Monday, November 3, 2025
Monday, November 3, 2025

ಜೈಪುರ ಜೈಗಢ ಜೈವಾನ್

ರಾಜಸ್ಠಾನದಲ್ಲಿರುವ ಅನೇಕ ಅತ್ಯದ್ಭುತ ಸಂಪತ್ತುಗಳಲ್ಲಿ ಜೈವಾನ್ ಫಿರಂಗಿಯೂ ಒಂದು. ಜೈಪುರದ ಜೈಗಢ ಕೋಟೆಯಲ್ಲಿ ಸಂರಕ್ಷಿಸಲ್ಪಟ್ಟಿರುವ ಈ ಫಿರಂಗಿಯು ಒಂದು ಐತಿಹಾಸಿಕ ಹೆಗ್ಗುರುತಾಗಿದೆ. ವಿಶ್ವದ ಅತಿ ದೊಡ್ಡ ಫಿರಂಗಿಗಳಲ್ಲಿ ಒಂದೆಂದು ಕರೆಯಲ್ಪಡುವ ಇದು ಕೋಟೆಯ ಮಿಲಿಟರಿ ಇತಿಹಾಸ ಶಕ್ತಿ ಮತ್ತು ಭವ್ಯತೆಯನ್ನು ಸಂಕೇತಿಸುತ್ತದೆ.

  • ವಿದ್ಯಾ ವಿ

ಇತಿಹಾಸ ಪುಸ್ತಕಗಳ ಪುಟಗಳಲ್ಲಿ ಕಣ್ಣಾಡಿಸುವ ಅಥವಾ ಇಂಟರ್‌ನೆಟ್ ನಲ್ಲಿ ಜಾಲಾಡುವ ಬದಲು ಇತಿಹಾಸವನ್ನೇ ಕಣ್ತುಂಬಿಕೊಳ್ಳಲು ಬಯಸುವಿರಾ? ಹಾಗಾದರೆ ನೀವು ರಾಜಸ್ಥಾನಕ್ಕೆ ಖಂಡಿತ ಕಾಲಿಡಬೇಕು! ಶ್ರೀಮಂತ ರಾಜ ಪರಂಪರೆಯನ್ನು ಹೊಂದಿರುವ ರಾಜಸ್ಥಾನವನ್ನು “ರಾಜಮನೆತನಗಳ ನಾಡು” (ಲ್ಯಾಂಡ್ ಆಫ್ ರಾಯಲ್ಸ್) ಎಂದೇ ಕರೆಯುತ್ತಾರೆ. ಇಲ್ಲಿರುವ ಅರಮನೆಗಳು, ಹವೇಲಿಗಳು ಮತ್ತು ಕೋಟೆಗಳನ್ನು ಭೇಟಿ ಮಾಡಿದ ನಂತರ ಮಹಾರಾಜರ ಶೌರ್ಯ ಸಾಹಸ ಮತ್ತು ವೈಭವ, ವಾಸ್ತುಶಿಲ್ಪದ ಅದ್ಭುತಗಳು, ಕ್ರೂರ ಕದನಗಳ ಕುರಿತು ಹೇಳಲಾರದ ಕಹಿ ಸತ್ಯಗಳ ಕಥೆಗಳನ್ನು ನಿಧಿಯಾಗಿ ಇಟ್ಟುಕೊಂಡಿರುವ ಭಾರತದ ಹಿಂದಿನ ಯುಗಕ್ಕೆ ನೀವು ಕಾಲಿಟ್ಟಂತೆ ಭಾಸವಾಗುವುದರಲ್ಲಿ ಅನುಮಾನವೇ ಇಲ್ಲ!

cannons ೨

ಅಮೇರ್ ಕೋಟೆ ಮತ್ತು ಮಾವೋತಾ ಸರೋವರಕ್ಕೆ ಹತ್ತಿರದಲ್ಲಿರುವ ಜೈಗಢ ಕೋಟೆಯು ಅರಾವಳಿ ಪರ್ವತ ಶ್ರೇಣಿಯ ‘ಚೀಲ್ ಕಾ ತೀಲಾ’ (ಹದ್ದುಗಳ ಬೆಟ್ಟ) ಎಂದು ಕರೆಯಲ್ಪಡುವ ಭೂಶಿರದಲ್ಲಿ ಸ್ಥಿತವಾಗಿದೆ. ಇದು ಅಮೇರ್ ಕೋಟೆ ಮತ್ತು ಜೈಪುರ ನಗರವನ್ನು ಶತ್ರುಗಳ ಆಕ್ರಮಣಗಳಿಂದ ರಕ್ಷಿಸಲು ಗಡಿ ರಕ್ಷಣಾ ಭದ್ರ ಕೋಟೆಯಾಗಿತ್ತು.ಇದನ್ನು 1726ರಲ್ಲಿ ಎರಡನೇ ಜೈ ಸಿಂಗ್ ನಿರ್ಮಿಸಿದರು. ಆದ್ದರಿಂದ ಈ ಕೋಟೆಗೆ ಅವರ ಹೆಸರನ್ನು ಇಡಲಾಗಿದೆ. ಜೈ ಗಢ ಎಂದರೆ ವಿಜಯದ ಕೋಟೆ (ಜೈ ಅಂದರೆ ಗೆಲುವು, ಗಢ ಅಂದರೆ ಕೋಟೆ)ಎಂದರ್ಥ. ಮರಳುಗಲ್ಲಿನಿಂದ ನಿರ್ಮಿಸಿರುವ ಈ ಕೋಟೆಯು ಉತ್ತರ ದಕ್ಷಿಣ ದಿಕ್ಕಿನಲ್ಲಿ 3 ಕಿಮೀ ಉದ್ದ ಮತ್ತು 1 ಕಿಮೀ ಅಗಲ ಮತ್ತು ಅಮೇರ್ ಕೋಟೆಯಿಂದ ಸುಮಾರು 400 ಮೀ ಎತ್ತರದಲ್ಲಿದೆ. ಇದರ ವಿನ್ಯಾಸವು ಬೃಹತ್ ಗೋಡೆಗಳು ಮತ್ತು ವಿಸ್ತಾರವಾದ ಅಂಗಳಗಳನ್ನು ಹೊಂದಿದ್ದು ರಜಪೂತ ಮತ್ತು ಮುಘಲ್ ವಾಸ್ತುಶಿಲ್ಪ ಶೈಲಿಗಳ ಮಿಶ್ರಣವಾಗಿದೆ.

ಜೈಗಢ ಕೋಟೆಯ ಮೇಲಿಂದ ಅರಾವಳಿ ಬೆಟ್ಟ ಹಾಗೂ ಅಮೇರ್ ಕೋಟೆಯ ರಮಣೀಯ ದೃಶ್ಯವನ್ನು ನೀವು ಆನಂದಿಸಬಹುದು. ಅದರೊಟ್ಟಿಗೆ ಗುಲಾಬಿ ನಗರ (ಪಿಂಕ್ ಸಿಟಿ) ಎಂದೇ ಕರೆಸಿಕೊಳ್ಳುವ ಜೈಪುರದ ಸೊಬಗನ್ನೂ ಸಹ ಸಂಪೂರ್ಣವಾಗಿ ಆಸ್ವಾದಿಸಬಹುದು.

ಕೋಟೆಯ ಸಂಕೀರ್ಣದಲ್ಲಿರುವ ಗಮನಾರ್ಹ ಕಟ್ಟಡಗಳೆಂದರೆ ಲಕ್ಷ್ಮಿ ವಿಲಾಸ್, ಲಲಿತ ಮಂದಿರ , ವಿಲಾಸ್ ಮಂದಿರ, ಆರಾಮ್ ಮಂದಿರ, ವಸ್ತು ಸಂಗ್ರಹಾಲಯ ಮತ್ತು ಶಸ್ತ್ರಾಗಾರ.

ವಸ್ತು ಸಂಗ್ರಹಾಲಯವು ಜೈಪುರ ರಾಜಮನೆತನದ ಛಾಯಾ ಚಿತ್ರಗಳು, ವರ್ಣ ಚಿತ್ರಗಳು, ಅಂಚೆ ಚೀಟಿಗಳು, ವೃತ್ತಾಕಾರದ ಕಾರ್ಡ್ ಗಳ ಪ್ಯಾಕ್ ಸೇರಿದಂತೆ ಅನೇಕ ಪ್ರಾಚೀನ ಕಲಾಕೃತಿಗಳ ಪ್ರದರ್ಶನವನ್ನು ಹೊಂದಿವೆ. ಹದಿನೈದನೇ ಶತಮಾನದ ವಿಂಟೇಜ್ ಪೀಕುದಾನಿ (ಉಗುಳು ಪಾತ್ರೆ) ಮತ್ತು ಕೈಯಿಂದಲೇ ಚಿತ್ರಿಸಿದ ಅರಮನೆ ಯೋಜನೆ (ಪ್ಲಾನ್)ಯನ್ನು ಇಲ್ಲಿ ನೋಡಬಹುದು.

ಶಸ್ತ್ರಾಗಾರದಲ್ಲಿ ಜೈಪುರದ ಕೆಲವು ಜನಪ್ರಿಯ ಮಹಾರಾಜರ ಚಿತ್ರಗಳೊಂದಿಗೆ ಬಂದೂಕುಗಳು, ಕತ್ತಿಗಳು, ಗುರಾಣಿಗಳು, ರಕ್ಷಾ ಕವಚಗಳು, 50 ಕಿಲೋ ಗ್ರಾಂನಷ್ಟು ತೂಕವುಳ್ಳ ಫಿರಂಗಿ ಚೆಂಡು ಮೊದಲಾದವುಗಳನ್ನು ಪ್ರದರ್ಶನಕ್ಕಾಗಿ ಇಡಲಾಗಿದೆ.

cannons ೫

ಕೋಟೆ ಸಂಕೀರ್ಣದ ಒಳಗೆ ‘ಚಾರ್ಬಾಗ್’ ಎಂದು ಕರೆಯಲ್ಪಡುವ ಸುಂದರವಾದ ಚೌಕಾಕಾರದ ಉದ್ಯಾನವನವಿದೆ. ನಡಿಗೆಯಿಂದ ದಣಿವಾಗಿದ್ದರೆ ಕಾಲುಗಳಿಗೆ ತುಸು ವಿಶ್ರಾಂತಿ ನೀಡಲು ನೀವಿಲ್ಲಿ ಕುಳಿತುಕೊಳ್ಳಬಹುದು. ಸುತ್ತಮುತ್ತಲಿನ ಭೂದೃಶ್ಯದ ಅದ್ಭುತ ನೋಟವನ್ನು ಕೇಂದ್ರ ಕಾವಲು ಗೋಪುರದಿಂದ ಸೆರೆಹಿಡಿಯಬಹುದು. ಕೋಟೆ ಸಂಕೀರ್ಣದ ಉತ್ತರ ಭಾಗದಲ್ಲಿ ನೀವು ‘ಅವಾನಿ ದರ್ವಾಜಾ’ ಎಂದು ಕರೆಯುವ ತ್ರಿವಳಿ ಕಮಾನಿನ ಪ್ರವೇಶದ್ವಾರಕ್ಕೆ ಹೋಗಬಹುದು. ಇದು ನಿಮ್ಮನ್ನು ಅರಾಮ್ ಮಂದಿರ ಮತ್ತು ಅದರ ಅಂಗಳದಲ್ಲಿರುವ ಉದ್ಯಾನವನಕ್ಕೆ ಕರೆದೊಯ್ಯುತ್ತದೆ. ವಿವಿಧ ಬಳಕೆಗಾಗಿ ಕೋಟೆಗೆ ನೀರನ್ನು ಸಾಗಿಸಲೆಂದು ಕೃತಕವಾಗಿ ನಿರ್ಮಿಸಿರುವ ಸಾಗರ್ ಸರೋವರವನ್ನು ವೀಕ್ಷಿಸಬಹುದು.

ಇಲ್ಲಿರುವ ಮಳೆ ನೀರು ಕೊಯ್ಲು ಜಲಸಂರಕ್ಷಣಾ ಮಾದರಿಯಂತೂ ಅಸಾಧಾರಣವಾಗಿದ್ದು, ಇಂದಿನ ನೀರಿನ ಬಿಕ್ಕಟ್ಟಿನ ಸಮಸ್ಯೆಯನ್ನು ಸಹ ಪರಿಹರಿಸುವ ಸಾಮರ್ಥ್ಯವನ್ನು ಹೊಂದಿದೆ. ಕೋಟೆಯು ಅರಾವಳಿ ಪರ್ವತಶ್ರೇಣಿ ಯಲ್ಲಿರುವುದರಿಂದ ಅವರು ಮಳೆ ನೀರನ್ನು ಕಾಲುವೆಯ ಮೂಲಕ ಕೇಂದ್ರ ಅಂಗಳದ ಕೆಳಗೆ ನಿರ್ಮಿಸಲಾದ ಮೂರು ಭೂಗತ ಟ್ಯಾಂಕ್ ಗಳಿಗೆ ಹರಿಸುತ್ತಿದ್ದರು. ನಿಮಗೆ ಗೊತ್ತಿರಲಿ! ಇಲ್ಲಿರುವ ಅತಿದೊಡ್ಡ ಟ್ಯಾಂಕ್ 6 ಮಿಲಿಯನ್ ಗ್ಯಾಲನ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ!

ಜೈಗಢ ಕೋಟೆ ಮತ್ತು ಅಮೇರ್ ಕೋಟೆಗಳು ಎರಡು ಕಿಲೋಮೀಟರ್ ಉದ್ದದ ರಹಸ್ಯ ಸುರಂಗದ ಮೂಲಕ ಪರಸ್ಪರ ಸಂಬಂಧ ಹೊಂದಿವೆ.

ಜೈಗಢ ಕೋಟೆಯು ಸಾಕಷ್ಟು ಆಸಕ್ತಿದಾಯಕ ಮತ್ತು ಆಕರ್ಷಕ ಸ್ಠಳವಾಗಿದೆ. ನೀವು ಜೈಪುರದಿಂದ ಈ ಕೋಟೆಯನ್ನು ತಲುಪಲು ಜೈಪುರ ದೆಹಲಿ ಹೆದ್ದಾರಿಯಲ್ಲಿ ಹತ್ತು ಕಿಲೋಮೀಟರ್ ದೂರ ಪ್ರಯಾಣಿಸಬೇಕು. ಕಡಿದಾದ ಬೆಟ್ಟದ ಹಾದಿಯಲ್ಲಿ ನಡೆದುಕೊಂಡು ಹೋದ ನಂತರ ಅಮೇರ್ ಕೋಟೆಯ ಮೂಲಕವೂ ಈ ಕೋಟೆಯನ್ನು ತಲುಪಬಹುದು. ಅದು ಕೋಟೆ ವಸ್ತು ಸಂಗ್ರಹಾಲಯದಲ್ಲಿರುವ ಅವಾಮಿ ಗೇಟ್ ನಲ್ಲಿ ನಿಮ್ಮನ್ನು ಬಿಡುತ್ತದೆ. ಇಲ್ಲಿ ಸಾಕಷ್ಟು ನಡೆಯಬೇಕಾಗಿರುವುದರಿಂದ ಬೇಕಾದ ಆಹಾರ ನೀರು ಪಾನೀಯಗಳನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬೇಕು. ನೀವು ಡುಂಗರ್ ದರ್ವಾಜಾ(ದರ್ವಾಜಾ ಎಂದರೆ ದ್ವಾರ) ಅಥವಾ ಡುಂಗರ್ ಗೇಟ್ ಮೂಲಕ ಜೈವಾನ ಫಿರಂಗಿಯನ್ನು ತಲುಪಬಹುದು.

cannons ೩

ರಾಜಸ್ಠಾನದಲ್ಲಿರುವ ಅನೇಕ ಅತ್ಯದ್ಭುತ ಸಂಪತ್ತುಗಳಲ್ಲಿ ಜೈವಾನ್ ಫಿರಂಗಿಯೂ ಒಂದು. ಜೈಪುರದ ಜೈಗಢ ಕೋಟೆಯಲ್ಲಿ ಸಂರಕ್ಷಿಸಲ್ಪಟ್ಟಿರುವ ಈ ಫಿರಂಗಿಯು ಒಂದು ಐತಿಹಾಸಿಕ ಹೆಗ್ಗುರುತಾಗಿದೆ. ವಿಶ್ವದ ಅತಿ ದೊಡ್ಡ ಫಿರಂಗಿಗಳಲ್ಲಿ ಒಂದೆಂದು ಕರೆಯಲ್ಪಡುವ ಇದು ಕೋಟೆಯ ಮಿಲಿಟರಿ ಇತಿಹಾಸ ಶಕ್ತಿ ಮತ್ತು ಭವ್ಯತೆಯನ್ನು ಸಂಕೇತಿಸುತ್ತದೆ.

ಹದಿನೆಂಟನೇ ಶತಮಾನದ ಜೈವಾನ್ ಫಿರಂಗಿಯು ವಿಶ್ವದಲ್ಲೇ ಅತ್ಯಂತ ದೊಡ್ದದಾದ ಗಾಲಿಗಳುಳ್ಳ ಶಸ್ತ್ರಾಸ್ತ್ರವೆಂದು ಪ್ರಸಿದ್ಧಿಗೊಂಡಿದೆ. 1720ರಲ್ಲಿ ಎರಕ ಹೊಯ್ದಿರುವ ಈ ಫಿರಂಗಿಯನ್ನು ಎರಡನೇ ಸವಾಯಿ ರಾಜಾ ಜೈಸಿಂಗ್ ರು ನಿರ್ಮಿಸಿದರೆಂದು ಹೇಳಲಾಗುತ್ತದೆ. ಬಲಶಾಲಿ ಯೋಧ ಹಾಗೂ ಯುದ್ಧ ಸಾಮಗ್ರಿಗಳ ಪೂರೈಕೆಯಲ್ಲಿ ಸಮರ್ಥನೆಂದು ಹೆಸರುಗಳಿಸಿಕೊಂಡಿದ್ದ ಜೈಸಿಂಗ್, ಮುಘಲ್ ಚಕ್ರವರ್ತಿ ಮೊಹಮ್ಮದ್ ಷಾ ನ ಆಳ್ವಿಕೆಯಲ್ಲಿ ಜೈಪುರ ಕೋಟೆಯ ಆಡಳಿತಗಾರರಾಗಿದ್ದರು.

ಸುಮಾರು 6.15ಮೀಟರ್ (20.2ಅಡಿ)ಉದ್ದ ಹಾಗು 50 ಟನ್ ಭಾರವುಳ್ಳ ಈ ಫಿರಂಗಿಯನ್ನು ದೊಡ್ಡ ಗಾಲಿಗಳ ಮೇಲೆ ಇರಿಸಲಾಗಿದೆ. ಎರಡು ಚಕ್ರಗಳು 1.37ಮೀಟರ್ (4.5 ಅಡಿ) ವ್ಯಾಸವನ್ನು ಹೊಂದಿದ್ದರೆ ಸಾಗಾಣಿಕೆಗೆ ಅನುಕೂಲವಾಗುವಂಥ ಎರಡು ಹೆಚ್ಚುವರಿ ಚಕ್ರಗಳು 2.74 ಮೀಟರ್ (9ಅಡಿ)ಗಳಷ್ಟು ಸುತ್ತಳತೆಯನ್ನು ಹೊಂದಿವೆ. ಬ್ಯಾರೆಲ್ ನ ತುದಿಯ ಸುತ್ತಳತೆ 2.2ಮೀಟರ್ ಹಾಗೂ ಹಿಂಭಾಗದ ಆಯಾಮವು 2.8 ಮೀಟರ್ ವ್ಯಾಸವನ್ನು ಹೊಂದಿದೆ. ಬ್ಯಾರೆಲ್‌ನ ದಪ್ಪ 21.6 ಸೆಂಟಿ ಮೀಟರ್ ಹಾಗೂ ರಂಧ್ರದ ವ್ಯಾಸವು 28 ಸೆಂಟಿ ಮೀಟರ್ ಇದೆ. ಕ್ರೇನ್‌ನಿಂದ ಎತ್ತಲು ಸಹಾಯಕವಾಗುವಂತೆ ಫಿರಂಗಿಯಲ್ಲಿ ಎರಡು ದಪ್ಪನೆಯ ರಿಂಗ್ ಗಳನ್ನು ಮತ್ತು ಬ್ಯಾರೆಲ್ ಅನ್ನು ಮೇಲೆತ್ತಲು ಹಾಗೂ ಕೆಳಗಿಸಲು 776 ಮಿಲಿ ಮೀಟರ್ (30.6 ಇಂಚು)ಉದ್ದದ ತಿರುಪನ್ನು ಅಳವಡಿಸಲಾಗಿದೆ. ಹೂವಿನಿಂದ ಕೂಡಿರುವ ವಿನ್ಯಾಸವನ್ನು ಬ್ಯಾರೆಲ್‌ನಲ್ಲಿ ನಾವು ನೋಡಬಹುದಾಗಿದೆ. ಬ್ಯಾರೆಲ್ ತುದಿಯಲ್ಲಿ ಆನೆಯ, ಮಧ್ಯ ಭಾಗದಲ್ಲಿ ಜೋಡಿ ನವಿಲುಗಳ ಹಾಗೂ ಹಿಂಭಾಗದಲ್ಲಿ ಜೋಡಿ ಬಾತುಕೋಳಿಗಳ ಚಿತ್ರಗಳಿಂದ ಅಲಂಕರಿಸಲಾಗಿದೆ.

ಈ ದೈತ್ಯ ಗಾತ್ರ ಶಸ್ತ್ರವನ್ನು ಯುದ್ಧದಲ್ಲಿ ಯಾವತ್ತೂ ಬಳಸಲೇ ಇಲ್ಲ. ಮಹಾರಾಜಾ ಜೈಸಿಂಗ್, 1720ರಲ್ಲಿ 50 ಕಿಲೋ ಗ್ರಾಂ ಗುಂಡಿನ ಜತೆಗೆ 100 ಕಿಲೋಗ್ರಾಂ ಮದ್ದಿನ ಪುಡಿಯನ್ನು ತುಂಬಿ ಈ ಫಿರಂಗಿಯನ್ನು ಒಂದೇ ಒಂದು ಸಲ ಪರೀಕ್ಷಿಸಿದ್ದರಂತೆ! ಇದರ ಹೊಡೆತದಿಂದ ಸುಮಾರು 40 ಕಿಮೀ ದೂರದಲ್ಲಿರುವ ಚಕ್ಸು ಹಳ್ಳಿಯಲ್ಲಿ ಭಾರೀ ಹಳ್ಳವೊಂದು ನಿರ್ಮಾಣವಾಗಿತ್ತಂತೆ!

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ