• ಶಶಿಕರ ಪಾತೂರು

ಖುಷಿ ರವಿ ಭರವಸೆಯ ಕಲಾವಿದೆ. ಅವರು ತಮ್ಮ ಅಸಾಧಾರಣ ನಟನೆಯಿಂದಲೇ ಅಭಿಮಾನಿಗಳನ್ನು ಸೃಷ್ಟಿಸಿಕೊಂಡವರು. ಪ್ರವಾಸಿ ಪ್ರಿಯೆಯೂ ಆಗಿರುವ ಈ ಬೆಂಗಳೂರಿನ ಬೆಡಗಿ ತಮಗಾದ ವಿಶಿಷ್ಟ ಪ್ರವಾಸದ ಅನುಭವಗಳನ್ನು ಪ್ರವಾಸಿ ಪ್ರಪಂಚದೊಂದಿಗೆ ಹಂಚಿಕೊಂಡಿದ್ದಾರೆ.

ನಿಮ್ಮ ಜೀವನದಲ್ಲಿ ಪ್ರವಾಸದ ಪಾತ್ರವೇನು?

ಪ್ರವಾಸ ಅಂದರೆ ಇಷ್ಟ. ಆದರೆ ಬಾಲ್ಯದಿಂದ ಪ್ರವಾಸ ಹೋಗಿದ್ದೇ ಕಡಿಮೆ. ಬೆಂಗಳೂರು ಬಿಟ್ಟು ಮೈಸೂರಿಗೆ ಹೋಗಿದ್ದೇ ಕಾಲೇಜು ಮೆಟ್ಟಿಲು ಹತ್ತಿದ ಮೇಲೆ. ನಮ್ಮದು ಕೂಡು ಕುಟುಂಬ. ತಾತ, ಅಜ್ಜಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ ನಮ್ಮನ್ನು ಹೊರಗೆ ಕರೆದೊಯ್ಯಲು ಅಪ್ಪ, ಅಮ್ಮನಿಗೆ ಸಮಯವೇ ಸಿಗುತ್ತಿರಲಿಲ್ಲ. ಆದ ಕಾರಣ ಮಂಡ್ಯದ ಅಜ್ಜಿ ಮನೆಗೆ ಹೋಗುವುದೇ ನಮ್ಮ ಬಾಲ್ಯ ಕಾಲದ ಪ್ರವಾಸವಾಗಿತ್ತು. ಮದ್ದೂರಿನಲ್ಲಿ ಸುತ್ತಾಡುತಿದ್ದೆವು. ಆದರೆ ಬಿ‌.ಜಯಶ್ರೀಯವರ ಸ್ಪಂದನಾ ನಾಟಕ‌ ತಂಡದ ಮೂಲಕ ರಾಜ್ಯದ ಹೊರಗೆ ಇನ್ನಷ್ಟು ನೋಡುವ ಅವಕಾಶ ಲಭಿಸಿತ್ತು. ನಾಟಕಗಳಿಗಾಗಿ ಕೊಲ್ಕತ್ತಾ, ಗೌಹಾಟಿ, ನಾಗಾಲ್ಯಾಂಡ್ ಮೊದಲಾದ ಕಡೆಗೆ ಓಡಾಡಿದ್ದೆವು. ಆದರೆ ಪ್ರವಾಸ ಅಂತ ಎಂಜಾಯ್ ಮಾಡಿದ್ದು ಮದುವೆಯ ಬಳಿಕವೇ.

khushi ravi  3

ಹನಿಮೂನ್‌ ನ ಸುತ್ತಾಟ ಹೇಗಿತ್ತು?

ನಾವು ಹನಿಮೂನ್ ರೀತಿಯಲ್ಲಿ ಹೋಗಿದ್ದು ಅಂದರೆ ದುಬೈಗೆ. ಅದು ನನ್ನ ಮೊದಲ ವಿದೇಶ ಪ್ರಯಾಣವೂ ಹೌದು. ಅಲ್ಲಿ ನಮ್ಮ ಸಂಬಂಧಿಕರ ಮನೆಯೂ ಇತ್ತು. ಸಾಮಾನ್ಯ ಬುರ್ಜ್ ಖಲೀಫ, ದುಬೈನ‌ ಸಾಂಸ್ಕೃತಿಕ ನಗರಿಯಂತಿರುವ ಗ್ಲೋಬಲ್ ವಿಲೇಜ್, 1200 ಶಾಪಿಂಗ್ ಸೆಂಟರ್ ಗಳಿರುವ ಮಾಲ್ ಆಫ್ ದುಬೈ ಅಬುದಾಬಿಯ ಫೆರಾರಿ ವಲ್ಡ್ ಮತ್ತು ಸಾಕಷ್ಟು ಉದ್ಯಾನವನಗಳಲ್ಲಿ ಸುತ್ತಾಡಿದ್ದೇವೆ. ಐಷಾರಾಮಿ ಸೆವೆನ್ ಸ್ಟಾರ್ ಹೊಟೇಲ್ ಬುರ್ಜ್ ಅಲ್ ಅರಬ್ ಗೂ ಹೋಗಿದ್ದೇವೆ. ಹೊಟೇಲ್ ತಳದಲ್ಲೇ ಬೀಚ್ ಇದೆ. ಹಾಗೆಯೇ ಪಾಮ್ ಜುಮೇರ ವ್ಯೂವ್ ನೋಡಲು ಹೋಗಿದ್ದೆವು. ಬುರ್ಜ್ ಖಲೀಫ ಎತ್ತರವಾಗಿರುವುದೇನೋ ನಿಜ.‌ ಆದರೆ ಒಳಗಿನಿಂದ ತುಂಬ ಹೊತ್ತು ಎಂಜಾಯ್ ಮಾಡಲು ಸಾಧ್ಯವಿಲ್ಲ!

ನಿಮಗೆ ದುಬೈನಲ್ಲಿ ಇಷ್ಟವಾದ ವಿಚಾರಗಳು?

ನನಗೆ ದುಬೈನಲ್ಲಿ ತುಂಬಾನೇ ಎಕ್ಸೈಟ್ ನೀಡಿರುವುದು ಅಂದರೆ ಶಾಪಿಂಗ್ ಅಂತಾನೇ ಹೇಳಬಹುದು. ಉದಾಹರಣೆಗೆ ಕುನಾಫ ಚಾಕಲೇಟ್ಸ್, ಡ್ರೈ ಫ್ರುಟ್ಸ್, ಶೂಸ್, ವಾಚ್, ಗ್ಲಾಸಸ್ ಕೊಳ್ಳುವುದು ನನ್ನ ಕ್ರೇಜ್ ಆಗಿತ್ತು. ವಿಂಡೋ ಶಾಪಿಂಗ್ ಅಥವಾ ನಾರ್ಮಲ್ ಶಾಪಿಂಗ್ ಎರಡನ್ನೂ ಮಾಡಿದ್ದೇನೆ. ವೈವಿಧ್ಯಮಯ ಆಹಾರಗಳನ್ನು ಟ್ರೈ ಮಾಡಿದ್ದೇವೆ. ನನಗೆ ನಾನ್ ವೆಜ್ ಇಷ್ಟ. ಅಲ್ಲಿ ಭಾರತೀಯ ಆಹಾರದ ಜತೆಗೆ ಅರೆಬಿಕ್ ಶೈಲಿಯ ಆಹಾರ ಕೂಡ ಪ್ರಯೋಗ ಮಾಡಿದ್ದೇವೆ. ಚಿಕನ್, ಮಟನ್ ನೊಂದಿಗೆ ಒಂಟೆ ಹಾಲು ಕೂಡ ಕುಡಿದಿದ್ದೇವೆ. ಡೆಸರ್ಟ್ ಸಫಾರಿ ಕೂಡ ಚೆನ್ನಾಗಿತ್ತು. ಮರುಭೂಮಿ‌ ಮಧ್ಯೆ ಕ್ಯಾಂಪ್ ಫೈರ್ ಹಾಕಿ ಅಲ್ಲಿ ಪರ್ಫಾರ್ಮನ್ಸ್, ಬೆಲ್ಲಿ ಡಾನ್ಸ್ ವೀಕ್ಷಣೆ ಮಾಡಿದ್ದು ಚೆನ್ನಾಗಿತ್ತು.

khushi ravi

ಭಾರತದ ಒಳಗಿನ ಪ್ರವಾಸದ ಅನುಭವ?

ಮೊದಲೇ ಹೇಳಿದಂತೆ ಮನೆಯ ಕಡೆಯಿಂದ ಸುತ್ತಾಡಿರುವುದಕ್ಕಿಂತ ಹೆಚ್ಚಾಗಿ ಕಾರ್ಯನಿಮಿತ್ತ ದೇಶ ನೋಡಿದ್ದೇ ಹೆಚ್ಚು. 17ನೇ ವರ್ಷದಲ್ಲೇ ಫ್ಲೈಟ್ ಹತ್ತಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಕ್ಯಾಂಪ್ ನಲ್ಲಿ ಪಾಲ್ಗೊಂಡಿದ್ದೆ. ಎನ್ ಸಿ ಸಿ ಕ್ಯಾಡೆಟ್ ಆದ ನನಗೆ ಮೊದಲ ಬಾರಿಗೆ ಅಪ್ಪ, ಅಮ್ಮನನ್ನು ಬಿಟ್ಟು ಇಡೀ ಕರ್ನಾಟಕವನ್ನು ಪ್ರತಿನಿಧಿಸುವ ಅವಕಾಶ ಲಭಿಸಿತ್ತು. ಕರ್ನಾಟಕ ಮತ್ತು ಗೋವಾಗೆ ಜತೆಯಾಗಿ ಒಂದು ವಿಲ್ಲಾ ಅಂತ ಕೊಟ್ಟಿದ್ದರು. ಇಡೀ ಭಾರತವೇ ಅಲ್ಲಿತ್ತು. ಕಾಶ್ಮೀರ, ಅಸ್ಸಾಮ್, ಗೌಹಾಟಿ ಎಲ್ಲರಿಗೂ ಒಂದೊಂದು ಬ್ಯಾರಕ್ಸ್ ಕೊಟ್ಟಿರುತ್ತಾರೆ. ಪ್ರತಿ ರಾಜ್ಯದ ಎಲ್ಲ NCC ಕ್ಯಾಡೆಟ್ಸ್

ಸ್ಪರ್ಧೆ ನಡೆಸಿ ಅವುಗಳಲ್ಲಿ ಒಬ್ಬರು ಅಥವಾ ಇಬ್ಬರನ್ನು ಆಯ್ಕೆ ಮಾಡುತ್ತಿದ್ದರು. ಕರ್ನಾಟಕದಿಂದ ದೆಹಲಿಗೆ ಆಯ್ಕೆಯಾದ ಇಬ್ಬರಲ್ಲಿ ನಾನು ಒಬ್ಬಳಾಗಿದ್ದೆ. ಸಾಂಸ್ಕೃತಿಕ ವಿಭಾಗದಲ್ಲಿ ಕೂಡ ನಾನಿದ್ದ ಕಾರಣ ಗಣರಾಜ್ಯೋತ್ಸವದಂದು ರಾಜ್ ಪಥ್ ನಲ್ಲಿ ಮಾರ್ಚ್ ಮಾಡುವ ಅವಕಾಶ ಲಭಿಸಿತ್ತು. ಹಾಗಾಗಿ ಮೊದಲ‌ ದೆಹಲಿ ಭೇಟಿಯೇ ಅವಿಸ್ಮರಣೀಯವಾಗಿ ಉಳಿಯಿತು.

ನೀವು ಸಂಭ್ರಮಿಸಿದ ವಿದೇಶ ಪ್ರವಾಸ?

ಎರಡು ವರ್ಷಗಳ ಹಿಂದೆ ಲಂಡನ್ ನಲ್ಲಿ ಸಿನಿಮಾ‌ ಶೂಟಿಂಗ್ ಗೆ ಅಂತ ಹೋಗಿದ್ದೆ. ಜತೆಗೆ ನನ್ನ ಗಂಡ ಕೂಡ ಬಂದಿದ್ದರು. ಅಲ್ಲಿ ವೆಂಬ್ಲಿ ಎನ್ನುವಲ್ಲಿ ಸಾಕಷ್ಟು ಭಾರತೀಯರೇ ಇರುವ ಜಾಗ ಇದೆ. ನಾವು ತಂಗಿದ್ದ ಕಂಟ್ರಿ ಸೈಡ್ ವಿಲ್ಲಾಸ್ ಇದ್ದಂಥ ಮ್ಯಾನ್ಸನ್ ನಲ್ಲಿ ಹೆಚ್ಚು ಉತ್ತರ ಭಾರತೀಯರೇ ಇದ್ದರು.

ತುಂಬ ದಿನ ಶೂಟಿಂಗ್ ಇತ್ತು. ಮಧ್ಯದಲ್ಲಿ ಬ್ರೇಕ್ ಕೂಡ ಇತ್ತು. ಅಲ್ಲಿ ಚಿಕ್ಕ ಚಿಕ್ಕ ಪೇಸ್ಟ್ರೀ ಶಾಪ್ ಗೆ ಹೋದರೂ ತುಂಬ ಉತ್ತಮ ಗುಣಮಟ್ಟದ ಆಹಾರ ಲಭಿಸುತ್ತಿತ್ತು. 'ನಿವಿಯ' ಬಾಡಿಲೋಶನ್ ಕ್ವಾಲಿಟಿಯಂತೂ ಅದ್ಭುತವಾಗಿತ್ತು. ಲಂಡನ್ ಟವರ್ ಬ್ರಿಜ್ ಕೂಡ ಅದ್ಭುತಗಳಲ್ಲೊಂದು ಅನಿಸಿತು. ಅಲ್ಲಿನ ಜನಗಳು ತುಂಬ ಚೆನ್ನಾಗಿ ಸ್ಪಂದಿಸುತ್ತಾರೆ. ನಗುನಗುತ್ತಲೇ ಮಾತನಾಡಿಸುತ್ತಾರೆ. ಕೋಟ್ಯಧೀಶ ಆಗಿದ್ದರೂ ಬೀದಿಗಿಳಿದು ನಡೆದಾಡಲು ಹಿಂಜರಿಯುವುದಿಲ್ಲ. ಚಿಕ್ಕ ರಸ್ತೆಗಳಲ್ಲಿ ಪಾರ್ಕಿಂಗ್ ಅವ್ಯವಸ್ಥೆ ತಪ್ಪಿಸಲು ಇಲ್ಲಿ ನಡಿಗೆ ಅನಿವಾರ್ಯವೂ ಹೌದು. ದುಬೈನಲ್ಲಿ ಮಾತ್ರ ಕಠಿಣವಾದ ಕಾನೂನು ಇರುತ್ತೆ ಎಂದುಕೊಂಡಿದ್ದೆವು. ಆದರೆ ಇಲ್ಲಿ ಅದಕ್ಕಿಂತ ಹೆಚ್ಚು ಕಟ್ಟುನಿಟ್ಟಾಗಿತ್ತು.

khushi ravi  56

ಡೆಸರ್ಟ್ಸ್ ಕೂಡ ಚೆನ್ನಾಗಿತ್ತು. ವಿಂಡ್ಸರ್ ಕ್ಯಾಸಲ್ ಎನ್ನುವ ಆಕರ್ಷಕ ಅರಮನೆಯೂ ಇತ್ತು. ಅದು ಎಲಿಜಬೆತ್ ರಾಣಿಯ ವಾಸವೂ ಆಗಿತ್ತು. ಆದರೆ ಹಿಮ ಬೀಳುವ ಸಮಯಕ್ಕೂ ಮೊದಲು ನಾವು ಲಂಡನ್ ನಿಂದ ಮರಳಿ ಬರಬೇಕಾಯಿತು.

ಭಾರತದಲ್ಲೇ ಇದ್ದೀನಿ ಅಂಥ ಫೀಲ್‌ ಕೊಟ್ಟ ದೇಶ?

ಶ್ರೀಲಂಕಾ ಪ್ರವಾಸದ ವೇಳೆ ನನಗೆ ಭೌಗೋಳಿಕವಾಗಿ ಅಂಥ ವ್ಯತ್ಯಾಸ ಏನೂ ಕಾಣಿಸಲಿಲ್ಲ. ಚೆನ್ನೈಗೆ ಹೋದ ಹಾಗೆಯೇ ಇತ್ತು. ಸೆಲೆಬ್ರಿಟಿ ಗೇಮ್ಸ್ ಒಂದರ ಬ್ರ್ಯಾಂಡ್ ರಾಯಭಾರಿಯಾಗಿ ಅಲ್ಲಿಗೆ ಹೋಗಿದ್ದೆ. ಕೊಲಂಬೋದ ಬೇರ್ ಫೂಟ್ ಕೆಫೆ ಅಲ್ಲಿನ ಸಾಂಸ್ಕೃತಿಕ‌ ಕೇಂದ್ರ. ಶ್ರೀಲಂಕಾದಲ್ಲಿ ಆನೆಯ ಬೊಂಬೆಗಳು ತುಂಬಾ ಜನಪ್ರಿಯ. ಅಂಥವನ್ನೆಲ್ಲ ಕೈಯ್ಯಲ್ಲೇ ತಯಾರಿಸಿರುವ ಕರಕುಶಲ ಗ್ಯಾಲರಿ ಅಲ್ಲಿದೆ. ಕೊಲಂಬೋದಿಂದ 65 ಕಿಮೀ‌ದೂರದಲ್ಲಿ

ಬೆಂಟೋಟ ಎನ್ನುವ ಕರಾವಳಿ ಪ್ರದೇಶವಿದೆ. ಅಲ್ಲಿ ಸಿನಮನ್ ಹೊಟೇಲ್‌ ಗೆ ಹೋಗಿದ್ದೆವು. ಅದು ತುಂಬಾ ಚೆನ್ನಾಗಿರುವ ವಸತಿಗೃಹ. ಆಹಾರ ಕೂಡ ಅದ್ಭುತವಾಗಿತ್ತು. ಎರಡು‌ ದಿನ ಅಲ್ಲೇ ಇದ್ದೆವು. ಆಯುರ್ವೇದ ಸೆಂಟರ್ ನಲ್ಲಿ ಅದ್ಭುತ ಮಸಾಜ್ ಥೆರಪಿ ಕೂಡ ಇದೆ. ಥೆರಪಿ ಬಳಿಕ ಮತ್ತೆ ಹೊಸದಾಗಿ ಯೌವನಕ್ಕೆ‌ ಕಾಲಿಟ್ಟ ಅನುಭವ ಸಿಕ್ಕಿತ್ತು. ಗೇಮ್ಸ್ ಗೆ ನಾವು ಬ್ರಾಂಡ್ ಅಂಬಾಸಿಡರ್ ‌ಆಗಿದ್ದ ಕಾರಣ ಅಗತ್ಯ ಇದ್ದಾಗ ಮಾತ್ರ ವೇದಿಕೆಗೆ ಹೋದರೆ ಸಾಕಿತ್ತು. ಉಳಿದಂತೆ ನಮ್ಮೆಲ್ಲ ಸಮಯ ಸುತ್ತಾಟಕ್ಕೆ ಮೀಸಲಾಗಿತ್ತು.

ಮಿನಿಸ್ಟ್ರಿ ಆಫ್ ಕ್ರ್ಯಾಬ್ ಅಂತ ಒಂದು ರೆಸ್ಟೋರೆಂಟ್ ಇದೆ. ಅದು ಸೀಫುಡ್ ಗೆ ತುಂಬಾ ಹೆಸರಾದಂಥ ಜಾಗ. ನನಗೆ ಸೀ ಫುಡ್ ಇಷ್ಟವಲ್ಲದಿದ್ದರೂ ಫ್ರೆಂಡ್ಸ್ ಜತೆ ಅಲ್ಲಿಗೂ ಹೋಗಿದ್ದೆ.

ಟೆಂಪಲ್‌ ಟ್ರಿಪ್‌ ಅನುಭವ?

ನಾನು ದೈವಭಕ್ತೆ. ತಿರುಪತಿ ತಿಮ್ಮಪ್ಪ, ಮೈಸೂರು ಚಾಮುಂಡೇಶ್ವರಿ, ಧರ್ಮಸ್ಥಳ ಮಂಜುನಾಥ ಸ್ವಾಮಿ, ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುತ್ತೇನೆ. ಮಂಗಳೂರಿಗಂತೂ ವರ್ಷಕ್ಕೊಮ್ಮೆ ಬರುತ್ತಲೇ ಇರುತ್ತೇವೆ. ಉಡುಪಿಯ ಎಸ್ ವಿ ಎಸ್ ವಿದ್ಯಾಸಂಸ್ಥೆ ಪಕ್ಕದಲ್ಲಿರುವ ಕೊರಗಜ್ಜ ಕ್ಷೇತ್ರವನ್ನೂ ಸಂದರ್ಶಿಸುತ್ತಿರುತ್ತೇನೆ. ಹಾಗೆ ಉಡುಪಿ ಕೃಷ್ಣ ಮಂದಿರ ದರ್ಶನ ಮಾಡಿ ವಾಪಸು ಬರುತ್ತೇನೆ.

khushi ravi  1

ಭಯಾನಕ ಎನ್ನುವಂಥ ಘಟನೆಗಳು?

ದಿಯಾ‌ ಸಿನಿಮಾ‌ ಚಿತ್ರೀಕರಣಕ್ಕೆ ಮುಂಬೈಗೆ ಹೋದಾಗ ಒಂದು ಭಯಾನಕ ಘಟನೆ ನಡೆದಿತ್ತು. ಆಗ ನಾನು ನಮ್ಮಮ್ಮ ಮತ್ತು ದೀಕ್ಷಿತ್ ಮೂರು ಜನ ಇದ್ದೆವು. ನಾವು ಅಂಧೇರಿಯಿಂದ ಪರ್ಚೇಸ್ ಗಾಗಿ ಬಾಂದ್ರಾಗೆ ಹೊರಟಿದ್ದೆವು. ಅಲ್ಲಿ ಲೋಕಲ್ ಟ್ರೈನ್ ಏರುವಾಗ ವಿಶೇಷ ಚೇತನರ ಕೋಚ್ ಏರಿಬಿಟ್ಟಿದ್ದೆವು. ಆಮೇಲೆ ಫೈನಾಗಿ ಬಿಡುತ್ತೆ ಅಂತ ಮತ್ತೊಂದು ಸ್ಟೇಷನ್ ನಲ್ಲಿ ಅವಸರದಲ್ಲಿ ಇಳಿಯಬೇಕಾದರೆ ನಾನು ನೆಲಕ್ಕೆ ಬಿದ್ದು ಬಿಟ್ಟಿದ್ದೆ. ನನ್ನನ್ನು ಹಿಡಿಯೋಕೆ ಅಂತ ದೀಕ್ಷಿತ್ ಇಳಿದು ಬಂದಾಗ ಅಮ್ಮ ಮಾತ್ರ ಟ್ರೈನಲ್ಲಿ ಒಂಟಿಯಾಗಿಬಿಡ್ತಾರೆ ಅಂತ ಮತ್ತೆ ದೀಕ್ಷಿತ್ ನನ್ನು ಅದೇ ಟ್ರೈನ್ ಗೆ ಕಳಿಸಿದೆ. ಆದರೆ ಟ್ರೈನ್ ಸ್ವಲ್ಪ ಮುಂದೆ ಹೋಗಿ ನಿಂತಾಗ ಅಮ್ಮ ಇಳಿದು ಬಿಟ್ಟಿದ್ದರು. ಅಮ್ಮ ಇಳಿದಿದ್ದಾರೆ ಅಂತ ದೀಕ್ಷಿತ್ ಕೂಡ ಇಳಿದು ನಾನಿರುವಲ್ಲಿಗೆ ಬರಬೇಕಾದರೆ ಟ್ರೈನ್ ಹೊರಡಲು ಶುರುವಾಗಿದೆ. ಅವರಿಬ್ಬರು ಟ್ರೈನಲ್ಲಿ ಇದ್ದಾರೆ ಎಂದು ನಾನು ಮತ್ತೆ ಟ್ರೈನ್ ಹತ್ತಿದ್ದೆ. ನನ್ನ ಮೊಬೈಲ್ ಫೋನ್ ಕೂಡ ಅವರೊಂದಿಗೆ ಇದ್ದ ಬ್ಯಾಗ್ ನಲ್ಲಿತ್ತು. ಅಂಧೇರಿಯಲ್ಲಿ ಇಳಿದ ನಾನು ಯಾರಿಂದಲೋ ಫೋನ್ ಪಡೆದು ಫೋನ್ ಮಾಡಿ ಅಂಧೇರಿಯಲ್ಲಿದ್ದೇನೆ ಅಂತ ಹೇಳಿದ್ದೆ. ಅಷ್ಟರಲ್ಲಾಗಲೇ ಗಂಟೆ ರಾತ್ರಿ ಹತ್ತಾಗಿದ್ದ ಕಾರಣ ಅಮ್ಮ ಅಂತೂ ನನ್ನನ್ನು ಕಾಣದೆ ಆತಂಕಗೊಂಡಿದ್ದರು.

ನೀವು ಸೂಚಿಸುವ ಬೆಸ್ಟ್‌ ಡೆಸ್ಟಿನೇಷನ್?

ನಾನು ಲಂಡನ್ ನ ರೆಫರ್ ಮಾಡಲು ಬಯಸುತ್ತೇನೆ. ಮಾತ್ರವಲ್ಲ ಮುಂದಿನ ವರ್ಷ ಮತ್ತೊಮ್ಮೆ ನಾವು ಕೂಡ ಲಂಡನ್ ಗೆ ಹೋಗುವ ಯೋಜನೆ ಹಾಕಿದ್ದೇವೆ. ಯಾಕೆಂದರೆ ನಮ್ಮ ಮಗಳೊಂದಿಗೆ ನಾವು ವಿದೇಶ ಸುತ್ತಿಲ್ಲ.ಅವಳ ಹೆಸರು ತನಿಷಾ ರಾಕೇಶ್. ಈಗ ಆರು ವರ್ಷ. ಅವಳೊಂದಿಗೆ ಜರ್ಮನಿಗೂ ಹೋಗಬೇಕು ಎನ್ನುವ ಪ್ಲ್ಯಾನ್ ಇದೆ.