• ಪಾರ್ವತಿ ಶಂಭು

ಕೊಡೖಕೆನಾಲ್ ಎಂಬುದು ಒಂದು ಸುಂದರವಾದ ಹಿಲ್ಲ ಸ್ಟೇಷನ್ ಎಂದರೆ ಏನನ್ನೂ ಹೇಳಿದ ಹಾಗೆ ಆಗುವುದಿಲ್ಲ. ಅದನ್ನು ವರ್ಣಿಸಲು ಬರೀ ಸುಂದರವಾದ ಪದಗಳಷ್ಟೇ ಸಾಲದು; ಅಲ್ಲಿ ಅನುಭವಿಸಿದ ಭಾವನೆಗಳು ಹಾಗೂ ಖುಷಿಗಳನ್ನು ಕಣ್ಣಿಗೆ ಕಟ್ಟಿಕೊಡಲು ಒಂದು ಕವಿ ಹೃದಯವೇ ಬೇಕು. ಅದೊಂದು ಪದಪುಂಜಗಳಿಗೆ ಸಿಗದ ಅದ್ಭುತ ಅನುಭೂತಿ ಎಂದಷ್ಟೇ ಹೇಳಬಹುದು.

ಕೊಡೖಕೆನಾಲ್ ಸಮುದ್ರಮಟ್ಟದಿಂದ ಸುಮಾರು 2000 ಮೀಟರ್‌ಗಳಷ್ಟು ಎತ್ತರದಲ್ಲಿದೆ. ಇಲ್ಲಿನ ಪ್ರಕೃತಿ ಸೌಂದರ್ಯ, ಹವಾಮಾನ ಹಾಗೂ ಮಣ್ಣಿನ ಗುಣಗಳನ್ನು ಬಳಸಿಕೊಂಡು ಪ್ರವಾಸೋದ್ಯಮ ಇಲಾಖೆಯು ನಿರ್ಮಿಸಿರುವ ಪಾರ್ಕುಗಳು ಮತ್ತು ಸರೋವರಗಳು ಪ್ರವಾಸಿಗರನ್ನು ತನ್ನತ್ತ ಸೆಳೆದುಬಿಡುತ್ತವೆ. ಇದರೊಟ್ಟಿಗೆ ಜಲಪಾತಗಳು, ಅರಣ್ಯ ಪ್ರದೇಶಗಳು ಮತ್ತು ಗುಹೆಗಳ ಸಾಲು ಸಾಲಿವೆ.

Untitled design (66)

ಇಲ್ಲಿಗೆ ಬರುವ ಪ್ರವಾಸಿಗರನ್ನು ಪ್ರಮುಖವಾಗಿ ಎರಡು ವರ್ಗಗಳಾಗಿ ಗುರುತಿಸಬಹುದು. ಮೊದಲನೆಯ ವರ್ಗ: ಈಗಾಗಲೇ ಜನಪ್ರಿಯವಾಗಿರುವ ಪ್ರವಾಸಿ ತಾಣಗಳನ್ನು ನೋಡಬಯಸುವವರು. ಈ ವರ್ಗದ ಜನರು ತಾವು ಕೇಳಿರುವ ಒಂದಷ್ಟು ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಿ ಹಿಂದಿರುಗುತ್ತಾರೆ. ಅಂದಮಾತ್ರಕ್ಕೆ ಈ ಪ್ರದೇಶಗಳು ಬರೀ ಹೆಸರುಗಳನ್ನಷ್ಟೇ ಗಳಿಸಿಲ್ಲ, ನಿಜವಾಗಿಯೂ ತಮ್ಮ ಸ್ನಿಗ್ಧ ಸೌಂದರ್ಯದಿಂದ ಪ್ರತ್ಯೇಕ ಸ್ಥಾನ ಪಡೆದಿವೆ. ಎರಡನೇ ವರ್ಗ: ಕೊಡೈಕೆನಾಲ್‌ನಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ, ತಮ್ಮ ಅದ್ವಿತೀಯ ಸೌಂದರ್ಯಕ್ಕೆ ಹೆಸರುವಾಸಿಯಾದ ಜಾಗಗಳನ್ನು ಅರಸುವವರು. ಇಲ್ಲಿಗೆ ಹೆಚ್ಚು ಜನರು ಭೇಟಿ ನೀಡದ ಕಾರಣ, ಇವು ತಮ್ಮ ನೈಸರ್ಗಿಕ ಸೌಂದರ್ಯವನ್ನು ಕಾಪಾಡಿಕೊಂಡಿವೆ. ಈ ಸ್ಥಳಗಳಿಗೆ ಭೇಟಿ ಕೊಡುವವರಿಗೆ ಯಾವುದೇ ಧಾವಂತವಿರುವುದಿಲ್ಲ. ಅಲ್ಲಿನ ಸರೋವರಗಳು ಹಾಗೂ ಜಲಪಾತಗಳ ಬಳಿಯೇ ಬೀಡು ಬಿಟ್ಟು, ಪ್ರತಿ ಕ್ಷಣವನ್ನು ಅನುಭವಿಸಬೇಕೆಂದು ಬಯಸುವ ಈ ವರ್ಗದ ಜನ, ಅಲ್ಲಿನ ಪ್ರಕೃತಿ ಸಂಪತ್ತಿನಲ್ಲಿ ತಾವೂ ಒಂದು ಭಾಗವೇನೋ ಎಂಬಂತೆ ಕಳೆದುಹೋಗುತ್ತಾರೆ.

ಹೂ ಲೋಕ

ಇಲ್ಲಿಯ ಹವಾಮಾನ ಒಂದೊಂದು ಸಮಯದಲ್ಲಿ ಒಂದೊಂದು ರೀತಿ ಇರುತ್ತದೆ. ಒಮ್ಮೆ ಮೋಡ ಮತ್ತು ಇಬ್ಬನಿಗಳಿಂದ ಪೂರ್ಣವಾಗಿ ಮುಚ್ಚಿಹೋಗುವ ಬೆಟ್ಟ-ಗುಡ್ಡಗಳು, ಸ್ವಲ್ಪ ಹೊತ್ತಿನಲ್ಲೇ ಎಲ್ಲವೂ ಚದರಿ ಹೋಗಿ ಪ್ರಕೃತಿಯ ದರ್ಶನ ಮಾಡಿಸಿಬಿಡುತ್ತವೆ. ಇಲ್ಲಿನ ಸೂರ್ಯೋದಯ ಮತ್ತು ಸೂರ್ಯಾಸ್ತಗಳಂತೂ ನಾವೆಂದೂ ಮರೆಯಲಾರದಂಥ ಅನುಭವವನ್ನು ನೀಡುತ್ತವೆ.

ಟುಲಿಪ್ ಗಾರ್ಡನ್ ಎಂದು ಕಾಶ್ಮೀರಕ್ಕೆ ಓಡುವ ನಾವು, ನಮ್ಮ ಪಕ್ಕದ ರಾಜ್ಯದಲ್ಲಿರುವ ಅಸಂಖ್ಯಾತ ಹೂಗಳ ಗಾರ್ಡನ್‌ಗಳನ್ನು ಗುರುತಿಸುವಲ್ಲಿ ಹಿಂದೆ ಬಿದ್ದಿದ್ದೇವೆ. ನಾವು ತಂಗಿದ್ದ ಹೋಂ ಸ್ಟೇ ಸುತ್ತಲೂ ಅದ್ಭುತವಾದ ಉದ್ಯಾನವನವನ್ನೇ ನಿರ್ಮಿಸಿದ್ದರು. ಬರೀ ಹಸಿರಿನಿಂದ ಅಷ್ಟೇ ಅಲ್ಲದೆ, ಅಲ್ಲಿ ಬೇರೆ ಬೇರೆ ಜಾತಿಯ ಮತ್ತು ಬೇರೆ ಬೇರೆ ಬಣ್ಣಗಳ ಹೂಗಳು ನಳನಳಿಸುತ್ತಿದ್ದವು. ಆ ಉದ್ಯಾನವೇ ಒಂದು ಪ್ರವಾಸಿ ಸ್ಥಳದಂತೆ ಭಾಸವಾಗುತ್ತಿತ್ತು.

Untitled design (65)

ಗೌರ್ನಮೆಂಟ್ ರೋಜ್ ಗಾರ್ಡನ್, ಗ್ರೀನ್ ವ್ಯಾಲಿ ವ್ಯೂ, ಬ್ರಯಾಂಟ್ ಪಾರ್ಕ್, ಮಾನವ ನಿರ್ಮಿತ ಸ್ಟಾರ್ ಶೇಪ್‌ನ ಕೊಡೈಕೆನಾಲ್ ಲೇಕ್, ಕೋಕರ್ಸ್ ವಾಕ್, ಪಿಲ್ಲರ್ ರಾಕ್, ಮುನಾವರ್ ಲೇಕ್ ಮತ್ತು ಡಾಲ್ಫಿನ್ ನೋಸ್ ಹೀಗೆ ಎಲ್ಲೆಡೆ ಮನದಣಿಯೆ ಓಡಾಡಿದೆವು. ಅತ್ಯಂತ ವಿಸ್ತಾರವಾದ ಈ ಸ್ಥಳಗಳಲ್ಲಿ ಎಷ್ಟು ಓಡಾಡಿದರೂ ಮನಸು ತಣಿಯಲಿಲ್ಲ, ದೇಹವೂ ದಣಿಯಲಿಲ್ಲ.

'ಮಂಜುಮೆಲ್ ಬಾಯ್ಸ್' ಕಥೆ

ಎರಡನೆಯ ದಿನ ಬೆಳಗ್ಗೆಯೇ ಸುಮಾರು ಒಂದೂವರೆ ಕಿಲೋಮೀಟರ್‌ನಷ್ಟು ಹಾದಿಯನ್ನು ಏರಿ-ಇಳಿದು ಸಾಗಿದಾಗ ಸುಂದರವಾದ 'ವ್ಯೂ ಪಾಯಿಂಟ್' ಕಾಣಿಸಿತು. ಅಲ್ಲೆಲ್ಲಾ ಸಾಕಷ್ಟು ಸಿನಿಮಾಗಳ ಶೂಟಿಂಗ್ ಆಗಿದೆಯೆಂದು ಅಲ್ಲಿನ ಪುಟ್ಟ ಅಂಗಡಿಯವರು ಹೇಳಿದರು. ಮನ ತಣಿಯುವಂತೆ ಆ ಸುಂದರ ದೃಶ್ಯ ಕಾವ್ಯವನ್ನು ಆನಂದಿಸಿದೆವು. ಅಲ್ಲಿಂದ ಹಿಂದಿರುಗಿ ಬರುವ ಹಾದಿಯಲ್ಲಿ ಕೋಕಲ್ ಜಲಪಾತಕ್ಕೆ ಭೇಟಿ ನೀಡಿ, ನೀರಿನಲ್ಲಿ ಆಟವಾಡಿ ಹೊಸ ಉತ್ಸಾಹದಿಂದ ಪಿಲ್ಲರ್ ರಾಕ್ ಹಾಗೂ ʼಗುಣ ಗುಹೆʼಗಳಿಗೆ ಭೇಟಿ ಕೊಟ್ಟೆವು. ಗುಣ ಗುಹೆಯ ಕುರಿತು ಇಲ್ಲಿ ನಾಲ್ಕು ಮಾತುಗಳನ್ನು ಹೇಳಲೇಬೇಕು. ಈ ಗುಹೆ ಅತ್ಯಂತ ಸಂಕೀರ್ಣ ಹಾಗೂ ಅಪಾಯಕಾರಿಯಾಗಿದೆ. ಇದರ ಒಳಗೆ ಭೇಟಿ ನೀಡಲು ಮನುಷ್ಯರಿಗೆ ಸಾಧ್ಯವಿಲ್ಲ. ಈ ಕೇವ್ಸ್ ಅನ್ನು ಮುಚ್ಚಿ ಜನರು ಹೋಗದಂತೆ ನಿಷೇಧಿಸಲಾಗಿದೆ. ಈ ಗುಹೆಯ ಹೊರಗೆ ಅನೇಕ ಬೃಹದಾಕಾರದ ಮರಗಳಿದ್ದು, ಅವುಗಳ ದಪ್ಪ ದಪ್ಪ ಬೇರುಗಳು ಎಲ್ಲೆಡೆಯೂ ಹರಡಿಕೊಂಡಿವೆ. ನೂರು ವರ್ಷಗಳಿಗಿಂತಲೂ ಹಳೆಯದಾದ ಈ ಮರಗಳನ್ನು ನೋಡಿ ಜನರು ಆನಂದಿಸುತ್ತಾರೆ.

ಇನ್ನು ಗುಣಾ ಕೇವ್ಸ್ ಇತಿಹಾಸಕ್ಕೆ ಸಂಬಂಧಿಸಿದಂತೆ, ಕೇರಳದಿಂದ 2006ರಲ್ಲಿ ಬಂದ ಹುಡುಗರ ಗುಂಪೊಂದು ಕಾವಲುಗಾರನ ಕಣ್ಣು ತಪ್ಪಿಸಿ ಈ ನಿಷೇಧಿತ ಗುಹೆಯನ್ನು ಪ್ರವೇಶಿಸಿಬಿಡುತ್ತದೆ. ಅದರಲ್ಲಿ ಒಬ್ಬ ಹುಡುಗ ಅಕಸ್ಮಾತ್ ಈ ಗುಹೆಯೊಳಗೆ ಸುಮಾರು 120 ಅಡಿಗಳಷ್ಟು ಕೆಳಗೆ ಬಿದ್ದುಬಿಡುತ್ತಾನೆ. ಆ ಅನಾಹುತವನ್ನು ಉಳಿದ ಹುಡುಗರು ಹಾಗೂ ಪೊಲೀಸರು ಹೇಗೆ ಎದುರಿಸಿದರು, ಅಲ್ಲದೆ ಆ ಹುಡುಗನನ್ನು ಜೀವಂತವಾಗಿ ಎಷ್ಟು ಸಾಹಸದಿಂದ ಹೊರಗೆ ತಂದರು ಎಂಬ ಸತ್ಯ ಘಟನೆಯನ್ನು ಇಟ್ಟುಕೊಂಡು 2024ರಲ್ಲಿ ಮಲಯಾಳಂನಲ್ಲಿ ʼಮಂಜುಮೆಲ್ ಬಾಯ್ಸ್ʼ ಎಂಬ ಸಿನಿಮಾ ತೆಗೆಯಲಾಯಿತು. ಇಲ್ಲಿಂದ ನಾವು ಪೈನ್ ಫಾರೆಸ್ಟ್‌ಗೆ ಭೇಟಿ ನೀಡಿ, ಅಲ್ಲಿನ ಇಬ್ಬನಿಯಿಂದ ಆವರಿಸಿದ್ದ ವಾತಾವರಣದಲ್ಲಿ ಸಾವಿರಾರು ಪೈನ್ ಮರಗಳನ್ನು ನೋಡಿ ಆನಂದಿಸಿದೆವು.

ಜೋಸ್ಟೆಲ್‌ ಅನುಭವ

ಮೂರನೆಯ ದಿನ ನಾವು 'ಪೋಬರೈ ವಿಲೇಜ್'ಗೆ ಭೇಟಿ ನೀಡಿದೆವು. ಈ ಹಳ್ಳಿಯು ಒಂದು ಅದ್ಭುತ ದೃಶ್ಯಕಾವ್ಯದಂತಿದೆ. ಪ್ರವಾಸಿಗರನ್ನು ಹಳ್ಳಿಯ ಒಳಗೆ ಬಿಡುವುದಿಲ್ಲ, ಆದರೆ ಆ ವ್ಯೂ ಪಾಯಿಂಟ್ ಮೂಲಕ ದೂರದಿಂದಲೇ ನೋಡಿ ಆನಂದಿಸಬಹುದು.

ನಾವು ಒಂದು ರಾತ್ರಿ ಹಾಗೂ ಇಡೀ ಒಂದು ದಿನವನ್ನು ಒಂದು ಹೋಂ ಸ್ಟೇನಲ್ಲಿ ಕಳೆದಿದ್ದೆವು. ಅದರ ಹೆಸರು 'ಜೋಸ್ಟೆಲ್'. ಇದೊಂದು ಅದ್ಭುತವಾದ ಸ್ಥಳವಾಗಿದ್ದು, ಒಬ್ಬ ಕವಿಯ ಕಲ್ಪನೆಯ ಅನುಷ್ಠಾನದಂತಿದೆ. ಈ ಸ್ಟೇ ಇಂದ ಹೊರಗೆ ಕಣ್ಣು ಹಾಯಿಸಿದಲ್ಲೆಲ್ಲಾ ಪ್ರಕೃತಿಯ ಸೊಬಗೋ ಸೊಬಗು! ಒಮ್ಮೆ ಮೋಡಗಳೆಲ್ಲಾ ಸೇರಿ ಇಡೀ ಬೆಟ್ಟ ಗುಡ್ಡಗಳನ್ನೆಲ್ಲಾ ಮುಚ್ಚಿ ಬಿಡುತ್ತವೆ. ಇನ್ನೊಂದು ಸ್ವಲ್ಪ ಹೊತ್ತಿಗೆ ಮೋಡಗಳು ಎಲ್ಲಾ ಕಡೆ ಚದುರಿಕೊಂಡು ಗುಡ್ಡ ಬೆಟ್ಟಗಳ ದಿವ್ಯ ದರ್ಶನವಾಗುತ್ತದೆ. ಇದೊಂದು ಅತ್ಯಂತ ಖುಷಿ ನೀಡುವ ಸ್ಥಳ. ಬೆಳಗ್ಗೆ 5:00 ಗಂಟೆಗೆ ಇಲ್ಲಿ ಸೂರ್ಯೋದಯದ ಸುಂದರ ದೃಶ್ಯವನ್ನು ಕಾಣಬಹುದು. ಅದೊಂದು ಕನಸಿನ ಲೋಕವೇನೋ ಎಂಬ ಭಾವನೆ ಉಕ್ಕಿಬಿಡುತ್ತದೆ. ಇಷ್ಟೆಲ್ಲಾ ಅದ್ಭುತಗಳನ್ನೆಲ್ಲಾ ತನ್ನ ಸೆರಗಿನಲ್ಲಿ ಇಟ್ಟುಕೊಂಡಿರುವ ಕೊಡೈಕೆನಾಲ್‌ಗೆ ನಾವು 'ಜೈ' ಎಂದೆವು.

ಮಾಹಿತಿ ಪೆಟ್ಟಿಗೆ:

ಅಷ್ಟು ದಿನಗಳು ಕೊಡೈಕೆನಾಲ್ ಸುತ್ತಲೂ ಓಡಾಡಿದಾಗ ನಾವು ಮುಖ್ಯವಾಗಿ ಗಮನಿಸಿದ್ದು ತಮಿಳುನಾಡಿನ ಜನರ ಭಾಷಾಭಿಮಾನವನ್ನು. ಲಕ್ಷಾಂತರ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಅಲ್ಲಿನ ನಿವಾಸಿಗಳು ಎಲ್ಲರೊಂದಿಗೂ ತಮ್ಮ ಮಾತೃಭಾಷೆಯಲ್ಲೇ ಸಂವಹನ ನಡೆಸುತ್ತಾರೆ. ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರ ಅನಿವಾರ್ಯವಾಗಿ ಇಂಗ್ಲಿಷ್ ಬಳಸುತ್ತಾರೆ.

ಲೇಖಕರು: ಹವ್ಯಾಸಿ ಬರಹಗಾರರು