• ವೆಂಕಟೇಶ್ ಮುದಗಲ್

ನನಗೆ ಪ್ರವಾಸವೆಂದರೆ ಕೇವಲ ಊರು ಬಿಡುವುದಲ್ಲ, ಅದು ಆತ್ಮದ ಅಂತರ್ಯಾತ್ರೆ. ಬದುಕಿನ ದಣಿವನ್ನು ಕಳಚಿ, ಸಂತೋಷಕ್ಕೆ ಹೊಸ ಚೈತನ್ಯ ತುಂಬಿ, ಮನಸ್ಸಿನ ನೆಮ್ಮದಿಗೆ ಹೊಸ ಆಯುಷ್ಯ ನೀಡುವ ಜೀವಸಂಜೀವಿನಿ. ಆದ್ದರಿಂದಲೇ ನಾನು ನಿಯಮಿತವಾಗಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತೇನೆ. ಪ್ರತಿಯೊಂದು ಬೆಟ್ಟ, ನದಿ, ದೇವಾಲಯ, ಅರಣ್ಯ ಹಾಗೂ ಪುರಾತನ ಸ್ಮಾರಕವು ಬದುಕನ್ನು ಹೊಸ ದೃಷ್ಟಿಯಿಂದ ನೋಡುವುದನ್ನು ಕಲಿಸುತ್ತದೆ. ಟಿ. ಎಸ್. ಎಲಿಯಟ್ ಹೇಳಿದಂತೆ, "ಪ್ರಯಾಣವೇ ಮುಖ್ಯ, ತಲುಪುವಿಕೆಯಲ್ಲ." ಆ ಪ್ರಯಾಣದ ಪ್ರತಿಯೊಂದು ಹೆಜ್ಜೆಯೂ ಜೀವನದ ಅರ್ಥವನ್ನು ಮತ್ತಷ್ಟು ಆಳವಾಗಿಸುತ್ತದೆ. ವಿಲಿಯಂ ವರ್ಡ್ಸ್‌ವರ್ತ್ ಅವರ "ಪ್ರಕೃತಿಯ ಬೆಳಕಿನೊಳಗೆ ಬನ್ನಿ; ಪ್ರಕೃತಿಯೇ ನಿಮ್ಮ ಗುರುವಾಗಲಿ" ಎಂಬ ಅಮರ ಸಂದೇಶ ಪ್ರಕೃತಿಯೇ ಶ್ರೇಷ್ಠ ವಿಶ್ವವಿದ್ಯಾಲಯ ಎಂಬುದನ್ನು ಸಾರುತ್ತದೆ. ವಿಲಿಯಂ ಶೇಕ್ಸ್‌ಪಿಯರ್ ಅವರ "ಪ್ರಕೃತಿಯ ಒಂದು ಸ್ಪರ್ಶವೇ ಇಡೀ ಜಗತ್ತನ್ನು ಬಂಧುಗಳನ್ನಾಗಿ ಮಾಡುತ್ತದೆ" ಎಂಬ ವಾಕ್ಯ ವಿಶ್ವಮಾನವೀಯತೆಯ ಮೌಲ್ಯವನ್ನು ನೆನಪಿಸುತ್ತದೆ. ಅದೇ ಭಾವವನ್ನು ಕನ್ನಡದ ವರಕವಿ ಡಾ. ದ. ರಾ. ಬೇಂದ್ರೆ ಅವರ "ಬಾಳು ಬೆಳಗಲಿ, ಮನವು ಅರಳಲಿ" ಎಂಬ ಕಾವ್ಯಸ್ಪಂದನ ಮತ್ತಷ್ಟು ಶ್ರೀಮಂತಗೊಳಿಸುತ್ತದೆ. ಹೀಗಾಗಿ ನನ್ನ ಪಾಲಿಗೆ ಪ್ರತಿಯೊಂದು ಪ್ರವಾಸವೂ ಕೇವಲ ಹೊಸ ಸ್ಥಳದ ಭೇಟಿ ಅಲ್ಲ; ಅದು ಸಂತೋಷದ ಅವಧಿಯನ್ನು ವಿಸ್ತರಿಸುವ, ಮನಸ್ಸಿಗೆ ಶಾಶ್ವತ ಶಾಂತಿಯನ್ನು ನೀಡುವ, ಬದುಕಿನ ಅರ್ಥವನ್ನು ಮತ್ತಷ್ಟು ಸಮೃದ್ಧಗೊಳಿಸುವ ಒಂದು ಪವಿತ್ರ ಆತ್ಮಯಾತ್ರೆಯಾಗಿದೆ.

ಇದನ್ನೂ ಓದಿ: ಅದ್ಭುತ ಕೆತ್ತನೆಗಳ ಅಮೃತೇಶ್ವರ ದೇವಾಲಯ

ಅಂತೆಯೇ ಈ ಬಾರಿ ನಾವು ಹಿಮಾಲಯದ ಸೆರಗಿನ ಸಾಹಸಮಯ ಶ್ರೀ ಕೇದಾರನಾಥ ಮತ್ತು ಬದರಿನಾಥ ಧಾಮ್ ಗಳ ಯಾತ್ರೆ ಕೈಗೊಂಡಿದ್ದೆವು. ಹರಿ-ಹರನ ಕೃಪೆಯಿಂದ ಯಾವ ಸಮಸ್ಯೆಯೂ ಇಲ್ಲದೇ ಯಾತ್ರೆ ಸಂಪನ್ನವಾಯಿತು. ಹಿಮಾಲಯದ ದೈತ್ಯ ದಿವ್ಯತೆಗೆ ಮತ್ತು ಹರಿ-ಹರನ ದರ್ಶನದಿಂದ ಮನ ಪುಳಕಿತವಾಯಿತು. ಅಲ್ಲಿಂದ ಕೃಷ್ಣನ ಮಥುರೆಗೆ ಹೋಗುವಾಗ ನಮ್ಮ ಗೈಡ್ ಕಲಬುರಗಿಯ ಶ್ರೀ ಗುಂಡಾಚಾರ್ಯ ನರಿಬೋಳ್ ಅವರು ಮಾರ್ಗ ಮಧ್ಯದಲ್ಲಿ ಇನ್ನೊಂದು ಆಸಕ್ತಿಕರ ತಾಣಕ್ಕೆ ಕರೆದೊಯ್ದರು. ಅದೇ “ಶುಕ್ರತಾಲ್.”

ಗಂಗೆಯ ದಡದಲ್ಲಿ ಗಾಳಿಯೂ ಮಂತ್ರವಾಗುವ ತಾಣ, ಮರಗಳ ನೆರಳೂ ಧ್ಯಾನವಾಗುವ ಕ್ಷೇತ್ರ, ಮರಣದ ಭಯವೇ ಮೋಕ್ಷದ ಮಾರ್ಗವಾಗಿ ಪರಿವರ್ತಿತವಾದ ಪುಣ್ಯಭೂಮಿಯೇ ಉತ್ತರ ಪ್ರದೇಶದ ಶುಕ್ರತಾಲ್. ಭಾರತದ ಆಧ್ಯಾತ್ಮಿಕ ಇತಿಹಾಸದಲ್ಲಿ ಕೆಲವು ಕ್ಷೇತ್ರಗಳು ದೇವಾಲಯಗಳಿಂದಲ್ಲ, ದಿವ್ಯ ಘಟನೆಗಳಿಂದ ಅಮರವಾಗಿವೆ. ಅಂತಹ ಅಪರೂಪದ ಕ್ಷೇತ್ರವೇ ಉತ್ತರ ಪ್ರದೇಶದ ಮುಜಫ್ಫರ್‌ನಗರ ಜಿಲ್ಲೆಯ ಶುಕ್ರತಾಲ್.

ಇಲ್ಲಿ ಕಾಲವೇ ನಿಂತಂತಿದೆ. ಗಂಗೆಯ ಕಲಕಲ ನಾದದ ನಡುವೆ ಇಂದಿಗೂ ಶ್ರೀಮದ್ಭಾಗವತದ ಅಮೃತಧಾರೆ ಭಕ್ತರ ಹೃದಯಗಳನ್ನು ಪವಿತ್ರಗೊಳಿಸುತ್ತಿದೆ.

shukratal

ಮಹಾಭಾರತದೊಂದಿಗೆ ಬೆಸೆದ ಕ್ಷೇತ್ರ

ಮಹಾಭಾರತ ಯುದ್ಧದ ಬಳಿಕ ಅರ್ಜುನನ ಮೊಮ್ಮಗ ಹಾಗೂ ಅಭಿಮನ್ಯುವಿನ ಪುತ್ರನಾದ ರಾಜ ಪರೀಕ್ಷಿತನು ಋಷಿಶಾಪದಿಂದ ಏಳು ದಿನಗಳಲ್ಲಿ ತಕ್ಷಕ ಸರ್ಪದ ಕಚ್ಚುವಿಕೆಯಿಂದ ಮರಣ ಹೊಂದುವ ಶಾಪಕ್ಕೆ ಗುರಿಯಾಗುತ್ತಾನೆ. ಜೀವನದ ಕೊನೆಯ ಏಳು ದಿನಗಳನ್ನು ಭಗವಂತನ ಚಿಂತನೆಯಲ್ಲೇ ಕಳೆಯಲು ನಿರ್ಧರಿಸಿದ ರಾಜ ಪರೀಕ್ಷಿತನು ಗಂಗಾತೀರದ ಈ ಪವಿತ್ರ ಕ್ಷೇತ್ರಕ್ಕೆ ಬಂದನು. ಆಗ, ವ್ಯಾಸ ಮಹರ್ಷಿಯ ಪುತ್ರರಾದ ಮಹರ್ಷಿ ಶುಕದೇವರು, ನಿರಂತರ ಏಳು ದಿನಗಳ ಕಾಲ ಶ್ರೀಮದ್ಭಾಗವತ ಮಹಾಪುರಾಣವನ್ನು ಪ್ರವಚನ ಮಾಡಿದರು. ಆ ಅಮೃತವಾಣಿಯನ್ನು ಆಲಿಸಿದ ರಾಜ ಪರೀಕ್ಷಿತನು ಮೋಕ್ಷವನ್ನು ಪಡೆದನೆಂದು ನಮ್ಮ ಗೈಡ್ ಅವರಿಂದ ತಿಳಿದುಬಂತು.

ಇದನ್ನೂ ಓದಿ: ಮಿಲಿಯನ್ ಬಾಟಲಿಗಳ ಬೌದ್ಧ ದೇವಾಲಯ

ಅಕ್ಷಯವಟದ ಮಹಿಮೆ

ಶುಕ್ರತಾಲ್‌ನ ಪ್ರಮುಖ ಆಕರ್ಷಣೆಯೇ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ ಎಂದು ನಂಬಲಾಗುವ ಅಕ್ಷಯವಟ. ಇದೇ ವಟವೃಕ್ಷದ ನೆರಳಿನಲ್ಲಿ ಶುಕದೇವರು ಭಾಗವತ ಪ್ರವಚನ ಮಾಡಿದರು ಎಂಬುದು ಭಕ್ತರ ಅಚಲ ನಂಬಿಕೆ. ಇಂದಿಗೂ ಆ ವೃಕ್ಷದ ನೆರಳಿನಲ್ಲಿ ಕುಳಿತರೆ ಮನಸ್ಸಿಗೆ ಅಪರೂಪದ ನೆಮ್ಮದಿ ದೊರೆಯುತ್ತದೆ. ಗಂಗೆಯ ಗಾಳಿ, ಪಕ್ಷಿಗಳ ಕಲರವ ಮತ್ತು ಭಕ್ತಿಯ ವಾತಾವರಣ ಮನಸ್ಸನ್ನು ಧ್ಯಾನದತ್ತ ಕರೆದೊಯ್ಯುತ್ತದೆ.

shukratal

ದೇವಾಲಯಗಳು ಮತ್ತು ದರ್ಶನೀಯ ಸ್ಥಳಗಳು

ಶುಕ್ರತಾಲ್‌ನಲ್ಲಿ ಅನೇಕ ಪವಿತ್ರ ದೇವಾಲಯಗಳಿವೆ, ಶ್ರೀ ಶುಕದೇವ ಮಹರ್ಷಿ ದೇವಾಲಯ, ಸುಮಾರು 72 ಅಡಿ ಎತ್ತರದ ಶ್ರೀ ಹನುಮಂತನ ಭವ್ಯ ಮೂರ್ತಿ, ಶಿವ, ಗಣೇಶ, ದುರ್ಗಾದೇವಿ ದೇವಾಲಯಗಳು ಭಾಗವತ ಸಪ್ತಾಹ ನಿರಂತರವಾಗಿ ನಡೆಯುವ ಆಶ್ರಮಗಳು ಈ ದೇವಾಲಯದ ಪರಿಸರದಲ್ಲಿವೆ. ಹೀಗಾಗಿ, ಪ್ರತಿ ಹೆಜ್ಜೆಯಲ್ಲೂ ಭಕ್ತಿ, ಪ್ರತಿ ಕ್ಷಣದಲ್ಲೂ ಶಾಂತಿ ಅನುಭವವಾಗುತ್ತದೆ.

ಇತರ ಮಾಹಿತಿ

ಇಲ್ಲಿನ ದೇವಾಲಯಗಳು ಮತ್ತು ಆಶ್ರಮಗಳನ್ನು ವಿವಿಧ ಧಾರ್ಮಿಕ ಟ್ರಸ್ಟ್‌ಗಳು ಹಾಗೂ ಸ್ಥಳೀಯ ದೇವಾಲಯ ಸಮಿತಿಗಳು ನಿರ್ವಹಿಸುತ್ತವೆ. ಯಾತ್ರಿಕರಿಗೆ ಮೂಲಸೌಕರ್ಯಗಳನ್ನು ಉತ್ತರ ಪ್ರದೇಶ ಸರಕಾರ ಅಭಿವೃದ್ಧಿಪಡಿಸಿದೆ. ಇಲ್ಲಿ ದರ್ಶನ ಸಮಯವು ಸಾಮಾನ್ಯವಾಗಿ ಬೆಳಗ್ಗೆ 6.00 ರಿಂದ ರಾತ್ರಿ 8.00 ಗಂಟೆಯವರೆಗೆ ಇದೆ. ಯಾವುದೇ ಪ್ರವೇಶ ಶುಲ್ಕ ಇಲ್ಲ. ವಿಶೇಷ ಪೂಜೆಗಳು, ಭಾಗವತ ಸಪ್ತಾಹಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳು ವರ್ಷ ಪೂರ್ತಿ ನಡೆಯುತ್ತಿರುತ್ತವೆ. ಮುಖ್ಯ ರಸ್ತೆಯಿಂದ ದೇವಾಲಯದವರೆಗೆ ಏರುದಾರಿಯ ಕಾರಣ ಅಲ್ಲಿರುವ ಆಟೋಗಳ ಸೇವೆ ಪಡೆಯಬಹುದು. ಪ್ರಸಾದವಾಗಿ ಅಲ್ಲೇ ಕೌಂಟರಿನಲ್ಲಿ ಲಭಿಸುವ ಶುದ್ಧ ಖೋವಾದ ಪೇಡಾ ದೇವರಿಗೆ ಸಮರ್ಪಿಸಿ ಸವಿಯಬಹುದು.

shukratal

ಹೇಗೆ ತಲುಪುವುದು?

ಶುಕ್ರತಾಲ್ ಉತ್ತರ ಪ್ರದೇಶದ ಮುಜಫ್ಫರ್‌ನಗರದಿಂದ ಸುಮಾರು 30 ಕಿಮೀ. ದೂರದಲ್ಲಿದೆ. ಹತ್ತಿರದ ರೈಲು ನಿಲ್ದಾಣ ಮುಜಫ್ಫರ್‌ನಗರ್‌ ರೈಲ್ವೇ ಸ್ಟೇಷನ್‌, ಹತ್ತಿರದ ವಿಮಾನ ನಿಲ್ದಾಣ ಜಾಲಿ ಗ್ರಾಂಟ್‌ ಏರ್‌ಪೋರ್ಟ್‌ ಡೆಹರಾಡೂನ್. ರಸ್ತೆ ಮಾರ್ಗದಲ್ಲಿ ದೆಹಲಿ, ಹರಿದ್ವಾರ ಹಾಗೂ ಇತರೆ ನಗರಗಳಿಂದ ಸುಲಭವಾಗಿ ತಲುಪಬಹುದು. ಅಕ್ಟೋಬರ್‌ನಿಂದ ಮಾರ್ಚ್ ತಿಂಗಳವರೆಗೆ ಭೇಟಿ ನೀಡಲು ಅತ್ಯುತ್ತಮ ಸಮಯ. ಈ ಅವಧಿಯಲ್ಲಿ ಹವಾಮಾನ ಆಹ್ಲಾದಕರವಾಗಿದ್ದು, ಭಾಗವತ ಸಪ್ತಾಹ ಹಾಗೂ ಇತರ ಧಾರ್ಮಿಕ ಉತ್ಸವಗಳ ಸಂದರ್ಭದಲ್ಲಿ ಸಾವಿರಾರು ಭಕ್ತರು ಇಲ್ಲಿ ಸೇರುತ್ತಾರೆ.

ಮರಣವನ್ನು ಮೀರಿ ಬದುಕಿನ ಸಂದೇಶ ಸಾರುವ ಕ್ಷೇತ್ರ

ಶುಕ್ರತಾಲ್ ನಮಗೆ ಹೇಳುವ ಸಂದೇಶ ಒಂದೇ. ದೇಹಕ್ಕೆ ಅಂತ್ಯವಿರಬಹುದು. ಆದರೆ, ಭಕ್ತಿ ಮತ್ತು ಜ್ಞಾನಕ್ಕೆ ಅಂತ್ಯವಿಲ್ಲ. ಗಂಗೆ ಇನ್ನೂ ಹರಿಯುತ್ತಲೇ ಇದ್ದಾಳೆ. ಅಕ್ಷಯವಟ ಇನ್ನೂ ನೆರಳು ನೀಡುತ್ತಿದೆ. ಶುಕದೇವರ ಭಾಗವತಧ್ವನಿ ಇನ್ನೂ ಭಕ್ತರ ಮನಗಳಲ್ಲಿ ರಿಂಗಣಿಸುತ್ತಿದೆ. ಶುಕ್ರತಾಲ್ ಒಂದು ಯಾತ್ರಾಸ್ಥಳವಲ್ಲ. ಅದು ಬದುಕಿನ ಅರ್ಥವನ್ನು ತಿಳಿಸುವ ಆಧ್ಯಾತ್ಮಿಕ ಕೇಂದ್ರ. ಅಲ್ಲಿಗೆ ಹೋಗುವವರು ಕೇವಲ ದೇವರ ದರ್ಶನದೊಂದಿಗೆ, ಜೀವನವನ್ನು ನೋಡುವ ಹೊಸ ದೃಷ್ಟಿಕೋನವನ್ನೂ ಹೊತ್ತು ಹಿಂದಿರುಗುತ್ತಾರೆ. ಗಂಗೆಯ ದಡದಲ್ಲಿ ಮೊಳಗಿದ ಆ ಭಾಗವತ ನಾದ ಇಂದಿಗೂ ಪ್ರತಿಯೊಬ್ಬ ಭಕ್ತನ ಹೃದಯದಲ್ಲಿ ಮೋಕ್ಷದ ದೀಪವನ್ನು ಬೆಳಗಿಸುತ್ತಲೇ ಇದೆ.