- ಭಾಗ್ಯ ದಿವಾಣ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಧಾರಾವಾಹಿಯಲ್ಲಿ ಹರ್ಷ ಪಾತ್ರದ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ನಟ ಕಿರಣ್​ ರಾಜ್, ಧಾರಾವಾಹಿ ಮುಕ್ತಾಯಗೊಂಡು ವರ್ಷಗಳು ಕಳೆದರೂ ಇಂದಿಗೂ ಎಲ್ಲರ ಅಚ್ಚುಮೆಚ್ಚಿನ ನಟನಾಗಿಯೇ ಗುರುತಿಸಿಕೊಂಡಿದ್ದಾರೆ. ಇವರ ಸ್ಟೈಲ್, ಮಾತುಗಾರಿಕೆಗೆ ಅನೇಕ ಮಂದಿ ಫ್ಯಾನ್ಸ್ ಇದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಸದ್ಯ ಕಿರಣ್ ರಾಜ್ ದೊಡ್ಡ ಗ್ಯಾಪ್ ನಂತರ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರ್ಣ ಧಾರಾವಾಹಿಯಲ್ಲಿ ನಾಯಕನಾಗಿ ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಕರ್ಣ ಧಾರಾವಾಹಿಯ ಜತೆಗೆ ‘ಜಾಕಿ 42’ ಸಿನಿಮಾದಲ್ಲಿ ಬ್ಯುಸಿಯಾಗಿರುವ ಕಿರಣ್ ಇವೆಲ್ಲದರ ನಡುವೆ ತಮ್ಮ ಪರ್ಸನಲ್‌ ಲೈಫ್‌, ಅದ್ರಲ್ಲೂ ಟ್ರಾವೆಲ್‌ ಕ್ರೇಜ್‌ ಉಳಿಸಿಕೊಂಡು ಬರುತ್ತಿರುವುದು ಹೇಗೆ ? ಟ್ರಾವೆಲ್ ಈಸ್‌ ಫಾರ್‌ ಸೆಲ್ಫ್‌ ಎಕ್ಸ್‌ಪೀರಿಯನ್ಸ್, ಸೆಲ್ಫ್‌ ಎಕ್ಸ್‌ಪ್ಲೋರಿಂಗ್‌ ಎನ್ನುವ ಕಿರಣ್‌ ರಾಜ್‌ ಅವರ ಟ್ರಾವೆಲ್‌ ಸ್ಟೋರಿ ಇಲ್ಲಿದೆ.

ಟೈಮ್ ಸಿಗೋದಲ್ಲ, ಮಾಡ್ಕೊಳ್ಳೋದು

ಕರ್ಣನಾಗಿ ಕಿರುತೆರೆಗೆ ಕಂಬ್ಯಾಕ್‌ ಮಾಡಿದ್ದೇನೆ. ನಡುವೆ ‘ಜಾಕಿ 42’ ಚಿತ್ರದಲ್ಲೂ ಬ್ಯುಸಿಯಾಗಿದ್ದೇನೆ. ಕರ್ಣ ಸೀರಿಯಲ್‌ ಶೂಟಿಂಗ್‌ಗಾಗಿ ತಿಂಗಳಲ್ಲಿ 10-12 ದಿನಗಳು ಎಷ್ಟೇ ಬ್ಯುಸಿಯಾಗಿದ್ದರೂ, ಉಳಿದ ದಿನಗಳಲ್ಲೂ ಅನೇಕ ಪ್ರಾಜೆಕ್ಟ್‌ ಗಳ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತೇನೆ. ಸುತ್ತಾಟ ನನಗಿಷ್ಟ..ಆದರೆ ಅದಕ್ಕೆ ಟೈಮ್ ಸಿಗುವುದಿಲ್ಲ ಎಂದು ಕೂರುವುದಕ್ಕಿಂತ ನನ್ನಿಷ್ಟದ ಕೆಲಸಗಳಿಗೆ ಟೈಮ್ ಮಾಡಿಕೊಳ್ಳುತ್ತೇನೆ ಎನ್ನುವುದೇ ನಾನು ಖುಷಿಯಾಗಿರಲು ಕಾರಣ.

kiran raj 4

ಚಿಕ್ಕಂದಿನಿಂದಲೇ ಟ್ರಾವೆಲ್‌ ಕ್ರೇಜ್‌

ನನ್ನೂರು ಮೈಸೂರು. ಆದರೆ ಅಪ್ಪ ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣದಿಂದ ನನ್ನ ವಿದ್ಯಾಭ್ಯಾಸವೆಲ್ಲವೂ ನಾರ್ತ್‌ ನಲ್ಲೇ ಆಗಿದ್ದು. ಆದರೂ ಚಿಕ್ಕವನಿದ್ದಾಗಲೇ ಮೈಸೂರಿಗೆ ಬಂದಾಗಲೆಲ್ಲ ಹೆತ್ತವರೊಂದಿಗೆ ದೇವಾಲಯಗಳಿಗೆ ಹೋಗುವ ರೂಢಿಯಿತ್ತು. ಮನೆಯವರನ್ನು ಹೊರತುಪಡಿಸಿ ನಾನು ಕೈಗೊಂಡ ಪ್ರವಾಸಗಳೆಂದರೆ ಸ್ಕೂಲ್‌ ಟ್ರಿಪ್‌ಗಳಷ್ಟೇ. ಅದೇನೇ ಆದರೂ ನನಗೆ ಚಿಕ್ಕಂದಿನಿಂದಲೂ ಟ್ರಾವೆಲ್‌ ಮಾಡುವುದೆಂದರೆ ತುಂಬಾ ಅಚ್ಚುಮೆಚ್ಚು.

ಮೈಸೂರೆಂದರೆ ಬೆಟ್ಟ. ಬೆಟ್ಟ ಮಾತ್ರ..

ಮೈಸೂರು ನನ್ನುಸಿರು..ನನ್ನೂರಿನಲ್ಲಿ ನನಗೆ ಎಲ್ಲವೂ ಇಷ್ಟವೇ..ಆದರೆ ಮೊದಲು ನೆನಪಾಗುವುದು ಚಾಮುಂಡಿ ಬೆಟ್ಟ. ಜೀವನದಲ್ಲಿ ಏನೇ ಆದರೂ ಚಾಮುಂಡಿ ಬೆಟ್ಟಕ್ಕೆ ಹೋಗುತ್ತೇನೆ. ಖುಷಿಯಾಗಲೀ, ದುಃಖವೇ ಬರಲಿ, ಬೆಟ್ಟಕ್ಕೆ ತೆರಳುತ್ತೇನೆ. ಅದು ನನಗೆ ಹಿತವೆನಿಸುತ್ತದೆ, ಮನಸ್ಸಿಗೂ ಖುಷಿ ತರುತ್ತದೆ. ಈಗ ಹೆತ್ತವರು ಮೈಸೂರಿನಲ್ಲೇ ಬಂದು ನೆಲೆಸಿದ್ದಾರೆ. ಆದ್ದರಿಂದ ಬಿಡುವಾದಾಗ, ವಾರಾಂತ್ಯಗಳಲ್ಲಿ ಅಪ್ಪ ಅಮ್ಮನನ್ನು ಮೀಟ್‌ ಮಾಡೋಕೆ ಮೈಸೂರಿಗೆ ಹೋಗುತ್ತಿರುತ್ತೇನೆ. ಆದರೆ ಹೋದಾಗ ಸುತ್ತಾಡುವುದಕ್ಕಿಂತ ಹೆಚ್ಚಿಗೆ ಅವರೊಂದಿಗೆ ಕಾಲ ಕಳೆಯುತ್ತೇನೆ.

kiran raj 1

ಟ್ರಾವೆಲ್ ಈಸ್‌ ಫಾರ್‌ ಸೆಲ್ಫ್‌ ಎಕ್ಸ್‌ಪೀರಿಯನ್ಸ್‌

ನಾನು ಲೆಕ್ಕವಿಲ್ಲದಷ್ಟು ಕಡೆಗಳಿಗೆ ಪ್ರಯಾಣ ಮಾಡಿದ್ದೇನೆ. ಸಾಕಷ್ಟು ಪ್ರವಾಸಿ ತಾಣಗಳನ್ನು ನೋಡಿ, ಸುತ್ತಾಡಿ ಬಂದಿದ್ದೇನೆ. ಆದರೆ ಅವೆಲ್ಲವನ್ನೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ. ಯಾಕೆಂದರೆ ಕೆಲವೊಂದು ವಿಚಾರಗಳು ಪ್ರೈವೇಟ್‌ ಆಗಿದ್ದರೇ ಒಳ್ಳೆಯದು. ಟ್ರಾವೆಲ್ ಈಸ್‌ ಫಾರ್‌ ಸೆಲ್ಫ್‌ ಎಕ್ಸ್‌ಪೀರಿಯನ್ಸ್‌, ಸೆಲ್ಫ್‌ ಎಕ್ಸ್‌ಪ್ಲೋರಿಂಗ್‌ ಎಂಬುದು ನನ್ನ ಅನಿಸಿಕೆ.‌ ಆದ್ದರಿಂದ ಎಲ್ಲರಿಗೂ ಅವುಗಳನ್ನು ಪ್ರದರ್ಶಿಸಬೇಕಾದುದು, ತಿಳಿಹೇಳಬೇಕಾದುದು ಏನೂ ಇಲ್ಲ. ಎಲ್ಲರಿಗೂ ಅವರದೇ ಆದ ರೀತಿ-ನೀತಿಗಳಿರುತ್ತವೆ, ಆಸಕ್ತಿಗಳಿರುತ್ತವೆ. ಕೆಲವರು ಪ್ರವಾಸಕ್ಕೆ ಹೋದರೆ ಅಲ್ಲಿ ಕ್ಲಬ್‌ಗಳನ್ನು ಹುಡುಕುತ್ತಾರೆ, ಬಾರ್‌ಗಳನ್ನು ಅನ್ವೇಷಿಸುತ್ತಾರೆ. ಇನ್ನು ಕೆಲವರು ಮರ, ಗಿಡ, ಪ್ರಕೃತಿಯ ಸೊಬಗನ್ನು ನೋಡುತ್ತಾರೆ. ಅನೇಕರು ಏನೂ ಮಾಡದೆ ಸುಮ್ಮನೇ ಚಿಂತೆಯಲ್ಲೇ ಹೋಗಿ, ಚಿಂತೆಯೊಂದಿಗೆಯೇ ವಾಪಸ್‌ ಬರುತ್ತಾರೆ. ದೃಷ್ಟಿಕೋನ ಎಲ್ಲದಕ್ಕೂ ಮುಖ್ಯವಾಗುತ್ತದೆ.

ನಾನೊಬ್ಬ ಟ್ರಾವೆಲರ್..

ಟೂರಿಸ್ಟ್‌ ಆಗಲು ಇಷ್ಟವಾ ಅಥವಾ ಟ್ರಾವೆಲರ್‌ ಆಗಲು ಇಷ್ಟವಾ ಎಂದು ನನ್ನ ಬಳಿ ಯಾರು ಕೇಳಿದರೂ, ನನ್ನ ಉತ್ತರ ಟ್ರಾವೆಲರ್‌ ಎಂದೇ ಇರುತ್ತದೆ. ಯಾಕೆಂದರೆ ಪ್ರವಾಸಿಗನಾದವನು ಆಯ್ದ ಪ್ರವಾಸಿ ಸ್ಥಳಗಳಿಗಷ್ಟೇ ಭೇಟಿ ನೀಡಿ ಪ್ರವಾಸ ಮುಗಿಸಿ ಬಂದುಬಿಡುತ್ತಾನೆ. ಆದರೆ ಪ್ರಯಾಣಿಕನಾದವರು ತಾನು ಭೇಟಿ ನೀಡಿದ ಪರಿಸರ, ಅಲ್ಲಿನ ಸಂಸ್ಕೃತಿ, ಆಚಾರ-ವಿಚಾರ, ಕೆಲ- ಸಂಪ್ರದಾಯ, ಆಹಾರ ಹೀಗೆ ಎಲ್ಲವನ್ನೂ ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ. ಟ್ರಾವೆಲರ್‌ ಆಗಿರುವುದು ಯಾವತ್ತಿಗೂ ಬೆಸ್ಟ್‌ ಆಯ್ಕೆ.

ನಿಮ್ಮನ್ನು ನೀವು ತಿಳಿಯುವುದಕ್ಕೆ…

ಟ್ರಾವೆಲಿಂಗ್‌ ಯಾಕೆ ಬೇಕು ಗೊತ್ತಾ ? ನಿಮ್ಮನ್ನು ನೀವು ಕಂಡುಕೊಳ್ಳುವುದಕ್ಕೆ. ನಿಮ್ಮೊಳಗಿನ ನಿಮ್ಮನ್ನು ಅರಿತುಕೊಳ್ಳುವುದಕ್ಕೆ. ಬೇರೆ ಯಾವುದೇ ಕೆಲಸವಾದರೂ ʼದೇರ್‌ ಈಸ್‌ ಎ ಫಿಕ್ಸ್ಡ್ ಟಾಸ್ಕ್‌ ಯು ಆರ್‌ ಪರ್ಫಾರ್ಮಿಂಗ್‌ʼ…ಆದರೆ ಟ್ರಾವೆಲರ್ ಅಂತ ಬಂದಾಗ ಹಾಗಿರುವುದಿಲ್ಲ. ಇಲ್ಲಿ ನೀವು ನಿಮ್ಮನ್ನು ಎಕ್ಸ್‌ಪ್ಲೋರ್ ಮಾಡಬಹುದು. ನಿಮಗೆ ನಿಮ್ಮ ಇಂಡಿವಿಡ್ಯುವ್ಯಾಲಿಟಿಯ ಬಗ್ಗೆ ಚಿಂತಿಸುವುದಕ್ಕೆ ಟೈಂ ಸಿಗುತ್ತದೆ. ಇದಕ್ಕೆ ಹೆಚ್ಚಿನದು ಇನ್ನೇನು ಬೇಕು. ಅಲ್ವಾ?

kiran raj 5

ಹಿಮಾಲಯ..ಕೇದಾರದ ನೆನಪುಗಳು..

ಹಿಂದಿ ಇಂಡಸ್ಟ್ರಿಯಲ್ಲೂ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ, ಬಣ್ಣ ಹಚ್ಚಿದ್ದೇನೆ. ಅಲ್ಲಿ ಕೆಲಸ ಮಾಡುವಾಗ ನನಗೆ ಅನೇಕ ಸ್ನೇಹಿತರಿದ್ದರು. ಅದೊಂದು ದೊಡ್ಡ ಬಳಗ. ಅವರಲ್ಲಿ ಕೆಲವರೊಂದಿಗೆ ಹಿಮಾಲಯಕ್ಕೆ ಹೋಗುತ್ತಿದ್ದೆ. ಕೇದಾರಕ್ಕೆ ಭೇಟಿ ನೀಡಿದ್ದೆ. ನಾರ್ತ್‌ನಲ್ಲಿ ಅನೇಕ ಪ್ರವಾಸಿ ತಾಣಗಳಿಗೆ ಹೋಗಿ ಬಂದ ಅನುಭವ ನೆನೆದರೆ ಇಂದಿಗೂ ಮುಖದಲ್ಲಿ ನಗು ತರಿಸುತ್ತದೆ.

ಥೈಲ್ಯಾಂಡ್‌ ಮಡಿಲಲ್ಲಿ…

ಗುಂಪು ಗಲಿಬಿಲಿ ಇಲ್ಲದ ಪ್ರಶಾಂತವಾದ ತಾಣಗಳಿಗೆ ಹೋಗುವುದು ನನ್ನ ರೂಢಿ. ಅಂಥ ಪ್ರದೇಶಗಳಲ್ಲಿ ಹಿಮಾಚಲ ಪ್ರದೇಶ, ಕ್ರಾಬಿ, ಥೈಲ್ಯಾಂಡ್‌ ಪ್ರಮುಖವಾದವು. ಬಿಡುವಾದಾಗಲೆಲ್ಲ ನಾನು ಹೋಗಬಯಸುವ ತಾಣ ಐಲ್ಯಾಂಡ್ಸ್.‌ ಥೈಲ್ಯಾಂಡ್‌ನ ಕೊಹ್ ಸಮುಯಿಗೆ ಆಗಾಗ ಹೋಗುತ್ತಿರುತ್ತೇನೆ. ಅದು ನನ್ನ ಫೇವರಿಟ್‌ ಡೆಸ್ಟಿನೇಷನ್‌ ಎಂದರೂ ತಪ್ಪಾಗಲಾರದು.

ದಿಢೀರನೆ ಟ್ರಾವೆಲಿಂಗ್‌ ಹೊರಡುವೆ..

ಎಲ್ಲರಂತೆ ನಾನು ಪ್ಲ್ಯಾನ್ಡ್‌ ಟ್ರಾವೆಲರ್‌ ಅಲ್ಲ. ಆದ್ದರಿಂದ ಬ್ಯಾಗ್‌ ಪ್ಯಾಕ್‌ ಮಾಡಿಕೊಂಡು ನಾನು ಹೊರಡುವುದು ಬಹಳ ಕಡಿಮೆ. ಶೂಟಿಂಗ್‌ ಮುಗಿಸಿಕೊಂಡಾಗ ಎಲ್ಲಾದರೂ ಹೋಗುವ ಮನಸ್ಸಾದರೆ, ಎಲ್ಲರಲ್ಲೂ ಹೇಳಿ, ಕೇಳಿ ಕೂರುವ ಬದಲು ದಿಢೀರನೆ ಹೊರಟುಬಿಡುತ್ತೇನೆ. ಏರ್‌ಪೋರ್ಟ್‌ನಲ್ಲೋ, ಇಲ್ಲವೇ ಭೇಟಿ ನೀಡಿದ ಸ್ಥಳದಲ್ಲೋ ಎಲ್ಲಾದರೂ ಸರಿಯೇ. ಅಗತ್ಯವಿರುವ ಎಲ್ಲ ವಸ್ತುಗಳನ್ನು ಶಾಪಿಂಗ್‌ ಮಾಡಿಕೊಂಡು ನಾನು ಹೋದ ಪರಿಸರವನ್ನು, ಅಲ್ಲಿನ ಪ್ರಕೃತಿಯನ್ನು ಎಂಜಾಯ್‌ ಮಾಡುತ್ತೇನೆ.

ಸುರಕ್ಷತಾ ಕ್ರಮಗಳೊಂದಿಗೆ ಟ್ರೆಕ್ಕಿಂಗ್

ಟ್ರೆಕ್ಕಿಂಗ್‌ ಹೋಗುವುದೆಂದರೆ ನನಗೆ ತುಂಬಾ ಇಷ್ಟ. ನಾರ್ಥ್ ಲ್ಲಿದ್ದಾಗ ಅನೇಕ ಬಾರಿ ಟ್ರೆಕ್ಕಿಂಗ್‌ ಮಾಡಿದ್ದೇನೆ. ಅದರಲ್ಲೂ ಹಿಮಾಲಯ ತಪ್ಪಲಿನಲ್ಲಿ, ಮಂಜಿನ ನಡುವೆ ನಡೆದಾಡುವ ಖುಷಿಯೇ ಬೇರೆ. ಆದರೆ ಮೊದಲ ಬಾರಿಗೆ ಟ್ರೆಕ್ಕಿಂಗ್‌ ಹೋಗಲು ಬಯಸುವವರಿಗೆ ಸಲಹೆಗಳನ್ನು ಕೊಡಬೇಕೆಂದರೆ, ಸುರಕ್ಷತಾ ಕ್ರಮಗಳನ್ನು ಎಲ್ಲರೂ ತಪ್ಪದೇ ಪಾಲಿಸಬೇಕು. ಪ್ರಕೃತಿ ಎಷ್ಟು ಶಾಂತ ಹಾಗೂ ಸುಂದರವಾಗಿರುತ್ತದೋ, ಅಷ್ಟೇ ಭಯಾನಕವೂ ಹೌದು. ಅದಕ್ಕೆ ತಕ್ಕಂತೆ ನಾವು ಸನ್ನದ್ಧರಾಗಿಯೇ ಟ್ರೆಕ್ಕಿಂಗ್‌ ಗೆ ತೆರಳಬೇಕು.

kiran raj 2

ಪ್ರಕೃತಿಯ ನಡುವೆ ಸೋಲೋ…

ಪ್ರಕೃತಿ, ಪ್ರಾಣಿ, ಪಕ್ಷಿಗಳೆಂದರೆ ನನಗೆ ಅತಿಯಾದ ಪ್ರೀತಿ. ಅಲ್ಲಿಗೆ ಸೋಲೋ ರೈಡ್‌ ಹೋಗುವುದು ನನಗಿಷ್ಟವಾಗುತ್ತದೆ. ಸೋಲೋ ರೈಡ್‌ ಯಾಕೆ ಇಷ್ಟ ಅಂದರೆ, ನಾನು ಏನು ಮಾಡಬೇಕೆಂದು ನಿರ್ಧರಿಸುವವನು ನಾನು ಮಾತ್ರ, ಅಲ್ಲದೆ ಏನು ನೋಡಬೇಕೆಂದು ಅಂದುಕೊಳ್ಳುತ್ತೇನೋ ಅದೆಲ್ಲದಕ್ಕೂ ಅಲ್ಲಿ ಅವಕಾಶವಿರುತ್ತದೆ. ಗುಂಪಿನಲ್ಲಿ ಹೋದರೆ ಇದಕ್ಕೆಲ್ಲ ಸಾಧ್ಯವಿಲ್ಲ, ಜತೆಗೆ ಇತರರ ಜವಾಬ್ದಾರಿಯೂ ನನ್ನ ಹೆಗಲ ಮೇಲಿರುತ್ತದೆ. ಇಷ್ಟೆಲ್ಲಾ ಕಷ್ಟ ಬೇಕಾ ಹೇಳಿ..

ಜನರ ಪ್ರೀತಿಯೇ ಮುಖ್ಯ

ಸೆಲೆಬ್ರಿಟಿ ಆಗುವ ಮೊದಲು ಎಷ್ಟು ಸುತ್ತಾಡುತ್ತಿದ್ದೆನೋ ಅದಕ್ಕೆ ನಾಲ್ಕು ಪಟ್ಟು ಹೆಚ್ಚು ಈಗ ಸುತ್ತಾಡುತ್ತೇನೆ. ವ್ಯತ್ಯಾಸ ಏನಿದೆ ಏನೆಂದರೆ, ಅಂದು ನನಗೆ ಬೇಕಾದಂತೆ ಇರುತ್ತಿದ್ದೆ. ಇಂದು ಜನ ನನ್ನನ್ನು ಗುರುತಿಸುತ್ತಾರೆ. ಅದು ಕಷ್ಟವಂತೂ ಅಲ್ಲವೇ ಅಲ್ಲ. ಪ್ರೈವೆಸಿ ಸಿಗುವುದಿಲ್ಲ ಎಂದು ಖಂಡಿತವಾಗಿಯೂ ಹೇಳುವುದಿಲ್ಲ. ಯಾಕೆಂದರೆ ನನಗೆ ಬೇಕಾಗಿರುವುದು ಅಟೆನ್ಷನ್‌ ಅಂದಮೇಲೆ, ಸುತ್ತಲೂ ಅಭಿಮಾನಿಗಳ ಇರುವಿಕೆ ನನಗೆ ಖುಷಿ ಕೊಡುತ್ತದೆ. ಜನರ ಪ್ರೀತಿ ಗಳಿಸಿ ಜನರಿಂದ ದೂರ ಓಡಲು ಬಯಸಿದರೆ ಹೇಗೆ..?