- ಮಂಜುನಾಥ ಡಿ. ಎಸ್.

ಇತ್ತೀಚೆಗೆ ಒಂದು ದಿನ ಬೆಳಗ್ಗೆ ಬೆಂಗಳೂರಿನ ಜಯನಗರದ ಮೂರನೆಯ ಬ್ಲಾಕ್ ಬಳಿ ಎರಡು ತಾಸು ಕಳೆಯಬೇಕಾದ ಅನಿವಾರ್ಯಕ್ಕೆ ಸಿಲುಕಿದ್ದೆವು. ನಿರ್ಜನವಾಗಿದ್ದ ಒಳ ರಸ್ತೆಯಲ್ಲಿ ಸಾಗಿದಂತೆ ಉದ್ಯಾನವನ ಎದುರಾಯಿತು. ಅಲ್ಲಿಯೇ ಒಂದೆರಡು ಸುತ್ತು ಹಾಕಲು ಮುಂದಾದೆವು. ಹಿಂದಿನ ರಾತ್ರಿಯ ಮಳೆಯಿಂದಾಗಿ ತೊಯ್ದ ನೆಲ ಹಾಗೂ ಗಿಡಮರಗಳು ತಂಪಿನ ವಿಶಿಷ್ಟ ಅನುಭೂತಿ ನೀಡಿದವು. ಬೆಂಗಳೂರಿನ ಇತರ ಉದ್ಯಾನವನಗಳಿಗಿಂತ ಇದು ವಿಭಿನ್ನವಾಗಿ ಕಂಡಿತು. ಉದ್ಯಾನದ ಉದ್ದಗಲ ಹಸಿರಿನಿಂದ ಕಂಗೊಳಿಸುತ್ತಿತ್ತು. ನೂರಾರು ಪ್ರಭೇದಗಳ ಗಿಡಗಳಿಂದ ಕೂಡಿದ ಕುಂಡಗಳು ಪಥದ ಇಕ್ಕೆಲೆಗಳಲ್ಲಿ ಓರಣವಾಗಿ ಜೋಡಿಸಲ್ಪಟ್ಟಿದ್ದವು. ಈ ವನ ಅಚ್ಚುಕಟ್ಟಾಗಿದ್ದುದು ಮಾತ್ರವಲ್ಲದೆ ಸ್ವಚ್ಛವಾಗಿಯೂ ಇತ್ತು ಎನ್ನುವುದು ಅಚ್ಚರಿ ಎನಿಸಿದರೂ ಅತಿಶಯೋಕ್ತಿಯಲ್ಲ.

ಇದನ್ನೂ ಓದಿ: ಆರ್‌ಜಿ ರೆಸಾರ್ಟ್ಸ್ ಆಂಡ್ ಲೆಷರ್

ನಾವು ಹೋದ ಸಮಯದಲ್ಲಿ ಅಲ್ಲಿ ಹೆಚ್ಚು ಜನರು ಇರಲಿಲ್ಲ. ಬೆರಳೆಣಿಕೆಯಷ್ಟು ಮಂದಿ ವಾಯುವಿಹಾರ ಮಾಡುತ್ತಿದ್ದರು. ಕೆಲವು ಯುವಕ ಯುವತಿಯರು ಅಲ್ಲಿನ ಸುಂದರ ಪರಿಸರ ಹಾಗೂ ಪ್ರಶಾಂತ ವಾತಾವರಣವನ್ನು ಆನಂದಿಸುವಲ್ಲಿ ತಲ್ಲೀನರಾಗಿದ್ದರು. ಹಲವು ವಿದ್ಯಾರ್ಥಿಗಳು ಉದ್ಯಾನದಲ್ಲಿದ್ದ ಮಂಟಪಗಳಲ್ಲಿ ಕುಳಿತು ಓದಿಕೊಳ್ಳುತ್ತಿದ್ದರು.

ಈ ಉದ್ಯಾನದ ಉತ್ತರ ಭಾಗದಲ್ಲಿ ಆಯತಾಕಾರದ ಕುಂಡಗಳಲ್ಲಿ ಬೆಳೆಸಿದ್ದ ಗಿಡಗಳನ್ನು ಕಂಡೆವು. ಅವುಗಳ ಹೆಸರು ಹಾಗೂ ಅವು ಯಾವ ರೋಗಗಳನ್ನು ನಿವಾರಿಸುತ್ತವೆ ಎಂಬುದನ್ನು ತಿಳಿಸುವ ಫಲಕಗಳಿದ್ದವು. ಅಮೃತ ಬಳ್ಳಿ, ಅಲೋವೆರ, ಬಸಳೆ ಸೊಪ್ಪು, ಹಿಪ್ಪಲಿ, ಕಾಮ ಕಸ್ತೂರಿ, ಮುಂತಾದ ಚಿರಪರಿಚಿತ ಹೆಸರಿನ ಸಸ್ಯಗಳು ಅಲ್ಲಿದ್ದುದನ್ನು ನೋಡಿದೆವು. ಇವಲ್ಲದೆ ಬೇವು, ನೇರಳೆ, ಸಂಪಿಗೆ, ಅಶೋಕ, ಇತ್ಯಾದಿ ವೃಕ್ಷಗಳೂ ಆ ವನದಲ್ಲಿದ್ದವು.

Untitled Design (8)

ಇವುಗಳನ್ನು ನೋಡಿಕೊಂಡು ಮುಂದೆ ಸಾಗಿದಾಗ ಶಿಲಾಫಲಕವೊಂದು ಗಮನ ಸೆಳೆಯಿತು. 2015ರ ಜನವರಿ 7ನೆಯ ದಿನಾಂಕ ಈ ʼಸಂಜೀವಿನಿ ವನʼ ಉದ್ಘಾಟನೆಯಾದ ಮಾಹಿತಿ ಹಾಗೂ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗಣ್ಯರ ವಿವರಗಳು ಇದರಲ್ಲಿದ್ದವು.

ಇದರ ಬದಿಯಲ್ಲಿಯೇ ಪುಟ್ಟ ಕೊಳವೊಂದಿತ್ತು. ಕೊಳದ ನಡುವಿನ ಶಿಲಾರಚನೆಯ ಶೃಂಗದಲ್ಲಿ ದೇವಿಯ ಚಿಕ್ಕ ವಿಗ್ರಹವೂ ಇತ್ತು. ಕೊಳವನ್ನು ಸುತ್ತಿ ಮತ್ತೆ ದ್ವಾರದ ಬಳಿ ಬಂದಾಗ ದೊಡ್ಡ ಭಿತ್ತಿಫಲಕ ದೃಗ್ಗೋಚರವಾಯಿತು. ಈ ವನದಲ್ಲಿ ನೆಡಲಾಗಿರುವ 125 ಗಿಡಮರಗಳ ಸಾಮಾನ್ಯ ಹೆಸರು, ವೈಜ್ಞಾನಿಕ ಹೆಸರು, ಉಪಯೋಗಕ್ಕೆ ಬರುವ ಭಾಗಗಳು, ಮತ್ತು ಉಪಯೋಗಗಳ ವಿವರಗಳು ಇದರಲ್ಲಿ ದಾಖಲಾಗಿದ್ದವು.

ತ್ವರಿತ ನಗರೀಕರಣ ಮತ್ತು ಭಾರಿ ಸಂಚಾರ ದಟ್ಟಣೆಯಿಂದ ವಾಯು ಮಾಲಿನ್ಯಕ್ಕೆ ತುತ್ತಾಗಿರುವ ಬೆಂಗಳೂರು ಕಾಯಿಲೆಗಳ ತವರಾಗಿರುವುದನ್ನು ಆಗಿನ ಜನಪ್ರತಿನಿಧಿಗಳು ಅರಿತುಕೊಂಡರು. ಬೆಂಗಳೂರಿನ ಸುಮಾರು ಶೇ.23ರಷ್ಟು ನಿವಾಸಿಗಳು ಆಸ್ತಮಾ ಮತ್ತು ಸಂಬಂಧಿತ ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನಗಳು ಸೂಚಿಸಿರುವುದನ್ನು ಅವರು ಗಮನಿಸಿದರು. ಈ ಆತಂಕಕಾರಿಯಾದ ಸಾರ್ವಜನಿಕ ಆರೋಗ್ಯ ಸಮಸ್ಯೆಯನ್ನು ಪರಿಹರಿಸಲು ನವೀನ, ಪ್ರಕೃತಿ ಆಧಾರಿತ ಪರಿಹಾರದ ಅಗತ್ಯವಿದೆ ಎಂಬುದನ್ನು ಅವರು ಮನಗಂಡರು. ಹಾಗಾಗಿ, ವಿಶಿಷ್ಟ ಗಿಡಮೂಲಿಕೆಗಳ ಉದ್ಯಾನವನ್ನು ಇಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಿದರು. ಆಸ್ತಮಾ, ಉಸಿರಾಟದ ಕಾಯಿಲೆಗಳು ಮತ್ತು ಶ್ವಾಸಕೋಶದ ಸೋಂಕುಗಳಂಥ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಹೆಸರುವಾಸಿಯಾದ ನೂರಾರು ಔಷಧೀಯ ಸಸ್ಯ ಪ್ರಭೇದಗಳನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅಘನಾಶಿನಿ ನದಿಯ ಬಳಿಯ ಪ್ರಸಿದ್ಧ ಧನ್ವಂತರಿ ವನದಿಂದ ತರಿಸಿದರು. ಈ ಔಷಧೀಯ ಸಸ್ಯಗಳನ್ನು ಸಂಜೀವಿನಿ ವನದಲ್ಲಿ ನೆಡಿಸಿದರು.

ಉದ್ಯಾನವನದ ಸುತ್ತಮುತ್ತಲಿನ ವಾಹನ ಮಾಲಿನ್ಯದ ದುಷ್ಪರಿಣಾಮಗಳನ್ನು ನಿಯಂತ್ರಿಸಲು ವನದ ರಕ್ಷಣಾತ್ಮಕ ಬೇಲಿಯ ಉದ್ದಕ್ಕೂ ನೂರಕ್ಕೂ ಹೆಚ್ಚು ಬೇವಿನ ಮರಗಳನ್ನು ನೆಡಲಾಯಿತು. ಈ ಮರಗಳು ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳಲು ಮತ್ತು ಗಾಳಿಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತವೆ. ಇವು ನೈಸರ್ಗಿಕ ವಾಯು ಶೋಧಕವಾಗಿ ಉದ್ಯಾನವನದ ಪಾತ್ರವನ್ನು ಬಲಪಡಿಸುತ್ತವೆ. ಸಂಪೂರ್ಣವಾಗಿ ಗಿಡ ಮರ ಬಳ್ಳಿಗಳಿಂದ ಕೂಡಿರುವ ಸಂಜೀವಿನಿ ವನವು ಬೆಂಗಳೂರು ಮಹಾನಗರ ಪ್ರದೇಶದ ಇಂಥ ಮೊದಲ ಉದ್ಯಾನವನ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ.

Untitled Design (9)

ದಾರಿ ಹೇಗೆ?

ಬೆಂಗಳೂರಿನ ಜಯನಗರ 2ನೆಯ ಬ್ಲಾಕ್‌ನ ಲಕ್ಷ್ಮಣರಾವ್ ಬೌಲೆವಾರ್ಡ್‌ ಪ್ರದೇಶದಲ್ಲಿದೆ. ಮೆಟ್ರೋದಲ್ಲಿ ಗ್ರೀನ್‌ ಲೈನ್‌ನ ಸೌತ್ ಎಂಡ್ ಸರ್ಕಲ್ ಮೆಟ್ರೋ ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ಸುಮಾರು 300 ಮೀಟರ್‌ ನಡೆದು ಉದ್ಯಾನವನ ತಲುಪಬಹುದು.

ಇನ್ನಷ್ಟು ಸಮೃದ್ಧವಾಗಲಿ!

ಔಷಧೀಯ ಸಸ್ಯಗಳನ್ನು ವಿತರಿಸುವ ಅಥವಾ ಮಾರಾಟ ಮಾಡುವ ವ್ಯವಸ್ಥೆ ಇಲ್ಲಿ ಆರಂಭಿಸಬಹುದು. ಸಸ್ಯಗಳನ್ನು ಮನೆಯಲ್ಲೇ ಬೆಳೆಸುವ ವಿಧಾನ, ಅವುಗಳ ಔಷಧೀಯ ಗುಣಗಳ ಕುರಿತು ಮಾಹಿತಿ ನೀಡಿದರೆ ಜನರಿಗೆ ಮತ್ತಷ್ಟು ಉಪಯೋಗವಾಗುತ್ತದೆ. ಇಂಥ ವ್ಯವಸ್ಥೆ ಸಂಜೀವಿನಿ ವನವನ್ನು ಕೇವಲ ವಾಯುವಿಹಾರದ ತಾಣವಲ್ಲದೆ, ಔಷಧೀಯ ಸಸ್ಯಗಳ ಜ್ಞಾನಕೇಂದ್ರವಾಗಿಯೂ ರೂಪಿಸಬಹುದು.