ ವಾಸ್ತು, ಆಹಾರ ಮತ್ತು ಜೀವನಶೈಲಿ ಇವುಗಳ ಸಸ್ಟೇನಬಲಿಟಿ ಎಷ್ಟು ಮುಖ್ಯವಾಗುತ್ತೆ?
ಇಡೀ ಯೋಜನೆಯನ್ನು ನಾವು ಯೋಜಿಸಿರುವ ರೀತಿಯಲ್ಲಿ ಸುಸ್ಥಿರತೆಯು ಒಂದು ಪ್ರಮುಖ ಅಂಶ. ಕ್ಷೇಮವನದಲ್ಲಿ ನೀವು ಪ್ರಮುಖವಾಗಿ ಕಾಣೋದು ಸ್ಥಳೀಯ ವಸ್ತುಗಳ ಬಳಕೆ. ಇಲ್ಲಿನ ಹೆಂಚುಗಳಿಂದ ಹಿಡಿದು ಬಟ್ಟೆಯವರೆಗೆ, ಸ್ಥಳೀಯ ಕುಶಲಕರ್ಮಿಗಳಿಂದ ತಯಾರಿಸಲ್ಪಟ್ಟ ಪೀಠೋಪಕರಣಗಳವರೆಗೆ ಎಲ್ಲವನ್ನೂ ಒಮ್ಮೆ ಗಮನಿಸಿ. ಇದು ತಂತಾನೇ ಒಂದು ಆಪ್ತ ವಾತಾವರಣ ಸೃಷ್ಟಿ ಮಾಡುತ್ತದೆ. ಇಲ್ಲಿ ಅನೇಕ ಕಲಾಕೃತಿಗಳು ಮತ್ತು ಕೆಲವು ಪೀಠೋಪಕರಣಗಳು ಹಳೆಯದು. ಬಳಕೆಯಲ್ಲಿಲ್ಲದ ಅಥವಾ ತ್ಯಾಜ್ಯವೆಂದು ಪರಿಗಣಿಸಲಾದ ಪ್ರಾಚೀನ ವಸ್ತುಗಳನ್ನು ಬಳಸಿ ಇಲ್ಲಿ ಅಲಂಕಾರ ಮಾಡಿದ್ದೇವೆ. ಅನೇಕ ಪ್ರಾಚೀನ ಬಾಗಿಲುಗಳು ಮತ್ತು ಕಿಟಕಿ ಚೌಕಟ್ಟುಗಳನ್ನು ಟೇಬಲ್‌ಗಳು, ದೀಪಗಳು ಇಲ್ಲಿ ಕಲಾಕೃತಿಗಳಾಗಿ ಮರುಬಳಕೆ ಯಾಗಿದೆ. ಇದು ಇಲ್ಲಿನ ವಿನ್ಯಾಸದ ಭಾಗ ಅನ್ನಬಹುದು. ಇನ್ನು ಆಹಾರ ಮತ್ತು ಜೀವನಶೈಲಿ ಯಾವತ್ತಿಗೂ ಪ್ರಸ್ತುತವೇ. ಯಾಕಂದ್ರೆ ಇದು ಆರೋಗ್ಯಕ್ಕೆ ಪೂರಕವಾಗಿರೋದು. ನಮ್ಮಲ್ಲಿಯೇ ಸಾವಯವ ಆಹಾರಗಳನ್ನೂ ಬೆಳೆಯುತ್ತಿದ್ದೇವೆ. ಜತೆಗೆ ವಸ್ತುವಿನ ಮರುಬಳಕೆಯನ್ನು ಉತ್ತೇಜಿಸುತ್ತಾ ಇದ್ದೇವೆ.
ಕೋವಿಡ್ ಅವಧಿಯ ನಂತರ ಜನರಲ್ಲಿ ಆರೋಗ್ಯದ ಬಗ್ಗೆ ಇರುವ ದೃಷ್ಟಿಕೋನ ಬದಲಾಗಿದೆ ಅಂತೀರಾ?
ನನ್ನ ಪ್ರಕಾರ ಕೋವಿಡ್ ನಂತರ ನಮ್ಮೆಲ್ಲರಲ್ಲೂ ಒಂದು ಜಾಗೃತಿ ಮೂಡಿದೆ. ಆರೋಗ್ಯದ ವಿಚಾರದಲ್ಲೂ ದೀರ್ಘಾವಧಿ ಮತ್ತು ಸುಸ್ಥಿರವಾದ ಒಂದು ಜೀವನಶೈಲಿ ರೂಢಿಸಿಕೊಳ್ಳಬೇಕು ಎಂಬ ಮನಸ್ಥಿತಿ ಹುಟ್ಟಿಕೊಂಡಿದೆ. ಕೋವಿಡ್ ನಲ್ಲಿ ಮೃತಪಟ್ಟವರು ಅಥವಾ ತೀವ್ರ ಅನಾರೋಗ್ಯಕ್ಕೆ ಒಳಗಾದವರು ಕೆಟ್ಟ ಲೈಫ್ ಸ್ಟೈಲ್ ಅನುಸರಿಸುತ್ತಾ ಇದ್ದವರೇ. ಮಾನಸಿಕ ಒತ್ತಡ, ಅಶಿಸ್ತಿನ ಜೀವನಶೈಲಿ ನಡೆಸುತ್ತಿದ್ದವರೇ ಹೆಚ್ಚು ನೋವು ಅನುಭವಿಸಿದರು. ನಮ್ಮಲ್ಲಿಗೆ ಕೋವಿಡ್ ನಂತರ ಹಲವಾರು ಸಾಧಕರು ಬಂದಿದ್ದಾರೆ. ದೀರ್ಘಾವಧಿ ಚಿಕಿತ್ಸೆ ಮತ್ತು ನ್ಯಾಚುರೋಪಥಿ ಅಭ್ಯಾಸದಿಂದ ಅವರ ಆರೋಗ್ಯದಲ್ಲಿ ಸುಧಾರಣೆ ಆಗಿ, ಇದೀಗ ಬಹಳ ಆರೋಗ್ಯದಿಂದ ಮತ್ತು ಲವಲವಿಕೆಯಿಂದ ಜೀವನ ನಡೆಸ್ತಾ ಇದ್ದಾರೆ.
ವೆಲ್ ನೆಸ್ ರಿಟ್ರೀಟ್ಸ್ ಬಗ್ಗೆ ಇರುವ ಯಾವ ತಪ್ಪು ಗ್ರಹಿಕೆಯನ್ನು ನೀವು ಹೋಗಲಾಡಿಸೋಕೆ ಬಯಸುತ್ತೀರಿ?
ಪ್ರಕೃತಿ ಚಿಕಿತ್ಸೆ ಎಂದರೆ ನಿಮ್ಮನ್ನು ನೀವು ದಂಡಿಸಿಕೊಳ್ಳುವುದು! ಇದು ನಿಜವಲ್ಲ. ಆರೋಗ್ಯಕರ ಆಹಾರ ಆಯ್ಕೆಗಳನ್ನು ಮಾಡಿಕೊಳ್ಳುವುದು ಮತ್ತು ಶಾಶ್ವತವಾಗಿ ಒಂದು ಹೆಲ್ದೀ ಆಹಾರ ಪದ್ಧತಿಗೆ ಹೊಂದಿಕೊಳ್ಳುವುದು ವೆಲ್ ನೆಸ್. ಅನಾರೋಗ್ಯದ ಲಕ್ಷಣಗಳಿಗೆ ಚಿಕಿತ್ಸೆ ನೀಡುವ ಬದಲು, ವೆಲ್ ನೆಸ್ ಮೂಲಕ ರೋಗಕ್ಕೆ ಕಾರಣವಾಗುವ ವಿಷಯಗಳನ್ನೇ ಇಲ್ಲದಂತೆ ತೆಗೆದುಹಾಕುವುದು, ವೆಲ್ ನೆಸ್ ನ ಹಿರಿಮೆ. ಇದು ಶಾರ್ಟ್ ಕಟ್ ಅಲ್ಲ. ಅಲ್ಪಾವಧಿಯ ವಿಷಯವೂ ಅಲ್ಲ.
ಕ್ಷೇಮವನದ ಅನುಭವವನ್ನು ನೀವು ಮೂರೇ ಮೂರು ಪದಗಳಲ್ಲಿ ವರ್ಣಿಸೋದಾದ್ರೆ ಹೇಗೆ ವರ್ಣಿಸುತ್ತೀರಿ?
ಆರೋಗ್ಯ ನಿಮ್ಮೊಳಗೇ ಇದೆ. ಅದನ್ನು ಕಂಡುಕೊಳ್ಳಿ ಎಂದು ನಾವು ಕ್ಷೇಮವನಕ್ಕೆ ಬರುವ ಸಾಧಕರಿಗೆ ಹೇಳುತ್ತೇವೆ. ನಮ್ಮ ಸಾಧಕರು ಹಲವಾರು ಬಾರಿ ಅಚ್ಚರಿ ಪಟ್ಟದ್ದಿದೆ. ಅರೆ ಎಷ್ಟು ಬೇಗ ನನ್ನ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಾ ಇದೆ ಅಂತ. ಆರೋಗ್ಯಕರ ಜೀವನಶೈಲಿ ಮಾಡುವ ಮ್ಯಾಜಿಕ್ ಅದು.