• ವೇದಾವತಿ ಹೆಚ್. ಎಸ್.

ಡಾರ್ಜಿಲಿಂಗ್, ಪಶ್ಚಿಮ ಬಂಗಾಳದ ಒಂದು ಅದ್ಭುತ ನಗರ. ಜನಪ್ರಿಯ ಮತ್ತು ತಂಪಾದ ಗಿರಿಧಾಮವಾಗಿದೆ. ಮಾರ್ಚ್- ಜೂನ್ ವರೆಗೆ ಸಾಕಷ್ಟು ಪ್ರವಾಸಿಗರು ಪ್ರಕೃತಿ ಸೌಂದರ್ಯ ಸವಿಯಲು ಇಲ್ಲಿಗೆ ಹೊರಟು ಬರುತ್ತಾರೆ. ಬೇಸಿಗೆ ದಿನಗಳಲ್ಲಿ ಇಲ್ಲಿ ಕೊರೆಯುವ ಚಳಿ. ಮಧ್ಯಾಹ್ನದ ಸಮಯದಲ್ಲಿ ಮಾತ್ರ ಸುಮಾರು 23 ಡಿಗ್ರಿ ಸೆಲ್ಸಿಯಸ್ ನಷ್ಟಿರುತ್ತದೆ. ಮಳೆಯಂತು ಆಗಾಗ ಸುರಿಯುತ್ತಲೇ ಇರುತ್ತದೆ. ವಸಂತಕಾಲದಲ್ಲಿ ಸುಂದರ ಹೂವುಗಳು ಅಲ್ಲಲ್ಲಿ ಅರಳಿ ನಿಂತಾಗ ಅದನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ಸಮಯದಲ್ಲಿ ನೀವೂ ಇದನ್ನು ಕಂಡರೆ ಡಾರ್ಜಿಲಿಂಗ್‌ಎನ್ನುವ ಬದಲಿಗೆ ಡಾರ್ಲಿಂಗ್‌ ಎನ್ನಬಹುದು, ಅಷ್ಟು ಮನಮೋಹಕವಾಗಿರುತ್ತದೆ.

ಕಾರಿನಲ್ಲಿ ಕೂತು ಡಾರ್ಜಿಲಿಂಗ್‌ನ ಸೌಂದರ್ಯ ಕುಣ್ತುಂಬಿಕೊಳ್ಳುತ್ತಾ ಹೋದಂತೆ ಹೊಸ ಪ್ರಪಂಚದಲ್ಲಿರುವಂತೆ ಭಾಸವಾಗುತ್ತದೆ. ಪರ್ವತಗಳ ತಿರುವುಗಳಲ್ಲಿ ಸುತ್ತುತ್ತಾ ಬೆಟ್ಟಗಳ ಮೇಲಕ್ಕೆ ಕಾರಿನಲ್ಲೇ ಚಲಿಸುತ್ತಾ ಹೋಗಬಹುದು.

ಆಗಾಗ್ಗೆ ಮಂಜಿನಿಂದ ಮಬ್ಬಾದ ಮುಸುಕಿನ ವಾತಾವರಣದೊಂದಿಗೆ ಬೇಸಿಗೆಯಲ್ಲೂ ಚಳಿ ಅನುಭವವಾಗುತ್ತದೆ. ಹಸಿರುಟ್ಟ ರಮಣೀಯ ಗಿರಿಧಾಮ, ಚಹಾ ತೋಟಗಳು, ಪೈನ್ ಮರಗಳ ಕಾಡುಗಳು ಅಲ್ಲಿನ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಡಾರ್ಜಿಲಿಂಗ್‌ನ ಹೆಚ್ಚಿನ ಜನರ ಆಡು ಭಾಷೆ ನೇಪಾಳಿ. ಇದರ ಜತೆಗೆ ಹಿಂದಿ, ಬೆಂಗಾಲಿ ಮತ್ತು ಇಂಗ್ಲೀಷ್ ಭಾಷಿಗರನ್ನು ಅಲ್ಲಿ ನೋಡಬಹುದು. ತುಕ್ಪಾ ಎಂಬ ನೂಡಲ್ಸ್ ಸೂಪ್ ಡಾರ್ಜಿಲಿಂಗ್‌ನ ಪ್ರಸಿದ್ಧ ಆಹಾರ.

ಡಾರ್ಜಿಲಿಂಗ್‌ಗೆ ಹೋದಾಗ ಇವುಗಳನ್ನು ಮರೆಯಲೇಬೇಡಿ

ರಾಕ್ ಗಾರ್ಡನ್ ಮತ್ತು ಗಂಗಾ ಮಾಯಾ ಪಾರ್ಕ್

ರಾಕ್ ಗಾರ್ಡನ್, ಡಾರ್ಜಿಲಿಂಗ್‌ನಿಂದ ಸುಮಾರು 10 ಕಿಮೀ ದೂರದಲ್ಲಿದೆ. ಇದನ್ನು 1990ರ ದಶಕದಲ್ಲಿ ಪರಿಸರ ಸಂರಕ್ಷಣೆ ಮತ್ತು ಪ್ರವಾಸೋದ್ಯಮಕ್ಕಾಗಿ ನಿರ್ಮಿಸಲಾಯಿತು. ಅಲ್ಲಿಗೆ ಹೋದಾಗ, ಮೇಲಿಂದ ಕೆಳಗೆ ಸರದಿ ಸಾಲಾಗಿ ಧುಮ್ಮಿಕ್ಕುವ ಜಲಪಾತಗಳು, ಸುಂದರ ಹೂವಿನ ತೋಟಗಳು, ವೈವಿಧ್ಯ ಜಾತಿಯ ಪಕ್ಷಿಗಳು, ಶಿಲಾ ರಚನೆಗಳನ್ನು ಹೊಂದಿರುವ ತಾರಸಿ ಉದ್ಯಾನಗಳನ್ನು ನೋಡಬಹುದು. ಗಂಗಾ ಮಾಯಾ ಪಾರ್ಕಿನ ಸರೋವರದಲ್ಲಿ ದೋಣಿ ವಿಹಾರ ಸೌಲಭ್ಯಗಳು ಇವೆ. ಇದು ರಾಕ್ ಗಾರ್ಢನ್‌ನಿಂದ 3 ಕಿಮೀ ದೂರದಲ್ಲಿದೆ.

ಸಿಮಾನಾ ವ್ಯೂ ಪಾಯಿಂಟ್

ಸಿಮಾನಾ ವ್ಯೂ ಪಾಯಿಂಟ್, ಭಾರತ ಮತ್ತು ನೇಪಾಳದ ಗಡಿಯಲ್ಲಿದೆ. ಕುಳಿತು ವಿಶ್ರಾಂತಿಯನ್ನು ಪಡೆಯುತ್ತಾ ಸುತ್ತಲಿನ ರಮ್ಯ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಮಿಕ್ಕೆಲ್ಲಾ ವ್ಯೂ ಪಾಯಿಂಟ್ ಗಳಿಗಿಂತ ಇಲ್ಲಿನ ನೋಟಗಳು ಆಕರ್ಷಕವಾಗಿರುತ್ತವೆ.

Darjeeling 4

ಮಿರಿಕ್

ಡಾರ್ಜಿಲಿಂಗ್‌ನಿಂದ ಸುಮಾರು 74 ಕಿಮೀ ದೂರದಲ್ಲಿ ಈ ಮಿರಿಕ್ ಇದೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಮತ್ತೆ ಮತ್ತೆ ಅಲ್ಲಿಗೆ ಹೋಗುವಂತೆ ಮನಸ್ಸು ಹಾತೊರೆಯುತ್ತದೆ. ರಸ್ತೆಯುದ್ದಕ್ಕೂ ಚಹಾ ತೋಟಗಳು, ಆಳವಾದ ಕಂದರಗಳು, ಕುರ್ಸಿಯೊಂಗ್ ಬೆಟ್ಟಗಳ ನೋಟ ಪ್ರವಾಸಿಗರನ್ನು ಹೆಚ್ಚು ಅಕರ್ಷಿಸುತ್ತದೆ. ಡಾರ್ಜಿಲಿಂಗ್ ಚಹಾ ವಿಶ್ವ ಪ್ರಸಿದ್ಧ. ಇತಿಹಾಸ ಪ್ರಸಿದ್ಧ ಗೋಪಾಲ್‌ದಾರ ಚಹಾ ತೋಟದ ಸೌಂದರ್ಯವನ್ನಂತು ಬಣ್ಣಿಸಲಾಗದು. ಅಲ್ಲದೆ ಸೌರೇನಿ, ಒಕೈಟಿ, ಥರ್ಬೋ, ಫುಗುರಿ ಇತ್ಯಾದಿ ಜನಪ್ರಿಯ ಟೀ ತೋಟಗಳು ಅಲ್ಲಿವೆ.

ಸರೋವರ

ಸುಮೆಂದು ಸರೋವರ ಅಥವಾ ಮಿರಿಕ್ ಸರೋವರವು ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ದೋಣಿ ವಿಹಾರ, ಕುದುರೆ ಸವಾರಿಯನ್ನು ಇಲ್ಲಿ ಆನಂದಿಸಬಹುದು. ಮಳೆಬಿಲ್ಲು ಹೆಸರಿನ ಕಮಾನು ಸೇತುವೆಯನ್ನು ಈ ಸರೋವರಕ್ಕೆ ನಿರ್ಮಿಸಿದ್ದಾರೆ. ಮೀರಕ್ ಒಂದು ಬದಿಯಲ್ಲಿ ಉದ್ಯಾನ ಮತ್ತು ಇನ್ನೊಂದು ಬದಿಯಲ್ಲಿ ಪೈನ್ ಮರಗಳ ಕಾನನದಿಂದ ಆವೃತವಾಗಿದೆ.

ಪಶುಪತಿ ನಗರ

ಮೀರಕ್‌ ನಿಂದ ಕೇವಲ 18ಕಿಮೀ ದೂರದಲ್ಲಿ ಪಶುಪತಿ ನಗರವಿದೆ. ಇಲ್ಲಿ ಶಿವನಿಗೆ ಸಮರ್ಪಿತ ಪಶುಪತಿನಾಥ ದೇವಾಲಯವಿದ್ದು, ಪುರಾತನ ಮತ್ತು ಪ್ರಸಿದ್ಧ ಸಾಂಸಕೃತಿಕ ಮಹತ್ವದ ಕ್ಷೇತ್ರವಾಗಿದೆ. ಜತೆಗೆ ಇಲ್ಲಿನ ಪಶುಪತಿ ನಗರ ಮಾರುಕಟ್ಟೆಯಲ್ಲಿ, ಉಣ್ಣೆಯ ಬಟ್ಟೆಗಳು, ಕೈಮಗ್ಗದ ಬಟ್ಟೆಗಳು, ವರ್ಣರಂಜಿತ ಟೋಪ್ಪಿಗೆಗಳು, ಜಾಕೆಟ್‌ಗಳು, ಪಾದರಕ್ಷೆಗಳು, ಪ್ರಾಚೀನ ವಸ್ತುಗಳು, ಗೃಹೋಪಯೋಗಿ ವಸ್ತುಗಳು ಅಗ್ಗದಲ್ಲಿ ದೊರೆಯುತ್ತವೆ.

ಟೈಗರ್ ಹಿಲ್

ಟೈಗರ‍್ ಹಿಲ್. ಇದು ಡಾರ್ಜಿಲಿಂಗ್‌ ನಗರದಿಂದ 11 ಕಿಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ 8500 ಅಡಿ ಎತ್ತರದಲ್ಲಿದೆ. ಸೂರ್ಯನ ಮೊದಲ ಕಿರಣಗಳು ಕಾಂಚನಜುಂಗಾದ ಶಿಖರದ ಮೇಲೆ ಬೀಳುವ ಸುಂದರ ದೃಶ್ಯವನ್ನು ನೋಡಲು ಜನ ಸಾಗರವೇ ಅಲ್ಲಿ ನೆರೆದಿರುತ್ತದೆ. ಕಾಂಚನಜುಂಗಾದ ಅವಳಿ ಶಿಖರಗಳ ಮೇಲೆ ಸೂರ್ಯನ ಕಿರಣಗಳು ಬಿದ್ದಂತೆ ಸುಂದರವಾದ ಕಿತ್ತಳೆ ಬಣ್ಣಕ್ಕೆ ತಿರುಗುವ ದೃಶ್ಯ ನೋಡಲು ಅದ್ಭುತವಾಗಿರುತ್ತದೆ. ಹಿಮಚ್ಛಾದಿತ ಪರ್ವತಗಳ ಭವ್ಯ ನೋಟವು ಪ್ರವಾಸಿಗರ ಕಣ್ಮನ ಸೆಳೆಯುತ್ತದೆ.

ಬಟಾಸಿಯಾ ಲೂಪ್ ಮತ್ತು ಗೂರ್ಖಾ ಸೈನಿಕರ ಸ್ಮಾರಕ

ಬಟಾಸಿಯಾ ಲೂಪ್ ಡಾರ್ಜಿಲಿಂಗ್‌ನಿಂದ ಸುಮಾರು 5 ಕಿಮೀ ದೂರದಲ್ಲಿದೆ. ಈ ಲೂಪ್, ಸ್ವಾತಂತ್ರ‍್ಯ ಹೋರಾಟದಲ್ಲಿ ಜೀವ ತೆತ್ತ ಗೂರ್ಖಾ ಸೈನಿಕರ ಸ್ಮಾರಕಗಳನ್ನು ಒಳಗೊಂಡಿದೆ. ಇದು ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ ಅದ್ಭುತಗಳಲ್ಲಿ ಒಂದಾಗಿದೆ. ಬಟಾಸಿಯಾ ಲೂಪ್‌ನಲ್ಲಿ ಆಟಿಕೆ ರೈಲು 360ಡಿಗ್ರಿಯಲ್ಲಿ ಸುತ್ತು ಹಾಕಿಕೊಂಡು ಹೋಗುವುದನ್ನು ನೋಡುವುದೇ ಚೆಂದ. ಪ್ರವಾಸಿಗರಿಗಾಗಿ ನಿರ್ಮಿಸಲಾದ ಅರ್ಧವೃತ್ತಾಕಾರದ, ದೈತ್ಯ ರೈಲ್ವೆ ಲೂಪ್ ಇದಾಗಿದೆ.

ಪದ್ಮಜಾ ನಾಯ್ಡು ಹಿಮಾಲಯನ್ ಜೂಲಾಜಿಕಲ್ ಪಾರ್ಕ್

ಪದ್ಮಜಾ ನಾಯ್ಡು ಹಿಮಾಲಯನ್ ಜೂಲಾಜಿಕಲ್ ಪಾರ್ಕ್, ಹಿಮಾಲಯದ ಅಪರೂಪದ ಪ್ರಾಣಿಗಳನ್ನು ಸಂರಕ್ಷಿಸಿರುವುದಕ್ಕೆ, ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇಲ್ಲಿ ರೆಡ್ ಪಾಂಡಾ, ಹಿಮ ಚಿರತೆಗಳು, ಕಪ್ಪು ಕರಡಿ, ಬೊಗಳುವ ಜಿಂಕೆ, ನೀಲಿ ಮತ್ತು ಹಳದಿ ಮಕಾವ್, ಈಸ್ಟರ್ನ್ ಪ್ಯಾಂಗೊಲಿನ್, ಫೆಸೆಂಟ್, ಹಿಮಾಲಯನ್ ಮೋನಾಲ್, ಹಿಮಾಲಯನ್ ವುಲ್ಫ್, ರೆಡ್ ಜಂಗಲ್ ಫೌಲ್, ರಾಯಲ್ ಬೆಂಗಾಲ್ ಟೈಗರ್, ಸಾಂಬಾರ್ ಜಿಂಕೆ, ಟೆಮ್ಮಿಂಕ್‌ನ ಟ್ರಾಗೋಪನ್, ಯಾಕ್ ಹೀಗೆ ಆನೇಕ ಪ್ರಾಣಿ ಪಕ್ಷಿಗಳು ಇಲ್ಲಿವೆ.

ತೇನ್ಸಿಂಗ್ ರಾಕ್ ಮತ್ತು ಗೊಂಬು ರಾಕ್

ತೇನ್ಸಿಂಗ್ ಮತ್ತು ಗೊಂಬು ಬಂಡೆಗಳು ಲೆಬಾಂಗ್ ಕಾರ್ಟ್ ರಸ್ತೆಯಲ್ಲಿವೆ. ಇವುಗಳನ್ನು ‘ಮಂಕಿ ರಾಕ್’ ಎಂದೂ ಕರೆಯುತ್ತಾರೆ. ಹಿಮಾಲಯನ್ ಪರ್ವತಾರೋಹಣ ಸಂಸ್ಥೆ ಈ ಬಂಡೆಗಳನ್ನು ರಾಕ್ ಕ್ಲೈಂಬಿಂಗ್ ಕುರಿತು ತರಬೇತಿ ನೀಡಲು ಬಳಸುತ್ತಿದೆ.

ಆದಿಕವಿ ಭಾನುಭಕ್ತ ಆಚಾರ್ಯ

ಆದಿಕವಿ ಭಾನುಭಕ್ತ ಆಚಾರ್ಯ,ಡ ನೇಪಾಳದ ಸಾಹಿತ್ಯ ಇತಿಹಾಸದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದು, ನೇಪಾಳಿ ಭಾಷೆ ಮತ್ತು ಸಾಹಿತ್ಯದ ಪ್ರಗತಿಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಅವರ ಕವಿತೆಗಳು ಮತ್ತು ಸಾಹಿತ್ಯ ಕೃತಿಗಳು ನೇಪಾಳದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕ್ಷೇತ್ರವನ್ನು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ಭಾನುಭಕ್ತ ಆಚಾರ್ಯರು ಸಂಸ್ಕೃತದಿಂದ ನೇಪಾಳಿ ಭಾಷೆಗೆ ರಾಮಾಯಣವನ್ನು ಅನುವಾದಿಸಿದ್ದೂ ನೇಪಾಳಿ ಸಾಹಿತ್ಯಕ್ಕೆ ಒಂದು ಸ್ಮರಣೀಯ ಕೊಡುಗೆಯಾಗಿದೆ. ಚೌರಸ್ತಾದಲ್ಲಿ ನೀವು ಇವರ ಮೂರ್ತಿಯನ್ನು ನೋಡಬಹುದು. ಚೌರಸ್ತಾ ಎಂದರೆ ನಾಲ್ಕು ರಸ್ತೆಗಳು ಸೇರುವ ಸ್ಥಳ ಎಂದರ್ಥ. ಇಲ್ಲಿ ಕುಳಿತು ವಿಶ್ರಾಂತಿ ಪಡೆಯಬಹುದು. ಕುದುರೆ ಸವಾರಿಯನ್ನೂ ಮಾಡಬಹುದು. ಕಾಂಚನಜುಂಗಾ ಪರ್ವತದ ಉತ್ತಮ ವ್ಯೂ ಪಾಯಿಂಟ್‌ ಕೂಡ ಇದಾಗಿದೆ.

Darjeeling 9

ಡಾರ್ಜಿಲಿಂಗ್ ಮಾಲ್

ಚೌರಸ್ತಾದಲ್ಲಿಯೇ ಇರುವ, ಡಾರ್ಜಿಲಿಂಗ್ ಮಾಲ್ ಪ್ರವಾಸಿಗರ ಸ್ವರ್ಗವಾಗಿದೆ. ಇಲ್ಲಿ ಸಾಂಪ್ರದಾಯಿಕ ಕರಕುಶಲ ವಸ್ತುಗಳು, ಅಂತರರಾಷ್ಟ್ರೀಯ ಫ್ಯಾಷನ್ ಬ್ರಾಂಡ್‌ಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು, ರೆಸ್ಟೋರೆಂಟ್‌ಗಳು, ಕೆಫೆಗಳು, ವಿವಿಧ ರೀತಿಯ ಆಹಾರ ಮಳಿಗೆಗಳನ್ನು ಕಾಣಬಹುದು. ಡಾರ್ಜಿಲಿಂಗ್‌ನ ಪ್ರಸಿದ್ಧ ತಿನಿಸುಗಳನ್ನು ಇಲ್ಲಿ ಸವಿಯಬಹುದು.

ಜಪಾನೀಸ್ ಪೀಸ್ ಪಗೋಡಾ

ಪೀಸ್ ಪಗೋಡಾ ಡಾರ್ಜಿಲಿಂಗ್ ಪಟ್ಟಣದ ಜಲಹಾರ್ ಬೆಟ್ಟದ ಇಳಿಜಾರಿನಲ್ಲಿದೆ. ಇದನ್ನು ಜಪಾನ್‌ನ ಬೌದ್ಧ ಸನ್ಯಾಸಿ ನಿಚಿದತ್ಸು ಫ್ಯೂಜಿ ಅವರ ಮಾರ್ಗದರ್ಶನದಲ್ಲಿ ಅಡಿಪಾಯವನ್ನು ಹಾಕಲಾಯಿತು. 1992ರ ನವೆಂಬರ್ 1ರಂದು ಉದ್ಘಾಟಿಸಲಾಯಿತು. ಈ ಪಗೋಡವು ಬುದ್ಧನ ನಾಲ್ಕು ಅವತಾರಗಳನ್ನು ಹೊಂದಿದೆ. ವಿಶ್ವ ಶಾಂತಿಯನ್ನು ಉತ್ತೇಜಿಸಲು ನಿರ್ಮಿಸಲಾದ ಸುಂದರ ಕಟ್ಟಡ ಇದಾಗಿದೆ.

ಘೂಮ್ ಮಠ

ಡಾರ್ಜಿಲಿಂಗ್ ಪ್ರದೇಶದಲ್ಲಿ ನಿರ್ಮಿಸಲಾದ ಮೊದಲ ಟಿಬೆಟಿಯನ್ ಬೌದ್ಧ ಮಠ ಇದಾಗಿದೆ. ಇಲ್ಲಿ 15 ಅಡಿ ಎತ್ತರದ ಮೈತ್ರೇಯ ಬುದ್ಧನ ಪ್ರತಿಮೆ ಇದೆ. ಇಡೀ ಮಠದ ಗೋಡೆಗಳು ಸುಂದರವಾದ ಟಿಬೆಟಿಯನ್ ಬೌದ್ಧ ವರ್ಣಚಿತ್ರಮಯವಾಗಿದ್ದು, ಬೋಧಿಸತ್ವರ ಚಿತ್ರಗಳಿಂದ ಆವೃತ್ತವಾಗಿದೆ. ಮುಖ್ಯ ಪೀಠದ ಎರಡೂ ಬದಿಗಳಲ್ಲಿ ಬೃಹತ್ ಪುಸ್ತಕದ ಕಪಾಟುಗಳು ಗಮನ ಸೆಳೆಯುತ್ತವೆ. ಮೈತ್ರೇಯ ಬುದ್ಧನ ಪ್ರತಿಮೆಯ ಮುಂದೆ ಎರಡು ಬೃಹತ್ ಎಣ್ಣೆ ದೀಪಗಳು ವರ್ಷ ಪೂರ್ತಿ ಉರಿಯುತ್ತಲೇ ಇರುತ್ತವಂತೆ.

ಟಾಯ್ ಟ್ರೈನ್ / ಆಟಿಕೆ ರೈಲು

ಸುಮಾರು 88 ಕಿಮೀ ಉದ್ದ ರೈಲು ಮಾರ್ಗವಿದು. ಆರು ಡೀಸೆಲ್ ಇಂಜಿನ್‌ಗಳು ಇಲ್ಲಿ ಇಂದಿಗೂ ಕಾರ್ಯ ನಿರ್ವಹಿಸುತ್ತವೆ. ಹಾಂ.. ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಕೂಡಾ ಆಗಿದೆ. ಭಾರತದ ಪರ್ವತ ರೈಲುಮಾರ್ಗಗಳಲ್ಲಿ ಇದು ಕೂಡಾ ಒಂದು. ಜನಸಂದಣಿ ಹೆಚ್ಚು ಇರುವುದರಿಂದ ಪ್ರವಾಸಿಗರು ವಾರದ ಮೊದಲೇ ಅನ್‌ಲೈನ್‌ನಲ್ಲಿ ಟಾಯ್‌ಟ್ರೈನ್‌ಗೆ ಟೀಕೆಟ್ ಬುಕ್ ಮಾಡಿಕೊಂಡು ಹೋದರೆ ಒಳ್ಳೆಯದು.