Friday, September 11, 2026
Friday, September 11, 2026

ದಿಲ್‌ಪಸಂದ್‌ ಬೆಡಗಿಯ ಪ್ರವಾಸಿ ಜೀವನ

ʼಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಪರಿಚಿತರಾದ ನಟಿ ಮೇಘಾ ಶೆಟ್ಟಿ, ಅನು ಸಿರಿಮನೆ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಪಡೆದರು.

ಪ್ರವಾಸವೆಂದರೆ 10 ದಿನಗಳ ಸುತ್ತಾಟ

ಎಲ್ಲರಂತೆ ಬೇಕಾದಾಗಲೆಲ್ಲ ಪ್ರವಾಸ ಮಾಡಲು ನನಗೆ ಸಾಧ್ಯವಾಗುವುದಿಲ್ಲ. ಶೂಟಿಂಗ್‌, ಪ್ರೊಡಕ್ಷನ್‌ ಹೀಗೆ ಅನೇಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಬೇಕೆನಿಸಿದಾಗೆಲ್ಲಾ ಪ್ರವಾಸ ಕಷ್ಟವಾಗಿಬಿಡುತ್ತದೆ. ಆದರೆ ಒಮ್ಮೆ ಬಿಡುವು ಮಾಡಿಕೊಂಡು ಪ್ರವಾಸ ಹೊರಟೆನೆಂದರೆ ಸುಮಾರು 10 ದಿನಗಳ ಸುತ್ತಾಟ ನನ್ನದು. ಅಲ್ಲಿನ ಪರಿಸರ, ಸಂಸ್ಕೃತಿ, ಆಹಾರಗಳನ್ನು ಖುಷಿಯಿಂದ ಸಂಭ್ರಮಿಸುತ್ತೇನೆ.

Untitled design - 2026-09-11T132833.785

ರಾಜ್ಯದೊಳಗೇ ಶೂಟಿಂಗ್‌ ಪ್ರವಾಸ

ನಾನು ಯಾವುದೇ ಧಾರಾವಾಹಿ ಅಥವಾ ಸಿನಿಮಾಗಳ ಚಿತ್ರೀಕರಣಕ್ಕಾಗಿ ದೇಶ, ವಿದೇಶಗಳಿಗೆ ಭೇಟಿ ನೀಡಿಲ್ಲ.ದಿಲ್‌ ಪಸಂದ್‌, ಕೈವಾ, ಚೀತಾ ಹೀಗೆ ಅನೇಕ ಸಿನಿಮಾಗಲ್ಲಿ ಅಭಿನಯಿಸಿದ್ದೇನಾದರೂ ಇವೆಲ್ಲದರ ಚಿತ್ರೀಕರಣ ಕರ್ನಾಟಕದಲ್ಲೇ ನಡೆದಿದೆ. ಹೆಚ್ಚೆಂದರೆ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿಯ ಪ್ರಮುಖ ತಾಣಗಳಲ್ಲಿ ನಡೆದಿದೆ. ಮುಂದಿನ ದಿನಗಳಲ್ಲಿ ಅಂಥ ಅವಕಾಶಗಳ ನಿರೀಕ್ಷೆಯಲ್ಲಿದ್ದೇನೆ.

ಚಿಕ್ಕಮಗಳೂರಲ್ಲಿ ಗ್ರಾಮಾಯಣ

ಗ್ರಾಮಾಯಣ ಸಿನಿಮಾ ಇತ್ತೀಚೆಗೆ ತೆರೆಕಂಡು ಸಾಕಷ್ಟು ಉತ್ತಮ ಪ್ರತಿಕ್ರಿಯೆ ಗಳಿಸಿದೆ. ಚಿಕ್ಕಮಗಳೂರು, ದೇವನೂರು, ಕಡೂರು ಭಾಗಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದ್ದು, ಸುಮಾರು 20-22 ದಿನಗಳ ಕಾಲ ಚಿತ್ರತಂಡದ ಅಲ್ಲೇ ಬೀಡುಬಿಟ್ಟಿತ್ತು. ಅಲ್ಲಿನ ವಾತಾವರಣ, ಆಹಾರಕ್ಕೆ ಕೇವಲ ಎರಡೇ ದಿನಗಳಲ್ಲಿ ಹೊಂದಿಕೊಂಡಿದ್ದೆ. ಅಲ್ಲಿನ ಜನರ ಪ್ರೀತಿ, ಕಾಳಜಿಯನ್ನು ಮರೆಯುವುದಕ್ಕಾಗದು. ಆದರೆ ಶೂಟಿಂಗ್‌ ನಡೆದ ಜಾಗದ ಹೊರತಾಗಿ ಅಲ್ಲಿನ ಪ್ರವಾಸಿ ತಾಣಗಳನ್ನು ಸುತ್ತಾಡಿಬರುವುದಕ್ಕೆ ಸಾಧ್ಯವಾಗಿರಲಿಲ್ಲ. ಬೆಂಕಿ ಹಾಡಿನ ಚಿತ್ರೀಕರಣವೂ ಬೆಂಗಳೂರಿನ ಸೆಟ್‌ ಒಂದರಲ್ಲಿ ನಡೆದಿತ್ತು.

ಇದನ್ನೂ ಓದಿ: ಪ್ರೈವೆಸಿ ಬಯಸುವವರಿಗೆ ಪ್ರವಾಸವಲ್ಲ! - ಸಂಜನಾ ಆನಂದ್‌

ಪ್ರವಾಸದಲ್ಲಿ ನೋ ಡಯಟ್

ಪ್ರವಾಸದ ವೇಳೆ ಡಯಟ್‌ ಬಗ್ಗೆ ನಾನು ಹೆಚ್ಚಿನ ಗಮನಹರಿಸುವುದಿಲ್ಲ. ನನಗಿಷ್ವವೆನಿಸುವ ಆಹಾರವನ್ನು ಸೇವಿಸುತ್ತೇನೆ. ಆದರೆ ತಿನ್ನುವ ಆಹಾರದಲ್ಲಿ ಸ್ವಲ್ಪ ಮಿತಿಯಿರುತ್ತದೆ ಅಷ್ಟೇ. ಯಾವುದೇ ದೇಶಕ್ಕೆ ಹೋದರೂ ಅಲ್ಲಿನ ಸ್ಥಳೀಯ ಆಹಾರ ಶೈಲಿಯನ್ನು ಅನುಸರಿಸುತ್ತೇನೆ. ಅಲ್ಲಿನ ರುಚಿಯನ್ನು ಆಸ್ವಾದಿಸುತ್ತೇನೆ. ಹೆಚ್ಚಿಗೆ ನೂಡಲ್ಸ್‌, ಚಿಕನ್‌ ಟ್ರೈ ಮಾಡುವುದು ನನಗಿಷ್ಟ.

ಕೊರಗಜ್ಜನ ದರ್ಶನ ಭಾಗ್ಯ

ನಾನು ಮಂಗಳೂರಿನವಳಾದರೂ ಹುಟ್ಟಿ ಬೆಳೆದಿರುವುದೆಲ್ಲವೂ ಬೆಂಗಳೂರಿನಲ್ಲಿ. ಇತ್ತೀಚೆಗಂತೂ ಮಂಗಳೂರು ಪ್ರವಾಸ ಬಹಳ ಕಡಿಮೆ.. ಇವೆಂಟ್‌, ಶೂಟ್‌ಗಳು ಇರುವಾಗಷ್ಟೇ ಅಲ್ಲಿಗೆ ಭೇಟಿ ನೀಡುತ್ತೇನೆ. ಆದರೆ ಹೋದಾಗ ಅಲ್ಲಿನ ಪ್ರವಾಸಿ ತಾಣಗಳಿಗೆ, ಪ್ರಮುಖ ದೇವಾಲಯಗಳಿಗೆ ಭೇಟಿ ನೀಡುತ್ತೇನೆ. ಅಲ್ಲಿನ ಕೋರಿ ರೊಟ್ಟಿ, ಚಿಕನ್‌, ನೀರುದೋಸೆ ನನ್ನ ಫೇವರಿಟ್.‌ ಕೊರಗಜ್ಜನ ದರ್ಶನ ಪಡೆದರೆ ಮನಸಿಗೆ ನೆಮ್ಮದಿ ಅನುಭವವಾಗುತ್ತದೆ.

ಇದನ್ನೂ ಓದಿ:ಕಾವ್ಯಾ ಗೌಡ ಸಂದರ್ಶನ

ಬಂಡಿ ಮಾಕಾಳಮ್ಮ ದೇವಿ ದರ್ಶನ

ಟೆಂಪಲ್‌ ಟೂರಿಸಂ ನನಗಿಷ್ಟ..ಬಿಡುವಾದಾಗೆಲ್ಲ ದೇವಾಲಯಗಳಿಗೆ ಹೋಗುತ್ತೇನೆ. ಅದರಲ್ಲೂ ಬೆಂಗಳೂರಿನಲ್ಲಿ ಬಸವನಗುಡಿಯ ಬಂಡಿ ಮಾಕಾಳಮ್ಮ ದೇವಾಲಯಕ್ಕೆ ಹೋಗುವುದು ಈಗಂತೂ ರೂಢಿಯಾಗಿದೆ.

ಹೆಲಿಕಾಪ್ಟರ್‌ ಏರಿದ ಖುಷಿ

ಆರೂರು ಜಗದೀಶ್ ಅವರ ನಿರ್ದೇಶನದಲ್ಲಿ ಮೂಡಿಬಂದ ʻಜೊತೆ ಜೊತೆಯಲಿʼ ಧಾರಾವಾಹಿಯಲ್ಲಿ ಅನಿರುದ್ಧ ಅವರ ಜತೆಗೆ ಅನು ಸಿರಿಮನೆಯಾಗಿ ಕಾಣಿಸಿಕೊಂಡಿದ್ದೆ. ಈ ಪಾತ್ರ ಮಾಡಿ ವರ್ಷಗಳೇ ಕಳೆದರೂ ಎಲ್ಲರೂ ಮೆಚ್ಚಿಕೊಂಡು ಇಂದಿಗೂ ನೆನಪಿಸುತ್ತಾರೆ.. ಆ ಧಾರಾವಾಹಿಯಲ್ಲಿ ಮೊದಲ ಬಾರಿಗೆ ನಾನು ಹೆಲಿಕಾಪ್ಟರ್‌ ಏರಿದ್ದೆ. ಅದುವರೆಗೂ ಕನ್ನಡ ಸೀರಿಯಲ್‌ ರಂಗದಲ್ಲಿ ಇಂಥ ಪ್ರಯತ್ನಗಳನ್ನು ಮಾಡಿರುವುದು ನನಗೆ ತಿಳಿದಿಲ್ಲ. ಅದೊಂದು ಅದ್ಬುತ ಅನುಭವ ನೀಡಿದೆ.

ಯುರೋಪ್‌ ಸುತ್ತಾಟ ಮರೆಯಲಿ ಹೇಗೆ ?

ಕಳೆದ ಜನವರಿಯಲ್ಲಿ ಸ್ಣೇಹಿತರ ಜತೆಗೆ ಸುಮಾರು 10 ದಿನಗಳ ಕಾಲ ಯುರೋಪ್‌ ಪ್ರವಾಸ ಮಾಡಿ ಬಂದಿದ್ದೆ. ಸ್ವಿಟ್ಜರ್‌ಲ್ಯಾಂಡ್‌ ಇಂಟರ್‌ಲಾಕನ್, ಇಟಲಿಯ ಮಿಲಾನ್‌ನ ಸುತ್ತಾಟವಂತೂ ಮರೆಯಲಾರದ ಅನುಭವಗಳನ್ನೇ ಕಟ್ಟಿಕೊಟ್ಟಿದೆ. ಇಂಥ ಪ್ರವಾಸಿಗಳಿಗೆ ನಾನೇ ಆಗಿ ಪ್ಲ್ಯಾನ್‌ ಮಾಡಿಕೊಳ್ಳುವುದಿಲ್ಲ. ನನ್ನ ಸ್ನೇಹಿತರು ಪೂರ್ವ ತಯಾರಿ ಆಡಿಕೊಂಡು ನನ್ನನ್ನು ಗುಂಪಿಗೆ ಸೇರಿಸಿಕೊಳ್ಳುತ್ತಾರೆ.

Untitled design - 2026-09-11T134224.428

ಸಿಂಗಾಪುರದಲ್ಲಿ ಅಂಥದೇನಿಲ್ಲ!

ಕುಟುಂಬ ಹಾಗೂ ಸ್ನೇಹಿತರ ಜತೆಗೆ ಅನೇಕ ದೇಶಗಳಿಗೆ ಪ್ರವಾಸ ಮಾಡಿದ್ದೇನೆ. ಅವುಗಳಲ್ಲಿ ಸಿಂಗಾಪುರವೂ ಪ್ರಮುಖವಾದುದು. ಸಿಂಗಾಪುರ ಚಿಕ್ಕದೊಂದು ದೇಶ, ಬಜೆಟ್‌ ಫ್ರೆಂಡ್ಲೀ ಎಂಬ ಕಾರಣಕ್ಕೆ ಇಲ್ಲಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ನನಗ್ಯಾಕೋ ಆ ದೇಶ ಓಹ್‌! ಅಂತ ಅನಿಸಿಯೇ ಇಲ್ಲ. ಎಲ್ಲ ದೇಶಗಳಿಂತಲೂ ಭಿನ್ನ ಎಂಬ ಭಾವನೆಯೇ ಮೂಡಿಲ್ಲ.

ಅಮ್ಮನಿಗೆ ದುಬೈ ತೋರಿಸಿದ್ದೆ..

ಅಮ್ಮನನ್ನು ದುಬೈ ನೋಡಲು ಕರೆದುಕೊಂಡು ಹೋಗುವಾಸೆ ಬಹಳ ಕಾಲದಿಂದಲೂ ಇತ್ತು. ಹಾಗೆ ಎಲ್ಲ ತಯಾರಿಗಳನ್ನು ಮಾಡಿಕೊಂಡು ಅಲ್ಲಿನ ಪ್ರಮುಖ ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗಿದ್ದೆ. ದುಬೈನಲ್ಲಿ ಎಲ್ಲ ರಾಜ್ಯಗಳ ಆಹಾರವೂ ಸಿಗುವುದರಿಂದ ನಮಗಲ್ಲಿ ಆಹಾರಕ್ಕೆ ಸಮಸ್ಯೆಯಾಗಲಿಲ್ಲ. ಅಲ್ಲದೆ ಅಲ್ಲಿನ ಫೇಮಸ್‌ ಆಹಾರವನ್ನೂ ಸವಿಯುವ ಅವಕಾಶ ನಮಗೆ ಲಭ್ಯವಾಗಿತ್ತು.

ಇದನ್ನೂ ಓದಿ: ಎಲ್ಲವೂ ಮುಗಿದೇಹೋಯ್ತು ಎನಿಸಿದ ಕ್ಷಣ!

ಬೆಂಕಿಯಲ್ಲೂ ತಂಪಾದ ಮಂಗಳೂರು ಬೀಚ್‌

ನಾನು ಅನೇಕ ದೇಶಗಳನ್ನು ಸುತ್ತಾಡಿಬಂದಿದ್ದೇನೆ. ಆದರೆ ಇಂದಿಗೂ ಯಾವ ಬೀಚ್‌ ನಿನಗಿಷ್ಟ ಪ್ರಶ್ನೆ ಕೇಳಿದರೆ ನನ್ನ ಉತ್ತರ ಮಂಗಳೂರು ಬೀಚ್‌ ಆಗಿರುತ್ತದೆ. ಅದ್ಯಾಕೆ ಅಷ್ಟೊಂದು ಇಷ್ಟವಾಯ್ತೋ ಗೊತ್ತಿಲ್ಲ..ನನ್ನೂರು ಎಂಬ ಒಲವಿರಬಹುದು. ಇಲ್ಲವಾದರೆ ಶುಚಿತ್ವಕ್ಕೆ ಅಲ್ಲಿನ ಮಂದಿ ಕೊಡುವ ಪ್ರಾಶಸ್ತ್ಯವಿರಬಹುದು.

ಶಾಪಿಂಗ್‌ ಇಲ್ಲದೆ ಪ್ರವಾಸವಿಲ್ಲ

ಪ್ರವಾಸವೆಂದರೆ ನೆನಪುಗಳನ್ನು ಕಟ್ಟಿಕೊಳ್ಳುವ ವಿಧಾನ. ಅದರಲ್ಲೂ ನಾನು ಪ್ರವಾಸ ಮುಗಿಸಿ ಬರುವಾಗ ಅಲ್ಲಿನ ವಿಶೇಷ ವಸ್ತುಗಳ ಜತೆಗೆ ವಾಪಸ್ಸಾಗುತ್ತೇನೆ. ಕುಟುಂಬದ ಜತೆಗೆ ಹೋಗಿಲ್ಲವೆಂದರೆ ಅವರಿಗಾಗಿ ಒಂದಷ್ಟು ವಸ್ತುಗಳನ್ನು ಕೊಂಡುಕೊಳ್ಳುತ್ತೇನೆ. ಮನೆಯಲ್ಲಿರುವ ನನ್ನಿಷ್ಟದ ಪೆಟ್ಸ್‌ಗಾಗಿ ಟಾಯ್ಸ್‌ ಕೊಂಡುಕೊಳ್ಳುವುದನ್ನು ಮರೆಯುವುದಿಲ್ಲ. ಸಂಬಂಧಿಕರು, ಅಕ್ಕಪಕ್ಕದ ಮನೆಯ ಮಕ್ಕಳಿಗಾಗಿ ಚಾಕೊಲೆಟ್ಸ್‌ ಶಾಪಿಂಗ್‌ ಮಾಡಿಕೊಳ್ಳುತ್ತೇನೆ.

Untitled design - 2026-09-11T133752.309

ಯಮ್ಮೀ ಬಿರಿಯಾನಿ..

ನಾನು ಬಿರಿಯಾನಿ ಪ್ರಿಯೆ. ಆದ್ದರಿಂದಲೇ ಬೆಂಗಳೂರಿನಲ್ಲಿ ನನ್ನ ನೆಚ್ಚಿನ ಫುಡ್‌ ಅಡ್ಡಾವನ್ನು ಗುರುತಿಸುವುದು ಕಷ್ಟ. ಲೋಕಲ್‌ ಆಗಿ ಸಿಗುವ ಬಿರಿಯಾನಿಯ ರುಚಿ ತುಂಬಾ ಟೇಸ್ಟಿಯಾಗಿರುತ್ತದೆ. ಅದಕ್ಕೆ ಬಿಡುವೆನಿಸಿದಾಗೆಲ್ಲ ಸುತ್ತಾಡಿ, ವಿಶೇಷ ಬಿರಿಯಾನಿಗಳ ರುಚಿ ಸವಿಯುತ್ತೇನೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್