• ಶಶಿಕರ ಪಾತೂರು

ಕಿರುತೆರೆ ಹಿರಿತೆರೆ ಎರಡರಲ್ಲೂ ದಶಕಗಳಿಂದ ಬೇಡಿಕೆಯಲ್ಲಿರುವ ನಟಿ ವೀಣಾ ಸುಂದರ್ ಅವರಿಗಿದು ಸಂಭ್ರಮದ ಸಮಯ. ಒಂದೆಡೆ ಶ್ರೇಷ್ಠ ಪೋಷಕ ನಟಿ ರಾಜ್ಯ ಪ್ರಶಸ್ತಿ ಕೈ ಸೇರಿದ ಖುಷಿ. ಮತ್ತೊಂದೆಡೆ ಪತಿ ಸುಂದರ್ ಜನ್ಮದಿನದ ಪ್ರಯುಕ್ತ ಕುಟುಂಬ ಸಮೇತ ವಯನಾಡು ಪ್ರವಾಸ ಹೋಗಿ ಬಂದಿದ್ದಾರೆ. ಪ್ರವಾಸದ ರಸ ನಿಮಿಷಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.

ವಯನಾಡು ಪ್ರವಾಸದ ಯೋಜನೆ ಹುಟ್ಟಿದ್ದು ಹೇಗೆ?

ಪ್ರತಿ ಬಾರಿ ಪ್ರವಾಸ ಹೋಗಬೇಕು ಅಂತ ಅಂದುಕೊಳ್ಳುತ್ತಲೇ ವರ್ಷ ಕಳೆದೇ ಹೋಗಿ ಬಿಡುತ್ತಿತ್ತು. ಅದರಲ್ಲೂ ಮಕ್ಕಳಿಗೆ ರಜೆ ಇರುವ ದಿನಗಳಲ್ಲಿ ನಮಗೆ ಶೂಟಿಂಗ್ ಇರುತ್ತಿತ್ತು. ಹಾಗಾಗಿ ಕುಟುಂಬ ಸಮೇತ ಟೂರ್ ಹೋಗುವುದು ಸಾಧ್ಯವೇ ಆಗುತ್ತಿರಲಿಲ್ಲ. ಆದರೆ ಕಳೆದ ಮೂರು ವರ್ಷಗಳಿಂದ ನಾವು ಒಂದು ಯೋಜನೆ ಹಾಕಿಕೊಂಡಿದ್ದೇವೆ. ಪ್ರತಿ ವರ್ಷ ರಾಜ್ಯದ ಒಳಗೇನೇ ಎಲ್ಲಾದರೂ ಒಂದು ಕಡೆ ಪ್ರವಾಸ ಮಾಡಲೇಬೇಕು ಅಂತ. ಮೊದಲ ಬಾರಿ ಕುಟುಂಬದೊಂದಿಗೆ ಹೋಗಿದ್ದು ಬಾದಾಮಿ, ಪಟ್ಟದ ಕಲ್ಲು ನೋಡಲು. ಒಟ್ಟು ಹಂಪಿ ಸುತ್ತಾಡಲು ನಮಗೆ ಎರಡು ದಿನಗಳು ಸಾಕಾಗಲಿಲ್ಲ. ಸಾವಿರ ಲಿಂಗ, ಬೆಟ್ಟ ಎಲ್ಲವನ್ನೂ ನೋಡಿ ಬಂದೆವು. ಅದೇ ರೀತಿ ಕಳೆದ ವರ್ಷ ಚಿತ್ರದುರ್ಗಕ್ಕೆ ಹೋಗಿದ್ದೆವು. ದುರ್ಗ ಅಂದರೆ ಕಣಗಾಲರ ನಾಗರಹಾವು ನೆನಪಾಗಲೇ ಬೇಕು. ಅದೇ ರೀತಿ ಅವರ 'ಎಡಕಲ್ಲು ಗುಡ್ಡದ ಮೇಲೆ' ಚಿತ್ರೀಕರಣಗೊಂಡ ಜಾಗ ನೋಡಲೆಂದು ವಯನಾಡಿಗೆ ಹೋದೆವು.

veena sunadar

ವಯನಾಡಿನ ಪ್ರವಾಸದ ಅನುಭವ ಹೇಗಿತ್ತು?

ವಯನಾಡು ಕೇರಳದ ಭಾಗ. ಆದರೆ ನಮಗೆ ಅಲ್ಲಿ ಕಂಡಿದ್ದು ಕನ್ನಡದ ಕಂಪು. ಕಾರಣ ಎಡಕಲ್ಲು ಕೇವ್ಸ್. ಪುಟ್ಟಣ್ಣ ಆ ಚಿತ್ರ ಮಾಡಿ 5 ದಶಕಗಳೇ ದಾಟಿವೆ. ಇಂದು ಅಲ್ಲಿಗೆ ಸರಿಯಾದ ಮಾರ್ಗ ವ್ಯವಸ್ಥೆ ಇದೆ. ಆದರೆ ಆ ಕಾಲದಲ್ಲೇ ಹೇಗೆ ಚಂದ್ರಶೇಖರ್ ಬೈಕ್ ಓಡಿಸುವ ದೃಶ್ಯಗಳನ್ನು ತೆಗೆದರು ಎನ್ನುವುದೇ ವಿಶೇಷ. ಆ ಗುಡ್ಡಕ್ಕೆ ಸುಮಾರು ನಾಲ್ಕುನೂರರಷ್ಟು ಮೆಟ್ಟಿಲುಗಳಿವೆ. ಅವುಗಳನ್ನು ಏರುವುದೇ ನಮ್ಮ ಪಾಲಿಗೆ ಸಾಹಸವಾಗಿತ್ತು. ಆಮೇಲೆ ಬಾನಾಸುರ ಡ್ಯಾಮ್ ಗೂ ಹೋದೆವು. ಇನ್ನು ಅಲ್ಲಿನ ಪಾರ್ಕ್ ಗಳಿಗಿಂತ ಆಕರ್ಷಕ ಉದ್ಯಾನಗಳು ನಮ್ಮ ಬೆಂಗಳೂರಲ್ಲೇ ಇವೆ.

ಕಳೆದ ವರ್ಷ ಚಿತ್ರದುರ್ಗದಲ್ಲಿ ಮಾಡಿದ ಪ್ರವಾಸದ ಬಗ್ಗೆ ಹೇಳ್ತೀರಾ?

ಚಿತ್ರದುರ್ಗದ ಕಲ್ಲಿನ ಕೋಟೆ ಯಾವ ಕನ್ನಡಿಗರಿಗೆ ತಾನೇ ಗೊತ್ತಿಲ್ಲ? ಅದರಲ್ಲೂ ನಾವು ಹೋಗುವ ಮೊದಲು ಕೂಡ ನಾಗರಹಾವು ಸಿನಿಮಾ ನೋಡಿಕೊಂಡೇ ಹೋಗಿದ್ದೆವು. ಮಾತ್ರವಲ್ಲ ಪತಿ ಸುಂದರ್ ಅವರ ತಾಯಿ ಮನೆ ಕೂಡ ಚಿತ್ರದುರ್ಗದಲ್ಲೇ ಇದೆ. ನಮ್ಮತ್ತೆ ಅವರು ಬೆಳೆದು ಓಡಾಡಿದ ಜಾಗ, ರಂಗಯ್ಯನ ಬಾಗಿಲು ಬಗ್ಗೆ ಎಲ್ಲ ಹೇಳಿದರು. ಅತ್ತೆ ಹೇಳಿದ ಜಾಗವೆಲ್ಲ‌ ತುಂಬಾನೇ ಬದಲಾಗಿದೆ. ನಾವು ಇಡೀ ದಿನ ಬೆಟ್ಟ ಹತ್ತಿ ಇಳಿಯುತ್ತಾ ಕಳೆದೆವು‌.

ದೇವಸ್ಥಾನಗಳಿಗೆ ಕೂಡ ಪ್ರವಾಸ ಹೋಗುತ್ತಿರುತ್ತೀರಾ?

ದೇವಸ್ಥಾನಗಳು ಅಂದರೆ ನಾವು ಹೆಚ್ಚಾಗಿ ಹೋಗುವುದು ಶೃಂಗೇರಿಗೆ. ಅದು ನಮಗೆಲ್ಲರಿಗೂ ಇಷ್ಟವಾಗುತ್ತದೆ. ಇನ್ನು ನಮ್ಮ ಮನೆದೇವರು ನಂಜನಗೂಡಿನಲ್ಲಿರುವ ಕಾರಣ ಪದೇಪದೆ ನಂಜನಗೂಡಿಗೆ ಹೋಗುತ್ತಿರುತ್ತೇವೆ. ಅಲ್ಲಿಗೆ ಹೋಗುತ್ತಿರುವಂತೆ ರೋಮಾಂಚನಗೊಳ್ಳುತ್ತೇವೆ. ಅದು ಭಕ್ತಿಗಷ್ಟೇ ಮೀಸಲಾದಂಥ ಪಯಣ.

veena sundar 2

ಕರ್ನಾಟಕದಲ್ಲಿ ನಿಮ್ಮ ಮೆಚ್ಚಿನ ಪ್ರವಾಸಿ ತಾಣ ಯಾವುದು?

ಮೈಸೂರು ಎಂದಿಗೂ ನನ್ನ ಮೆಚ್ಚಿನ ಜಾಗ. ಚಾಮುಂಡಿ ಬೆಟ್ಟಕ್ಕೂ ಆಗಾಗ ಹೋಗುತ್ತಿರುತ್ತೇವೆ. ಅದರಲ್ಲೂ ಮಹಿಷಾಸುರನ ಮುಂದೆ ನಿಂತು ಒಂದು ಫೊಟೋ ತೆಗೆದುಕೊಳ್ಳುವುದು ಅಂದರೆ ಇವತ್ತಿಗೂ ಸಂಭ್ರಮ ಇದೆ. ಇಂದಿನ‌ ಮಕ್ಕಳಿಗೆ ಮಹಿಷಾಸುರ ಸಾಮಾನ್ಯದೊಂದು ಮೂರ್ತಿಯಾಗಿ ಕಾಣಬಹುದು. ಆದರೆ ನನ್ನ ಬಾಲ್ಯದಲ್ಲಿ ಅದೇ ನಮ್ಮ ಪಾಲಿನ ಅತಿ ಎತ್ತರದ ಮೂರ್ತಿಯಾಗಿತ್ತು. ಅದೇ ರೀತಿ ಅರಮನೆ ಮುಂದೆ ನಿಂತು ತೆಗೆಸಿಕೊಂಡ ಲಕ್ಷ ಫೊಟೋಗಳಿದ್ದರೂ ಮತ್ತೆ ಮತ್ತೆ ಹೋದಾಗಲೂ ಅಲ್ಲಿ ನಿಂತು ಫೊಟೋ ತೆಗೆಸಿಕೊಳ್ಳುತ್ತೇವೆ.

ವಿದೇಶಗಳಲ್ಲಿ ಸುತ್ತಾಡಿರುವ ನೀವು ಪ್ರವಾಸದ ವೈವಿಧ್ಯವನ್ನು ಹೇಗೆ ಕಾಣುತ್ತೀರಿ?

ಹೊರದೇಶಗಳಲ್ಲಿ ನೂರಾರು ವರ್ಷಗಳ ಹಿಂದಿನ ಕಟ್ಟಡಗಳನ್ನು ವೈಭವೀಕರಿಸಿ ತೋರಿಸುತ್ತಾರೆ. ಆದರೆ ನಮ್ಮಲ್ಲಿ ಸಾವಿರಾರು ವರ್ಷಗಳ ಹಿಂದಿನ ಕಟ್ಟಡಗಳಿದ್ದರೂ ಅವುಗಳನ್ನು ವೈಭವೀಕರಿಸುವ ಪದ್ಧತಿ ಇಲ್ಲ.‌ ಉದಾಹರಣೆಗೆ ಹಂಪಿಯದೇ ಉದಾಹರಣೆ ತೆಗೆದುಕೊಂಡರೂ ಇಂಥ ಜಾಗಗಳನ್ನು ಅಮೆರಿಕನ್ನರು ವರ್ಣಿಸುವ ರೀತಿಯೇ ಬೇರೆ.

ನಿಮ್ಮ ಮೊದಲ ವಿದೇಶಿ ಪ್ರವಾಸದ ಅನುಭವ ಹೇಗಿತ್ತು?

2007ರಲ್ಲಿ ನಾವು ಲಂಡನ್ ಗೆ ಹೋಗಿದ್ದೆವು. ಅದು ನನ್ನ ಮೊದಲ ವಿದೇಶ ಪ್ರಯಾಣವಾಗಿತ್ತು. ಲಂಡನ್ ನಲ್ಲಿದ್ದ ಅಣ್ಣನ ಒತ್ತಾಯದ ಮೇರೆಗೆ ನಾನು ಮತ್ತು ಸುಂದರ್ ಅಲ್ಲಿಗೆ ಹೋಗಿದ್ದೆವು. ಅಲ್ಲಿ ಅಡ್ವೆಂಚರಸ್ ರೈಡ್ ಗಳಲ್ಲಿ ಪಾಲ್ಗೊಂಡೆ. ಆರಂಭದಲ್ಲಿ ಭಯದಿಂದ ಬೇಡ ಅಂದಿದ್ದೆ. ಅಣ್ಣ ಒತ್ತಾಯಿಸಿದ ಬಳಿಕ ಇಡೀ ದಿನ ರೈಡ್ಸ್ ಮಾಡಿದ್ದೆ. ಯುನಿವರ್ಸಲ್ ಸ್ಟುಡಿಯೋ ನಲ್ಲಿ ಅಂದು ಬೃಹತ್ ರೈಡ್ಸ್ ಮಾಡಿದ ಬಳಿಕ ಇವತ್ತು ಬೆಂಗಳೂರಿನ ವಂಡರ್ ಲಾಗೆ ಹೋದರೂ ಚಿಕ್ಕ ಜಾರುಬಂಡೆ ಜಾರಿದಂತೆ ಅನಿಸುತ್ತೆ. ಅಂದಹಾಗೆ ನಾನು ಮೊದಲ‌ ಬಾರಿಗೆ ಮೆಟ್ರೋ ಹತ್ತಿದ್ದು ಕೂಡ ಲಂಡನ್ ನಲ್ಲೇ. ಸೆಂಟ್ರಲ್ ಅನ್ನೋ ಮೆಟ್ರೋ ಸ್ಟೇಷನ್ ನಲ್ಲಿಯೇ ಮ್ಯಾಪ್ ಹಿಡಿದುಕೊಂಡು ಸಾಕಷ್ಟು ಕಡೆಗಳಿಗೆ ಸುತ್ತಾಡಿದ್ದೇವೆ.

ನೀವು ಹೆಚ್ಚಾಗಿ ಭೇಟಿ ಕೊಟ್ಟ ದೇಶ ಯಾವುದು?

ನನ್ನ ವಿದೇಶ ಪ್ರವಾಸ ಎನ್ನುವುದು ಹೆಚ್ಚಾಗಿ ನಾಟಕಗಳಿಂದಾಗಿಯೇ ಆಗಿದೆ. ಶ್ರೀಲಂಕಾ, ಸಿಂಗಾಪುರ, ಆಸ್ಟ್ರೇಲಿಯಾಗಳನ್ನೂ ಸುತ್ತಾಡಿದ್ದೇವೆ. ಹೋದರೆ ವಾರಗಟ್ಟಲೆ ವಿದೇಶಗಳಲ್ಲೇ ಇರುತ್ತೇವೆ. ವಾರಾಂತ್ಯದಲ್ಲಿ ನಾಟಕ ಇದ್ದರೆ ವಾರ ಪೂರ್ತಿ ಸುತ್ತಾಟ ನಡೆಸುತ್ತಿರುತ್ತೇವೆ. 2013ರಲ್ಲಿ ನಾವು ಮೊದಲ‌ಬಾರಿ ಅಮೆರಿಕಗೆ ಹೋಗಿದ್ದು. ಆನಂತರ ಇಲ್ಲಿಯವರೆಗೆ ಐದು ಬಾರಿ ಅಮೆರಿಕ ಸಂದರ್ಶಿಸಿದ್ದೇವೆ. ನಾಟಕದ ಮಧ್ಯೆ ಸಮಯ ಸಿಕ್ಕಾಗಲೆಲ್ಲ ಅಲ್ಲಿನ ಊರುಗಳನ್ನು ನೋಡಿಕೊಂಡು ಬರುತ್ತೇವೆ. ಕಳೆದ ತಿಂಗಳು ಫ್ಲೋರಿಡಾಗೆ ಹೋಗಿದ್ದೆವು.

ಇಷ್ಟೊಂದು ಬಾರಿ ಅಮೇರಿಕಾಗೆ ಹೋದ ನೀವು ಪೇಚಿಗೊಳಗಾದ ಸಂದರ್ಭ ಇದೆಯೇ?

ಒಮ್ಮೆ ಅಮೆರಿಕಗೆ ಹೋದರೆ ಅಲ್ಲಿ ಏಳೆಂಟು ಸ್ಟೇಟ್ಸ್ ಸುತ್ತಾಡುತ್ತೇವೆ. ಒಂದು ಸಲ ಅಲ್ಲಿನ ಫ್ಲೈಟ್ ಮಿಸ್ ಆಗಿತ್ತು. "ಸೆಕ್ಯುರಿಟಿ ಚೆಕ್ ತಡವಾಗ್ತಿದೆ, ಮೊದಲು ನಮ್ಮನ್ನು ಚೆಕ್ ಮಾಡಿ ಕಳಿಸಿ" ಎಂದು ಬೇಡಿಕೊಂಡರೂ ಕೂಡ ಅವರು ಸರದಿಯಲ್ಲೇ ಬರುವಂತೆ ಹೇಳಿದ್ದರು. ಅದೊಂದು ವಿಮಾನ ಮಿಸ್ ಆದ ಕಾರಣ ನೆಕ್ಸ್ಟ್ ಕನೆಕ್ಟ್ ಫ್ಲೈಟ್ ಗಾಗಿ ಇಡೀ ದಿನ ವಿಮಾನ ನಿಲ್ದಾಣದೊಳಗೆ ಕಳೆಯಬೇಕಾಗಿ ಬಂದಿತ್ತು. ಇದು ಐದಾರು ವರ್ಷಗಳ ಹಿಂದಿನ ಘಟನೆ. ಅಂದು ಇಂದಿನ ಹಾಗೆ ಅಲ್ಲಿ ವೆಜ್ ಆಹಾರಗಳಿರಲಿಲ್ಲ. ಎಲ್ಲೆಡೆ ಮಾಂಸಾಹಾರ ಮಾತ್ರ ಇದ್ದ ಕಾರಣ ಇಡೀ ದಿನ ಕಾಫಿ ಮಾತ್ರ ಕುಡಿಯುತ್ತಾ ಇರಬೇಕಾಗಿ ಬಂದಿತ್ತು.

veena sundar 1

ಅಮೆರಿಕದಲ್ಲಿರುವ ಕನ್ನಡಿಗರ ಸ್ನೇಹಾಭಿಮಾನ ಹೇಗಿದೆ?

ಅಮೆರಿಕದಲ್ಲಿ ಕಲಾವಿದರನ್ನು ಅಲ್ಲಿನ ಕನ್ನಡಿಗರು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಾರೆ‌. ಹೀಗಾಗಿಯೇ ಅಲ್ಲಿ ಎರಡು ಮೂರು ದಿನ ಉಳ್ಕೊಂಡ ಮನೆ ಮಂದಿಗಳು ಕೂಡ ತುಂಬ ಚೆನ್ನಾಗಿ ನೋಡಿಕೊಂಡಿದ್ದಾರೆ. ಪ್ರತಿ ಭೇಟಿಯಲ್ಲೂ ಅಲ್ಲಿನವರೊಡನೆ ಬಾಂಧವ್ಯ ಹೆಚ್ಚಾಗುತ್ತಲೇ ಬಂದಿದೆ.

2023ರಲ್ಲಿ ಮತ್ತೊಂದು ಬಾರಿ ಫ್ಲೈಟ್ ಮಿಸ್ ಆದಾಗ ಅಲ್ಲಿನ ಕನ್ನಡಿಗರೇ ಸಹಾಯ ನೀಡಿದ್ದರು. ಆಗ ನಾವು ಡೆನ್ವರ್ ಎನ್ನುವಲ್ಲಿನ ಏರ್ ಪೋರ್ಟ್ ನಲ್ಲಿದ್ದೆವು. ಅಲ್ಲಿ ತುಂಬ ಚಳಿ ಇತ್ತು.‌ ಮುಂದಿನ ಪ್ಲೈಟ್ ಗಾಗಿ ಮರುದಿನ ಮುಂಜಾನೆ ತನಕ ಅಲ್ಲೇ ಕಾಯಬೇಕಾಗಿತ್ತು. ನಾವು ಉಳ್ಕೊಂಡಿದ್ದ ಅಲ್ಲಿನ ಮನೆಯವರೇ ನಮ್ಮನ್ನು ವಾಪಸ್ ತಮ್ಮ ಮನೆಗೆ ಕರೆದೊಯ್ದು ಬೆಳಿಗ್ಗೆ ಕಳಿಸಿ‌ಕೊಟ್ಟಿದ್ದರು. ನಮಗಾಗಿ ಒಂದು ಗಂಟೆ ಪ್ರಯಾಣ ಮಾಡಿ ಬಂದ ಅವರ ಸಹಾಯವನ್ನು ಮರೆಯಲಾಗದು.

ವಿದೇಶ ಪ್ರವಾಸದಲ್ಲಿ ಆತಂಕ ಎದುರಾದ ಘಟನೆ ನಡೆದಿದೆಯೇ?

ಇದು ದಶಕಗಳ ಹಿಂದಿನ ಘಟನೆ. ಒಮ್ಮೆ ವಾಷಿಂಗ್ಟನ್ ಡಿಸಿಯಿಂದ ಮತ್ತೊಂದು ಕಡೆಗೆ ಪ್ರಯಾಣಿಸಲು ಬಸ್ ಆಯ್ಕೆ ಮಾಡಿಕೊಂಡಿದ್ದೆವು. ಆ ಪ್ರಯಾಣದಲ್ಲಿ ಸಹ ಪ್ರಯಾಣಿಕರೆಲ್ಲ ನೀಗ್ರೋಗಳೇ ಆಗಿದ್ದರು. ಅವರನ್ನು ನೋಡುತ್ತಿದ್ದರೆ ಡ್ರಗ್ಸ್ ತೆಗೆದುಕೊಂಡವರಂತೆ ಕಾಣಿಸುತ್ತಿದ್ದರು. ಅವರ ವರ್ತನೆಗಳು ಹಾಗೇ ಇತ್ತು. ನಾನು ಮತ್ತು ಸುಂದರ್ ಇಬ್ಬರು ಪುಟ್ಟ ಮಕ್ಕಳೊಂದಿಗೆ ಆ ರಾತ್ರಿ ಇಡೀ ಆತಂಕದಲ್ಲೇ ಪ್ರಯಾಣಿಸಿದ್ದೆವು. ಮುಖ್ಯವಾಗಿ ಅವರಿಗೆ ಇಂಗ್ಲಿಷ್ ಕೂಡ ಗೊತ್ತಿರದ ಕಾರಣ ಯಾವ ರೀತಿಯ ಸಂವಹನವೂ ನಡೆದಿರಲಿಲ್ಲ. ಮಾತ್ರವಲ್ಲ ಅಲ್ಲಿ ಕಳ್ಳತನ ನಡೆಯುವ ಬಗ್ಗೆ ಕೂಡ ಎಚ್ಚರಿಕೆ ನೀಡಿದ್ದ ಕಾರಣ ನಾವು ನೆಮ್ಮದಿ ಕಳೆದುಕೊಂಡೇ ಪ್ರಯಾಣ ಮಾಡಬೇಕಾಗಿ ಬಂದಿತ್ತು. ಪಾಸ್‌ಪೋರ್ಟ್ ಮತ್ತು ಮೊಬೈಲ್ ಕಳೆದುಕೊಂಡುಬಿಟ್ಟರೆ ಮತ್ತೆ ನಾವು ಎಲ್ಲ ಸಂಪರ್ಕ ಕಳೆದುಕೊಳ್ಳುತ್ತೇವೋ ಎಂಬ ಭಯ ಇತ್ತು. ಈಗ ನೆನಪಿಸಿಕೊಂಡರೆ ನಗು ಬರುತ್ತದೆ.

ಮುಂದಿನ ಪ್ರವಾಸದ ಯೋಜನೆ ಹಾಕಿದ್ದೀರಾ?

ಮುಂದೆ ಕುಪ್ಪಳ್ಳಿಗೆ ಹೋಗುವ ಯೋಜನೆ ಇದೆ. ನಾನು ಮತ್ತು ಸುಂದರ್ ಈ ಹಿಂದೆಯೂ ಹೋಗಿದ್ದೆವು. ಕು.ವೆಂ.ಪು ಅವರ ಮನೆ ಈಗ ಮ್ಯೂಸಿಯಂ ಆಗಿದೆಯಲ್ವಾ? ಅದನ್ನು ಒಂದು ದಿನ ಪೂರ್ತಿ ನೋಡಿಕೊಂಡು ಬರಬೇಕು ಅಂತ ಇದ್ದೇವೆ. ನಾನು ಕು.ವೆಂ.ಪು ಅವರನ್ನು ನೋಡಿಲ್ಲ.‌ ಆದರೆ ಅವರಿಂದ ಸುಂದರ್ ಪ್ರಶಸ್ತಿಯನ್ನು ಪಡೆದಿದ್ದಾರೆ.‌ ನಾನು ಕುವೆಂಪು ಅವರ ಅತ್ತೆ ಮನೆಯಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೆ. ಅಂಥ ಎಲ್ಲ ನೆನಪುಗಳನ್ನು ನವೀಕರಿಸುವ ಪ್ರಯತ್ನ ಈ ಪ್ರವಾಸದಲ್ಲಿರಲಿದೆ.