• ಶಶಿಕರ ಪಾತೂರು

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಚಿತ್ರ 'ದಿ ಡೆವಿಲ್'. ಚಿತ್ರದ ನಾಯಕಿಯಾಗುವ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿರುವ ರಚನಾ ರೈ ಪ್ರವಾಸ ಪ್ರಿಯೆ. ಆದರೆ ಈಕೆಯ ಪ್ರವಾಸಗಳಲ್ಲಿ ಪುಣ್ಯ ಕ್ಷೇತ್ರದರ್ಶನಕ್ಕೇ ಪ್ರಾಧಾನ್ಯ.

ನಿಮಗೆ ಪ್ರವಾಸದ ಆಸಕ್ತಿ ಮೂಡಿದ್ದು ಹೇಗೆ?

ನಾನು ವಿದ್ಯಾರ್ಥಿನಿಯಾಗಿದ್ದಾಗಲೇ ಬ್ಯಾಡ್ಮಿಂಟನ್ ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದೆ. ಸ್ಪರ್ಧೆಗೆಂದೇ ಪ್ರತಿ ತಿಂಗಳು ರಾಜ್ಯದೊಳಗೆ ಎರಡು ಜಾಗಗಳಿಗೆ ಹೋಗುವ ಸಂದರ್ಭ ಇತ್ತು. ಹೀಗಾಗಿ ಪ್ರವಾಸ ಎನ್ನುವುದು ನನ್ನ ಆಸಕ್ತಿಯೊಳಗೇ ಸೇರಿಕೊಂಡಿತ್ತು. ಅದೇ ರೀತಿ ದೇವರ ಮೇಲಿನ ಅಪಾರವಾದ ಭಕ್ತಿ ನನ್ನನ್ನು ಸದಾ ದೇವಸ್ಥಾನಗಳ ದರ್ಶನಕ್ಕೆ ಪ್ರೇರೇಪಿಸಿದೆ.

ಮೊದಲ‌ ಅಧಿಕೃತ ಪ್ರವಾಸ ಶಾಲೆಯಿಂದಲೇ ಶುರುವಾಯಿತೇ?

ದಕ್ಷಿಣ ಕನ್ನಡದ ಉಜಿರೆಯ ಶಾಲೆಯಿಂದ ನಮ್ಮ ಪ್ರವಾಸ ಅಂದರೆ ಅದು ಧರ್ಮಸ್ಥಳ ಕ್ಷೇತ್ರದೆಡೆಗಷ್ಟೇ ಸೀಮಿತವಾಗಿತ್ತು. ಆದರೆ ಕುಟುಂಬದೊಡನೆ ನಾನು ಮಾಡಿದ ಮೊದಲ ಪ್ರವಾಸದಲ್ಲಿ ಜೋಗ ಜಲಪಾತ ವೀಕ್ಷಿಸಿದ್ದ ನೆನಪಿದೆ. ರಾಜ, ರೋರರ್, ರಾಕೆಟ್, ಲೇಡಿ ವೈಭವಕ್ಕೆ ಮನಸೋತು ಹೋಗಿದ್ದೆ. ಮೊದಲೇ ನೀರೆಂದರೆ ನನಗೆ ಇಷ್ಟ. ನೀರಿನ ಭೋರ್ಗರೆತ ಅಂದರೆ ಭಯವೂ ಹೌದು. ಮೊದಲ ಬಾರಿ ಅಷ್ಟೆತ್ತರದಿಂದ ಧುಮ್ಮುಕ್ಕುವ ಜಲಪಾತವನ್ನು ನೇರವಾಗಿ ಕಂಡ ನೆನಪು ನನ್ನನ್ನು ಕಾಡುತ್ತಿದೆ.

rachana rai 2

ನಿಮ್ಮ ಪ್ರವಾಸದ ವೇಳೆ ಜತೆಗೆ ಯಾರಾದರೂ ಇರಲೇಬೇಕು ಎಂದು ಬಯಸುತ್ತೀರಾ?

ಹೌದು. ‌ಯಾಕೆಂದರೆ ನನಗೆ ಒಂಟಿಯಾಗಿ‌ ಪಯಣಿಸಲು ಇಷ್ಟವಿಲ್ಲ. ಮಾತ್ರವಲ್ಲ, ಕುಟುಂಬದ ಜೊತೆ ಹೋಗುವುದರಲ್ಲೇ ತುಂಬ ಖುಷಿ. ಹೆಚ್ಚಾಗಿ ದೇವಾಲಯಗಳಿಗೆ ಹೋಗುವ ಕಾರಣ, ವಾತಾವರಣ ಕೂಡ ಚೆನ್ನಾಗಿರುತ್ತದೆ.

ಈ ವಯಸ್ಸಿನಲ್ಲೇ ನಿಮಗೆ ಇಷ್ಟೊಂದು ಭಕ್ತಿ ಮೂಡಲು ಕಾರಣವೇನು?

ಗೊತ್ತಿಲ್ಲ. ನಿಜ ಹೇಳಬೇಕೆಂದರೆ ನನ್ನ ತಂದೆತಾಯಿ ಕೂಡ ನನ್ನಷ್ಟು ಕ್ಷೇತ್ರದರ್ಶನ ಮಾಡುವವರಲ್ಲ. ಆದರೆ ನನಗಂತೂ ಬಾಲ್ಯದಿಂದಲೇ ರಾಜ್ಯದ, ದೇಶದ ವಿವಿಧ ಪುಣ್ಯಕ್ಷೇತ್ರಗಳನ್ನು ಪ್ರತಿ ವರ್ಷವೂ ಸಂದರ್ಶಿಸುವುದೆಂದರೆ ಬಲು ಪ್ರೀತಿ.

ನೀವು ಹೆಚ್ಚಾಗಿ ಭೇಟಿ‌ ನೀಡುವ ದೇವಸ್ಥಾನಗಳ ಬಗ್ಗೆ ಹೇಳಿ

ಕೊಲ್ಲೂರು ಕ್ಷೇತ್ರದರ್ಶನ ಮಾಡುತ್ತಿರುತ್ತೇನೆ. ಅಲ್ಲಿ ಬೆಟ್ಟ ಹತ್ತುವುದಿಲ್ಲ. ಆದರೆ ಮೂಕಾಂಬಿಕಾ ಅಮ್ಮನ ದರ್ಶನ ಮಾಡಿದರೆ ಜಗತ್ತನ್ನೇ ಕಂಡ ಸಂಭ್ರಮ ನನ್ನಲ್ಲಿ ಮೂಡುತ್ತದೆ. ಅಲ್ಲಿಂದ ಮರಳುವಾಗ ಬ್ರಹ್ಮಲಿಂಗೇಶ್ವರ ದೇವರಿಗೆ ಕೈ ಮುಗಿದು ಮರಳುತ್ತೇನೆ. ಅದೇ ರೀತಿ ಕುಕ್ಕೆ ಸುಬ್ರಹ್ಮಣ್ಯಕ್ಕೂ ಭೇಟಿ ನೀಡುತ್ತಿರುತ್ತೇನೆ. ಅಲ್ಲಿ ಹುತ್ತದ ಮಣ್ಣನ್ನು ಪ್ರಸಾದವಾಗಿ ನೀಡುತ್ತಾರೆ. ನಾನು ಅದನ್ನು ತಂದು‌ ಮನೆಯಲ್ಲಿ ಸಂಗ್ರಹಿಸಿಡುತ್ತೇನೆ.

ನಿಮ್ಮ ಇಷ್ಟ ದೈವದ ಕ್ಷೇತ್ರಗಳ ಬಗ್ಗೆಯೂ ತಿಳಿಸುತ್ತೀರ?

ಬಂಟ್ವಾಳದ ಸಮೀತ ಇರುವ ಪಣೋಳಿಬೈಲು ಕ್ಷೇತ್ರವಿದೆ. ಅದು ತಾಯಿ ಕಲ್ಲುರ್ಟಿ ದೈವದ ಮಹಿಮೆಯ ಜಾಗ. ಅಲ್ಲಿಗೆ ಹೋಗುತ್ತಿರುತ್ತೇನೆ. ಅದೇ ರೀತಿ ಮಂಗಳೂರಿಗೆ ಸಮೀಪದ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಕೂಡ ಹಾಗೆಯೇ. ನಮಗೆ ತುಳುನಾಡಿನ ಮಂದಿಗೆ ಅದು ಅಜ್ಜನ ಮನೆ ಇದ್ದ ಹಾಗೆ. ಅದೇ ರೀತಿ ಕೇರಳದಲ್ಲಿ ಮಾಡಾಯಿ ಕಾವು ದೇವಸ್ಥಾನಕ್ಕೆ ಹೋಗುತ್ತಿರುತ್ತೇನೆ.

ಮಾಡಾಯಿಕಾವು ಬಗ್ಗೆ ದರ್ಶನ್ ಗೆ ಸಲಹೆ ನೀಡಿದ್ದು ನೀವೇನಾ?

ಖಂಡಿತವಾಗಿ ಇಲ್ಲ. ನಾನು ಮತ್ತು ದರ್ಶನ್ ಸರ್ ಯಾವತ್ತೂ ದೇವಸ್ಥಾನಗಳ ಬಗ್ಗೆ ಮಾತನಾಡಿಲ್ಲ. ಅವರು ತಮ್ಮ ಪ್ರಾಣಿ ಸಾಕಣೆ, ಫೊಟೋಗ್ರಫಿ ಬಗ್ಗೆ ಮಾತ್ರ ಮಾತನಾಡುತ್ತಿದ್ದರು. ಮಾಡಾಯಿ ಕಾವುಗೆ ನನ್ನ ಕುಟುಂಬದವರು ಮೊದಲೇ ಹೋಗುತ್ತಿದ್ದರು. ನಾನು ಕೂಡ ಬಾಲ್ಯದಿಂದಲೇ ಪ್ರತಿ ವರ್ಷವೂ ಹೋಗುತ್ತಿದ್ದೇನೆ. ಅದೊಂದು ದೈವಿಕ ಜಾಗ. ಶಿವ ಮತ್ತು ಭಗವತಿಯ ಕ್ಷೇತ್ರ ಇದೆ. ಅಲ್ಲಿ ಕೋಳಿ‌ಮಾಂಸವನ್ನು ಪ್ರಸಾದವಾಗಿ ನೀಡುತ್ತಾರೆ. ಅಲ್ಲಿನ ಕಾರಣಿಕವೇ ಬೇರೆ. ಹೋಗಿ ಕೈ ಮುಗಿದು ಬರುತ್ತಿರುತ್ತೇವೆ.

ಪ್ರವಾಸದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ನಡೆದ ಘಟನೆಗಳು ಏನಾದರೂ ಇವೆಯೇ?

ಇಲ್ಲ. ಒಂದೇ ಒಂದು ಘಟನೆ ಹೇಳುವುದಾದರೆ ನಾನು ಕಸಿನ್ಸ್ ಜತೆಗೆ ಗೋವಾಗೆ ಹೊರಟಿದ್ದೆವು. ಬೆಂಗಳೂರಿನಿಂದ ಹೊರಟಿದ್ದ ನಮಗೆ ಟ್ರಾಫಿಕ್ ‌ಕಾರಣ ಕೊನೆಯ ಕ್ಷಣದಲ್ಲಿ ಫ್ಲೈಟ್ ಮಿಸ್ ಆಗಿತ್ತು. ಎರಡು‌ ಗಂಟೆಗಳ ಬಳಿಕ ಮತ್ತೊಂದು ಫ್ಲೈಟ್ ಮೂಲಕ ಗೋವಾ ಸೇರಿದ್ದೆವು. ಗೋವಾದಲ್ಲಿ ನನ್ನ ಜನ್ಮದಿನ ಆಚರಿಸಿದ್ದರು. ಬೀಚ್ ನಲ್ಲಿಯೇ ಕೇಕ್ ಕತ್ತರಿಸಿದ್ದು ನನಗೆ ವಿಶೇಷ ಸಂದರ್ಭ ಆಗಿತ್ತು.

rachan rai

ವಿದೇಶ ಪ್ರವಾಸದ ಅನುಭವಗಳೇನಾದರೂ?

ನಾನು ವಿದೇಶಕ್ಕೆಂದು ಹೋಗಿರುವುದು ಥಾಯ್ ಲ್ಯಾಂಡ್ ಗೆ ಡೆವಿಲ್ ಚಿತ್ರೀಕರಣಕ್ಕಾಗಿ. ಆದರೆ ನನಗೆ ಅಲ್ಲಿ ಒಂದು ದಿನವಷ್ಟೇ ಬ್ರೇಕ್ ಸಿಕ್ಕಿತ್ತು. ಆಗ ತಂಡ ಚಿತ್ರೀಕರಣದಲ್ಲಿದ್ದ ಕಾರಣ ನನಗೆ ಸುತ್ತಾಡಲು ಸಾಧ್ಯವಾಗಿರಲಿಲ್ಲ. ಮಾತ್ರವಲ್ಲ ನನಗೆ ಪ್ರಾಕ್ಟಿಸ್ ಕೂಡ ಮಾಡುವುದಿತ್ತು. ಫುಕೆಟ್ ದ್ವೀಪ, ಕ್ರಾಬಿ ಕಡಲ ತೀರಗಳು ವಿಶ್ವಪ್ರಸಿದ್ಧ. ಆದರೆ ಮಂಗಳೂರು ಸಮುದ್ರ ತೀರ ನಮಗೆ ಅಭ್ಯಾಸವಾದ ಕಾರಣ ವೈಯಕ್ತಿಕವಾಗಿ ಅಷ್ಟೇನೂ ವಿಶೇಷ ಅನಿಸಲಿಲ್ಲ. ದ್ವೀಪದಲ್ಲಿ ಚಿತ್ರೀಕರಣಕ್ಕಾಗಿ ಬೋಟ್ ಹತ್ತಿದ್ದು ಮಾತ್ರ ಹೊಸ ಅನುಭವವಾಗಿತ್ತು.

ಥೈಲ್ಯಾಂಡ್ ನಲ್ಲಿನ ಮರೆಯಲಾಗದ ಘಟನೆ ಅಂದರೆ ಯಾವುದು?

ಥೈಲ್ಯಾಂಡ್ ನಲ್ಲಿ ಆಹಾರ ತುಂಬ ಚೆನ್ನಾಗಿತ್ತು. ಒಂದು ವೇಳೆ ಈಗ ನೀವು ನನ್ನ ಫೇವರಿಟ್ ಆಹಾರ ಯಾವುದು ಎಂದು ಕೇಳಿದರೆ ಥಾಯ್ ಫುಡ್ ಎಂದೇ ಹೇಳುತ್ತೇನೆ. ಯಾಕೆಂದರೆ ನನಗೆ ಮೊದಲೇ ಸೀಫುಡ್ ಅಂದರೆ ಬಲು ಇಷ್ಟ. ಹಾಗಾಗಿ ಅಲ್ಲಿ ಆಹಾರ ಸೇವಿಸಿದ್ದೇ ಮರೆಯಲಾಗದ ಘಟನೆ ಎನ್ನಬಹುದು.

ಇದುವರೆಗಿನ ಪ್ರವಾಸಗಳಲ್ಲಿ ತುಂಬ ಖುಷಿ ನೀಡಿದ ಪ್ರಯಾಣ ಯಾವುದು?

ಕುಟುಂಬದೊಂದಿಗೆ ತಿರುಪತಿಗೆ ಹೋಗಿದ್ದು ತುಂಬ ಖುಷಿ ನೀಡಿತ್ತು. ಪೂರ್ತಿ ಕುಟುಂಬದ ಜತೆಗೆ ಒಂದು ರಾಜ್ಯ ಬಿಟ್ಟು ಮತ್ತೊಂದು ರಾಜ್ಯಕ್ಕೆ ಹೋದಂಥ ಅನುಭವ. ಅಲ್ಲಿ ಕಣ್ತುಂಬ ನೋಡಲು ಅವಕಾಶ ಇರುವುದಿಲ್ಲ. ಆದರೆ ಅದೃಷ್ಟವಶಾತ್ ನಾವು ಹೋಗಿದ್ದಾಗ ಅಂಥ ಗುಂಪು ಇರಲಿಲ್ಲ. ಇಂದಿಗೂ ಕಣ್ಮುಚ್ಚಿದರೆ ಗರ್ಭಗುಡಿಯಲ್ಲಿನ ಪ್ರತಿಷ್ಠಾಪಿಸಲಾದ ತಿರುಪತಿ ದೇವರ ರೂಪ ನನ್ನ ಕಣ್ಮುಂದೆ ಮೂಡಬಲ್ಲದು.

ಪ್ರಾಕೃತಿಕ ಪ್ರದೇಶಗಳಲ್ಲಿನ ಅವಿಸ್ಮರಣೀಯ ಸಂದರ್ಭ ಯಾವುದು?

ಕೊಡೈಕೆನಾಲ್ ಗೆ ಹೋಗಿದ್ದು ನನ್ನ ಮರೆಯಲಾಗದ ಟ್ರಿಪ್. ಅದು ಕೂಡ ಚಿಕ್ಕಂದಿನಲ್ಲಿರುವಾಗಲೇ ಹೋಗಿರುವಂಥದ್ದು. ಕುಟುಂಬದ ಜತೆಗೆ ಹೋಗಿದ್ದೆ ಎನ್ನುವ ಕಾರಣದಿಂದಲೇ ನನಗೆ ಅದು ಅವಿಸ್ಮರಣೀಯವೆನಿಸಿದೆ. ಮಾತ್ರವಲ್ಲ, ನೀರಿನಂತೆ ಗುಡ್ಡ, ಬೆಟ್ಟದ ಪರಿಸರ ಕೂಡ ನನ್ನ ಆಸಕ್ತಿಯ ತಾಣಗಳೇ ಆಗಿವೆ. ಒಟ್ಟು ವಾತಾವರಣವೇ ಇಷ್ಟವಾಗಿತ್ತು.