• ವಿ.ಶ್ರೀನಿವಾಸ

ಇತ್ತೀಚೆಗೆ ನಮ್ಮ ರಾಜಾಸ್ಥಾನ ಪ್ರವಾಸದಲ್ಲಿ ಜೈಸಲ್ಮೇರ್‌ ವಾರ್‌ ಮ್ಯೂಸಿಯಂಗೆ ನಮ್ಮ ಗುಂಪು ಭೇಟಿ ನೀಡಿದಾಗ ನಮ್ಮ ಸೈನ್ಯದ ಬಗ್ಗೆ ಜನರ ಆಸಕ್ತಿ, ಕುತೂಹಲ, ದೇಶಭಕ್ತಿಯ ಉತ್ಸಾಹ ಕಂಡಾಗ ನಮ್ಮ ದೇಶದಲ್ಲಿ ಸೈನ್ಯ ಸಂಬಂಧಿತ ವಸ್ತು ಪ್ರದರ್ಶನಗಳು, ಸೇನೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚಬೇಕು ಎಂಬ ಅಭಿಪ್ರಾಯ ಮೂಡಿತು.

ಮರಳುಗಾಡು ಪಡೆಯಿಂದ ನಿರ್ಮಾಣ

ಜೈಸಲ್ಮೇರ್‌ ವಾರ್‌ ಮ್ಯೂಸಿಯಂ ರಾಜಾಸ್ಥಾನದ ಜೋಧ್‌ಪುರ - ಜೈಸಲ್ಮೇರ್‌ ಹೆದ್ದಾರಿಯಲ್ಲಿದೆ. ಜೈಸಲ್ಮೇರ್‌ನಿಂದ ಸುಮಾರು 13 ಕಿಮೀ ದೂರದಲ್ಲಿದೆ. ಇದು ಲೆಫ್ಟಿನೆಂಟ್‌ ಜನರಲ್‌ ಬಾಬ್ಬಿ ಮ್ಯಾಥ್ಯೂಸ್‌ ಅವರ ಕನಸಿನ ಕೂಸು. ಭಾರತೀಯ ಸೈನ್ಯದ ʼಮರಳುಗಾಡು ಪಡೆʼಯಿಂದ (Desert Corps of Indian Army) ನಿರ್ಮಾಣವಾಗಿ 2015ರಲ್ಲಿ ಲೋಕಾರ್ಪಣೆಗೊಂಡಿತು. ಅಂದಿನಿಂದ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಆವರಣವು ಸಾಕಷ್ಟು ವಿಶಾಲವಾಗಿದ್ದು, ಮಿಲಿಟರಿ ಶಿಸ್ತು, ಸ್ವಚ್ಛತೆಗಳಿಂದ ಕೂಡಿದೆ.

ಇದನ್ನೂ ಓದಿ: ದೇಶಪ್ರೇಮದ ಘಮ ಹರಡಿಸುವ ಕೆಫೆ

ಯುದ್ಧ ಗೆದ್ದ ಪ್ರತೀಕ

ಮ್ಯೂಸಿಯಂನ ಹೊರಾವರಣದಲ್ಲಿ ಹಲವಾರು ಟ್ಯಾಂಕರ್‌ಗಳು, ಏರ್‌ಕ್ರಾಫ್ಟ್‌, ಟ್ರಕ್‌ಗಳು, ಜೀಪ್‌ ಮುಂತಾದ ವಾಹನಗಳನ್ನು ಪ್ರದರ್ಶಿಸಲಾಗಿದೆ. ಇವುಗಳಲ್ಲಿ ಕೆಲವು 1965 ಹಾಗೂ 1971ರ ಇಂಡೋಪಾಕ್‌ ಯುದ್ಧದಲ್ಲಿ ಶತೃಗಳಿಂದ ವಶಪಡಿಕೊಂಡವು. ಅವುಗಳ ಮೇಲೆ ಪಾಕಿಸ್ತಾನದ ಸೋಲಿನ ಸಂಕೇತವಾಗಿ ಅವರ ಧ್ವಜವನ್ನು ಉಲ್ಟಾ ಚಿತ್ರಿಸಲಾಗಿದೆ. ಒಂದು ಟ್ಯಾಂಕ್‌ನ ಮೇಲೆ ಹತ್ತುವ ಅವಕಾಶವಿದೆ. ಅದರ ಮೇಲೆ ಹತ್ತಿ, ಪೋಸ್‌ಕೊಟ್ಟು ಫೊಟೋ ತೆಗೆಸಿಕೊಳ್ಳಬಹುದು.

ಎರಡು ಮುಖ್ಯ ಹಾಲ್‌ಗಳಲ್ಲಿ…

ವಸ್ತು ಸಂಗ್ರಹಾಲಯದಲ್ಲಿ ಎರಡು ಮುಖ್ಯ ಹಾಲ್‌ಗಳಿವೆ. ಒಂದರಲ್ಲಿ ಭಾರತೀಯ ಸೇನೆಯ ಶೌರ್ಯ ಪರಂಪರೆಯನ್ನು ಬಿಂಬಿಸುವ ಐತಿಹಾಸಿಕ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. ಒಂದನೆಯ ಮಹಾಯುದ್ಧದಲ್ಲಿ ಭಾರತೀಯ ಸೇನೆಯಲ್ಲಿ ಬಳಸುತ್ತಿದ್ದ ಸೈಕಲ್‌ ಹಾಗೂ ಬಂದೂಕುಗಳು, ಅಂದಿನ ಸೈನಿಕರ ಸಮವಸ್ತ್ರದ ಮಾದರಿಗಳು, ಚಿತ್ರಪಟಗಳು ಮುಂತಾದ ದಾಖಲೆಗಳಿವೆ. ಇನ್ನೊಂದು ʼಲೊಂಗೆವಾಲ ಹಾಲ್ʼ. 1971ರಲ್ಲಿ ಪಾಕ್‌ ವಿರುದ್ಧ ರಾಜಾಸ್ಥಾನದ ಥಾರ್‌ ಮರುಭೂಮಿ ಪ್ರದೇಶ ಲೊಂಗೆವಾಲದಲ್ಲಿ ನಡೆದ ಯುದ್ಧದ ದಾಖಲೆಯಾಗಿ, ಅಂದಿನ ಯುದ್ಧದಲ್ಲಿ ಬಳಸಿದ ಶಸ್ತ್ರಾಸ್ತ್ರಗಳು, ಪರಿಕರಗಳು, ಚಿತ್ರಪಟಗಳ ಪ್ರದರ್ಶನವಿದೆ.

ಹಾನರ್‌ ವಾಲ್‌

ವಸ್ತು ಸಂಗ್ರಹಾಲಯದ ಮಧ್ಯಭಾಗದಲ್ಲಿ ಧ್ವಜಸ್ತಂಭ ಹಾಗೂ ಅದರ ಹಿಂದೆ, ಪರಮವೀರ ಚಕ್ರ, ಮಹಾವೀರ ಚಕ್ರ ಹಾಗೂ ಇತರ ಶೌರ್ಯ ಪ್ರಶಸ್ತಿಗೆ ಪಾತ್ರರಾದ ವೀರ ಯೋಧರ ಹೆಸರುಗಳನ್ನು ಒಳಗೊಂಡ ಹಾನರ್‌ ವಾಲ್‌ (Honour Wall) ಇದೆ. ಇದು ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸ್ಥಳ. ನಾವೂ ಒಂದು ನಿಮಿಷ ಮೌನ ಆಚರಿಸಿದೆವು. ಅದರ ಪಕ್ಕದಲ್ಲಿ ಕಾರ್ಗಿಲ್‌ ವಿಜಯವನ್ನು ಬಿಂಬಿಸುವ ಸ್ಮಾರಕ ನಿರ್ಮಿಸಲಾಗಿದೆ. ಬಲಬಾಗದಲ್ಲಿ ಪರಮವೀರ ಚಕ್ರ ಪ್ರಶಸ್ತಿಗೆ ಭಾಜನರಾದ 21 ಯೋಧರ ಎದೆ ಮಟ್ಟದ ಪ್ರತಿಮೆಗಳನ್ನು ವೃತ್ತಾಕಾರವಾಗಿ ಸ್ಥಾಪಿಸಲಾಗಿದೆ. ಮಧ್ಯದಲ್ಲಿ ದೇಶದ ಲಾಂಛನವಿದೆ. ಮೂರು ಬಂಕರ್‌ ಮಾದರಿಗಳಿವೆ. ಅವುಗಳೊಳಗೆ ನಾವು ನುಸುಳಿಕೊಂಡು ಹೋಗಿ ಸೈನಿಕರ ಪೋಷಾಕು ತೊಟ್ಟು ನೈಜ ಬಂದೂಕನ್ನು ಕೈಯಲ್ಲಿ ಹಿಡಿದು ಅವುಗಳ ಭಾರವನ್ನು ಅನುಭವಿಸಬಹುದು.

ಥಿಯೇಟರ್‌ನಲ್ಲೊಂದು ಡಾಕ್ಯುಮೆಂಟರಿ

ಒಂದು ಪುಟ್ಟ ಥಿಯೇಟರ್‌ ಇಲ್ಲಿ ಇದ್ದು, ಭಾರತೀಯ ಸೈನ್ಯದ ಬಗ್ಗೆ ಮಾಹಿತಿ, ಯುದ್ಧದಲ್ಲಿ ಸೈನಿಕರ ಶೌರ್ಯ, ಸಾಹಸಗಳ ವಿಡಿಯೋಗಳ ಡಾಕ್ಯುಮೆಂಟರಿ ತೋರಿಸಲಾಗುತ್ತದೆ. ಇದು ಮುಗಿದ ಕೂಡಲೇ ವೀಕ್ಷಕರು ಸ್ವಯಂ ಪ್ರೇರಿತರಾಗಿ ʻಭಾರತ ಮಾತಾ ಕೀ ಜೈʼ, ʻವಂದೇ ಮಾತರಂʼ ಘೋಷಣೆಗಳನ್ನು ಗಟ್ಟಿ ಧ್ವನಿಯಲ್ಲಿ ಕೂಗುತ್ತಾರೆ. ಅದು ಮೈ ರೋಮಾಂಚನಗೊಳಿಸುವ ಕ್ಷಣ.

ವಸ್ತು ಪ್ರದರ್ಶನ ತೋರಿಸಲು ಗೈಡ್‌ ವ್ಯವಸ್ಥೆ ಇದೆ. ನಾವು ಭೇಟಿ ನೀಡಿದಾಗ ಗೈಡ್‌ ಆಗಿದ್ದ ಯುವತಿಯು ಸೇನೆಯ ಶಿಸ್ತಿನಂತೆ ಸ್ಪಷ್ಟವಾಗಿ, ಧೃಢವಾಗಿ, ನಿಖರವಾಗಿ ಎಲ್ಲರಿಗೂ ತಲುಪುವಂತೆ ಸರಳ ಭಾಷೆಯಲ್ಲಿ ವಿವರಿಸಿದರು.

ಎಲ್ಲವನ್ನೂ ವೀಕ್ಷಿಸಿದ ನಂತರ ಪ್ರವಾಸಿಗರು ಅಲ್ಲಿನ ಶಾಪಿಂಗ್‌ ಹಾಲ್‌ನಲ್ಲಿ ಶಾಪಿಂಗ್‌ ಮಾಡಬಹುದು. ಇಲ್ಲಿ ಗಳಿಕೆಯಾದ ಹಣ ಸೈನ್ಯಕ್ಕೆ ಸೇರುತ್ತದೆ. ಪ್ರವಾಸಿಗರು ಅಲ್ಲಿ ಸೈನ್ಯದ ಸ್ಮರಣಿಕೆಗಳು, ಟೀ-ಶರ್ಟ್‌, ಟೋಪಿ, ಜರ್ಕಿನ್‌ ಇತ್ಯಾದಿಗಳನ್ನು ಖರೀದಿಸಿ ತೃಪ್ತಿ ಪಟ್ಟರು.

ಗ್ರೆನೇಡ್‌ ಎಸೆಯಬಹುದು

ಅಲ್ಲಿ ಜರುಗಿದ ತಮಾಷೆಯ ಪ್ರಸಂಗವೆಂದರೆ, 50 ರುಪಾಯಿ ಟಿಕೆಟ್‌ ಕೊಂಡರೆ ಗ್ರೆನೇಡ್‌ ಎಸೆಯಬಹುದು ಎಂಬ ಮಾಹಿತಿ ಫಲಕವಿತ್ತು. ಅದನ್ನು ನೋಡಿ ಹಲವರು ಶತ್ರುಗಳ ಮೇಲೆ ಗ್ರೆನೇಡ್‌ ಎಸೆದು ಬಿಡೋಣ ಎಂದು ಮುಗಿಬಿದ್ದು ಟಿಕೆಟ್‌ ಕೊಂಡರು. ಕೆಲವರು ನಾನು ಗ್ರೆನೇಡ್‌ ಎಸೆಯುವಾಗ ನೀನು ಆಕಡೆ ಹೊಗಿ ನಿಲ್ಲು ಎಂದು ಹೆಂಡತಿಗೆ ಹೇಳಿದ್ದೂ ಕಂಡಿತು. ಆದರೆ ಆ ಗ್ರೆನೇಡ್‌ ಢಂ ಎನ್ನುವುದೇ ಇಲ್ಲ. ಅದು ನಿಷ್ಕಿಯವಾದದ್ದು. ಎಷ್ಟು ದೂರಕ್ಕೆ ನಾವು ಗ್ರೆನೇಡ್‌ ಎಸೆಯಬಲ್ಲೆವು ಎಂಬುದನ್ನು ಅರಿತುಕೊಳ್ಳಬಹುದಷ್ಟೇ. ಇದನ್ನು ತಿಳಿದು ಟಿಕೆಟ್‌ ಕೊಂಡವರ ಉತ್ಸಾಹ ಟುಸ್‌ ಆಗಿತ್ತು.

ಅಲ್ಲಿ ನಾವು ಕನ್ನಡ ಮಾತನಾಡುತ್ತಿದ್ದುದನ್ನು ಕೇಳಿಸಿಕೊಂಡ ಹುಬ್ಬಳ್ಳಿಯ ಯೋಧರೊಬ್ಬರು ಅತ್ಯಂತ ಸಂತೋಷದಿಂದ ನಮ್ಮನ್ನೆಲ್ಲ ಮಾತನಾಡಿಸಿದರು. ಕನ್ನಡಿಗ ಯೋಧರನ್ನು ನೋಡಿ ಮಾತನಾಡಿಸಿದ ನಮಗೂ ಅದೊಂದು ಹೆಮ್ಮೆಯ ಕ್ಷಣವಾಯಿತು.

ದಾರಿ ಹೇಗೆ?

ಜೈಸಲ್ಮೇರ್‌ ವಾರ್‌ ಮ್ಯೂಸಿಯಂ ರಾಜಾಸ್ಥಾನದ ಜೋಧ್‌ಪುರ - ಜೈಸಲ್ಮೇರ್‌ ಹೆದ್ದಾರಿಯಲ್ಲಿದ್ದು, ಜೈಸಲ್ಮೇರ್‌ನಿಂದ ಸುಮಾರು 13 ಕಿಮೀ ದೂರದಲ್ಲಿದೆ. ಸ್ಥಳೀಯ ಟ್ಯಾಕ್ಸಿ, ಆಟೋರಿಕ್ಷಾಗಳ ಮೂಲಕ ತಲುಪಬಹುದು.