ಪ್ಲಾನಿಂಗ್ ಇಲ್ಲದ ಟೂರ್, ಕೋಲ್ಡ್ ಕಾಫಿಯೇ ಪಾರ್ಟ್ನರ್ ಇದು ಅಂಕಿತಾ ಅಮರ್
ನನಗೆ ಪ್ರವಾಸವೆಂದರೆ ಅದೊಂದು ಅನುಭವ. ಯಾವುದೇ ಊರಿಗೆ ಹೋದರೂ ಅಲ್ಲಿನ ವಿಶೇಷತೆ, ಊರಿಗೆ ಆ ಹೆಸರು ಬರಲು ಕಾರಣವಾದ ಇತಿಹಾಸ, ಅಲ್ಲಿನ ಪ್ರಮುಖ ಪ್ರವಾಸಿ ತಾಣಗಳು ಹೀಗೆ ಎಲ್ಲ ಹಿನ್ನೆಲೆಯನ್ನು ತಿಳಿದುಕೊಳ್ಳುತ್ತೇನೆ. ಪ್ರವಾಸವೆಂದರೆ ಜ್ಞಾನಾರ್ಜನೆಯೂ ಹೌದು ಎನ್ನುತ್ತಾರೆ ನಟಿ ಅಂಕಿತಾ ಅಮರ್.
ಇಬ್ಬನಿ ತಬ್ಬಿದ ಇಳೆಯಲಿ, ಜಸ್ಟ್ ಮ್ಯಾರಿಡ್‌ನಂಥ ಚಿತ್ರಗಳ ಮೂಲಕ ಜನಮನ್ನಣೆಗಳಿಸಿರುವ ಬಹುಮುಖ ಪ್ರತಿಭೆ ನಟಿ ಅಂಕಿತಾ ಅಮರ್ ಕಲಾ ಜಗತ್ತಿನ ಬಗ್ಗೆ ತಿಳಿಯದವರಿಲ್ಲ. ಆದರೆ ಅಂಕಿತಾ ಪ್ರವಾಸಿ ಪ್ರಪಂಚದ ಬಗ್ಗೆ ನಿಮಗೆ ಗೊತ್ತಾ? ʼಒಂದು ವಾರದ ಕಾಲ ನಾನು ಬಿಡುವಾಗಿದ್ದರೆ ಸ್ವಿಟ್ಜರ್‌ಲ್ಯಾಂಡ್‌ಗೆ ಹೋಗಿಬರುತ್ತೇನೆ. ಎರಡು ತಿಂಗಳಾದರೆ ಜಪಾನ್ ತೆರಳಿ ಅಲ್ಲಿನ ಜನರ ಜೀವನ ಶೈಲಿಯನ್ನು ತಿಳಿದುಕೊಳ್ಳುತ್ತೇನೆ. ಆರು-ಎಂಟು ತಿಂಗಳ ಕಾಲ ಬಿಡುವಾದೆನೆಂದರೆ ಯುರೋಪ್ ದೇಶಗಳನ್ನು ಸುತ್ತಿ ವಿಭಿನ್ನವಾಗಿರುವ ಅಲ್ಲಿನ ಚಿತ್ರಕಲೆ, ಸಂಗೀತದಂಥ ಕಲಾ ಪ್ರಕಾರಗಳನ್ನು ಕಲಿಯುವ ಆಸೆ ನನಗಿದೆ” ಎನ್ನುವುದು ಅಂಕಿತಾ ಉವಾಚ.
ಪ್ರವಾಸವೆಂಬ ಹುಚ್ಚು ಪ್ರೀತಿ
ನನಗೆ ಪ್ರವಾಸಿ ಜೀವನವೆಂದರೆ ತುಂಬಾ ಇಷ್ಟ. ನಾವೆಲ್ಲರೂ ಹುಟ್ಟುತ್ತಲೇ ಅಲೆಮಾರಿಗಳು. ಓಡಾಟ ನಮ್ಮ ಜನ್ಮಸಿದ್ಧ ಹಕ್ಕು..ನನ್ನ ವಿಚಾರದಲ್ಲಿ ಕೆಲಸಕ್ಕಾಗಿ ಅಷ್ಟೇ ಅಲ್ಲದೆ ಖುಷಿ, ನೆಮ್ಮದಿಗಾಗಿಯೂ ಸಾಕಷ್ಟು ಸುತ್ತಾಡುತ್ತೇನೆ. ಕರ್ನಾಟಕದಲ್ಲಷ್ಟೇ ಅಲ್ಲದ ಭಾರತದ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಪ್ರವಾಸವೆಂದರೆ ಹೀಗೇ ಇರಬೇಕೆಂದು ಸುತ್ತಲೂ ಬೇಲಿಹಾಕಿಕೊಂಡಿಲ್ಲ. ನನಗನಿಸಿದಾಗ ಹೋಗಬೇಕಿಸಿದ ಪ್ರವಾಸಕ್ಕೆ ಸಿದ್ಧವಾಗಿಬಿಡುತ್ತೇನೆ.
ಇದನ್ನೂ ಓದಿ: ಐಕಾನಿಕ್ ನಟಿಯ ಟ್ರಾವೆಲ್ ಕಹಾನಿ
ನಟನೆಯೊಂದಿಗೆ ಎಲ್ಲವೂ ಬೆಸೆದಿದೆ
ನಟನೆ, ನಿರೂಪಣೆ, ಪ್ರವಾಸಿ ಜೀವನ ಯಾವುದು ನಿಮ್ಮ ಆಯ್ಕೆ ಎಂದು ಎಲ್ಲರೂ ಕೇಳುತ್ತಿರುತ್ತಾರೆ. ನಟನೆಯೇ ನನ್ನ ಮೊದಲ ಆಯ್ಕೆ. ಇಲ್ಲಿ ಕಥೆ, ಸಂಭಾಷಣೆ, ಕಥೆಯ ಸಾರಥಿಯಾಗಿರುವ ಪಾತ್ರಗಳು ಹೀಗೆ ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಿರುತ್ತದೆ. ನಟನೆಯಲ್ಲೇ ನಿರೂಪಣೆಯೂ ಬರುತ್ತದೆ, ಈ ಕಥೆಗಾಗಿ ಪ್ರವಾಸ ಅನಿವಾರ್ಯ. ಇಂಥ ಪ್ರವಾಸ ನನಗಿಷ್ಟ.. ಈ ಮೂಲಕ ನಮ್ಮನ್ನು ನಾವು ಕಂಡುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಅಜ್ಜಿಮನೆಯ ಪ್ರವಾಸ ಕಥನ
ಚಿಕ್ಕಂದಿನಿಂದಲೂ ನನಗೆ ಪ್ರವಾಸವೆಂದರೆ ಮೊದಲು ನೆನಪಾಗುವುದು ಮೈಸೂರು ಸಮೀಪದ ಹೆಗ್ಗಡದೇವನಕೋಟೆಯಲ್ಲಿರುವ ನನ್ನ ಅಜ್ಜಿ ಮನೆ. ವರ್ಷಕ್ಕೊಮ್ಮೆ ಬೇಸಗೆ ರಜೆ ಬಂದರೆ ಅಲ್ಲಿಗೆ ಹೋಗುತ್ತಿರುತ್ತಿದ್ದೆ. ತಿಂಗಳ ಕಾಲ ಅಲ್ಲೇ ಕಳೆಯುತ್ತಿದ್ದೆ. ಸುತ್ತಲಿನ ಪರಿಸರವನ್ನು ಸಂಭ್ರಮಿಸುತ್ತಿದೆ. ಇದಕ್ಕೆ ಹೊರತಾಗಿ ಅಪ್ಪ, ಅಮ್ಮ, ತಂಗಿಯ ಜತೆಗೆ ಶಿರಡಿಗೆ ಹೋಗಿದ್ದೆ. ಆ ರೈಲಿನ ಪ್ರಯಾಣ, ಲೋಕಲ್ ಬಸ್ ಪ್ರಯಾಣ, ಚಿಕ್ಕ ರೂಮಿನಲ್ಲಿ ಉಳಿದುಕೊಂಡು, ಬೆಳಗ್ಗೆಯೇ ಎದ್ದು ದೇವರ ದರ್ಶನ ಮಾಡಿದ ಅನುಭವ ಮರೆಯಲಾಗದು.
ಪ್ರವಾಸವೆಂದರೆ ಜ್ಞಾನಾರ್ಜನೆ
ನನಗೆ ಪ್ರವಾಸವೆಂದರೆ ಅದೊಂದು ಅನುಭವ. ಯಾವುದೇ ಊರಿಗೆ ಹೋದರೂ ಅಲ್ಲಿನ ವಿಶೇಷತೆ, ಊರಿಗೆ ಆ ಹೆಸರು ಬರಲು ಕಾರಣವಾದ ಇತಿಹಾಸ, ಅಲ್ಲಿನ ಪ್ರಮುಖ ಪ್ರವಾಸಿ ತಾಣಗಳು ಹೀಗೆ ಎಲ್ಲ ಹಿನ್ನೆಲೆಯನ್ನು ತಿಳಿದುಕೊಳ್ಳುತ್ತೇನೆ. ಪ್ರವಾಸವೆಂದರೆ ಜ್ಞಾನಾರ್ಜನೆಯೂ ಹೌದು.

ಶೂಟಿಂಗ್ ಪ್ರವಾಸದ ಮಜ…
ಚಿತ್ರೀಕರಣ ಪ್ರವಾಸದ ಅನುಭವವೇ ಬೇರೆ. ನಾನು ಈಗಾಗಲೇ ದುಬೈ, ಹೈದರಾಬಾದ್, ಕೊಯಮತ್ತೂರು ಸೇರಿದಂತೆ ಅನೇಕ ಕಡೆಗಳಿಗೆ ಚಿತ್ರೀಕರಣಕ್ಕಾಗಿ ಪ್ರಯಾಣ ಬೆಳೆಸಿದ್ದೇನೆ. ಕರ್ನಾಟಕದಲ್ಲಿ ಕಳಸ, ಮೈಸೂರು, ಮಂಗಳೂರಿನಂಥ ಜಾಗಗಳಿಗೂ ಹೋಗಿದ್ದೇನೆ. ಇಂಥ ಪ್ರವಾಸಗಳು ನನಗೆ ಹಾಗೂ ತಾಯಿಗೆ ಒಂದು ರೀತಿಯಲ್ಲಿ ಮಿನಿ ಟ್ರಿಪ್ ಇದ್ದಂತೆ. ಅಡುಗೆ ಮಾಡುವ ಯೋಚನೆಯಿಲ್ಲ, ಟ್ರಾವೆಲ್ ಪ್ಲ್ಯಾನ್ ಮಾಡಬೇಕಿಲ್ಲ..ಗೊತ್ತಿರುವ ಜನರ ಜತೆಗೆ ಟ್ರಾವೆಲ್ ಮಾಡುತ್ತೇವೆ. ಬಿಡುವಾದರೆ ಆ ಊರಿನ ಸುತ್ತಲೂ ಸುತ್ತಿ ಬರುತ್ತೇನೆ.
ಜಸ್ಟ್ ಮ್ಯಾರಿಡ್ ಎಂಬ ವಿಶೇಷ ಪಯಣ
ಇತ್ತೀಚೆಗಷ್ಟೇ ತೆರೆಕಂಡ ಜಸ್ಟ್ ಮ್ಯಾರಿಡ್ ಚಿತ್ರೀಕರಣದ ಅನುಭವ ವಿಭಿನ್ನವಾಗಿತ್ತು. ಈ ಸಿನಿಮಾ ಚಿತ್ರೀಕರಣ ವಿದೇಶದಲ್ಲಿ ನಡೆದಿಲ್ಲ. ಬದಲಾಗಿ ಬೆಂಗಳೂರು ಸುತ್ತಮುತ್ತಲಿನ ಪರಿಸರಗಳೇ ಈ ಸಿನಿಮಾದ ಪ್ರಮುಖ ಚಿತ್ರೀಕರಣ ತಾಣವಾಗಿತ್ತು. ಆದರೂ ಶೂಟಿಂಗ್ ಸ್ಪಾಟ್‌ನಲ್ಲಿ ಸಾಕಷ್ಟು ವಿಚಾರಗಳನ್ನು ಕಲಿತುಕೊಂಡೆ. ಬದುಕಿನಲ್ಲೊಂದು ಹೊಸ ಪಾಠ ಕಲಿಸಿಕೊಟ್ಟ ಚಿತ್ರವೆಂದರೂ ತಪ್ಪಾಗುವುದಿಲ್ಲ.
ಆರ್‌ಆರ್ ನಗರದಲ್ಲೊಂದಿಷ್ಟು ಫುಡ್ ಅಡ್ಡಾ
ಆಹಾರದ ವಿಚಾರದಲ್ಲಿ ನಾನು ವಿಭಿನ್ನ. ಬೆಂಗಳೂರಿನಲ್ಲೇ ಇದ್ದರೂ ಫುಡ್ ಅಡ್ಡಾಗಳೆಂದು ಗುರುತಿಸಿ ಅಲ್ಲಿಗೆ ನಿತ್ಯವೂ ಹೋಗುವ ರೂಢಿ ಮಾಡಿಕೊಂಡಿಲ್ಲ. ಅಮ್ಮನ ಕೈರುಚಿಯೆಂದರೆ ನನಗೆ ಬಹಳ ಇಷ್ಟ. ಅದರ ಜತೆಗೆ ಆರ್‌ಆರ್ ನಗರದ ಕೆಲವು ಆಹಾರ ತಾಣಗಳಿಗೆ ಹೋಗುತ್ತಿರುತ್ತೇನೆ. ಕೋಲ್ಡ್ ಕಾಫಿಯನ್ನು ಬಿಟ್ಟಿರುವುದು ಕಷ್ಟವಾದ್ದರಿಂದ ಖುಷಿಯಾದರೂ, ದುಃಖವೇ ಬಂದರೂ ಕೋಲ್ಡ್ ಕಾಫಿ ಮೊರೆಹೊಗುತ್ತೇನೆ. ಇದೊಂದು ರೀತಿಯಲ್ಲಿ ಬ್ಯುಸಿ ಲೈಫ್‌ನಲ್ಲಿ ಮನಸು ಬಿಚ್ಚಿ ಮಾತನಾಡುವ ತಾಣವೂ ಹೌದೆನ್ನಬಹುದು.

ಟ್ರಾವೆಲ್ ಲೈಟ್
ನನ್ನ ಟ್ರಾವೆಲ್ ಬ್ಯಾಗ್ ಲೈಟ್ ಆಗಿರುತ್ತೆ..ಆರ್ಗನೈಸ್ಡ್ ಅಲ್ಲ..ಪ್ಲಾನಿಂಗ್ ಇಲ್ಲದೆ ಟ್ರಾವೆಲ್ ಮಾಡುತ್ತೇನೆ..ಅಗತ್ಯ ವಸ್ತುಗಳನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ನನ್ನ ನೆಚ್ಚಿನ ಸಾಫ್ಟ್ ದಿಂಬನ್ನು ಜತೆಗೇ ಇಟ್ಟುಕೊಳ್ಳುತ್ತೇನೆ. ಲ್ಯಾಪ್ ಟಾಪ್, ಬುಕ್ಸ್ ನನ್ನ ಬ್ಯಾಗ್‌ನಲ್ಲಿ ಇದ್ದೇ ಇರುತ್ತದೆ.
ಟ್ರಾವೆಲ್ ಮೂವೀಯಲ್ಲಿ ಬಣ್ಣ ಹಚ್ಚಬೇಕು
ಪ್ರವಾಸಿ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದರೆ ಮೊದಲು ಒಪ್ಪಿಕೊಳ್ಳುತ್ತೇನೆ. ʻಮೈ ಹೀರೋʼ ಎಂಬ ಇಂಡೋ ಅಮೆರಿಕನ್ ಸಿನಿಮಾದಲ್ಲಿ ನಟಿಸಿದ್ದೆ. ಅದರ ಚಿತ್ರೀಕರಣವೆಲ್ಲವೂ ಮಧ್ಯಪ್ರದೇಶದ ಇಂದೋರ್ ಸಮೀಪದ ಮಹೇಶ್ವರದಲ್ಲಿತ್ತು. ಅಲ್ಲಿನ ಜನ, ಸಂಸ್ಕೃತಿ, ವಿಶೇಷತೆಗಳನ್ನು ತಿಳಿಯುವ ಅವಕಾಶ ಸಿಕ್ಕಿತ್ತು. ಬೆಂಗಳೂರು, ಮೈಸೂರಿನಂಥ ಗೊತ್ತಿರುವ ಜಾಗಗಳಿಗಿಂತ ಗೊತ್ತಿಲ್ಲದ ಜಾಗದಲ್ಲಿ ಶೂಟಿಂಗ್ ಇದ್ದರೆ ಹೊಸ ವಿಚಾರಗಳನ್ನು ತಿಳಿಯಲು ಸಾಧ್ಯವಾಗುತ್ತದೆ.
ಡ್ರೀಮ್ ಡೆಸ್ಟಿನೇಷನ್
ಇಡೀ ಭಾರತವನ್ನು ಸುತ್ತಾಡಬೇಕೆಂದುಕೊಂಡಿದ್ದೇನೆ. ನಮ್ಮ ಸಂಸ್ಕೃತಿ, ಸಂಪ್ರದಾಯಗಳು, ಜನ-ಭಾಷೆಯನ್ನು ತಿಳಿಯುವುದು, ಅಲ್ಲಿನ ಆಹಾರವನ್ನು ಸವಿಯುವುದು ನನಗೆ ಬಹಳ ಖುಷಿ ಕೊಡುತ್ತದೆ. ಇದು ಸೀಮಿತ ಅವಧಿಯ ಯೋಜನೆಯಲ್ಲ. ಜೀವನವಿಡೀ ಇದನ್ನು ಮಾಡುತ್ತಲೇ ಇರಬೇಕೆನಿಸಿದೆ.
ಹಿಮಾಚಲದಲ್ಲಿ ಚಾರಣ ಮಾಡುವಾಸೆ
ನನಗೆ ಚಾರಣ ಮಾಡುವುದೆಂದರೆ ಬಹಳ ಇಷ್ಟ. ಅನೇಕ ಕಡೆಗಳಿಗೆ ಚಾರಣ ಮಾಡಿದ್ದೇನೆ. ಆದರೆ ಮುಂದಿನ ದಿನಗಳಲ್ಲಿ ಹಿಮಾಚಲ ಪ್ರದೇಶದ ಅನೇಕ ಭಾಗಗಳಿಗೆ ಟ್ರೆಕ್ಕಿಂಗ್ ಮಾಡುವ ಉದ್ದೇಶವಿದೆ.
ಧಾರ್ಮಿಕ ಪ್ರವಾಸಗಳೇ ಹೆಚ್ಚು
ಧಾರ್ಮಿಕ ಪ್ರವಾಸಗಳೇ ನನಗಿಷ್ಟ..ನಾನು ಮಾಡುವ ಪ್ರವಾಸಗಳಲ್ಲಿ ಹೆಚ್ಚಿನವು ಧಾರ್ಮಿಕವಾಗಿರುತ್ತವೆ..ಅಲ್ಲಿಂದ ಹಿಂದಿರುಗುವ ವೇಳೆ ಸುತ್ತಮುತ್ತಲಿನ ಒಂದಷ್ಟು ಪ್ರವಾಸಿ ಸ್ಥಳಗಳನ್ನು ನೋಡಿಬರುತ್ತೇನೆ. ಚಿಕ್ಕ ವಯಸ್ಸಿನಲ್ಲಿಯೇ ಉತ್ತರ ಭಾರತದ ಅನೇಕ ಕ್ಷೇತ್ರಗಳಿಗೆ ಹೋಗಿಬಂದಿದ್ದೇನೆ. ಮುಂಬೈನ ಸಿದ್ಧಿವಿನಾಯಕ ದೇವಸ್ಥಾನ, ಹೈದ್ರಾಬಾದ್ ನ ಪೆದ್ದಮ್ಮತಲ್ಲಿ ದೇವಸ್ಥಾನ, ಕರ್ನಾಟಕದಲ್ಲಿ ಚಾಮುಂಡಿ ಬೆಟ್ಟ, ಶೃಂಗೇರಿ, ಕಾಶಿಯ ಕಾಲಭೈರವೇಶ್ವರ ಹಾಗೂ ವಿಶಾಲಾಕ್ಷಿ ದೇವಾಲಯಕ್ಕೆ, ಶಿರಡಿ, ತಿರುಪತಿ ಹೀಗೆ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿದ್ದೇನೆ. ತಮಿಳುನಾಡಿನ ಅನೇಕ ದೇವಾಲಯಗಳನ್ನು ಇನ್ನೂ ನೋಡಬೇಕಿದೆ.