ಉಂಡು ಅಲ್ಲೇ ಮಲಗಿರಿ
ನಮ್ಮ ಹಳ್ಳಿ ಮನೆಯ ಪಡಸಾಲೆ ಗೊತ್ತಲ್ವಾ? ಅಂಥದ್ದೇ ಪಡಸಾಲೆ ಮೇಲೆ ಕೂರಿಸಿ ಬೆಚ್ಚಗಾಗುವ ಬಟ್ಟೆ ಮತ್ತು ಚಾಪೆ ಹೊದಿಸಿ ನಮ್ಮ ಮುಂದಕ್ಕೆ ಎತ್ತರದ ಮಣೆ ಇಟ್ಟರು. ಆ ಮಣೆಯ ಮೇಲೊಂದು ಅಗಲದ ಎಲೆಯಿಟ್ಟು ದಾಲ್ ಬಾಟಿ ಚೋಖಾ ಬಡಿಸಿದರು. ಅದಕ್ಕೆ ನಾವು ಕೇಳುವಷ್ಟು ತಾಜಾ ತುಪ್ಪ ಸುರಿದರು. ಉಂಡೆ ಗಾತ್ರದ ಬಾಟಿಯನ್ನು ದಾಲ್‌ನೊಂದಿಗೆ ಕಲಸಿ ಅದಕ್ಕೆ ಮತ್ತೊಂದಿಷ್ಟು ತುಪ್ಪ ಮತ್ತು ಖಾರವಾದ ಪುದಿನ ಚಟ್ನಿ ಕಲಸಿಕೊಂಡು ತಿಂದೆವು. ಕೊನೆಗೆ ಸಣ್ಣ ಮಡಕೆಯಲ್ಲಿ ದೇವತೆಗಳು ಮಾತ್ರ ಮಾಡಬಹುದಾದಂಥ ಪಾಯಸ ಕೊಟ್ಟರು. ಆಹಾ! ಸ್ವರ್ಗಕ್ಕೆ ಕಿಚ್ಚು.
ವಾರಾಣಸಿಯ ಉರಿ ಬಿಸಿಲಿಗೆ ನಾವು ಬಳಲಿದ್ದೆವು. ನಮ್ಮ ಉದರ ದೈವವೂ ಹಸಿವಿನಿಂದ ಕಾಂವ್ ಕಾಂವ್ ಎನ್ನುತ್ತಿತ್ತು. ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ನಾವು ಪ್ರಯಾಣಿಸುತ್ತಿದ್ದ ಟಿಟಿ ಗಾಡಿ ‘BAATI CHOKHA- Taste of Banaras’ ಎಂಬ ಹೊಟೇಲ್ ಮುಂದೆ ನಿಂತುಕೊಂಡಿತು. ನಾವು ಒಳಗೆ ಹೋಗುವವರೆಗೂ ಅದು ಹೊಟೇಲ್ ಎಂಬ ಅಂದಾಜು ನಮಗೆ ಸಿಗಲಿಲ್ಲ. ಅದೊಂದು ಹಳ್ಳಿ ಮಾದರಿಯ ಹಳೆಯ ಹೊಟೇಲ್. ಜನ ಗಿಜುಗುಡುತ್ತಿದ್ದರು. ಉಂಡು ಮೇಲೆದ್ದವರು ಅಲ್ಲಿಯೇ ಸೋಫಾ ಮೇಲೆ ಕೂತು ಬೀಸಣಿಗೆಯಿಂದ ಗಾಳಿ ಬೀಸಿಕೊಳ್ಳುತ್ತಿದ್ದರು. ಇನ್ನೂ ಕೆಲವರು ಉಂಡದ್ದನ್ನು ಅರಗಿಸಿಕೊಳ್ಳಲಾಗದೆ ಅಲ್ಲಿಯೇ ಮಂಚದ ಮೇಲೆ ಅತ್ತೆ ಮನೆಯ ಅಳಿಯನಂತೆ ಸುಖವಾಗಿ ಮಲಗಿದ್ದರು. ಇತ್ತ ರಾಕ್ಷಸ ಗಾತ್ರದ ಫ್ಯಾನ್ ಚಾಲೂ ಆಗಿದ್ದರೂ ನಮ್ಮ ಸೆಕೆ ಆರಲಿಲ್ಲ. ಅಷ್ಟರೊಳಗೆ ನಮ್ಮ ಗುಂಪಿನಲ್ಲಿದ್ದ ಒಬ್ಬರು ʼದಾಲ್ ಬಾಟಿ ಚೋಖಾ ದೇದೋ ಭಯ್ಯಾʼ ಎಂದರು. ಅರೆ.. ನಾನು ʼಬಾಟಿ ಚೋಖಾʼ ಆ ಹೊಟೇಲ್‌ನ ಹೆಸರು ಎಂದುಕೊಂಡಿದ್ದೆ. ಆಮೇಲೆ ತಿಳಿಯಿತು ಅದು ಉತ್ತರ ಪ್ರದೇಶದ ಫೇಮಸ್ ಖಾದ್ಯ. ಅದರಲ್ಲೂ ಬನಾರಸ್‌ನಲ್ಲಿ ದಾಲ್ ಬಾಟಿ ಚೋಖಾಕ್ಕಂತಲೇ ನೂರಾರು ಹೊಟೇಲ್‌ಗಳಿವೆ. ದಕ್ಷಿಣದವರಿಗೆ ಬಾಟಿ ಚೋಖಾದ ಪರಿಚಯ ಅಷ್ಟಾಗಿ ಇರಲಿಕ್ಕಿಲ್ಲ. ತಿಂಡಿಪೋತರಿಗೆ ಪರಿಚಯವಿದ್ದರೂ ಇರಬಹುದು. ಆದರೆ ʼಸಿಕ್ಕಿದ್ದನ್ನು ತಿಂದರಾಯಿತುʼ ಎನ್ನುವ ಆಸಾಮಿಗಳಿಗೆ ಯಾವ ಬಾಟಿ ಮತ್ತು ಚೋಖಾವೂ ಗೊತ್ತಿರುವುದಿಲ್ಲ. ಬೆಂಗಳೂರಿನಲ್ಲೂ ಬಾಟಿ ಚೋಖಾ ತಯಾರಿಸುವ ಹತ್ತಾರು ಹೊಟೇಲ್‌ಗಳಿವೆ ಎಂಬುದೂ ನನಗೆ ಆಮೇಲೆ ಗೊತ್ತಾಯಿತು.
ಇದನ್ನೂ ಓದಿ :Road to Heaven... ಕಛ್‌ನಿಂದ ಸ್ವರ್ಗಕ್ಕೆ ಮೂರೇ ಗೇಣು
ರಾಜ ಮರ್ಯಾದೆ
ಹೊಟೇಲ್ ಒಳಗೆ ಹೋಗಿದ್ದೇ ತಡ ಅಲ್ಲಿದ್ದ ವೆಯಿಟರ್ ಮತ್ತು ಕ್ಯಾಶರ್ ಬಾಟಿ ಚೋಖಾದ ಮಹಿಮೆಯನ್ನು ಹೇಳಲು ಶುರು ಮಾಡಿದರು. ಬಾಟಿ ತಯಾರಾಗುವವರೆಗೂ ಮಂಚದ ಮೇಲೆ ಸ್ವಲ್ಪ ಹೊತ್ತು ಮಲಗಿ ವಿಶ್ರಾಂತಿ ಪಡೆಯಿರಿ ಎಂದರು. ʼತಡವಾದರೂ ನೀವು ಕಾಯಲೇಬೇಕು.

ಇಷ್ಟು ದೂರ ಬಂದು ಬಾಟಿ ಚೋಖಾ ತಿನ್ನದಿದ್ದರೆ ಹೇಗೆ? ನೀವು ಎರಡು ತಿಂದು ನೋಡಿ ಸಾಕು. ನಂತರ ಮತ್ತೆರಡನ್ನು ನೀವಾಗಿಯೇ ಹಾಕಿಸಿಕೊಂಡು ತಿನ್ನುತ್ತೀರಿʼ ಎಂದರು. ಥೇಟ್ ನಮ್ಮ ಮಂಡ್ಯದ ಮುದ್ದೆಯಂತೆ ಮತ್ತು ಮುಟ್ಟಿದರೆ ಕಲ್ಲಿನಂತಿದ್ದ ಬಾಟಿಯನ್ನು ಜಗಜಟ್ಟಿ ಮಲ್ಲನಂತೆ ಮುರಿದು ತಿನ್ನುವುದೇ ನನಗೆ ಸಾಹಸವಾಗಿತ್ತು. ಆದರೆ ಹೊಟೇಲ್‌ನವರು ಕೊಟ್ಟ ರಾಜ ಮರ್ಯಾದೆಗಾದರೂ ರುಚಿ ಸವಿದು ನೋಡಬೇಕೆನಿಸಿತು. ನಮ್ಮ ಹಳ್ಳಿ ಮನೆಯ ಪಡಸಾಲೆ ಗೊತ್ತಲ್ವಾ? ಅಂಥದ್ದೇ ಪಡಸಾಲೆ ಮೇಲೆ ಕೂರಿಸಿ ಬೆಚ್ಚಗಾಗುವ ಬಟ್ಟೆ ಮತ್ತು ಚಾಪೆ ಹೊದಿಸಿ ನಮ್ಮ ಮುಂದಕ್ಕೆ ಎತ್ತರದ ಮಣೆ ಇಟ್ಟರು. ಆ ಮಣೆಯ ಮೇಲೊಂದು ಅಗಲದ ಎಲೆಯಿಟ್ಟು ದಾಲ್ ಬಾಟಿ ಚೋಖಾ ಬಡಿಸಿದರು. ಅದಕ್ಕೆ ನಾವು ಕೇಳುವಷ್ಟು ತಾಜಾ ತುಪ್ಪ ಸುರಿದರು. ಉಂಡೆ ಗಾತ್ರದ ಬಾಟಿಯನ್ನು ದಾಲ್‌ನೊಂದಿಗೆ ಕಲಸಿ ಅದಕ್ಕೆ ಮತ್ತೊಂದಿಷ್ಟು ತುಪ್ಪ ಮತ್ತು ಖಾರವಾದ ಪುದಿನ ಚಟ್ನಿ ಕಲಸಿಕೊಂಡು ತಿಂದೆವು. ಕೊನೆಗೆ ಸಣ್ಣ ಮಡಕೆಯಲ್ಲಿ ದೇವತೆಗಳು ಮಾತ್ರ ಮಾಡಬಹುದಾದಂಥ ಪಾಯಸ ಕೊಟ್ಟರು. ಆಹಾ! ಸ್ವರ್ಗಕ್ಕೆ ಕಿಚ್ಚು.
ಎರಡು ಬಾಟಿಗೆ ಸುಸ್ತು
ಬಾಟಿ ಮತ್ತು ಚೋಖಾ ತಯಾರಾಗುವುದು ತಡವಾಗುತ್ತದೆ. ಆದರೆ ತಯಾರದ ಕೂಡಲೇ ಅಲ್ಲಿನ ಸಪ್ಲೈಯರ್‌ಗಳು ಲಗುಬಗೆಯಿಂದ ಬಿಸಿಬಿಸಿಯಾದ ಬಾಟಿಯನ್ನು ಎಲೆಯ ಮೇಲೆ ಇಡುತ್ತಾ ಹೋಗುತ್ತಾರೆ. ಅದರ ಮೇಲೆ ಮೇಲಿಂದ ಕೆಳಕ್ಕೆ ತುಪ್ಪ ಸುರಿಯುತ್ತಾರೆ. ಹೊಸಬರಿಗೆ ಚೋಖಾ ಮತ್ತು ಚಟ್ನಿ ಬೆರೆಸಿಕೊಂಡು ಹೇಗೆ ತಿನ್ನಬೇಕು ಎಂಬುದನ್ನೂ ಹೇಳಿಕೊಡುತ್ತಾರೆ. ಅದನ್ನು ಹದವಾಗಿ ಕಲಸುವುದೂ ಒಂದು ಕಲೆ. ನೀವು ಒಂದು ಬಾಟಿಗೆ ಸ್ವಲ್ಪವೇ ದಾಲ್ ಮತ್ತು ಚೋಖಾ ಬೆರೆಸಿ ತಿಂದರೆ ನಮ್ಮಪ್ಪರಾಣೆಗೂ ಹೊಟ್ಟೆಯೊಳಗೆ ಸೇರುವುದಿಲ್ಲ. ಗಟ್ಟಿಯಾದ ಬಾಟಿಗೆ ಒಂದು ಬಟ್ಟಲು ದಾಲ್ ಮತ್ತು ಒಂದು ಸೌಟು ಚೋಖಾ ಬೆರೆಸಿ, ಅದರ ಜತೆಗೆ ಚಟ್ನಿ ಬೆರೆಸಿ ತೆಳ್ಳಗೆ ಮಾಡಿಕೊಂಡು ತಿನ್ನಬೇಕು. ಗಟ್ಟಿ ಮೊಸರು ಬೆರೆಸಿ ತಿಂದರೂ ಟೇಸ್ಟಿಯಾಗಿರುತ್ತದೆ. ನೀವೇನೇ ಹೇಳಿ; ಉತ್ತರದವರು ಒಂದು ಸಿಟ್ಟಿಂಗ್‌ಗೆ ನಾಲ್ಕೈದು ಬಾಟಿ ತಿಂದು ತೇಗುತ್ತಾರೆ. ನಮ್ಮಂಥವರಿಗೆ ಎರಡು ತಿಂದು ಏಳುವಷ್ಟರೊಳಗೆ ಸುಸ್ತಾಗಿರುತ್ತದೆ. ಅಯ್ಯೋ! ಈ ಬಾಟಿ ಚೋಖಾ ಸಹವಾಸವೇ ಸಾಕೆನಿಸುತ್ತದೆ. ಕೊನೆಗೆ ಮಡಕೆಗಳಲ್ಲಿ ಮಸಾಲೆ ಮಜ್ಜಿಗೆ ಕೊಡುತ್ತಾರೆ ನೋಡಿ. ಅದು ದೇವಲೋಕದ ಸುರಪಾನದಂತಿರುತ್ತದೆ. ಇನ್ನು ಅವರು ಕೊಡುವ ಪಾಯಸವಂತೂ ಮೊದಲೇ ಹೇಳಿದಂತೆ ದೇವತೆಗಳು ಮಾತ್ರ ಮಾಡಬಹುದಾದ ಪಾಯಸದಂತಿರುತ್ತದೆ.

ಉಂಡು ಅಲ್ಲೇ ಮಲಗಿ
ಬಾಟಿ ಚೋಖಾ ತಿಂದ ನಂತರ ನಿಮಗೆ ಕುಂಭಕರ್ಣನಂಥ ನಿದ್ದೆ ಬರಬಹುದು. ನೀವು ಅಲ್ಲಿಯೇ ಇರುವ ಮಂಚದ ಮೇಲೆ ದಿವಿನಾಗಿ ಮಲಗಿ ನಿದ್ರಿಸಬಹುದು. ಯಾರೂ ನಿಮ್ಮ ತಂಟೆಗೆ ಬರುವುದಿಲ್ಲ. ಆದರೆ ಜನರ ಕೂಗಾಟಕ್ಕೆ ನಿಮಗೆ ಅಲ್ಲಿ ನಿದ್ದೆ ಹತ್ತುವುದಿಲ್ಲ. ಹೊಟೇಲ್ ಸುತ್ತಲಿನ ಕಲಾಕೃತಿ ಮತ್ತು ವೀಕ್ಷಣೆಗಂತಲೇ ಇರಿಸಿರುವ ಕರಕುಶಲ ವಸ್ತುಗಳನ್ನು ಕಣ್ತುಂಬಿಕೊಂಡು ಫೊಟೋಶೂಟ್ ಮಾಡಿಕೊಳ್ಳಬಹುದು. ನೀವು ಬಾಟಿ ಚೋಖಾ ತಿನ್ನುವಾಗ ಅಪ್ಪಿತಪ್ಪಿಯೂ ಅಕ್ಕಪಕ್ಕದವರನ್ನು ನೋಡಬೇಡಿ. ಅವರು ತಿನ್ನುವ ಶೈಲಿ ನಿಮಗೆ ಭಯ ಹುಟ್ಟಿಸಬಹುದು.
ಆದರೆ ನೆನಪಿರಲಿ-ಒಂದು ಆಹಾರ ಆಯಾ ನೆಲದ ಸಂಸ್ಕೃತಿಯನ್ನು ಸಾರುತ್ತದೆ ಎಂಬುದನ್ನು ಮಾತ್ರ ನಾವ್ಯಾರು ಅಲ್ಲಗಳೆಯುವಂತಿಲ್ಲ. ಸಾಕಷ್ಟು ಪ್ರದೇಶಗಳಲ್ಲಿ ಆಹಾರವೇ ಅಲ್ಲಿನ ಸಂಸ್ಕೃತಿ ಮತ್ತು ಸಂಪ್ರದಾಯಗಳ ಆತ್ಮ!