ಬೆಂಗಳೂರಿನಲ್ಲೇ ವರ್ಷಗಳಿಂದಲೂ ವಾಸವಿದ್ದು,ಇಲ್ಲಿನ ಪ್ರಮುಖ ತಾಣಗಳನ್ನೇ ಸರಿಯಾಗಿ ತಿಳಿಯದಿದ್ದರೆ ಹೇಗೆ? ಇಂಥ ಯೋಜನೆಯೊಂದಿಗೆ ಬಿಡುವಾದಾಗಲೆಲ್ಲಾ ಬೆಂಗಳೂರಿನ ಸುತ್ತಮುತ್ತಲಿನ ಅನೇಕ ಪ್ರವಾಸಿ ತಾಣಗಳನ್ನು, ಐತಿಹಾಸಿಕ ಸ್ಮಾರಕಗಳನ್ನು ಭೇಟಿ ಮಾಡುವುದು, ಅವುಗಳ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸಗಳನ್ನು ಮಾಡುತ್ತಲೇ ಬಂದಿದ್ದೇನೆ. ಸಾಮಾನ್ಯವಾಗಿ ಯಾವುದೇ ಪ್ರವಾಸಿ ತಾಣಗಳಿಗೆ ಹೋದಾಗಲೂ ಅಲ್ಲಿನ ಪ್ರಮುಖ ಆಕರ್ಷಣೆಯನ್ನು ಕಣ್ಣುತುಂಬಿಕೊಂಡು, ಒಂದಷ್ಟು ಫೊಟೋಗಳನ್ನೂ ಕ್ಲಿಕ್ಕಿಸಿಕೊಂಡು ಬರುವ ಪ್ರವಾಸಿಗರ ಸಾಲಿನಲ್ಲಿ ನಾನೂ ಒಬ್ಬಳಾಗಿದ್ದೆ. ಆದರೆ ವೃತ್ತಿಯ ಕಾರಣಕ್ಕೋ ಏನೋ ಯಾವುದೇ ತಾಣಕ್ಕೆ ಭೇಟಿ ಕೊಟ್ಟರೂ ಅಲ್ಲಿನ ಚಿತ್ರವನ್ನು ಕಣ್ಣುಗಳನ್ನು ತುಂಬಿಕೊಂಡು, ಫೊಟೋ ಗ್ಯಾಲರಿಯಲ್ಲೂ ಭರಭೂರ ಫೊಟೋಗಳನ್ನು ಹೇರಿಕೊಳ್ಳುವ ಜತೆಗೆ ಆ ತಾಣಗಳ ಮಾಹಿತಿಯನ್ನು ಗೈಡ್‌ಗಳು,ಮಾಹಿತಿ ಹೊಂದಿದ ಸನ್ಮಿತ್ರರು, ಅಷ್ಟೇ ಯಾಕೆ ಗೂಗಲ್‌ ಮಹಾಶಯನ ಸಹಾಯದಿಂದಲೂ ತಿಳಿಕೊಳ್ಳುತ್ತಿದ್ದೇನೆ. ಹೀಗೆ ಪ್ರಾರಂಭವಾದ ಆಸಕ್ತಿ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೂ ನನ್ನನ್ನು ತಂದು ನಿಲ್ಲಿಸಿದೆ.

ಇದನ್ನೂ ಓದಿ: ಥೈಲ್ಯಾಂಡಿಗೆ ಹೋಗುವ ಬದಲು ಅಂಡಮಾನಿಗೆ ಹೋಗಿ ಬನ್ನಿ…

ವರ್ಷಗಳಿಂದಲೂ ಅನೇಕ ಸುದ್ದಿ ಮಾಧ್ಯಮಗಳಲ್ಲಿ ವರದಿಗಾರ್ತಿಯಾಗಿದ್ದರಿಂದ ಕೈಯಲ್ಲಿ ಮೈಕ್‌ ಹಿಡಿದು, ಕ್ಯಾಮೆರಾ ಮುಂದೆ ನಿಂತಾಗ ಅನೇಕ ಬಾರಿ ಬ್ಯಾಕ್‌ಗ್ರೌಂಡ್‌ ಇದ್ದಿದ್ದು ಫ್ರೀಡಂ ಪಾರ್ಕ್.‌ ಮೆಟ್ರೋ ವರದಿಗಾರ್ತಿಯಾಗಿದ್ದರಿಂದ ನಗರದ ಹೃದಯಭಾಗದಲ್ಲಿರುವ ಗಾಂಧಿನಗರದಲ್ಲಿ, ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಸುಮಾರು 2ಕಿಮೀ. ದೂರದಲ್ಲಿರುವ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಯಾವುದೇ ಪ್ರತಿಭಟನೆ, ಕಾರ್ಯಕ್ರಮಗಳನ್ನು ಮಿಸ್‌ ಮಾಡುವಂತಿರಲಿಲ್ಲ. ಆಗೆಲ್ಲ ಫ್ರೀಡಂ ಪಾರ್ಕ್‌ ಎಂದರೆ ಪ್ರೊಟೆಸ್ಟ್‌ ಸ್ಪಾಟ್‌ ಆಗಿಯಷ್ಟೇ ಗುರುತಿಸಿಕೊಂಡಿತ್ತು. ಇಂದಿಗೆ ಒಂದಷ್ಟು ಬದಲಾವಣೆಗಳಿವೆಯಾದರೂ ಹೆಸರಿಗೆ ಅಂಟಿದ ನಂಟು ಮಾತ್ರ ಮರೆಯಾಗಿಲ್ಲ. ಆದರೆ ಫ್ರೀಡಂ ಪಾರ್ಕ್‌ ಅಂದರೆ ಅಷ್ಟೇನಾ ? ಖಂಡಿತಾ ಅಲ್ಲ.

Untitled design (76)

ಫ್ರೀಡಂ ಪಾರ್ಕ್‌ ಎಂಬ ಸೆಂಟ್ರಲ್‌ ಜೈಲು

ಇಂದು ಅಚ್ಚರಿಯ ಬೆಳವಣಿಗೆ ಕಾಣುತ್ತಿರುವ ಪ್ರವಾಸೋದ್ಯಮದ ಪ್ರಮುಖ ಅಂಗಗಳ ಪೈಕಿ ಜೈಲು ಪ್ರವಾಸೋದ್ಯಮವೂ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಇದೇ ಕಾರಣಕ್ಕೆ ಕರ್ನಾಟಕದ ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್ ಕೂಡ ಜೈಲು ಪ್ರವಾಸೋದ್ಯಮದ ಯಶಸ್ವಿ ಉದಾಹರಣೆಯಾಗಿಯೂ ಗುರುತಿಸಿಕೊಂಡಿದೆ. ಹಿಂದೆ ಅಂದರೆ 1975ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹಲವು ಪ್ರಮುಖ ರಾಜಕೀಯ ನಾಯಕರು ಮತ್ತು ಹೋರಾಟಗಾರರನ್ನು ಬಂಧಿಸಿಡುವ ಸಲುವಾಗಿ ಬಳಕೆಯಲ್ಲಿದ್ದ ಈ ಸೆಂಟ್ರಲ್ ಜೈಲನ್ನು, ಉದ್ಯಾನ ಮತ್ತು ಪರಂಪರೆ ತಾಣವಾಗಿ ಪರಿವರ್ತಿಸಲಾಗಿದೆ. ಅಲ್ಲದೆ ಈ ಐತಿಹಾಸಿಕ ಹಿನ್ನೆಲೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಜೈಲಿನ ಮೂಲ ರಚನೆಗಳನ್ನು ಸಂರಕ್ಷಿಸಿ, ಜೈಲಿನ ವಾಚ್ ಟವರ್, ಬ್ಯಾರಕ್‌ಗಳು ಮತ್ತು ಗಲ್ಲು ಶಿಕ್ಷೆಯ ಸ್ಥಳವನ್ನೂ ಕಾಯ್ದುಕೊಳ್ಳಲಾಗಿದೆ. ಸುಮಾರು 21 ಎಕರೆ ವಿಸ್ತೀರ್ಣ ಹೊಂದಿರುವ ಈ ಪ್ರದೇಶವನ್ನು 2008ರಲ್ಲಿ ಸಾರ್ವಜನಿಕರಿಗೆ ಮುಕ್ತಗೊಳಿಸುವ ಮೂಲಕ, ಅಂದಿನ ಕಾರಾಗೃಹ ವ್ಯವಸ್ಥೆ ಹೇಗಿತ್ತು ಎಂಬ ಪ್ರತಿ ಪ್ರವಾಸಿಗನ ಪ್ರಶ್ನೆಗೆ ಇಲ್ಲಿ ಉತ್ತರ ಲಭ್ಯವಿದೆ.

ಆದರೆ ಗಮನಿಸಬೇಕಿರುವ ವಿಚಾರವೇನು ಗೊತ್ತಾ? ಫ್ರೀಡಂ ಪಾರ್ಕ್‌ ಬರಿಯ ಜೈಲು ಟೂರಿಸಂ ಅಥವಾ ಐತಿಹಾಸಿಕ ಸ್ಮಾರಕ ಎಂಬ ಲೇಬಲ್‌ ಜತೆಗೆ ಅಷ್ಟಕ್ಕೇ ಸೀಮಿತವಾಗಿಲ್ಲ. ಇಲ್ಲಿ ಸುಂದರ ಉದ್ಯಾನಗಳು, ವಾಕಿಂಗ್ ಟ್ರ್ಯಾಕ್, ಮಕ್ಕಳ ಆಟದ ಪ್ರದೇಶ, ಮುಕ್ತ ಸಭಾಂಗಣ ಹಾಗೂ ವಿಶ್ರಾಂತಿಗೆ ಸೂಕ್ತವಾದ ಹಸಿರು ವಾತಾವರಣವೂ ಇದೆ. ಬೆಳಿಗ್ಗೆ ಮತ್ತು ಸಂಜೆ ನೂರಾರು ಜನರು ಇಲ್ಲಿ ವಾಯುವಿಹಾರ, ವ್ಯಾಯಾಮ ಮತ್ತು ಮನರಂಜನೆಗಾಗಿ ಆಗಮಿಸುತ್ತಾರೆ. ಜತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಪುಸ್ತಕ ಮೇಳಗಳು, ಕಲಾ ಉತ್ಸವಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೂ ಈ ಸ್ಥಳ ಪ್ರಮುಖ ವೇದಿಕೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಹಬ್ಬ ಸೇರಿದಂತೆ ಅನೇಕ ಸಾಂಸ್ಕೃತಿಕ ಉತ್ಸವಗಳ ಪ್ರಮುಖ ಕೇಂದ್ರವಾಗಿಯೂ ಫ್ರೀಡಂ ಪಾರ್ಕ್ ಗುರುತಿಸಿಕೊಂಡಿದೆ.

Untitled design (64)

ಕರ್ನಾಟಕದಲ್ಲಷ್ಟೇ ಅಲ್ಲದೆ ಭಾರತೀಯ ಪ್ರವಾಸೋದ್ಯಮದಲ್ಲೂ ಜೈಲು ಪ್ರವಾಸೋದ್ಯಮ ಎಂಬ ಹೊಸ ಪರಿಕಲ್ಪನೆ ಬೆಳೆಯುತ್ತಿದೆ. ಒಂದಾನೊಂದು ಕಾಲದಲ್ಲಿ ಶಿಕ್ಷೆ ಮತ್ತು ಬಂಧನದ ಸಂಕೇತವಾಗಿದ್ದ ಕಾರಾಗೃಹಗಳು ಇಂದು ಇತಿಹಾಸ, ಸ್ವಾತಂತ್ರ್ಯ ಹೋರಾಟ ಮತ್ತು ಪರಂಪರೆಯ ಕಥೆಗಳನ್ನು ಹೇಳುವ ಪ್ರವಾಸಿ ತಾಣಗಳಾಗಿ ರೂಪಾಂತರಗೊಳ್ಳುತ್ತಿವೆ.

ಅಂಡಮಾನ್‌ನ ಕಾಲಾಪಾನಿ..

ಭಾರತದಲ್ಲಿ ಜೈಲು ಪ್ರವಾಸೋದ್ಯಮದ ಅತ್ಯಂತ ಪ್ರಸಿದ್ಧ ಉದಾಹರಣೆಯೆಂದರೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸೆಲ್ಯುಲರ್ ಜೈಲು. ಬ್ರಿಟಿಷರ ಆಳ್ವಿಕೆಯಲ್ಲಿ ʻಕಾಲಾಪಾನಿʼ ಎಂದು ಕರೆಯಲ್ಪಡುತ್ತಿದ್ದ ಈ ಕಾರಾಗೃಹದಲ್ಲಿ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಲಾಗಿತ್ತು. ಇಂದು ಇದು ರಾಷ್ಟ್ರೀಯ ಸ್ಮಾರಕವಾಗಿದ್ದು, ಪ್ರತಿದಿನ ನಡೆಯುವ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮದ ಮೂಲಕ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಜೀವಂತವಾಗಿ ಪರಿಚಯಿಸುತ್ತದೆ.

ತಮಿಳುನಾಡಿನ ಕಾರಾಗೃಹಗಳ ಕತೆ..

ಇತ್ತೀಚೆಗೆ ತಮಿಳುನಾಡು ಸರಕಾರವೂ ತನ್ನ ಐತಿಹಾಸಿಕ ಕಾರಾಗೃಹಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಮುಂದಾಗಿದೆ. ಹಳೆಯ ಜೈಲುಗಳನ್ನು ವಸ್ತುಸಂಗ್ರಹಾಲಯಗಳು, ಪರಂಪರೆ ಕೇಂದ್ರಗಳು ಹಾಗೂ ಡಿಜಿಟಲ್ ಪ್ರದರ್ಶನಗಳ ಮೂಲಕ ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶ ಹೊಂದಿದೆ. ಈ ಪ್ರಯತ್ನ ಯಶಸ್ವಿಯಾದರೆ ಭಾರತದಲ್ಲಿ ಜೈಲು ಪ್ರವಾಸೋದ್ಯಮಕ್ಕೆ ಹೊಸ ಆಯಾಮ ಸಿಗುವ ಸಾಧ್ಯತೆಯಿದೆ.

Untitled design (65)

ಜೈಲು ಪ್ರವಾಸೋದ್ಯಮದ ಉದ್ದೇಶ ಕೇವಲ ಹಳೆಯ ಕಟ್ಟಡಗಳನ್ನು ಪ್ರದರ್ಶಿಸುವುದಲ್ಲ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬ್ರಿಟಿಷರ ಕ್ರೂರವಾದ ಆಡಳಿತ, ಮಾನವ ಹಕ್ಕುಗಳ ಮಹತ್ವ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಇದರ ಮುಖ್ಯ ಗುರಿಯಾಗಿದೆ. ಇಂಥ ತಾಣಗಳು ವಿದ್ಯಾರ್ಥಿಗಳು, ಇತಿಹಾಸ ಸಂಶೋಧಕರು ಮತ್ತು ಪರಂಪರೆ ಪ್ರವಾಸೋದ್ಯಮದಲ್ಲಿ ಆಸಕ್ತಿ ಹೊಂದಿರುವವರಿಗೆ ಅಮೂಲ್ಯ ಅಧ್ಯಯನ ಕೇಂದ್ರಗಳಾಗಿವೆ.

ಭವಿಷ್ಯದಲ್ಲಿ ಭಾರತದ ವಿವಿಧ ರಾಜ್ಯಗಳಲ್ಲಿರುವ ಐತಿಹಾಸಿಕ ಕಾರಾಗೃಹಗಳನ್ನು ಸಂರಕ್ಷಿಸಿ ಪ್ರವಾಸೋದ್ಯಮದ ಭಾಗವಾಗಿಸಿದರೆ, ದೇಶದ ಪರಂಪರೆ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ದೊರೆಯಲಿದೆ. ಶಿಕ್ಷೆಯ ಸಂಕೇತವಾಗಿದ್ದ ಜೈಲುಗಳು, ಇತಿಹಾಸದ ಪಾಠ ಕಲಿಸುವ ಸ್ಮಾರಕಗಳಾಗಿ ರೂಪಾಂತರಗೊಳ್ಳುತ್ತಿರುವುದು ಭಾರತದ ಪ್ರವಾಸೋದ್ಯಮದ ಹೊಸ ಮತ್ತು ಅರ್ಥಪೂರ್ಣ ಬೆಳವಣಿಗೆಯಾಗಿದೆ.