ಬಿಗ್‌ ಬಾಸ್‌ ವಿಜೇತ ಕಾರ್ತಿಕ್‌ ಮಹೇಶ್‌ ಸದ್ಯ ಹೊಸ ಪಾತ್ರಗಳನ್ನು ಹುಡುಕುತ್ತಾ, ಪ್ರೇಕ್ಷಕರಿಗೆ ಇಷ್ಟವಾಗುವ ಸಿನಿಮಾಗಳನ್ನು ನೀಡುವ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಅವರ ಫಿಟ್‌ ಬಾಡಿ ಫೊಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿತ್ತು. ಆದರೆ, ಇವೆಲ್ಲದರ ಜತೆಗೆ ಪ್ರವಾಸವನ್ನೂ ಅಷ್ಟೇ ಎಂಜಾಯ್‌ ಮಾಡುವ ಅವರು ಪ್ರವಾಸಿ ಪ್ರಪಂಚದ ಜತೆಗೆ ಅವರ ಟ್ರಾವೆಲ್‌ ಜರ್ನಿಯನ್ನು ಹಂಚಿಕೊಂಡಿದ್ದಾರೆ

ನಿಮಗೆ ಟ್ರಾವೆಲ್ ಮಾಡೋದು ಅಂದ್ರೆ ಇಷ್ಟನಾ? ಯಾವ ಪ್ಲೇಸ್‌ಗಳಿಗೆ ಮನ್ನಣೆ ಕೊಡ್ತೀರಾ?

ಖಂಡಿತವಾಗಿಯೂ, ನನಗೆ ಟ್ರಾವೆಲಿಂಗ್ ಅಂದ್ರೆ ಪಂಚಪ್ರಾಣ. ಅದರಲ್ಲೂ ಸುತ್ತಲೂ ಬೆಟ್ಟ-ಗುಡ್ಡಗಳು, ಪ್ರಕೃತಿ ಇರೋ ಜಾಗಗಳೆಂದ್ರೆ ತುಂಬಾನೇ ಇಷ್ಟ. ನಮ್ಮ ಕರ್ನಾಟಕದ ಪಶ್ಚಿಮ ಘಟ್ಟಗಳಂತೂ ನನ್ನ ಫೇವರಿಟ್ ತಾಣಗಳು. ಬೀಚ್‌ಗಳೂ ಚೆನ್ನಾಗಿರುತ್ತವೆ, ಆದ್ರೆ ಬೆಟ್ಟಗಳ ಮಡಿಲಿಗೆ ಹೋದಾಗ ಸಿಗೋ ಸಂತೋಷ ಮತ್ತು ನೆಮ್ಮದಿನೇ ಬೇರೆ. ನನಗೆ ಟ್ರಾವೆಲ್‌ ಎಂದರೆ ಒಂದು ಹೊಸ ಜಾಗವನ್ನು ನೋಡುವ ಜತೆಗೆ ರಿಜುವಿನೇಶನ್‌. ಎಲ್ಲಾ ಕೆಲಸಗಳಿಂದ ಒಂದು ಬ್ರೇಕ್‌ ಪಡೆದು ಒಂದು ಜಾಗಕ್ಕೆ ಹೋಗಿ ಬಂದಾಗ ಹೊಸ ಎನರ್ಜಿ ಸಿಗುತ್ತದೆ.

Untitled design (77)

ನೆನಪಿನಲ್ಲಿರುವ ಟ್ರಾವೆಲ್‌ ಅನುಭವ ಯಾವುದು?

ಫ್ರೆಂಡ್ಸ್ ಜತೆ ಕುಮಾರಪರ್ವತ ಟ್ರೆಕ್ಕಿಂಗ್ ಹೋಗಿದ್ದು ನನ್ನ ಲೈಫ್‌ನ ಬೆಸ್ಟ್ ಎಕ್ಸ್‌ಪೀರಿಯನ್ಸ್ ಅಂತ ಹೇಳಬಹುದು. ದೈಹಿಕವಾಗಿ ಅದು ತುಂಬಾನೇ ಚಾಲೆಂಜಿಂಗ್ ಆಗಿತ್ತು. ಆದರೆ ಕಷ್ಟಪಟ್ಟು ಆ ಬೆಟ್ಟದ ತುತ್ತತುದಿ ತಲುಪಿದಾಗ ಸಿಕ್ಕ ಆ ಸಾಧನೆಯ ಖುಷಿ ಇದೆಯಲ್ಲ, ಅದು ಅದ್ಭುತ. ಭಟ್ಟರ ಮನೆಯಲ್ಲಿ ತಟ್ಟೆ ಹಿಡಿದು ಊಟ ಮಾಡಿದ್ದು, ಅಲ್ಲಿ ರಾತ್ರಿ ಟೆಂಟ್ ಹಾಕಿ ಕ್ಯಾಂಪಿಂಗ್ ಮಾಡಿದ್ದು, ಆ ಸುಂದರ ವಾತಾವರಣ ಸವಿದಿದ್ದು... ನಿಜಕ್ಕೂ ಅವೆಲ್ಲಾ ಯಾವತ್ತೂ ಮರೆಯದ ನೆನಪುಗಳು.

ನಿಮ್ಮ ಬಕೆಟ್ ಲಿಸ್ಟ್‌ನಲ್ಲಿ ಯಾವ್ಯಾವ ಜಾಗಗಳಿವೆ?

ಇಡೀ ಪ್ರಪಂಚ ಸುತ್ತಾಡೋಕಿಂತ ಮುಂಚೆ, ನಮ್ಮ ಕರ್ನಾಟಕದ ಮೂಲೆ ಮೂಲೆಗಳನ್ನು ಎಕ್ಸ್‌ಪ್ಲೋರ್ ಮಾಡಬೇಕು ಅನ್ನೋದು ನನ್ನ ಆಸೆ. ನಾವು ಇನ್ನೂ ನೋಡದೇ ಇರುವ ಎಷ್ಟೋ ಸುಂದರವಾದ ಜಾಗಗಳು ನಮ್ಮ ರಾಜ್ಯದಲ್ಲೇ ಇವೆ. ಅದರಲ್ಲೂ ಟ್ರೆಕ್ಕಿಂಗ್ ಮಾಡುವ ಜಾಗಗಳಂತೂ ಯಾವಾಗಲೂ ನನ್ನ ಲಿಸ್ಟ್‌ನ ಟಾಪ್‌ನಲ್ಲಿ ಇರುತ್ತವೆ.

ಇದನ್ನೂ ಓದಿ: ಒಬ್ಬಂಟಿಗರಿಗೂ ಇಷ್ಟವಾಗುವ ಶಿವನ ಯಾಗಂಟಿ ಪುಣ್ಯಕ್ಷೇತ್ರ! ಇಲ್ಲಿ ಶಿವಲಿಂಗವಿಲ್ಲ-ನಂದಿ ವಿಗ್ರಹ ಬೆಳೆಯುತ್ತಲೇ ಇದೆ..

ಪ್ರಕೃತಿ ಮತ್ತು ಬೆಟ್ಟ-ಗುಡ್ಡಗಳ ಕಡೆಗೆ ನಿಮಗೆ ಯಾಕಿಷ್ಟು ಸೆಳೆತ?

ನಮ್ಮ ದಿನನಿತ್ಯದ ಬದುಕು ಕೆಲಸ, ಮೊಬೈಲ್ ಫೋನ್‌ಗಳು ಮತ್ತು ಸದಾ ಕನೆಕ್ಟಿವಿಟಿಯಿಂದಲೇ ತುಂಬಿಹೋಗಿರುತ್ತದೆ. ಈ ಪ್ರಕೃತಿಯ ಮಡಿಲಲ್ಲಿ ಸಮಯ ಕಳೆದಾಗ ಅದೆಲ್ಲದರಿಂದ ಕೊಂಚ ಬ್ರೇಕ್ ಸಿಗುತ್ತದೆ. ಇದು ನನ್ನ ಮೈಂಡ್ ರಿಫ್ರೆಶ್ ಮಾಡಿ, ಒಂದು ರೀತಿಯ ಪ್ರಶಾಂತತೆ ಮತ್ತು ಸ್ಪಷ್ಟತೆಯನ್ನು ಕೊಡುತ್ತದೆ.

ಸಿನಿಮಾಗಳಿಗೋಸ್ಕರನೂ ಪ್ರವಾಸ ಮಾಡ್ತಿರ್ತೀರಿ.. ಅದರ ನಡುವೆ ಬ್ರೇಕ್ ತಗೋಬೇಕು ಅನ್ಸತ್ತಾ?

ಖಂಡಿತಾ ಅನ್ಸುತ್ತೆ. ಆ ಥರದ ಬ್ರೇಕ್ ನನಗೆ ಸಿಗೋದು ಟ್ರಾವೆಲಿಂಗ್ ಇಂದಲೇ. ನಾವು ನಮ್ಮ ಕೆಲಸವನ್ನು ಎಷ್ಟೇ ಪ್ರೀತಿಸಿದ್ರೂ, ಪ್ರತಿಯೊಬ್ಬರಿಗೂ ರೀಚಾರ್ಜ್ ಆಗೋಕೆ ಸ್ವಲ್ಪ ಟೈಮ್ ಬೇಕೇ ಬೇಕು. ರೊಟೀನ್ ಲೈಫ್‌ನಿಂದ ಸ್ವಲ್ಪ ದೂರ ಹೋಗಿ ಬಂದಾಗ ಹೊಸ ಎನರ್ಜಿಯೊಂದಿಗೆ ಕೆಲಸಕ್ಕೆ ಮರಳಬಹುದು. ಎಲ್ಲೇ ಹೋದರೂ ಕೊನೆಗೆ ನಮ್ಮ ಮನೆಗೆ ಬಂದು ಮಲಗಿದಾಗಲೇ ನೆಮ್ಮದಿ ಅಂತ ಅನಿಸುತ್ತದೆ. ನಮ್ಮ ಮನೆಯ ವ್ಯಾಲ್ಯೂ ಅರ್ಥ ಮಾಡಿಕೊಳ್ಳುವುದಕ್ಕಾದರೂ ಪ್ರವಾಸ ಮಾಡಬೇಕು ಅನಿಸುತ್ತದೆ.

ನಿಮಗೆ ಒಬ್ಬರೇ ಟ್ರಾವೆಲ್ ಮಾಡೋಕೆ ಇಷ್ಟನಾ ಅಥವಾ ಗ್ರೂಪ್ ಜತೆನಾ?

ನಾನು ಜನರ ಜತೆ ಬೆರೆಯೋಕೆ ಇಷ್ಟಪಡ್ತೀನಿ, ಹಾಗಾಗಿ ಫ್ರೆಂಡ್ಸ್ ಜತೆ ಟ್ರಾವೆಲ್ ಮಾಡೋದೇ ಹೆಚ್ಚು ಖುಷಿ ಕೊಡುತ್ತೆ. ಆದ್ರೆ, ಪ್ರತಿಯೊಬ್ಬರಿಗೂ ಅವರದ್ದೇ ಆದ ಪರ್ಸನಲ್ ಸ್ಪೇಸ್ ಇರಬೇಕು ಅನ್ನೋದು ನನ್ನ ನಂಬಿಕೆ. ಹಾಗಾಗಿ ಮುಂದಿನ ದಿನಗಳಲ್ಲಿ 'ಸೋಲೋ ಟ್ರಾವೆಲ್' ಮಾಡೋದನ್ನು ಕೂಡ ಟ್ರೈ ಮಾಡಬೇಕು ಅನ್ಕೊಂಡಿದ್ದೀನಿ.

Untitled design (79)

ನಿಮ್ಮ ಈ ಪ್ರವಾಸದ ಅನುಭವಗಳು ನಿಮ್ಮ ಆಕ್ಟಿಂಗ್ ಕೆರಿಯರ್ ಮೇಲೆ ಏನಾದ್ರೂ ಪ್ರಭಾವ ಬೀರಿದ್ದಾವಾ?

ಹೌದು, ಖಂಡಿತವಾಗಿಯೂ ತುಂಬಾ ಪ್ರಭಾವ ಬೀರಿದೆ. ಟ್ರಾವೆಲ್ ಮಾಡೋದ್ರಿಂದ ನಮಗೆ ಬೇರೆ ಬೇರೆ ತರಹದ ಜನರು, ಅವರ ಲೈಫ್‌ಸ್ಟೈಲ್ ಮತ್ತು ಅವರ ಆಲೋಚನೆಗಳು ಪರಿಚಯ ಆಗ್ತಾವೆ. ಒಬ್ಬ ನಟನಾಗಿ, ರಿಯಲ್ ಲೈಫ್ ಮನುಷ್ಯರನ್ನ ಮತ್ತು ಅವರ ಎಮೋಷನ್ಸ್‌ಗಳನ್ನ ಅರ್ಥ ಮಾಡ್ಕೊಂಡಷ್ಟು, ಸ್ಕ್ರೀನ್ ಮೇಲೆ ಯಾವುದೇ ಪಾತ್ರವನ್ನಾದರೂ ಅಷ್ಟೇ ಅಚ್ಚುಕಟ್ಟಾಗಿ, ನೈಜವಾಗಿ ಪ್ರೆಸೆಂಟ್ ಮಾಡೋಕೆ ಹೆಲ್ಪ್ ಆಗುತ್ತದೆ. ಇತ್ತೀಚೆಗೆ ಹೋದ ಟ್ರೆಕ್‌ನಲ್ಲಿ ನಮ್ಮ ಜತೆಗೇ ಒಬ್ಬ ಹುಡುಗನಿದ್ದ. ಅವನು ಕೂರ್ಗ್‌ನವನು. ನಾವಾದರೆ ಟ್ರೆಕ್‌ ಮುಗಿಸಿ ವಾಪಸ್‌ ಮನೆಗೆ ಹೋಗುತ್ತೇವೆ. ಆದರೆ, ಅವನಿಗೆ ಅದೇ ಜೀವನ. ಅವನ ಜೀವನ ಹೇಗಿರಬಹುದು ಎಂದು ಅರ್ಥ ಮಾಡಿಕೊಳ್ಳುತ್ತಿದ್ದೆ.

ಪ್ರವಾಸಕ್ಕೆ ಹೋದಾಗ ಫಿಟ್‌ನೆಸ್‌ಗೋಸ್ಕರಾ ಲೋಕಲ್‌ ಫುಡ್‌ ಮಿಸ್‌ ಮಾಡ್ತೀರಾ?

ಖಂಡಿತ ಇಲ್ಲ. ನಾನು ಎಲ್ಲೇ ಹೋದರೂ ಅಲ್ಲಿನ ಲೋಕಲ್‌ ಟೇಸ್ಟ್‌ ಇರುವ ಫುಡ್‌ ತಿನ್ನಲು ಇಷ್ಟಪಡುತ್ತೇನೆ. ಅದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಎಲ್ಲದರಲ್ಲೂ ಒಂದು ಬ್ಯಾಲೆನ್ಸ್ ಇರಬೇಕು ಅಷ್ಟೇ. ನಾನು ಡಿಸಿಪ್ಲಿನ್ ಆಗಿ ವರ್ಕೌಟ್ ಮಾಡ್ತೀನಿ ಮತ್ತು ಡಯಟ್ ಕಡೆಗೂ ಗಮನ ಕೊಡ್ತೀನಿ. ಅದರ ಜತೆಜತೆಗೆ, ಲೈಫ್ ಅನ್ನ ಎಂಜಾಯ್ ಮಾಡೋದು ಮತ್ತು ಹೊಸ ಎಕ್ಸ್‌ಪೀರಿಯನ್ಸ್ ಪಡ್ಕೊಳ್ಳೋದು ಕೂಡ ಅಷ್ಟೇ ಮುಖ್ಯ, ಎಲ್ಲದಕ್ಕೂ ಅತಿಯಾದ ಕಟ್ಟುಪಾಡುಗಳನ್ನು ಹಾಕಿಕೊಳ್ಳಬಾರದು ಅನ್ನೋದು ನನ್ನ ಪಾಲಿಸಿ. ಎಂಟರ್‌ಟೇನ್ಮೆಂಟ್ ಇಂಡಸ್ಟ್ರಿ ಆಗಿರುವುದರಿಂದ ನಮಗೆ ಯಾವ ಥರದ ಕ್ಯಾರೆಕ್ಟರ್ ಸಿಗುತ್ತದೆ ಗೊತ್ತಿಲ್ಲ, ಅದಕ್ಕೆ ಸದಾ ರೆಡಿಯಾಗಿರಬೇಕು. ಫಿಟ್ ಆಗಿದ್ದರೆ ನನ್ನ ಕಾನ್ಫಿಡೆನ್ಸ್ ಹೆಚ್ಚುತ್ತದೆ. ಜತೆಗೆ ಕ್ಯಾಮೆರಾ ಮುಂದೆ ನನ್ನ ಬೆಸ್ಟ್ ವರ್ಷನ್ ಪ್ರೆಸೆಂಟ್ ಮಾಡಲು ಸಾಧ್ಯವಾಗುತ್ತದೆ. ಪೌರಾಣಿಕ ಸಿನಿಮಾಗಳಲ್ಲೂ ನಟಿಸಲು ಹೆಚ್ಚು ಆಸಕ್ತಿ ಇರುವುದರಿಂದ ಫಿಟ್‌ ಆಗಿರಲು ಇಷ್ಟವಾಗುತ್ತದೆ.

ಯಾವೆಲ್ಲಾ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದೀರಾ?

ಸದ್ಯಕ್ಕೆ ಕೆಲವು ಇಂಟರೆಸ್ಟಿಂಗ್ ಪ್ರಾಜೆಕ್ಟ್‌ಗಳು ಕೈಯಲ್ಲಿವೆ. ಪನ್ನಗ ಅವರ ನಿರ್ದೇಶನದ ಸಿನಿಮಾಗೆ 35 ದಿನಗಳ ಕಾಲ ಶೂಟ್‌ಗೆ ಹೋಗುತ್ತಿದ್ದೇನೆ. ಬಿಗ್‌ ಬಾಸ್‌ ಬಳಿಕ ಅತಿ ಹೆಚ್ಚು ದಿನಗಳ ಕಾಲ ಮನೆಯಿಂದ ಹೊರಗಿರುತ್ತಿದ್ದೇನೆ. ಇದರ ನಂತರ ʼಸೀತಾ ರಾಮ ರಾಜುʼ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಇವೆಲ್ಲದರ ಜತೆಗೆ ಒಂದು ಬರಹಗಾರರ ತಂಡ ಕಟ್ಟಿಕೊಂಡು ಸಿನಿಮಾ ಮಾಡುವ ಯೋಜನೆ ಹಾಕುತ್ತಿದ್ದೇನೆ.