• ಶಶಿಕರ ಪಾತೂರು

ರಾಧಾ ಕಲ್ಯಾಣದ ಮೂಲಕ‌ ನಾಡಿನ ಮನೆ ಮಾತಾದವರು ಕೃತ್ತಿಕಾ ರವೀಂದ್ರ. ಭೂಮಿಗೆ ಬಂದ ಭಗವಂತ ಚಿತ್ರದ ಗಿರಿಜಾ ಪಾತ್ರವಂತೂ ಅತ್ಯಂತ ಜನಪ್ರಿಯತೆ ತಂದು ಕೊಟ್ಟಿದು. ಇದೀಗ ರಾಜ ನಿವಾಸ ಎಂಬ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಕೃತ್ತಿಕಾ ಮಹಾನ್ ದೈವಭಕ್ತೆ. ಆಧ್ಯಾತ್ಮದಲ್ಲಿ ಒಲವುಳ್ಳವರು. ಅಂದಹಾಗೆ ಕೃತ್ತಿಕಾಗೆ ನಟನೆಯಷ್ಟೇ ಆಪ್ತವಾದ ವಿಚಾರ ಅಂದರೆ ಅದು ಪ್ರವಾಸ. ಆದರೆ ಕೃತ್ತಿಕಾ ಅವರ ಪ್ರವಾಸ ಬಹುತೇಕ ದೇವರ ಸುತ್ತಲೇ ಸುತ್ತುತ್ತದೆ ಎಂಬುದು ವಿಶೇಷ. ಇಂಥ ಅಧ್ಯಾತ್ಮಿಕ ಪಯಣದಲ್ಲೂ ರೋಚಕ ಅನುಭವಗಳನ್ನು ಕಂಡ ಅದೃಷ್ಟವಂತೆ ಕೃತ್ತಿಕಾ.

ನಿಮ್ಮ ಮೊದಲ ಪ್ರವಾಸದ ನೆನಪುಗಳಿವೆಯಾ?

ಅದು ನಾನು 7ನೇ ತರಗತಿಯಲ್ಲಿದ್ದಾಗ ಮಾಡಿದಂಥ ಪ್ರವಾಸ. ಅಜ್ಜಿಮನೆ, ದೊಡ್ಡಪ್ಪ, ದೊಡ್ಡಮ್ಮ ಹೀಗೆ ಕೂಡು ಕುಟುಂಬ ಎಲ್ಲ ಸೇರಿಕೊಂಡು ಪ್ರವಾಸ ಹೋಗಿದ್ದೆವು. ಆಗ ನನಗೆ ಬೇಸಗೆ ರಜೆ ಇತ್ತು. ನಾವು ಬಳ್ಳಾರಿಗೆ ಅಲ್ಲಿಂದ ಹಂಪಿಗೆ ಮತ್ತು ಅಲ್ಲಿಂದ ಮಂತ್ರಾಲಯಕ್ಕೂ ಹೋಗಿ ಬಂದಿದ್ದೆವು.

kritika ravindra

ಇತ್ತೀಚಿನ ಪ್ರವಾಸ ಯಾವುದು?

ಕೆಲವು ದಿನಗಳ ಹಿಂದೆಯಷ್ಟೇ ನಾನು ತಮಿಳು‌ನಾಡಿಗೆ ಹೋಗಿ ಬಂದೆ. ಅಲ್ಲಿ ಚಿದಂಬರಂನ ನಟರಾಜ ದೇವಸ್ಥಾನಕ್ಕೆ ಹೋಗುವುದು ನನ್ನ ಬಹಳ ದಿನಗಳ ಕನಸಾಗಿತ್ತು. ನಟರಾಜ ತನ್ನ ನಾಟ್ಯಭಂಗಿಯಲ್ಲಿರುವ ಏಕೈಕ ದೇವಸ್ಥಾನ ಅದು. ಪಂಚಭೂತ ಲಿಂಗಗಳಲ್ಲಿ ಒಂದಾಗಿ ಆಕಾಶ ಲಿಂಗ ಎಂದು ಹೆಸರಾಗಿರುವ ಕ್ಷೇತ್ರ ಅದು. ಅಲ್ಲಿ ಅಮ್ಮನವರೂ ಜತೆಗಿದ್ದಾರೆ. ಹೀಗಾಗಿ ನನಗೆ ಆ ದೇಗುಲದಲ್ಲಿ ವಿಶೇಷ ಪ್ರೀತಿ ಇತ್ತು. ಇತ್ತೀಚೆಗಷ್ಟೇ ಆ ಕ್ಷೇತ್ರದರ್ಶನದ ಕನಸು ನನಸಾಯಿತು. ಇದಲ್ಲದೆ ಎರಡು ವಾರಗಳ ಹಿಂದೆ ನಾನು ಮತ್ತು ಅಮ್ಮ ಗುಜರಾತ್ ಗೆ ಹೋಗಿದ್ದೆವು. ಜ್ಯೋತಿರ್ಲಿಂಗ ಮತ್ತು ದ್ವಾರಕೆಯ ಕೃಷ್ಣನನ್ನು ನೋಡುವುದು ಗುರಿಯಾಗಿತ್ತು.

ಅತ್ಯಂತ ಸ್ಮರಣೀಯ ಪ್ರವಾಸ ಯಾವುದು?

ಮರೆಯಲಾಗದ ಪ್ರವಾಸ ಅಂದರೆ ಎರಡು ಅನುಭವಗಳಿವೆ.‌ ಈ ವರ್ಷಾರಂಭವನ್ನು ನಾನು ಉತ್ತರಾಖಂಡದಲ್ಲಿ ಕಳೆದಿದ್ದೆ. ಜೋಶಿ ಮಠದ ಹತ್ತಿರ ಇರುವ ಚಮೋಲಿ ಎನ್ನುವ ಜಾಗ ಅದು. ಅಲ್ಲಿನ ತಾಪಮಾನ ಮೈನಸ್ ಒಂದರಷ್ಟಿತ್ತು. ನನ್ನ ಜೀವನದಲ್ಲಿ ಅಷ್ಟೊಂದು ತಂಪಾದ ಜಾಗದಲ್ಲಿ ಕಳೆದಿದ್ದು ಅದೇ ಮೊದಲು. ಸ್ನೇಹಿತೆ ಶ್ರುತಿ ಜತೆ ಸೇರಿ ಸ್ನೋ ಹೈಕಿಂಗ್ ಮಾಡಿದ್ದೆ. ಆಕೆಯೇ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದಳು. ಆ ಸ್ನೋ ಟ್ರೆಕ್ ಅನುಭವ ಜೀವನಪೂರ್ತಿ ಮರೆಯೋಕೆ ಸಾಧ್ಯವಿಲ್ಲ ಅಂತಾನೇ ಹೇಳಬಹುದು.

ಇನ್ನೊಂದು ಅನುಭವ ಏನೆಂದರೆ12 ಜೋತಿರ್ಲಿಂಗ ದರ್ಶನ ಮಾಡಬೇಕು ಎಂದು ಹಾಕಿಕೊಂಡಂಥ ಗುರಿ. ಒಂದೂವರೆ ವರ್ಷದಲ್ಲಿ 10 ಕ್ಷೇತ್ರ ದರ್ಶನ‌ ಮಾಡಿದ್ದೇನೆ. ಇದರಲ್ಲಿ ವಿಶೇಷವಾಗಿ ಕೇದಾರನಾಥ ಮತ್ತು ಮಹಾಕಾಲೇಶ್ವರ ಮರೆಯಲಾಗದ್ದು.‌ ಕೇದಾರನಾಥದಲ್ಲಿ 22 ಕಿ.ಮೀಗಳ ಟ್ರೆಕ್ ಅದು. ಅಷ್ಟು ದೂರವನ್ನು ನಾನು ನಡೆಯುವಾಗ ಅಕ್ಷರಶಃ ನನ್ನ 31 ವರ್ಷಗಳ ಜೀವನ ಪಯಣ ನೆನಪಾಗಿದೆ.

ನಿಮ್ಮ ಪ್ರವಾಸದ ರೋಚಕ ಅನುಭವಗಳ್ಯಾವುದು?

ಒಂದು ಬಾರಿ ಕೇರಳದ ಕಣ್ಣೂರು ಬೀಚ್ ಗೆ ಹೋಗಿದ್ದೆ. ಅದು ಆತಂಕ ತಂದಂಥ ಅನುಭವವಾಗಿತ್ತು. ಹಾಗಾಗಲು ಮುಖ್ಯ ಕಾರಣ ಅದು ನನ್ನ ಸೋಲೊ ಟ್ರಿಪ್ ಆಗಿತ್ತು. ಇಡೀ ದಿನ ಒಬ್ಬಳೇ ಇದ್ದೆ. ರೂಮ್ ಕೂಡ ಬುಕ್ ಮಾಡಿರಲಿಲ್ಲ. ಅದರೆ ಅಲ್ಲಿ ಯಾರೋ ನನ್ನ ಹಿಂಬಾಲಿಸ್ತಿದ್ದಾರೆ ಅನಿಸಿತ್ತು. ಆದರೆ ಕೊನೆಗೆ ನೋಡಿದರೆ ಯಾರೂ ಇರಲಿಲ್ಲ. ಅದೇ ರೀತಿ ಉತ್ತರಾಖಂಡದ ಜೋಶಿಮಠದಲ್ಲಿ 360ಡಿಗ್ರಿಯಲ್ಲಿ ಕಂಡ ಹಿಮ ಮತ್ತು ವಾರಾಣಸಿಯ ಘಾಟ್ ಗಳು ಕೂಡ ವಿಭಿನ್ನ ಅನುಭವ ನೀಡಿವೆ.

kritika ravindra 1

ಪ್ರವಾಸದಿಂದ ನೀವು ಕಲಿತಿರುವುದೇನು?

ಪ್ರವಾಸದ ಮೂಲಕ ನಮ್ಮನ್ನು ನಾವು ತುಂಬಾನೇ ಕಂಡುಕೊಳ್ಳುತ್ತೇವೆ. ಇವೆಲ್ಲ ಪ್ರಯತ್ನ ಪಡದೆ ಏನೂ ಆಗುವುದಿಲ್ಲ. ಸಾಮಾನ್ಯವಾಗಿ ನನಗೆ 14 ಡಿಗ್ರಿ ಚಳಿಯನ್ನೇ ತಡೆಯೋಕೆ‌ ಆಗುತ್ತಿರಲಿಲ್ಲ. ಆದರೆ ನಮ್ಮ ಲಿಮಿಟ್ ಅಂತ ನಾವು ಏನು ಅಂದುಕೊಂಡಿರುತ್ತೇವೆಯೋ ಅದನ್ನು ಮೀರಲು ಸಾಧ್ಯ ಎನ್ನುವುದನ್ನು ಪ್ರವಾಸ ತಿಳಿಸಿಕೊಡುತ್ತದೆ. ಅದೇ ರೀತಿ ಸಾಕಷ್ಟು ಹೊಸಬರನ್ನು ಭೇಟಿಯಾಗುವುದು ಅನುಭವಗಳ ಹಂಚುವಿಕೆ ಎಲ್ಲವೂ ಹೊಸ ಅನುಭವ ನೀಡುತ್ತದೆ. ಹೀಗಾಗಿ ಪ್ರವಾಸ ಅಂದರೆ ನನಗೆ ಕಲಿಕೆ.

ನೀವು ಪದೇಪದೆ ಪ್ರವಾಸ ಮಾಡಲು ಬಯಸುವ ತಾಣ ಯಾವುದು?

ನಾನು ಮಂಗಳೂರಿಗೆ ಪದೇಪದೆ ಹೋಗುತ್ತಿರುತ್ತೇನೆ. ಈ‌ ನಗರಕ್ಕೆ ಹೊಂದಿಕೊಂಡಂತಿರುವ 'ಬಿ.ಸಿ ರೋಡ್ ವನದುರ್ಗ ದೇವಸ್ಥಾನ'ದ ಅನುಭವ ಹೇಳಿ ಮುಗಿಯದಂಥದ್ದು. ಸುಮಾರು 11 ವರ್ಷಗಳಿಂದ ಪ್ರತಿ ತಿಂಗಳು ದರ್ಶನ‌ ಮಾಡುವಂಥ ದೇವಸ್ಥಾನ ಅದು. ಆ ಜಾಗದಿಂದ ನನಗೆ ಧನಾತ್ಮಕ ಭಾವಗಳು, ಅಧ್ಯಾತ್ಮಿಕ ಅನುಭವಗಳು ಲಭಿಸಿವೆ.

kritika ravindra 2

ಪ್ರವಾಸಕ್ಕೆ ಹೊರಡುವಾಗ ತಪ್ಪದೇ ಒಯ್ಯುವಂಥ ವಸ್ತು ಯಾವುದು?

ಪ್ರವಾಸ ಅಂತ ಹೊರಾಟಾಗ ಸಂಪೂರ್ಣವಾಗಿ‌ ಒಂದು ಮೆಡಿಕೇಶನ್ ಕಿಟ್ ತಗೋಬೇಕು. ನಾರ್ಮಲ್ ಪ್ರವಾಸ ಅಂದರೆ ರೆಗ್ಯುಲರ್ ಪ್ರವಾಸಕ್ಕೆ ಏನು ತಗೋತೀವಿ ಅದನ್ನು ತೆಗೆದುಕೊಂಡು ಹೋಗಬೇಕು. ಟ್ರೆಕ್ಕಿಂಗ್ ಆದರೆ ಪ್ರಾಪರ್ ಶೂ ಖಂಡಿತವಾಗಿ ಅಗತ್ಯ.

ಒಂದು ಸಾಲಲ್ಲಿ ಪ್ರವಾಸವನ್ನು ವ್ಯಾಖ್ಯಾನಿಸುತ್ತೀರಾ?

ಪ್ರವಾಸ ಅಂದರೆ ತುಂಬ ದೂರ ಹೋಗಬೇಕಿಲ್ಲ. ಸಮ್ ಥಿಂಗ್ ಅವೇ ಫ್ರಮ್ ಯುವರ್ ಡೈಲಿ ಲೈಫ್. ಅಷ್ಟೇ.