ಸೈಲೆಂಟ್ ಮೆಡೋಸ್ ಚಾರಣ
ತೊರೆಯೊಂದರಲ್ಲಿ ನಾಲ್ಕು ಅಡಿಯ ಆಳದ ರಭಸದಿಂದ ಕೊರೆತದ ಹರಿಯುವ ನೀರನ್ನು ಹಗ್ಗದ ಸಹಾಯದಿಂದ ದಾಟಬೇಕಾಯಿತು. ಇನ್ನೊಂದೆಡೆ ಕುದುರೆಯ ಸವಾರಿಯಲ್ಲಿ ದಾಟಲಾಯಿತು. ಕುದುರೆಗಳು ಭಾರವನ್ನು ಹೊತ್ತು ಹೊಳೆಯನ್ನು ದಾಟುವ ದೃಶ್ಯವು ಮೂಕ ಪ್ರಾಣಿಗಳ ಕಠಿಣ ದಿನಚರಿಯ ಅನುಕಂಪ ಕೋರುತ್ತಿದ್ದವು.
- ಪ್ರಕಾಶ್ ಹೆಗಡೆ
"ಭೂಮಿಯ ಮೇಲೆ ಸ್ವರ್ಗವಿಲ್ಲ, ಸ್ವರ್ಗದ ತುಣುಕುಗಳಿವೆ, ಕಾಶ್ಮೀರ ಅವುಗಳಲ್ಲೊಂದು", ಎಂಬ ನಾಣ್ನುಡಿಯಿದೆ. ಕಾಶ್ಮೀರದ ಸೈಲೆಂಟ್ ಮೆಡೋಸ್ ಸ್ವರ್ಗದ ಉದ್ಯಾನವನವೆಂದರೆ ಉತ್ಪ್ರೇಕ್ಷೆಯೆನಿಸುವುದಿಲ್ಲ. ಕಾಶ್ಮೀರದ ನೈಋತ್ಯ ಗುಡ್ಡಗಾಡಿನ ಯೂಸ್ಮಾರ್ಗ್‌ನಿಂದ ದೂಧಪತ್ರಿಯವರೆಗಿನ ಸೈಲೆಂಟ್ ಮೆಡೋಸ್ ಚಾರಣ ಕರ್ನಾಟಕ ಪರ್ವತಾರೋಹಣ ಸಂಘ ಕ್ರಮಿಸಿದ ಮೊತ್ತಮೊದಲನೆಯ ಅನ್ವೇಷಣಾತ್ಮಕ ಚಾರಣ ಹಾಗೂ ಅತ್ಯಂತ ಸುಂದರ ಪ್ರವಾಸ.
ನೆಟ್ ವರ್ಕ್ ಗಾಯಬ್!
ಶ್ರೀನಗರದ ಕಣಿವೆಯಿಂದ ಐವತ್ತು ಕಿಮೀ ದೂರದ ಯೂಸ್ಮಾರ್ಗ್‌ನ ಎಂಟು ಸಾವಿರ ಅಡಿಯೆತ್ತರದ ಗುಡ್ಡಗಾಡಿನ ಶಿಬಿರ ತಲುಪುತ್ತಿದ್ದಂತೆ, ನಮ್ಮ ಮೊಬೈಲ್ ಫೋನ್‌ಗಳು ಸಂಪರ್ಕದಿಂದ ಕಡಿತಗೊಂಡು ಬರೀ ಕ್ಯಾಮರಾ ಸಾಧನವಾಗುಳಿದುಕೊಂಡಿತು. ಒಂದು ವಾರ ಇಂಟರ್ ನೆಟ್ ಪ್ರಪಂಚ ಲಭ್ಯವಿರಲಿಲ್ಲ.

ಪೀರ್ ಪಂಜಾಲ್ ಪರ್ವತ ಶ್ರೇಣಿಗಳು ಯೂಸ್ಮಾರ್ಗ್ ತಪ್ಪಲಿನಿಂದಲೇ ಕಾಣಿಸಿಕೊಳ್ಳಲಾರಂಭಿಸುತ್ತವೆ. ಯುರೋಪಿನ ಆಲ್ಪ್ಸ್ ನ ಸೌಂದರ್ಯವನ್ನೂ ನಾಚಿಸುವ ಸೀನಿಕ್ ಹುಲ್ಲುಗಾವಲು ಮತ್ತು ದೇವದಾರು ಕಾಡಿನಿಂದ ಈ ಪರ್ವತ ಶ್ರೇಣಿ ಕಂಗೊಳಿಸುತ್ತವೆ. ಕಾಶ್ಮೀರಿ ಭಾಷೆಯಲ್ಲಿ ಯೂಸ್ಮಾರ್ಗ್ ಎಂದರೆ "ಮೆಡೋಸ್ ಆಫ್ ಜೀಸಸ್" ಎಂಬರ್ಥ. ಯೇಸು ದೇವನು ಇಲ್ಲಿಗೆ ಭೇಟಿ ನೀಡಿದ್ದನೆಂದು ಸ್ಥಳೀಯರು ನಂಬುತ್ತಾರೆ.
ಮೊದಲ ಹಂತದ ಚಾರಣದಲ್ಲಿ ಬಸಿರಿನ ಮೋಡಗಳು ಕೈಗೆಟುಕುವಂತಿದ್ದವು. ತುಂತುರು ಮಳೆಯಲ್ಲಿ ಜಿಗುಟಾದ ಜೇಡಿ ಮಣ್ಣಿನ ಏರಿನಲ್ಲಿ ಎಚ್ಚರಿಕೆಯಿಂದ ಸಾಗಬೇಕಾಗಿತ್ತು. ಈ ಆಲ್ಪೈನ್ ಕಣಿವೆಯಲ್ಲಿ ದೇವದಾರು ಮರಗಳ ಹುಲ್ಲುಗಾವಲುಗಳ ಮೂಲಕ ಚಾರಣದುದ್ದಕ್ಕೂ ಮನಮೋಹಕ ದೃಶ್ಯಗಳಿಗೇನೂ ಕೊರತೆಯಿರಲಿಲ್ಲ. ದೇವದಾರು ನೀಲಿಹಸಿರಿನ ಸೂಜಿ ಎಲೆಗಳು, ಬೂದು ಬಣ್ಣದ ಹುರುಪೆಯ ತೊಗಟೆ ಮತ್ತು ಸಣ್ಣ ಶಂಕುಗಳ ಫಲವಿರುವ ಸ್ಥಳೀಯ ಮರ. ಅವು ಇನ್ನೂರೈವತ್ತು ಅಡಿಯೆತ್ತರಕ್ಕೆ ನೆಟ್ಟಗೆ ಬೆಳೆದು ಹತ್ತು ಅಡಿ ವ್ಯಾಸದ ಕಾಂಡದ ಸುತ್ತಳತೆಯನ್ನೊಳಗೊಂಡಿರುತ್ತವೆ. ಪ್ರತೀ ಮರವೂ ನೂರಾರು ವರ್ಷಗಳವರೆಗೆ ಬದುಕಬಲ್ಲದು. ತೊಗಟೆ ಮತ್ತು ಎಲೆಗಳನ್ನು ಇಂಧನವಾಗಿ ಬಳಸಿದರೆ, ಕಾಂಡದ ಕಟ್ಟಿಗೆಯನ್ನು ಮನೆ ನಿರ್ಮಾಣ, ಪೀಠೋಪಕರಣಗಳು ಮತ್ತು ದೋಣಿ ತಯಾರಿಕೆಯ ದೀರ್ಘಕಾಲೀನ ಬಳಕೆಯಲ್ಲಿ ನಿಯೋಜಿಸಲಾಗುತ್ತದೆ. ದೇವದಾರು ಮರವು ನೀರಿನಲ್ಲಿ ಮುಳುಗಿದ್ದರೂ ಐನೂರು ವರ್ಷಗಳವರೆಗೆ ಬಾಳುತ್ತವೆ.
ಅಲ್ಲೇ ಇದೆ LOC
ನಾವು ಮೇಲಕ್ಕೆ ಏರುತ್ತಿದ್ದಂತೆ, ಮಾನವ ವಾಸಸ್ಥಳಗಳು ಕ್ಷೀಣವಾಗತೊಡಗಿದವು. ಹುಲ್ಲು ಮತ್ತು ಹೂವಿನ ತಪ್ಪಲು ಕಾಣಲಾರಂಭಿಸಿದವು. ನಾವು ಕೊನೆಯ ಹಳ್ಳಿಯೆನಿಸಿದ ಡ್ರಾಗ್ಟೋಲ್ ಮೂಲಕ ಹಾದುಹೋದೆವು. ಮುಂದಿನ ಮೂರುದಿನ ಯಾವ ಮಾನವ ವಸತಿಯೂ ಚಾರಣದ ದಾರಿಯಲ್ಲಿರಲಿಲ್ಲ. ಬರ್ಗಾ ವ್ಯಾಲಿಯ ಶಿಬಿರದಲ್ಲಿ ನಮ್ಮ ದೇಹ ಕಡಿಮೆ ಆಮ್ಲಜನಕದ ಪರಿಸರಕ್ಕೆ ಹೊಂದಿಕೊಳ್ಳಲಾರಂಭಿಸಿತ್ತು. ಇಲ್ಲಿಂದ ಗಡಿಯ ಲೈನ್ ಆಫ್ ಕಂಟ್ರೋಲ್ ಸುಮಾರು ಎರಡು ಗಂಟೆಗಳ ಹಾದಿ.
ಹೇಸರಗತ್ತೆ-ಕುದುರೆಯ ಕ್ರಾಸ್!
ಮರುದಿನದ ಚಾರಣದಲ್ಲಿ ಹೊಳೆಗಳನ್ನು ದಾಟುವ ಸಾಹಸಗಳನ್ನೆದುರಿಸಿದೆವು. ತೊರೆಯೊಂದರಲ್ಲಿ ನಾಲ್ಕು ಅಡಿಯ ಆಳದ ರಭಸದಿಂದ ಕೊರೆತದ ಹರಿಯುವ ನೀರನ್ನು ಹಗ್ಗದ ಸಹಾಯದಿಂದ ದಾಟಬೇಕಾಯಿತು. ಇನ್ನೊಂದೆಡೆ ಕುದುರೆಯ ಸವಾರಿಯಲ್ಲಿ ದಾಟಲಾಯಿತು. ಕುದುರೆಗಳು ಭಾರವನ್ನು ಹೊತ್ತು ಹೊಳೆಯನ್ನು ದಾಟುವ ದೃಶ್ಯವು ಮೂಕ ಪ್ರಾಣಿಗಳ ಕಠಿಣ ದಿನಚರಿಯ ಅನುಕಂಪ ಕೋರುತ್ತಿದ್ದವು. ನಮ್ಮ ಬ್ಯಾಕ್ ಪ್ಯಾಕ್, ಸ್ಲೀಪಿಂಗ್ ಬ್ಯಾಗ್, ಡೇರೆಗಳು, ಅಡುಗೆ ಪಾತ್ರೆಗಳು ಇತ್ಯಾದಿ ಉಪಕರಣಗಳನ್ನು ಸಾಗಿಸುವ ಹದಿನೆಂಟು ಕುದುರೆಗಳು ಮತ್ತು ಎಂಟು ಕುದುರೆಪಾಲಕರೊಂದಿಗಿದ್ದವು. ಪ್ರತಿದಿನ ಪಾಲಕರು ಎಲ್ಲಾ ವಸ್ತುಗಳನ್ನು ಪ್ಯಾಕ್ ಮಾಡಿ, ಕುದುರೆಯ ಮೇಲೆ ಕಟ್ಟಿ, ಯಾವುದೇ ಪ್ಲಾಸ್ಟಿಕ್ ಅಥವಾ ಕಾಗದದ ತ್ಯಾಜ್ಯವಿರದಂತೆ ಕ್ಯಾಂಪ್ ಪ್ರದೇಶವನ್ನು ಸ್ವಚ್ಛಗೊಳಿಸುತ್ತಿದ್ದರು. ಪ್ರಕೃತಿಯು ನಮಗೆ ಒದಗಿಸಿದಂತೆ ಪರಿಸರವನ್ನು ಕಾಪಾಡುವದೇ ನಮ್ಮ ಧ್ಯೇಯವಾಗಿತ್ತು. ಇವರು ಮುಂದಿನ ಶಿಬಿರದ ಸ್ಥಳವನ್ನು ನಮಗಿಂತ ಬೇಗ ತಲುಪಿ ವಾಸಕ್ಕೆ ಸ್ಥಳವನ್ನು ಸಿದ್ಧಗೊಳಿಸುತ್ತಿದ್ದರು. ಅಡುಗೆಯವರು ರುಚಿಕರವಾದ ಭೋಜನ ಮತ್ತು ಉಪಾಹಾರವನ್ನು ನೀಡುತ್ತಿದ್ದರು. ಕುದುರೆಗಳು ರಾತ್ರಿಯಿಡೀ ಮೇಯ್ದು ಮರುದಿನ ಬೆಳಿಗ್ಗೆ ಕ್ಯಾಂಪ್ ಸೈಟ್‌ನ್ನು ತಲುಪುತ್ತಿದ್ದವು. ಇವು ನಿಜವಾದ ದೊಡ್ಡ ಕುದುರೆಗಳಾಗಿರಲಿಲ್ಲ. ಬದಲಿಗೆ ಹೇಸರಗತ್ತೆಗಳು ಮತ್ತು ಕುದುರೆಗಳ ನಡುವೆ ರೂಪಾಂತರಗೊಂಡ ಪ್ರಭೇದ. ಸ್ಥಳೀಯರಿಗೆ ಇದೊಂದೇ ಸಾರಿಗೆಯ ಸಾಧನ. ಹಿಮಾವೃತವಾದ ಪರ್ವತಗಳ ತಪ್ಪಲಿನಲ್ಲಿ ಹಿಮನದಿಗಳು ಕಾಣಲಾರಂಭಿಸಿದವು.
ಕುರಿ ಉಣ್ಣೆ 20 ರು ಕೇಜಿ!
ನಮ್ಮ ಮುಂದಿನ ಅಶ್ತಾರ್ ಶಿಬಿರದ ಬದಿಯಲ್ಲಿನ ಶಾಲಿಗಂಗಾ ತೊರೆಯು ಹಿಮನದಿ ಮತ್ತು ಮಳೆ ನೀರಿನಿಂದ ಬೆರೆತು ಉಕ್ಕಿ ಹರಿಯುತ್ತಿತ್ತು. ಹರಿಯುವ ನೀರಿನ ಜುಳುಜುಳು ಇಂಪಾದ ನಿನಾದ ಹಾಗೂ ಸುತ್ತಲ ಗುಡ್ಡಗಾಡಿನ ಸೌಂದರ್ಯ ಮುದ ನೀಡುತ್ತಿತ್ತು. ಹತ್ತಿರದಲ್ಲೇ ಇದ್ದ ಸರ್ಕಾರದ 900 ಕುರಿಗಳಿರುವ ಶಿಬಿರ ಉಣ್ಣೆ ಮತ್ತು ಮಾಂಸದ ಇಳುವರಿಯನ್ನು ವೃದ್ಧಿಸುವ ಸಂಶೋಧನಾ ಕೇಂದ್ರವಾಗಿತ್ತು. ಅನಾರೋಗ್ಯದಿಂದ ಮರಣಿಸಿದ ಕುರಿಯ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದ ಪಶುವೈದ್ಯರು ಶಿಬಿರದ ಕಾರ್ಯವೈಖರಿಯನ್ನು ತಿಳಿಸಿದರು. ಕುರುಬರು ಬೇಸಿಗೆಯಲ್ಲಿ ಜಾನುವಾರುಗಳನ್ನು ಈ ವನಸಿರಿಗೆ ಕರೆತರುತ್ತಾರೆ. ಇಲ್ಲಿ ಯಥೇಚ್ಛವಾಗಿ ಆಹಾರ ದೊರಕುವುದರಿಂದ ಕುರಿಗಳು ಮೇಯ್ದು ಕೊಬ್ಬುತ್ತವೆ. ಕುರುಬರು ವರ್ಷಕ್ಕೆ ಎರಡು ಬಾರಿ ಉಣ್ಣೆಯ ಕೊಯ್ಲು ಮಾಡುತ್ತಾರೆ. ಈ ಋತುವಿನಲ್ಲಿ ಉಣ್ಣೆಯ ಬೆಲೆ ಕಿಲೊವೊಂದಕ್ಕೆ ನೂರು ರುಪಾಯಿಯಿಂದ ಇಪ್ಪತ್ತು ರುಪಾಯಿಗೆ ಕುಸಿದಿತ್ತು.
ಸರ್ ಅಂದ್ರೆ ಏನ್ ಗೊತ್ತಾ?
ಕಾಶ್ಮೀರದ ಅತ್ಯಂತ ಸುಂದರ ನೈಸರ್ಗಿಕ ಉದ್ಯಾನಗಳಿರುವ ಡ್ಯೂರಿಯಮ್ ಪ್ರದೇಶದ ಪರ್ವತ ಶಿಖರಗಳು ಮತ್ತು ಕಣಿವೆಗಳ ಮೂಲಕ ಸಾಗುವ ಚಾರಣದ ರೋಲರ್ ಕೋಸ್ಟರ್ ನಮ್ಮ ಮುಂದಿನ ಚಾರಣಮಾರ್ಗವಾಗಿತ್ತು. ರತ್ನಗಂಬಳಿ ಹಾಸಿಟ್ಟಂಥ ಆಳವಾದ ಬಣ್ಣದ ಛಾಯೆಯ, ಅಸಂಖ್ಯಾತ ಆಕಾರಗಳ ಅನನ್ಯ ಪುಷ್ಪಗಳ ಉದ್ಯಾವನದ ಕಾಶಿ ಇದೆಂದರೆ ಅತಿಶಯೋಕ್ತಿಯಲ್ಲ. ನಾವು ಹನ್ನೆರಡು ಸಾವ ಅಡಿ ಎತ್ತರದಲ್ಲಿನ ಗುರ್ವಾನ್ಸರ್, ಪತ್ರಿಸರ್ ಮತ್ತು ಪಮ್ಸಾರ್ ಸರೋವರಗಳ ದಾರಿಯಲ್ಲಿ ಸಮ್ಮೋಹಿತರಾಗಿ ಸಾಗುತ್ತಿದ್ದೆವು. ಕಾಶ್ಮೀರಿ ಭಾಷೆಯಲ್ಲಿ ʼಸರ್ʼ ಅಂದರೆ ಸರೋವರ. ಅಂದು ನಾವು ಅನೇಕ ಬಾರಿ ಹದಿಮೂರು ಸಾವಿರ ಅಡಿ ಎತ್ತರದ ಶಿಖರಗಳನ್ನು ಏರಿಳಿದು ಬಸವಳಿದಿದ್ದೆವು.

ಉರುಳುವ ಕಲ್ಲುಗಳು
ಮರುದಿನ ನಾವು ನಮ್ಮ ಚಾರಣದ ಅತ್ಯುನ್ನತ ಎತ್ತರದ 1400 ಅಡಿ ತಲುಪುವ ಸಾಹಸವನ್ನು ಎದುರಿಸಿದೆವು. ಎಲ್ಲೆಲ್ಲೂ ಬರೀ ಬಂಡೆ ಮತ್ತು ಹಿಮದ ಪ್ರದೇಶ ಕಾಣಿಸುತ್ತಿತ್ತು. ಪೀರ್ ಪಂಜಾಲ್ ಪರ್ವತ ಶ್ರೇಣಿಗಳು 13000 ಅಡಿ ಎತ್ತರದಲ್ಲಿರುವ ನೂರಾರು ಹಿಮನದಿಗಳ ನೀರಿನ ಸರೋವರಗಳ ತವರು. ಹಿಮನದಿ ಕರಗುವಾಗ ಬದ್ಸರ್ ಸರೋವರ ಕಣಿವೆಯು ಸುತ್ತಮುತ್ತಲಿನ ಪರ್ವತಗಳಿಂದ ಕಂಪನಗಳೊಂದಿಗೆ, ನೂರಾರು ಬಂಡೆಗಳು ಸ್ಥಾನಪಲ್ಲಟವಾಗಿ ತಮ್ಮೊಂದಿಗೆ ದಾರಿಯಲ್ಲಿನ ಕಲ್ಲುಗಳನ್ನು ಸೆಳೆದು ಅವಲಾಂಚಿಯಂತೆ ಗುಡುಗಿನ ಶಬ್ದದೊಂದಿಗೆ ಉರುಳಲಾರಂಭಿಸುತ್ತವೆ. ಕಣಿವೆಯಿಂದ ಹಸಿರಿನ ತಪ್ಪಲಿಗೆ ಕೆಳಗಿಳಿಯುತ್ತಿದ್ದಂತೆ ಬಂಡ್ಸರ್, ದಮಾಮ್ಸರ್, ಖರಾಸರ್ ಮತ್ತು ಗಡ್ಸರ್ ಸರೋವರದ ದಡದಲ್ಲಿ ಸಾಗಿದೆವು. ಸರೋವರದ ವೈಡೂರ್ಯದ ನೀಲಿ ಮತ್ತು ಪರ್ವತದ ಇಳಿಜಾರಿನ ಕಾಡುಹೂವುಗಳ ಶೃಂಗಾರ ವರ್ಣಿಸಲಸಾಧ್ಯ.
ಉಕ್ಕಿದ ರಾಷ್ಟ್ರಪ್ರೇಮ
ನೂನ್ವಾನ್ ತೊರೆಯ ಕಣಿವೆಲ್ಲಿಯೇ ನಮ್ಮ ಅಂದಿನ ಶಿಬಿರ. ಇಲ್ಲಿನ ಹೆಚ್ಚಿನ ತೊರೆಗಳು ಅಂತಿಮವಾಗಿ ಝೀಲಂ ನದಿಯನ್ನು ಸೇರುತ್ತವೆ. ಪಾಕಿಸ್ತಾನಕ್ಕೆ ಹರಿಯುವ ಕಾಶ್ಮೀರದ ಬಹುತೇಕ ನದಿಗಳು ಸಿಂಧೂ ನದಿಯನ್ನು ಸೇರಿ ಅರಬ್ಬಿ ಸಮುದ್ರದಲ್ಲಿ ವಿಲೀನವಾಗುತ್ತದೆ. 1960ರ ಸಿಂಧೂ ಜಲ ಒಪ್ಪಂದವನ್ನು ಇತ್ತೀಚಿನ ಆಪರೇಷನ್ ಸಿಂದೂರದ ಸಮಯದಲ್ಲಿ ಭಾರತ ತಡೆಹಿಡಿದದ್ದನ್ನು ನೆನಪಿಸಿಕೊಳ್ಳಬಹುದು. ಅಂದು ಆಗಸ್ಟ್ 15 ಆಗಿದ್ದರಿಂದ ವೃತ್ತಾಕಾರದಲ್ಲಿ ನಿಂತು ಬಲಗೈಯನ್ನು ಹೃದಯದ ಮೇಲಿರಿಸಿ ರಾಷ್ಟ್ರಗೀತೆಯನ್ನು ತನ್ಮಯರಾಗಿ ಹಾಡಿದೆವು. ರಾಷ್ಟ್ರೀಯತೆಯ ಉತ್ಸಾಹ ಉತ್ತುಂಗಕ್ಕೇರಿತ್ತು.
ಹಣ ಕಾಣದ ಮಕ್ಕಳು!
ಹಸಿರಿನ ಹುಲ್ಲುಗಾವಲುಗಳ ಇಳಿಜಾರಿನಲ್ಲಿ ನಮ್ಮ ಚಾರಣ ಬಿರುಸಾಗಿತ್ತು. ತುಂತುರು ಮಳೆಯ ಸಾಂಗತ್ಯ ಮುಂದುವರಿದಿತ್ತು. ಸಾವಿರಾರು ಕುರಿಯ ಹಿಂಡುಗಳು ಕಾಣಲಾರಂಭಿಸಿದವು. ನಾವೊಂದು ಕುಗ್ರಾಮವನ್ನು ತಲುಪಿ ಚಕಿತರಾಗಿ ನೋಡುತ್ತಿದ್ದ ಮಕ್ಕಳಿಗೆ ಹಣವನ್ನು ಕೊಡಲು ಹೋದರೆ ಮುಟ್ಟಲು ಹಿಂಜರಿದರು. ಆಶ್ಚರ್ಯವೆಂದರೆ ಮಕ್ಕಳು ನೋಟುಗಳನ್ನು ಕಂಡೇ ಇರಲಿಲ್ಲ. ಸ್ವಾವಲಂಬನೆಯ ಸರಳ ಜೀವನಕ್ಕೆ ಬೇಕಾದ ಎಲ್ಲವನ್ನೂ ಹಿತ್ತಲಲ್ಲಿ ಕೃಷಿಮಾಡಿ ನೆರೆಹೊರೆಯವರೊಂದಿಗೆ ದಿನನಿತ್ಯದ ಅವಶ್ಯಕತೆಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ ಅವರಿಗೆ ಹಣದ ಅವಶ್ಯಕತೆಯೇ ಇರುವುದಿಲ್ಲ. ವಿದ್ಯುತ್, ಫೋನ್, ಇಂಟರ್ ನೆಟ್ ನಂಥ ವ್ಯವಸ್ಥೆಗಳಾವುವೂ ಇಲ್ಲ. ಗ್ರಾಮಸ್ಥರು ಅಲೆಮಾರಿಗಳಂತೆ ಬೇಸಗೆಯಲ್ಲಿ ಜಾನುವಾರುಗಳ ಮೇವಿರುವ ಬೆಟ್ಟದ ತಪ್ಪಲಿನ ಮನೆಗೆ ವಲಸೆಹೋಗುತ್ತಾರೆ. ಚಳಿಗಾಲದ ತೀವ್ರತೆಗೆ ಪಟ್ಟಣದ ಆಶ್ರಯ ಪಡೆಯುತ್ತಾರೆ.
ಕಾಶ್ಮೀರವು ಚಾರಣಿಗರ ಅಂತಿಮ ಗಡಿಯೆನ್ನಬಹುದು. ಅಲ್ಲಿಯ ಭೂದೃಶ್ಯಗಳು, ಭವ್ಯವಾದ ಪರ್ವತಗಳು, ಹೂವುಗಳ ಉದ್ಯಾನಗಳು, ಆಲ್ಪೈನ್ ಬಂಡೆಗಳ ಶಿಲ್ಪ, ಆಕರ್ಷಕ ಪೈನ್ ಅರಣ್ಯ, ಸವಾಲಿನ ಕಣಿವೆಗಳು, ಪ್ರಶಾಂತ ಸರೋವರಗಳು, ಬೆಣಚುಕಲ್ಲಿನ ರಾಪಿಡ್‌ಗಳು, ಹೊಳೆಯುವ ತೊರೆಗಳು, ಶಾಂತಗೊಳಿಸುವ ಕ್ಯಾಂಪಿಂಗ್ ವಲಯಗಳು, ಹೀಗೆ ನುಡಿಗಟ್ಟುಗಳ ಸರಮಾಲೆಯನ್ನೇ ಪೋಣಿಸಬಹುದು. ಕಾಶ್ಮೀರ ಸ್ವರ್ಗವೆಂದಾದರೆ, ಸೈಲೆಂಟ್ ಮೆಡೋಸ್ ನಿಸ್ಸಂಶಯವಾಗಿ ಸ್ವರ್ಗದ ಉದ್ಯಾನವೇ ಹೌದು.