ವಕೀಲ ವೃತ್ತಿ ತೊರೆದು ಸಾವಯವ ಕೃಷಿಕರಾದ ಎಚ್.ಆರ್. ಜಯರಾಮ್
ಯಾವುದೇ ವೃತ್ತಿಯಾದರೂ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದುಕೊಳ್ಳುವವನು ನಾನು. ಅದಕ್ಕಾಗಿ ಸಾವಯವ ಕೃಷಿಯನ್ನು ಕೈಗೆತ್ತಿಕೊಳ್ಳಲು ನನ್ನ ನೆಚ್ಚಿನ ವಕೀಲ ವೃತ್ತಿ ಕೆಲಸವನ್ನು ತೊರೆಯಬೇಕಾಗಿತ್ತು. ಭಾರತದಲ್ಲಿ ಸಾವಯವ ಜೀವನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು, ಆಂದೋಲನವನ್ನು ಪ್ರಾರಂಭಿಸಲು ನಾನು ಸನ್ನದ್ಧನಾಗಬೇಕಿತ್ತು.
ವೃತ್ತಿ- ಪ್ರವೃತ್ತಿಗಳ ನಡುವೆ ಯಾವುದನ್ನು ಆಯ್ಕೆ ಮಾಡುತ್ತೀರಿ? ವೃತ್ತಿ ಜೀವನವನ್ನು ಸರಿದೂಗಿಸಿಕೊಂಡು ಹೋಗುವ ನಡುವೆ ನಿಮ್ಮಿಷ್ಟದ ಪ್ರವೃತ್ತಿಯನ್ನು ಹೇಗೆ ನಿಭಾಯಿಸುತ್ತೀರಿ ? ಹೀಗೆ ಪ್ರಶ್ನಿಸಿದರೆ ಪ್ರವೃತ್ತಿಯನ್ನೇ ವೃತ್ತಿಯನ್ನಾಗಿಸಿಕೊಂಡ ಅನೇಕರು ನಮ್ಮ ನಡುವೆಯೇ ಕಾಣಸಿಗುತ್ತಾರೆ. ಅಂಥವರ ಸಾಲಿನಲ್ಲಿ ಮೊದಲಿಗರು ಗ್ರೀನ್ ಪಾತ್ ಆರ್ಗ್ಯಾನಿಕ್ಸ್ ಸಂಸ್ಥಾಪಕ ಎಚ್ ಆರ್ ಜಯರಾಮ್. ಸಾವಯವ ಜೀವನ ಪ್ರತಿಯೊಂದು ಮನೆಗೂ ತಲುಪಬೇಕು ಎಂಬ ಧ್ಯೇಯದೊಂದಿಗೆ ರೂಪುಗೊಂಡ ಅವರ ಬದುಕಿನ ಚಿತ್ರಣವಿದು.
ಬಡ ಕುಂಟುಂಬದಿಂದ ಬಂದ ನೀವು ವಕೀಲನಾದ ಪಯಣ ಹೇಗೆ ಸಾಧ್ಯವಾಯಿತು ?
ಅದನ್ನು ಹೇಳಬೇಕೆಂದರೆ ನಾನು ನನ್ನ ಬಗ್ಗೆ ಹೇಳಿಕೊಳ್ಳಬೇಕು. ಮೂಲತಃ ತಮಿಳುನಾಡು-ಕರ್ನಾಟಕ ಗಡಿಯ ಬಳಿಯ ಹುಣಸನಹಳ್ಳಿ ಎಂಬಲ್ಲಿ ರಾಮಚಂದ್ರಯ್ಯ ನಾಗಮ್ಮ ದಂಪತಿಯ ಪುತ್ರನಾಗಿ ಜನಿಸಿದವನು ನಾನು. ತಂದೆಗೆ ಸಹಾಯ ಮಾಡುವ ಉದ್ದೇಶದಿಂದ ಏಳನೇ ವಯಸ್ಸಿನಲ್ಲಿಯೇ ಕೃಷಿ ಮಾಡಲು ಪ್ರಾರಂಭಿಸಿ ಪ್ರಕೃತಿಯೊಂದಿಗೆ ಬೆಸೆದುಕೊಂಡೆ. ರಾಸಾಯನಿಕ ಮುಕ್ತವಾಗಿ ಕೃಷಿಯ ಬಗ್ಗೆ ಚಿಕ್ಕಂದಿನಿಂದಲೂ ಆಸಕ್ತಿ ಬೆಳೆಸಿಕೊಂಡಿದ್ದೆನಾದರೂ ಉನ್ನತ ವಿದ್ಯಾಭ್ಯಾಸಕ್ಕಾಗಿ ಮನೆ ಬಿಟ್ಟು ಬಂದಿದ್ದೆ. ಊರಲ್ಲಿ ಜಾತಿಯ ಆಧಾರದ ಮೇಲೆ ಅಪಾರ ಶೋಷಣೆ ಮತ್ತು ತಾರತಮ್ಯವನ್ನು ಕಂಡಮೇಲಂತೂ ನನ್ನ ಆಯ್ಕೆ ವಕೀಲನಾಗಬೇಕೆಂದಾಗಿತ್ತು. ಕಠಿಣ ಅಧ್ಯಯನ ಮಾಡಲು ಇದು ನನ್ನನ್ನು ಪ್ರೇರೇಪಿಸಿತು. ಸಿವಿಲ್ ವಕೀಲನಾಗಿ, ಎಚ್ ಆರ್ ಜಯರಾಮ್ ಅಂಡ್ ಅಸೋಸಿಯೇಟ್ಸ್ ಮೂಲಕ ವಕೀಲಿ ವೃತ್ತಿ ಬಾಂಧವರ ಬಳಗವನ್ನು ಕಟ್ಟಿಕೊಂಡೆ. ಸತತ 40 ವರ್ಷಗಳ ಕಾಲ ನಲವತ್ತಕ್ಕೂ ಹೆಚ್ಚು ಮಂದಿ ಕೆಲಸ ಮಾಡುವ ಕಚೇರಿಯನ್ನೇ ಮುನ್ನಡೆಸಿದ ಅನುಭವ ನನಗೊದಗಿಬಂದಿತ್ತು. ಹೀಗೆ ಸಾಗಿತ್ತು ವಕೀಲನಾಗುವ ಪಯಣ.

ಸಾವಯವ ಕೃಷಿ, ಕೃಷಿ ಭೂಮಿಯ ಕಡೆಗೆ ಮನಸ್ಸು ಮಾಡಿದ್ದು ಹೇಗೆ?
ಕನಸು ಕಂಡಿದ್ದೆ, ಅದು ನನಸಾಗಿದ್ದಾಯ್ತು. ಆಗ ತಿಳಿದಿದ್ದು, ಇದಲ್ಲ, ಇದಕ್ಕಿಂತ ಹೆಚ್ಚಿನದು ನಾನು ಸಮಾಜಕ್ಕಾಗಿ ಮಾಡಬೇಕಿದೆ ಎನ್ನುತ್ತಿತ್ತು ಒಳ ಮನಸ್ಸು. ಅದಕ್ಕೆ ತಕ್ಕಂತೆ ಪ್ರಕೃತಿ ಮತ್ತು ಭೂಮಿಯ ಮೇಲಿನ ಪ್ರೀತಿ ಬೆಳೆಯಿತು. ಕೃಷಿಯಿಂದ ಹೆಚ್ಚು ಕಾಲ ದೂರವಿರಲು ಸಾಧ್ಯವಾಗಲಿಲ್ಲ. 1998ರಲ್ಲಿ ಮತ್ತೆ ಎಲ್ಲವೂ ಪ್ರಾರಂಭವಾಯಿತು .ಅಂದರೆ ಅಗತ್ಯವಿರುವಷ್ಟು ಮೊತ್ತದ ಹಣ ಉಳಿತಾಯ ನಂತರ, ಬೆಂಗಳೂರಿನ ನೆಲಮಂಗಲದಿಂದ 6 ಕಿಮೀ ದೂರದಲ್ಲಿರುವ ಮರಸರಹಳ್ಳಿಯಲ್ಲಿ 40 ಎಕರೆ ಬಂಜರು ಭೂಮಿಯನ್ನು ಖರೀದಿಸಿ ಕೃಷಿಯನ್ನು ಪ್ರಾರಂಭಿಸಿದೆ. ನಾನು ಆ ಜಮೀನಿಗೆ ಸುಕೃಷಿ ಎಂದು ಹೆಸರಿಸಿದೆ. ಆಧುನಿಕ ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಪರಿಚಯವಾದ ಸಮಯ ಅದು. ನಾನೂ ಎಲ್ಲರಂತೆ ರಾಸಾಯನಿಕ ಕೃಷಿಯೊಂದಿಗೆ ಪ್ರಾರಂಭಿಸಿ ಸುಮಾರು ಒಂದು ವರ್ಷ ಮುಂದುವರಿಸಿದೆ. ಆದರೆ ನನ್ನ ಕೃಷಿ ಅನುಭವ ವಿಭಿನ್ನವಾಗಿತ್ತು. ನಮಗೆ ನಮ್ಮದೇ ಆದ ರಸಗೊಬ್ಬರ, ಬಿತ್ತನೆ ಬೀಜಗಳಿದ್ದವು. ಎಲ್ಲದಕ್ಕೂ ಹೆಚ್ಚಾಗಿ ಫಲವತ್ತಾದ ಭೂಮಿಯೂ ಇತ್ತು. ನಾನು ಸಾಕಷ್ಟು ಸಂಶೋಧನೆ ಮಾಡಲು ಪ್ರಾರಂಭಿಸಿದೆ, ರೈತರೊಂದಿಗೆ ಮಾತನಾಡಿದೆ. ಅದು ಅಂತಿಮವಾಗಿ ಸಾವಯವಕ್ಕೆ ಹೋಗುವ ಮಹತ್ವವನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡಿತು.
ಕಂಡ ಕನಸು ನನಸಾದರೂ ಕೃಷಿಗಾಗಿ ಅದನ್ನೇ ಕೈಬಿಡಬೇಕಾಗಿತ್ತಾ ?
ಯಾವುದೇ ವೃತ್ತಿಯಾದರೂ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದುಕೊಳ್ಳುವವನು ನಾನು. ಅದಕ್ಕಾಗಿ ಸಾವಯವ ಕೃಷಿಯನ್ನು ಕೈಗೆತ್ತಿಕೊಳ್ಳಲು ನನ್ನ ನೆಚ್ಚಿನ ವಕೀಲ ವೃತ್ತಿ ಕೆಲಸವನ್ನು ತೊರೆಯಬೇಕಾಗಿತ್ತು. ಭಾರತದಲ್ಲಿ ಸಾವಯವ ಜೀವನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು, ಆಂದೋಲನವನ್ನು ಪ್ರಾರಂಭಿಸಲು ನಾನು ಸನ್ನದ್ಧನಾಗಬೇಕಿತ್ತು. ಯಾಕೆಂದರೆ ಆ ದಿನಗಳಲ್ಲಿ ಸಾವಯವ ಕೃಷಿ ಅಷ್ಟೊಂದು ಜನಪ್ರಿಯವಾಗಿರಲಿಲ್ಲ. ಅದಕ್ಕಾಗಿ ನಾನು ಶ್ರಮಿಸಲೇ ಬೇಕಿತ್ತು. ಮುಂದಿನ ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ವಿವಿಧ ತಂತ್ರಗಳನ್ನು ಪ್ರಯೋಗಿಸಲು ಪ್ರಾರಂಭಿಸಿದೆ. ವಿವಿಧ ಬೆಳೆಗಳನ್ನು ಬೆಳೆದೆ. ನನ್ನ ಕೆಲಸವನ್ನು ಸರಕಾರ ಗುರುತಿಸಿತು ಎಂಬುದು ಖುಷಿಯ ವಿಚಾರ.
ಗ್ರೀನ್ ಪಾತ್ ಫೌಂಡೇಶನ್ ಹುಟ್ಟಿಕೊಂಡಿದ್ದು ಹೇಗೆ ?
ನಾನು ನಿಧಾನವಾಗಿ ಸಾವಯವ ಕೃಷಿ ಮತ್ತು ಅದರ ಮಹತ್ವವನ್ನು ಉತ್ತೇಜಿಸುವ ಕಾರ್ಯಕರ್ತನಾಗಿ ಬದಲಾದೆ.. ವಿದೇಶಗಳಲ್ಲಿ ಹಲವಾರು ನಗರಗಳಿಗೆ ಹೋಗಿದ್ದೆ, ಪ್ರದರ್ಶನಗಳಿಗೆ ಭೇಟಿ ನೀಡಿದ್ದೆ, ಜನರನ್ನು ಭೇಟಿಯಾಗಿದ್ದೆ. ಕೊನೆಗೆ ನನಗನಿಸಿದ್ದು, ಸಾವಯವ ಕೃಷಿಯನ್ನು ಉತ್ತೇಜಿಸಲು ಹೆಚ್ಚಿನ ಪ್ರಯತ್ನ ಬೇಕು ಎಂಬ ವಿಚಾರ. ಆದ್ದರಿಂದ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ನನ್ನ ಅನುಭವಗಳನ್ನು ಹಂಚಿಕೊಳ್ಳುವುದಕ್ಕಾಗಿ ಗ್ರೀನ್ ಪಾತ್ ಫೌಂಡೇಶನ್ ಎಂಬ ವೇದಿಕೆಯನ್ನು ನಾನು ಹುಟ್ಟುಹಾಕಿದೆ.
ಇಕೋ ಟೂರಿಸಂ ನಲ್ಲಿ ನಿಮ್ಮ ಕೊಡುಗೆ ?
2007 ರಲ್ಲಿ, ಗ್ರೀನ್ ಪಾತ್ ಬೆಂಗಳೂರಿನಲ್ಲಿ ಮೊದಲ ಪ್ರಮಾಣೀಕೃತ ಸಾವಯವ ಅಂಗಡಿಯಾದ ಎರಾ ಆರ್ಗಾನಿಕ್ ಅನ್ನು ಪ್ರಾರಂಭಿಸಿದೆ. ನಂತರ 2008ರಲ್ಲಿ ಬಿಇಎಲ್ ರೋಡಲ್ಲಿ ಇಕೋ ಹೊಟೇಲ್ ಹಾಗೂ 2012ರಲ್ಲಿ ಇಕೋ ಟೂರಿಸಂ ಮಹತ್ವ ಸಾರಲು ದೂರದ ತಲಕಾವೇರಿ ರಸ್ತೆಯಲ್ಲಿರುವ ಚೇರಂಬಾನೆಯಲ್ಲಿ ಇಕೋ ರೀ ಟ್ರೀಟ್ ಆರಂಭಸಿದ್ದೆ. 2014ರಲ್ಲಿ ಕೂರ್ಗ್‌ನಲ್ಲಿ ಪರಿಸರ-ವಿಶ್ರಾಂತಿ ಕೇಂದ್ರವನ್ನು ಪ್ರಾರಂಭಿಸಿದೆ. 2016ರಲ್ಲಿ ದ ಗ್ರೀನ್ ಪಾತ್ ಆರ್ಗ್ಯಾನಿಕ್ ಸ್ಟೇಟ್ ಎಂಬ ರೆಸ್ಟೊರೆಂಟ್ ಜತೆಗೆ ಪಾರ್ಟಿ ಹಾಲಿರುವ ಬೃಹತ್ ಸೆಂಟರ್ ಸ್ಥಾಪನೆ ಮಾಡಿಕೊಂಡೆ. ಇದು ದೇಶದಲ್ಲೇ ಸಾವಯವಕ್ಕಾಗಿಯೇ ನಿರ್ಮಾಣಗೊಂಡ ಅತ್ಯಂತ ಬೃಹತ್ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಸಾವಯವ ಚಳುವಳಿಯ ಸಮುದಾಯ ಕಟ್ಟುವ ಉದ್ದೇಶದೊಂದಿಗೆ ಪ್ರತಿ ಭಾನುವಾರ ಆರ್ಗಾನಿಕ್ ಸಂತೆಯಲ್ಲಿ ನಿರಂತರವಾಗಿ ಮಾಡುತ್ತಾ ಬಂದಿದ್ದು, ಈಗ 95ನೇ ಸಂತೆಯೂ ಆಗಿದೆ. ಸಾವಯವ ಕ್ಷೇತ್ರ ಅದರಲ್ಲೂ ನಾನು ಕಟ್ಟಿದ ಈ ಸಂಸ್ಥೆಗಳಲ್ಲಿ 70ಕ್ಕೂ ಹೆಚ್ಚು ದೇಶಗಳಿಂದ ಜನರು ಬಂದು, ಸಾವಯವದ ಮಹತ್ವ ತಿಳಿದು ಹೋಗಿದ್ದಾರೆ. ಇವೆಲ್ಲವೂ ಇಕೋ ಟೂರಿಸಂನ ಭಾಗವೇ ಆಗಿವೆ.

ಇಂದಿನ ಕಾಲದಲ್ಲೂ ಸಾವಯವ ಕೃಷಿ ಹೇಗೆ ಸಾಧ್ಯವಾಗುತ್ತದೆ ?
ರಾಜ್ಯದಲ್ಲಿ ನವೀನ ಪರಿಸರ ಸ್ನೇಹಿ ಪದ್ಧತಿಗಳಿವೆ. ಅವುಗಳನ್ನು ಅನುಸರಿಸುವ ಮೂಲಕ ಹೊಟೇಲ್ ಗಷ್ಟೇ ಅಲ್ಲದೆ ರಾಜ್ಯದ ಅನೇಕ ಕಡೆಗಳಿಗೆ ಬೇಕಾದ ಎಲ್ಲಾ ಕಚ್ಚಾ ವಸ್ತುಗಳನ್ನು ನನ್ನ ಹೊಲದಲ್ಲೇ ಬೆಳೆಯುತ್ತೇನೆ. ಅಡಿಕೆ, ತೆಂಗಿನಕಾಯಿ, ಸೀಬೆಹಣ್ಣುಮತ್ತು ಬೇವಿನಂಥ ವಿವಿಧ ಆಹಾರ ಬೆಳೆಗಳನ್ನು ಬೆಳೆಯಲು ಬಹು-ಬೆಳೆ ಕೃಷಿಯನ್ನು ಅಭ್ಯಾಸ ಮಾಡುತ್ತೇನೆ. ಇಡೀ ಜಮೀನು ಮಳೆನೀರಿನ ಮೇಲೆ ಮಾತ್ರ ನಡೆಯುತ್ತದೆ. ನನ್ನ ಪ್ರಕಾರ, 20 ದಿನಗಳ ನೀರುಣಿಸಲು ಒಂದು ದಿನದ ಮಳೆ ಸಾಕು. ಅವರು ಬಹುಮಹಡಿ ಕೃಷಿ ಎಂಬ ಮರ ಆಧಾರಿತ ಕೃಷಿಯನ್ನು ಒಳಗೊಂಡಿರುವ 'ಆಹಾರ ಅರಣ್ಯ' ಮಾದರಿಯೊಂದಿಗೆ ಕೆಲಸ ಮಾಡುತ್ತೇನೆ. ಹೆಚ್ಚುವರಿಯಾಗಿ, ಜಮೀನಿನಲ್ಲಿರುವ ಎಲ್ಲಾ ತ್ಯಾಜ್ಯವನ್ನು ಮಲ್ಚ್ ಮಾಡಿ ನೈಸರ್ಗಿಕ ಕೀಟನಾಶಕಗಳನ್ನು ಉತ್ಪಾದಿಸಲು ಬಳಸುತ್ತೇನೆ. ಇವೆಲ್ಲವೂ ನನ್ನೊಬ್ಬನಿಂದಲೇ ಎಂದಲ್ಲ. ಜಮೀನಿನಲ್ಲಿ ಸಹಾಯಕ್ಕೆ 20 ಜನರ ತಂಡವಿದೆ. ಗ್ರೀನ್ ಪಾತ್ ಫೌಂಡೇಶನ್‌ನಾದ್ಯಂತ ಒಟ್ಟಾರೆ 100 ಜನರ ಬಳಗವಿದೆ. ಅವರು ಕೊಡಗು, ಕೂರ್ಗ್‌ನಲ್ಲಿಯೂ ಸಾವಯವ ಕೃಷಿಯನ್ನು ಅನುಸರಿಸುವ ತಂಡಗಳಿವೆ. ಅಲ್ಲಿ ಕಾಫಿ, ಭತ್ತ ಇತ್ಯಾದಿಗಳನ್ನು ಬೆಳೆಯಲಾಗುತ್ತದೆ.
ಸಾವಯವ ಕೃಷಿ ಆಂದೋಲನದ ಮುಖ್ಯ ಉದ್ದೇಶವೇನು ?
ಸಾವಯವ ಕೃಷಿ ಆಂದೋಲನವು ರಾಸಾಯನಿಕಗಳನ್ನು ಬಳಸದಿರುವುದಷ್ಟೇ ಎಂದರೆ ತಪ್ಪಾಗುತ್ತದೆ. ಅದಕ್ಕಿಂತ ಹೆಚ್ಚಿನದ್ದಿದೆ. ಅಂದರೆ ರೈತರಿಗೆ ಅರ್ಹವಾದ ಘನತೆಯನ್ನು ನೀಡುವುದು, ಸುಸ್ಥಿರ ಜೀವನದ ಸಂದೇಶವನ್ನು ಹರಡುವುದು ಹೀಗೆ ಹಲವು. ಸಾವಯವ ಕೃಷಿಯಿಂದ, ರೈತರು ಹೆಚ್ಚುವರಿ ಕೃಷಿ ವೆಚ್ಚವನ್ನು ಭರಿಸಬೇಕಾಗಿಲ್ಲ. ಅಲ್ಲದೆ ಅದು ಅವರ ಆರೋಗ್ಯಕ್ಕೂ ಒಳ್ಳೆಯದು. ನನ್ನ ಜೀವನವಂತೂ ಸಾವಯವ ಕೃಷಿಯ ಮೂಲಕ ಸದೃಢ ಜೀವನ ಶೈಲಿಯನ್ನು ರೂಪಿಸಿಕೊಳ್ಳುವಲ್ಲೇ ಮುಡಿಪಾಗಿಸಿಕೊಂಡಿದ್ದೇನೆ. ಸಾವಯವ ಕೃಷಿ ವಿಶ್ವಕ್ಕೇ ತುರ್ತಾಗಿ ಬೇಕಾಗಿದೆ.
ನಿಮ್ಮ ಸೇವೆಗೆ ಸಂದ ಗೌರವಗಳು ಯಾವುವು ?
ಅನೇಕರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ಆದರೆ ನಾನು ಪುಣ್ಯವಂತ. ನನ್ನ ಪ್ರತಿಫಲವನ್ನು ಬಯಸದೇ ಸಮಾಜಕ್ಕಾಗಿ ದುಡಿದೆ. ಆದರೂ ಪ್ರಶಸ್ತಿಗಳು ನನ್ನನ್ನು ಅರಸಿಕೊಂಡು ಬಂದಿವೆ. ನನ್ನ ಸಾವಯವ ಸೇವೆಯನ್ನು ಗುರುತಿಸಿರುವ ವಿಶ್ವವಾಣಿ ಸಂಸ್ಥೆ, ವಿಯೇಟ್ನಾಂ ಪ್ರವಾಸೋದ್ಯಮ ಇಲಾಖೆಯೊಂದಿಗೆ ಜಂಟಿಯಾಗಿ ನಡೆಸಿದ್ದ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಪ್ರಶಸ್ತಿ ನನ್ನನ್ನು ಆಯ್ಕೆ ಮಾಡಿದೆ. ಸಾವಯವ ಸೇವೆಯಲ್ಲಿ ನನ್ನ ಸುದೀರ್ಘ 25 ವರ್ಷಗಳ ಶ್ರಮ, ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಸರಕಾರವು 2024ರ ಸುವರ್ಣ ಕರ್ನಾಟಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದು ಖುಷಿಯ ವಿಚಾರ.