- ಡಾ. ತನುಜ್ ದೇವ್

ಇತ್ತೀಚೆಗಷ್ಟೇ ತಮಿಳುನಾಡು ಮತ್ತು ಕೇರಳದ ನಾಲ್ಕು ಪ್ರಮುಖ ನಗರಗಳಲ್ಲಿ ಕರ್ನಾಟಕ ಪ್ರವಾಸೋದ್ಯಮ ಸಂಸ್ಥೆಯಿಂದ ʻಕರ್ನಾಟಕ ಡೆಸ್ಟಿನೇಶನ್‌ ಪ್ರಮೋಶನ್‌ ರೋಡ್‌ ಶೋʼ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘದಲ್ಲಿ ಪ್ರವಾಸೋದ್ಯಮ ಸಂಯೋಜಕನಾಗಿರುವುದರಿಂದ ಸಂಘದ ಪರವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನನಗೂ ಒದಗಿಬಂದಿತ್ತು. ಕಾರ್ಯಕ್ರಮದ ಒಂದು ಭಾಗ ಕೊಯಮತ್ತೂರಿನಲ್ಲಿ ನಡೆದಿದ್ದರಿಂದ ಅಲ್ಲೇ ಸಮೀಪವಿರುವ ವಾಲ್ಪಾರೈ ಎಂಬ ಗಿರಿಧಾಮಕ್ಕೆ ಹೋಗಿ ಬಂದಿದ್ದು ಜೀವನದಲ್ಲಿ ನನಗೆ ಮರೆಯಲಾಗದ ಅನುಭವಗಳನ್ನೇ ಕಟ್ಟಿಕೊಟ್ಟಿದೆ.

ಹೌದು, ಕೊಯಮತ್ತೂರು ಜಿಲ್ಲೆಯ ಪ್ರಮುಖ ಹಿಲ್‌ಸ್ಟೇಷನ್‌ಗಳಲ್ಲಿ ವಾಲ್ಪಾರೈ ಪ್ರಮುಖವಾದುದು. ಸಮುದ್ರ ಮಟ್ಟದಿಂದ ಸುಮಾರು 3,500 ಅಡಿ ಎತ್ತರದಲ್ಲಿರುವ ಈ ಪ್ರಾಕೃತಿಕ ನಿಧಿಯನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬವೆನಿಸಿಬಿಟ್ಟಿತ್ತು. ಗುಡ್ಡಗುಡ್ಡಗಳ ಮೇಲೆ ಹಬ್ಬಿರುವ ಚಹಾ ಹಾಗೂ ಕಾಫಿ ತೋಟಗಳು, ತಾಜಾ ಗಾಳಿ, ಮಂಜಿನಿಂದ ಮುಚ್ಚಿದ ಬೆಳಗಿನ ಹೊತ್ತು ಒತ್ತಡದ ಜೀವನಕ್ಕೊಂದು ಬೆಚ್ಚನೆಯ ಪರಿಹಾರ ನೀಡಿತ್ತು. ಚಿಂತೆಯನ್ನೆಲ್ಲ ಮರೆಸಿ, ಮುಖದಲ್ಲಿ ನನಗರಿಯದೇ ನಗು ಮೂಡಿಸಿತ್ತು.

ಚೆನ್ನೈನ ಚಿರಾಪುಂಜಿ

ವಾಲ್ಪಾರೈ ಗಿರಿಧಾಮವು ಪಶ್ಚಿಮ ಘಟ್ಟದ ಅಣ್ಣಾಮಲೈ ಪರ್ವತ ಶ್ರೇಣಿಗೆ ಸೇರಿದ್ದು, ಇಲ್ಲಿನ ಚಿನ್ನಕಲ್ಲಾರ್ ಪ್ರದೇಶ “ಚೆನ್ನೈನ ಚಿರಾಪುಂಜಿ” ಎಂಬುದಾಗಿಯೇ ಪ್ರಸಿದ್ಧಿ ಪಡೆದಿದೆ. ವರ್ಷದಲ್ಲಿ ಸುಮಾರು 300 ದಿಗಳ ಕಾಲವೂ ಇಲ್ಲಿನ ಮಣ್ಣು ಮಳೆಯಿಂದ ತೇವಗೊಂಡಿರುತ್ತದೆ. ಇಲ್ಲಿನ ಗಿಡ, ಮರ, ಬಳ್ಳಿಗಳು ಹಸಿರಿನಿಂದ ಕಂಗೊಳಿಸುತ್ತಿರುತ್ತವೆ. ಬರಡು ಭುಮಿ, ಬಿರುಕಗೊಂಡ ಭೂಮಿಯನ್ನು ಕಾಣುವುದೇ ಬಹಳ ಅಪರೂಪವೆನಿಸುತ್ತದೆ.

Aliar

ಅಣೆಕಟ್ಟುಗಳ ನಡುವೆ ಹಸಿರು ಪ್ರಪಂಚ

ವಾಲ್ಪಾರೈಗೆ ಜೀವ ತುಂಬುವ ಅಲಿಯಾರ್, ಶೋಲಾಯಾರ್ ಮತ್ತು ನಿರಾರ್ ಅಣೆಕಟ್ಟುಗಳು ಇಲ್ಲಿವೆ. ಅದರಲ್ಲೂ ಅಲಿಯಾರ್ ಅಣೆಕಟ್ಟು ಪ್ರವಾಸಿಗರಿಗೆ ನೆಚ್ಚಿನ ತಾಣ. ಬೆಳಗಿನ ಹೊತ್ತು ಕಡಲಿನಂತೆ ಕಾಣುವ ನೀರು, ಸಂಜೆ ಸೂರ್ಯಾಸ್ತದ ಕಿರಣಗಳಲ್ಲಿ ಹೊಳೆಯುವ ದೃಶ್ಯವಂತೂ ವಿಭಿನ್ನ ನೋಟವನ್ನೇ ಕಟ್ಟಿಕೊಡುತ್ತದೆ. ಫೊಟೋಗ್ರಫಿ ಆಸಕ್ತಿಯುಳ್ಳವರಿಗಿದು ಸ್ವರ್ಗ ಸಮಾನವೇ ಸರಿ.

ವನ್ಯಜೀವಿಗಳ ತಾಣವಾಗಿ ಗುರುತಿಸಿಕೊಂಡಿರುವ ವಾಲ್ಪಾರೈ ತನ್ನೊಡಲಲ್ಲಿ ಇಂದಿರಾ ಗಾಂಧಿ ವನ್ಯಜೀವಿ ಅಭಯಾರಣ್ಯವನ್ನೇ ಹೊತ್ತುಕೊಂಡಿದೆ. ಇಲ್ಲಿ Lion-tailed macaque, ಆನೆಗಳು, ಹಿರಣಗಳು, ಕಾಡುಹಂದಿಗಳು, ಹಾರ್ನ್‌ಬಿಲ್ ಪಕ್ಷಿಗಳು ಹಾಗೂ ಅಪರೂಪದ ಮಲಬಾರ್ ಗಿಳಿಗಳು ಕಾಣಿಸಿಕೊಳ್ಳುತ್ತವೆ. ದೇಶದಲ್ಲೇ ಕಾಣಸಿಗದ ವಿದೇಶಿ ಪ್ರಾಣಿ ಪಕ್ಷಿಗಳ ತಾಣವಾಗಿಯೂ ವಾಲ್ಪಾರೈ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಚಾರವೇ ಸರಿ.

ಕೊಯಮತ್ತೂರು–ಪೊಲ್ಲಾಚಿ–ಅಲಿಯಾರ್ ಮಾರ್ಗವಾಗಿ 102 ಕಿಮೀ ದೂರದಲ್ಲಿರುವ ವಾಲ್ಪಾರೈನ ಅತ್ಯದ್ಭುತ ಹಾದಿ, ಪ್ರವಾಸಕ್ಕೂ ಮುನ್ನವೇ ಪ್ರಯಾಣದ ಸಂಭ್ರಮವನ್ನು ಉಣಬಡಿಸುತ್ತದೆ. ಸುಮಾರು 40 ತಿರುವುಗಳಿರುವ ಬೆಟ್ಟ ಗುಡ್ಡಗಳ ರಸ್ತೆ, ಇಳಿಜಾರಿನ ತಿರುವುಗಳು, ಹಸಿರಿನ ಹೊದಿಕೆಯ ದಾರಿ — ಇದು ಪ್ರವಾಸವಲ್ಲ, ಒಂದು ಉತ್ತಮ ಚಾರಣದಂತಿರುತ್ತದೆ. ಬೆಂಗಳೂರು ನಗರದಿಂದ ಸುಮಾರು 480 ಕಿಮೀ ದೂರದಲ್ಲಿರುವ ವಾಲ್ಪಾರೈ ಪ್ರಯಾಣಕ್ಕೂ ಪ್ರವಾಸಕ್ಕೂ ಸೈ ಎನಿಸಿಕೊಂಡಿದೆ.

Valparai

ಆಹಾರ- ವಿಹಾರ ಮತ್ತು ವಾಸ್ತವ್ಯ

ಇಲ್ಲಿ ಇಕೋ-ಫ್ರೆಂಡ್ಲಿ ಹೊಟೇಲ್‌ಗಳು, ಚಹಾ ತೋಟಗಳ ನಡುವಿನ ಬಂಗ್ಲಾಗಳು, ಹೋಂಸ್ಟೇಗಳು ಹಾಗೂ ನೇಚರ್ ಕ್ಯಾಂಪ್‌ಗಳು ಲಭ್ಯವಿರುವುದರಿಂದ ವಾಸ್ತವ್ಯದ ಬಗ್ಗೆ ಚಿಂತಿಸಬೇಕಾಗಿಯೇ ಇಲ್ಲ. ಆದರೆ ಸೀಸನ್ ನಲ್ಲಿ ಹೋಗುವ ಮುನ್ನ ಮುಂಗಡ ಬುಕಿಂಗ್ ಮಾಡಿಕೊಂಡರೆ ಹೋದಮೇಲೆ ಸ್ಟೇಗಾಗಿ ಹುಡುಕಾಡುವ ಪ್ರಸಂಗವೇ ಬರುವುದಿಲ್ಲ. ಇನ್ನು ಆಹಾರದಲ್ಲಿ ಮಲಬಾರ್ ಮತ್ತು ತಮಿಳು ಶೈಲಿಯ ವಿಶೇಷ ಖಾದ್ಯಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿರುವುದರಿಂದ ಪ್ರವಾಸಿಗರ ನಾಲಿಗೆಗಂತೂ ಭಾರಿ ಕೆಲಸವೇ ಸಿಗುತ್ತದೆ.

ಪ್ರವಾಸಕ್ಕಿದು ಸೂಕ್ತ ಸಮಯ

ಜೂನ್‌ನಿಂದ ಫೆಬ್ರವರಿ ವರೆಗಿನ ತಿಂಗಳುಗಳು ವಾಲ್ಪಾರೈ ಭೇಟಿಗೆ ಅತ್ಯುತ್ತಮ ಸಮಯ. ಮಳೆಗಾಲದಲ್ಲಂತೂ ಪ್ರಕೃತಿಯ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳುವುದೇ ಖುಷಿಯೆನಿಸುತ್ತದೆ. ಆದರೆ ಈ ಕಾಲದಲ್ಲಿನ ರಸ್ತೆ ಪ್ರಯಾಣದ ಬಗ್ಗೆ ಸ್ವಲ್ಪ ಎಚ್ಚರ ವಹಿಸಿದರೆ ಒಳ್ಳೆಯದು.

ಒಟ್ಟಿನಲ್ಲಿ ವಾಲ್ಪಾರೈ ಎಂದರೆ ಕೇವಲ ಪ್ರವಾಸಿ ತಾಣವಲ್ಲ, ಅದು ಮನಸ್ಸನ್ನು ಹಗುರಗೊಳಿಸುವ, ನವಚೈತನ್ಯವನ್ನು ತುಂಬುವ ವಿಶೇಷ ಪರಿಸರ. ಹಸಿರು, ಮಳೆ, ಮಂಜು ಮತ್ತು ಮೌನ ಇವೆಲ್ಲದರ ಮಧ್ಯೆ ನೀವು ನಿಮ್ಮನ್ನೇ ಹೊಸದಾಗಿ ಕಂಡುಕೊಳ್ಳುವ ಸ್ಥಳ.

ನೋಡಲೇಬೇಕಾದ ಪ್ರಮುಖ ತಾಣಗಳಿವು

ಮಂಕಿ ಫಾಲ್ಸ್ – ಕಾಡಿನ ಮಧ್ಯೆ ಹರಿಯುವ ಮನಮೋಹಕ ಜಲಪಾತ

ಚಿನ್ನಕಲ್ಲಾರ್ ಜಲಪಾತ – ಮಳೆಯ ತೀವ್ರತೆಯ ಪ್ರತೀಕ

ನಲ್ಲಮುಡಿ ವ್ಯೂ ಪಾಯಿಂಟ್ - ಪಶ್ಚಿಮ ಘಟ್ಟಗಳ ಅಪೂರ್ವ ನೋಟ

ಶೋಲಾಯರ್ ಅಣೆಕಟ್ಟು – ಭಾರತದ ದೊಡ್ಡ ಅಣೆಕಟ್ಟುಗಳಲ್ಲಿ ಒಂದು