ಧವಳ ಗಿರಿಯ ಹಿಮದ ಮೇಲೆ…
ಪಾಶ್ಮಿನಾ ಎಂಬ ಸೂಕ್ಷ್ಮ ಹಾಗೂ ಅಪರೂಪದ ಪ್ರಾಣಿಗಳಿಂದ ಸಿಗುವ ವಿಶ್ವಮಾನ್ಯ ಉಣ್ಣೆಗಳಿಂದ ಸಿದ್ದಪಡಿಸಿದ ಶಾಲುಗಳಿಗೆ ಭಾರೀ ಬೇಡಿಕೆಯಿದೆ. ಆದರೆ ಪೂರೈಸಲಾಗುತ್ತಿಲ್ಲ. ಇದಕ್ಕೆ ಮುಖ್ಯಕಾರಣ ಪಾಶ್ಮಿನಾ ಪ್ರಾಣಿಗಳ ಸಂತತಿ ಕಡಿಮೆಯಾಗುತ್ತಿರುವುದು.
- ಮೋಹನ್ ಭಟ್ಟ ಅಗಸೂರು
ನಮ್ಮ ದೇಶದ ಹಿಮಾಲಯ ನಮಗೆಲ್ಲ ಉತ್ತರದ ಬಾಹ್ಯ ಜಗತ್ತಿನಿಂದ ರಕ್ಷಣೆ ನೀಡುತ್ತಿರುವ ನೈಸರ್ಗಿಕ ತಡೆ ಗೋಡೆಯಾಗಿದೆ. ಇಲ್ಲಿನ ಲಡಾಕ್‌ನಿಂದ ಡಾರ್ಜಿಲಿಂಗ್‌ವರೆಗೂ ಒಮ್ಮೆ ನೋಡಿದರೆ, ಮತ್ತೆ ನೋಡುವ ಹಂಬಲ ಕಾಡುವುದು ಸಹಜ.
ಲಡಾಖ್ ಸುಮಾರು 60ಸಾವಿರ ಚಕಿಮಿ ವಿಸ್ತಾರದಲ್ಲಿ ಹರಡಿದೆ. ಜನಸಂಖ್ಯೆ ಕೇವಲ ಒಂದೂವರೆ ಲಕ್ಷ. ಲೇಹ್, ಲಡಾಕ್‌ನ ಪ್ರಮುಖ ಸ್ಥಳವಾಗಿದೆ. ವಿಶೇಷ ಎಂದರೆ ಮಳೆ ಅತ್ಯಂತ ಕಡಿಮೆ ಇದ್ದರೂ, ಹಿಮಪಾತವಾದಾಗ ಜನರು ಅದನ್ನು ಒಂದೆಡೆ ಸೇರಿಸಿಟ್ಟು ಕುಡಿಯುವ ನೀರಿಗಾಗಿ ಬಳಸುತ್ತಾರೆ. ಪ್ರವಾಸೋದ್ಯಮ ಇಲ್ಲಿನ ಮುಖ್ಯ ಆದಾಯದ ಮೂಲವಾಗಿದೆ. ಪ್ಯಾಂಗಾಂಗ್ ಲೇಖ್, 18380 ಅಡಿ ಎತ್ತರದಲ್ಲಿರುವ ಜಗತ್ತಿನ ಅತಿ ಎತ್ತರದ ವಾಹನ ಸಂಚಾರ ಪ್ರದೇಶ ಖ್ಯಾತಿಯ ಖಾರ್‌ದುಂಗ್ ಲಾ ಪಾಸ್, ಇಲ್ಲಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇದಕ್ಕಿಂತ ಎತ್ತರದ (190026 ಅಡಿ) ಉಮ್ಲಿಂಗ್ ಪಾಸ್‌ವರೆಗೆ ವಾಹನ ಸಂಚಾರವಿದೆ. ಆದರೆ ಪ್ರಾಣವಾಯುವಿನ ಕೊರತೆಯಿಂದಾಗಿ ಹೆಚ್ಚು ಸಮಯ ಇರುವಂತಿಲ್ಲ. ಭಾರತೀಯ ಸೈನ್ಯವು ಇಲ್ಲಿ ಗಸ್ತು ತಿರುಗುತ್ತದೆ.

ಲಡಾಕ್‌ನ ಪಾಶ್ಮಿನಾ ಶಾಲುಗಳು ಶತಮಾನಗಳ ಇತಿಹಾಸವಿದೆ. ನೂರಾರು ಕಿಮೀಗಳ ದೂರದ ಮತ್ತು ವರ್ಷವಿಡೀ ಹಿಮಾಚ್ಛಾದಿತವಾಗಿದ್ದು ಇಲ್ಲಿ ಜನವಸತಿ ವಿರಳ. ಗುಹಾ ವಾಸಿಯಾಗಿರುವ ಇವರ ಮುಖ್ಯ ಕಾಯಕ ಪ್ರಾಣಿಗಳ ಉಣ್ಣೆಯನ್ನು ಸಂಗ್ರಹಿಸುವದಾಗಿದೆ. ಪಾಶ್ಮಿನಾ ಎಂಬ ಸೂಕ್ಷ್ಮ ಹಾಗೂ ಅಪರೂಪದ ಪ್ರಾಣಿಗಳಿಂದ ಸಿಗುವ ವಿಶ್ವಮಾನ್ಯ ಉಣ್ಣೆಗಳಿಂದ ಸಿದ್ದಪಡಿಸಿದ ಶಾಲುಗಳಿಗೆ ಭಾರೀ ಬೇಡಿಕೆಯಿದೆ. ಆದರೆ ಪೂರೈಸಲಾಗುತ್ತಿಲ್ಲ. ಇದಕ್ಕೆ ಮುಖ್ಯಕಾರಣ ಪಾಶ್ಮಿನಾ ಪ್ರಾಣಿಗಳ ಸಂತತಿ ಕಡಿಮೆಯಾಗುತ್ತಿರುವುದು. ಹಿಮಾಲಯದಲ್ಲಿ ಉಂಟಾಗುತ್ತಿರುವ ವಾತಾವರಣ ವೈಪರಿತ್ಯ ಹಾಗೂ ಏರುತ್ತಿರುವ ತಾಪಮಾನವೂ ಕಾರಣವಾಗಿದೆ. ಪಾಶ್ಮಿನಾ ಶಾಲುಗಳ ತಯಾರಿ ಹಾಗೂ ಮಾರುಕಟ್ಟೆಗಾಗಿ ಸಹಕಾರ ಸಂಘಗಳು ಉತ್ತಮ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಮಧ್ಯವರ್ತಿಗಳು ಕಾಟ ತಪ್ಪಿದೆ. ಭಾರತಕ್ಕೆ ಆಗಮಿಸುವ ವಿದೇಶಿ ಅತಿಥಿ ಗಣ್ಯರಿಗೆ ಇದನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಈಗ ಅತ್ಯಂತ ದುಬಾರಿಯ ಈ ಶಾಲುಗಳನ್ನು ನೋಡುವದೂ ಕಷ್ಟ.
ಬದರಿನಾಥ ಪ್ರಸಿದ್ದ ಯಾತ್ರಾ ಸ್ಥಳ
ವರ್ಷದ ಕೆಲತಿಂಗಳು ಮಾತ್ರ ತೆರೆದಿರುವ ಇದು, ಪ್ರಸಿದ್ದ ಚಾರಣ ಕೇಂದ್ರವಾಗಿದೆ. ಮಾನಾದಿಂದ ಕೆಲವೇ ಕಿಮೀ ಚಾರಣ ಮಾಡಿದರೆ, ಇಲ್ಲಿನ ಹಿಮದ ಹೊದಿಕೆಯ ಪರ್ವತ ಶ್ರೇಣಿಯನ್ನು ನೋಡಬಹುದು. ಮುಂದಕ್ಕೆ ಹೋದರೆ ಚೀನಾ ಆಕ್ರಮಿತ ಪ್ರದೇಶ. ಚಾರಣಿಗರು ಗುಂಪಾಗಿ ಹೋಗಿ ಟೆಂಟ್‌ನಲ್ಲಿ ಉಳಿದು, ನಸುಕಿನ ಹೊಂಬಣ್ಣದ ಹಿಮಾಲಯ ಶ್ರೇಣಿ ನೋಡಲು ಇಲ್ಲಿ ಪ್ರವಾಸಿಗಳು ಮುಗಿಬೀಳುತ್ತಾರೆ. ಕೇದಾರನಾಥವೂ ಸುಂದರ ಪರ್ವತ ಸಾಲನ್ನು ಹೊಂದಿದೆ. ಗೌರಿ ಕುಂಡದಿಂದ ಸುಮಾರು 17ಕಿಮೀ ನಡೆದು ಹೋದರೆ, ಉದ್ದಕ್ಕೂ ಮಂದಾಕಿನಿಯ ಜುಳು ಜುಳು ಸಂಗೀತ, ನೀರಿ ಹರಿಯುವ ಝರಿಗಳ ಕಲ್ಲುರಾಶಿಗಳ ಮೇಲಿಂದ ಕೆಳಗಿಳಿದು ಹೋಗುವದೇ ಸುಂದರ.
ದೇವರ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಉತ್ತರಾಖಂಡ, ಹಿಮಾಲಯದ ಪ್ರದೇಶವನ್ನು ಒಳಗೊಂಡಿದೆ. ಶಿವನ ವಿವಿಧ ಹೆಸರಿನ ಪ್ರದೇಶಗಳು ಹಾಗೂ ಶಿಖರಗಳು, ತಾಣಗಳು ಇಲ್ಲಿವೆ. ಮಂದಾಕಿನಿ ಹಾಗೂ ಭಾಗೀರತಿ ನದಿಗಳು ದೇವ ಪ್ರಯಾಗದ ಸಂಗಮದಲ್ಲಿ ಕೂಡಿ ಗಂಗಾನದಿಯ ಹೆಸರಿನಿಂದ ಮುಂದೆ ಹರಿಯುತ್ತವೆ. ಇದು ಹರಿಯುವ ಪ್ರದೇಶಗಳು ಋಷಿಕೇಶ, ವಾರಾಣಸಿ, ಪ್ರಯಾಗ, ಗಂಗಾಸಾಗರ್ ಹಾಗೂ ಇತರ ಪುಣ್ಯಕ್ಷೇತ್ರಗಳಿವೆ.

ಹಿಮಾಚಲದ ಮನಾಲಿ, ಸಿಮ್ಲಾ, ಧರ್ಮಶಾಲಾ, ಡಾಲ್ಹೌಸಿ, ಮತ್ತು ಸ್ಪಿತಿ ಕಣಿವೆ ಇತ್ಯಾದಿಗಳು ಹಿಮಾಲಯದ ಶ್ರೇಣಿಯಲ್ಲಿ ಕಂಡುಬರುತ್ತವೆ.
ಪ್ರಕೃತಿ ಪ್ರಿಯರಿಗೆ ಡಾರ್ಜಿಲಿಂಗ್
ಇಲ್ಲಿನ ಡಾರ್ಜಿಲಿಂಗ್ ಪ. ಬಂಗಾಳದಲ್ಲಿದ್ದರೂ ಇದಕ್ಕೆ ಹೊಂದಿಕೊಂಡು ಕಾಂಚನಗಂಗಾ ಪರ್ವತ ಶ್ರೇಣಿ ಪೂರ್ವ ರಾಜ್ಯಗಳಿಗೆ ಹೊಂದಿಕೊಂಡಿದೆ. ಡಾರ್ಜಿಲಿಂಗ್‌ನಲ್ಲಿ ಎಲ್ಲಿ ನಿಂತರೂ ಕಾಣುವ ಕಾಂಚನಗಂಗಾದ ಹತ್ತಾರು ಶಿಖರಗಳು ಸಾಹಸಿ ಪ್ರವಾಸಿಗಳನ್ನು ಆಕರ್ಷಿಸುತ್ತವೆ. ಡಾರ್ಜಲಿಂಗ್, ವಿಶ್ವದ ಪ್ರಮುಖ ಪರ್ವತಾರೋಹಣ ಸಂಸ್ಥೆಗಳಲ್ಲಿ ಒಂದಾದ ಹಿಮಾಲಯನ್ ಮೌಂಟನೀಯರಿಂಗ್ ಇನ್‌ಸ್ಟಿಟ್ಯೂಟ್ ಹೊಂದಿದೆ. ಹಿಮಾಲಯದ ಏರಳಿತಗಳಲ್ಲಿ ಸಾಗುವ ಜೀಪ್‌ನಲ್ಲಿ ಪ್ರವಾಸಿಗಳನ್ನು ಕರೆದೊಯ್ದು, ಟೆಂಟ್‌ನಲ್ಲಿ ವಾಸ್ತವ್ಯ, ಕಡಿದಾದ ಪ್ರದೇಶಗಳಲ್ಲಿ ಕೆಲ ದಿನಗಳ ಪ್ರವಾಸ ಮಾಡುವುದು ಯುವ ಸಾಹಸಿಗಳಿಗೆ ಆಕರ್ಷಣಿಯವಾಗಿದೆ. ಡಾರ್ಜಿಲಿಂಗ್‌ನ ಪ್ರಮುಖ ತಾಣವಾದ ಟೈಗರ್ ಹಿಲ್‌ನಲ್ಲಿ ಸಾವಿರಾರು ಪ್ರವಾಸಿಗಳು ನಸುಕಿನ ನಾಲ್ಕು ಗಂಟೆಗೆ ಮೊದಲ ಸೂರ್ಯಕಿರಣಗಳು ಕಾಂಚನಗಂಗೆಗೆ ಸ್ಪರ್ಶಿಸುವ ಅಪೂರ್ವ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಾರೆ. ಇದು ಜೀವನದಲ್ಲಿಯೇ ಮರೆಯಲಾಗದ ಕ್ಷಣವೂ ಹೌದು.
ಹಿಮಾಚಲದ ಸ್ಪಿತಿ ವ್ಯಾಲಿಗೆ ಯುನೆಸ್ಕೋ ಗೌರವ
ಹಿಮಾಚಲ ಪ್ರದೇಶ ಅನೇಕ ಪ್ರವಾಸಿ ಸ್ಥಳಗಳನ್ನು ಒಳಗೊಂಡಿದೆ. ಅದರಲ್ಲಿ ಸ್ಪಿತಿ ವ್ಯಾಲಿ ಅತ್ಯಂತ ಮೂಖ್ಯ ಹಾಗೂ ವೈಜ್ಞನಿಕವಾಗಿ ವಿಶಿಷ್ಟ ಪ್ರದೇಶವಾಗಿದೆ. ಯುನೆಸ್ಕೋ ವಿಶ್ವದ 26 ಸ್ಥಳಗಳನ್ನು ಕೋಲ್ಡ್ ಡೆಸರ್ಟ್ ಬಯೋ ಸ್ಪಿಯರ್ ರಿಸರ್ವ್ ಎಂದು ಗುರುತಿಸಿದೆ. ಅದರಲ್ಲಿ ಭಾರತದ ಸ್ಪಿತಿ ವ್ಯಾಲಿಯೂ ಸೇರಿದೆ. ಕಾಯ್ದಿಟ್ಟ ಪ್ರದೇಶ ವಾದ್ದರಿಂದ ವಾಯು ಹಾಗೂ ಶಬ್ದ ಮಾಲಿನ್ಯ ತಡೆಯಲು ಕಠಿಣ ಕ್ರಮಗಳನ್ನು ತರಲಾಗಿದೆ. ಭಾರತದಲ್ಲಿನ ಇಂಥ ವಿಶೇಷತೆಗಳನ್ನು ಸುತ್ತಿ ನೆನಪಿನ ಸ್ವತ್ತಾಗಿಸಿಕೊಳ್ಳುವುದು ಪ್ರವಾಸಿಯ ಸೌಭಾಗ್ಯವೇ ಸರಿ.