• ನವೀನಕೃಷ್ಣ ಎಸ್‌, ಉಪ್ಪಿನಂಗಡಿ

ಮೊನ್ನೆ ಮೊನ್ನೆಯಷ್ಟೇ ಓಣಂ ಹಬ್ಬ ಮುಗಿಯಿತು. ಆ ಹಬ್ಬದಲ್ಲಿ 'ಓಣಂ ಸದ್ಯಮ್' ಬಹು ಆಕರ್ಷಣೀಯವಾದದ್ದು. ಕೇರಳದಲ್ಲಿ ಸಸ್ಯಾಹಾರಿ ಖಾದ್ಯಗಳಿಗೆ ತುಂಬಾ ಪ್ರಾಮುಖ್ಯತೆಯಿದೆ. ಈ ನಿಟ್ಟಿನಲ್ಲಿ ರೂಪುಗೊಂಡದ್ದೇ 'ಕೇರಳ ಸದ್ಯಮ್'. ಕೇರಳ ಸದ್ಯಮ್ ಎಂದರೆ ಸಸ್ಯಾಹಾರಿ ಊಟ. ಸಾಮಾನ್ಯವಾಗಿ ನಾವು ಪ್ರಯಾಣಿಸುವುದು ಯಾಕೆ? ಭೂದೃಶ್ಯಗಳನ್ನು ನೋಡಿ ಆನಂದಿಸಲು. ಆದರೆ ಒಂದು ಸ್ಥಳದ ನಿಜವಾದ ಮಹತ್ತ್ವ ಅಲ್ಲಿನ ಆಹಾರದಲ್ಲಿಯೂ ಇದೆ ಎಂಬುದು ಸತ್ಯವಲ್ಲವೇ? ಕೇರಳದಲ್ಲಿ ಬಾಳೆ ಎಲೆಯಲ್ಲಿ ಸವಿಯುವ ಸದ್ಯಮ್ ರುಚಿ ಬಲ್ಲವನೇ ಬಲ್ಲ. ಅಲ್ಲಿ ಯಾವುದೇ ಹಬ್ಬ ಬರಲಿ..ಕೇರಳ ಸದ್ಯಮ್ ಇದ್ದೇ ಇರುತ್ತದೆ. ಆಹಾರಕ್ಕೆ ಕೇರಳದಲ್ಲಿ ವಿಶೇಷ ಪ್ರಾಶಸ್ತ್ಯ ನೀಡಲಾಗಿದೆ.

kerala sadyam (1)

ಶುಭ್ರ ಬಾಳೆ ಎಲೆಯನ್ನು ನಿಮ್ಮ ಮುಂದಿಡುತ್ತಾರೆ. ಕೇರಳದಲ್ಲಿ ಮಾತ್ರವಲ್ಲ, ಎಲ್ಲ ಸಂಪ್ರದಾಯಗಳಲ್ಲಿಯೂ ಆಹಾರವನ್ನು ಬಡಿಸುವ ಕ್ರಮ ಶತಮಾನಗಳಿಂದ ರೂಪುಗೊಂಡಿದೆ. ಅದಕ್ಕೆ ಅದರದ್ದೇ ಆದ ವೈಜ್ಞಾನಿಕ ಕಾರಣಗಳಿವೆಯೆಂಬುದೂ ಸತ್ಯ. ಉದಾಹರಣೆಗೆ ಮಜ್ಜಿಗೆ-ಅನ್ನವನ್ನು ಕೊನೆಯಲ್ಲಿ ತಿನ್ನುತ್ತೇವೆ. ಇದಕ್ಕೆ ಮುಖ್ಯಕಾರಣ ಮಜ್ಜಿಗೆಗಿರುವ ಜೀರ್ಣಶಕ್ತಿಯ ಮೌಲ್ಯ. ಹಾಗಾಗಿ ಹಿರಿಯರು ಹಾಕಿಕೊಟ್ಟ ಮಾರ್ಗವನ್ನು ಸಾರಾಸಗಟಾಗಿ ತಳ್ಳಿಹಾಕುವುದು ಸರಿಯಲ್ಲ ಅಲ್ಲವೇ?

ಕೇರಳ ಸದ್ಯಮ್ ಎಂಬುದು ಧಾರ್ಮಿಕ ಆಚರಣೆಗಳ ಭಾಗವೂ ಹೌದು. ಕೇರಳದ ಹಬ್ಬಗಳಿಂದ ಸದ್ಯವನ್ನು ಬೇರ್ಪಡಿಸಲಾಗದು. ನೀವೀಗ ಚಾಪೆಯಲ್ಲಿ ಕುಳಿತಿದ್ದೀರಿ ಅಂದುಕೊಳ್ಳಿ. ಮೇಲಿನ ಎಡ ಮೂಲೆಯಲ್ಲಿ ಉಪ್ಪು, ಅದರ ಪಕ್ಕದಲ್ಲಿ ಉಪ್ಪಿನಕಾಯಿ, ಗರಿಗರಿಯಾದ ಬಾಳೆಕಾಯಿ ಚಿಪ್ಸ್, ನಂತರ ಪಲ್ಯಗಳು ಮತ್ತು ಪಾಯಸಗಳು ಹೀಗೆ ಒಂದೊಂದಾಗಿ ನಿಮ್ಮ ಬಾಳೆ ಎಲೆಯನ್ನು ಅಲಂಕರಿಸುತ್ತವೆ. 20ಕ್ಕೂ ಹೆಚ್ಚು ಬಗೆಬಗೆಯ ಭಕ್ಷ್ಯಗಳು ನಮ್ಮ ಉದರ ಸೇರಲು ಕಾತರಿಸುತ್ತವೆ. ಈ ಸದ್ಯದಲ್ಲಿ ಹೆಚ್ಚಾಗಿ ಮಾವಿನಕಾಯಿ ಅಥವಾ ನಿಂಬೆಯ ಉಪ್ಪಿನಕಾಯಿಯಿರುತ್ತದೆ. ಇನ್ನೊಂದೆಡೆ ಬಾಳೆಕಾಯಿ ಚಿಪ್ಸ್. ಕೆಲವು ಕಡೆ ಇದಕ್ಕೆ ವಿಶೇಷವಾಗಿ ಬೆಲ್ಲವನ್ನು ಲೇಪಿಸಿರುತ್ತಾರೆ.

ಹುಣಸೆ ಹಣ್ಣಿನ ರಸ, ಅವಿಲು, ಪಲ್ಯಗಳು, ಬೂದು ಸೋರೆಕಾಯಿ ಮತ್ತು ಇತರ ತರಕಾರಿಗಳೊಂದಿಗೆ ಮಾಡಿದ 'ಕೂಟು', ಕುಂಬಳಕಾಯಿ, ಅಲಸಂಡೆ ಕಾಳು ಮತ್ತು ತೆಂಗಿನ ಹಾಲಿನಿಂದ ತಯಾರಿಸಿದ ಮಸಾಲೆಯುಕ್ತ 'ಓಲನ್', ಸೌತೆಕಾಯಿಯ 'ಕಿಚಡಿ', ಪಚ್ಚಡಿ, ಗೆಣಸಿನಿಂದ ಮಾಡಿದ 'ಉಪ್ಪೇರಿ', ಸಾರು, ಸಾಂಬಾರ್, ಮಜ್ಜಿಗೆ ಹುಳಿ, ಹೋಳಿಗೆ, ಲಾಡು - ಹೀಗೆ ಬಗೆಬಗೆಯ ನೀರೂರಿಸುವ ಭಕ್ಷ್ಯಗಳು. ಎಲ್ಲಕ್ಕಿಂತಲೂ ನಿಮಗೆ ಇಷ್ಟವಾಗುವುದು ಅಡೆ ಪಾಯಸ! ಕಂದು ಬಣ್ಣಕ್ಕೆ ತಿರುಗಿದ ಪಾಯಸ ನಿಮ್ಮ ಆಲ್ ಟೈಮ್ ಫೇವರಿಟ್ ಆಗುವುದು ಖಂಡಿತ. ಊಟ ಮುಗಿಸಿ ಕೈ ತೊಳೆದು ಬಂದಾಗ ಚೆರ್ರಿಯೊಂದಿಗೆ ಪಾನ್ ಬೀಡಾ. ಇಲ್ಲಿ ಸಿಹಿಯಿದೆ, ಹುಳಿಯಿದೆ, ಕಹಿಯಿದೆ, ಖಾರವಿದೆ. ಇದು ಆಯುರ್ವೇದದಲ್ಲಿ ವಿವರಿಸಲಾಗಿರುವ ಪಾಕಪದ್ಧತಿಯನ್ನು ಅನುಸರಿಸುತ್ತದೆ. ಹಾಗಾಗಿ ಪಚನಕ್ರಿಯೆಗೆ ಸುಲಭವಾಗಿ ಸಹಕರಿಸುತ್ತದೆ.

ಕೆಲವು ಅಧಿಕೃತ ಸದ್ಯಗಳು ಕೇರಳದ ದೇವಾಲಯಗಳಲ್ಲಿ ಕಂಡುಬರುತ್ತವೆ. ಅಲ್ಲಿ ಅವುಗಳನ್ನು ದೇವರುಗಳಿಗೆ ನೈವೇದ್ಯ ರೂಪದಲ್ಲಿ ನಿವೇದಿಸಲಾಗುತ್ತದೆ. ಅಂಬಲಪ್ಪುಳ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಸಿಗುವ ಪ್ರಸಾದವಾದ ಪಾಲ್ಪಾಯಸಂ ಬಹಳ ಪ್ರಸಿದ್ಧವಾದದ್ದು. ಇದು ಶತಶತಮಾನಗಳಿಂದ ಅಲ್ಲಿ ಹಾಸುಹೊಕ್ಕಾಗಿದೆ. ಗುರುವಾಯೂರು ಕೃಷ್ಣ ದೇವಸ್ಥಾನದಲ್ಲಿ ಪ್ರತಿದಿನವೂ ಸದ್ಯದ ತರಹವೇ ಬಗೆಬಗೆಯ ಭಕ್ಷ್ಯಗಳ ಭೋಜನವಿರುತ್ತದೆ.

ಗ್ರಾಮ ಗ್ರಾಮಗಳಲ್ಲಿ ಸದ್ಯ ತಯಾರಿಸುವುದೆಂದರೆ ಅದು ಕುಟುಂಬದವರೆಲ್ಲರೂ ಮಾಡುವ ಕೆಲಸ. ಅಲ್ಲಿ ಹರಟೆ ಹೊಡೆಯುವುದು, ಒಟ್ಟಾಗಿ ಕೆಲಸ ಮಾಡುವುದು ಒಗ್ಗಟ್ಟಿನ ಪ್ರತೀಕ, ಬಾಂಧವ್ಯ ವೃದ್ಧಿಗೆ ಪೂರಕ. ಹಿರಿಯರ ಮಾರ್ಗದರ್ಶನದಲ್ಲಿ ಕುಟುಂಬದವರಷ್ಟೇ ಅಲ್ಲ, ನೆರೆಹೊರೆಯವರೂ ಪರಸ್ಪರ ಜತೆಯಾಗಿ ಅಡುಗೆ ಮಾಡುವುದು ಏಕತೆಯ ಸಂಕೇತ. ಕೇರಳದಲ್ಲಿ ಒಂದೊಂದು ಕಡೆಯೂ ಒಂದೊಂದು ವಿಧದ ಕೇರಳ ಸದ್ಯಮ್. ಈಗ ಕಣ್ಣೂರಿನಲ್ಲಿ ನೀವು ಸವಿಯುವ ಸದ್ಯಕ್ಕೂ, ತಿರುವನಂತಪುರದಲ್ಲಿ ಸವಿಯುವ ಸದ್ಯಕ್ಕೂ ಅಜಗಜಾಂತರ. ಪ್ರಾದೇಶಿಕವಾಗಿ ಸದ್ಯದ ತಯಾರಿಯಲ್ಲಿ ಭಿನ್ನತೆಯಿದೆ. ಈ ಸದ್ಯವನ್ನು ಸವಿಯಲು ಹೊರಡುವುದು ಒಂದು ಸುಂದರ ಪ್ರಯಾಣ. ನನ್ನ ಪ್ರಕಾರ ಹೇಳುವುದಿದ್ದರೆ ಪಾಲಕ್ಕಾಡ್, ಆಲಪ್ಪುಳ, ತಿರುವನಂತಪುರಮ್ ಮತ್ತು ತ್ರಿಶ್ಶೂರಿನಲ್ಲಿ ಸಿದ್ಧಪಡಿಸುವ ಕೇರಳ ಸದ್ಯದ ರುಚಿ ಅತ್ಯದ್ಭುತ.

kerala sadyam

ಕೇರಳ ಸದ್ಯದ ಜತೆಗೇ ನೆನಪಾಗುವುದು 'ಔಷಧ ಗಂಜಿ'. ಕೇರಳದವರು ಆಹಾರಕ್ಕೆ ಕೊಡುವ ಪ್ರಾಮುಖ್ಯತೆ ಅನುಕರಣೀಯವಾದದ್ದು. ಆಹಾರವೆಂದರೆ ಅವರಿಗೆ ಅಷ್ಟೇ ಗೌರವವೂ ಇದೆ. ಜುಲೈ-ಆಗಸ್ಟ್ ನಲ್ಲಿ ಬರುವ ಕರ್ಕಾಟಕ ಮಾಸ ರಾಮಾಯಣ ಮಾಸವೆಂದೇ ಕೇರಳದಲ್ಲಿ ಪ್ರಸಿದ್ಧ. ಅಲ್ಲಿ ಆ ಮಾಸದಲ್ಲಿ ವಿಶೇಷವಾಗಿ ಔಷಧ ಗಂಜಿಯನ್ನು ತಯಾರಿಸುತ್ತಾರೆ . ಕರ್ಕಾಟಕ ಮಾಸದ ಸಮಯದಲ್ಲಿ ರೋಗರುಜಿನಗಳು ತುಸು ಹೆಚ್ಚು. ಮಳೆಗಾಲದ ಸಮಯ ಬೇರೆ. ದೈಹಿಕವಾಗಿ ಸ್ವಲ್ಪ ದೌರ್ಬಲ್ಯದಿಂದಿರುವ ಕಾಲಘಟ್ಟ. ಹಾಗಾಗಿ ಕೇರಳದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಔಷಧೀಯ ಗಿಡ ಮೂಲಿಕೆಗಳನ್ನು ಬಳಸಿ ಮನೆ ಮನೆಗಳಲ್ಲಿ ಔಷಧ ಗಂಜಿಯನ್ನು ಸಿದ್ಧಪಡಿಸುತ್ತಾರೆ. ಔಷಧ ಗಂಜಿಯ ತಯಾರಿಕಾ ವಿಧಾನದ ಬಗ್ಗೆ ಆಯುರ್ವೇದದಲ್ಲಿ ಹೇಳಲಾಗಿದೆ. ಋತುಮಾನದ ಬದಲಾವಣೆಯಿಂದ ಸೋಂಕುಗಳು ತಗಲುವುದು ಸಹಜ. ಕರ್ಕಾಟಕ ಮಾಸದಲ್ಲಿ ಬದಲಾಗುವ ಹವಾಮಾನದಿಂದ ಸುಸ್ಥಿರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೊಂಚ ತ್ರಾಸದಾಯಕ. ಈ ಸಮಯದಲ್ಲಿ ಜೀರ್ಣ ಶಕ್ತಿಯೂ ಸ್ವಲ್ಪ ಕುಂದಿರುತ್ತದೆ. ವಾತ, ಪಿತ್ತ, ಕಫದಂಥ ದೋಷಗಳನ್ನು ಸಮತೋಲನದಲ್ಲಿರಿಸಿಕೊಳ್ಳಲು, ದೇಹವನ್ನು ಶುದ್ಧೀಕರಿಸಿಕೊಳ್ಳಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು, ಉರಿಯೂತದ ನಿವಾರಣೆಗಾಗಿ, ಪಚನ ಶಕ್ತಿಯನ್ನು ವೃದ್ಧಿಗೊಳಿಸಿಕೊಳ್ಳಲು ಔಷಧ ಗಂಜಿ ಖಂಡಿತವಾಗಿ ಸಹಾಯ ಮಾಡುತ್ತದೆ.

ಔಷಧ ಗಂಜಿಗೆ ಅಧ್ಯಾತ್ಮಿಕ ಮಹತ್ತ್ವವೂ ಇದೆ. ಕರ್ಕಾಟಕ ಮಾಸ ರಾಮಾಯಣ ಪಠಣವನ್ನು ಮಾಡುವ ಸಮಯ. ಔಷಧ ಗಂಜಿಯಂತಹ ಸರಳ, ಸಾತ್ತ್ವಿಕ ಮತ್ತು ಔಷಧೀಯ ಗಿಡಮೂಲಿಕೆಗಳಿಂದ ಕೂಡಿದ ಆಹಾರವನ್ನು ಸೇವಿಸುವುದೆಂದರೆ ದೇಹ ಮತ್ತು ಆತ್ಮ ಎರಡನ್ನೂ ಸ್ವಚ್ಛಗೊಳಿಸುವ ಪ್ರಕ್ರಿಯೆ. ಕೆಂಪಕ್ಕಿ, ದಶಪುಷ್ಪಮ್ (ಕೇರಳದಲ್ಲಿ ಲಭ್ಯವಿರುವ ಹತ್ತು ಗಿಡಮೂಲಿಕೆಗಳು), ಅಶ್ವಗಂಧ, ಬ್ರಾಹ್ಮಿ, ತುಳಸಿ, ಅಮೃತ ಬಳ್ಳಿ, ಕೊನ್ನಾರಿ ಗೆಡ್ಡೆ, ಒಣ ಶುಂಠಿ, ಜೀರಿಗೆ, ಮೆಂತ್ಯ, ಉದ್ದ ಮೆಣಸು, ತೆಂಗಿನ ಹಾಲು ಅಥವಾ ತುರಿದ ತೆಂಗಿನಕಾಯಿ, ತುಪ್ಪ ಮುಂತಾದವುಗಳನ್ನು ಬಳಸಿ ವಿಶೇಷವಾದ ಔಷಧ ಗಂಜಿ ಸಿದ್ಧಗೊಳ್ಳುತ್ತದೆ. ಒಟ್ಟಿನಲ್ಲಿ ಹೇಳುವುದಿದ್ದರೆ ಕೇರಳ ಸದ್ಯಮ್ ಮತ್ತು ಔಷಧ ಗಂಜಿ ಶ್ರೀಮಂತವಾದ ಕೇರಳದ ಸಂಸ್ಕೃತಿಯ ಅವಿಭಾಜ್ಯ ಅಂಗಗಳು ಎಂದರೆ ತಪ್ಪಾಗಲಿಕ್ಕಿಲ್ಲ.