• ಶಶಿಕರ ಪಾತೂರು

ಸಿಲ್ಲಿ ಲಲ್ಲಿ ಧಾರಾವಾಹಿಯ ಎನ್‌ಎಮ್‌ಎಲ್‌ ಆಗಿ ಹೆಸರಾದ ನಟಿ ನಮಿತಾ ರಾವ್ ಬಳಿಕ ವೈವಿಧ್ಯಮಯ ಪಾತ್ರಗಳಿಂದ ಗುರುತಿಸಿಕೊಂಡರು. ಸಿನಿಮಾ ನಟನೆ, ನಿರ್ಮಾಣದಲ್ಲೂ ಕಾಣಿಸಿದರು. ಭರತನಾಟ್ಯ ಕಲಾವಿದೆಯಾಗಿ ದೇಶ, ವಿದೇಶಗಳನ್ನು ಸುತ್ತಾಡಿರುವ ಈ ಪ್ರತಿಭಾನ್ವಿತೆಗೆ ಪ್ರವಾಸದ ಕಲೆಯೂ ಸಿದ್ಧಿಸಿದೆ.

ಕಲೆಯೊಂದಿಗೆ ಪ್ರವಾಸದ ಅಭಿರುಚಿ ಬೆರೆತಿದ್ದು ಹೇಗೆ?

ಕಲೆ ನೀಡಿದ ಅವಕಾಶವೇ ನನ್ನನ್ನು ಇಂದು ದೇಶ, ವಿದೇಶ ಸುತ್ತಿ ಕಾರ್ಯಕ್ರಮಗಳನ್ನು ನೀಡುವ ಮತ್ತು ವಿಶ್ವ ವಿಶೇಷಗಳನ್ನು ನೋಡುವ ಅವಕಾಶ ತಂದುಕೊಟ್ಟಿದೆ. ಉದಾಹರಣೆಗೆ ನಾನು ಮತ್ತು ವಿಕ್ರಮ್ ವರ್ಷಕ್ಕೆ ಮೂರು ಬಾರಿ ಯುಎಸ್ ಗೆ ಹೋಗುತ್ತೇವೆ. ಯುಎಸ್ ನಲ್ಲಿ ಹೆಚ್ಚು ಕನ್ನಡಿಗರು ಇದ್ದಾರೆ. ಅಲ್ಲಿ ದಸರಾ, ಗಣಪತಿ ಹಬ್ಬವನ್ನು ತುಂಬಾ ವಿಜೃಂಭಣೆಯಿಂದ ಆಚರಿಸುತ್ತಾರೆ. ನಮ್ಮನ್ನು ಗೆಸ್ಟ್‌ ಆಗಿ ಕರೆಸುತ್ತಾರೆ. ನಾವು ಮೊದಲೇ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿ. ಹೋದಲ್ಲಿ ಹಾಡಿ, ಕುಣಿಯುತ್ತೇವೆ. ಪ್ರವಾಸಿತಾಣ ಸುತ್ತಾಡಿ ಬರುತ್ತೇವೆ.

ಇದನ್ನೂ ಓದಿ: ಮಣಿಕರ್ಣಿಕಾ ಘಾಟ್ ನೋಡಿದ್ರೆ ಸಾವಿನ ಭಯವೇ ಮಾಯ -ಮೇಘಶ್ರೀ

ನಿಮ್ಮ ನೆನಪಿನಲ್ಲಿರುವ ಮೊತ್ತಮೊದಲ ಪ್ರವಾಸಿ ತಾಣ ಯಾವುದು?

ಚಿಕ್ಕವಳಿದ್ದಾಗ ಚಿತ್ರದುರ್ಗ ಕೋಟೆ ಹತ್ತಿದ್ದು ನಾನು ಮಾಡಿದ ಮೊದಲ ಪ್ರವಾಸ. ತುಪ್ಪದ ಕೊಳ ನೋಡಿದ್ದು ಎಲ್ಲವೂ ನಡೆದಿತ್ತು. ಅದು ಅಪ್ಪ ಅಮ್ಮನ ಜತೆ ಹೋದದ್ದು. ಶಾಲಾ ದಿನಗಳಿಂದಲೂ ನನಗೆ ಟ್ರೆಕ್‌ ಮಾಡುವುದು ಅಂದರೆ ಇಷ್ಟ. ಏಳನೇ ತರಗತಿಯಲ್ಲಿದ್ದಾಗ ಮೊದಲು ಟ್ರೆಕ್‌ ಮಾಡಿದ್ದು ಸಾವನದುರ್ಗಕ್ಕೆ. ಅಲ್ಲಿಂದಲೇ ಟ್ರೆಕ್ಕಿಂಗ್ ಹುಚ್ಚು ಶುರುವಾಗಿದ್ದು ಅಂತಾನೂ ಹೇಳಬಹುದು.

Untitled design (16)

ಮರೆಯಲಾಗದ ಪ್ರವಾಸ ಯಾವುದು?

ಪ್ರತಿ ಪ್ರವಾಸವನ್ನು ಕೂಡ ಮರೆಯಲಾಗದಷ್ಟು ಇಷ್ಟಪಡುತ್ತೇನೆ. ಒಂದೇ ಕಡೆಗೆ ಮತ್ತೆ ಮತ್ತೆ ಹೋದರೂ ಮೊದಲು ಹೋಗಿದ್ದಕ್ಕಿಂತ ಎರಡನೇ ಬಾರಿ ಮತ್ತೊಂದು ಕಾರಣಕ್ಕೆ ಸ್ಮರಣೀಯವಾಗಿರುತ್ತದೆ.‌

ಯು.ಎಸ್ ನಲ್ಲಿನ‌ ದಿನಗಳು ಹೇಗಿರುತ್ತವೆ?

ಅಲ್ಲಿ ಮುಂಚಿತವಾಗಿಯೇ ನಮ್ಮ ಕಾರ್ಯಕ್ರಮಗಳು ಬುಕ್‌ ಆಗಿರುತ್ತದೆ. ಸಾಮಾನ್ಯವಾಗಿ ಸೈಟ್‌ ಸೀನ್‌ಗೆ ಸಮಯವಿರುವುದಿಲ್ಲ. ರಿಹರ್ಸಲ್‌ ಬೆಳಗ್ಗೆಯಿಂದ ಸಂಜೆ ತನಕ ಇರುತ್ತದೆ. ಆದರೆ

ನಮ್ಮಿಂದ ಒಂದು ಎರಡು ತಿಂಗಳು ತರಬೇತಿ ಪಡೆಯುವ ಪ್ಲ್ಯಾನ್‌ ಮಾಡಿರುತ್ತಾರೆ. ಆ ಸಂದರ್ಭದಲ್ಲಿ ನಾವು ಅಲ್ಲಿನ ಪ್ರಾಕೃತಿಕ ವಾತಾವರಣ ನೋಡ್ಕೊಂಡು ಅಂಥ ಕಡೆ ಸುತ್ತಾಡೋಕೆ ಹೋಗುತ್ತೇವೆ.

ವಾಷಿಂಗ್ಟನ್‌ ಡಿಸಿ, ನ್ಯೂಯಾರ್ಕ್ ಸಿಟಿ, ಶಿಕಾಗೋ ಅಟ್ಲಾಂಟಾ, ಕ್ಯಾಲಿಫೋರ್ನಿಯಾ, ಸಾನ್ ಫ್ರಾನ್ಸಿಸ್ಕೊ.. ಹೀಗೆ ಹಲವು ಕಡೆ ಸುತ್ತಾಡಿದ್ದೇವೆ. ನಾರ್ತ್‌ನಲ್ಲಿ ಮೆಲ್ವೋಕಿ ತುಂಬಾ ಕೋಲ್ಡೆಸ್ಟ್‌ ಜಾಗ. ಕೆನಡಾಗೂ ಹೋಗಿದ್ದೆವು. ಅದು ಇದಕ್ಕಿಂತಲೂ ತಂಪಾದ ತಾಣ. ಇಂಥ ಪ್ರದೇಶದಲ್ಲಿ ಹೋಗುವುದೇ ಚಾಲೆಂಜ್. ಇನ್ನು ಕಾರ್ಯಕ್ರಮವನ್ನು ಕೂಡ ಕೊಡೋದು ಅಂದರೆ ನಿಜಕ್ಕೂ ಇನ್ನೂ ದೊಡ್ಡ ಚಾಲೆಂಜ್ ಆಗಿರುತ್ತದೆ.

ಇದನ್ನೂ ಓದಿ: ಸಿಸ್ಸುವಿನಲ್ಲೊಂದು ಪುಟ್ಟ ಮನೆ…ಪಕ್ಕದಲ್ಲೇ ಮ್ಯಾಗಿ ಅಂಗಡಿ

ಬೇರೆ ಯಾವ ಯಾವ ದೇಶಗಳನ್ನು ಸುತ್ತಾಡಿದ್ದೀರಿ?

ಜಿ.ಸಿ.ಸಿ ಕಂಟ್ರೀಸ್ ಗಳಲ್ಲಿ (ಗಲ್ಫ್ ಕೊ ಆಪರೇಷನ್ ಕೌನ್ಸಿಲ್) ಸುತ್ತಾಡಿದ್ದೇವೆ. ಯು.ಎ.ಇಗೆ ಬಂದರೆ ದುಬೈ, ಅಬುಧಾಬಿ ತುಂಬ ಅದ್ಭುತವಾದ ಜಾಗಗಳು. ಉಳಿದಂತೆ ಸಿಂಗಾಪುರ ಪುಟ್ಟ ದೇಶವಾದರೂ ಅದ್ಭುತವಾದ ದೇಶ. ಪ್ರತಿಯೊಂದು ಪ್ರದೇಶದ ಜತೆಗೆ ನಮಗೆ ಅಲ್ಲಿ ಎದುರಾಗುವ ಕನ್ನಡಿಗರು ಕೂಡ ಪ್ರವಾಸದ ಸಂತಸದ ಭಾಗವಾಗಿರುತ್ತಾರೆ. ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ 'ಗ್ರ್ಯಾಂಡ್‌ ಕ್ಯಾನಿಯನ್‌ 'ಗೆ ಹೋಗಿದ್ದೆವು. ತುಂಬಾ ಚೆನ್ನಾಗಿದೆ. ನೇರವಾಗಿ ನಮ್ಮ ಕಣ್ಣಲ್ಲಿ ನೋಡುವ ಆನಂದ ಅಂದರೇನು ಅಂತ ಅಲ್ಲಿ ಹೋಗಿ ಅನುಭವಿಸಿದಾಗಲೇ ಗೊತ್ತಾಗುವುದು.

ವಿದೇಶಗಳಲ್ಲಿ ಟ್ರೆಕ್ ಮಾಡಿದ ಅನುಭವ ಹೇಗಿತ್ತು?

ಇತ್ತೀಚೆಗೆ ಕ್ಯಾಲಿಫೋರ್ನಿಯಾಗೆ ಹೋದಾಗ ಅಲ್ಲಿನ ರೆಡ್‌ವುಡ್ಸ್ ನ್ಯಾಷನಲ್ ಪಾರ್ಕ್ ನಲ್ಲಿ ಹೈಕ್ ಮಾಡಿದ್ದೇವೆ. ಅದಕ್ಕಿಂತ ಮುಂಚೆ ಮಾಡಿದ್ದು ಸೆಡೋನಾ ಎನ್ನುವಲ್ಲಿನ ರೆಡ್‌ ರಾಕ್ಸ್‌ ರೈಡ್. ಅದನ್ನು ಮಾಡಬೇಕೆಂದರೆ ಚೆನ್ನಾಗಿ ವರ್ಕ್‌ಔಟ್‌ ಮಾಡುವವರಿಗಷ್ಟೇ ಸಾಧ್ಯ. ಹೋಗಿ ಬರಲು ಸುಮಾರು ಐದರಿಂದ ಆರು ಗಂಟೆ ಟ್ರೆಕ್‌ ಆಗುತ್ತದೆ. ಬಿಸಿನೀರು, ಬಾಳೆಹಣ್ಣು, ಕಿತ್ತಳೆ ಹಣ್ಣು ತಿಂದೇ ರೈಡ್ ಪೂರ್ಣಗೊಳಿಸಿದ್ದೇವೆ.

Untitled design (15)

ಸಾಕಷ್ಟು ದೇಶ ಸುತ್ತಾಡಿದಾಗ ಇನ್ನೊಮ್ಮೆ ಹೋಗಬೇಕು ಅನಿಸಿದ ಜಾಗ ಯಾವುದು?

ಅದು ಕೆನಡಾದ ವಾನ್‌ಕೋರ್‌. ಆ ನಗರ ಎಷ್ಟು ಚೆನ್ನಾಗಿದೆ ಎಂದರೆ ನಾನು ಸುತ್ತಲೂ ಬೆಟ್ಟ ಗುಡ್ಡ, ನೀರು. ಸಮುದ್ರ ಕೂಡ ಇದೆ. ನೀವು ಎಲ್ಲೇ ಹೋದರೂ ಪರಿಸರವೆಲ್ಲ ಪೇಂಟ್‌ ಮಾಡಿದ ರೀತಿ ಸೌಂದರ್ಯ ತುಂಬಿಕೊಂಡಿದೆ. ಅಲ್ಲಿಂದ ಓಲಿಂಪಿಕ್ಸ್ ನಡೆದ ಜಾಗಕ್ಕೆ ಹೋಗಿದ್ದೆವು. ನಾನು‌ ಮೊದಲ ಬಾರಿ ಹಿಮವನ್ನು ಮೊದಲು ಫೀಲ್‌ ಮಾಡಿದ್ದೇ ಅಲ್ಲಿ. ಖಂಡಿತವಾಗಿ ಆ ಶುದ್ಧ ಗಾಳಿಯ ಸೇವನೆಗೆಂದೇ ಅಲ್ಲಿಗೆ ಇನ್ನೊಮ್ಮೆ ಹೋಗಲು ಸಿದ್ಧಳಿದ್ದೇನೆ.

ರಾಜ್ಯದಲ್ಲಿ ನೀವು ಪ್ರವಾಸ ಮಾಡಲು ಬಯಸುವ ಜಾಗ ಯಾವುದು?

ಕರ್ನಾಟಕದಲ್ಲಿ ನನಗೆ ಬೆಂಗಳೂರು ಇಷ್ಟ. ಉತ್ತರ ಕರ್ನಾಟಕಕ್ಕೆ ಅಭಿಮಾನಿಗಳು ಕರೆಯುತ್ತಿರುತ್ತಾರೆ. ಆದರೆ ಅಲ್ಲಿನ‌ ಆಹಾರಗಳಲ್ಲಿ ಖಾರ ತುಂಬಾ ಜಾಸ್ತಿ. ಮಂಗಳೂರಿನಲ್ಲಿ ಬೀಚ್‌ ಇಷ್ಟ. ಉಡುಪಿಗೆ ಕೃಷ್ಣ ದರ್ಶನಕ್ಕೆ ಹೋಗ್ತೀವಿ. ರಾಜಾಂಗಣದಲ್ಲಿ ಕಾರ್ಯಕ್ರಮ ಕೊಡುತ್ತಿರುತ್ತೇವೆ. ಅಲ್ಲಿನ ಪಾಜಕ ಕ್ಷೇತ್ರವು ರಾಯರು ಇದ್ದಂಥ ಜಾಗ. ಅದೆಲ್ಲ ಒಂದು ಡಿಫರೆಂಟ್‌ ವೈಬ್‌ ಕೊಡುತ್ತದೆ. ಸೆಕೆ ಒಂದು ಬಿಟ್ಟರೆ ಅದು ತುಂಬ ಒಳ್ಳೆಯ ಜಾಗ. ಹಾಗೆಯೇ ಕೇರಳ ಗಡಿಭಾಗ ಮಂಜೇಶ್ವರ ಕೂಡ ಚೆನ್ನಾಗಿದೆ. ಮಂಗಳೂರು ಕಡೆ ನಾನು ಕಟೀಲು ಸೇರಿದಂತೆ ಸಾಕಷ್ಟು ದೇವಾಲಯಗಳನ್ನು ಸುತ್ತಾಡಿ ಟೆಂಪಲ್ ರನ್ ವ್ಲಾಗ್ ಮಾಡಿದ್ದೇನೆ.