ಅಮೇಜಾನ್ ಕಾಡಿನಲ್ಲಿ ಬದುಕುಳಿದವಳ ಅಮೇಜಿಂಗ್ ಸ್ಟೋರಿ!
ತಾವು ಹೇಳುವ ಮಾತು ಮುಂದೊಂದು ದಿನ ಅವಳ ಜೀವವನ್ನು ಕಾಪಾಡುತ್ತದೆಯೆಂದು ತಂದೆಗೆ ಆರನೇ ಇಂದ್ರಿಯ ತಿಳಿಸಿತ್ತೋ ಏನೋ! ‘ಒಂದು ವೇಳೆ ನೀನೇನಾದರೂ ಕಾಡಿನಲ್ಲಿ ಕಳೆದುಹೋದರೆ ಮೊದಲು ನೀರಿನ ಸೆಲೆಯನ್ನು ಹುಡುಕು. ಆ ಪುಟ್ಟ ಝರಿಗಳೇ ಮುಂದಕ್ಕೆ ಹರಿದು ತೊರೆಗಳಾಗಿ ನದಿಯಾಗುತ್ತದೆ. ಅದೇ ನೀರಿನ ಜಾಡು ಹಿಡಿದು ಅದು ಹರಿಯುವ ದಿಕ್ಕಿಗೆ ನಡೆದರೆ ನಿನಗೆ ಮುಂದೆ ಜನರು ಸಿಕ್ಕೇ ಸಿಗುತ್ತಾರೆ’ ತಂದೆಯ ಈ ಮಾತನ್ನು ಪಾಲಿಸುವುದೇ ತನ್ನ ಮುಂದಿನ ದಾರಿ ಎಂದು ಭಾವಿಸಿದ ಹುಡುಗಿ ನೀರಿನ ಝರಿಯನ್ನು ಹುಡುಕುವಲ್ಲಿ ಸಫಲಳಾದಳು ಕೂಡ!
- ವಾಣಿ ಸುರೇಶ್ ಕಾಮತ್
ವಿಮಾನ ಅಪಘಾತಗಳೆಂದರೇ ಭಯಾನಕ! ಯಾಕೆಂದರೆ ಅದರಲ್ಲಿ ಬದುಕಿ ಉಳಿಯುವವರ ಸಂಖ್ಯೆ ವಿರಳ. ಅದರಲ್ಲೂ ಸಾವಿರಾರು ಅಡಿಗಳಷ್ಟು ಎತ್ತರದಿಂದ ಧರೆಗುರುಳಿ ಬೀಳುವ ವಿಮಾನಗಳಲ್ಲಿರುವ ಪ್ರಯಾಣಿಕರ ಅಂತ್ಯ ಘೋರವೇ! ಇಂಥದ್ದೇ ಒಂದು ನತದೃಷ್ಟ ವಿಮಾನದಲ್ಲಿದ್ದರೂ ಬದುಕುಳಿದ ಏಕೈಕ ಅದೃಷ್ಟವಂತೆ, ಜೂಲಿಯಾನ್ ಕೋಪ್ಕಾರವರ ಕಥೆಯಿದು.
ಅಂದು ಜೂಲಿಯಾನಳ ಹೈಸ್ಕೂಲಿನ ಕೊನೆಯ ದಿನ. 1971ನೇ ಡಿಸೆಂಬರ್ 24ರಂದು ಅವಳು ತನ್ನ ತಾಯಿಯೊಂದಿಗೆ LANSA 508 ಎಂಬ ವಿಮಾನವನ್ನು ಹತ್ತಿದ್ದಳು. ಪೆರುವಿನ ಲೀಮಾದಿಂದ ಹೊರಟ ಅವಳು ಪುಕಾಲ್ಪಾದಲ್ಲಿದ್ದ ತನ್ನ ತಂದೆಯನ್ನು ಸೇರಿ ಕ್ರಿಸ್ಮಸ್ ಹಬ್ಬವನ್ನು ಆಚರಿಸುವ ಉದ್ದೇಶ ಹೊಂದಿದ್ದಳು. ಅವರಿದ್ದ ವಿಮಾನ ಚಲಿಸುತ್ತಿದ್ದಂತೆ ಆಕಾಶದಲ್ಲಿ ಗುಡುಗು-ಸಿಡಿಲಿನ ಅಬ್ಬರ ಉಂಟಾಗಿತ್ತು. ಜೂಲಿಯಾನಾಳ ತಾಯಿಗೆ ಗಾಬರಿಯಾದರೂ ಹತ್ತೊಂಬತ್ತು ವರ್ಷದ ಉತ್ಸಾಹಿ ಜೂಲಿಯಾನ್ ಆರಾಮವಾಗಿಯೇ ಇದ್ದಳು. ಅಷ್ಟರಲ್ಲಿ ಚಾಟಿಯಂತೆ ಬೀಸಿ ಬಂದ ಬೆಂಕಿಯ ಕೆನ್ನಾಲಿಗೆಯೊಂದು ವಿಮಾನಕ್ಕೆ ಬಡಿದಂತೆ ಅವಳ ಅಮ್ಮ ಕಿರುಚಿದ್ದರು, ‘ಇಟ್ ಈಸ್ ಓವರ್’ ಎಂದು. ಅವಳು ತನ್ನ ತಾಯಿಯ ಬಾಯಿಂದ ಕೇಳಿದ ಕೊನೆಯ ಮಾತು ಅದೇ!
ಸಿಡಿಲು ಬಡಿದ ವಿಮಾನಕ್ಕೆ ಬೆಂಕಿ ಹತ್ತಿ, ಅದು ಛಿದ್ರಗೊಂಡು 10,000 ಅಡಿಗಳ ಕೆಳಗಿದ್ದ ಭೂಮಿಯತ್ತ ಬೀಳತೊಡಗಿತು. ಪುಣ್ಯವಶಾತ್ ಜೂಲಿಯಾನ್ ಸೀಟ್ ಬೆಲ್ಟು ಕಟ್ಟಿದ್ದರಿಂದ ಅವಳು ಸೀಟಿನ ಸಮೇತ ಗಿರಗಿಟಲಿಯಂತೆ ಸುತ್ತಿ ಬೀಳತೊಡಗಿದಳು. ಕೆಳಗಿದ್ದ ಅಮೇಜಾನ್ ಕಾಡು ಆಗ ಬ್ರೊಕೊಲಿಯಂತೆ ಕಾಣುತ್ತಿತ್ತು ಎಂದು ಅವಳು ಹೇಳಿದ್ದಳು. ಹೀಗೆ ಆ ವಿಮಾನದ ಅವಶೇಷಗಳು, 91 ಪ್ರಯಾಣಿಕರ ಮೃತದೇಹಗಳು ಎರಡು ಕಿಮೀ ದೂರದವರೆಗೆ ಚೆಲ್ಲಾಡಿಕೊಂಡು ಬಿದ್ದಿದ್ದವು. ಅವರಲ್ಲಿ ಬದುಕಿದವಳೆಂದರೆ ಜೂಲಿಯಾನ್ ಮಾತ್ರ!

ಹೀಗೆ ಬಿದ್ದ ಜೂಲಿಯಾನಳಿಗೆ ಎಚ್ಚರವಾದದ್ದು ಮರುದಿನ ಬೆಳಗ್ಗೆ ಒಂಬತ್ತು ಗಂಟೆಗೆ. ಆಕೆ ಕೈಗೆ ಕಟ್ಟಿದ್ದ ವಾಚು ಆಗಲೂ ಕೆಲಸ ಮಾಡುತ್ತಿತ್ತು. ಆದರೆ ಅವಳ ಕಾಲರ್ ಬೋನ್ ಮುರಿದುಹೋಗಿತ್ತು. ತೋಳಿಗೆ ಗಾಯವಾಗಿತ್ತು. ಕಾಲಿನ ಮೀನಖಂಡ, ಬೆನ್ನುಮೂಳೆಗೆ ಒಂಚೂರು ಏಟಾಗಿದ್ದರೂ, ಆ್ಯಡ್ರಿನಾಲಿನ್ ಸ್ರವಿಕೆಯ ಕಾರಣದಿಂದಾಗಿ ಆಸ್ಪತ್ರೆ ಸೇರುವವರೆಗೂ ಆಕೆಗೆ ಅಲ್ಲಿ ನೋವಿನ ಅನುಭವವಾಗಿರಲಿಲ್ಲ. ಅಮೇಜಾನ್ ಕಾಡಿನಲ್ಲಿ ಸುರಿಯುತ್ತಿದ್ದ ಮಳೆಯಲ್ಲಿ ನಿತ್ರಾಣಳಾಗಿ ಬಿದ್ದ ಜೂಲಿಯಾನ್ ನೆಲದಿಂದ ಮೇಲಕ್ಕೆ ಎದ್ದೇಳಲು ತೆಗೆದುಕೊಂಡ ಸಮಯ ಬರೋಬ್ಬರಿ ಒಂದೂವರೆ ದಿನಗಳು!
ತನ್ನ ಕಣ್ಣೆದುರೇ ಚಿಮ್ಮಿ ಹೋಗಿದ್ದ ತಾಯಿ ಮರಳಿ ಸಿಗುವಳೆಂಬ ನಂಬಿಕೆಯಿಂದ ಒಂದು ದಿನವಿಡೀ ಕಾಡಿನಲ್ಲಿ ಸುತ್ತಾಡಿದ ಜೂಲಿಯಾನಳಿಗೆ ಕೆಲವು ಮೃತದೇಹಗಳು ಕಂಡವು. ಆದರೆ ಅವುಗಳಿದ್ದ ಪರಿಸ್ಥಿತಿಯನ್ನು ನೋಡಿದಾಗ ತನ್ನ ತಾಯಿ ಬದುಕಿರಲಾರಳೆಂದು ಅವಳಿಗೆ ಮನವರಿಕೆಯಾಯಿತು. ರೆಸ್ಕ್ಯೂ ಹೆಲಿಕಾಪ್ಟರ್‌ಗಳು ಮೇಲಿನಿಂದ ಹಾರಾಡುತ್ತಿರುವ ಸದ್ದು ಕೇಳಿಸಿದರೂ, ಆ ಘನ ಕಾಡಿನಲ್ಲಿದ್ದ ಮರಗಳ ನಡುವೆ ಇವಳಿದ್ದದ್ದು ಅವರಿಗೂ ತಿಳಿಯಲಿಲ್ಲ. ಒಂದು ದಿನ ಅವುಗಳ ಸದ್ದೂ ಕೇಳಿಸದಿದ್ದಾಗ ಜೂಲಿಯಾನಳಿಗೆ ಇದ್ದ ಕೊನೆಯ ಭರವಸೆಯೂ ಮಾಯವಾಗಿತ್ತು. ಇನ್ನೇನಿದ್ದರೂ ಈ ಕಾಡಿನಿಂದ ಹೊರಹೋಗಲು ತಾನೇ ದಾರಿ ಕಂಡುಕೊಳ್ಳಬೇಕು ಎಂದು ಹತ್ತೊಂಬತ್ತು ವರ್ಷದ ಆ ಹುಡುಗಿ ನಿರ್ಣಯಿಸಿಬಿಟ್ಟಳು.

ಮಳೆಯಿಂದಾಗಿ ಕುಡಿಯುವ ನೀರಿಗೆ ತೊಂದರೆಯಾಗದಿದ್ದರೂ ಆಕೆಯ ಬಳಿ ಇದ್ದದ್ದು ಒಂದು ಪ್ಯಾಕೆಟ್ ಕ್ಯಾಂಡಿ ಮಾತ್ರ. ಅದನ್ನೇ ದಿನಕ್ಕೆ ಒಂದೆರಡಂತೆ ತಿನ್ನಲು ಆಕೆ ನಿರ್ಧರಿಸಿದಳು. ಕಗ್ಗತ್ತಲ ಅಮೇಜಾನ್ ಕಾಡು ಅವಳಿಗೆ ಹೊಸದಾಗಿರಲಿಲ್ಲ. ಪ್ರಾಣಿಶಾಸ್ತ್ರ ತಜ್ಞರಾದ ತಂದೆ ಮತ್ತು ತಾಯಿ ಆಕೆಗೆ ಮೊದಲೇ ಕಾಡಿನ ಪರಿಚಯ ನೀಡಿದ್ದರು. ತಾವು ಹೇಳುವ ಮಾತು ಮುಂದೊಂದು ದಿನ ಅವಳ ಜೀವವನ್ನು ಕಾಪಾಡುತ್ತದೆಯೆಂದು ತಂದೆಗೆ ಆರನೇ ಇಂದ್ರಿಯ ತಿಳಿಸಿತ್ತೋ ಏನೋ! ‘ಒಂದು ವೇಳೆ ನೀನೇನಾದರೂ ಕಾಡಿನಲ್ಲಿ ಕಳೆದುಹೋದರೆ ಮೊದಲು ನೀರಿನ ಸೆಲೆಯನ್ನು ಹುಡುಕು. ಆ ಪುಟ್ಟ ಝರಿಗಳೇ ಮುಂದಕ್ಕೆ ಹರಿದು ತೊರೆಗಳಾಗಿ ನದಿಯಾಗುತ್ತದೆ. ಅದೇ ನೀರಿನ ಜಾಡು ಹಿಡಿದು ಅದು ಹರಿಯುವ ದಿಕ್ಕಿಗೆ ನಡೆದರೆ ನಿನಗೆ ಮುಂದೆ ಜನರು ಸಿಕ್ಕೇ ಸಿಗುತ್ತಾರೆ’ ತಂದೆಯ ಈ ಮಾತನ್ನು ಪಾಲಿಸುವುದೇ ತನ್ನ ಮುಂದಿನ ದಾರಿ ಎಂದು ಭಾವಿಸಿದ ಹುಡುಗಿ ನೀರಿನ ಝರಿಯನ್ನು ಹುಡುಕುವಲ್ಲಿ ಸಫಲಳಾದಳು ಕೂಡ!
ಇಷ್ಟರಲ್ಲಿ ಮೂರ್ನಾಲ್ಕು ದಿನಗಳು ಕಳೆದುಹೋಗಿದ್ದವು. ಆಹಾರವಿಲ್ಲದೆ ಆಕೆಯ ದೇಹ ನಿತ್ರಾಣಗೊಳ್ಳತೊಡಗಿತ್ತು. ಕೈಯ ಗಾಯ ವ್ರಣವಾಗಿ ಅದರಲ್ಲಿ ಹುಳುಗಳು ಕಾಣತೊಡಗಿದ್ದವು. ಫ್ರಾಕು ನೆನೆದು ಒದ್ದೆಯಾಗಿ ಚಳಿ ಕಾಡತೊಡಗಿತ್ತು. ಅದರ ಜತೆಗೆ ಕಾಡಿನ ನೂರಾರು ಪ್ರಾಣಿಗಳು, ಸರೀಸೃಪಗಳು, ಕೀಟಗಳನ್ನು ಆಕೆ ಎದುರಿಸಬೇಕಾಯಿತು. ಗಿಡಗಳ ತುಂಬೆಲ್ಲಾ ಹಣ್ಣುಗಳು ಕಾಣಿಸುತ್ತಿದ್ದರೂ, ಅವುಗಳಲ್ಲಿ ವಿಷಕಾರಿ ಯಾವುದೆಂದು ತಿಳಿಯದ ಕಾರಣ ಆಕೆ ತಿನ್ನಲು ಹೋಗಲಿಲ್ಲ. ಒಂದು ಬಾರಿ ಕಪ್ಪೆಯನ್ನು ಕಂಡು, ಹಸಿವು ತಾಳಲಾರದೆ ಅದನ್ನಾದರೂ ತಿನ್ನೋಣ ಎಂದುಕೊಂಡವಳಿಗೆ ಶಕ್ತಿಯಿಲ್ಲದೆ ಅದನ್ನು ಹಿಡಿಯಲಾಗಲಿಲ್ಲ. ಮುಂದೆ ಆಕೆಗೆ ತಿಳಿದ ವಿಷಯವೆಂದರೆ, ಆ ಕಪ್ಪೆ ತೀವ್ರ ವಿಷಕಾರಿಯಾಗಿದ್ದು ಅದನ್ನು ತಿಂದರೆ ಅವಳು ಬದುಕುತ್ತಲೇ ಇರಲಿಲ್ಲ! ಇಷ್ಟಲ್ಲದೆ ಕನ್ನಡಕ ಕಳೆದುಕೊಂಡಿದ್ದರಿಂದ ಎಲೆಗಳ ಮಧ್ಯೆ ಇರುವ ಹಾವು, ಚೇಳುಗಳು ಆಕೆಗೆ ಕಾಣುತ್ತಿರಲಿಲ್ಲ. ಒಂದು ಶೂ ಕಳೆದುಹೋಗಿದ್ದರಿಂದ ಇನ್ನೊಂದು ಶೂ ಸಹಾಯದಿಂದ ನೆಲವನ್ನು ಬಡಿದು ಆಕೆ ಹೆಜ್ಜೆ ಹಾಕಬೇಕಾಗಿತ್ತು. ಆದರೆ ನೀರಿನಲ್ಲಿರುವ ಮೊಸಳೆಗಳು ಇವಳತ್ತ ಯಾವುದೇ ಪ್ರತಿಕ್ರಿಯೆ ತೋರಿಸದೆ ಸುಮ್ಮನಿದ್ದುದರಿಂದ, ನೀರಿನಲ್ಲೇ ನಡೆದು ಹೋಗುವುದು ಉತ್ತಮ ಎಂದು ಆಕೆಗೆ ಅನಿಸಿತು. ಇಷ್ಟರಲ್ಲಿ ಆಗಲೇ ಒಂಬತ್ತು ದಿನಗಳು ಕಳೆದುಹೋಗಿ, ಅವಳಿಗೆ ಭ್ರಮೆ ಕಾಡಲು ಶುರುವಾಗಿತ್ತು. ಕೈಯ ವ್ರಣದಲ್ಲಿದ್ದ ಹುಳುಗಳು ಹರಿಯುವ ಸದ್ದು ಕೇಳಿಸಿದಾಗ ಬಹುಶಃ ಕೈಯನ್ನು ಕತ್ತರಿಸಬೇಕಾಗುವುದೋ ಎಂದು ಹೆದರಿದ್ದಳು. ಹತ್ತನೇ ದಿನ ನದಿಯ ದಡದಲ್ಲಿ ದೋಣಿಯನ್ನು ಕಂಡಾಗಲೂ ಮೊದಲು ಅದನ್ನು ತನ್ನ ಭ್ರಮೆ ಎಂದೇ ತಿಳಿದಿದ್ದಳು. ಹತ್ತಿರ ಹೋಗಿ ದೋಣಿಯನ್ನು ಮುಟ್ಟಿ ನೋಡಿದಾಗಲೇ ತಾನು ಗುರಿ ತಲುಪಿದ್ದೇನೆ ಎಂದು ಆಕೆಗೆ ಅರಿವಾದದ್ದು!

ದೋಣಿಯನ್ನು ನಿಲ್ಲಿಸಿದ ಕಡೆಯಿಂದ ದಂಡೆಯನ್ನು ಹತ್ತಿ, ಸ್ವಲ್ಪ ದೂರ ನಡೆದಾಗ ಜೂಲಿಯಾನಳಿಗೆ ಸಣ್ಣ ಮನೆಯೊಂದು ಕಂಡಿತ್ತು. ಸತ್ಯವೋ, ಭ್ರಮೆಯೋ ಎಂದು ತಿಳಿಯದೆ, ನಡೆಯಲಾಗದೆ ತೆವಳುತ್ತಾ ಕೊನೆಗೂ ಆ ಮನೆ ತಲುಪಿದಳು. ಅಲ್ಲಿ ಯಾರೂ ಇಲ್ಲದಿದ್ದರೂ ಗ್ಯಾಸೊಲಿನ್ನಿನ ಬಾಟಲಿಯನ್ನು ನೋಡಿದಾಗ ಆಕೆಗೆ ಪುನಃ ತನ್ನ ತಂದೆಯ ನೆನಪಾಯಿತು. ಅವರು ಪ್ರಾಣಿಗಳ ದೇಹದ ಮೇಲಿನ ಗಾಯಗಳನ್ನು ತೊಳೆಯಲು ಸೀಮೆಎಣ್ಣೆಯನ್ನು ಬಳಸುವುದನ್ನು ಕಂಡಿದ್ದರಿಂದ ಗ್ಯಾಸೊಲಿನ್ ಬಳಸಿ ತನ್ನ ಕೈಯ ವ್ರಣವನ್ನು ತೊಳೆದಳು. ಅತೀವ ನೋವಿನಿಂದ ನರಳಿದರೂ ಅರ್ಧದಷ್ಟು ಹುಳಗಳು ಸತ್ತು ಹೋಗಿದ್ದನ್ನು ನೋಡಿ ಅವಳಿಗೆ ಸಮಾಧಾನವಾಯಿತು. ಕೈ ಉಳಿದರೆ ಸಾಕು ಎಂದು ಬೇಡಿಕೊಳ್ಳುತ್ತಾ, ಜನರ ಬರುವಿಕೆಯನ್ನು ಕಾಯುತ್ತಾ ದಿನವೊಂದು ಅಲ್ಲಿ ಕಳೆಯಿತು.
ಅಂದು ವಿಮಾನ ಅಪಫಾತವಾಗಿ ಹನ್ನೊಂದನೆಯ ದಿನ! ಅವಳ ಅದೃಷ್ಟವೆಂಬಂತೆ ಮೂವರು ಸ್ಪಾನಿಷ್ ಜನರು ಬಂದೇ ಬಿಟ್ಟರು. ಜೂಲಿಯಾನಳ ಕೆಂಪಾದ ಕಣ್ಣುಗಳು, ತೆಳು ಬಣ್ಣದ ಕೂದಲನ್ನು ನೋಡಿ ಮೊದಲಿಗೆ ಅವಳೊಂದು ಕ್ಷುದ್ರಶಕ್ತಿ ಎಂದುಕೊಂಡರೂ ನಂತರ ಆಕೆಯ ಮಾತನ್ನು ಕೇಳಿ ಸಹಾಯಕ್ಕೆ ಧಾವಿಸಿದರು. ಕೈಯ ವ್ರಣಕ್ಕೆ ಶುಶ್ರೂಷೆ ಮಾಡಿ, ಹೊಟ್ಟೆಗೆ ಆಹಾರ ನೀಡಿ, ಏಳು ಗಂಟೆಯ ಹಾದಿ ಕ್ರಮಿಸಿ, ಅವಳನ್ನು ಆಸ್ಪತ್ರೆಗೆ ಸಾಗಿಸಿದರು.

ನಂತರ ತಂದೆಯನ್ನು ಸೇರಿದ ಜೂಲಿಯಾನ್ ಮುಂದೆ ಪ್ರಾಣಿಶಾಸ್ತ್ರ ಮತ್ತು ಪರಿಸರಶಾಸ್ತ್ರದ ಅಧ್ಯಯನ ನಡೆಸಿ, ಬಾವಲಿಗಳ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದರು. ಪೆರುವಿನ ಸಂಶೋಧನಾ ಕೇಂದ್ರವೊಂದರ ಡೈರೆಕ್ಟರ್ ಆಗಿ ಅದೇ ಅಮೇಜಾನ್ ಕಾಡಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಈಗ ಜರ್ಮನಿಯ ಮ್ಯೂನಿಕ್‌ನಲ್ಲಿ ಪ್ರಾಣಿಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥಾಲಯದಲ್ಲಿ ಗ್ರಂಥಪಾಲಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಜಗತ್ತನ್ನೇ ಅಚ್ಚರಿಗೀಡು ಮಾಡಿದ ಈ ಘಟನೆ ವಿಶ್ವದೆಲ್ಲೆಡೆ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತಲ್ಲದೆ, ‘ಮಿರಾಕಲ್ಸ್ ಸ್ಟಿಲ್ ಹ್ಯಾಪನ್’ ಎಂಬ ಸಿನಿಮಾದ ಮೂಲಕವೂ ಜನಪ್ರಿಯವಾಯಿತು. ಕೆಲವು ದಶಕಗಳ ಕಾಲ ಮಾಧ್ಯಮಗಳಿಂದ ದೂರವಿದ್ದ ಜೂಲಿಯಾನ್‌ರವರ ಬಗ್ಗೆ ‘ವಿಂಗ್ಸ್ ಆಫ್ ಹೋಪ್’ ಎಂಬ ಡಾಕ್ಯುಮೆಂಟರಿಯನ್ನು ಮಾಡಲಾಯಿತು. ಅವರು ಬರೆದ ಆತ್ಮಕತೆ ‘ವ್ಹೆನ್ ಐ ಫೆಲ್ ಫ್ರಮ್ ದ ಸ್ಕೈ’ ಕೂಡ 2011 ರಲ್ಲಿ ಬೆಸ್ಟ್ ಸೆಲ್ಲರ್ ಎನ್ನುವ ಮಾನ್ಯತೆ ಪಡೆಯಿತು.
ವಿಮಾನ ಅಪಘಾತದಲ್ಲಿ ಬದುಕಿ ಉಳಿದ ಈ ಘಟನೆ ಪವಾಡದಂತೆ ಕಂಡರೂ, ಸಣ್ಣ ಹುಡುಗಿಯೊಬ್ಬಳ ಛಲ, ಸಮಯಪ್ರಜ್ಞೆ, ಜ್ಞಾನ, ಧೈರ್ಯವನ್ನು ಕಡೆಗಣಿಸುವಂತಿಲ್ಲ. ಅಮೇಜಾನ್ ಕಾಡೆಂದರೆ ಕತ್ತಲೆಯ ಕೂಪವೇ. ಹನ್ನೊಂದು ದಿನಗಳ ಕಾಲ ಆಹಾರವಿಲ್ಲದೆ, ವಿಷಕಾರಿ ಕ್ರೂರಜೀವಿಗಳು ಮತ್ತು ಮಳೆಯೊಂದಿಗೆ ಸೆಣೆಸಿದ ಜೂಲಿಯಾನ್ ಛಲಗಾತಿಯೇ ಸರಿ! ಅವರ ಬದುಕಿನ ಈ ರೋಚಕ ಕಥೆ ಎಲ್ಲರೂ ತಿಳಿಯಬೇಕಾದದ್ದು.