• ಗೊರೂರು ಅನಂತರಾಜು, ಹಾಸನ

ನಮ್ಮ ಐದು ದಿನಗಳ ಗುಜರಾಜ್ ಪ್ರವಾಸದ ಪಟ್ಟಿಯಲ್ಲಿ ದ್ವಾರಕಾ, ನಾಗೇಶ್ವರ, ಸೋಮನಾಥ, ನಿಷ್ಕಳಂಕ ಮಹಾದೇವ ಹೀಗೆ ಪುರಾಣ ಪ್ರಸಿದ್ಧ ದೇವಾಲಯಗಳ ದರ್ಶನ ಜತೆಗೆ ಗಿರ್ ಅರಣ್ಯದಲ್ಲಿ ಸಿಂಹ ಸಫಾರಿಯೂ ಇತ್ತು. ಹಿಂದಿನ ದಿನ ರಾತ್ರಿ ಸೋಮನಾಥ ದೇವಾಲಯದಲ್ಲಿ ದರ್ಶನ ಮುಗಿಸಿ ಬೆಳಗ್ಗೆ ಉಪಾಹಾರ ಸೇವಿಸಿದ ನಂತರ ಬಸ್‌ ಹತ್ತಿ ಗಿರ್ ಅರಣ್ಯದತ್ತ ನಮ್ಮ ಪ್ರಯಾಣ ಶುರುವಾಯಿತು. ನಾವು ಬೆಂಗಳೂರಿನಿ0ದ ಇಂಡಿಗೋ ವಿಮಾನದಲ್ಲಿ ಅಹಮದಾಬಾದ್‌ಗೆ ಪ್ರಯಾಣಿಸಿ ಅಲ್ಲಿಂದ ಗುಜರಾತ್‌ನ ಪ್ರಮುಖ ಯಾತ್ರಾ ಸ್ಥಳಗಳು, ಪ್ರವಾಸಿ ತಾಣಗಳಿಗೆ ಸುತ್ತಾಡಲು ಹೊರಟಿದ್ದೆವು. ನಮ್ಮನ್ನು ಕರೆದುಕೊಂಡು ಹೋಗಿದ್ದ ನೇತಾಜಿ ಟೂರ್ ಟ್ರಾವೆಲ್ ಏಜೆನ್ಸಿಯವರು ಅಹಮದಾಬಾದ್‌ನಲ್ಲೇ ಒಂದು ಖಾಸಗಿ ಬಸ್‌ ಅನ್ನು ಮೊದಲೇ ಬುಕ್ ಮಾಡಿದ್ದರು.

ಇದನ್ನೂ ಓದಿ: ಪತ್ರ ಬರೆಯಲಾ ಇಲ್ಲ ಫೊಟೋ ತೆಗೆಯಲಾ..

ಸಿಂಹಗಳ ಸಂರಕ್ಷಣಾಧಾಮ

ಗುಜರಾತ್‌ನ ಜುನಾಗಡ್ ಜಿಲ್ಲೆಯ ದಕ್ಷಿಣ ಭಾಗದಲ್ಲಿರುವ ಗಿರ್, ಗಿರಿಶ್ರೇಣಿಯ ತಳಭಾಗದಲ್ಲಿದ್ದು, ದಟ್ಟವಾದ ಕಾಡು ಪ್ರದೇಶವೇನು ಅಲ್ಲ. ಅರೆ ಮರುಭೂಮಿಯಿಂದ ಕೂಡಿದ ಈ ಅರಣ್ಯವು 1412 ಚಕಿಮೀ ಪ್ರದೇಶದಲ್ಲಿ ಹರಡಿದೆ. ಈ ಗಿರ್ ಅರಣ್ಯ ಸಾಮ್ರಾಜ್ಯದಲ್ಲಿ ಪ್ರಾಣಿಗಳ ಕಿಂಗ್ ಸಿಂಹರಾಜಗಳದೇ ದರ್ಬಾರ್. ನಮ್ಮ ನಿರೀಕ್ಷೆಯೂ ಸಿಂಹಗಳ ವೀಕ್ಷಣೆಯೇ ಆಗಿತ್ತು. ಎಲ್ಲೋ ಒಂದು ಕಡೆ ಆಳವಾದ ಕಂದಕದಲ್ಲಿ ಜಿಂಕೆಗಳು ಗೋಚರಿಸಿದವು. ಇವುಗಳನ್ನು ಸಿಂಹಗಳು ಭೇಟಿಯಾಡುವುದಿಲ್ಲವೇ? ಹೇಗೆ ಇವೆಲ್ಲಾ ಸುರಕ್ಷಿತ ಎಂಬ ಸಂದೇಹ ಅವುಗಳನ್ನು ನೋಡಿದಾಗ ನಮ್ಮಲ್ಲಿ ಹುಟ್ಟಿಕೊಂಡಿತ್ತು. ಆದರೆ, ಜಿಂಕೆಗಳ ಸುರಕ್ಷಿತ ವಲಯದಲ್ಲಿ ಸಿಂಹ, ಚಿರತೆಗಳು ದಾಳಿ ಮಾಡದಂತೆ ತಡೆ ಬೇಲಿ ನಿರ್ಮಿಸಿರುವುದು ನಂತರ ನಮ್ಮ ಗಮನಕ್ಕೆ ಬಂದಿತು.

Untitled design - 2026-04-27T105114.061

ಏರುಗತಿಯಲ್ಲಿ ಸಿಂಹಗಳ ಸಂತತಿ

ಗಿರ್ ರಾಷ್ಟ್ರೀಯ ಉದ್ಯಾನವು ಏಷ್ಯಾಟಿಕ್ ಸಿಂಹಗಳ ವಿಶ್ವದ ಏಕೈಕ ನೈಸರ್ಗಿಕ ಆವಾಸಸ್ಥಾನವಾಗಿದೆ. ಇದನ್ನು ಸಸನ್ ಗಿರ್ ಎಂದೂ ಕರೆಯುತ್ತಾರೆ. ಇಲ್ಲಿ ನೆಲೆಯಾಗಿರುವ ದೇವಾರಿಯಾ ಸಫಾರಿ ಪಾರ್ಕ್ ʻಗಿರ್ ಇಂಟಿಪ್ರಿಟೇಷನ್ ಝೋನ್ʼ ಎಂದು ಕರೆಯಲ್ಪಡುತ್ತದೆ. ವಿಶೇಷವೆಂದರೆ ಬೇಲಿಯಿಂದ ಸುತ್ತುವರಿದ ಈ ಪ್ರದೇಶದಲ್ಲಿ ಏಷ್ಯಾಟಿಕ್ ಸಿಂಹಗಳು ಮುಕ್ತವಾಗಿ ಸಂಚರಿಸುತ್ತವೆ. ಹೀಗೆ ಸಿಂಹಗಳು ಮುಕ್ತವಾಗಿ ಓಡಾಡುವ ವಿಶ್ವದ ಏಕೈಕ ಸ್ಥಳವಿದು. ಒಣ ಪತನಶೀಲ ಕಾಡುಗಳಿಂದ ಕೂಡಿರುವುದರಿಂದ ಈ ಸ್ಥಳ ಸಿಂಹಗಳ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಭಾರತದಲ್ಲಿ ಸಿಂಹಗಳ ಸಂಖ್ಯೆ ಕಡಿಮೆಯಿದ್ದು ಅವುಗಳಲ್ಲಿ ಹೆಚ್ಚು ಸಿಂಹಗಳು ಗಿರ್ ಅರಣ್ಯದಲ್ಲಿವೆ. ಕಡಿಮೆ ಸಂಖ್ಯೆಯಲ್ಲಿರುವ ಸಿಂಹಗಳ ಸಂತತಿಯನ್ನು ಕಾಪಾಡುತ್ತಿರುವುದರಿಂದ ಇದೊಂದು ಅಭಯಾರಣ್ಯವಾಗಿದೆ. ಈ ಅರಣ್ಯದಲ್ಲಿನ ಸಿಂಹಗಳ ರಕ್ಷಣೆಗೆ ಸರಕಾರ ವಿಶೇಷ ಕ್ರಮ ಕೈಗೊಂಡಿದೆ. 1968ರ ಗಣತಿಯಂತೆ 177 ಇದ್ದ ಇವುಗಳ ಸಂಖ್ಯೆ 2020ರ ಗಣತಿಯಂತೆ 674 ಇವೆ.

Untitled design - 2026-04-27T105104.279

ನಾವು ಒಟ್ಟು 23 ಪ್ರವಾಸಿಗರೂ ಬಸ್ ಸಫಾರಿ ಮಾಡಿದೆವು. ನಮ್ಮ ಸಫಾರಿ 45 ನಿಮಿಷಗಳಿಂದ 1 ಗಂಟೆಯ ಅವಧಿಯದಾಗಿತ್ತು. ಈ ವೇಳೆಗೆ ಅನೇಕ ಸಿಂಹಗಳು ಗೋಚರಿಸಿದವು. ಕೆಲವು ಬಿಸಿಲಿಗೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದವು. ಕೆಲವು ಪೊದೆಗಳ ನಡುವೆ ಓಡಾಡುತ್ತಿದ್ದವು. ಮರದ ಮೇಲೂ ಕುಳಿತಿದ್ದವು. ಹೀಗೆ ಬಸ್ಸಿನಲ್ಲಿದ್ದವರು ಅಲ್ಲಿ ನೋಡಿ ಇಲ್ಲಿ ನೋಡಿ ಎಂದು ಖುಷಿಯಲ್ಲಿ ಕೂಗುತ್ತಿದ್ದರು. ಒಟ್ಟಾರೆ ಈ ಸಫಾರಿ ನಮ್ಮ ಈವರೆಗಿನ ಅದ್ಭುತ ಪಯಣವಾಗಿತ್ತು.

ಮಾಹಿತಿ ಪೆಟ್ಟಿಗೆ

ʻಗಿರ್ ಜಂಗಲ್ ಟ್ರಯಲ್ʼ ಇದು ಗಿರ್‌ ರಾಷ್ಟ್ರೀಯ ಉದ್ಯಾನದ ಜನಪ್ರಿಯ ಸಫಾರಿಯಾಗಿದೆ. ಇದು ಮೂರು ಗಂಟೆಗಳ ಜೀಪ್ ಸಫಾರಿ. ಅರಣ್ಯ ಮತ್ತು ಉದ್ಯಾನಕ್ಕೆ ಭೇಟಿ ನೀಡಲು ಅರಣ್ಯ ಇಲಾಖೆಯಿಂದ ಮುಂಗಡ ಆನ್‌ಲೈನ್ ಟಿಕೆಟ್ ಪಡೆಯಬೇಕು. ಸಫಾರಿ ಸಮಯ ಬೆಳಗ್ಗೆ 6:00 – 9:00 ಗಂಟೆಯವರೆಗೆ, ಬೆಳಗ್ಗೆ 9:00 – 12:00 ಗಂಟೆಯವರೆಗೆ ಮತ್ತು ಸಂಜೆ 4:00 – 7:00 ಗಂಟೆಯವರೆಗೆ ಇರುತ್ತದೆ