Wednesday, February 4, 2026
Wednesday, February 4, 2026

ಮಣಿಕರ್ಣಿಕಾ ಘಾಟ್ ನೋಡಿದ್ರೆ ಸಾವಿನ ಭಯವೇ ಮಾಯ -ಮೇಘಶ್ರೀ

ನಮ್ಮ ಬಹಳಷ್ಟು ಭೋಜ್ ಪುರಿ ಸಿನಿಮಾಗಳು ವಾರಾಣಸಿಯಲ್ಲೇ ಚಿತ್ರೀಕರಣಗೊಂಡಿವೆ‌. ಹಾಗಾಗಿ ವರ್ಷಕ್ಕೆ ಎರಡು, ಮೂರು ಬಾರಿಯಾದರೂ ಅಲ್ಲಿಗೆ ಹೋಗುತ್ತಿರುತ್ತೇನೆ. ಆದರೆ ನನಗೆ ಇವತ್ತಿನ ತನಕವೂ ಅಲ್ಲಿ ದೇವರ ದರ್ಶನ ಮಾಡಲು ಸಾಧ್ಯವಾಗಲೇ ಇಲ್ಲ. ಅಲ್ಲಿಯೇ ಪಕ್ಕದಲ್ಲಿರುವ ನಮೋ ಘಾಟ್ ನಲ್ಲಿ ಶೂಟ್ ಮಾಡಿದ್ದೇನೆ.‌ ಆದರೆ ಪಕ್ಕದಲ್ಲೇ ಇರುವ ದೇವಾಲಯಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ.

  • ಶಶಿಕರ ಪಾತೂರು

ಇತ್ತೀಚೆಗಷ್ಟೇ ಕುಂಟೆಬಿಲ್ಲೆ ಚಿತ್ರದಲ್ಲಿ ಗಮನಸೆಳೆದ ನಟಿ ಮೇಘಶ್ರೀ ಈ ವರ್ಷ ಸರಕಾರಿ ಶಾಲೆ H8 ಮೂಲಕ ಮತ್ತೆ ಬೆಳ್ಳಿತೆರೆಗೆ ಬರಲು ಸಜ್ಜಾಗಿದ್ದಾರೆ. ಇದರ ನಡುವೆ ಭೋಜ್‌ಪುರಿಯಲ್ಲಿ ಹೆಸರು ಮಾಡಿರುವ ಮೇಘಶ್ರೀ ತಮ್ಮ ಪ್ರವಾಸ ಪ್ರೀತಿಯನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ.

ನಿಮ್ಮ ಜೀವನದಲ್ಲಿ ಪ್ರವಾಸಕ್ಕೆ ಎಷ್ಟು ಪ್ರಾಮುಖ್ಯವಿದೆ?

ಸದ್ಯಕ್ಕೆ ಪ್ರವಾಸಕ್ಕೆ ಮಾತ್ರವೇ ಆದ್ಯತೆ ಕೊಡುತ್ತಿದ್ದೇನೆ. ನಾನು ಪ್ರೀತಿ, ಪ್ರೇಮ, ಮದುವೆಗಿಂತ ಹೆಚ್ಚು ಪ್ರಾಶಸ್ತ್ಯವನ್ನು ಪ್ರವಾಸಕ್ಕೆ ಕೊಡುತ್ತೇನೆ. ನಿಜ ಹೇಳಬೇಕೆಂದರೆ ನನಗೆ ಶೂಟಿಂಗ್ ನಷ್ಟೇ ಟ್ರಾವೆಲಿಂಗ್ ಕೂಡ ಮುಖ್ಯ ಅನಿಸಿದೆ.

ಇದನ್ನೂ ಓದಿ: ʻಥಕಾಲಿʼ ಮೇಲೆ ಲವ್ವಾಗೋಗಿತ್ತು !

ನಿಮ್ಮ ಮೊದಲ ಪ್ರವಾಸದ ಅನುಭವದ ಬಗ್ಗೆ ಹೇಳಿ

ಚಿಕ್ಕವರಿದ್ದಾಗ ನಮ್ಮಪ್ಪ ನನ್ನನ್ನು ಹಾಗೂ ಅಕ್ಕ, ಅಮ್ಮನನ್ನು ಮಡಿಕೇರಿಗೆ ಪ್ರವಾಸಕ್ಕೆ ಕರೆದೊಯ್ದಿದ್ದರು. ಬಹುಶಃ ನನಗೆ ಆಗ ಐದು ವರ್ಷ ಅಷ್ಟೇ ಆಗಿತ್ತು ಅನ್ಸುತ್ತೆ. ನಾನು ಹೈಸ್ಕೂಲ್ ನಲ್ಲಿದ್ದಾಗ ವಂಡರ್ ಲಾಗೆ ಕರೆದುಕೊಂಡು ಹೋಗಿದ್ದರು. ನಮ್ಮದು ಗರ್ಲ್ಸ್ ಹೈಸ್ಕೂಲ್. ಹಾಗಾಗಿ ಮನಸು ಬಿಚ್ಚಿ ಎಂಜಾಯ್ ಮಾಡುವ ಅವಕಾಶ ಸಿಕ್ಕಿತ್ತು. ನಮ್ಮದು ನಾಲ್ಕೈದು ಮಂದಿ ಹುಡುಗಿಯರ ಗ್ಯಾಂಗ್ ಇತ್ತು. ಇಡೀ ದಿನ ಜಿಗಿಯುತ್ತಲೇ ಇದ್ದೆವು.‌ ಅಲ್ಲಿ ಜೈಂಟ್ ವ್ಹೀಲ್ ಹತ್ತೋಕೆ ಮಾತ್ರ ಸಮಯ ಸಿಕ್ಕಿರಲಿಲ್ಲ. ಉಳಿದಂತೆ ಎಲ್ಲ ಎಂಜಾಯ್ ಮಾಡಿದ್ದೆವು.

Untitled design (5)

ಮತ್ತೆ ಪ್ರವಾಸದ ಆಸಕ್ತಿ ಹುಟ್ಟಿಕೊಂಡಿದ್ದು ಹೇಗೆ?

ಶೂಟಿಂಗ್ ಬಿಟ್ಟರೆ ಮನೆ ಅನ್ನೋದೇ ನನ್ನ ಜಗತ್ತು ಆಗಿತ್ತು. 7 ತಿಂಗಳ ಕಾಲ ಎಲ್ಲೂ ಹೊರಗಡೆ ಹೋಗಿರಲಿಲ್ಲ. ಆಗ ಎಲ್ಲಾದರೂ ಟ್ರಿಪ್ ಹೋಗೋಣ ಅನಿಸಿತ್ತು. ಹಾಗೆ ಮನಾಲಿಗೆ ಹೋದೆ. ಆಗ ಸಿಕ್ಕಂಥ ಖುಷಿ ಈ ಹಿಂದೆಂದೂ ಸಿಕ್ಕಿರಲಿಲ್ಲ. ಅಲ್ಲಿಂದ ನನ್ನ ಪ್ರವಾಸದ ಆಸಕ್ತಿ ಶುರುವಾಯಿತು. ಎರಡು ವರ್ಷಗಳಿಂದ ಸೋಲೋ ಟ್ರಿಪ್ ಹೋಗಲು ಶುರು‌ಮಾಡಿದ್ದೇನೆ. ಕಳೆದ ವರ್ಷ ಮೇಘಾಲಯಕ್ಕೆ ಹೋಗಿದ್ದೆ.‌ ಅದು ಕೂಡ ಸೋಲೋ ಟ್ರಿಪ್ ಆಗಿತ್ತು. ಆದರೆ ಸರಿಯಾಗಿ ಪ್ಲ್ಯಾನ್ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಈ ಪ್ರವಾಸದಲ್ಲಿ ಬೇರೆ ಬೇರೆ ದೇಶಗಳಿಂದ ಬಂದ ಅಪರಿಚಿತರೊಂದಿಗೆ ಪ್ರಯಾಣ ನಡೆಸುವ ಅಪರೂಪದ ಅನುಭವವಾಗಿತ್ತು. ಅದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ.

ಸೋಲೋ ಟ್ರಿಪ್ ಹೋಗುವುದಾಗಿ ಹೇಳಿದಾಗ ಮನೆಯವರ ಪ್ರತಿಕ್ರಿಯೆ ಹೇಗಿತ್ತು?

ನಾನು ಸಣ್ಣ ವಯಸ್ಸಿಗೇ ಸಿನೆಮಾ ಮಾಡಲು ಶುರು ಮಾಡಿದ್ದ ಕಾರಣ ಎಲ್ಲ ಕಡೆ ತಾಯಿ ಜತೆಗೆ ಬರುತ್ತಿದ್ದರು. ಆದರೆ ಎರಡು ವರ್ಷಗಳ ಹಿಂದೆ ಭೋಜ್ ಪುರಿ ಚಿತ್ರವೊಂದರ ಶೂಟಿಂಗ್ ಲಂಡನ್ ನಲ್ಲಿತ್ತು. ತಾಯಿಯ ವೀಸಾ ಸಿಗೋದು ತಡವಾದ ಕಾರಣ ಚಿತ್ರತಂಡದೊಂದಿಗೆ ನಾನೊಬ್ಬಳೇ ವಿದೇಶಕ್ಕೆ ಹೋದೆ. ವಿದೇಶ ಚಿತ್ರೀಕರಣದಲ್ಲಿ ಒಬ್ಬಳೇ ಭಾಗಿಯಾಗಿ ಖುಷಿಯಿಂದ ಮರಳಿದ ಬಳಿಕ ನನಗೆ ಹೇಗೆ ಆತ್ಮವಿಶ್ವಾಸ ಹೆಚ್ಚಿದೆಯೋ ಮನೆಯವರಿಗೂ ನನ್ನ ಸ್ಥೈರ್ಯದ ಬಗ್ಗೆ ಭರವಸೆ ಸೃಷ್ಟಿಯಾಗಿದೆ.

ಸೋಲೋ ಟ್ರಿಪ್ ಹೋಗುವವರಿಗೆ ನಿಮ್ಮ ಸಲಹೆಗಳೇನು?

ನೀವು ಸೋಲೋ ಟ್ರಿಪ್ ಹೋಗುವಾಗ ಅಲ್ಲಿನ ಕರೆನ್ಸಿ ಇಟ್ಕೊಳ್ಳಿ. ಎಲ್ಲರನ್ನೂ ಪರಿಚಯ ಮಾಡ್ಕೊಳ್ಳಿ. ಆದರೆ ಯಾರೊಂದಿಗೂ ಹೆಚ್ಚು ಆಪ್ತರಾಗಬೇಡಿ. ನೀವು ಸೋಲೋ ಆಗಿ ಬಂದಿದ್ದೀರಿ ಎಂದು ಹೇಳೋಕೆ ಹೋಗಬೇಡಿ. ಫ್ರೆಂಡ್ಸ್ ಜತೆ ಬಂದಿದ್ದೀನಿ, ಅವರು ಅಲ್ಲೇ ಹೊರಗಡೆ ಇದ್ದಾರೆ ಎಂದು ಹೇಳಿ. ಮೊದಲೇ ಹೊಟೇಲ್, ಕ್ಯಾಬ್ ಎಲ್ಲವನ್ನೂ ಬುಕ್ ಮಾಡಿಟ್ಟುಕೊಳ್ಳಿ. ನಾನು ಸಾಮಾನ್ಯವಾಗಿ ರಾತ್ರಿ ಬೇಗ ಕೋಣೆಗೆ ಮರಳಿ ಮುಂಜಾನೆ ಮತ್ತೆ ಪ್ರಯಾಣ ಮುಂದುವರಿಸುತ್ತೇನೆ. ಅದರಂತೆ ಯಾರೂ ಕೂಡ ತಡರಾತ್ರಿ ಹೆಚ್ಚು ಹೊರಗೆ ಕಳೆಯಬೇಡಿ ಎನ್ನುವುದು ನನ್ನ ಸಲಹೆ.

ನಿಮ್ಮ ಮಣಿಕರ್ಣಿಕಾ ಘಾಟ್‌ ಸಂದರ್ಶಿಸಿದ ಅನುಭವದ ಬಗ್ಗೆ ಹೇಳಿ

ನಮ್ಮ ಬಹಳಷ್ಟು ಭೋಜ್ ಪುರಿ ಸಿನಿಮಾಗಳು ವಾರಾಣಸಿಯಲ್ಲೇ ಚಿತ್ರೀಕರಣಗೊಂಡಿವೆ‌. ಹಾಗಾಗಿ ವರ್ಷಕ್ಕೆ ಎರಡು, ಮೂರು ಬಾರಿಯಾದರೂ ಅಲ್ಲಿಗೆ ಹೋಗುತ್ತಿರುತ್ತೇನೆ. ಆದರೆ ನನಗೆ ಇವತ್ತಿನ ತನಕವೂ ಅಲ್ಲಿ ದೇವರ ದರ್ಶನ ಮಾಡಲು ಸಾಧ್ಯವಾಗಲೇ ಇಲ್ಲ. ಅಲ್ಲಿಯೇ ಪಕ್ಕದಲ್ಲಿರುವ ನಮೋ ಘಾಟ್ ನಲ್ಲಿ ಶೂಟ್ ಮಾಡಿದ್ದೇನೆ.‌ ಆದರೆ ಪಕ್ಕದಲ್ಲೇ ಇರುವ ದೇವಾಲಯಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ.

ಕಳೆದ ವರ್ಷ ಮಾಂಗ್ ಭರೋ ಸಜ್ನಾ ಎಂಬ ಚಿತ್ರದಲ್ಲಿ ನಟಿಸಿದೆ. ‌ ಅದರ ಪ್ರಮೋಶನ್ ಗೆ ಎಂದು ಯು.ಪಿ, ಬಿಹಾರದಲ್ಲಿ ಓಡಾಟ ನಡೆಸಿದ್ದ ಸಂದರ್ಭ. ಕೊನೆಗೆ ರಾತ್ರಿ ವಾರಾಣಸಿ ತಲುಪಿದ್ದೆವು. ನಾನು ತಡವಾದರೂ ಪರ್ವಾಗಿಲ್ಲ ಮಣಿಕರ್ಣಿಕಾ ಘಾಟ್ ಗೆ ಹೋಗಲೇಬೇಕು ಅಂದೆ. ನಿಮಗೆ ಹಾಗೆ ಅನಿಸಿದ್ದರೆ ಖಂಡಿತವಾಗಿ ಹೋಗಬೇಕು ಎಂದು ನಿರ್ದೇಶಕರು ಕೂಡ ಪ್ರೋತ್ಸಾಹ ಕೊಟ್ಟರು. ಹಾಗೆ ಹೋದಂಥ ಪ್ರಯಾಣ ಅದು.‌ ಅದರ ಪೂರ್ತಿ ನನಗೆ ಪವಾಡದ ಅನುಭವವಾಯಿತು.

ನಿಮಗೆ ಎದುರಾದ ಪವಾಡದ ಬಗ್ಗೆ ವಿವರಿಸಬಹುದೇ?

ಮೊದಲನೆಯದಾಗಿ ಅಷ್ಟು ತಡವಾಗಿದ್ದರೂ ಚಿತ್ರದ ನಿರ್ದೇಶಕರು ತಕ್ಷಣ ಒಪ್ಪಿಕೊಂಡಿದ್ದೇ ಮೊದಲ‌‌ ಪವಾಡ. ಎರಡನೆಯದಾಗಿ ಚಿತ್ರದ ನಾಯಕ ರಾಹುಲ್ ಹೇಳಿದ್ದೇನೆಂದರೆ "ಐದು ದಿನಗಳ ಹಿಂದೆ ನನಗೊಂದು ಕನಸು ಬಿದ್ದಿತ್ತು. ಅದರಲ್ಲಿ ಒಬ್ಬಳು ಹುಡುಗಿ ನನ್ನ ಕೈಹಿಡಿದು ಬಾ ಮಣಿಕರ್ಣಿಕಾ ಘಾಟ್ ಗೆ ಹೋಗೋಣ" ಅಂತ ಹೇಳಿದ್ದಳು. ನನಗೆ ಅವಳ ಮುಖ ಕಾಣಿಸಿರಲಿಲ್ಲ. ಆದರೆ ಈಗ ನೀನು ಕರೆಯುವಾಗ ಅದೇ ನೆನಪಾಯಿತು. ಇದು ನನ್ನ ತಾಯಾಣೆಗೂ ಸತ್ಯ" ಅಂದರು. ಅದೊಂದಾದರೆ ನಾವು ಮಣಿಕರ್ಣಿಕಾ ತಲುಪಿದಾಗ ರಾತ್ರಿ ಎರಡು ಗಂಟೆ ಆಗಿತ್ತು. ಆ ಹೊತ್ತಲ್ಲಿ ಅಲ್ಲಿದ್ದ ಏಕೈಕ ಹುಡುಗಿ ಅಂದರೆ ನಾನೇ. ಅಲ್ಲಿ ಹೆಣಗಳ ರಾಶಿ ಕಂಡ ಬಳಿಕ ನನಗೆ ಈಗ ಸಾವಿನ ಭಯವೇ ಹೊರಟು ಹೋದಂತಾಗಿದೆ.

MEGHASRI

ಅಡ್ವೆಂಚರಸ್‌ ಪ್ರವಾಸದ ಅನುಭವ ಆಗಿದೆಯೇ?

ಎರಡು ಬಾರಿ ಟ್ರೆಕ್ಕಿಂಗ್ ಮಾಡಿದ್ದೇನೆ. ಕುಮಾರ ಪರ್ವತದಲ್ಲಿ ಟ್ರೆಕ್ಕಿಂಗ್ ಮಾಡಿದ್ದೇನೆ. ಮೇಘಾಲಯದಲ್ಲಿ ಸಿಂಗಲ್ ರೂಟ್ ಮತ್ತು ಡಬಲ್ ರೂಟ್ ಟ್ರೆಕ್ಕಿಂಗ್ ಅಂತ ಸ್ಪೆಷಲ್‌ ಟ್ರೆಕ್ಕಿಂಗ್ ಇದೆ. ನಾನು ಅದನ್ನು ಒಂದೇ ದಿನದಲ್ಲಿ ಮುಗಿಸಿದ್ದೇನೆ. ನನಗೆ ಹೈಟ್ ಫೋಬಿಯ ಇದೆ. ಆದರೆ ಮನಾಲಿಯಲ್ಲಿ 12 ಸಾವಿರ ಅಡಿ ಎತ್ತರದಿಂದ ಡೈವ್ ಮಾಡಿದ್ದೇನೆ. ಅಲ್ಲಿಂದ ಟ್ರೇನರ್ ಟರ್ನ್ ತೆಗೆದುಕೊಳ್ಳುವಾಗ ಭಯ ಪಟ್ಟೆ.

ಪ್ರವಾಸ ಹೋಗಲು ನೀವು ಸಲಹೆ ನೀಡುವ ಪ್ರದೇಶ ಯಾವುದು?

ಮೇಘಾಲಯಕ್ಕೆ ಹೋಗಲು ಸಲಹೆ ನೀಡುತ್ತೇನೆ. ಅಲ್ಲಿಗೆ ಹೋದರೆ ಯಾವುದೋ ಬೇರೆ ದೇಶಕ್ಕೆ ಹೋದಂಥ ಅನುಭವವಾಗುತ್ತದೆ. ಅಲ್ಲಿನ ಪ್ರಕೃತಿ, ನೀಲಿನೀಲಿಯಾಗಿ ಕಾಣಿಸುವ ನೀರು ಎಲ್ಲವೂ ಆಕರ್ಷಕ. ಅಲ್ಲಿ ಟ್ರೆಕ್ಕಿಂಗ್ ಮಾಡಲು ವಿದೇಶದಿಂದಲೂ ಜನ ಬರುತ್ತಾರೆ. ಬಜೆಟ್ ವೈಸ್ ಕೂಡ ಕಡಿಮೆ ಖರ್ಚಿನಲ್ಲಿ ಈ ಪ್ರವಾಸ ಮುಗಿಸಬಹುದಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್