- ರಾಜಶ್ರೀ ಟಿ. ರೈ ಪೆರ್ಲ

ಪಶ್ಚಿಮಬಂಗಾಳವು ಹಲವಾರು ಐತಿಹಾಸಿಕ ಸಂಗತಿ ಮತ್ತು ವ್ಯಕ್ತಿಗಳ ಕಾರಣಕ್ಕೆ ಯಾವತ್ತೂ ಪ್ರಾಧಾನ್ಯವನ್ನು ಗಳಿಸಿಕೊಂಡಿರುವ ಒಂದು ರಾಜ್ಯ. ವಿಶೇಷವಾಗಿ ಹಲವಾರು ಐತಿಹಾಸಿಕ ಮಹತ್ವದ ಭೌತಿಕ ಕುರುಹುಗಳನ್ನು ಅದು ಜತನದಿಂದ ಕಾಪಿಟ್ಟುಕೊಂಡು ಬಂದಿರುವುದು ಕೂಡ ಅಷ್ಟೇ ಸತ್ಯ. ಅಲ್ಲಿಗೆ ತೆರಳಿದ ಪ್ರವಾಸಿಗರಿಗೆ ಇದು ಖಂಡಿತ ಅನುಭವಕ್ಕೆ ಬರುತ್ತದೆ.

ಇದನ್ನೂ ಓದಿ: ಸಹ್ಯಾದ್ರಿಯ ಶಿಖರದಲ್ಲಿ ಮಹಾಬಲೇಶ್ವರ ಸನ್ನಿದಾನ

ಕೊಲ್ಕತ್ತಾ ನಗರದ ಕಾಲೇಜ್ ಸ್ಟ್ರೀಟ್ ಕಾಫಿ ಹೌಸ್ ಅಥವಾ ಇಂಡಿಯನ್ ಕಾಫಿ ಹೌಸ್ ಎಂಬುದು ಕಾಲೇಜ್ ಸ್ಟ್ರೀಟ್‌ನ ಹೆರಿಟೇಜ್ ಕಾಲೇಜ್ ಎಂದು ಗೌರವಿಸಲ್ಪಡುವ ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ಸಮೀಪದಲ್ಲಿ ಇರುವ ಒಂದು ಕೆಫೆಯಾಗಿದೆ. ಇದು ಕೋಲ್ಕತ್ತಾದ ಅತ್ಯಂತ ಪ್ರಸಿದ್ಧ, ಭಾರತೀಯ ಕಾಫಿ ಹೌಸ್ ಶಾಖೆಯಾಗಿದೆ . ಗಮನಾರ್ಹ ಸಂಗತಿಯೆಂದರೆ ಇದು ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ನಂತರದಲ್ಲಿ ಹಲವಾರು ಚಿಂತಕರು ಬುದ್ಧಿಜೀವಿಗಳು ಸದಾ ಸೇರುತ್ತಿದ್ದ ಪ್ರಮುಖ ತಾಣವಾಗಿದೆ. ಹಾಗಾಗಿಯೇ ಕೋಲ್ಕತ್ತಾದ ಸಾಂಸ್ಕೃತಿಕ ಇತಿಹಾಸದಲ್ಲಿ ಈ ಸ್ಥಳಕ್ಕೆ ವಿಶೇಷ ಗುರುತಿಸುವಿಕೆ ಇದೆ ಮತ್ತು ಇದೊಂದು ಬೌದ್ಧಿಕ ಚರ್ಚೆಗಳ ಕೇಂದ್ರವೆಂದೇ ಪ್ರಸಿದ್ಧವಾಗಿದೆ.

Untitled design (86)

ಇದರ ಇತಿಹಾಸದ ಬಗ್ಗೆ ಅವಲೋಕನ ಮಾಡುವುದಾದರೆ 1876ರಲ್ಲಿಯೇ ಇದು ಸ್ಥಾಪನೆಗೊಂಡಿತ್ತು. ರಾಮ್ ಕಮಲ್ ಸೇನ್ ಎನ್ನುವವರ ಮನೆಯನ್ನು ಕೆಫೆಯಾಗಿ ಬದಲಿಸಲಾಗಿದೆಯಂತೆ. ಇದಕ್ಕೆ 1947ರಲ್ಲಿ ಕಾಫೀ ಹೌಸ್ ಎಂದು ನಾಮಕರಣ ಮಾಡಲಾಯಿತು.ಇದರ ಉಲ್ಲೇಖವಿರುವ ಸಿನಿಮಾ ಹಾಡು ಕೂಡಾ ಪ್ರಸಿದ್ಧವಾಗಿತ್ತು. ಹಲವಾರು ಚಲನಚಿತ್ರಗಳಲ್ಲಿ ಈ ಸ್ಥಳವನ್ನು ತೋರಿಸಲಾಗಿದೆ.

ಇಲ್ಲಿ ಗಾಂಧೀ ಟೋಪಿದಾರಿ ಸಪ್ಲೈಯರ್ ಗಳು ಬಹಳ ವಿನಯದಿಂದ ನಮ್ಮ ಜತೆ ವರ್ತಿಸುತ್ತಾರೆ. ಅಲ್ಲಿಯ ಕಾಫೀ ಪ್ರಸಿದ್ಧವಾದರೂ ಉಳಿದ ಖಾದ್ಯಗಳನ್ನೂ ಅಲ್ಲಿ ಸವಿಯಬಹುದು. ಕಟ್ಟಡದ ಮೊದಲನೇ ಮಹಡಿಯಲ್ಲಿ ವಿಶಾಲವಾದ ಹಾಲ್ ನ ಕೆಫೆಯ ಗೋಡೆಗಳು ಹಳೇಯ ಚಿತ್ರಕಲಾ ಕೃತಿಗಳಿಂದ ಅಲಂಕರಿಸಲ್ಪಟ್ಟಿದೆ. ಪುಸ್ತಕಗಳೇ ಮೆರವಣಿಗೆಯಲ್ಲಿ ನಿಂತು, 'ತಮ್ಮನ್ನು ಕೊಂಡು ಓದಿರಿ' ಎಂದು ಧರಣಿ ಮಾಡುತ್ತಿರುವಂತೆ ಗೋಚರಿಸುವ ಕಾಲೇಜ್ ಸ್ಟ್ರೀಟ್ ಮತ್ತು ಭಾರತೀಯ ಇತಿಹಾಸದ ಪಳೆಯುಳಿಕೆಯಂತೆ ಗೋಚರಿಸುವ ಕಾಫೀ ಹೌಸ್ ಗೆ ಕೊಲ್ಕತ್ತಾ ಪ್ರವಾಸಿಗರು ತಪ್ಪದೇ ಭೇಟಿ ನೀಡಿ