- ಶ್ರೇಯಾ ಮಿಂಚಿನಡ್ಕ


ಗಡಿನಾಡು ಕಾಸರಗೋಡು ಎಂದರೆ ಹಲವರಿಗೆ ತಟ್ಟನೆ ನೆನಪಾಗುವುದು ಒಂದಿಷ್ಟು ಜನ ಕನ್ನಡ, ಇನ್ನೊಂದಿಷ್ಟು ಜನ ತುಳು, ಇನ್ನೂ ಕೆಲವೊಂದು ಕಡೆಗಳಲ್ಲಿ ಮಲಯಾಳಂ ಮಾತನಾಡಿಕೊಂಡು ಸಪ್ತಭಾಷಾ ಸಂಗಮ ಭೂಮಿ ಎಂದೇ ಪ್ರಸಿದ್ಧವಾಗಿರುವ ಜಾಗವಾಗಿದ್ದರೆ, ಪ್ರಕೃತಿ ಸೌಂದರ್ಯವನ್ನು ಸವಿಯುವವರಿಗೆ ಇದೊಂದು ಪ್ರಕೃತಿರಮಣೀಯ ತಾಣ.

ಬೇಕಲ ಕೋಟೆ, ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ ಅನಂತಪುರ, ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ ಮಲ್ಲ, ಪಳ್ಳಿಕ್ಕೆರೆ ಕಡಲ ತೀರ ಮುಂತಾದವುಗಳು ಸಾಮಾನ್ಯವಾಗಿ ಎಲ್ಲರೂ ತಿಳಿದುಕೊಂಡು, ಅಲೆದುಕೊಂಡು ಬಂದವುಗಳಾದರೆ ಇನ್ನೂ ಕೆಲವೊಂದಿಷ್ಟು ಇಲ್ಲಿನ ಸುಂದರ ತಾಣಗಳು ಎಲೆಮರೆ ಕಾಯಿಯ ಹಾಗೆ ಹಿಂದೆಯೇ ಉಳಿದು ಬಿಟ್ಟಿದೆ. ಇದೇ ಗುಂಪಿಗೆ ಸೇರಿದ ಒಂದು ತಾಣ ಎಂದರೆ, ಅದು ವಲಿಯಪರಂಬ ಹಿನ್ನೀರು. ಇತ್ತೀಚಿನ ಕೆಲವು ದಿನಗಳಲ್ಲಿ ಈ ಜಾಗ ಕೆಲವೊಂದಿಷ್ಟು ಜನರಿಗೆ ಪರಿಚಯವಿದ್ದರೂ, ಇನ್ನೂ ಅದೆಷ್ಟೋ ಜನರ ಕಣ್ಣಿಗೆ ಈ ಜಾಗ ಬಿದ್ದಿಲ್ಲ.

valiyaparamba

ಕೇರಳದ ಅತ್ಯಂತ ಸುಂದರವಾದ ಹಿನ್ನೀರು ಪ್ರದೇಶವಾದ ವಲಿಯಪರಂಬ ರಾಜ್ಯದಲ್ಲಿ ಮೂರನೇ ಅತಿದೊಡ್ಡ ಹಿನ್ನೀರು ಪ್ರದೇಶವಾಗಿದೆ. ಕೇರಳದ ನಲುವತ್ತನಾಲ್ಕು ನದಿಗಳಲ್ಲಿ ಒಂದಾದ ತೇಜಸ್ವಿನಿ ನದಿ ಸೇರಿದಂತೆ ನಾಲ್ಕು ವಿಭಿನ್ನ ನದಿಗಳಿಂದ ಈ ಹಿನ್ನೀರಿನ ತಾಣ ನಿರ್ಮಿತವಾಗಿರುವುದು. ಈ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸಣ್ಣ ಸೇತುವೆಯನ್ನು ಪರಸ್ಪರ ಎರಡು ಪಂಚಯತುಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಅಚಂತುರುತ್ತು ಮತ್ತು ಚೆರುವತ್ತೂರು ಪಂಚಾಯತುಗಳನ್ನು ಈ ತೇಜಸ್ವಿನಿ ನದಿಯ ಮೇಲೆ ನಿರ್ಮಿಸಿದ ಸೇತುವೆ ಜೋಡಿಸುತ್ತದೆ.

ಮೈ ಚಾಚಿಕೊಂಡಿರುವ ತೆಂಗಿನ ಗರಿಗಳು, ವಿಶಾಲವಾದ ಸಮುದ್ರ, ದಟ್ಟ ಮ್ಯಾಂಗ್ರೋವ್ ಕಾಡುಗಳು, ಹಸಿರಾದ ನೀರು ಅಪರೂಪಕ್ಕೆ ತಮ್ಮ ತಮ್ಮ ಕೆಲಸಗಳಿಂದ ದೂರವಿರಲು ಬಯಸುವ ಮನಸ್ಸುಗಳಿಗೆ ತಂಪೆರೆಯುವ ತಾಣ ಖಂಡಿತವಾಗಿಯೂ ಇದಾಗುತ್ತದೆ. ಯಾಕೆಂದರೆ ವಲಿಯಪರಂಬ ದ್ವೀಪವು ಮುಖ್ಯ ಭೂಭಾಗದ ಹಿನ್ನೀರುಗಳಿಂದ ಬೇರ್ಪಟ್ಟು ಈ ದ್ವೀಪದ ಗಡಿಗಳಲ್ಲಿ ಅರೇಬಿಯನ್ ಸಮುದ್ರವಿದೆ, ಪ್ರಕೃತಿಯ ಸೌಂದರ್ಯದ ಜತೆಗೆ ಉತ್ತಮ ವಾಯುವಿಹಾರಕ್ಕೂ ಇಲ್ಲಿ ಅವಕಾಶವಿದೆ.

ಇಲ್ಲಿ ಹಲವಾರು ದ್ವೀಪಗಳಿವೆ, ಅವೆಗಳಲ್ಲಿರುವ ಹಿನ್ನೀರು ಪ್ರದೇಶವನ್ನು ‘ವಲಿಯಪರಂಬ’ ಎಂದು ಹೆಸರಿಡಲಾಗಿದೆ. ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ ಇಲ್ಲಿ ಸುಮಾರು ತೊಂಬತ್ತಕ್ಕೂ ಅಧಿಕ ಜಾತಿಯ ಪಕ್ಷಿಗಳಿವೆ ಎಂದು ಗುರುತಿಸಲಾಗಿದೆ, ಅದರ ಜತೆಗೆ ದಟ್ಟವಾದ ಮ್ಯಾಂಗ್ರೋವ್ ಕಾಡುಗಳು ಪ್ರಕೃತಿಯ ರಮಣೀಯತೆಯನ್ನು ಹೆಚ್ಚಿಸುವುದರಲ್ಲಿ ಮತ್ತೆರಡು ಮಾತಿಲ್ಲ. ಮ್ಯಾಂಗ್ರೋವ್ ಕಾಡುಗಳು ಹಸಿರು ಬಣ್ಣದ ನೀರನ್ನು ಹೊಂದಿರುತ್ತದೆ, ಇಲ್ಲಿ ನೀಡಲಾಗುವ ದೋಣಿ ವಿಹಾರ, ಕಾಯಾಕಿಂಗ್ ಮೂಲಕ ಪ್ರವಾಸಿಗರು ಈ ಸ್ಥಳವನ್ನು ಸಂಪೂರ್ಣವಾಗಿ ಆನಂದಿಸಬಹುದು.

Valiyaparamba of Kerala

ಈ ಪ್ರದೇಶವಿರುವುದು ಕಾಸರಗೋಡು ಜಿಲ್ಲೆಯ ನೀಲೇಶ್ವರದಿಂದ ಸುಮಾರು ಹತ್ತು ಕಿಲೋ ಮೀಟರ್ ದೂರದಲ್ಲಿ. ನೀಲೆಶ್ವರದಿಂದ ಹತ್ತು ಕಿಲೋಮೀಟರ್ ಒಂದಷ್ಟು ಮುಂದಕ್ಕೆ ಸಾಗಿದರೆ ಈ ಸುಂದರ ತಾಣದಲ್ಲಿ ನೀವು ಹೊರ ಲೋಕದ ತಲೆ ಬಿಸಿಗಳನ್ನು ಪ್ರಕೃತಿಯ ಮಧ್ಯದಲ್ಲಿ ಮರೆತೇ ಬಿಡಬಹುದು. ಇನ್ನೂ ಬೇರೆ ಊರುಗಳಿಂದ ಇಲ್ಲಿಗೆ ಬರುವುದಾದರೆ, ಇಲ್ಲಿಗೆ ಹತ್ತಿರವಾದ ರೈಲು ನಿಲ್ದಾಣ ಪಯ್ಯನ್ನೂರು, ಇಲ್ಲಿಂದ ಈ ಜಾಗ ಸುಮಾರು ಹತ್ತು ಕಿಲೋಮೀಟರ್ ಹಾಗೂ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು ಎಪ್ಪತ್ತು (70) ಕಿಲೋಮೀಟರ್ ದೂರದಲ್ಲಿದೆ.

ಇಂಥ ಜಾಗಗಳಿಗೆ ನಾವು ತೆರಳುವಾಗ ಮನನ ಮಾಡಿಕೊಳ್ಳಬೇಕಾದ ವಿಚಾರವೆಂದರೆ ನಾವು ನಮ್ಮ ಹೊರ ಪ್ರಪಂಚದ ಖಿನ್ನತೆ, ಬೇಸರಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಅಲ್ಲಿಗೆ ತೆರಳಿ ನಮ್ಮಿಂದ ಆ ಪ್ರಕೃತಿಯ ಸೌಂದರ್ಯಕ್ಕೆ ಅಥವಾ ಅಲ್ಲಿನ ಪರಿಸರಕ್ಕೆ ಯಾವುದೇ ರೀತಿಯ ಹಾನಿಯೂ ಆಗಬಾರದು.