ಥಾರ್ ಏರಿ ಭರ್ಜರಿ ಸವಾರಿ !
ಬೆಂಗಳೂರಿನಿಂದ ಕನ್ಯಾಕುಮಾರಿಗೆ ಹೋಗಿ ತಂಗಿದೆವು. ಮೂರು ಮಹಾಸಾಗರಗಳ ಸಂಗಮದ ಮೊರೆತದಲ್ಲಿ, ಸಂಜೆಯ ಸೂರ್ಯಾಸ್ತ ನೋಡಿ, ಮುಂಜಾನೆಯ ಸೂರ್ಯೋದಯವನ್ನೂ ನೋಡಿ, ಭಾರತ ಭೂಶಿರ ಮಂದಿರ ಸುಂದರಿ ಕನ್ಯಾಕುಮಾರಿಗೆ ಕೈ ಮುಗಿದು, K2K ಪಯಣ ಆರಂಭಿಸಿದೆವು. ಮುಂದೆ ಬೆಂಗಳೂರು, ಹೈದರಾಬಾದ್, ನಾಗಪುರ್, ಗ್ವಾಲಿಯರ್, ಆಗ್ರಾ, ದೆಹಲಿ, ಲುಧಿಯಾನಾ, ಜಮ್ಮು ಮಾರ್ಗವಾಗಿ ಸಾಗಿ ಶ್ರೀನಗರ ತಲುಪಿದೆವು. ಭೂಲೋಕದ ಸ್ವರ್ಗ ಕಾಶ್ಮೀರದ ಚೆಲುವನ್ನು ಸಿಕ್ಕಷ್ಟೇ ಸಮಯದಲ್ಲಿ ಕಣ್ಣು ತುಂಬಿಕೊಂಡೆವು.
-ಪೂರ್ಣಿಮಾ ಮಾಳಗಿಮನಿ
ನನ್ನ ಪ್ರಕಾರ ಮಹಾನಗರಗಳಲ್ಲಿ ವಾಸಿಸುತ್ತಿರುವ, ಆರ್ಥಿಕವಾಗಿ ಸ್ವತಂತ್ರರಾದ ಮಹಿಳೆಯರು ನಿಜವಾದ ಅರ್ಥದಲ್ಲಿ ಸ್ವಾವಲಂಬಿಗಳಾಗುವುದು ಯಾವುದಾದರೂ ವಾಹನವನ್ನು ಸರಾಗವಾಗಿ ಓಡಿಸುವುದನ್ನು ಕಲಿತಿದ್ದಾಗಷ್ಟೇ!
ಎಷ್ಟೋ ಬಾರಿ ಟ್ಯಾಕ್ಸಿಗೆ ಕೊಡಲು ಹಣವಿದ್ದರೂ, ಸುರಕ್ಷತೆಯ, ಸಮಯದ ಒತ್ತಡ ಮತ್ತು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿರಿಸಿಕೊಳ್ಳುವ ದೃಷ್ಟಿಯಿಂದ ಸ್ವತಃ ತಮ್ಮದೇ ಗಾಡಿಗಳಲ್ಲಿ ಓಡಾಡುವುದೇ ಹೆಚ್ಚು ಅನುಕೂಲ ಅನ್ನಿಸುತ್ತದೆ. ನಾನು ಕೆಲಸದ ನಿಮಿತ್ತ ದೆಹಲಿಯಲ್ಲಿ ವಾಸಿಸುತ್ತಿದ್ದಾಗ, ಅಲ್ಲಿನ ರೋಡ್-ರೇಜ್ ಅಥವಾ ರಸ್ತೆಗಳಲ್ಲಿ ಕ್ಷುಲ್ಲಕ ವಿಷಯಗಳಿಗೆ ಶುರುವಾಗುವ ಜಗಳಗಳು ಕೊಲೆವರೆಗೆ ಹೋಗುವುದನ್ನು ನೋಡಿ, ಹೆದರಿ, ಕಾರು ಓಡಿಸುವುದನ್ನು ಕಲಿಯಲೇ ಇಲ್ಲ. 'ಅಪ್ನಾ ಗಲೀ ಮೇ ಕುತ್ತಾ ಭೀ ಶೇರ್' ಎನ್ನುವಂತೆ ಬೆಂಗಳೂರಿಗೆ ವರ್ಗವಾಗಿ ಬಂದಾಗ ಕಾರು ಓಡಿಸುವುದನ್ನು ಕಲಿತೆ. ಮೊದಲಿಗೆ ಕೇವಲ ಆಫೀಸಿಗೆ ಹೋಗಲು, ಮಗಳನ್ನು ಶಾಲೆಗೆ ಬಿಡಲು ಮಾತ್ರ ಬಳಸುತ್ತಿದ್ದ ಕಾರು, ಒಂದು ಸಂಚಾರ ಸಾಧನದಿಂದ, ನನ್ನದೇ ದೇಹದ ಒಂದು ಭಾಗವಾದಷ್ಟು ಆಪ್ತವಾಗಿಬಿಟ್ಟಿತು.
ಇದನ್ನೂ ಓದಿ:ಸಂಸಾರಸ್ಥ ಹೆಣ್ಣುಮಕ್ಕಳು ಸೋಲೋ ಟ್ರಿಪ್ ಹೋಗಬಾರದಾ?!
ನಗರದ ಪರಿಧಿಯಿಂದ ಹೈವೇಗಳಿಗೆ ಕಾಲಿಟ್ಟು, ನೂರಾರು ಕಿಲೋಮೀಟರುಗಳಷ್ಟು ಓಡಿಸಲು ಶುರು ಮಾಡಿದೆ. ಅದೃಷ್ಟವಶಾತ್ ಒಂದೇ ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿದ್ದ, ಸಾಹಸ ಪ್ರವೃತ್ತಿಯ ಕೃಪಾ ಮತ್ತು ವಿದ್ಯಾ ಎನ್ನುವ ಗೆಳತಿಯರು ಸಿಕ್ಕರು. ಕಾರು ಮಾತ್ರವಲ್ಲದೆ ಬುಲೆಟ್ ಬೈಕ್ ಓಡಿಸುವ ಇವರಿಬ್ಬರೂ ನನ್ನಲ್ಲಿ ಹೊಸದೊಂದು ಆಸೆ ಹುಟ್ಟು ಹಾಕಿ, ಅಸಲಿ ಜೀವನ ಶುರುವಾಗುವುದು ರೋಡಿಗಿಳಿದ ಮೇಲೆ ಎಂದು ನಂಬಿಸಿ, ಸ್ಪೂರ್ತಿಯಾದರು. ಹಾಗೇ ಒಂದು ಸಂಜೆ ಮೂವರೂ ಹರಟುತ್ತಿದ್ದಾಗ, ಕೃಪಾ, 'ನಾವೇಕೆ ಬೈಕಿನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪ್ರವಾಸ ಮಾಡಬಾರದು?' ಎಂದು ನಮ್ಮ ತಲೆಯಲ್ಲಿ ಹುಳ ಬಿಟ್ಟಳು. ಈಗಾಗಲೇ ಸುಮಾರು ಇಪ್ಪತ್ತೈದು ಸಾವಿರ ಕಿಮೀ. ಗಳಷ್ಟು ಬೈಕು ಓಡಿಸಿರುವ, ಸ್ಪಿತಿ ವ್ಯಾಲಿ, ಲೇಹ್-ಲಡಾಕ್ ಗಳಲ್ಲಿ ಬೈಕು ಓಡಿಸಿರುವ ಕೃಪಾ ಈ ಮಾತು ಹೇಳುವಾಗ ಅವಳಿಗೆ ಯಾವುದೇ ಅನುಮಾನವಿರಲಿಲ್ಲ. ರಾಷ್ಟ್ರಮಟ್ಟದ ಬೈಸಿಕಲ್ ರಾಲಿಯಲ್ಲಿ ಹದಿಮೂರನೇ ಸ್ಥಾನ ಗಳಿಸಿರುವ ವಿದ್ಯಾ ಎದುರು ಸಹಿಷ್ಣುತೆ ಬಗ್ಗೆ ಮಾತಾಡುವಂತೆಯೇ ಇಲ್ಲ. ಇಂಥದ್ದೇನೂ ಮಾಡದ ಶುದ್ಧ ಸೋಮಾರಿ ಎಂದರೆ ನಾನೇ. ಆದರೆ ಆಕಾಶದಲ್ಲಿ ಹಾರ ಬಯಸುವ ನಾನು, ಬುಲೆಟ್ ಏರಿದರೆ ಕಾಲು ನೆಲಕ್ಕೆ ತಾಗುವುದೇ ಇಲ್ಲ, ಅಷ್ಟು ಕುಳ್ಳಿ ಎಂದು ಅರಿವಾದಾಗ ನಿರಾಸೆಯಾಯಿತು. ಆಗ ಸರಿ ಬೈಕು ಬೇಡ, ಕಾರಿನಲ್ಲೇ ಹೋಗೋಣ ಎಂದು ತೀರ್ಮಾನಿಸಿದೆವು.

ಮನೆಯಲ್ಲಿ ಈ ವಿಚಾರ ತಿಳಿಸಿದಾಗ, ವಿಮಾನದಲ್ಲಿ ಹೋಗಿ, ಡ್ರೈವರ್ ಕರ್ಕೊಂಡು ಹೋಗಿ, ಅಷ್ಟೊಂದು ದಿನ ಹೋಗುವ ಅಗತ್ಯವಾದರೂ ಏನು? ಈ ಗಾಡಿಯಲ್ಲಿ ಇಕ್ಕಟ್ಟು ಆಗುವುದಿಲ್ಲವೇ? ಅದೆಲ್ಲಾ ನೋಡಿರುವ ಜಾಗಗಳೇ ಅಲ್ಲವೇ? ಹೀಗೆ ಡ್ರೈವ್ ಮಾಡುತ್ತಲೇ ಇದ್ದರೆ ಪ್ರವಾಸಿ ತಾಣಗಳನ್ನು ನೋಡಲು ಸಮಯವೆಲ್ಲಿರುತ್ತದೆ? ಅಷ್ಟೊಂದು ದಿನ ರಜೆ ಸಿಗುತ್ತದೆಯೇ? ಮನೆ- ಗಂಡ -ಮಕ್ಕಳ ಬಗ್ಗೆ ಕಾಳಜಿ ಇದ್ದಿದ್ದರೆ ಹೀಗೆಲ್ಲಾ ಯೋಜನೆ ಹಾಕಿಕೊಳ್ಳುತ್ತಿದ್ದಿರಾ? ಉತ್ತರ ಭಾರತ ಹೆಣ್ಣು ಮಕ್ಕಳಿಗೆ ಸುರಕ್ಷಿತವಲ್ಲ ಅನ್ನೋದು ಗೊತ್ತಿಲ್ಲವೇ? ಈ ವಯಸ್ಸಿನಲ್ಲಿ ಇದೆಲ್ಲಾ ಬೇಕೇ? ಇದೆಲ್ಲಾ ನಿಮ್ಮಿಂದ ಸಾಧ್ಯವೇ ಇಲ್ಲ ಕನಸು ಕಾಣುತ್ತಿದ್ದೀರಾ? ... ಇನ್ನೂ ನೂರೆಂಟು ಪ್ರಶ್ನೆಗಳು ಹುಟ್ಟಿದವು.
ಅಂತೂ ಎಲ್ಲದಕ್ಕೂ ಒಂದು ಪರ್ಯಾಯ ವ್ಯವಸ್ಥೆ ಮಾಡಿ, ಹೊರಡುವುದು ಖಾಯಂ ಎಂದು ತೀರ್ಮಾನಿಸಿದೆವು. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಶುರು ಮಾಡಿದೆವು. ಕಾರಿನ ಕಾಗದ-ಪತ್ರಗಳು, ಸರ್ವಿಸಿಂಗ್, ಪಂಕ್ಚರ್-ಕಿಟ್, ಅಗ್ನಿಶಾಮಕ, ಕ್ಲೀನಿಂಗ್ ಸಾಮಗ್ರಿಗಳನ್ನೆಲ್ಲಾ ಜೋಡಿಸಿಕೊಂಡೆವು. ರೋಡ್-ಸೈಡ್-ಅಸಿಸ್ಟೆನ್ಸ್ ಮಾಡಿಸಿದ್ದರೂ ನಾವೇ ಟೈರ್ ಬದಲಿಸುವುದನ್ನೂ ಕಲಿತುಕೊಳ್ಳಬೇಕೆಂದಾಯಿತು. ಒಂದು ದಿನದಲ್ಲಿ ಇಷ್ಟು ಕಿಲೋಮೀಟರು ಓಡಿಸುವುದು ಎಂದಾದರೆ, ಯಾವ ಮಾರ್ಗದಲ್ಲಿ ಹೋಗುವುದು, ಎಲ್ಲಿ ಹಾಲ್ಟ್ ಮಾಡುವುದು ಅಂತೆಲ್ಲ ರೂಟ್-ಮ್ಯಾಪ್ ಹಾಕಿಕೊಂಡೆವು. ಗೂಗಲ್-ಮ್ಯಾಪ್ ಮುಂದಿಟ್ಟುಕೊಂಡು ಭಾರತದ ಉದ್ದಗಲಗಳನ್ನು ಅಳೆದುಬಿಟ್ಟೆವು. ನಾನು ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ್ದರಿಂದ, ಮಾರ್ಗ ಮಧ್ಯದಲ್ಲಿ ಬಹುತೇಕ ಎಲ್ಲ ಕಡೆ ಸೇನೆಯ ವಸತಿ ಸೌಲಭ್ಯ ದೊರಕಿತು. ಇದು ನಮಗೆ ಆರ್ಥಿಕವಾಗಿ ಅಷ್ಟೇ ಅಲ್ಲದೆ ಸುರಕ್ಷತೆಯ ದೃಷ್ಟಿಯಿಂದಲೂ ಬಹಳ ಅನುಕೂಲವಾಯಿತು.

ಡಿಸೆಂಬರಿನ ಮೊದಲ ಶನಿವಾರ ಹೊರಟೇ ಬಿಟ್ಟೆವು. ಬೆಂಗಳೂರಿನಿಂದ ಕನ್ಯಾಕುಮಾರಿಗೆ ಹೋಗಿ ತಂಗಿದೆವು. ಮೂರು ಮಹಾಸಾಗರಗಳ ಸಂಗಮದ ಮೊರೆತದಲ್ಲಿ, ಸಂಜೆಯ ಸೂರ್ಯಾಸ್ತ ನೋಡಿ, ಮುಂಜಾನೆಯ ಸೂರ್ಯೋದಯವನ್ನೂ ನೋಡಿ, ಭಾರತ ಭೂಶಿರ ಮಂದಿರ ಸುಂದರಿ ಕನ್ಯಾಕುಮಾರಿಗೆ ಕೈ ಮುಗಿದು, K2K ಪಯಣ ಆರಂಭಿಸಿದೆವು. ಮುಂದೆ ಬೆಂಗಳೂರು, ಹೈದರಾಬಾದ್, ನಾಗಪುರ್, ಗ್ವಾಲಿಯರ್, ಆಗ್ರಾ, ದೆಹಲಿ, ಲುಧಿಯಾನಾ, ಜಮ್ಮು ಮಾರ್ಗವಾಗಿ ಸಾಗಿ ಶ್ರೀನಗರ ತಲುಪಿದೆವು. ಭೂಲೋಕದ ಸ್ವರ್ಗ ಕಾಶ್ಮೀರದ ಚೆಲುವನ್ನು ಸಿಕ್ಕಷ್ಟೇ ಸಮಯದಲ್ಲಿ ಕಣ್ಣು ತುಂಬಿಕೊಂಡು ಉಧಂಪುರ್, ಅಮೃತಸರ್, ಜೈಪುರ್, ಇಂದೋರ್, ವಿಜಾಪುರ್ ಮಾರ್ಗವಾಗಿ ವಾಪಸ್ ಬೆಂಗಳೂರು ತಲುಪಿದೆವು.
ಈ ಪಯಣದ ಅಚ್ಚರಿಗಳು
- ಎರಡು ಜಡೆ ಒಂದು ಕಡೆ ಸೇರಲ್ಲ ಅಂತಾರೆ ಆದ್ರೆ ನಾವು ಮೂರು ಜನ ಇದ್ರೂ ಜಗಳವೇ ಆಡಲಿಲ್ಲ. ಹಾ… ಆದರೆ ಹಾಡುಗಳ ಆಯ್ಕೆಯ ವಿಷಯದಲ್ಲಿ ಮಾತ್ರ ಜಗಳವಾಡುತ್ತಿದ್ದೆವು. ಕೊನೆಗೆ ಯಾರು ಡ್ರೈವ್ ಮಾಡುತ್ತಿರುತ್ತಾರೋ ಅವರ ಮೆಚ್ಚಿನ ಹಾಡುಗಳನ್ನೇ ಎಲ್ಲರೂ ಕೇಳುವುದು ಎಂದು ಸಂಧಾನ ಮಾಡಿಕೊಂಡೆವು.
- ಒಂದೀಡೀ ದಿನ ಪ್ರಯಾಣ ಮಾಡಿದರೇ ಮೈ ನೋವು, ಸುಸ್ತು; ಆದರೆ ಈ ಹದಿನಾರು ದಿನಗಳ ಪಯಣದ ಕೊನೆಗೆ ನಾವು ಭೋಜಪುರಿ ಹಾಡುಗಳನ್ನು ಕೇಳುತ್ತಾ ಕುಳಿತಲ್ಲೇ ಡಾನ್ಸ್ ಮಾಡುವಷ್ಟು ಉತ್ಸಾಹದಿಂದಿದ್ದೆವು.
- ನಮ್ಮ ದೇಶ ಹೆಣ್ಣು ಮಕ್ಕಳು ಪ್ರವಾಸ ಮಾಡಲು ಅಷ್ಟೇನೂ ಸೇಫ್ ಅಲ್ಲ ಎನ್ನುವ ಭಾವನೆ ಇದೆ. ನಮ್ಮ ಅನುಭವದಲ್ಲಿ ಸ್ವಲ್ಪ ಮೊದಲೇ ಸರಿಯಾಗಿ ಪ್ಲಾನ್ ಮಾಡಿಕೊಂಡು ಹೊರಟರೆ, ಏನೂ ತೊಂದರೆಯಾಗುವುದಿಲ್ಲ. ನಾವು ಬೆಳಗ್ಗೆ ಬೇಗ ಹೊರಟು, ಸಂಜೆ ಹೊತ್ತಿಗೆ ಹಾಲ್ಟ್ ಮಾಡುತ್ತಿದ್ದೆವು. ಯಾವುದೇ ಕಾರಣಕ್ಕೂ ರಾತ್ರಿ ಪಯಣ ಬೇಡ ಅಂತ ನಿರ್ಧರಿಸಿದ್ದೆವು. (ಆದರೂ ಆಗ್ರಾದಲ್ಲಿ ನಮ್ಮ ಗಾಡಿ ಅನಿರೀಕ್ಷಿತ ಅಪಘಾತಕ್ಕೊಳಾಗಿದ್ದರಿಂದ, ರಿಪೇರಿ ಮಾಡಿಸಿಕೊಂಡು ದೆಹಲಿ ಹೊರಡುವಷ್ಟರಲ್ಲಿ ರಾತ್ರಿಯಾಗಿಬಿಟ್ಟಿತ್ತು. ಅನಿವಾರ್ಯವಾಗಿ ಅಂದು ಮಾತ್ರ ರಾತ್ರಿ ಡ್ರೈವ್ ಮಾಡಿದೆವು).
- ಚಳಿಗಾಲದಲ್ಲಿ ನಾವು ಹೊರಟಿದ್ದರಿಂದ ಉತ್ತರ ಭಾರತಕ್ಕೆ ಹೋಗ್ತಾ ಹೋಗ್ತಾ, ಮುಂಜಾನೆಯ ಮಂಜಿನಿಂದ ವಿಸಿಬಿಲಿಟಿ ಕಡಿಮೆ ಆಗಿಬಿಡುತ್ತದೆ (ರಸ್ತೆಯಲ್ಲಿ ಐವತ್ತು ಮೀಟರಿನಲ್ಲಿ ಏನಿದೆ ಎನ್ನುವುದು ಕೂಡ ಕಾಣುವುದಿಲ್ಲ) ಜಮ್ಮು ಕಾಶ್ಮೀರದಲ್ಲಂತೂ ಚಳಿಗಾಲದಲ್ಲಿ ಹಿಮಪಾತ ಶುರುವಾದರೆ ರಸ್ತೆಗಳು ಮುಚ್ಚಿಬಿಡುತ್ತವೆ, ಭೂ ಕುಸಿತ, ಮೇಘ ಸ್ಫೋಟ ಮುಂತಾದ ತೊಂದರೆಗಳು ಸರ್ವೇ ಸಾಮಾನ್ಯ. ನಮ್ಮ ಅದೃಷ್ಟದಿಂದ ಹಾಗೇನೂ ತೊಂದರೆಗಳಾಗಲಿಲ್ಲ.
- ಏನೇ ದೂರುಗಳಿದ್ದರೂ, ನಮ್ಮ ದೇಶ ವೈವಿಧ್ಯಮಯವಾದ ಸೌಂದರ್ಯದ ನಾಡು. ಕಡಲು, ಕಾಡು, ಬೆಟ್ಟ- ಗುಡ್ಡ, ನದಿಗಳು, ಬಯಲು ಸೀಮೆಗಳು, ಹಸಿರು ಗದ್ದೆಗಳು, ಹಿಮಚ್ಚಾದಿತ ಪರ್ವತಗಳು, ಕಣಿವೆಗಳು, ಮರುಭೂಮಿ...ಹೀಗೆ ದಾರಿಯುದ್ದಕ್ಕೂ ಸುಮ್ಮನೆ ಕೂತು, ಕಣ್ಣು ತಣಿಯುವಷ್ಟು ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಿದೆವು.
- ಎಷ್ಟು ಖರ್ಚಾಗುವುದೋ ಏನೋ ಎಂದು ಚಿಂತೆಯಾಗಿತ್ತು, ಆದರೆ ಹದಿನಾರು ದಿನಗಳಲ್ಲಿ, ಮೂರು ಜನರಿಂದ, ಡೀಸಲ್, ಊಟ ಮತ್ತು ವಸತಿ ಎಲ್ಲಾ ಸೇರಿ ಒಂದೂವರೆ ಲಕ್ಷ ಖರ್ಚಾಯಿತು.
- ಥಾರ್ ಒಂದು ಆಫ್ ರೋಡ್ ಗಾಡಿ, ಐಷಾರಾಮದ್ದಲ್ಲ ಎಂದರೂ, ನಮ್ಮ ಅಷ್ಟೂ ಲಗೇಜಿಗೆ ಜಾಗ ಸಿಕ್ಕಿತು, ಅಪರೂಪಕ್ಕೆ 140 kmph ತನಕ ಓಡಿಸಲು ಕೂಡ ಸಾಧ್ಯವಾಯಿತು.
- ಜಮ್ಮು-ಕಾಶ್ಮೀರದಲ್ಲಿ ಹತ್ತಾರು ಕಿಲೋಮೀಟರುಗಳ ಸುರಂಗಗಳು, ಪ್ರಪಾತದಿಂದ ಮುಗಿಲೆಡೆಗೆ ಚಿಮ್ಮಿದ ಎತ್ತರದ ಪಿಲ್ಲರುಗಳು ಮತ್ತು ಇತರ ಮೂಲಭೂತ ಸೌಕರ್ಯಗಳು, ಹೆಜ್ಜೆ ಹೆಜ್ಜೆಗೂ ನಿಂತಿದ್ದ ಸೈನಿಕರ ರಕ್ಷಣೆ, ನಮ್ಮನ್ನು ಮೂಕವಿಸ್ಮಿತರನ್ನಾಗಿಸಿತು.
- ಆಪ್ತ ಸ್ನೇಹಿತೆಯರೇ ಆದರೂ ಅಷ್ಟೂ ದಿನಗಳು ಮಾತಾಡಲು ಏನಿರುತ್ತದೆ? ಎರಡೇ ದಿನಕ್ಕೆ ಬೋರ್ ಆಗಿಬಿಡುತ್ತೇವೆ ಅಂದುಕೊಂಡಿದ್ದೆವು. ಆದರೆ ಪ್ರಯಾಣದುದ್ದಕ್ಕೂ ಒಂದು ಮುಗುಳುನಗೆಯೊಂದಿಗೆ ಗಂಟೆಗಟ್ಟಲೆ ಯಾರೊಬ್ಬರೂ ಮಾತಾಡದೇ ನಮ್ಮದೇ ಲೋಕದಲ್ಲಿ ಕಳೆದು ಹೋಗಿರುತ್ತಿದ್ದೆವು.
ಒಂದಲ್ಲ, ಎರಡಲ್ಲ ಬರೋಬ್ಬರಿ ಹದಿನಾರು ದಿನಗಳು ಸ್ವತಃ ನಾವೇ ಗಾಡಿ ಓಡಿಸಿಕೊಂಡು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮತ್ತೆ ಬೆಂಗಳೂರಿಗೆ ಎಂಟು ಸಾವಿರ ಕಿಲೋಮೀಟರು ಕ್ರಮಿಸಿ ಬಂದಾಗ ಅರಿವಾಗಿದ್ದು, ನಮ್ಮೊಂದಿಗೆ ನಾವು ಸಮಯ ಕಳೆಯಲು, ನಡೆದುಬಂದ ದಾರಿಯನ್ನು ನಿರುಕಿಸುತ್ತಾ ಆತ್ಮಾವಲೋಕನ ಮಾಡಿಕೊಳ್ಳಲು, ಹಿತವಾದ ಸಂಗೀತ ಕೇಳಲು, ಧ್ಯಾನಕ್ಕಿಳಿದಂತೆನಿಸುವ ಇಂಥ ಪ್ರವಾಸಗಳಿಂದ ಮಾತ್ರ ಸಾಧ್ಯ.
ಒಟ್ಟಾರೆ ಬಹಳ ಖುಷಿ ಕೊಟ್ಟ ಈ ಪ್ರವಾಸ, ನಮ್ಮ ಮಾನಸಿಕ ಸಾಮರ್ಥ್ಯದೊಂದಿಗೆ ದೈಹಿಕ ಸಾಮರ್ಥ್ಯದ ಇತಿ ಮಿತಿಗಳನ್ನು ಮೀರುವಂತೆ ಮಾಡಿತು. ನಾವಿಲ್ಲದೆ ಕುಟುಂಬದವರ ಗತಿ ಏನು ಎಂದು ಚಿಂತಿಸುತ್ತಾ ಕೂರದೇ, ಹೀಗೊಂದು ಟ್ರಿಪ್ ಹಾಕಿಕೊಂಡು ನೀವೂ ಹೊರಟು ಬಿಡಿ.