ಕರ್ನಾಟಕ ಪ್ರವಾಸೋದ್ಯಮ ಅರಳುತ್ತಿದೆ ಎಂಬುದು ಪ್ರವಾಸಿಗರ ಪಾಲಿಗೆ ಮತ್ತು ಪ್ರವಾಸದ ಸುತ್ತ ಜೀವನ ಕಟ್ಟಿಕೊಂಡಿರುವ ಪ್ರತಿಯೊಬ್ಬರ ಪಾಲಿಗೆ ಸಂತಸದ ವಿಚಾರವಾಗಿದೆ. ರಾಜ್ಯದ ಖ್ಯಾತಿಯ ದೃಷ್ಟಿಯಿಂದಲೂ ಇದು ಉತ್ತಮ ಬೆಳವಣಿಗೆ. ಪ್ರತಿ ಜಿಲ್ಲೆಯೂ ಪ್ರವಾಸೋದ್ಯಮದ ಹೊಸ ಆಲೋಚನೆಗಳಿಗೆ ತೆರೆದುಕೊಳ್ಳುತ್ತಿವೆ. ಈ ಹಾದಿಯಲ್ಲಿ ದಕ್ಷಿಣ ಕನ್ನಡದ ಕರಾವಳಿ ಪ್ರವಾಸೋದ್ಯಮದ ಕುರಿತಾಗಿ ರಾಜ್ಯ ಸರಕಾರ ಗಂಭೀರವಾಗಿ ಯೋಚಿಸಿರುವುದು ಒಂದು ಉತ್ತಮ ಬೆಳವಣಿಗೆಯಾದರೆ, ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಸಮೃದ್ಧ ಪ್ರಕೃತಿ ಹಾಗೂ ಸಂಸ್ಕೃತಿಯನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳುವ ಆಲೋಚನೆ ಇನ್ನೊಂದು ಮಹತ್ವದ ಬೆಳವಣಿಗೆ.

ಇದನ್ನೂ ಓದಿ: ಗಾಂಧಿಗೆ ಪರದೇಶದಲ್ಲೂ ಸುಖವಿಲ್ಲ

ಉತ್ತರ ಕನ್ನಡದ ಪ್ರವಾಸಿ ತಜ್ಞರು, ಸ್ಥಳೀಯರು, ವಿವಿಧ ಕ್ಷೇತ್ರಗಳ ಮಾನ್ಯರ ಮೂಲಕ ಉತ್ತರಕನ್ನಡ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ವರದಿ ತರಿಸಿಕೊಂಡಿರುವುದು ಬಹಳ ಶ್ಲಾಘನೀಯ ನಡೆ ಅನ್ನಬಹುದು. ಅದೇ ರೀತಿ ರಾಜ್ಯಾದ್ಯಂತ ಸಾಂಸ್ಕೃತಿಕ ಉತ್ಸವಗಳು, ಜಾತ್ರಾ ಮಹೋತ್ಸವಗಳು ದೊಡ್ಡ ಮಟ್ಟದಲ್ಲಿ, ಅದ್ದೂರಿಯಾಗಿ ನಡೆಯುತ್ತಿರುವುದು ಡೊಮಸ್ಟಿಕ್ ಟೂರಿಸಮ್ಮಿಗೆ ಬಹುದೊಡ್ಡ ಬಲವನ್ನು ಕೊಡುತ್ತಿದೆ. ಹಂಪಿ ಉತ್ಸವ, ಬೆಂಗಳೂರು ಹಬ್ಬ, ದಸರಾ, ಗವಿಸಿದ್ದೇಶ್ವರ ಜಾತ್ರೆ, ಕೊಪ್ಪಳ, ಶಿರಸಿ ಇನ್ನಿತರ ಜಾಗಗಳಲ್ಲಿ ನಡೆಯುತ್ತಿರುವ ಧಾರ್ಮಿಕ ಮಹೋತ್ಸವಗಳು ಸ್ಥಳೀಯ ಪ್ರವಾಸೋದ್ಯಮವನ್ನು ಗಟ್ಟಿಗೊಳಿಸುತ್ತಿವೆ. ಈ ನಿಟ್ಟಿನಲ್ಲಿ ಹೊಸ ಹೊಸ ಯೋಜನೆಗಳು ಹೊರಬರುತ್ತಿರುವುದು ಸಂತಸದ ಸಂಗತಿ. ಜಾತ್ರಾಮಹೋತ್ಸವಗಳಲ್ಲಿ ಹೆಲಿಟೂರಿಸಂ ಎಂಬ ಹೊಸ ಆಕರ್ಷಣೆ ತಂದಿರುವುದೇ ಇರಬಹುದು, ನಗರ ದರ್ಶನಕ್ಕೆ ಡಬಲ್ ಡೆಕ್ಕರ್ ಸವಾರಿ ಇರಬಹುದು ಇವೆಲ್ಲವೂ ಕರ್ನಾಟಕ ಸರಕಾರ ಪ್ರವಾಸೋದ್ಯಮವನ್ನು ಸೀರಿಯಸ್ಸಾಗಿ ನೋಡುತ್ತಿದೆ ಎಂಬುದಕ್ಕೆ ಸಾಕ್ಷಿ.

ಇತರ ರಾಜ್ಯಗಳಿಗೆ ಹೋಲಿಸಿ ಕರ್ನಾಟಕ ಹಿಂದೆ ಬಿದ್ದಿದೆ ಎಂದು ಹೇಳುವ ಬದಲು, ಈ ಚಿಕ್ಕ ಚಿಕ್ಕ ಹೊಳಹುಗಳನ್ನು ಮೆಚ್ಚಿ ಬೆನ್ತಟ್ಟಿ ಹುರಿದುಂಬಿಸುವ ಅಗತ್ಯವಿದೆ. ಸದ್ಯದಲ್ಲಿ ಸಫಾರಿ ಬಂದ್ ಮಾಡಿರುವ ಕ್ರಮವೊಂದನ್ನು ಬದಿಗಿಟ್ಟರೆ ಕರ್ನಾಟಕ ಪ್ರವಾಸೋದ್ಯಮದ ಬಗ್ಗೆ ಸಾರಾಸಗಟು ದೂರು ಹೇಳುವಂಥದ್ದೇನೂ ಕಾಣಿಸುತ್ತಿಲ್ಲ. ಆಶಾದಾಯಕ ಪರಿಸ್ಥಿತಿಯೇ ಕಾಣುತ್ತಿದೆ.

ಈ ಹಾದಿಯಲ್ಲಿ ಪ್ರವಾಸಿಗರ ಪಾಲಿಗೆ ಕಾಣಿಸುತ್ತಿರುವ ಇನ್ನೊಂದು ಮಿಂಚು ಅಂದರೆ ಅದು ಮೈಸೂರಿನ ಟಾಂಗಾ ಸವಾರಿ. ಮೈಸೂರು ಟಾಂಗಾ ಅಂದ್ರೆ ಅದಕ್ಕೊಂದು ಇತಿಹಾಸವೇ ಇದೆ. ಪಾರಂಪರಿಕೆ ಮೌಲ್ಯವೂ ಇದೆ. ಅದು ಕೇವಲ ಜಟಕಾಗಾಡಿ ಅಲ್ಲ. ರಾಯಲ್ ಸಿಟಿಯ ಸಿಗ್ನೇಚರ್ ಗಳಲ್ಲೊಂದು ಮೈಸೂರು ಟಾಂಗಾ. ಮೈಸೂರಿನ ರಾಜಬೀದಿಗಳಲ್ಲಿ, ಒಡೆಯರ್ ಸರ್ಕಲ್ ಗಳಲ್ಲಿ ಅಲಂಕೃತ ಟಾಂಗಾ ಎಳೆದುಕೊಂಡು ಕುದುರೆಗಳು ಓಡುತ್ತಿದ್ದರೆ ಅದು ಮೈಸೂರಿನ ಗತವೈಭವವನ್ನು ನೆನಪಿಸುತ್ತದೆ.

Untitled design (18)

ಬದಲಾದ ಕಾಲಘಟ್ಟ, ಅತಿಯಾದ ಮೋಟಾರ್ ವಾಹನಗಳು, ಟ್ರಾಫಿಕ್ ಸಮಸ್ಯೆ, ಪ್ರಾಣಿದಯಾ ಸಂಘಗಳ ಕಿರಿಕಿರಿ ಇತ್ಯಾದಿ ಇತ್ಯಾದಿಗಳಿಂದಾಗಿ ಮೈಸೂರಿನ ಟಾಂಗಾಗಳು ಮರೆಯಾಗತೊಡಗಿದ್ದವು. ಕುದುರೆಯನ್ನು ಸಾಕಲಾರದ ಪರಿಸ್ಥಿತಿಗೆ ಟಾಂಗಾವಾಲಾಗಳು ಬಸವಳಿದಿದ್ದರು. ಇಡೀ ಮೈಸೂರಲ್ಲಿ ಐವತ್ತು ಟಾಂಗಾ ಕೂಡ ಇಲ್ಲವೆಂಬಂತಾಗಿತ್ತು. ಇದು ಮೈಸೂರಿನ ಪ್ರವಾಸೋದ್ಯಮಕ್ಕೂ ಏಟು ಕೊಟ್ಟಿದ್ದು ನಿಜ. ಮೊದಲೆಲ್ಲ ಮೈಸೂರಿನಲ್ಲಿ ಟಾಂಗಾ ಹತ್ತಿದರೆ, ಸಾಕಷ್ಟು ಸ್ಥಳಗಳನ್ನು ನೋಡಬಹುದಿತ್ತು. ಇತ್ತೀಚಿನ ದಿನಗಳಲ್ಲಿ ಮೈಸೂರು ಅಂದರೆ ಪ್ರಾಣಿಸಂಗ್ರಹಾಲಯ, ಅರಮನೆ ಮತ್ತು ಚಾಮುಂಡಿ ಬೆಟ್ಟಕ್ಕೆ ಸೀಮಿತವೆಂಬಂತೆ ಪ್ರವಾಸಿಗರು ನೀರಸವಾಗಿ ಪ್ರತಿಕ್ರಿಯಿಸುತ್ತಿದ್ದರು.

ಪ್ರತಿದಿನ ನಾಲ್ಕು ಸಾವಿರ ಪ್ರವಾಸಿಗರನ್ನು ಬರಮಾಡಿಕೊಳ್ಳುವ ಮೈಸೂರು ಟಾಂಗಾವನ್ನು ಮಿಸ್ ಮಾಡಿಕೊಳ್ಳುತ್ತಿತ್ತು. ಇದೀಗ ಸ್ವದೇಶ್ ದರ್ಶನ್ -2 ಅಡಿಯಲ್ಲಿ ಟಾಂಗಾ ಸವಾರಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಗ್ರೀನ್ ಟೂರಿಸಂ ಹೆಚ್ಚಿಸಬೇಕು, ಪಾರಂಪರಿಕ ವೈಭವಗಳಲ್ಲಿ ಒಂದಾದ ಟಾಂಗಾಗಳನ್ನು ಹೆಚ್ಚಿಸಬೇಕು ಎಂದು ಪ್ರವಾಸೋದ್ಯಮ ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ಮೈಸೂರಿನ ರಸ್ತೆಗಳಲ್ಲಿ ಕುದುರೆಗಳ ಹೆಜ್ಜೆಸಪ್ಪಳ, ಟಾಂಗಾ ಗಾಡಿಗಳ ಓಡಾಟ ರಂಗುಮೂಡಿಸಲಿದೆ. ಇದರಿಂದ ಪ್ರವಾಸಿಗರ ಸಂಖ್ಯೆಯ ಹೆಚ್ಚಲಿದೆ ಎಂಬುದು ಲೆಕ್ಕಾಚಾರ. ಇಂಥ ಹೊಸ ಯೋಚನೆಗಳು ಕಿಡಿಹೊತ್ತಿ ಕಾರ್ಯಗತವಾದರೆ ಪ್ರವಾಸೋದ್ಯಮ ಅಭಿವೃದ್ಧಿಯತ್ತ ದಾಪುಗಾಲು ಇಡುವುದರಲ್ಲಿ ಸಂಶಯವೇ ಇಲ್ಲ.