ಈ ಗೋವಾ ಸುತ್ತೋಕೂ ಎಲ್ಲ ಗೊತ್ತಿರಬೇಕು
ಉತ್ತರ ಕನ್ನಡ ಜಿಲ್ಲೆಯ ದೊಡ್ಡ ನದಿ ಶರಾವತಿ ಸಮುದ್ರ ಸೇರುವ ಸ್ಥಳ ಹೊನ್ನಾವರ ಸಮುದ್ರವೇ ಬಾಯ್ತೆರುದು ಶರಾವತಿಯನ್ನು ಆಪೋಷಣೆಗೈದಂತೆ ಕಾಣುತ್ತದೆ. ಇಂಥ ಆಳ-ಅಗಲ ಹೊಂದಿರುವ ಶರಾವತಿ ಸೇತುವೆ ಮೇಲೆ ರೈಲು ಸಾಗುವಾಗ ಉಂಟಾಗುವ ಶಬ್ದ ಎಂತವರನ್ನು ಕಿಟಕಿಯಿಂದಾಚೆಗೆ ಕಣ್ಣು ಹಾಯಿಸುವಂತೆ ಮಾಡುತ್ತದೆ. ಮುಂಜಾನೆ ಪೂರ್ವಕ್ಕೆ, ಸಂಜೆ ಪಶ್ಚಿಮಕ್ಕೆ ಒಂದು ವಿಹಂಗಮ ನೋಟ ಗ್ಯಾರಂಟಿ.
- ವೀಣಾ ಪುರುಷೊತ್ತಮ
ಪ್ರವಾಸಕ್ಕೆ ಕಾರಣ ಬೇಡ. ಮನಸ್ಸಿದ್ದರಾಯಿತು. ಎಂಬ ನನ್ನಲ್ಲಿ ದೇಶವಿಡೀ ಸುತ್ತಿದ್ದ ಅಮ್ಮ, ಗೋವಾ ಒಂದು ಹೋಗದೇ ಉಳಕೊಂಡಿದೆಯಲ್ಲಾ ಎಂದರು. ನಾಲ್ಕು ಬಾರಿ ಗೋವಾಕ್ಕೆ ಹೋಗಿದ್ದ ನನಗೆ, ಪುನಃ ಗೋವಾ ನೋಡುವ ಅಷ್ಟೇನು ಉತ್ಸಾಹವಿರಲಿಲ್ಲ ಆದರೂ ಅಮ್ಮನಿಗಾಗಿ ಹೊರಟೆ.
ಮಂಗಳೂರಿನಿಂದ ಬೆಳಿಗ್ಗೆ ರೈಲಿನಲ್ಲಿ ನಮ್ಮ ಪ್ರಯಾಣ ಆರಂಭವಾಯಿತು. ಬಾಗಿಲ ಬಳಿ ನಿಂತು, ಕರಾವಳಿಯ ಸೌಂದರ್ಯವನ್ನು ಆಸ್ವಾದಿಸುತ್ತಾ ಸಾಗಿದೆವು. ಹೊಳೆ, ನದಿ, ಬೆಟ್ಟ, ಗದ್ದೆ, ತೋಟ ಹೀಗೆ ಸಂಪದ್ಭರಿತ ಪ್ರಕೃತಿಯ ವೈಭವ, ರೈಲಿನ ಚುಕ್‌ಬುಕ್ ಸದ್ದಿನೊಡನೆ ಮಿಳಿತಗೊಂಡು ಮನರಂಜಿಸಿದ್ದವು. ಇದು ಕೊಂಕಣ ರೈಲ್ವೆ ಮಾರ್ಗ. ಇಲ್ಲಿ ಬೆಟ್ಟಗಳ ಕುಸಿತ, ಬಂಡೆಕಲ್ಲು ಬೀಳುವ ಭೀತಿಯನ್ನು ಪ್ರತಿವರ್ಷ ಮಳೆಗಾಲದಲ್ಲಿ ಎದುರಿಸಬೇಕಾಗುತ್ತಿತ್ತು. ಈ ಭೀತಿಯ ನಿವಾರಣೆಗಾಗಿ ಇಲ್ಲಿ ಸುರಂಗಗಳನ್ನು ಕೊರೆದು ರೈಲು ಮಾರ್ಗವನ್ನು ನಿರ್ಮಿಸಲಾಗಿದೆ. ಉಡುಪಿ- ಕುಂದಾಪುರ- ಮುರುಡೇಶ್ವರ- ಭಟ್ಕಳದವರೆಗೆ ಹೆಚ್ಚಿನ ದಾರಿ ರಸ್ತೆ ಸಾರಿಗೆಯ ಜತೆಯಲ್ಲಿ ಸಾಗುತ್ತದೆ. ಸುರಂಗದೊಳಗಿನ ಕತ್ತಲು ಹೊರಗಿನ ಬೆಳಕು ಎಂಥವರನ್ನೂ ಮಕ್ಕಳ ಮನಃಸ್ಥಿತಿಗೆ ತಳ್ಳಿ ಕತ್ತಲೆ -ಬೆಳಕಿನ ಆಟ ಆಡುವಂತಾಗಿಸುತ್ತದೆ. ಸುರಂಗದ ಕತ್ತಲೆಯಲ್ಲಿ ಪಡ್ಡೆ ಹುಡುಗರ ಹಾರಾಟ-ಕಿರುಚಾಟ ಇದ್ದೇ ಇರುತ್ತದೆ. ಈ ಮಾರ್ಗದಲ್ಲಿ ಸಾಕಷ್ಟು ಚಿಕ್ಕ-ಪುಟ್ಟ ನಿಲ್ದಾಣಗಳಿವೆ.
ಮುರುಡೇಶ್ವರದ ಸಮುದ್ರ ತೀರದ ಈಶ್ವರ ಮೂರ್ತಿ ಮತ್ತು 150 ಅಡಿ ಎತ್ತರ ಗೋಪುರ, ರೈಲು ಮಾರ್ಗಕ್ಕೆ ದೂರದಲ್ಲಿ ಚಿಕ್ಕದಾಗಿ ಕಂಡೂ ಕಾಣದಂತೆ ಮಾಯವಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ದೊಡ್ಡ ನದಿ ಶರಾವತಿ ಸಮುದ್ರ ಸೇರುವ ಸ್ಥಳ ಹೊನ್ನಾವರ ಸಮುದ್ರವೇ ಬಾಯ್ತೆರುದು ಶರಾವತಿಯನ್ನು ಆಪೋಷಣೆಗೈದಂತೆ ಕಾಣುತ್ತದೆ. ಇಂಥ ಆಳ-ಅಗಲ ಹೊಂದಿರುವ ಶರಾವತಿ ಸೇತುವೆ ಮೇಲೆ ರೈಲು ಸಾಗುವಾಗ ಉಂಟಾಗುವ ಶಬ್ದ ಎಂತವರನ್ನು ಕಿಟಕಿಯಿಂದಾಚೆಗೆ ಕಣ್ಣು ಹಾಯಿಸುವಂತೆ ಮಾಡುತ್ತದೆ. ಮುಂಜಾನೆ ಪೂರ್ವಕ್ಕೆ, ಸಂಜೆ ಪಶ್ಚಿಮಕ್ಕೆ ಒಂದು ವಿಹಂಗಮ ನೋಟ ಗ್ಯಾರಂಟಿ.
ತಂಗಿ ಪ್ರೀತಿಯಿಂದ ಕಟ್ಟಿಕೊಟ್ಟ ಬುತ್ತಿ ಮಧ್ಯಾಹ್ನದ ಹಸಿವೆಗೆ ನಮ್ಮ ಉದರ ಸೇರಿತ್ತು. ಮೂರು ಗಂಟೆ ಸುಮಾರಿಗೆ ದಕ್ಷಿಣ ಗೋವಾದ 'ಮಡಗಾಂವ್'ಗೆ ನಾವಿದ್ದ ರೈಲು ಬಂದು ಸೇರಿತ್ತು. ಇಳಿದಾಗ ಮೊದಲೇ ಕಾದಿರಿಸಿದ್ದ ಬೀಚ್ ರೆಸಾರ್ಟ್ ನಮ್ಮನ್ನು ಸ್ವಾಗತಿಸಲು ಸಜ್ಜಾಗಿತ್ತು.
ಸಂಜೆಯ ಹೊಂಬಣ್ಣ ಕಣ್ತುಂಬಿಕೊಳ್ಳಲು ಪಕ್ಕದಲ್ಲೇ ಇದ್ದ ವರ್ಕಾ ಬೀಚ್‌ಗೆ ಹೋಗಿ, ಸೂರ್ಯಾಸ್ತವನ್ನು ಮನತುಂಬಿಕೊಂಡೆವು. ವರ್ಕಾ ಬೀಚ್ ಅತ್ಯಂತ ಸುಂದರವೂ, ಸ್ವಚ್ಛವೂ ಇದ್ದುದರಿಂದ ಸಂತಸದಿಂದ ಕಾಲಕಳೆಯಲು ಹೇಳಿಮಾಡಿಸಿದಂತಿದೆ. ಹೆಚ್ಚಿನ ಪ್ರವಾಸಿಗರಿಗೆ ಮಾಹಿತಿ ಕೊರತೆಯಿಂದಲೋ ಏನೋ ಬೆರಳೆಣಿಕೆಯ ಜನ ತಮ್ಮ ಪಾಡಿಗೆ ತಾವು ಸಮುದ್ರದ ತೆರೆಯೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದರು. ತುಂಬಾ ಸ್ವಚ್ಛವಾಗಿದ್ದರಿಂದ ಬೆಳಿಗ್ಗೆ ಪುನಃ ಸಮುದ್ರ ಸ್ನಾನಕ್ಕೆ ತೆರಳಿ, ಮನಸೋ ಇಚ್ಛೆ ಆಟವಾಡುತ್ತಾ ಕಾಲಕಳೆದೆವು. ಬೆಳಗಿನ ಮರಳು ಅದರಲ್ಲೂ ಪಳಪಳನೆ ಹೊಳೆಯುವ ಬಣ್ಣಬಣ್ಣದ ಚಿಪ್ಪುಗಳು ಸಾಗರ ಕಿನಾರೆಯ ಸೌಂದರ್ಯಕ್ಕೆ ಮೆರಗು ನೀಡಿದ್ದವು.
ರೆಸಾರ್ಟ್‌ನಲ್ಲಿ ಹಲವು ವಿಧದ ಖಾದ್ಯಗಳನ್ನು ಸವಿದು, ದಕ್ಷಿಣ ಗೋವಾ ದರ್ಶನಕ್ಕೆ ಕಾರೊಂದನ್ನು ನಿಗದಿ ಮಾಡಿಕೊಂಡು ಹೊರಟೆವು. 78ರ ಪ್ರಾಯದ ಅಮ್ಮನನ್ನು ಗೋವಾಕ್ಕೆ ಕರೆದೊಯ್ದು ಅಲ್ಲಿ ಮಾಡುವುದೇನಿದೆ? ಗೋವಾ ಎಂದರೆ ಕುಡಿತ, ಮೋಜು ಮಾತ್ರವೇ ಎಂದುಕೊಂಡಿದ್ದ ಕೆಲವರ ಪ್ರಶ್ನೆಗೆ ಉತ್ತರ ಕೊಡಬೇಕಿತ್ತು. ದಕ್ಷಿಣ ಗೋವಾದಲ್ಲಿ ಹತ್ತು ಹಲವು ಪ್ರಸ್ತಿದ್ಧ ದೇವಾಲಗಳಿವೆ. ಮೊದಲಿಗೆ ನಾವು ಸಾಯಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದೆವು. ನಂತರ ಮಂಗೇಶ ದೇವಾಲಯ, ಶಾಂತದುರ್ಗಾ ದೇವಾಲಯ, ಮಹಾಲಸಾ ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದೆವು.
ಹೌದು, ಗೋವಾ ಎಂದರೆ ಅದು ಕುಡಿತ ಮೋಜು ಮಾಡಲು ಮಾತ್ರವಲ್ಲ. ದೇವಾಲಯಗಳ ಹೆಬ್ಬಾಗಿಲು ಎಂದೆನಿಸಿತ್ತು.

ಮಂಗೇಶ ದೇವಾಲಯ
ಈ ದೇವಾಲಯ ಮಡಗಾಂವ್‌ನಿಂದ 25ಕಿಮೀ ದೂರದಲ್ಲಿದ್ದು, ಪೋಂಡಾ ತಾಲೂಕಿನಲ್ಲಿದೆ, ಇದು ಗೌಡ ಸಾರಸ್ವತ ಜನರ ಕುಲದೇವರಾಗಿದೆ. ಹಲವಾರು ಭಕ್ತರು ಶ್ರದ್ಧಾ ಭಕ್ತಿಯಿಂದ ಸಾಂಪ್ರದಾಯಿಕ ದಿರುಸುಟ್ಟು ಬರುವಾಗ ನಾವು ಗೋವಾದಲ್ಲಿ ಇದ್ದೇವಾ ಎನ್ನುವ ಸಂಶಯ ಉಂಟಾಗಿದ್ದು ನಿಜ. ಪೋರ್ಚುಗೀಸರಿಂದ ಶಿವಲಿಂಗವನ್ನು ರಕ್ಷಿಸಲು ಸಾರಸ್ವತ ಜನಾಂಗ ಅಹೊರಾತ್ರಿ ಶ್ರಮಿಸಿದ್ದರು. ಅಘನಾಶಿನಿ ನದಿ ತೀರದಲ್ಲಿದ್ದ ಮಂಗೇಶ ಲಿಂಗವನ್ನು ಈಗಿರುವ ಜಾಗಕ್ಕೆ ಸ್ಥಳಾಂತರಿಸಿ, ಪೋರ್ಚುಗೀಸರ ದಾಳಿಯಿಂದ ರಕ್ಷಿಸಿದ್ದರು. ನಂತರ ಮರಾಠರು ಮಂಗೇಶ ದೇವನಿಗೆ ದೇವಾಲಯ ಕಟ್ಟಿಸಿದ್ದು, ಇದರ ನಂತರ ಬಂದ ಪೇಶ್ವೆಗಳು ಈ ದೇವಾಲಯಕ್ಕೆ ಸಾಕಷ್ಟು ಭೂಮಿಯನ್ನು ದಾನ ನೀಡಿದ್ದಾರೆ. 450 ವರ್ಷಗಳಿಗಿಂತಲೂ ಪುರಾತನ ಈ ದೇವಾಲಯ ನವನವೀನದಂತೆ ಕಂಗೊಳಿಸುತ್ತದೆ. ಸುತ್ತಲೂ ಹಲವಾರು ಕಂಬಗಳು, ಎತ್ತರವಾದ ದೀಪಸ್ತಂಭಗಳು ದೇವಾಲಯದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.
ಶಾಂತದುರ್ಗಾ ದೇವಾಲಯ
ಕೊಂಕಣಿ ಭಾಷಿಕರ ಕುಲದೇವರಾದ ಶಾಂತದುರ್ಗಾ ದೇವಾಲಯದ ದುರ್ಗೆಯ ಮೂರ್ತಿ ನೋಡಲು ಮನತುಂಬಿ ಬರುವುದು.
1506ರಲ್ಲಿ ಪೋರ್ಚುಗೀಸರ ದಾಳಿಯಿಂದ ನಜ್ಜುಗುಜ್ಜಾಗಿದ್ದ ದುರ್ಗೆಯ ಮೂರ್ತಿಯನ್ನು ಕಾವಲೆಂಗೆ ಸ್ಥಳಾಂತರಗೊಳಿಸಿ ಅಲ್ಲಿಯೇ ಪೂಜೆ ಮುಂದುವರಿಸಲಾಗಿತ್ತು. 1713ಅಲ್ಲಿ 'ಛತ್ರಪತಿ ಸಾಹು' ಮಹರಾಜ್ ಹೊಸ ದೇವಾಲಯ ನಿರ್ಮಿಸಿದ್ದನು.

ದೇವಾಲಯವು ಹಚ್ಚಹಸಿರಿನ ಕಾಡಿನಿಂದ ಆವೃತವಾಗಿದ್ದು ಸುಂದರವಾಗಿದೆ. ದೇವಾಲಯದ ನೆಲ ಹಾಗೂ ಮೇಲ್ಭಾಗ ಕಾಶ್ಮೀರಿ ಕಲ್ಲಿನಿಂದ ನಿರ್ಮಿತವಾಗಿದೆ. ಮುಂಭಾಗದಲ್ಲಿ ದೊಡ್ಡದಾದ ಕೆರೆ, ಎತ್ತರವಾದ ದೀಪಸ್ತಂಭದಿಂದ ಅಲಂಕೃತಗೊಂಡಿದೆ. ಗೋವಾಕ್ಕೆ ಹೋದವರೆಲ್ಲ ಈ ಶಾಂತದುರ್ಗಾ ದೇವಾಲಯಕ್ಕೆ ಒಮ್ಮೆಯಾದರೂ ಭೇಟಿ ನೀಡಬೇಕು.
ಮಹಾಲಸಾ ನಾರಾಯಣೇ ದೇವಾಲಯ
ಮಹಾವಿಷ್ಣುವಿನ ಮೋಹಿನಿ ಅವತಾರದ ದೇವಾಲಯವೇ ಮಹಾಲಸಾ. ಪೋರ್ಚುಗೀಸರ ದಾಳಿಯಿಂದ ಮಹಾಲಸಾ ದೇವಿಯ ಮೂರ್ತಿಯನ್ನು ರಕ್ಷಿಸಲಾಗಿದ್ದು. 17ನೇ ಶತಮಾನದಲ್ಲಿ ನವೀಕರಣಗೊಳಿಸಲಾಯಿತು. ಪಲ್ಲಕ್ಕಿ ಸೇವೆ ಹಾಗೂ ನವರಾತ್ರಿಯನ್ನು ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದಕ್ಷಿಣ ಕನ್ನಡದ ಕೊಂಕಣಿ ಜನರು ಪ್ರತಿವರ್ಷ ಮಹಾಲಸಾ ದೇವಾಲಯಕ್ಕೆ ಭೇಟಿನೀಡುವುದು ವಾಡಿಕೆ.

ಉತ್ತರಗೋವಾ
ಬೆಳಗಿನ ತಿಂಡಿಯ ಬಳಿಕ ನಮ್ಮ ಪಯಣ ಉತ್ತರ ಗೋವಾದತ್ತ. ಇದು ಸುಂದರ ಸಮುದ್ರ ಕಿನಾರೆಗಳಿಗೆ ಪ್ರಸಿದ್ಧವಾಗಿದೆ. ಅಂಜುನಾ ಬೀಚ್, ಕಾಂಡೋಲಿಮ್ ಬೀಚ್, ಕಾಲಂಗೋಟ್ ಬೀಚ್, ಮೋರ್ಜಿಮ್ ಬೀಚ್, ಅರಂಬೋಟ್ ಬೀಚ್ ಇಲ್ಲಿನ ಪ್ರಸಿದ್ಧ ಹಾಗೂ ಸುಂದರ ಸಮುದ್ರ ಕಿನಾರೆಗಳು. ಎಲ್ಲವನ್ನು ನೋಡಿ, ಪ್ರವಾಸಿಗರ ಮೋಜು, ಮಸ್ತಿಗಳನ್ನು ಆನಂದಿಸಿ ಹಲವಾರು ಫೊಟೋಗಳನ್ನು ತೆಗೆದು ನೆನಪಿನ ಬುತ್ತಿಗೆ ಸೇರಿಸಿದೆವು. ನಂತರ ಪ್ರಸಿದ್ಧ ಅಗೋಡಾ ಕೋಟೆಗೆ ಒಂದು ಸುತ್ತು ಹಾಕಿ ಬರಲು ಹೊರಟೆವು. ಇದು ಅರೇಬಿಯನ್ ಸಮುದ್ರದ ಕಿನಾರೆಯಲ್ಲಿ ಪೋರ್ಚುಗೀಸರು 17ನೇ ಶತಮಾನದಲ್ಲಿ ನಿರ್ಮಿಸಿದ ಕೋಟೆ. ಏಷ್ಯಾದಲ್ಲೇ ಅತೀ ಪುರಾತನ ಲೈಟ್‌ಹೌಸ್ ಇಲ್ಲಿನ ಪ್ರಮುಖ ಆಕರ್ಷಣೆ. ಅಗೋಡಾ ಸೆಂಟ್ರಲ್ ಜೈಲ್ ಇಲ್ಲಿದೆ. ಗೋವಾದ ಸ್ವಾತಂತ್ರಕ್ಕಾಗಿ ಹೋರಾಡಿದ ದೇಶಭಕ್ತರನ್ನು ಬ್ರಿಟಿಷರು ಈ ಜೈಲಿನಲ್ಲಿ ಬಂಧಿಸಿ ಇಡುತ್ತಿದ್ದರು. ಅದರ ನೆನಪಿಗಾಗಿ ಮ್ಯೂಸಿಯಂ ಇಲ್ಲಿದೆ.
ಗೋವಾದ ಪ್ರಸಿದ್ಧ ಚರ್ಚ್‌ಗಳಲ್ಲಿ ಒಂದಾದ 'ಬಿಸಿಲಿಕಾ ಆಫ್ ಬೋಮ್ ಜೀಸಸ್' ನೋಡಲು ತೆರಳಿದೆವು. ಕ್ಯಾಥೋಲಿಕ್ ಕ್ರಿಶ್ಚನರ ಈ ಚರ್ಚ್ ಯುನೆಸ್ಕೊ ಸಂರಕ್ಷಿತ ತಾಣವಾಗಿದೆ. ಪೋರ್ಚುಗೀಸರ ರಾಜಧಾನಿಯಾಗಿದ್ದ ಗೋವಾದಲ್ಲಿರುವ ಬೋಮ್ ಜೀಸಸ್ ಚರ್ಚ್‌ನಲ್ಲಿ ಸಂತ ಫ್ರಾನ್ಸಿಸ್ ಕ್ಸೇವಿಯರ್‌ನ ಕಳೆಬರವನ್ನು ಸಂರಕ್ಷಿಸಲಾಗಿದೆ. ಸುಂದರ ಮರದ ಕೆತ್ತನೆಗಳಿಂದ ಇದು ನೋಡುಗರನ್ನು ಆಕರ್ಷಿಸುತ್ತದೆ.

ನಂತರ ಗೋವಾದ ರಾಜಧಾನಿ ಪಣಜಿಯತ್ತ ಮುಖಮಾಡಿದೆವು. ಮಾಂಡೋವಿ ನದಿಯ ತಟದಲ್ಲಿರುವ ಪಣಜಿ. ಬಣ್ಣಬಣ್ಣದ ಮನೆಗಳು ಹಾಗೂ ಕಟ್ಟಡಗಳಿಂದ ಕಂಗೊಳಿಸುತ್ತಿದೆ. ಇಲ್ಲಿನ ಪ್ರಮುಖ ಆಕರ್ಷಣೆಯಾದ ಇಮಾಕ್ಯುಲೇಟ್ ಕ್ಯಾಥೋಲಿಕ್ ಚರ್ಚ್ ನಾಲ್ಕು ಮಾರ್ಗಗಳ ಮಧ್ಯೆ ಸುಂದರವಾಗಿ ಕಂಗೊಳಿಸುತ್ತದೆ. ಹತ್ತು ಹಲವು ಸಿನಿಮಾಗಳಲ್ಲಿ ಮಿಂಚಿದ ಈ ಚರ್ಚ್‌ನ ಎದುರುಗಡೆ ಫೊಟೋ ತೆಗೆಸಿಕೊಳ್ಳಲು ಜನ ಮುಗಿಬೀಳುತ್ತಿದ್ದರು.
ಗೋವಾದಲ್ಲಿ ಒಂದು ಸುಂದರ ಸಂಜೆ ಕಳೆಯಲು ನಾವು ಪಣಜಿಯ ಕ್ರೂಸ್ ಏರಿದೆವು. ಮಾಂಡೋವಿ ನದಿಯ ಸುತ್ತಲೂ ನಿಧಾನವಾಗಿ ಚಲಿಸುತ್ತಾ ಸೂರ್ಯಾಸ್ತವನ್ನು ಆಸ್ವಾದಿಸುವ ಆನಂದವನ್ನು ಅನುಭವಿಸಿಯೇ ತೀರಬೇಕು. ಕ್ರೂಸ್‌ನ ಒಳಗಡೆ ಡಿಜೆ ಸಂಗೀತ ಸಂಜೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಗೋವಾ ನೃತ್ಯ ಇತ್ಯಾದಿಗಳನ್ನು ಆಯೋಜಿಸಿ ಸಂಜೆಯ ರಂಗನ್ನು ಇನ್ನೂ ರಂಗೇರಿಸುತ್ತಾರೆ.
ಗೋವಾ ಎಂದರೆ ಬರಿಯ ಕುಡಿತ, ಕುಣಿತಕ್ಕೇ ಸೀಮಿತವಲ್ಲ. ದೇವಾಲಯ, ಚರ್ಚ್, ಬೀಚ್‌ಗಳ ಸಂಗಮ. ಸೌಂದರ್ಯ ನೋಡುಗರ ಕಣ್ಣಿನಲ್ಲಿದೆ. ಎಲ್ಲವನ್ನೂ ಧನಾತ್ಮಕವಾಗಿ ನೋಡುತ್ತಿದ್ದರೆ ಜಗವೆಲ್ಲವೂ ಸೌಂದರ್ಯದ ಖನಿ ಎಂಬ ಉತ್ತರ ಕಂಡುಕೊಂಡು, ಪುಟ್ಟರಾಜ್ಯದ ಪ್ರವಾಸ ಮುಗಿಸಿ ರೈಲಿನಲ್ಲಿ ಮತ್ತೊಮ್ಮೆ ಬಯಲು, ನದಿ, ಹೊಳೆ ಹಸಿರು ಕಾನನ ನೋಡುತ್ತಾ ಊರಿನತ್ತ ಮುಖಮಾಡಿ ಸ್ವಸ್ಥಾನ ಸೇರಿದೆವು.
 
                         
                     
                                            
                                             
                                                
                                                