ಸಂಸಾರಸ್ಥ ಹೆಣ್ಣುಮಕ್ಕಳು ಸೋಲೋ ಟ್ರಿಪ್ ಹೋಗಬಾರದಾ?!
ಒಬ್ಬಳೇ ಹೊರಟರೆ ನಾಲ್ಕು ಜನರು ಏನೆನ್ನುತ್ತಾರೋ ಎಂದು ಹೆದರಿ, ಮನಸ್ಸಿನಲ್ಲೇ ಕೊರಗುವ ಮಹಿಳೆಯರನ್ನು ನಾನು ಬಲ್ಲೆ. ಎಲ್ಲರೂ ನನ್ನಂತೆ ಎಮ್ಮೆ ಚರ್ಮವನ್ನು ಬೆಳೆಸಿಕೊಂಡಿರುವುದಿಲ್ಲವಲ್ಲಾ? ಅದೇ ರೀತಿ ನನ್ನಿಂದ ಪ್ರೇರಿತರಾಗಿ ತಾವು ಕೂಡ ಒಂಟಿಯಾಗಿ ಪ್ರವಾಸಕ್ಕೆ ಹೊರಟವರೂ ಇದ್ದಾರೆ.ಆದರೆ ಹೇಗಾದರೂ ಮಾಡಿ ಮನೆಯವರನ್ನು ಒಪ್ಪಿಸಿ, ಗ್ರೂಪ್ ಟ್ರಿಪ್ಪಿಗೆ ಹೊರಡುವ ಇರಾದೆಯಿರುವ ಹೆಣ್ಣುಮಕ್ಕಳು ನನ್ನನ್ನು ಮಾತನಾಡಿಸಿದಾಗ ನನ್ನಲ್ಲೊಂದು ಸಣ್ಣ ಸಂಶಯ ಮೂಡುತ್ತದೆ. ನನ್ನಿಂದ ದೂರವಿರಲು ಕೆಲವರಿಗಾದರೂ ಬೆದರಿಕೆ ಬಂದಿರಬಹುದೋ ಎಂದು! ಏಕೆಂದರೆ ನನ್ನ ಬಳಿ ಆತ್ಮೀಯರಾಗಿ ಇರುವವರು ತಮಗೆ ಬಂದ ಬೆದರಿಕೆಯ ಬಗ್ಗೆ ನನ್ನಲ್ಲಿ ಹೇಳಿದ್ದಾಗಿದೆ!
- ವಾಣಿ ಕಾಮತ್
ಮೊನ್ನೆ ಇನ್ಸ್ಟಾಗ್ರಾಮನ್ನು ಸ್ಕ್ರೋಲಿಸುತ್ತಿದ್ದಾಗ ಒಂದು ರೀಲ್ ಕಣ್ಣಿಗೆ ಬಿತ್ತು. ನೀವು ಸಣ್ಣವರಿದ್ದಾಗ, ನಿಮ್ಮಿಂದ ದೂರವಿರಿ ಎಂದು ಎಷ್ಟು ಸಹಪಾಠಿಗಳ ಅಮ್ಮಂದಿರು ಹೇಳಿದ್ದಾರೋ ಎನ್ನುವ ಅರ್ಥ ಬರುವ ಸಾಲು ಅದು. ಅದನ್ನು ಓದಿ ನಾನು ನಕ್ಕುಬಿಟ್ಟೆ. ಆ ಮಾತುಗಳನ್ನು ಕೇಳಿಸಿಕೊಂಡವಳಲ್ಲವೇ ನಾನು? ಶಾಲೆಯಲ್ಲಿದ್ದಾಗ ತುಂಟಿ ಎಂದೂ, ಕಾಲೇಜು ಮುಟ್ಟಿದಾಗ ಗಂಡುಬೀರಿ ಎಂದೂ ಮಹಾಜನತೆ ನೆಟಿಕೆ ಮುರಿಯುತ್ತಿದ್ದಾಗಲೆಲ್ಲಾ ಸರಸ್ವತಿಯ ಕೃಪಾಕಟಾಕ್ಷವಿದ್ದ ನಾನು ನನ್ನ ಅಂಕಪಟ್ಟಿಯನ್ನು ತೋರಿಸಿ ಅವರ ಬಾಯಿ ಮುಚ್ಚಿಸಿಬಿಡುತ್ತಿದ್ದೆ! ಕಾಲಗರ್ಭದಲ್ಲಿ ಹೂತು ಹೋಗಿರುವ ಆ ನೆನಪುಗಳೆಲ್ಲಾ ಇಂದು ಹಳೆಯದಾದ ಜೇನಿನಂತೆ ಮಧುರವೇ!
ಇದನ್ನೂ ಓದಿ: ಅಮೇಜಾನ್ ಕಾಡಿನಲ್ಲಿ ಬದುಕುಳಿದವಳ ಅಮೇಜಿಂಗ್ ಸ್ಟೋರಿ!
ಆದರೆ, “ನೀನು ಆ ವಾಣಿಯಿಂದ ದೂರವಿರು ಮಾರಾಯ್ತಿ” ಎನ್ನುವ ಮಾತು ಈ ವಯಸ್ಸಿನಲ್ಲಿ ಕೇಳಬೇಕಾಗಿ ಬಂದಿರುವ ಬಗ್ಗೆ ಖುಷಿ ಪಡಬೇಕೋ, ದುಃಖಿಸಬೇಕೋ ಎನ್ನುವ ಗೊಂದಲ ನನಗೆ. ಈಗ ನನ್ನಿಂದಾಗಿ ಗಂಡ-ಹೆಂಡಿರ ನಡುವೆ, ಅತ್ತೆ-ಸೊಸೆಯರ ನಡುವೆ ಮುಸುಕಿನೊಳಗೆ ಗುದ್ದಾಟ ನಡೆಯುವುದನ್ನು ನೋಡಿಯೂ ನೋಡದಂತೆ ಇರುವ ಕಲೆಯ ಸಿದ್ಧಿಗೆ ತೊಡಗಿದ್ದೇನೆ.
ಇದೆಲ್ಲಾ ಶುರುವಾದದ್ದು ಈ ವರ್ಷದ ಜೂನ್ ತಿಂಗಳಿನಲ್ಲಿ. ಒಂದು ದಿನ ಮಾಮೂಲಿಯಂತೆ ರೀಲ್ ಗಳನ್ನು ಸ್ಕ್ರೋಲಿಸುತ್ತಿದ್ದೆ. ಈ ವರ್ಷದ ಆರು ತಿಂಗಳುಗಳನ್ನು ಸೋಮಾರಿಯಾಗಿ ಕಳೆದು ವ್ಯರ್ಥ ಮಾಡಿಕೊಂಡೆ ಎಂದು ಬೇಸರ ಪಡುತ್ತಿದ್ದಾಗ, ಯಾರದ್ದೋ ಸೋಲೋ ಟ್ರಿಪ್ಪಿನ ರೀಲ್ ಕಣ್ಣಿಗೆ ಬಿತ್ತು. ತಕ್ಷಣಕ್ಕೆ ನಾನೂ ಯಾಕೆ ಪ್ರವಾಸ ಹೋಗಬಾರದು ಎನ್ನುವ ವಿಚಾರ ಹೊಳೆಯಿತು. ನನ್ನ ಸಣ್ಣ ಮಗ ಹತ್ತನೇ ತರಗತಿಯಲ್ಲಿದ್ದ ಕಾರಣ ಹಿಂದಿನ ವರ್ಷವಿಡೀ ಎಲ್ಲೂ ಹೋಗಿರಲಿಲ್ಲ. ಅವನ ಪರೀಕ್ಷೆ ಮುಗಿದ ತಕ್ಷಣ ಇಬ್ಬರು ಮಕ್ಕಳೂ ಜಪಾನ್ ಸುತ್ತಾಡಿ ಬಂದು ನನ್ನ ಹೊಟ್ಟೆ ಉರಿಸಿದ್ದರು. ಅಷ್ಟೇ ಅಲ್ಲದೆ ನಾನು ಕೂಡ ಸೋಲೋ ಟ್ರಿಪ್ ಹೋಗಬೇಕೆಂದು ಒತ್ತಾಯಿಸಿದ್ದರು. ಈಗಾಗಲೇ ಹಲವು ದೇಶಗಳನ್ನು ನೋಡಿರುವ ಗಂಡ ಕೂಡ ನನಗಿಷ್ಟ ಬಂದ ಕಡೆ ಹೋಗು ಎಂದು ದನಿಗೂಡಿಸಿದ್ದರು. ಹೀಗೆ ಎಲ್ಲರಿಂದಲೂ ಗ್ರೀನ್ ಸಿಗ್ನಲ್ ಬಂದಿದ್ದರೂ ನಾನೇ ಆಲಸ್ಯದಿಂದ ಸುಮ್ಮನಿದ್ದೆ.

ಬಹುಶಃ ಆ ಹೊತ್ತಿನಲ್ಲಿ ನನ್ನ ಗ್ರಹಗತಿಗಳೆಲ್ಲಾ ಸರಿಯಾಗಿ ಕೂಡಿಬಂದಿತ್ತೋ ಏನೋ, ಕೂಡಲೇ ನಾನು ಕಾರ್ಯಪ್ರವೃತ್ತಳಾದೆ. ಸೋಲೋ ಟ್ರಿಪ್ ಹೋಗಲು ಧೈರ್ಯ ಸಾಲದ ಕಾರಣ ಗ್ರೂಪ್ ಟ್ರಿಪ್ಪಿಗಾದರೂ ಸೇರೋಣ ಎಂದೆನಿಸಿ ಗಂಡನಿಗೆ ಮೆಸೇಜು ಕಳಿಸಿದೆ. ಈಗಾಗಲೇ ಈ ವಿಷಯ ನಮ್ಮ ಮನೆಯಲ್ಲಿ ಚರ್ವಿತ ಚರ್ವಣವಾಗಿದ್ದ ಕಾರಣ ನಾನೆಣಿಸಿದಂತೆ ‘ಹೋಗು’ ಎನ್ನುವ ಉತ್ತರವೇ ಬಂತು. ನಮ್ಮ ಪರಿಚಯದವರೊಬ್ಬರಿಂದ ಅವರು ಆಗ ತಾನೇ ಹೋಗಿದ್ದ ಟ್ರಾವೆಲ್ ಏಜೆನ್ಸಿಯ ನಂಬರ್ ಪಡೆದು ಅವರಿಗೆ ಫೋನಾಯಿಸಿದೆ. ಮುಂದಿನ ತಿಂಗಳು ವಿಯೆಟ್ನಾಂಗೆ ಹೋಗುವ ಪ್ಯಾಕೇಜ್ ಇದೆ ಎಂದು ತಿಳಿದ ಕೂಡಲೇ ನನ್ನ ಹೆಸರನ್ನು ನೊಂದಾಯಿಸಿಯೇಬಿಟ್ಟೆ. ಬೆರಳ ತುದಿಯಲ್ಲೇ ಎಲ್ಲಾ ಕಾರ್ಯಗಳೂ ನಡೆದುಹೋಗುವ ಈ ಕಾಲದಲ್ಲಿ ಬರೀ ಅರ್ಧ ಗಂಟೆಯಲ್ಲೇ ಇವೆಲ್ಲವೂ ನಡೆದುಹೋಯಿತು.
ಜೀವನದಲ್ಲಿ ಮೊದಲ ಬಾರಿ ಒಂಟಿಯಾಗಿ ಪ್ರವಾಸ ಹೊರಟಿದ್ದ ನನ್ನ ಅವಸ್ಥೆ ಹೊಸದಾಗಿ ಎಲ್. ಕೆ. ಜಿ ಸೇರಿದ ಪುಟ್ಟ ಹುಡುಗಿಯಂತೆ ಇದ್ದದ್ದು ಸುಳ್ಳಲ್ಲ. ದಿನಕ್ಕೆರಡು ಬಟ್ಟೆಯಂತೆ ಶಾಪಿಂಗು, ಪ್ಯಾಕಿಂಗು ಬಿಟ್ಟರೆ ನಾನು ಪ್ರವಾಸಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಮಾಡುತ್ತಲೇ ಇರಲಿಲ್ಲ. ಹ್ಯಾಂಡ್ ಬ್ಯಾಗ್ ಹಿಡಿದು ಗಂಡ- ಮಕ್ಕಳನ್ನು ಹಿಂಬಾಲಿಸುತ್ತಿದ್ದ ನನಗೆ, ನಮ್ಮ ಕೋಣೆಯ ನಂಬರ್ ಕೂಡ ಗೊತ್ತಿರುತ್ತಿರಲಿಲ್ಲ! ಹೀಗಾಗಿ ಆ ಸಲ ಪ್ರವಾಸಕ್ಕೆ ಸಂಬಂಧಿಸಿದ ಎಲ್ಲಾ ಸಿದ್ಧತೆಗಳನ್ನು ನಾನೇ ಮಾಡಿಕೊಂಡೆ. ಪಾಸ್‌ಪೋರ್ಟ್, ಲಗೇಜಿನ ಜವಾಬ್ದಾರಿ ಹೊರುವುದು, ಹೊಟೇಲಿನಲ್ಲಿ ನನ್ನ ಕೋಣೆಯನ್ನು ಹುಡುಕಿಕೊಂಡು ಹೋಗುವುದು, ಸ್ನಾನದ ಮನೆಯಲ್ಲಿ ತಣ್ಣೀರು- ಬಿಸಿನೀರಿನ ನಲ್ಲಿಯನ್ನು ಅಡ್ಜಸ್ಟ್ ಮಾಡುವ ಸರ್ಕಸ್ ಕೂಡ ನಾನೇ ಮಾಡಬೇಕಾಗಿ ಬಂದುದರಿಂದ ಅವೆಲ್ಲವನ್ನೂ ಹುರುಪಿನಿಂದಲೇ ಮಾಡಿದೆ. ವಿಯೆಟ್ನಾಂನ ಆ ಪ್ರವಾಸ ಎಷ್ಟೊಂದು ಮುದ ನೀಡಿತೆಂದರೆ ನನ್ನ ಜತೆಗಿದ್ದ ಟೂರ್ ಮ್ಯಾನೇಜರ್ ರವರ ಮುಂದಿನ ಸಿಂಗಾಪುರ- ಮಲೇಷ್ಯಾ ಟ್ರಿಪ್ಪನ್ನು ಸೇರಿಕೊಂಡೆ. ಸಿಂಗಾಪುರನ್ನು ಈಗಾಗಲೇ ಮೂರು ಬಾರಿ ನೋಡಿರುವುದರಿಂದ ಮಲೇಷ್ಯಾವನ್ನು ಮಾತ್ರ ಸುತ್ತಾಡಿ ಬಂದೆ.ಅಷ್ಟಕ್ಕೇ ಸುಮ್ಮನಾಗದೆ ಮುಂದಿನ ತಿಂಗಳುಗಳಲ್ಲೂ ಮೂರು ಪ್ರವಾಸಗಳನ್ನು ಬುಕ್ ಮಾಡಿಕೊಂಡೆ.
ನಾನು ಊಹಿಸಿದಂತೆ, ಸೋಶಿಯಲ್ ಮೀಡಿಯಾದಲ್ಲಿ ನನ್ನ ಫೊಟೋ, ಬರಹಗಳನ್ನು ನೋಡಿ ಎರಡು ರೀತಿಯ ಪ್ರತಿಕ್ರಿಯೆಗಳು ಬಂದೇಬಿಟ್ಟವು. ಅದರಲ್ಲಿ ಮೊದಲ ಗುಂಪು ನನ್ನ ಹಿತೈಷಿಗಳದ್ದು. ನನ್ನ ಖುಷಿಯನ್ನು ತಮ್ಮದೆಂಬಂತೆ ಗ್ರಹಿಸಿ, ನನ್ನ ಬೆನ್ನು ತಟ್ಟಿದವರು ಅವರು. ಇವರಿಗೆ ವಿರುದ್ಧವಾದ ಇನ್ನೊಂದು ಗುಂಪಿನ ಬಗ್ಗೆ ನಾನು ನಿರ್ಲಕ್ಷ್ಯ ವಹಿಸಿದರೂ, ಈ ಲೇಖನಕ್ಕೆ ಕಾರಣೀಭೂತರೂ ಅವರೇ! “ ಗಂಡನನ್ನು ಬಿಟ್ಟು ನೀವೊಬ್ರೇ ಸುತ್ತಾಡ್ತಿದ್ದೀರಾ?” ಎನ್ನುವ ಪ್ರಶ್ನೆಯನ್ನು ನನ್ನತ್ತ ಎಸೆದವರು ಕೆಲವರಾದರೆ, “ ಅಯ್ಯೋ, ನಾವಂತೂ ಫ್ಯಾಮಿಲಿ ಜತೆಗೇ ಟ್ರಿಪ್ ಹೋಗ್ತೇವಪ್ಪಾ” ಎನ್ನುತ್ತಾ ನಾನೇನೋ ಮಹಾಪರಾಧ ಮಾಡಿದಂತೆ ಚುಚ್ಚಿದವರೂ ಇದ್ದಾರೆ. ಇವರಿಗೆಲ್ಲಾ ನಾನು ಉತ್ತರಿಸಲೇ ಹೋಗಿಲ್ಲ. ನನ್ನ ಮುಂದಿನ ಪ್ರವಾಸದ ಫೊಟೋಗಳೇ ಇವರಿಗೆಲ್ಲಾ ಉತ್ತರ ಎಂದುಕೊಂಡು ಸುಮ್ಮನಾಗಿದ್ದೇನೆ.
ಇಷ್ಟಕ್ಕೂ ಗಂಡನನ್ನು ಬಿಟ್ಟು ಹೆಣ್ಣುಮಕ್ಕಳು ಪ್ರವಾಸಕ್ಕೆ ಏಕೆ ಹೋಗಬಾರದು ಎನ್ನುವುದೇ ನನ್ನನ್ನು ಕಾಡುತ್ತಿರುವ ಪ್ರಶ್ನೆ. ಒಂದು ವೇಳೆ ಮನೆಯಲ್ಲಿ ಸಣ್ಣ ಮಕ್ಕಳಿದ್ದರೆ, ಅನಾರೋಗ್ಯ ಪೀಡಿತ ಹಿರಿಯರಿದ್ದರೆ, ಆರ್ಥಿಕವಾಗಿ ಸಬಲರಾಗಿರದಿದ್ದರೆ ಪ್ರವಾಸವನ್ನು ತಡೆಹಿಡಿಯಬಹುದು. ಆದರೆ ಈ ಯಾವುದೇ ಜವಾಬ್ದಾರಿಗಳಿಲ್ಲದ ಮಹಿಳೆಯರು ತಮ್ಮ ಗಂಡ- ಮಕ್ಕಳನ್ನು ಒಪ್ಪಿಸಿ ಸುತ್ತಾಡಲು ಹೊರಟರೆ ಜನರಿಗೇಕೆ ಹೊಟ್ಟೆ ಉರಿ? ತಮ್ಮಿಂದ ಸಾಧ್ಯವಾಗದ್ದನ್ನು ಬೇರೆಯವರು ಮಾಡುತ್ತಿರುವುದನ್ನು ನೋಡಿ ಸಹಿಸಲಾಗದೇನೋ. ನನ್ನನ್ನು ಮಾತ್ರವಲ್ಲ, ಒಂದೆರಡು ದಿನಗಳ ಮಟ್ಟಿಗೆ ತೀರ್ಥಕ್ಷೇತ್ರಗಳಿಗೋ ಮದುವೆಯಂಥ ಸಮಾರಂಭಗಳಿಗೋ ಹೋಗುವ ಮಹಿಳೆಯರ ಬಗ್ಗೆ ಅಪಹಾಸ್ಯದ ಮಾತುಗಳನ್ನು ಆಡುವುದನ್ನು ನಾನು ಕೇಳಿದ್ದೇನೆ. ಗಂಡನನ್ನು ಯಾವತ್ತೂ ಬಗಲಿಗೆ ಕಟ್ಟಿಕೊಂಡೇ ತಿರುಗಬೇಕೆಂಬ ಕಾನೂನು ಯಾವಾಗ ಜಾರಿಗೆ ಬಂತೋ, ಆ ದೇವರೇ ಬಲ್ಲ!

ಹೆಂಗಸರು ಮನೆಯಲ್ಲಿ ಇಲ್ಲದಿದ್ದರೆ ಊಟ-ತಿಂಡಿಗೆ ತೊಂದರೆ ಎನ್ನುವುದು ಮೊದಲ ಕಾರಣ. ಆದರೆ ಈಗಿನ ಕಾಲಘಟ್ಟವನ್ನು ನೋಡಿದರೆ ಮನೆಯ ಊಟವನ್ನೇ ನೆಚ್ಚಿಕೊಂಡವರು ಎಷ್ಟು ಜನರಿದ್ದಾರೆ? ತುಂಬಿ ತುಳುಕುವ ದರ್ಶಿನಿಗಳು, ಹೊಟೇಲುಗಳು, ಚಾಟ್ ಸೆಂಟರ್ ಗಳು, ರೆಡಿ ಟು ಈಟ್ ಉತ್ಪನ್ನಗಳು, ರೆಡಿಮೇಡ್ ದೋಸೆ/ ಇಡ್ಲಿ ಹಿಟ್ಟುಗಳು, ಮನೆಯಲ್ಲೇ ಅಡುಗೆ ತಯಾರಿಸಿ ಮಾರುವ ಉದ್ಯಮಿಗಳು- ಈ ಸಾಕ್ಷಿಗಳೇ ಸಾಕಲ್ಲಾ ಎರಡ್ಮೂರು ದಿನಗಳ ಮಟ್ಟಿಗೆ ಅಡುಗೆಮನೆ ಮುಚ್ಚಿದರೂ ತೊಂದರೆ ಏನಿಲ್ಲ ಎಂದು! ವಾಶಿಂಗ್ ಮೆಶಿನ್, ಡಿಶ್ ವಾಶರ್, ಮನೆಗೆಲಸದ ಸಹಾಯಕಿಯರು ಇತರ ಕೆಲಸಗಳನ್ನು ಹೇಗೋ ಸುಲಭಗೊಳಿಸುತ್ತಾರೆ. ಇವೆಲ್ಲದರ ಜತೆಗೆ ಅಕ್ಕಪಕ್ಕದ ಮನೆಯವರ, ನೆಂಟರ ಸಹಾಯವೂ ಇದ್ದರೆ ಬೋನಸ್ ಸಿಕ್ಕಂತೆ. ಸಮಸ್ಯೆಗಳಿಗೆ ಪರಿಹಾರಗಳು ಧಾರಾಳವಾಗಿ ಇವೆ. ಆದರೆ ಅವುಗಳನ್ನು ಬಳಸುವ ಮನಸ್ಸು ಮಾಡಬೇಕಷ್ಟೇ.
ಒಬ್ಬಳೇ ಹೊರಟರೆ ನಾಲ್ಕು ಜನರು ಏನೆನ್ನುತ್ತಾರೋ ಎಂದು ಹೆದರಿ, ಮನಸ್ಸಿನಲ್ಲೇ ಕೊರಗುವ ಮಹಿಳೆಯರನ್ನು ನಾನು ಬಲ್ಲೆ. ಎಲ್ಲರೂ ನನ್ನಂತೆ ಎಮ್ಮೆ ಚರ್ಮವನ್ನು ಬೆಳೆಸಿಕೊಂಡಿರುವುದಿಲ್ಲವಲ್ಲಾ? ಅದೇ ರೀತಿ ನನ್ನಿಂದ ಪ್ರೇರಿತರಾಗಿ ತಾವು ಕೂಡ ಒಂಟಿಯಾಗಿ ಪ್ರವಾಸಕ್ಕೆ ಹೊರಟವರೂ ಇದ್ದಾರೆ.ಆದರೆ ಹೇಗಾದರೂ ಮಾಡಿ ಮನೆಯವರನ್ನು ಒಪ್ಪಿಸಿ, ಗ್ರೂಪ್ ಟ್ರಿಪ್ಪಿಗೆ ಹೊರಡುವ ಇರಾದೆಯಿರುವ ಹೆಣ್ಣುಮಕ್ಕಳು ನನ್ನನ್ನು ಮಾತನಾಡಿಸಿದಾಗ ನನ್ನಲ್ಲೊಂದು ಸಣ್ಣ ಸಂಶಯ ಮೂಡುತ್ತದೆ. ನನ್ನಿಂದ ದೂರವಿರಲು ಕೆಲವರಿಗಾದರೂ ಬೆದರಿಕೆ ಬಂದಿರಬಹುದೋ ಎಂದು! ಏಕೆಂದರೆ ನನ್ನ ಬಳಿ ಆತ್ಮೀಯರಾಗಿ ಇರುವವರು ತಮಗೆ ಬಂದ ಬೆದರಿಕೆಯ ಬಗ್ಗೆ ನನ್ನಲ್ಲಿ ಹೇಳಿಯಾಗಿದೆ!
ಗಂಡಿಗೆ ಸಮನಾಗಿ ಹೆಣ್ಣು ಕೂಡ ಒಬ್ಬಳೇ ಸುತ್ತಾಡಬೇಕು ಎನ್ನುವ ಸ್ತ್ರೀವಾದ ನನ್ನದಲ್ಲ.ಗೆಳತಿಯರೊಂದಿಗೋ, ಅಪರಿಚಿತರೊಂದಿಗೋ ಒಂದ್ನಾಲಕ್ಕು ದಿನಗಳನ್ನು ಖುಷಿಯಾಗಿ ಕಳೆಯುವ ಅನುಭವವೇ ಬೇರೆ. ಆ ಅನುಭವವನ್ನು ತಮ್ಮದಾಗಿಸಿಕೊಳ್ಳಿ ಎನ್ನುವ ಸಲಹೆ ಮಾತ್ರ ನನ್ನದು. ನಾನಂತೂ ಮುಂದಿನ ವರ್ಷದ ಬಕೆಟ್ ಲಿಸ್ಟಿನ ತಯಾರಿಯಲ್ಲಿದ್ದೇನೆ!