ದೋಣಿ ಸಾಗಲಿ, ಮುಂದೆ ಹೋಗಲಿ ದೂರ ತೀರವ ಸೇರಲಿ…
ʼವಿಮಾನದಿಂದ ಧುಮುಕಿದ ಆ ಕ್ಷಣ… ಬದುಕಿನಲ್ಲೇ ಮರೆಯಲಾಗದ ಅನುಭವವಾಯಿತುʼ ಪ್ರವಾಸ, ಸಾಹಸ ಮತ್ತು ಸಂಗೀತ, ಈ ಮೂರನ್ನೂ ತನ್ನದೇ ರೀತಿಯಲ್ಲಿ ಆಸ್ವಾದಿಸುವ ಗಾಯಕಿ ಐಶ್ವರ್ಯ ರಂಗರಾಜನ್ ಅವರೊಂದಿಗೆ ಒಂದು ಆಪ್ತ ಸಂವಾದ.
ಸಾಹಸ, ಸಂಗೀತ ಮತ್ತು ಒಲವಿನೊಂದಿಗೆ ಸಾಗಿದ ಪ್ರವಾಸದ ರೋಮಾಂಚಕ ಅನುಭವಗಳನ್ನು ʼಪ್ರವಾಸಿ ಪ್ರಪಂಚʼದ ವಿಶೇಷ ಸಂದರ್ಶನದಲ್ಲಿ ಗಾಯಕಿ ಐಶ್ವರ್ಯ ರಂಗರಾಜನ್ ಅವರು ಹಂಚಿಕೊಂಡಿದ್ದಾರೆ.
- ನಿಮ್ಮ ದೃಷ್ಟಿಯಲ್ಲಿ ‘ಪ್ರವಾಸ’ ಎಂದರೇನು? ಅದು ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವುದಕ್ಕೆ ಸೀಮಿತವಾಗಿದೆಯೇ?
- ಖಂಡಿತವಾಗಿಯೂ ಅಲ್ಲ. ನನ್ನ ಪಾಲಿಗೆ ಪ್ರವಾಸವೆಂದರೆ ಬದುಕನ್ನು ಹೊಸ ದೃಷ್ಟಿಕೋನದಿಂದ ನೋಡಲು ಕಲ್ಪಿಸುವ ಒಂದು ಅವಕಾಶ. ನಾವು ಹೊಸ ಸ್ಥಳಗಳಿಗೆ ಭೇಟಿ ನೀಡಿದಾಗ, ಅಲ್ಲಿನ ಜನರನ್ನು ಪರಿಚಯಿಸಿಕೊಂಡಾಗ ಮತ್ತು ವಿಭಿನ್ನ ಸಂಸ್ಕೃತಿಗಳನ್ನು ಅರಿತುಕೊಂಡಾಗ, ಜಗತ್ತಿನ ಬಗೆಗಿನ ನಮ್ಮ ದೃಷ್ಟಿಯಷ್ಟೇ ಅಲ್ಲ, ನಮ್ಮನ್ನೇ ನಾವು ನೋಡುವ ರೀತಿಯೂ ಬದಲಾಗುತ್ತದೆ.
ಇದನ್ನೂ ಓದಿ: ದಿಲ್‌ಪಸಂದ್ ಬೆಡಗಿಯ ಪ್ರವಾಸಿ ಜೀವನ
- ನೀವು ಇತ್ತೀಚೆಗಷ್ಟೇ ಪ್ರವಾಸ ಮಾಡಿದ್ದೀರಿ. ಈ ಪೈಕಿ ನಿಮ್ಮ ಅತ್ಯುತ್ತಮ ಮತ್ತು ಮರೆಯಲಾಗದ ಮೆಮೊರಿ ಯಾವುದಾದರು ಇದೆಯಾ?
- ಇತ್ತೀಚಿನ ಪ್ರವಾಸದಲ್ಲಿ ನಾನು ಮತ್ತು ನನ್ನ ಪತಿ 'ಸ್ಕೈ ಡೈವಿಂಗ್' ಮಾಡಿದೆವು. ಯಾವುದೇ ನಿರೀಕ್ಷೆಗಳಿಲ್ಲದೆ, ದಿಢೀರನೆ ಬುಕ್ ಮಾಡಿಕೊಂಡು ಹೋದ ಸಾಹಸವದು. ವಿಮಾನದಿಂದ ಕೆಳಗೆ ಜಿಗಿದ ಆ ಅದ್ಭುತ ಕ್ಷಣ ನಮ್ಮ ಪಾಲಿಗೆ ಶಾಶ್ವತವಾದ ಮತ್ತು ಅತ್ಯುತ್ತಮವಾದ ನೆನಪಾಗಿ ಸದಾ ಉಳಿಯುವಂಥ ಸ್ವೀಟೆಸ್ಟ್ ಮೆಮೊರಿ.

- ಸ್ಕೈ ಡೈವಿಂಗ್ ಮಾತ್ರವಲ್ಲದೆ, ಬೇರೆ ಯಾವ ಸಾಹಸ ಕ್ರೀಡೆಗಳಲ್ಲಿ ನೀವು ಪಾಲ್ಗೊಂಡಿದ್ದೀರಿ? ಅವುಗಳಲ್ಲಿ ನಿಮ್ಮ ಮೆಚ್ಚಿನದ್ದು ಯಾವುದು?
- ಸ್ಕೂಬಾ ಡೈವಿಂಗ್ ಮಾಡುವ ಆಸೆ ಇದೆ, ಆದರೆ ಇನ್ನೂ ಮಾಡಿಲ್ಲ. ಈ ಹಿಂದೆ ಶಿಮ್ಲಾಕ್ಕೆ ಭೇಟಿ ನೀಡಿದ್ದಾಗ ಪ್ಯಾರಾಗ್ಲೈಡಿಂಗ್ ಮಾಡಿದ್ದೆವು. ಹಾಗೆಯೇ ಕುಲ್ಲು-ಮನಾಲಿಯಲ್ಲಿ ಕಯಾಕಿಂಗ್ ಹಾಗೂ ರಿವರ್ ರ‍್ಯಾಫ್ಟಿಂಗ್ ಮಾಡಿದ್ದೆವು. ಅಲ್ಲಿನ ಬೆಟ್ಟ-ಗುಡ್ಡಗಳ ಪ್ರದೇಶ ಮತ್ತು ನದಿಯ ಪರಿಸರದಲ್ಲಿ ಕಯಾಕಿಂಗ್ ಮಾಡಿದ್ದು ಅತ್ಯದ್ಭುತ ಅನುಭವವಾಗಿತ್ತು. ಆದರೂ, ಪ್ರಸ್ತುತ ನಮ್ಮ ಸ್ಕೈ ಡೈವಿಂಗ್ ಅನುಭವವನ್ನು ಬೇರಾವುದೂ ಮೀರಿಸಲು ಸಾಧ್ಯವೇ ಇಲ್ಲ.
- ನೀವು ಭೇಟಿ ನೀಡಿದ ಸ್ಥಳಗಳು ನಿಮ್ಮ ಹಾಡುಗಾರಿಕೆಗೆ ಸ್ಫೂರ್ತಿ ನೀಡಿದ ವಿಶೇಷ ಸಂದರ್ಭಗಳೇನಾದರೂ ಇವೆಯೇ?
- ಖಂಡಿತ ಇದೆ. ಇತ್ತೀಚೆಗೆ ನಾವು ಯುರೋಪ್‌ನ 'ಗೀಥೂರ್ನ್' (Giethoorn) ಎಂಬ ಸ್ಥಳಕ್ಕೆ ಹೋಗಿದ್ದೆವು. ಅಲ್ಲಿ ಎಲ್ಲೆಡೆ ಕಾಲುವೆಗಳಿದ್ದು, ಪ್ರವಾಸಿಗರೇ ಸ್ವತಃ ಬೋಟ್ ಓಡಿಸುವ ಅವಕಾಶವಿತ್ತು. ನಕ್ಷೆ ನೋಡಿಕೊಂಡು ಸುಮಾರು ಒಂದು ಗಂಟೆಗಳ ಕಾಲ ನಾವೇ ಬೋಟ್ ಚಲಾಯಿಸಿದೆವು. ಆ ಇಡೀ ಪ್ರಯಾಣದುದ್ದಕ್ಕೂ ನಾನು, ನನ್ನ ಪತಿ ಮತ್ತು ನನ್ನ ಕಸಿನ್ ಅಣ್ಣ ಸೇರಿ 'ದೋಣಿ ಸಾಗಲಿ, ಮುಂದೆ ಸಾಗಲಿ...' ಹಾಡನ್ನು ಹಾಡುತ್ತಲೇ ಸಾಗಿದೆವು. ಆ ಪರಿಸರಕ್ಕೆ ಅದು ಅತ್ಯಂತ ಸೂಕ್ತವೆನಿಸಿತು. ಹಾಗೆಯೇ, ಅಲ್ಲಿನ ಸುಂದರವಾದ ಆಕಾಶವನ್ನು ನೋಡಿ ʼಬಾನಿನ ಹನಿಯು ಧರೆಗೆ...ʼ ಹಾಡು ನೆನಪಾಯಿತು. ಅಲ್ಲಿನ ಪ್ರಕೃತಿಯೇ ನಮಗೆ ದೊಡ್ಡ ಸ್ಫೂರ್ತಿಯಾಗಿತ್ತು.
- ನಿಮಗೆ ಸೋಲೋ ಟ್ರಿಪ್ ಇಷ್ಟವೋ ಅಥವಾ ಸಂಗಾತಿಯೊಂದಿಗಿನ ಪ್ರವಾಸವೋ?
- ಈ ಹಿಂದೆ ಪ್ರವಾಸಕ್ಕೆ ನನಗೆ ಒಬ್ಬ ಸಂಗಾತಿಯ ಅಗತ್ಯವಿದೆ ಎಂದು ಅನ್ನಿಸಿರಲಿಲ್ಲ. ಆದರೆ, ನನ್ನ ಪತಿಯೊಂದಿಗೆ ಈ ಟ್ರಿಪ್ ಮುಗಿಸಿದ ಮೇಲೆ, ಅವರೇ ನನ್ನ ಜೀವನದ ಅತ್ಯುತ್ತಮ 'ಟ್ರಾವೆಲ್ ಪಾರ್ಟ್ನರ್' ಎಂಬುದು ಅರಿವಾಯಿತು. ಇನ್ನು ಮುಂದೆ ಎಲ್ಲೇ ಹೋದರು ನನ್ನ ಸಂಗಾತಿಯೊಂದಿಗೆ ಹೋಗಲು ಬಯಸುತ್ತೇನೆ.
- ನಿಮ್ಮ ‘ಬಕೆಟ್ ಲಿಸ್ಟ್’ನಲ್ಲಿರುವ, ತಪ್ಪದೇ ಭೇಟಿ ನೀಡಬೇಕು ಎಂದುಕೊಂಡಿರುವ ಐದು ಕನಸಿನ ತಾಣಗಳಾವುವು?
- ಜಪಾನ್, ದಕ್ಷಿಣ ಕೊರಿಯಾ, ಸ್ವಿಟ್ಜರ್‌ಲೆಂಡ್, ಮಸಾಯಿ ಮಾರಾ ಮತ್ತು ನಾರ್ವೆ ನನ್ನ ಬಕೆಟ್ ಲಿಸ್ಟ್‌ನಲ್ಲಿರುವ ಪ್ರಮುಖ ತಾಣಗಳು. ಆದರೆ, ವಿದೇಶಗಳಷ್ಟೇ ಅಲ್ಲ, ನಮ್ಮ ಭಾರತದಲ್ಲೂ ಅನ್ವೇಷಿಸಬೇಕಾದ ಅದ್ಭುತ ತಾಣಗಳಿಗೆ ಕೊರತೆಯಿಲ್ಲ. ವಿಶೇಷವಾಗಿ ರಾಜಸ್ಥಾನದ ವೈಭವ, ಇತಿಹಾಸ ಮತ್ತು ಸಂಸ್ಕೃತಿಯನ್ನು ಹತ್ತಿರದಿಂದ ಅನುಭವಿಸುವುದು ನನ್ನ ಬಹುದಿನಗಳ ಆಸೆ. ಅದರ ಜತೆಗೆ, ಭಾರತದ ವೈವಿಧ್ಯಮಯ ಸೌಂದರ್ಯವನ್ನು ಇನ್ನಷ್ಟು ಅರಿಯಲು ಈಶಾನ್ಯ ರಾಜ್ಯಗಳಿಗೂ ಭೇಟಿ ನೀಡುವ ಯೋಜನೆಯಿದೆ. ಮುಂದಿನ ದಿನಗಳಲ್ಲಿ ಭಾರತದ ಈ ಎರಡೂ ಭಾಗಗಳ ಪಯಣಕ್ಕೆ ವಿಶೇಷ ಆದ್ಯತೆ ನೀಡಲು ಬಯಸುತ್ತೇನೆ.

- ನೀವು ಸಂಗೀತಗಾರ್ತಿಯಾಗಿರುವುದರಿಂದ, ಪ್ರವಾಸಕ್ಕೆ ಹೋದಾಗ ಸಂಗೀತದ ಅಭ್ಯಾಸ ಮತ್ತು ಕೆಲಸಗಳಿಂದ ಸಂಪೂರ್ಣ ವಿರಾಮ ಪಡೆಯುತ್ತೀರಾ? ಅಥವಾ ಸಂಗೀತವೂ ನಿಮ್ಮ ಪಯಣದ ಭಾಗವಾಗಿರುತ್ತದೆಯೇ?
- ಪ್ರವಾಸಕ್ಕೆ ಹೊರಡುವಾಗಲೇ ಸಂಗೀತದ ಕೆಲಸಗಳನ್ನು ಮುಂದುವರಿಸಲು ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಂಡು ಹೋಗುತ್ತೇನೆ. ಪ್ರವಾಸದ ಸಂದರ್ಭದಲ್ಲಿಯೇ ವಿಡಿಯೋ ಶೂಟ್ ಮಾಡಿ, ಇನ್‌ಸ್ಟಾಗ್ರಾಮ್‌ಗಾಗಿ ಕಂಟೆಂಟ್ ಕೂಡ ಸೃಷ್ಟಿಸುತ್ತೇನೆ. ಎಲ್ಲಿಗೆ ಹೋದರೂ ನನ್ನ ರೆಕಾರ್ಡಿಂಗ್ ಸೆಟಪ್ ಅನ್ನು ಜತೆಯಲ್ಲೇ ಕೊಂಡೊಯ್ಯುತ್ತೇನೆ. ಎರಡು-ಮೂರು ವಾರಗಳ ಕಾಲ ಬೇರೆ ಊರಿನಲ್ಲಿ ಉಳಿಯಬೇಕಾದ ಸಂದರ್ಭದಲ್ಲೂ ಅಲ್ಲಿಯೇ ನನ್ನ ಸೆಟಪ್ ಮಾಡಿಕೊಂಡು ಸಂಗೀತದ ಕೆಲಸಗಳನ್ನು ನಿರಂತರವಾಗಿ ಮುಂದುವರಿಸುತ್ತೇನೆ. ಹೀಗಾಗಿ, ನನ್ನ ಪಾಲಿಗೆ ಪ್ರವಾಸವೆಂದರೆ ಸಂಗೀತದಿಂದ ವಿರಾಮ ಪಡೆಯುವುದಲ್ಲ, ಹೊಸ ಸ್ಥಳಗಳ ನಡುವೆ ಸಂಗೀತವನ್ನು ಇನ್ನಷ್ಟು ಹತ್ತಿರದಿಂದ ಅನುಭವಿಸುವ ಅವಕಾಶ.
ನಾನು ಪ್ರವಾಸ ಮಾಡಿದ ತಾಣಗಳ ಪೈಕಿ ಆಸ್ಟ್ರೇಲಿಯಾ ನನಗೆ ಬಹಳ ಇಷ್ಟ. ತಾಣ ಯಾವುದೇ ಇರಲಿ, ಕಡಲತೀರಗಳೆಂದರೆ ನನಗೆ ವಿಶೇಷ ಪ್ರೀತಿ. ಸಮುದ್ರದ ಸೊಬಗು, ಅಲೆಗಳ ಸದ್ದು ಮತ್ತು ಅಲ್ಲಿನ ಮುಕ್ತ ವಾತಾವರಣ ನನ್ನನ್ನು ಸದಾ ಸೆಳೆಯುತ್ತದೆ.
ಒಮ್ಮೆ ರಿವರ್ ರ‍್ಯಾಫ್ಟಿಂಗ್ ಮತ್ತೊಮ್ಮೆ ಆಕಾಶದಿಂದ ಧುಮುಕುವ ಸಾಹಸ… ಪ್ರವಾಸದ ಪ್ರತಿ ಕ್ಷಣವನ್ನೂ ಹೊಸ ಅನುಭವವಾಗಿ ಸ್ವೀಕರಿಸುವ ಮನಸು, ಅದಕ್ಕೆ ಸಂಗೀತದ ಸಾಂಗತ್ಯ ಸೇರಿದರೆ ಪಯಣ ಇನ್ನಷ್ಟು ವಿಶೇಷ! ಇತ್ತೀಚೆಗಷ್ಟೇ ಪತಿಯೊಂದಿಗೆ ಸ್ಕೈಡೈವಿಂಗ್‌ನ ರೋಮಾಂಚನ ಅನುಭವಿಸಿದ ಐಶ್ವರ್ಯ ರಂಗರಾಜನ್ ಅವರಿಗೆ, ಪ್ರವಾಸವೆಂದರೆ ಕೇವಲ ಹೊಸ ತಾಣಗಳನ್ನು ನೋಡುವುದಲ್ಲ, ಬದುಕನ್ನೇ ಹೊಸ ದೃಷ್ಟಿಕೋನದಿಂದ ನೋಡುವ ಅವಕಾಶ.