ವಾಲ್ಪರಾಯ್ ಹಸಿರ ನಡುವೆ
ಊಟಿಯ ಸಮೀಪದಲ್ಲಿ ಪ್ರವಾಸಿಗರಿಗೆ ಅಷ್ಟಾಗಿ ತಲುಪದಿರುವ, ಇನ್ನೂ ಶಾಂತ ಪರಿಸರ ಹೊಂದಿರುವ " ವಾಲ್ಪರಾಯ್ " ಪ್ರಕೃತಿ ಪ್ರಿಯರ ಮನಸೂರೆಗೈಯಲಿದೆ. ಬಿಡುವಿದ್ದರೆ ವಾಲ್ಪರಾಯ್ ಗೆ ನಿಮ್ಮ ಮುಂದಿನ ಪ್ರವಾಸವನ್ನು ಕೈಗೊಳ್ಳಿ...
- ಸುಪ್ರೀತಾ ವೆಂಕಟ್
ಕೆಲವೊಂದು ಊರುಗಳು ತನ್ನೊಳಗೆ ಅದೆಷ್ಟೋ ಸೌಂದರ್ಯವಿದ್ದರೂ, ಪ್ರವಾಸಿಗರಿಗೆ ತಲುಪದೇ ಇರಬಹುದು. ಬಹುಶಃ ಪ್ರವಾಸಿಗರು ಭೇಟಿ ನೀಡದೆ ಇರೋದರಿಂದ, ಅವುಗಳಿನ್ನೂ ತಮ್ಮ ಸ್ವಾಭಾವಿಕ ಪ್ರಕೃತಿಯ ಸೊಬಗನ್ನು ಉಳಿಸಿಕೊಂಡಿರಬಹುದು. ಅಂತಹ ಊರುಗಳಿಗೆ ಹೋದವರು, ನಿಜವಾಗಿಯೂ ಪ್ರಕೃತಿಯ ಸಿರಿಯನ್ನು ಕಣ್ತುಂಬಿಕೊಂಡು ಬಂದಿದ್ದರೆ, ಅಂಥವರು ಆ ಊರುಗಳನ್ನು ತಮ್ಮ ಸಂಬಂಧಿಗಳಿಗೆ ಅಥವಾ ಗೆಳೆಯರಿಗೆ ಮಾಹಿತಿಯನ್ನು ನೀಡುತ್ತಾರೆ. ಈಗಂತೂ ಗೂಗಲ್ ರಿವ್ಯೂಸ್, ಉಳಿದುಕೊಂಡ ಹೊಟೇಲ್ ಗಳು ಕೇಳುವ ರಿವ್ಯೂಸ್ ನೋಡಿ ಜನ ಹೋಗುತ್ತಾರೆ. ಗೆಳೆಯರೊಬ್ಬರು ನೀಡಿದ ಸಲಹೆಯ ಮೇರೆಗೆ ಊಟಿಯ ಸಮೀಪವಿರುವ, ಅಷ್ಟೇನೂ ಪ್ರವಾಸಿಗರಿಗೆ ತಲುಪದಿರುವ, ಇನ್ನೂ ಶಾಂತ ಪರಿಸರ ಹೊಂದಿರುವ " ವಾಲ್ಪರಾಯ್ " ಎನ್ನುವ ಊರಿಗೆ ಪ್ರವಾಸ ಬೆಳೆಸಿದೆವು.

ಅತ್ತಿಬೆಲೆಯಿಂದ ಹೊರಟು ಹೊಸೂರು ಮೂಲಕ ಹೋಗುವುದಾದರೆ ಸುಮಾರು 400 ಕಿಮೀಗಳ ಪ್ರಯಾಣ. ಕೊಯಂಬತ್ತೂರು ಜಿಲ್ಲೆಯ ಒಂದು ತಾಲೂಕು ಈ "ವಾಲ್ಪರಾಯ್ ". ಈ ಊರು ಇರುವುದು ಅತೀ ಎತ್ತರದ ಪ್ರದೇಶದಲ್ಲಿ. ಪಶ್ಚಿಮ ಘಟ್ಟಗಳ ಅಣ್ಣ ಮಲಾಯ್ ಪರ್ವತ ಶ್ರೇಣಿಯಲ್ಲಿ ಬರುವುದು. ಇಲ್ಲಿ ಸುತ್ತ ಕಣ್ಣು ಹಾಯಿಸಿದಷ್ಟು ಇರುವುದು ಟೀ ಎಸ್ಟೇಟ್'ಗಳು. ಇಲ್ಲಿಗೆ ತಲುಪಬೇಕಾದರೆ ಸುಮಾರು ನಲ್ವತ್ತು ತಿರುವುಗಳುಳ್ಳ ಘಾಟಿಯಿದೆ. ತೀರಾ ಎಚ್ಚರಿಕೆಯಿಂದ ಡ್ರೈವ್ ಮಾಡಬೇಕಾವುದು. ವಾಲ್ಪರಾಯ್ ಅನ್ನು ಏಳನೆಯ ಸ್ವರ್ಗದೂರು ಎಂದು ಕರೆಯುವುದೂ ಇದೆ.
ಸಿನ್ನ ದೊರೈ ಬಂಗಲೆ
ಸಿನ್ನ ದೊರೈ ಅಂದರೆ ಸಣ್ಣ ದೊರೆ. ಈ ಬಂಗಲೆಗಳು ಮುರುಗಪ್ಪ ಎನ್ನುವವರಿಗೆ ಸೇರಿತ್ತು. ಮುರುಗಪ್ಪರವರ ಕುಟುಂಬವು ಏಲಕ್ಕಿ, ರಬ್ಬರ್ ಹೀಗೆ ಹಲವು ಬೆಳೆಗಳನ್ನು ಬೆಳೆಸಿ ಕೊನೆಗೆ ಟೀ ಬೆಳೆಯಿಂದ ಯಶಸ್ಸು ಕಂಡರು. ಇವರದ್ದು ಐದು ಬಂಗಲೆಗಳಿವೆ, ವಾಲ್ ಪರಾಯ್ ಅಲ್ಲಿ ಮೂರು - ಅಪ್ಪರ್ ಪರಲಾಯ್, ರೊಟ್ಟಿ ಕಡಾಯ್ ಹಾಗೂ ಮೌಲ್ ಮೆನ್ ಹೌಸ್. ನೀಲಗಿರೀಸ್ ಅಲ್ಲಿ ಮ್ಯಾಂಗೋ ರೇಂಜ್ ಹಾಗೂ ಸಕಲೇಶಪುರದಲ್ಲಿ ಕಾಡಮನೆ. ಎಲ್ಲಾ ಬಂಗಲೆಗಳೂ ತುಂಬಾ ಚೆನ್ನಾಗಿವೆ. ನಾವಿದ್ದಿದ್ದು ಮೌಲ್ ಮೆನ್ ಹೌಸ್, ವಾಲ್ ಪರಾಯ್. ಅಂದಿನ ಸೊಬಗನ್ನು ಇನ್ನೂ ಉಳಿಸಿಕೊಂಡಿದೆ. ಮಾರ್ಚ್ ತಿಂಗಳಲ್ಲಿ ಈ ಊರಿನ ತಾಪಮಾನ ಕೇವಲ 15-16° ಸೆಲ್ಷಿಯಸ್. ಇನ್ನು ಚಳಿಗಾಲ ಹಾಗೂ ಮಳೆಗಾಲದಲ್ಲಿ ಕೇಳುವಂತಿಲ್ಲ, ತೀರಾ ತಂಪಿರುವುದು. ಪ್ರವಾಸಿಗರ ಆಸಕ್ತಿಗೆ ತಕ್ಕಂತೆ ರುಚಿ ರುಚಿಯಾದ ವೆಜ್ ಅಥವಾ ನಾನ್ ವೆಜ್ ಅಡುಗೆ ತಯಾರಿಸುತ್ತಾರೆ. ಒಟ್ಟಾರೆಯಾಗಿ ಇಲ್ಲಿ ಉಳಿದುಕೊಳ್ಳುವುದು ಸೂಕ್ತವೆನಿಸುವುದು.

ಅಯ್ಯರ್ ಪಾಡಿ ಟೀ ಫ್ಯಾಕ್ಟರಿ
ವಾಲ್ಪರಾಯ್ ಅಲ್ಲಿ ಸುಮಾರು ಐವತ್ತರ ಮೇಲೆ ಟೀ ಎಸ್ಟೇಟ್ ಗಳಿವೆ ಹಾಗೆಯೇ ಅನೇಕ ಟೀ ಫ್ಯಾಕ್ಟರಿಗಳಿವೆ. ನಾವು ಹೋಗಿದ್ದು ಮೌಲ್ ಮೆನ್ ಹೌಸ್ ಇಂದ ಸುಮಾರು ನಾಲ್ಕು ಕಿಲೋ ಮೀಟರ್ ದೂರವಿದ್ದ ಅಯ್ಯರ್ ಪಾಡಿ ಟೀ ಫ್ಯಾಕ್ಟರಿಗೆ. ಇದರ ಒಳಗೆ ಭೇಟಿ ನೀಡಬಹುದು. ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳಲ್ಲಿ ಒಬ್ಬರು ಟೀ ಪೌಡರ್ ಮಾಡುವ ಎಲ್ಲಾ ವಿಧಾನಗಳನ್ನು ಬಗೆ ಬಗೆಯಾಗಿ ತಿಳಿಸಿ ಕೊಡುತ್ತಾರೆ, ಕಣ್ಣಾರೆ ಕಾಣಬಹುದು ಕೂಡ. ಇಲ್ಲಿ ಸಿಗುವ ನ್ಯಾಚುರಲ್ ಟೀ ಪೌಡರ್ ಬಹಳ ಪ್ರಸಿದ್ಧ. ಮಾಮೂಲಿ ಟೀ ಪೌಡರಿಗಿಂತ ಡಬಲ್ ಸ್ಪೂನ್ ಹಾಕಿ, ಟೀ ಪೌಡರ್ ಅನ್ನು ನೀರಲ್ಲಿ ಮೊದಲು ಕುದಿಸಿ ನಂತರ ಹಾಲು, ಸಕ್ಕರೆ ಬೆರೆಸಿದರೆ ಒಂದು ವಿಭಿನ್ನ ರುಚಿಯುಳ್ಳ ಟೀ ರೆಡಿ!

ಅಲ್ಲಿಯ ಇನ್ನಿತರ ಪ್ರವಾಸಿ ತಾಣಗಳೆಂದರೆ ಅಲಿಯರ್ ಡ್ಯಾಂ, ಇಂದಿರಾ ಗಾಂಧಿ ನ್ಯಾಶನಲ್ ಪಾರ್ಕ್, ಶೋಲಯರ್ ಡ್ಯಾಂ, ನಲ್ಲಮುಡಿ ವ್ಯೂ ಪಾಯಿಂಟ್, ಬಾಲಾಜಿ ದೇವಸ್ಥಾನ ಹೀಗೆ. ತೀರಾ ಪುಟ್ಟದಾದ ಪಟ್ಟಣವಾದರೂ, ಎರಡು ಮೂರು ದಿನಗಳಿಗೆ ಸಮಯ ಕಳೆಯಲು ಒಂದೊಳ್ಳೆಯ ಜಾಗವಿದು.