-ಡಾ.ಬಿ.ಆರ್. ಸುಹಾಸ್

ಭಾರತವು ಪುಣ್ಯಭೂಮಿ. ಹಾಗಾಗಿಯೇ ಭಾರತದ ಪ್ರವಾಸಿ ತಾಣಗಳಲ್ಲಿ ದೇವಾಲಯಗಳು ಹಾಗೂ ಪುಣ್ಯಕ್ಷೇತ್ರಗಳು ಪ್ರಧಾನವಾಗಿವೆ. ಅವುಗಳಲ್ಲಿ ಒಂದು, ಬಿಷ್ಣುಪುರದ ಅದ್ಭುತ ದೇವಾಲಯಗಳ ಸಮೂಹ. ಬಿಷ್ಣುಪುರ, ಕೋಲ್ಕತಾದಿಂದ ಸುಮಾರು 150 ಕಿಮೀ ದೂರದಲ್ಲಿದೆ. ಕಲಾತ್ಮಕ ಟೆರ್ರಕೋಟ/ಮಣ್ಣಿನ ದೇವಾಲಯಗಳಿಗೆ ಪ್ರಸಿದ್ಧವಾಗಿದೆ. ಇಂಥ ಅದ್ಭುತ ದೇವಾಲಯಗಳನ್ನು ಇನ್ನೆಲ್ಲೂ ಕಾಣಲಾಗದು! ಎತ್ತರ ಮತ್ತು ಭವ್ಯವಾದ ಈ ದೇವಾಲಯಗಳ ಸಮೂಹ ವಿಶಿಷ್ಟ ಕೆತ್ತನೆಗಳಿಂದ ನೋಡುಗರ ಹುಬ್ಬೇರಿಸುವಂತೆ ಮಾಡುತ್ತದೆ.

ಇಂದು ಸಾಧಾರಣ ಹಳ್ಳಿಯಂತಿರುವ ಬಿಷ್ಣುಪುರ, ಕ್ರಿಶ 997ರಲ್ಲಿ ಮಲ್ಲ ರಾಜರ ಸಾಮ್ರಾಜ್ಯವಾಗಿ ವಿಜೃಂಭಿಸಿತ್ತು. ಆದಿಮಲ್ಲನಿಂದ ಸ್ಥಾಪಿತವಾದ ಮಲ್ಲ ಸಾಮ್ರಾಜ್ಯದಲ್ಲಿ ಐವತ್ತಕ್ಕೂ ಹೆಚ್ಚು ರಾಜರು ಆಳಿದರು. ಮೊದಲಿಗೆ ಈ ಸಾಮ್ರಾಜ್ಯಕ್ಕೆ ಪ್ರದ್ಯುಮ್ನಪುರ ರಾಜಧಾನಿಯಾಗಿತ್ತು.‌ ಮುನ್ನೂರು ವರ್ಷಗಳ ನಂತರ ಆಳ್ವಿಕೆಗೆ ಬಂದ ಜಗತ್ ಮಲ್ಲನೆಂಬ ರಾಜನು ಇಲ್ಲಿನ ಕಾಡಿನಲ್ಲಿ ಬೇಟೆಯಾಡುವಾಗ, ತನ್ನ ಹದ್ದುವನ್ನು ಒಂದು ಕೊಕ್ಕರೆಯು ಸೋಲಿಸಿ ಓಡಿಸುವುದನ್ನು ಕಂಡು ವಿಸ್ಮಯಗೊಂಡ. ಈ ಸ್ಥಳದಲ್ಲಿ ವಿಶೇಷ ಶಕ್ತಿಯಿರಬೇಕೆಂದು ತಿಳಿದು ತನ್ನ ರಾಜಧಾನಿಯನ್ನು ಇಲ್ಲಿಗೆ ಸ್ಥಳಾಂತರಿಸಿದನು. ಮೃಣ್ಮಯೀದೇವಿಯ (ದುರ್ಗೆಯ) ಆಜ್ಞೆಯಂತೆ, ಮಣ್ಣಿನಲ್ಲಿ ಹುದುಗಿದ್ದ ಅವಳ ವಿಗ್ರಹವನ್ನು ತೆಗೆಸಿ ಅದಕ್ಕೊಂದು ದೇವಾಲಯ ನಿರ್ಮಿಸಿದ ಎಂದು ಐತಿಹ್ಯವಿದೆ. ಹೀಗೆ ಮೃಣ್ಮಯೀದೇವಿಯ ಭಕ್ತರಾಗಿದ್ದ ಮಲ್ಲರು, ಬೀರ್ ಹಂಬೀರ್ ರಾಜನಿಂದ ವೈಷ್ಣವರಾಗಿ ಅನೇಕ ಕೃಷ್ಣ ಮಂದಿರಗಳನ್ನು ನಿರ್ಮಿಸಿದರು.

New Project (63)

ಬೀರ್ ಹಂಬೀರ್, ತನ್ನ ಕಾಲದಲ್ಲಾದ ಮೊಘಲ್‌- ಪಠಾಣರ ನಡುವಿನ ಯುದ್ಧದಲ್ಲಿ ದಾವೂದ್ ಖಾನ್‌ನನ್ನು ಸೋಲಿಸಿದ್ದಕ್ಕೆ ಮೆಚ್ಚಿ ಅಕ್ಬರನು ಇವನಿಗೆ ಬೀರ್(ವೀರ) ಎಂಬ ಬಿರುದನ್ನಿತ್ತ ಎನ್ನಲಾಗಿದೆ. ಜೀವದಾನ ಮಾಡಿದ್ದಕ್ಕಾಗಿ ದಾವೂದ್ ಖಾನನೇ ಇವನಿಗೆ ಈ ಬಿರುದು ಕೊಟ್ಟನೆಂದೂ ಹೇಳಲಾಗಿದೆ. ಇವನು ವೈಷ್ಣವನಾದುದರ ಹಿಂದೆಯೂ ಒಂದು ಕಥೆಯಿದೆ. ಒಮ್ಮೆ, ಚೈತನ್ಯ ಪರಂಪರೆಯ ಜೀವಗೋಸ್ವಾಮಿಗಳು, ಹರಿಭಕ್ತಿವಿಲಾಸ, ಚೈತನ್ಯ ಚರಿತಾಮೃತ, ಉಜ್ವಲ ನೀಲಮಣಿ, ಭಕ್ತಿರಸಾಮೃತ ಸಿಂಧು, ಲಲಿತ ಮಾಧವ, ವಿದಗ್ಧ ಮಾಧವ ಮೊದಲಾದ ಇಪ್ಪತ್ತೊಂದು ಅಪರೂಪದ ಭಕ್ತಿಸಾಹಿತ್ಯ ಕೃತಿಗಳನ್ನು ಗೌರಮಠಕ್ಕೆ ಶ್ರೀನಿವಾಸಾಚಾರ್ಯರ ಮೂಲಕ ಕಳಿಸಿದರು. ಅವರು ಅವನ್ನು ಪೆಟ್ಟಿಗೆಗಳ ಮೂಲಕ ಸಾಗಿಸುತ್ತಾ ರಾತ್ರಿ ಒಂದು ಕಡೆ ವಿಶ್ರಾಂತಿ ಪಡೆಯುತ್ತಿದ್ದಾಗ, ಬೀರ್ ಹಂಬೀರ್ನ ಸೈನಿಕರು ಅವನ್ನು ಹಣದ ಪೆಟ್ಟಿಗೆಗಳೆಂದು ತಪ್ಪು ತಿಳಿದು ವಶಪಡಿಸಿಕೊಂಡು ಹೋದರು! ರಾಜನು ಅವನ್ನು ತೆಗೆಸಿ, ಪುಸ್ತಕಗಳನ್ನು ಕಂಡು ಆಶ್ಚರ್ಯಗೊಂಡರು. ಪಂಡಿತರಿಂದ ಅವನ್ನು ಓದಿಸಿ ವಿವರಣೆ ಪಡೆಯತೊಡಗಿದನು. ಅಷ್ಟರಲ್ಲಿ ಅಲ್ಲಿಗೆ ಬಂದ ಶ್ರೀನಿವಾಸಾಚಾರ್ಯರನ್ನು ಕಂಡು ರಾಜನು ಅವರಿಂದಲೇ ಪುಸ್ತಕಗಳ ಬರಹದ ಸರಿಯಾದ ವಿವರಣೆಗಳನ್ನು ಅರಿತನು. ಇದರಿಂದ ರಾಜನ ಮನ ಕರಗಿ ಅವನು ಕೂಡಲೇ ಶ್ರೀನಿವಾಸಾಚಾರ್ಯರ ಶಿಷ್ಯನಾಗಿ ವೈಷ್ಣವನಾದನು. ಅಲ್ಲಿಂದ ಮುಂದೆ ಬಿಷ್ಣುಪುರವು ಒಂದು ವೈಷ್ಣವಧಾಮವಾಯಿತು! ಮೃಣ್ಮಯೀದೇವಿಯ ಪೂಜೆ ಮುಂದುವರೆದರೂ ಅನೇಕ ಕೃಷ್ಣ ದೇಗುಲಗಳ ನಿರ್ಮಾಣವಾಯಿತು! ಬೀರ್ ಹಂಬೀರನು ರಾಸಮಂಚ ಎಂಬ ಮಂದಿರವನ್ನು ಶ್ರೀಕೃಷ್ಣನ ರಾಸಲೀಲೆಯನ್ನು ಆಚರಿಸಲೆಂದು ನಿರ್ಮಿಸಿ, ಶ್ಯಾಮಬಂಧ್, ಜಮುನಾಬಂಧ್, ರಾಧಾಕುಂಡ, ಕಾಲಿಂದೀ ಘಾಟ್, ಮೊದಲಾದ ಕೆರೆಗಳನ್ನು ನಿರ್ಮಿಸಿದನು. ಅವನ ನಂತರ ಬಂದ ಮಲ್ಲರಾಜರು ಅನೇಕ ಕೃಷ್ಣ ದೇಗುಲಗಳನ್ನು ನಿರ್ಮಿಸಿದರು. ಕೆಲವು ಸುಂದರ ದೇವಾಲಯಗಳ ಪರಿಚಯ ಇಲ್ಲಿದೆ.

ರಾಸಮಂಚ

ರಾಸಮಂಚ (1)

ಈ ಮಂದಿರ ನೋಡುವುದರೊಂದಿಗೆ ಬಿಷ್ಣುಪುರದ ಪ್ರವಾಸ ಆರಂಭಿಸುವುದು ಒಳ್ಳೆಯದು. ಎಲ್ಲಾ ದೇವಾಲಯಗಳನ್ನು ನೋಡಲು ಪ್ರವೇಶ ಚೀಟಿ ಮತ್ತು ಟೂರ್‌ ಗೈಡ್‌ಗಳೂ ಇಲ್ಲೇ ಸಿಗುತ್ತಾರೆ. ದೇವಾಲಯಗಳು ಒಂದಕ್ಕೊಂದು ದೂರವಿರುವುದರಿಂದ, ಮಾರ್ಗದರ್ಶಿಗಳು ಅಗತ್ಯ.ಮಲ್ಲ ಸಾಮ್ರಾಜ್ಯದ ಕೀರ್ತಿ, ವೈಭವಗಳನ್ನು ಸಾರುವ ರಾಸಮಂಚವನ್ನು ಬೀರ್ ಹಂಬೀರನು ಕ್ರಿಶ 1587ರಲ್ಲಿ ನಿರ್ಮಿಸಿದನು. ಮೂರು ಅಂಕಣಗಳ ಚೌಕಾಕಾರದ ಮಂದಿರವಿದು. ಅದರ ಮೇಲೆ ಮೊಘಲ್ ಶೈಲಿಯ ಕಮಾನುಗಳು, ಅವುಗಳ ಮೇಲೆ ತ್ರಿಕೋನ ಗೋಪುರ ಹೀಗೆ ಮೂರು ಅಂತಸ್ತುಗಳ ವಿಶಿಷ್ಟ ರಚನೆ ಹೊಂದಿದೆ. ಲ್ಯಾಟರೈಟ್ನ ತಳಪಾಯ ಹೊಂದಿದ್ದು, ಒಂದೊಂದು ಬದಿಯಲ್ಲೂ ಹತ್ತು ದ್ವಾರಗಳನ್ನು ಹೊಂದಿದೆ. ಇವು ಬಂಗಾಳಿ ಶೈಲಿಯ ಛಾವಣಿಗಳನ್ನೂ ಸೊಗಸಾದ, ಭಾರವಾದ ಕಂಬಗಳನ್ನೂ ಹೊಂದಿವೆ.

ಶ್ಯಾಮರಾಯ್ ಮಂದಿರ

ಅತ್ಯಂತ ಸೊಗಸಾದ ಟೆರಕೋಟ ಶಿಲ್ಪಕಲೆ ಹೊಂದಿದೆ. ಈ ಬೃಹತ್ ಮಂದಿರವನ್ನು ಕ್ರಿಶ 1643ರಲ್ಲಿ ಮಲ್ಲರಾಜ ರಘುನಾಥ ಸಿಂಘನು ನಿರ್ಮಿಸಿದನು. ಬಂಗಾಳಿ ಶೈಲಿಯ ಕಮಾನಿನ ಛಾವಣಿ ಮತ್ತು ಐದು ಶಿಖರಗಳನ್ನು ಹೊಂದಿದ್ದು, ಪಂಚರತ್ನ ಮಾದರಿಯ ಮಂದಿರವಾಗಿದೆ. ಇದರ ಗೋಡೆಗಳ ಮೇಲೆ ರಾಮಾಯಣ, ಮಹಾಭಾರತ, ಕೃಷ್ಣಲೀಲೆಗಳಿಗೆ ಸಂಬಂಧಿಸಿದ ಸುಂದರ ಕೆತ್ತನೆಗಳಿವೆ. ಇಲ್ಲಿ ವಿಗ್ರಹವಿಲ್ಲದಿರುವುದರಿಂದ ಪೂಜೆಗಳೂ ಇಲ್ಲ.

ಜೋರ್ ಬಂಗ್ಲಾ ಮಂದಿರ

ಜೋರ್_ ಬಂಗ್ಲಾ

ಕ್ರಿಶ 1655ರಲ್ಲಿ ರಘುನಾಥ ಸಿಂಘನು ನಿರ್ಮಿಸಿದ ಅದ್ಭುತ ಮಂದಿರ. ಎರಡು ಬಂಗಾಳಿ ಗುಡಿಸಲುಗಳ ಮಾದರಿಯಲ್ಲಿದ್ದು, ಅವುಗಳ ಜಾರುವ ಛಾವಣಿಗಳನ್ನು ಒಟ್ಟಿಗೆ ಸೇರಿಸಿ, ಮೇಲೊಂದು ಶಿಖರವನ್ನು ನಿರ್ಮಿಸಲಾಗಿದೆ. ಗೋಡೆಗಳ ಮೇಲಿನ ಶ್ರೀಕೃಷ್ಣನ ರಾಸಲೀಲೆ, ದಶಾವತಾರ, ರಾಮಾಯಣ, ಮಹಾಭಾರತಗಳ ಅದ್ಭುತ ಕೆತ್ತನೆಗಳು ಮನಸೆಳೆಯುತ್ತವೆ. ಇಲ್ಲಿಯೂ ವಿಗ್ರಹ ಮತ್ತು ಪೂಜೆಗಳಿಲ್ಲ.

ರಾಧಾಶ್ಯಾಮ ಮಂದಿರ

ರಾಧೆ ಶ್ಯಾಮ ಮಂದಿರ

ಕ್ರಿಶ 1758ರಲ್ಲಿ ರಾಜಾ ಚೈತನ್ಯ ಸಿಂಘನು ನಿರ್ಮಿಸಿದ ಲ್ಯಾಟರೈಟ್ ಮಣ್ಣಿನ ಮಂದಿರ. ಒಂದೇ ಶಿಖರ ಹೊಂದಿದ್ದು, ಎತ್ತರದ ಗೋಡೆಗಳೊಂದಿಗೆ ವಿಶಾಲ ಆವರಣದಲ್ಲಿದೆ. ರಾಜಾ ಚೈತನ್ಯ ಸಿಂಘನ ಕಾಲದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಅವನಿಗೆ ಆರ್ಥಿಕ ಒತ್ತಡ ತಂದಿತ್ತು! ಆದರೂ, ಅವನು ತನ್ನ ಮನೆತನದ ಸಂಪ್ರದಾಯವಾದ ದೇವಾಲಯ ನಿರ್ಮಾಣವನ್ನು ಕೈಬಿಡಲಿಲ್ಲ. ಅವನ ಅಚ್ಚಳಿಯದ ಪ್ರಯತ್ನದ ಫಲವೇ ಈ ಅದ್ಭುತ ಮಂದಿರ! ಇಲ್ಲಿನ ಕೃಷ್ಣಲೀಲೆಯ ಸುಂದರ ಭಿತ್ತಿ-ಕೆತ್ತನೆಗಳೊಂದಿಗೆ ಗರ್ಭಗುಡಿಯಲ್ಲಿ ಶ್ರೀ ರಾಧಾಕೃಷ್ಣರ ಸುಂದರ ವಿಗ್ರಹಗಳಿಗೆ ನಿತ್ಯ ಪೂಜೆ ನಡೆಯುತ್ತಿದೆ.

ಲಾಲ್ ಬಂಧ್ ಕೆರೆಯ ಕಥೆ ಗೊತ್ತಾ?

ರಘುನಾಥ ಸಿಂಘನು ದೆಹಲಿಯಿಂದ ಬಹದ್ದೂರ್‌ ಖಾನ್ ಎಂಬ ಸಂಗೀತಗಾರನನ್ನು ಇಲ್ಲಿಗೆ ಕರೆತಂದು ಹಿಂದೂಸ್ತಾನಿ ಘರಾನಾ ಸಂಗೀತವನ್ನು ಪರಿಚಯಿಸಿದನು. ಆಗ ಅವನೊಂದಿಗೆ ಬಂದ ಪರ್ಷಿಯಾ ನರ್ತಕಿ ಲಾಲ್ ಬಾಯಿಗೂ ಇವನಿಗೂ ಪ್ರೇಮಾಂಕುರವಾಗಿ, ಅವಳಿಗಾಗಿ ಲಾಲ್ ಬಂಧ್ ಕೆರೆಯನ್ನು ನಿರ್ಮಿಸಿದನೆಂದು ಹೇಳಲಾಗಿದೆ. ಆದರೆ, ಅವರ ಪ್ರೇಮವನ್ನು ಸಹಿಸದ ರಾಣಿ ಚಂದ್ರಪ್ರಭೆಯು ಅವನನ್ನೂ ಲಾಲ್ ಬಾಯಿಯನ್ನೂ ಈ ಕೆರೆಯಲ್ಲಿ ದೋಣಿವಿಹಾರದ ನೆಪದಲ್ಲಿ ಮುಳುಗಿಸಿ ಕೊಂದು, ಅನಂತರ ತಾನೂ ಸಹಗಮನ ಮಾಡಿದಳು ಎಂಬ ರೋಚಕ ಕಥೆ ಈ ಕೆರೆಗಿದೆ.

ಮತ್ತಷ್ಟು ಮಂದಿರಗಳು, ಪ್ರೇಕ್ಷಣೀಯ ಸ್ಥಳಗಳು

ಬಿಷ್ಣುಪುರದಲ್ಲಿ ಲಾಲ್ ಜಿ, ಮದನಗೋಪಾಲ, ನಂದಲಾಲ್, ಕೃಷ್ಣ ಬಲರಾಮ, ಮೃಣ್ಮಯೀದೇವಿ, ಛಿನ್ನಮಸ್ತಾದೇವಿ ಮೊದಲಾದ ಮಂದಿರಗಳಿವೆ. ಜತೆಗೆ ದಲ್ ಮದಲ್ ಫಿರಂಗಿ, ಕೋಟೆಯ ಹೆಬ್ಬಾಗಿಲು, ಗುಮ್‌ಗಢ ಎಂಬ ಅಪರಾಧಿಗಳ ಶಿಕ್ಷಾಸ್ಥಳಗಳು, ಕಲ್ಲಿನ ರಥ, ವಸ್ತು ಸಂಗ್ರಹಾಲಯ ಮೊದಲಾದ ಪ್ರೇಕ್ಷಣೀಯ ತಾಣಗಳಿವೆ. ಬಿಷ್ಣುಪುರ ಘರಾನಾ ಇಂದಿಗೂ ಪ್ರಸಿದ್ಧವಾಗಿದೆ.

ಇತರ ಆಕರ್ಷಣೆಗಳು

ಬಿಷ್ಣುಪುರ ಹಲವು ಕರಕುಶಲ ಕಲೆಗಳಿಗೆ ಪ್ರಸಿದ್ಧವಾಗಿದೆ. ಕೃಷ್ಣಲೀಲೆ, ಪೌರಾಣಿಕ ಚಿತ್ರಗಳ ಅಂಚುಗಳಿರುವ ಬಾಲುಚಾರಿ ಸೀರೆ ಇಲ್ಲಿನ ಒಂದು ಮುಖ್ಯ ಕೊಡುಗೆ. ಟೆರ್ರಕೋಟದಿಂದ ತಯಾರಾದ ಸುಂದರ ಕಲಾತ್ಮಕ ವಸ್ತುಗಳು ಇಲ್ಲಿ ಸುಲಭ ಬೆಲೆಗೆ ದೊರೆಯುತ್ತವೆ. ಹಿತ್ತಾಳೆಯ ಪಾತ್ರೆಗಳು, ದಶಾವತಾರ ಕಾರ್ಡ್‌ಗಳು, ಒಡಿಶಾದ ಪಟಚಿತ್ರಗಳು ಇಲ್ಲಿನ ಇನ್ನಿತರ ಪ್ರಮುಖ ಆಕರ್ಷಣೆಗಳು.

ಪರ್ಷಿಯಾ ಮೂಲದ ಗಂಜೀಫಾ ಚಿತ್ರಕಲೆಯ ಕಾರ್ಡ್‌ಗಳ ಕ್ರೀಡೆ ಭಾರತದ ಹಲವೆಡೆ ಪ್ರಸಿದ್ಧವಾಗಿದೆ. ಬಿಷ್ಣುಪುರದಲ್ಲೂ ಮಲ್ಲರಾಜರು ದಶಾವತಾರದ ಕಾರ್ಡ್‌ಗಳ ಆಟ ಆಡುತ್ತಿದ್ದುದು ಈಗಲೂ ಉಳಿದಿದೆ. ಫೌಜ್‌ದಾರ್ ವಂಶ ಪರಂಪರೆಯಿಂದ ಈ ಗಂಜೀಫಾ ಕಾರ್ಡ್‌ಗಳನ್ನು ರಚಿಸುತ್ತಿದ್ದು, ಈಗ ಶೀತಲ್ ಫೌಜ್‌ದಾರ್ ಎಂಬ ಕಲಾವಿದರು ಇದನ್ನು ಮಾಡುತ್ತಿದ್ದಾರೆ.

ಬಿಷ್ಣುಪುರದಲ್ಲಿ ಉಳಿದುಕೊಳ್ಳಲು ಕೆಲವು ಹೊಟೇಲ್‌ಗಳಿವೆ. ಹೆಚ್ಚಿನ ಅಧ್ಯಯನಕ್ಕಾಗಿ ಒಂದೆರಡು ದಿನಗಳು ಇಲ್ಲಿರಬಹುದು. ಕೋಲ್ಕತಾದಿಂದ ಖಾಸಗಿ ವಾಹನದಲ್ಲಿ ಬೆಳಗ್ಗೆ ಬೇಗನೆ ಹೊರಟು, ಸಾಕಷ್ಟು ನೋಡಿ, ರಾತ್ರಿಯ‌ ಹೊತ್ತಿಗೆ ಹಿಂದಿರುಗಲೂಬಹುದು. ಬಿಷ್ಣುಪುರದ ಮಾರ್ಗದಲ್ಲೇ ಶ್ರೀ ರಾಮಕೃಷ್ಣ ಪರಮಹಂಸರ ಮತ್ತು ಶಾರದಾದೇವಿಯವರ ಜನ್ಮಸ್ಥಳಗಳಾದ ಕಾಮಾರ್ಪುಕೂರ್, ಜಯರಾಂಬಾಟಿ ಇವೆ.